ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಿವಾಸಿಗಳು

ವಿಕಿಸೋರ್ಸ್ದಿಂದ

ಆದಿವಾಸಿಗಳು ಹೆಸರೇ ಸೂಚಿಸುವಂತೆ ಒಂದು ದೇಶದ ಮೂಲವಾಸಿಗಳು (ಅಬೊರಿಜಿನಿಸ್). ಇಂಥವರೇ ಮೂಲವಾಸಿಗಳೆಂದು ಹೇಳುವುದು ಕೆಲವು ಕಡೆ ಕಷ್ಟದ ಕೆಲಸ. ಇವರಿಗಿಂತ ಮೊದಲು ಅಲ್ಲಿ ಬಂದು ನೆಲೆಸಿದ್ದಿರಬಹುದು. ಈ ಪದವನ್ನು ಗ್ರೀಕ್ ಮತ್ತು ರೋಮಿನ ಲೇಖಕರು ಲ್ಯಾಟಿಯಂ ಜಿಲ್ಲೆಯಲ್ಲಿ ನೆಲೆಸಿದ ಮೂಲವಾಸಿಗಳ ಬಗ್ಗೆ ಮೊಟ್ಟಮೊದಲಿಗೆ ಬಳಸಿದರು. ಈಗ ಯೂರೋಪಿಯನ್ನರು ಕಾಲಿಡುವ ಮೊದಲು ಆಯಾ ದೇಶದಲ್ಲಿದ್ದ ಮೂಲವಾಸಿಗಳಿಗೆ ಈ ಹೆಸರಿದೆ. ಭಾರತದಲ್ಲಿ ಯೂರೋಪಿಯನ್ನರು ಕಾಲಿಡುವ ಮೊದಲು ದ್ರಾವಿಡರೂ ಇದ್ದರಷ್ಟೆ. ದ್ರಾವಿಡರನ್ನು ಭಾರತದ ಆದಿವಾಸಿಗಳೆನ್ನಬಹುದು. ಅವರಿಗೂ ಮೊದಲು ಅಥವಾ ಅವರೊಂದಿಗಿದ್ದವರು ಕೋಲರೇ ಮೊದಲಾದವರು ಇದ್ದರೆಂದು ಹೇಳಲಾಗಿದೆ. ಅಮೆರಿಕದ ರೆಡ್ ಇಂಡಿಯನ್ನರು ಮತ್ತು ಅವರಿಗೂ ಹಿಂದೆ ಅನೇಕ ಬುಡಕಟ್ಟುಗಳು, ಆಸ್ಟ್ರೇಲಿಯದ ಮಾವೋರಿಗಳು, ಆಫ್ರಿಕದ ಬುಷ್‍ಮೆನ್‍ಗಳು ಮೊದಲಾದವರು ಆಯಾ ಖಂಡಗಳ ಆದಿವಾಸಿಗಳಾಗುತ್ತಾರೆ. ಇವರು ಪ್ರಧಾನವಾಗಿ ಅಲೆಮಾರಿಗಳು. ತಮಗೂ ತಮ್ಮ ಪರಿವಾರದವರಿಗೂ ದನಕರುಗಳಿಗೂ ಆಹಾರ ನೀರನ್ನು ಅರಸುತ್ತ ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಹೋಗುವವರು, ಗುಂಪು ಅಥವಾ ಪಂಗಡಗಳಲ್ಲಿ ವಾಸಮಾಡುವವರು. ಹೊಟ್ಟೆಯಪಾಡಿಗಾಗಿ ಬೇಟೆಯನ್ನೂ ಗಡ್ಡೆಗೆಣಸುಗಳನ್ನೂ ನಂಬಿರುವವರು. ಅನಂತರ ಬೇಸಾಯವನ್ನೂ ಪಶುಪಾಲನೆಯನ್ನೂ ಇತರ ಗೃಹ ಕೈಗಾರಿಕೆಗಳನ್ನೂ ಕಲಿತು ತಮಗೆ ಸರಿದೋರುವ ಸ್ಥಳಗಳಲ್ಲಿ ನೆಲೆಸಿದವರು. ಮೊದಮೊದಲು ಹೊರದೇಶದಿಂದ ಬಂದವರು ಆದಿವಾಸಿಗಳೊಡನೆ ಸೆಣಸಿ, ಅವರಲ್ಲನೇಕರನ್ನು ನಿರ್ನಾಮ ಮಾಡಿದರು. ಅಳಿದುಳಿದ ಆದಿವಾಸಿಗಳು ಕಾಡುಮೇಡುಗಳ ಅಂತರಾಳವನ್ನು ಸೇರಿದರು. ವಲಸೆ ಬಂದವರಿಗಿಂತ ನೆಲೆಸಿದವರು ಬಲವಾಗಿದ್ದೆಡೆ ಪರಸ್ಪರ ಘರ್ಷಣೆ ಉತ್ಕಟವಾಗಿತ್ತಲ್ಲದೆ ಬಹು ಕಾಲ ನಡೆಯಿತು. ಯೂರೋಪಿಯನ್ನರು ಹೋದ ಕಡೆಗಳಲ್ಲೆಲ್ಲಾ ಆದಿವಾಸಿಗಳನ್ನು ಸದೆಬಡಿದಿದ್ದಾರೆ, ಸುಲಿದಿದ್ದಾರೆ. ಈಚೆಗೆ ಆದಿವಾಸಿ ಸಂರಕ್ಷಣಾ ಸಂಘವೊಂದು ಸ್ಥಾಪಿತವಾಗಿ (1883) ಅವರ ಹಿತರಕ್ಷಣೆ ಮತ್ತು ಪ್ರಗತಿಗಾಗಿ ಕೆಲಸ ಮಾಡುತ್ತಿದೆ. 1872 ಮತ್ತು 1875ರಲ್ಲಿ ಜಾರಿಗೆ ಬಂದಿದ್ದ ಎರಡು ಶಾಸನಗಳಿಂದ ಪೆಸಿಫಿಕ್ ಸಮುದ್ರದ ದ್ವೀಪವಾಸಿಗಳನ್ನು ಮನಸ್ವಿ ಆಸ್ಟ್ರೇಲಿಯಾಕ್ಕೆ ಕೂಲಿಗಾರನನ್ನಾಗಿ ರವಾನಿಸುವುದನ್ನು ನಿಷೇಧಿಸಿದುವು. ಭಾರತದಲ್ಲಿ ಸಹ ಆದಿವಾಸಿಗಳ ಉದ್ಧಾರ ಸಾಕಷ್ಟು ನಡೆಯುತ್ತಿದೆ.

1961ರ ಜನಗಣತಿಯ ಪ್ರಕಾರ ಭಾರತದಲ್ಲಿ ಸುಮಾರು ಮೂರು ಕೋಟಿಯಷ್ಟು ಆದಿವಾಸಿ ಜನರಿದ್ದಾರೆ. ಈ ಮೂಲ ಜನಾಂಗಗಳನ್ನು ಆದಿವಾಸಿಗಳು, ಗಿರಿಜನರು, ವನ್ಯಜಾತಿ (ಕಾಡುಗಳಲ್ಲಿರುವ ಬುಡಕಟ್ಟುಗಳು) ಎಂದು ಕರೆಯುತ್ತಾರೆ. ಅವರೇ ಭಾರತ ಉಪಖಂಡದಲ್ಲಿ ಮೊಟ್ಟಮೊದಲು ವಾಸವಾಗಿದ್ದ ಜನರೆಂದು ಪರಿಗಣಿಸಲಾಗಿದೆ. ಇಂಥ 500ಕ್ಕೂ ಹೆಚ್ಚಿನ ಮೂಲ ಜನಾಂಗಗಳು ಭಾರತದ ವಿವಿಧ ಭಾಗಗಳಲ್ಲಿ, ಬೆಟ್ಟಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ಚದರಿ ಹೋಗಿದ್ದರು. ಅವರು ಮುಖ್ಯವಾಗಿ ಕೇಂದ್ರೀಕರಿಸಿರುವುದು ಬಹಳ ದೂರದ, ಪ್ರವೇಶವೇ ಕಷ್ಟವಾದ, ತುಂಬ ಹಿಂದುಳಿದಿರುವ ಪ್ರದೇಶಗಳಲ್ಲಿ. ಈಶಾನ್ಯ ದಿಕ್ಕಿನ ಹಿಮಾಲಯ ಪ್ರದೇಶಗಳಲ್ಲಿ, ನೀಫ ಮತ್ತು ಅಸ್ಸಾಮಿನ ಪರ್ವತ ಪ್ರದೇಶಗಳಲ್ಲಿ ವಾಸವಾಗಿರುವ ಗುರುಂಗ್, ಲಿಂಬು, ಲೆಪ್‍ಚ, ಅಕ, ದಾಫ್ಲ, ಅಬೋರ್ ಮಿರಿ, ಮಿಷ್ಮಿ, ಸಿಂಗ್‍ಫೊ, ಮಿಕಿರ್, ಕಚಾರಿ, ಗಾರೋ, ಖಾಸಿ, ನಾಗ, ಲುಷಾಯ್ ಮತ್ತಿತರ ಪಂಗಡಗಳೂ ಇದಕ್ಕೆ ಸೇರುತ್ತವೆ. ಬಿಹಾರ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳ ಪರ್ವತ ಪ್ರದೇಶಗಳನ್ನು ಒಳಗೊಂಡ ಮಧ್ಯವಲಯ ಸಂತಾಲ, ಮುಂಡ, ಒರಾಯನರು, ಹೊ, ಗೊಂಡ್, ಜುವಾಂಗ್, ಭಿಲ್ ಮತ್ತು ಇತರ ಹಲವು ಬುಡಕಟ್ಟುಗಳಿಗೆ ವಸತಿಯನ್ನೊದಗಿಸಿದೆ. ದಕ್ಷಿಣ ವಲಯದಲ್ಲಾದರೊ ಚೆಂಚು, ಕೊತ, ತೋಡ, ಕದರ್, ಕುರುಂಬ, ಇರುಳ, ಮುಥುವನ್, ಕಾನಿಕ್ಕಾರ್ ಮುಂತಾದ ಜನರು ವಾಸವಾಗಿದ್ದಾರೆ.

ಮಾನವಕುಲಶಾಸ್ತ್ರಜ್ಞರು ಬಳಸುವಂತೆ ಆದಿವಾಸಿ ಎಂಬ ಶಬ್ದ ಭೌಗೋಳಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಗುರುತಿಸಬಹುದಾದ ಜನಾಂಗವನ್ನು ನಿರ್ದೇಶಿಸುತ್ತದೆ. ಭಾರತದ ಬುಡಕಟ್ಟುಗಳಲ್ಲಿ ಬಹುಪಾಲಿನವು ಶತಮಾನಗಳಿಂದಲೂ ಹಿಂದೂ ಸಂಸ್ಕøತಿ ಹಿಂದೂ ಜನಾಂಗಗಳೊಂದಿಗೆ ಸಂಪರ್ಕ ಹೊಂದಿದ್ದು, ಅವುಗಳಿಂದ ಪ್ರಭಾವಿತವಾಗಿವೆ. ಅವುಗಳ ಸಾಂಸ್ಕøತಿಕ ವೈಶಿಷ್ಟ್ಯ ಇರುವುದು ಭಾಗಶಃ ಮಾತ್ರ. ಆದರೆ, ಈಶಾನ್ಯ ಮೇರೆಯಲ್ಲಿರುವ ಜನಾಂಗಗಳಿಗೂ ಅಂಡಮಾನ್ ದ್ವೀಪಗಳಲ್ಲಿರುವ ಬುಡಕಟ್ಟುಗಳಿಗೂ ಈ ಮಾತು ಅನ್ವಯಿಸುವುದಿಲ್ಲ. ವಾಸ್ತವವಾಗಿ ಅವು ಸ್ವಭಾವತಃ ಆದಿಜನಾಂಗಗಳು. ರಾಜ್‍ಗೊಂಡ್ ಮುಂತಾದ ಕೆಲವು ಹಿಂದುತ್ವ ಹೊಂದಿದ ಬುಡಕಟ್ಟುಗಳಿಗೂ ನಡುವೆ ಇರುವ ವಿಭಾಗರೇಖೆ ಬಹಳ ತೆಳು. ಆಡಳಿತ ಉದ್ದೇಶಗಳಿಗಾಗಿ, ಪ್ರತ್ಯೇಕತೆ ಮತ್ತು ಆರ್ಥಿಕ ಹಿಂದುಳಿಕೆಗಳ ಆಧಾರದಿಂದ ಕೆಲವು ಹಿಂದೂ ಜನಾಂಗಗಳನ್ನು ಆದಿವಾಸಿ ಬುಡಕಟ್ಟುಗಳೆಂದು ವರ್ಗೀಕರಿಸುವುದಕ್ಕೆ ಹಲವು ಉದಾಹರಣೆಗಳಿವೆ.

ಜನಾಂಗಿಕವಾಗಿ ಆದಿವಾಸಿ ಜನರನ್ನು ಹಲವು ಸಂದರ್ಭಗಳಲ್ಲಿ ಅವರ ನೆರೆಯವರಿಂದ ಬೇರ್ಪಡಿಸಿ ನೋಡುವುದು ಕಷ್ಟವಾಗುತ್ತದೆ. ಅಂಡಮಾನಿಗಳಾಗಲಿ, ನೀಫ ಮತ್ತು ಅಸ್ಸಾಮಿನ ಬುಡಕಟ್ಟುಗಳಾಗಲಿ ಹಾಗಲ್ಲ. ಅವರು ಕ್ರಮವಾಗಿ ನೆಗ್ರಿಟೊ ಮತ್ತು ಮಂಗೋಲಾಚಿiÀiï್ಡ. ಆದುದರಿಂದ ಅವರನ್ನು ಸುಲಭವಾಗಿ ಬೇರ್ಪಡಿಸಬಹುದು. ವಾಸ್ತವವಾಗಿ, ಭಾರತದಲ್ಲಿ ಜನಾಂಗಸಂಕರ ಬಹಳ ಪುರಾತನವಾದದ್ದು, ನಾವು ಜಾತಿಗಳ ಹಾಗೂ ಬುಡಕಟ್ಟುಗಳ ನಡುವೆ ಈಗ ಮಾಡುವ ವಿಭೇದಗಳಿಗಿಂತಲೂ ಮೊದಲಿನದು.

ಈಶಾನ್ಯ ಪ್ರದೇಶದ ಬುಡಕಟ್ಟುಗಳ ಜನ ಟಿಬೆಟೊ-ಬರ್ಮನ್ ಭಾಷಾಕುಟುಂಬಕ್ಕೆ ಸೇರಿದ ವಿವಿಧ ಉಪಭಾಷೆಗಳನ್ನು ಆಡುತ್ತಾರೆ. ಬಂಗಾಳ, ಬಿಹಾರ, ಒರಿಸ್ಸಾಗಳ ಹಲವು ಜನಾಂಗಗಳು ಆಸ್ಟ್ರಿಕ್ ಭಾಷಾಕುಟುಂಬದ ಭಾಷೆಗಳನ್ನಾಡುತ್ತಾರೆ. ಈ ಗುಂಪಿನ ಮುಖ್ಯ ಆದಿವಾಸಿ ಭಾಷೆಗಳೆಂದರೆ ಸಂತಾಲಿ, ಸವಾರ, ಮುಂಟಾರಿ ಮತ್ತು ಗಡಬ. ಉಳಿದ ಬುಡಕಟ್ಟುಗಳು ತಾವು ವಾಸಿಸುವ ಪ್ರದೇಶಕ್ಕೆ ಸಂಬಂಧಿಸಿದ ಇಂಡೋ ಆರ್ಯನ್ ದ್ರಾವಿಡ ಭಾಷೆಗಳನ್ನಾಡುತ್ತಾರೆ.

ಆದಿವಾಸಿ ಜನತೆಯ ಆರ್ಥಿಕ ಪರಿಸ್ಥಿತಿ ಅವರ ಸಂಸ್ಕøತಿಯಷ್ಟೇ ವೈವಿಧ್ಯಯುತ. ಅತ್ಯಂತ ಪ್ರಾಚೀನತೆಯ ಮಟ್ಟದಲ್ಲಿ ಅಂಡಮಾನಿ ಮತ್ತು ಅರಸದಾನ್ ಮುಂತಾದವರು ವ್ಯವಸಾಯ ಕಾಣರು. ಬೇರುಗಳು, ಹಣ್ಣಗಳು, ಕಾಡಿನಲ್ಲಿ ದೊರಕುವ ಸಣ್ಣ ಪುಟ್ಟ ಬೇಟೆಗಳಿಂದ ಅವರ ಜೀವನ ಸಾಗುತ್ತದೆ. ಮುಂದಿನ ಘಟ್ಟದಲ್ಲಿ ಸರದಿ (ಷಿಫ್ಟಿಂಗ್) ಬೇಸಾಯ ಮಾಡುವ ಜನಾಂಗಗಳಿವೆ. ಇವರು ಕಾಡನ್ನು ಸುಟ್ಟು ಬೆಳೆಗಳನ್ನು ಬೆಳೆಯುತ್ತಾರೆ. ನಾಗ ಮತ್ತಿತರ ಈಶಾನ್ಯವಲಯದ ಆದಿವಾಸಿಗಳು ಬೆಟ್ಟದ ಇಳಿಕಲುಗಳನ್ನು ಮಟ್ಟ ಹೊಡೆದು, ಬಹಳ ಕುಶಲತೆಯಿಂದ ಆ ಮಟ್ಟ ಗದ್ದೆಗಳಿಗೆ ನೀರು ಹರಿಸುತ್ತಾರೆ. ಒರಿಸ್ಸಾದ ಕಿಸಾನ್ ಮುಂತಾದ ಬುಡಕಟ್ಟುಗಳವರು ಶ್ರೇಷ್ಠ ಬೇಸಾಯಗಾರರು. ಸ್ವಲ್ಪಮಟ್ಟಿಗೆ ಬಯಲು ಪ್ರದೇಶದ ಜನರು ಸುಲಿಗೆಯಿಂದಲೂ ಸ್ವಲ್ಪಮಟ್ಟಿಗೆ ಭೂಮಿಯ ಅಭಾವದಿಂದಲೂ ಬಹು ಸಂಖ್ಯೆಯ ಆದಿವಾಸಿ ಜನಾಂಗಗಳು ತೀವ್ರ ಬಡತನದಿಂದಲೂ ಬಳಲುತ್ತಿವೆ.

ಆದಿವಾಸಿ ಜನಾಂಗಗಳ ಬಹುಪಾಲು ಜನ ತಮ್ಮ ಸಮಗ್ರವಾದ ಸಾಂಪ್ರದಾಯಿಕ ಜೀವನ ಪದ್ಧತಿಗಳ ಸ್ವಾರಸ್ಯವಾದ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಅವರ ಸಮಾಜದಲ್ಲಿ ಸರ್ವಸಮತಾಭಾವನೆಗಳಿವೆ. ಸ್ತ್ರೀಯರನ್ನು ಇತರ ಸಮಾಜಗಳಲ್ಲಿರುವಂತೆ ದಾಸ್ಯದಲ್ಲಿಡುವ ಪದ್ಧತಿ ಅವರಲ್ಲಿ ಇಲ್ಲ. ಜೀವನದ ಉತ್ತಮ ವಸ್ತುಗಳಿಗೆ ನೃತ್ಯ, ಗಾನಗಳ ಬಗೆಗೆ ಒಲವನ್ನು ಉಳಿಸಿಕೊಂಡಿದ್ದಾರೆ.

ಬಯಲು ನಗರ ಹಾಗೂ ಭಾರತದ ಇತರ ಭಾಗಗಳ ಜನರಲ್ಲಿ ಕಾಣದ ಅನೇಕ ಗುಣಗಳನ್ನು ನಾನು ಆದಿವಾಸಿಗಳಲ್ಲಿ ಕಂಡಿದ್ದೇನೆ-ಎಂದು ಜವಾಹರ್‍ಲಾಲ್ ನೆಹರೂ ಅವರು ಹೇಳಿರುವ ಮಾತು ಸತ್ಯ.

ಪ್ರಾತಿನಿಧಿಕವಾಗಿ ಇಲ್ಲಿ ಭಾರತದ ಅತಿಪ್ರಾಚೀನ ಬುಡಕಟ್ಟುಗಳಾದ ಕೋಲ, ಇತರ ಕೆಲವು ಪ್ರಮುಖ ಬುಡಕಟ್ಟುಗಳ ಮತ್ತು ಮೈಸೂರು ಜಿಲ್ಲೆಯ ಸ್ಥಳಜನ್ಯ ಆದಿವಾಸಿಗಳ ಪರಿಚಯವನ್ನು ಕೊಡಲಾಗಿದೆ.

ಕೋಲರು: ಪ್ರೋಟೋ ಅಸ್ಟ್ರೊಲಾಯಿಡ್ ವರ್ಗಕ್ಕೆ ಸೇರಿದ ಕೋಲರು ಅಥವಾ ಮುಂಡರು ಭಾರತ ದೇಶದ ಬಹು ಪ್ರಾಚೀನ ಜನಾಂಗಗಳಲ್ಲಿ ಮುಖ್ಯರಾದವರು. ಇವರು ಭಾರತಕ್ಕೆ ಬರುವುದಕ್ಕೆ ಮುಂಚೆ ಇಲ್ಲಿ ನೆಗ್ರಿಟೊಜನಾಂಗಕ್ಕೆ ಸೇರಿದ ಜನಗಳು ಇದ್ದರು. ಕೋಲರು ಪಶ್ಚಿಮದಿಂದ ಬಂದು ಮಧ್ಯಪ್ರದೇಶದ, ಛೋಟಾನಾಗಪುರ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡರೆಂದು ಹೇಳಬಹುದು. ಕೋಲರು, ಪಶ್ಚಿಮದಿಂದ ಬಂದ ಅಸ್ಟ್ರೊಲಾಯಿಡ್ ಜನಾಂಗ ಮತ್ತು ನೆಗ್ರಿಟೊ, ಮಂಗೋಲಾಯ್ಡ್ ಜನಾಂಗಗಳ ಮಿಶ್ರಣದಿಂದ ಉದ್ಭವವಾದ ಒಂದು ಸ್ಥಳೀಯ ವರ್ಗವೆಂದು ಕೆಲವರು ವಾದಿಸುತ್ತಾರೆ. ಕೋಲರಲ್ಲಿ ಹತ್ತು ಹನ್ನೆರಡು ವಿಭಿನ್ನ ಪಂಗಡಗಳಿವೆ. ಇವರು ಕೆಂಪುಬಣ್ಣದ ಕುಳ್ಳನೆಯ ಆಕಾರದ ಜನ. ದಪ್ಪ ತುಟಿಗಳು, ಅಗಲವಾದ ಮೂಗು, ತುಂಬಿಕೊಂಡ ಕೈಕಾಲುಗಳು, ಕುರಚಲು ಗಡ್ಡ ಇವರ ಇತರ ಸಾಮಾನ್ಯ ಲಕ್ಷಣಗಳು. ಕೋಲರ ಭಾಷೆ ಅಸ್ಟ್ರೊ ಏಷಿಯಾಟಿಕ್ ಪಂಗಡಕ್ಕೆ ಸೇರಿದ ಒಂದು ಉಪಜಾತಿ. ಕೋಲರ ಭಾಷೆಗೂ ಇಂಡೋನೇಷ್ಯದ ಮುನ್‍ಖ್ಮರ್ ಭಾಷೆಗೂ ಬಹು ನಿಕಟ ಸಂಬಂಧಗಳಿರುವುದು ಗಮನಾರ್ಹವಾದುದು. ಪ್ರೋಟೊ ಅಸ್ಟ್ರೊಲಾಯಿಡ್ ವರ್ಗಕ್ಕೆ ಸೇರಿದ ಕೋಲರು ಭಾರತೀಯ ಸಂಸ್ಕøತಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಇವರಿಗಿಂತಲೂ ಮುಂಚೆ ನೆಲೆಸಿದ್ದ ನೆಗ್ರಿಟೋಜನಗಳಿಗೆ ಪರಿಚಯವೇ ಇಲ್ಲದೇ ಇದ್ದ ಅನೇಕ ನಾಗರಿಕತೆಯ ಅಂಶಗಳಲ್ಲಿ ಇವರು ಮುಂದುವರಿದಿದ್ದರು. ಮಡಕೆಗಳನ್ನು ಮಾಡುವುದು, ನವಶಿಲಾಯುಗದ ನುಣುಪಾದ ಕಲ್ಲಿನ ಆಯುಧಗಳನ್ನು ಮಾಡುವುದು, ಅದರಿಂದ ವ್ಯವಸಾಯ ಮಾಡುವುದು-ಇತ್ಯಾದಿಗಳಲ್ಲಿ ಇವರು ನುರಿತವರಾಗಿದ್ದರು. ಕೆಲವು ಮತೀಯ ಭಾವನೆಗಳು ಕೋಲರ ಕೊಡುಗೆಯೆಂದು ಹೇಳಬಹುದು. (ಎ.ವಿ.ಎನ್.)

ಅಪ ತನಿಗಳು : ಈಶಾನ್ಯ ಗಡಿಯ ಏಜೆನ್ಸಿ ಪ್ರದೇಶದ ಸುಬಾನ್ಸಿರಿ ವಿಭಾಗದಲ್ಲಿ ವಾಸಿಸುವ ಹಲವು ಆದಿವಾಸಿ ಬುಡಕಟ್ಟುಗಳಲ್ಲಿ ಒಂದು. ಅವರು ವಾಸವಾಗಿರುವ ಕಣಿವೆ ಸುಮಾರು ಇಪ್ಪತ್ತು ಚದರ ಮೈಲಿಗಳ ವಿಸ್ತಾರವುಳ್ಳದ್ದೂ ಅಸ್ಸಾಂ, ಟಿಬೆಟ್ ಚೀನಗಳು ಸೇರುವ ಮುಕ್ಕೂಟ ಪ್ರದೇಶದಿಂದ ಅನತಿದೂರದ್ದೂ ಆಗಿದೆ. ಅಪ ತನಿ ಕಣಿವೆಯ ದಕ್ಷಿಣ ಮತ್ತು ಪಶ್ಚಿಮಕ್ಕೆ ಒರಟಾದ ದಾಫ್ಲ ಜನ ವಾಸಿಸುವ ಗಹನವಾದ ಪರ್ವತಗಳಿವೆ. ಉತ್ತರದಲ್ಲಿ ಮಿರಿ ಜನರಿದ್ದಾರೆ. ಪೂರ್ವದಲ್ಲಾದರೂ ಭಾರತದ ನಿರ್ಜನವಾದ ಈಶಾನ್ಯ ಗಡಿಯ ತುತ್ತತುದಿಯ ಪರ್ವತಶ್ರೇಣಿಯಿದೆ. ಸರದಿ ಬೇಸಾಯಗಾರ ಜನಾಂಗವಾದ ದುರ್ದಮ್ಯ ದಾಫ್ಲರಂತಲ್ಲದೆ ಅಪ ತನಿಗಳು ಒಂದು ಸ್ಥಿರವಾದ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಬೆಳೆಸಿಕೊಂಡಿದ್ದಾರೆ. ನೀರಾವರಿಯಿಂದ ಬೆಳೆಯುವ ಗದ್ದೆಗಳು, ಸುವ್ಯವಸ್ಥಿತ ಸಮಾಜಜೀವನ, ಅವರಲ್ಲಿ ಕಾಣುತ್ತದೆ. ಈ ಬುಡಕಟ್ಟಿನ ಜನಸಂಖ್ಯೆ ಸುಮಾರು 11,000. ದಾಫ್ಲಗಳು ಬೆಟ್ಟದ ಇಳಿಕಲುಗಳಲ್ಲಿ ವಾಸಿಸಿದರೆ ಅಪ ತನಿಗಳು ಇರುವುದು ಕಣಿವೆಗಳಲ್ಲಿ. ಪ್ರತಿಯೊಂದು ಹಳ್ಳಿಯ ಸುತ್ತಲೂ ಅದಕ್ಕೆ ಸೇರಿದ ಗದ್ದೆಗಳಿರುತ್ತವೆ. ಮನೆಗಳು ಒಡ್ಡುಗಳು ಮೇಲೆ ಇರುತ್ತವೆ. ಕೆಳಗಿನ ಮರೆಯಾದ ಸ್ಥಳವನ್ನು ಮನೆಯ ಹಂದಿಗಳಿಗೆ ಆಶ್ರಯವಾಗಿ ಬಳಸಲಾಗುತ್ತದೆ. ವಾಸ್ತವವಾಗಿ ಅವರಿಗೆ ಭೂಮಿ ಬಹಳ ಅಮೂಲ್ಯ. ಅನಂತರ ಅವರ ಸಂಪತ್ತು ಎಂದರೆ ಮಿಥಾನಗಳು. ಈ ಕಾಡುದನಗಳನ್ನು (ಬಾಸ್ ಫ್ರಂಟಾಲಿಸ್) ದಾಫ್ಲಗಳು ಸಾಮಾನ್ಯವಾಗಿ ನೋಡಿಕೊಳ್ಳುತ್ತಾರೆ. ಅಂತರ ಗ್ರಾಮವ್ಯವಹಾರಗಳಲ್ಲೂ ಭೂಮಿಯನ್ನು ಕೊಳ್ಳುವಾಗಲೂ ಮಿಥಾನ್‍ಗಳು ಚಲಾವಣೆಯ ಮಾಧ್ಯಮವಾಗುತ್ತದೆ. ಅಸ್ಸಾಮಿನ ಬಯಲು ಪ್ರದೇಶಗಳಿಂದ ಕೊಂಡುತಂದ ಹಂದಿಗಳು, ಎತ್ತುಗಳು, ಬಟ್ಟೆಗಳು, ಟಿಬೆಟನ್ ಕತ್ತಿಗಳು-ಇವೂ ವಿನಿಮಯ ಮಾಧ್ಯಮವಾಗಿ ಉಪಯುಕ್ತವಾಗುತ್ತವೆ. ಅಪ ತನಿ ಹೆಂಗಸರು ಉತ್ತಮ ನೇಕಾರ್ತಿಯರಾಗಿದ್ದು ತಮ್ಮ ಉಪಯೋಗಕ್ಕೆ ಬೇಕಾದ ಹತ್ತಿಯ ಬಟ್ಟೆಗಳನ್ನು ತಾವೇ ನೇಯ್ದುಕೊಳ್ಳುತ್ತಾರೆ. ಅಸ್ಸಾಮಿ ವಸ್ತುಗಳಾದ ಕಳೆಗುದ್ದಲಿ, ಪಾತ್ರೆಗಳು, ಬಟ್ಟೆ, ಉಪ್ಪು, ಟಿಬೆಟ್ಟಿನ ಗಾಜಿನ ಮಣಿಗಳು ಮತ್ತು ಕತ್ತಿಗಳು ಇವುಗಳನ್ನು ಲಖಿಂಪುರ್ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುತ್ತಾರೆ. ಅಪ ತನಿಗಳು ಸಾಮಾನ್ಯವಾಗಿ ಮಂಗೋಲಾಯ್ಡರು. ಆದರೆ ಕಾಕಸಾಯ್ಡರೊಡನೆ ಅತ್ಯಂತ ಪ್ರಾಚೀನ ಮಿಶ್ರಣವೂ ಅವರಲ್ಲಿ ಕಂಡುಬರುತ್ತದೆ. ದಾಫ್ಲಗಳಲ್ಲಿರುವಂತೆಯೇ ಅಪ ತನಿ ಸಮಾಜದಲ್ಲೂ ಎರಡು ಮುಖ್ಯ ವಿಭಾಗಗಳಿವೆ. ಒಂದು ಮೇಲುವರ್ಗ (ಮಿತೆ), ಇನ್ನೊಂದು ಗುಲಾಮರ ಕೆಳವರ್ಗ (ಮುರ). ಕಮ್ಮಾರರು, ಹಂದಿಗಳ ಹಿಡಮಾಡುವ ಹೆಂಗಸರು ಕೆಳಗಿನ ಮಟ್ಟದವರು. ಬುಡಕಟ್ಟುಗಳ ನಡುವೆ ಗುಲಾಮರಿಗಾಗಿ ದಾಳಿಗಳು ಹಿಂದೆ ಬಹಳ ಸಾಮಾನ್ಯವಾಗಿದ್ದವು (ಈಗ ಭಾರತ ಸರ್ಕಾರ ಗುಲಾಮಗಿರಿಯನ್ನು ಬಹಿಷ್ಕರಿಸಿದೆ). ಆದರೆ ಆಗ ಘೊಂಡುಗಳು (ಮಧ್ಯವರ್ತಿಗಳು) ಶಾಂತಿ ಸಂಧಾನಕ್ಕೂ ಅಪಹರಿಸಿದ ವ್ಯಕ್ತಿಗಳನ್ನು ಪಳಗಿಸುವುದಕ್ಕೂ ಪ್ರಯತ್ನಿಸುತ್ತಿದ್ದರು.

ಈಚಿನ ವರ್ಷಗಳಲ್ಲಿ ಭಾರತ ಸರ್ಕಾರ ಅಪ ತನಿಗಳೂ ಕೂಡಿದಂತೆ ನೀಫ ಜನರ ಜೀವನವನ್ನು ಆಧುನೀಕರಿಸುವುದರಲ್ಲಿ ಯಶಸ್ವಿಯಾಗಿದೆ.

ಇರುಳರು : ನೀಲಗಿರಿ ಬೆಟ್ಟದಲ್ಲಿರುವ ಹಿಂದುಳಿದ ಜನಾಂಗ. ದ್ರಾವಿಡ ಭಾಷೆಯನ್ನಾಡುತ್ತಾರೆ. ಕುಬ್ಜರು. ಕಪ್ಪು, ಚಪ್ಪಟೆ ಮೂಗಿನವರು. ಅನೇಕರು ನಡುತೋಟಗಳಲ್ಲಿ ಕೂಲಿಗಳಾಗಿದ್ದಾರೆ. ಇತರರ ವೃತ್ತಿ ಬೇಟೆಯಾಡುವುದು, ಅರಣ್ಯದಲ್ಲಿ ಸಿಕ್ಕುವ (ಜೇನು ಮುಂತಾದ) ಪದಾರ್ಥಗಳನ್ನು ಶೇಖರಿಸುವುದು-ಮುಂತಾದ್ದು.

ಒರಾಯನರು: ಭಾರತದ ಮೂರು ರಾಜ್ಯಗಳಲ್ಲಿ ಅಂದರೆ ಬಿಹಾರ, ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಹಂಚಿಹೋಗಿರುವ ಜನ. ಕುರಖ್ ಅಥವಾ ಒರಾಯನ್ ಅಥವಾ ಉರವೊ ಎಂದು ಹೆಸರಿರುವ ಉತ್ತರ ದ್ರಾವಿಡಭಾಷೆಗೆ ಹೆಸರು ನೀಡಿದವರು. ಈ ಭಾಷೆಯನ್ನಾಡುವವರು ಸುಮಾರು 3,833,000 ಜನರಿದ್ದಾರೆ. ಆದಿವಾಸಿಗಳಲ್ಲದ ಜನಾಂಗಗಳೊಂದಿಗೆ ಸಂಪರ್ಕವಿರುವ ಪ್ರದೇಶಗಳಲ್ಲಿ ಅವರು ಸದ್ರಿ ಎಂಬ ಹಿಂದಿ ಮತ್ತು ಹಲವು ಆದಿವಾಸಿ ಭಾಷೆಗಳ ಮಿಶ್ರಣವಾದ ಭಾಷೆಯೊಂದನ್ನು ಆಡುತ್ತಾರೆ. ಅನೇಕರು ಸದ್ರಿ, ಹಿಂದಿ ಅಥವಾ ಒರಿಯ ಅಥವಾ ಬಂಗಾಳಿಗಳನ್ನು ಆಡುತ್ತ, ದ್ವಿಭಾಷಿಗಳಾಗಿದ್ದಾರೆ. ಅವರದೇ ಭಾಷೆಯಲ್ಲಿ ಅವರ ಬುಡಕಟ್ಟಿನ ಮೂಲನಾಮ ಕುರುಖ್ ಎಂದು. ಹೊ, ಮುಂಡ, ಖಾರಿಯ ಬುಡಕಟ್ಟುಗಳ ನಡುವೆ ಇವರು ವಾಸಿಸುತ್ತಾರೆ. ಅವರದೇ ಸಂಪ್ರದಾಯದ ಪ್ರಕಾರ ರಾಜ್‍ಮಹಲ್ ಬೆಟ್ಟಗಳ ಮಲೇರ್‍ಗೆ ಅವರು ಹತ್ತಿರದ ಸಂಬಂಧವುಳ್ಳವರು. ರಿಸ್ಲೆ ವರದಿ ಮಾಡಿರುವಂತೆ ಒರಾಯನರಲ್ಲಿ ಐದು ಉಪಪಂಗಡಗಳಿವೆ: ಬರ್ಗ ಒರಾಯನ್, ಧಂಕ ಒರಾಯನ್, ಖಾರಿಯ ಒರಾಯನ್, ಖಿಂಡಾರ್ ಒರಾಯನ್, ಮತ್ತು ಮುಂಡ ಒರಾಯನ್. ಈ ಐದೂ ಬಹಳ ಕಡ್ಡಾಯವಾಗಿ ಭಿನ್ನತೆಗೋತ್ರ ವಿವಾಹ ಪದ್ಧತಿಯವು. ಪ್ರಾಣಿಗಳ, ಸಸ್ಯಗಳ, ಮತ್ತು ಉಪ್ಪು ಮುಂತಾದ ವಸ್ತುಗಳ, ಹಂದಿಯ ಕರುಳಿನ, ಕಬ್ಬಿಣದ ಹೆಸರುಗಳನ್ನುಳ್ಳ, ಭಿನ್ನಗೋತ್ರ ವಿವಾಹಪದ್ಧತಿಯ ಹಲವಾರು ಪಂಗಡಗಳು ಅವರಲ್ಲಿವೆ. ಹಿಂದಿನ ಮಾನವಕುಲಶಾಸ್ತ್ರಜ್ಞರು, ಈ ಹೆಸರುಗಳು ಕುಲದೇವತಾ ಲಾಂಛನಗಳು ಎಂದು ಭಾವಿಸಿದ್ದರು. ಆದರೆ ಈಗ ಹೇಳಬಹುದಾದದ್ದು ಅವು ಕುಲದೇವತಾ ಲಾಂಛನಗಳಂತೆ ಕಾಣುತ್ತವೆ ಎಂದಷ್ಟು ಮಾತ್ರ. ನಿಜವಾದ ಅಂಥ ನಂಬಿಕೆ ಒಂದು ವಸ್ತುವನ್ನು ಕುರಿತು ಧಾರ್ಮಿಕವಾದ ಮನೋಭಾವದಿಂದ ಪ್ರಾರಂಭವಾಗುತ್ತದೆ. ಉಪ್ಪಿನ ಪಂಗಡದವರು ತಮ್ಮ ಆಹಾರದೊಂದಿಗೆ ಉಪ್ಪನ್ನು ಸೇವಿಸುತ್ತಾರೆ. ಹಾಗೇ ಬೆರೆಸದೆ ಬರಿಯ ಉಪ್ಪನ್ನು ತಿನ್ನುವುದಿಲ್ಲ. ಒಂದು ಪಂಗಡದ ಸದಸ್ಯರು ಅದೇ ಪಂಗಡದವರನ್ನು ಮದುವೆಯಾಗಲು ಸಾಧ್ಯವಿಲ್ಲವಾದ್ದರಿಂದ, ಒಂದು ಗುಂಪಿಗೆ ಒಂದು ಹೆಸರಿಡುವ ಪದ್ಧತಿ ಮದುವೆ ಮತ್ತು ಅಗಮ್ಯಗಮನಗಳ ವಿಷಯದಲ್ಲಿ ತಮ್ಮ ನಿಯಮಗಳನ್ನು ಆಚರಿಸಲು, ಉಳಿಸಿಕೊಳ್ಳಲು ಅನುಕೂಲವಾಗಿದೆ.


ಸಾಂಪ್ರದಾಯಿಕವಾಗಿ ಹಳ್ಳಿಯ ವ್ಯವಹಾರಗಳನ್ನು ಜಾತ್ಯಾತೀತ ನಾಯಕ ಮಹತೊ, ಧಾರ್ಮಿಕ ನಾಯಕ ಪಹಾನ್ ಮತ್ತು ಹಳ್ಳಿಯ ಹಿರಿಯರನ್ನುಳ್ಳ ಒಂದು ಸಮಿತಿ ನೋಡಿಕೊಳ್ಳುತ್ತಿದ್ದವು. ಬೇರೆ ಬೇರೆ ಹಳ್ಳಿಗಳಿಗೆ ಸೇರಿದ ಪಕ್ಷಗಳ ನಡುವೆ ಉಂಟಾಗುವ ವಿವಾದಗಳನ್ನು ಪರಿಹರಿಸುತ್ತಿದ್ದ ಪ್ರಾದೇಶಿಕ ಸಮಿತಿಗಳೂ ಇದ್ದವು. ಆಧುನಿಕ ಪರಿಸ್ಥಿತಿಗಳಲ್ಲಿ ಈ ಸಾಂಪ್ರದಾಯಿಕ ಸಂಸ್ಥೆಗಳ ಅಧಿಕಾರ ಹಾಗೂ ಚಟುವಟಿಕೆಗಳು ಕಾಣದಾಗಿವೆ. ನಾಯಕತ್ವದ ಹೊಸ ಮಾದರಿಗಳು ಮೂಡುತ್ತಿವೆ.

ಒರಾಯನರಲ್ಲಿ ಕೆಲವರು ಎಷ್ಟುಮಟ್ಟಿಗೆ ಹಿಂದೂಗಳಾಗಿಬಿಟ್ಟಿದ್ದಾರೆಂದರೆ ಮಾದಕ ಪಾನೀಯಗಳ ಸೇವನೆಯಿಂದ ದೂರವಾಗಿ ಹಿಂದೂ ಪದ್ಧತಿಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ಭಗತ್ ಎಂಬ ಪಂಗಡ ಅಂಥದೊಂದು.

ಹುಡುಗ, ಹುಡುಗಿಯರಿಗಾಗಿ ಕಟ್ಟಿದ ಗ್ರಾಮನಿದ್ರಾಶಾಲೆ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಒಂದು. ಬಾಲಕರ ನಿದ್ರಾಶಾಲೆಗಳನ್ನು ಜೊಂಗ್‍ಖೆಡ್‍ಪಾ ಎಂದೂ ಬಾಲಿಕೆಯರದ್ದನ್ನು ಪೆಲ್‍ಅಡ್‍ಪಾ ಎಂದೂ ಕರೆಯುತ್ತಿದ್ದರು. ಈ ನಿದ್ರಾಶಾಲೆಗಳೇ ಯುವಕ ಸಂಘಗಳೂ ಆಗಿದ್ದು, ತರುಣ - ತರುಣಿಯರು ಬುಡಕಟ್ಟುಗಳಿಗೆ ಸಂಬಂಧಿಸಿದ ಪುರಾಣಗಳನ್ನೂ ಕತೆಗಳನ್ನೂ ಕಲಿಯಲು, ತಮ್ಮ ಬುಡಕಟ್ಟಿನ ಕಲೆ, ಕೈಕಸುಬುಗಳಲ್ಲಿ ಕುಶಲತೆ ಸಂಪಾದಿಸಲು ಒಂದು ರೀತಿಯ ಶಿಕ್ಷಣ ಕೇಂದ್ರಗಳೂ ಅಗಿರುತ್ತಿದ್ದವು; ಅಲ್ಲದೆ ಒಂದು ರೀತಿಯ ಗ್ರಾಮದ ಶ್ರಮಸಂಚಯ ಕೇಂದ್ರಗಳೂ ಆಗಿರುತ್ತಿದ್ದವು. ಒಂದು ಮನೆ ಕಟ್ಟಲೊ ಅಥವಾ ಕಾಡು ಕಡಿಯಲೊ ಜನಶಕ್ತಿ ಬೇಕಾದಾಗ ಗ್ರಾಮದ ಯುವಕರು ರಂಗಕ್ಕಿಳಿಯಲು ಸಿದ್ಧರಾಗುತ್ತಿದ್ದರು. ದುರದೃಷ್ಟವಶಾತ್ ಇಂಥ ಶಾಲೆಗಳು ವೇಗವಾಗಿ ಮಾಯವಾಗುತ್ತಿವೆ.

ವಿವಾಹ ಸಮಾರಂಭದ ಅತ್ಯಗತ್ಯ ಅಂಶಗಳು ಇವು. ಒಂದು ಹೊರೆ ಒಣಹುಲ್ಲು ಮತ್ತು ಒಂದು ನೇಗಿಲಿನ ಮೇಲೆ ಇಟ್ಟ ಒಂದು ಬೀಸುಕಲ್ಲಿನ ಮೇಲೆ ನಿಂತುಕೊಳ್ಳುತ್ತಾರೆ. ಅವರ ಮೇಲೆ ಒಂದು ತುಂಡು ಬಟ್ಟೆಯನ್ನು ಹೊದಿಸಲಾಗುತ್ತದೆ. ಹುಡುಗಿಯರ ಒಂದು ಗುಂಪು ಅವರ ಮೇಲೆ ನೀರನ್ನು ಸುರಿಯುತ್ತದೆ. ಈ ಸ್ನಾನವಾದಮೇಲೆ ಅವರು ಹೊಸ ಬಟ್ಟೆಗಳನ್ನು ಧರಿಸಿಕೊಂಡು ಪರಸ್ಪರ ಹಣೆಗೆ ಕುಂಕುಮ ಇಡುತ್ತಾರೆ.

ಒರಾಯನರಲ್ಲಿ ಅಂತ್ಯ ಸಂಸ್ಕಾರಗಳಾದರೊ ಬಹಳ ವಿಸ್ತಾರವಾದುವು. ಮಕ್ಕಳು ಮತ್ತು ಗರ್ಭಿಣಿಯರು ವಿನಾ ಮಿಕ್ಕವರನ್ನು ಸುಡುವುದು ಕಡ್ಡಾಯ. ಯಾರಾದರೂ ಬೀಜಗಳನ್ನು ಬಿತ್ತಿದ ಮೇಲೆ, ಕೊಯಿಲಾಗುವುದಕ್ಕೆ ಮುಂಚೆ ಸತ್ತರೆ ಅವರನ್ನು ತಾತ್ಕಾಲಿಕವಾಗಿ ಹೂಳಲಾಗುವುದು. ಕೊಯಿಲು ಮುಗಿದ ಮೇಲೆ ಆ ದೇಹವನ್ನು ತೆಗೆದು ಸುಡಲಾಗುವುದು. ಸುಟ್ಟ ಮೂಳೆಗಳನ್ನು ಸಾಮೂಹಿಕವಾಗಿ ನದಿಯಲ್ಲಿ ಮುಳುಗಿಸುವ ಸಮಾರಂಭದವರೆಗೂ ಒಂದು ಮಡಕೆಯಲ್ಲಿ ಕಾಪಾಡಿಡಲಾಗುವುದು.

ಒರಾಯನ್ ಧರ್ಮ ಬಹಳ ಮಟ್ಟಿಗೆ ಹಿಂದೂಧರ್ಮದಿಂದ ಪ್ರಭಾವಿತವಾಗಿದೆ. ಅವರ ಮುಖ್ಯ ದೇವತೆ ಸೂರ್ಯ (ಧರ್ಮ್). ಚಂಡಿ ಅವರ ಬೇಟೆಯ ದೇವತೆ. ಉಳಿದ ಬುಡಕಟ್ಟುಗಳಂತೆಯೆ ಅವರೂ ಕಾಯಿಲೆ, ಸಾವು ಮತ್ತಿತರ ದುರ್ವಿಧಿಗಳಿಗೆ ಅಸಂಖ್ಯಾತ ಪ್ರೇತಾತ್ಮಗಳು ಕಾರಣರೆಂದು ನಂಬುತ್ತಾರೆ. ಧಾರ್ಮಿಕ ಜನರಾದ್ದರಿಂದ ಅವರ ಯಾವ ಆರ್ಥಿಕ ಚಟುವಟಿಕೆಯೂ ಸೂಕ್ತವಾದ ಧಾರ್ಮಿಕವಿಧಿಯಿಲ್ಲದೆ ಇರುವುದಿಲ್ಲ. ಅವರ ವೈಭವೋಪೇತವಾದ ಬೇಟೆ (ಸರ್‍ಹುಲ್) ಒಂದು ವಿಸ್ತಾರವಾದ ಕಾರ್ಯಕ್ರಮ. ಬಹು ಹೆಚ್ಚಿನ ಸಂಖ್ಯೆಯ ಗಂಡಸರು ಅದರಲ್ಲಿ ಭಾಗವಹಿಸುತ್ತಾರೆ. ಎಲ್ಲ ಹಬ್ಬಗಳಲ್ಲೂ ಗಂಡಸರು ಹೆಂಗಸರು ಒಟ್ಟಿಗೆ ಸೇರಿ ನರ್ತಿಸುತ್ತಾರೆ, ಹಾಡುತ್ತಾರೆ. ಪ್ರತಿಯೊಂದು ಹಳ್ಳಿಯಲ್ಲಿಯೂ ಒಂದು ನರ್ತನಕ್ಷೇತ್ರ (ಅಖ್ರ) ಇರುತ್ತದೆ.

ಒರಾಯನರು ಒಳ್ಳೆಯ ರೈತರು, ಉತ್ತಮ ಕೈಕಸುಬುಗಾರರು. ರಾಂಚಿ ಮತ್ತಿತರ ಪಟ್ಟಣಗಳ ಬಳಿ ಅವರಲ್ಲಿ ಅನೇಕರು ಕುಶಲ ಮತ್ತು ಅಕುಶಲ ಕೆಲಸಗಳಲ್ಲಿದ್ದಾರೆ. ನಗರದ ಸುತ್ತಣ ಹಳ್ಳಿಗಳಲ್ಲಿ ವ್ಯಾಪಾರ ಮಟ್ಟದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ.

ಬೇಕಾದಷ್ಟು ಜನ ಒರಾಯನರು ಕ್ರೈಸ್ತರಾಗಿಬಿಟ್ಟಿದ್ದಾರೆ. ಅಂಥವರು ಮಿಷನರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು ಅವರಲ್ಲಿ ಹಲವರು ಉನ್ನತ ಶಿಕ್ಷಣವನ್ನೂ ಪಡೆದು ಬೇರೆ ಬೇರೆ ವೃತ್ತಿಗಳನ್ನು ಪ್ರವೇಶಿಸುತ್ತಿದ್ದಾರೆ. ಹೀಗೆ ಒರಾಯನ್ ಸಮಾಜ ವೇಗವಾಗಿ ಆಧುನಿಕವಾಗುತ್ತಿದೆ, ಬದಲಾಗುತ್ತಿದೆ.

ಕುರುಂಬರು: ಇವರು ನೀಲಗಿರಿ ಬೆಟ್ಟಗಳು, ಕೊಡಗು ಮತ್ತು ಮೈಸೂರಿನ ಬೆಟ್ಟಗಾಡು ಪ್ರದೇಶಗಳಲ್ಲಿ ವಾಸಿಸುವ ಜನ. ಅಕ್ಕಪಕ್ಕದ ಪಂಗಡಗಳ ಜನರಿಗೆ ಪೌರೋಹಿತ್ಯ ನಡೆಸುತ್ತಾರೆ. ಮಂತ್ರ ಮಾಟಗಳಲ್ಲಿ ನಿಷ್ಣಾತರೆಂದು ಇವರಿಗೆ ಎಲ್ಲರೂ ಹೆದರುತ್ತಾರೆ. ಅಡವಿ ಬೇಟೆ ಇವರ ಕಸುಬು. ಅರಣ್ಯದಲ್ಲಿ ದೊರಕುವ ಆಹಾರ ಪದಾರ್ಥಗಳನ್ನು ಕೂಡಿಟ್ಟು ಉಪಯೋಗಿಸುತ್ತಾರೆ.

ಕೇರಳದ ಕಾಡರರು: ಪಶ್ಚಿಮ ಘಟ್ಟಗಳ ನೆಲ್ಲಿಯಂಪಟ್ಟಿ ಬೆಟ್ಟಗಳು ಮತ್ತು ಅಣ್ಣಾಮಲೈ ಬೆಟ್ಟಗಳಲ್ಲಿ ಈ ಪಂಗಡದ ಸುಮಾರು 1,500 ಜನರಿದ್ದಾರೆ. ದಕ್ಷಿಣ ಭಾರತದ ಆದಿವಾಸಿ ಗುಂಪುಗಳಲ್ಲಿ ಇವರದು ಅತ್ಯಂತ ಪ್ರಾಚೀನ ಪಂಗಡ. ಕೆಲವು ಮಾನವಶಾಸ್ತ್ರಜ್ಞರು ಅವರನ್ನು ಒಂದು ಸಾಂಸ್ಕøತಿಕ ಪಳೆಯುಳಿಕೆ, ಶಿಲಾಯುಗ ಕಾಲದ ಭಾರತೀಯ ಸಂಸ್ಕøತಿಯ ಉಳಿದು ಬಂದಿರುವ ಅವಶೇಷ ಎಂದು ಅಭಿಪ್ರಾಯಪಡುತ್ತಾರೆ. ಮದ್ರಾಸ್ ವಸ್ತುಸಂಗ್ರಹಾಲಯದ ಮೊದಲಿನ ನಿರ್ದೇಶಕರಾದ ಎಡ್ಗರ್ ಥಸ್ಟನ್ ಕಾಡರರ ಸಾಂಸ್ಕøತಿಕ ಲಕ್ಷಣಗಳಿಗೂ ಮಲಯದ ಕಾಡುಗಳಲ್ಲಿನ ನೆಗ್ರಿಟೋ ಆದಿವಾಸಿಗಳಿಗೂ ಕೆಲವು ಹೋಲಿಕೆಗಳಿರುವುದನ್ನು ಕಂಡಾಗ ಭಾರತದ ಜನಾಂಗಿಕ ಚರಿತ್ರೆಯಲ್ಲಿ ಕಾಡರರು ಹೆಚ್ಚಿನದೊಂದು ವಿಶಿಷ್ಟತೆಯನ್ನು ಪಡೆದರು. ಮಲಯದ ಸಕಾಯಿ ಜನರಂತೆ ಇವರೂ ತಮ್ಮ ಮೇಲಿನ ಬಾಚಿಹಲ್ಲುಗಳನ್ನು ಕೆತ್ತಿ ಮೊನಚಾಗಿ ಮಾಡಿಕೊಳ್ಳುವುದನ್ನು ದೀಕ್ಷಾವಿಧಿಯಾಗಿ ಇಟ್ಟುಕೊಂಡಿದ್ದಾರೆ. ಮದುವೆಯ ಗಂಡು ಸುಂದರವಾಗಿ ಕೆತ್ತಿದ ಬಿದಿರು ಬಾಚಣಿಗೆಗಳನ್ನು ಹೆಣ್ಣಿಗೆ ಉಡುಗೊರೆ ಕೊಡುವ ಪದ್ಧತಿಯೂ ಅವರಲ್ಲಿದೆ. ಭೌತಮಾನವಶಾಸ್ತ್ರಜ್ಞರಲ್ಲೊಬ್ಬರಾದ ಡಾ. ಬಿ.ಎಸ್. ಗುಹ 1927ರಲ್ಲಿ ಕೆಲವು ಜನ ಕಾಡರರು ಕುರುಚು ಕೂದಲನ್ನು ಹೊಂದಿದ್ದುದನ್ನು ಗಮನಿಸಿದರು. ಇದು ನೆಗ್ರಿಟೋಗಳ ಲಕ್ಷಣ. ಈ ಜನಾಂಗಿಕ ಮತ್ತು ಸಾಂಸ್ಕøತಿಕ ಲಕ್ಷಣಗಳು, ಇನ್ನೂ ಸನಿಹದಿಂದ ಪರೀಕ್ಷಿಸಿದರೆ, ಕಾಡರರನ್ನು ನೆಗ್ರಿಟೋ ಜನರ ಗುಂಪಿಗೆ ಸೇರಿಸುವುದನ್ನು ಸಮರ್ಥಿಸುವುದಿಲ್ಲ. ಅವರು ಶಿಲಾಯುಗ ಸಂಸ್ಕøತಿಯ ಅವಶೇಷಗಳು ಎಂಬ ದೃಷ್ಟಿಯೂ ನಿಲ್ಲುವಂತಹುದಲ್ಲ. ಇದಕ್ಕಿಂತ ಯುಕ್ತವಾದ ವಿವರಣೆಯೆಂದರೆ, ಅವರು ಕೇರಳ-ತಮಿಳು ಗಡಿಯ ಜನರ ಒಂದು ಹಿಂದುಳಿದ ಪಂಗಡವಾಗಿದ್ದು, ಮೂಲತಃ ಬಯಲುಪ್ರದೇಶಗಳಿಗೆ ಸೇರಿದವರು; ಕಾಡುಗಳಲ್ಲಿ ಆಶ್ರಯ ಪಡೆದು, ತಾವು ಹೊಂದಿದ್ದ ಸಾಂಸ್ಕøತಿಕ ಸಂಪತ್ತನ್ನೂ ಪ್ರಗತಿ ಹೊಂದಬೇಕೆಂಬ ಬಯಕೆಯನ್ನೂ ಕಳೆದುಕೊಂಡವರು-ಎಂಬುದು. ಕಾಡರರು ತಕ್ಕ ಮಟ್ಟಿನ ಮಲೆಯಾಳಂ ಮಿಶ್ರಣವುಳ್ಳ ತಮಿಳಿನ ಉಪಭಾಷೆಯೊಂದನ್ನು ಆಡುತ್ತಾರೆ. ಈಗ ಅವರಲ್ಲಿ ಬಹು ಮಂದಿ ಅರಣ್ಯ ಇಲಾಖೆಯ ಆಶ್ರಯದಲ್ಲೋ, ಪ್ಲಾಂಟೇಷನ್‍ಗಳಲ್ಲೋ ಕೂಲಿಗಾರರಾಗಿದ್ದಾರೆ. ಆದರೆ ಸಾಂಪ್ರದಾಯಿಕವಾಗಿ ಅವರು ಗೆಡ್ಡೆ ಗೆಣಸು, ಜೇನುತುಪ್ಪ, ಚಿಕ್ಕ ಪುಟ್ಟ ಬೇಟೆ, ಮುಂತಾಗಿ ಅರಣ್ಯ ಕೊಡುಗೆಗಳ ಮೇಲೆ ಜೀವಿಸುವ ಆಹಾರ ಸಂಚಯನ ಪ್ರವೃತ್ತಿಯವರು. ಕೇರಳದ ಕಾಡುಗಳಲ್ಲಿ ಬಹಳ ಕೆಟ್ಟರೂಪದ ಮಲೇರಿಯ ಸ್ಥಳೀಯ ವ್ಯಾಧಿಯಾಗಿ ಒಂದೇ ಸಮನೆ ಕಂಡುಬರುತ್ತಿತ್ತು. ಕಾಡರರು ಹೇಗೆ ಬದುಕಿ ಉಳಿದರೊ ಅದೇ ಒಂದು ಅಚ್ಚರಿ. ಕಬ್ಬಿಣದ ಮೊನೆಯುಳ್ಳ ಅಗೆಯುವ ಕೋಲು, ಕಬ್ಬಿಣದ ಕುಡುಗೋಲುಗಳು, ಬೆಣಚು ಮತ್ತು ಉಕ್ಕಿನ ಬೆಂಕಿ ಹೊತ್ತಿಸುವ ಸಾಧನಗಳು, ಕವಣೆ ಬಿಲ್ಲುಗಳು, ಬುಟ್ಟಿಗಳು, ಬೋನುಗಳು-ಇವು ಅವರ ವ್ಯವಹಾರ ಸಾಧನಗಳು. ಈಗ ಅವರಲ್ಲನೇಕರು ಕೇರಳ ಖಾತೆಯ ಕೆಲಸಗಾರರಾಗಿ ಆಧುನಿಕ ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಅವರ ಸಾಮಾಜಿಕ ವ್ಯವಸ್ಥೆ ಸರಳವಾದ ಕೌಟುಂಬಿಕ ಗುಂಪುಗಳಿಗಿಂತ ಮುಂದಕ್ಕೆ ವಿಕಾಸಗೊಂಡಿರುವಂತೆ ಕಾಣುವುದಿಲ್ಲ. ಮತೀಯ ವ್ಯವಸ್ಥೆ, ವಂಶಪರಂಪರೆಯ ನಿಯಮಗಳು, ಮುಖಂಡರ ಮೂಲಕ ಸಾಮಾಜಿಕ ನಿಯಂತ್ರಣ-ಇವೆಲ್ಲ ಅವರಿಗೆ ತಿಳಿದಿಲ್ಲ. ಅವರ ದೇವಪಂಕ್ತಿಯಲ್ಲಿ ಬಹು ಕಡಿಮೆ ಸಂಖ್ಯೆಯ ದೇವದೇವಿಯರಿದ್ದು ಅವರಲ್ಲಿ ಪ್ರಮುಖರಾದವರೆಂದರೆ ಮೂಲವಯ್ ಮತ್ತು ಮಲಕುರತ್ತಿ. ಕೆಲವು ಸರಳವಾದ ಅನುಕರಣಾತ್ಮಕ ನೃತ್ಯಗಳು ಮಾತ್ರವೇ ಅವರಿಗೆ ತಿಳಿದಿದ್ದ ಕಲಾತ್ಮಕ ಚಟುವಟಿಕೆಗಳು.

ಕೊಂಡದೋರ: ಆಂಧ್ರದ ಶ್ರೀಕಾಕುಳಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಮತ್ತು ಒರಿಸ್ಸಾದ ಕೋರಾಪುಟ್ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣುವ ಕುಯಿ ಮಾತಾಡುವ ಆದಿವಾಸಿಗಳು. ಈ ಮಾತಿಗೆ ಪರ್ವತಪ್ರಭುಗಳು ಎಂದು ಅರ್ಥ. ಜನಸಂಖ್ಯೆ ಸು. 87,000. ಅತಿ ಹೆಚ್ಚಾಗಿ ಕೇಂದ್ರೀಕರಿಸುವುದು ವಿಶಾಖಪಟ್ಟಣದ ಏಜೆನ್ಸಿ ಪ್ರದೇಶಗಳಲ್ಲಿ. ತಮ್ಮ ಪುರಾಣಗಳಲ್ಲಿ ಅವರು ತಮ್ಮನ್ನು ಕುಬಿಗಳೆಂದು ಕರೆದುಕೊಂಡಿದ್ದರೂ ಜನಗಣತಿಯ ಸಂದರ್ಭಗಳಲ್ಲಿ ಅನೇಕರು ತಮ್ಮನ್ನು ಕೊಂಡಕಾಪುಗಳೆಂದು ಹೇಳಿಕೊಂಡರು. ಅವರಲ್ಲಿ ಹೆಚ್ಚು ಕೂಟವಾಸಿಗಳಾದವರು ತಮ್ಮನ್ನು ಪಾಂಡವರಾಜರೆಂದು ಆಗಾಗ ಹೇಳಿಕೊಳ್ಳುವುದುಂಟು. ಏಕೆಂದರೆ ತಾವು ಭೀಮನಿಂದ ಬಂದವರೆಂದು ಅವರು ನಂಬುತ್ತಾರೆ. ಅವರ ಬುಡಕಟ್ಟಿನವರೇ ಆದರೂ ಸಾಮಾಜಿಕವಾಗಿ ತಾವು ಮೇಲೆಂದು ಭಾವಿಸುವ ಭಗತರೇ ಮುಂತಾದ ಬೆಟ್ಟಗಳಲ್ಲಿ ವಾಸಿಸುವ ಜನ ಕೊಂಡದೋರ ಎಂಬ ಹೆಸರನ್ನು ಇಷ್ಟಪಡುವುದಿಲ್ಲ. ತಮ್ಮನ್ನು ಕೊಂಡಕಾಪುಗಳೆಂದು ಕರೆದುಕೊಳ್ಳುತ್ತಾರೆ. ಕೊಂಡದೋರರು ಅವರ ಈಗಿನ ಸಂತತಿಗೆ ಮೂಲಪುರುಷರೆಂದು ಕಾಣುತ್ತದೆ. ಅವರ ಯಾವುದೇ ಪುರಾಣಗಳಲ್ಲಿ ಅವರು ಬೇರೆಲ್ಲಿಂದಲೋ ಬಂದು ನೆಲೆಸಿದ ಸೂಚನೆಯಿಲ್ಲ.

ಅವರವೆಂದು ಕಂಡುಬರುವ 450 ಹಳ್ಳಿಗಳಲ್ಲಿ ಕೇವಲ ನೂರಕ್ಕೆ ಹತ್ತು ಭಾಗದಲ್ಲಿ ಮಾತ್ರವೇ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಾರೆ. ಉಳಿದ ಎಲ್ಲ ಹಳ್ಳಿಗಳಲ್ಲೂ ಭಗತ, ಜಟಪು ಮತ್ತು ಡೋರಿ ಮುಂತಾದ ಆದಿವಾಸಿಗಳೊಂದಿಗೆ ವಾಸ ಮಾಡುತ್ತಾರೆ. ಪ್ರತಿಯೊಂದು ಬುಡಕಟ್ಟೂ ತನ್ನದೇ ಆದ ಕೇರಿ ಅಥವಾ ಕೇರಿಗಳನ್ನು ಹೊಂದಿರುತ್ತದೆ. ಈ ರೀತಿ ಹಲವು ಬುಡಕಟ್ಟುಗಳಿರುವ ಹಳ್ಳಿಗಳಲ್ಲಿ ಅವರ ಸಾಮಾಜಿಕಮಟ್ಟ ಭಗತರು ಮತ್ತು ಜಟಪುಗಳದಕ್ಕಿಂತ ಕೆಳಗೂ ಆದರೆ ದೋಂಗಗಳಿಗೆ ಮೇಲೂ ಆಗಿ ಇರುತ್ತದೆ. ಅವರ ಕುಯಿ ಭಾಷೆ ಅವರನ್ನು ತೆಲುಗು ಮಾತಾಡುವ ಭಗತರಿಂದಲೂ, ಕುವಿ ಮಾತಾಡುವ ಜಟಪುಗಳಿಂದಲೂ ಬೇರ್ಪಡಿಸುತ್ತದೆ. ಕುಯಿ ಮತ್ತು ಕುವಿ ಭಾಷೆಗಳು ಒಂದೇ ಕೊಂಡ್ (ದ್ರಾವಿಡ) ಭಾಷೆಯ ಉಪಭಾಷೆಗಳಾದರೂ ಈ ಎರಡು ನುಡಿಗಳೂ ಅವರಿಗೆ ಪರಸ್ಪರ ತಿಳಿಯುವುದಿಲ್ಲ. ಉಡುಪಿನಲ್ಲಿ ಅವರು ಭಗತರನ್ನು ಹೋಲುತ್ತಾರೆ. ಆದರೆ ಜಟಪುಗಳಿಂದ ಬೇರೆಯಾಗಿದ್ದಾರೆ. ಏಕೆಂದರೆ ಜಟಪುಗಳಲ್ಲಿ ಹೆಂಗಸರು ಕೆಂಪು ಅಂಚಿನ, ಕಿರಿದಾದ, ಮಂಡಿಯ ಮೇಲೆ ನಿಲ್ಲುವ ಒಂದು ನಡುಬಟ್ಟೆಯನ್ನು ಮಾತ್ರ ಧರಿಸುತ್ತಾರೆ. ಭಗತರು ಮತ್ತು ಕೊಂಡ ದೋರರು ತಮ್ಮದೇ ಸ್ವಂತ ನಿವೇಶನಗಳಲ್ಲಿ ಬೇರೆ ಬೇರೆ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಜಟಪುಗಳಾದರೋ ಮುಂದೆ ಮತ್ತು ಹಿಂದೆ ಎರಡು ಉದ್ದಗೋಡೆಗಳನ್ನು ಹಾಕಿ ನಡುನಡುವೆ ಅಡ್ಡ ಗೋಡೆಗಳನ್ನೆಬ್ಬಿಸಿ ಎಡಬಿಡದೆ ಸಾಲು ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಕೊಂಡದೋರರು ಭಗತರ ಕೈಯಲ್ಲಿ ಊಟ ಮಾಡುತ್ತಾರೆ. ಭಗತರು ಹಾಗೆ ಮಾಡುವುದಿಲ್ಲ. ಜಟಪುಗಳು, ಕೊಂಡದೋರರಲ್ಲಿ ಸಹಪಂಕ್ತಿ ಭೋಜನ ಇಲ್ಲ. ಅತ್ಯಂತ ಕೆಳಮಟ್ಟದ ಗುಂಪುಗಳಾದ ಡೋಂ ಮತ್ತು ಕೊಂಡಗಳ ನಡುವೆ ಅಸ್ಪøಶ್ಯತೆ ಎಂಬುದೇನೂ ಇಲ್ಲ.

ಹಿರಿಯ ಕೊಂಡ್ ಬುಡಕಟ್ಟಿನ ಉಳಿದ ಶಾಖೆಗಳಂತೆ ಕೊಂಡದೋರರು ಮೊದಲಿನಿಂದಲೂ ಗೋಮಾಂಸ ಭಕ್ಷಕರಾಗಿದ್ದರು. ಈಚೆಗೆ ಒರಿಯ ಗುರುಗಳ ಪ್ರಭಾವದಿಂದಾಗಿ ಅನೇಕರು ಗೋಮಾಂಸ ಭಕ್ಷಣೆಯನ್ನು ಬಿಟ್ಟುಬಿಟ್ಟಿದ್ದಾರೆ.

ಕೊಂಡದೋರರ ಆರ್ಥಿಕವ್ಯವಸ್ಥೆ ಸರದಿ ಬೇಸಾಯ (ಪೊಡು), ಕಾಯಂ ಬತ್ತ ಬಿತ್ತನೆಗಳನ್ನವಲಂಬಿಸಿದೆ. ಸರದಿ ಬೇಸಾಯ ಈಗ ತುಂಬ ಮಿತವಾಗಿದೆ. ಕಾರಣ ಸರ್ಕಾರದ ಕಡ್ಡಾಯ ಕಾನೂನುಗಳು. ಉದಾಹರಣೆಗೆ, ಅರಕು ಕಣಿವೆಯಲ್ಲಿದ್ದ ಸರದಿ ಬೇಸಾಯಗಾರ ಕುಟುಂಬಗಳಲ್ಲಿ ಸುಮಾರು 30 ಜನ ಶ್ರೀಮಂತ ರೈತರ, ಕಂಟ್ರಾಕ್ಟರುಗಳ, ಅರಣ್ಯ ಇಲಾಖೆಯ ಆಶ್ರಯದಲ್ಲಿ ಕೂಲಿಯ ಕೆಲಸಗಾರರಾಗಿ ಈ ಜನ ಮಾರ್ಪಟ್ಟಿದ್ದಾರೆ. ರೈಲ್ವೆಯ ಕಂಟ್ರಾಕ್ಟರುಗಳು ಬಹುಸಂಖ್ಯೆಯ ಆದಿವಾಸಿಗಳಿಗೆ ಕೆಲಸ ಒದಗಿಸುತ್ತಾರೆ. ಅನೇಕ ಆದಿವಾಸಿ ಕುಟುಂಬಗಳು ತಮಗೆ ಒದಗುವ ಆಹಾರದ ಜೊತೆಗೆ ಕಾಡಿನ ಗೆಡ್ಡೆಗೆಣಸುಗಳನ್ನು ಸಂಗ್ರಹಿಸಿ ಸಾಲದುದನ್ನು ಬೇಟೆ ಮತ್ತು ಮೀನುಗಾರಿಕೆಗಳಿಂದ ತುಂಬಿಕೊಳ್ಳುತ್ತಾರೆ.

ಕೊಂಡದೋರರ ಸಮಾಜ ವ್ಯವಸ್ಥೆ ಬಹಳ ಸರಳ. ಅದು ಇನ್ನೂ ಉಳಿದು ಬಂದಿದೆ. ಅವರಲ್ಲಿ ಎರಡು ಉಪ ಭಾಗಗಳಿವೆ: ಪೆದ್ದಕೊಂಡದೋರ ಮತ್ತು ಚಿನ್ನಕೊಂಡದೋರ. ಮೊದಲನೆಯವರು ಬಯಲುಪ್ರದೇಶದ ತೆಲುಗು ಜನರೊಂದಿಗೆ ನಿಕಟ ಸಂಪರ್ಕಗಳನ್ನಿಟ್ಟುಕೊಂಡು ಗೋಮಾಂಸ ತಿನ್ನುವುದನ್ನು ಬಿಟ್ಟಿದ್ದಾರೆ. ಕೊನೆಯವರಾದರೊ, ಹೋಲಿಸಿ ನೋಡಿದರೆ, ಬೇರೆಯಾಗಿಯೇ ಉಳಿದು ಈಗಲೂ ಗೋಮಾಂಸ ತಿನ್ನುತ್ತಾರೆ. ಬುಡಕಟ್ಟಿನ ಸುಮಾರು 10% ಜನ ಪೆದ್ದಕೊಂಡ ದೋರ ವಿಭಾಗಕ್ಕೆ ಸೇರಿದವರು. ಪ್ರತಿಯೊಂದು ಉಪವಿಭಾಗದಲ್ಲೂ ಕಾಣುತ್ತವೆ. ಒಂದೇ ಒಂದು ಪಂಗಡವಿರುವ ಹಳ್ಳಿ ಇರುವುದಿಲ್ಲ. ಪ್ರತಿಯೊಂದು ಪಂಗಡಕ್ಕೂ ಒಂದು ಹೆಸರಿದ್ದು ಭಿನ್ನಗೋತ್ರ ವಿವಾಹ ಪದ್ಧತಿ, ಪಿತೃಪ್ರಧಾನವಂಶ ಪರಂಪರೆ ರೂಢಿಯಲ್ಲಿದೆ. ಪಂಗಡಗಳಿಗೆ ಸ್ಥಳಗಳ ಹೆಸರುಗಳಿಲ್ಲ. ಪ್ರಾಕೃತಿಕವಾದ ಸೂರ್ಯ ಮತ್ತು ನೀರು ಎಂಬ ಹೆಸರಿಟ್ಟುಕೊಂಡಿರುವ ಎರಡು ಗುಂಪುಗಳ ವಿನಾ ಉಳಿದುವಕ್ಕೆ ನಾಗರಹಾವು, ಹುಲಿ, ಟಗರು, ಮೀನು, ಮುಂತಾದ ಪ್ರಾಣಿಗಳ ಹೆಸರಿರುತ್ತವೆ. ಪಂಗಡದ ಹೆಸರಿನ ಪ್ರಾಣಿಯನ್ನು ಕೊಲ್ಲಬಾರದೆಂದಾಗಲಿ, ತಿನ್ನಬಾರದೆಂದಾಗಲಿ ನಂಬಿಕೆಯೇನೂ ಇಲ್ಲ. ಹಿಂದೆ ಪಂಗಡದ ಹೆಸರುಗಳನ್ನು ವ್ಯಕ್ತಿನಾಮದ ಭಾಗಗಳನ್ನಾಗಿ ಉಪಯೋಗಿಸಿರುತ್ತಿರಲಿಲ್ಲ. ಈಚಿನ ದಿನಗಳಲ್ಲಿ, ತೆಲುಗು ಪ್ರಭಾವದಿಂದಾಗಿ ವ್ಯಕ್ತಿಗಳು ಪಂಗಡದ ಹೆಸರುಗಳನ್ನು ಇಂಟಿಪೇರು (ಮನೆಯ ಹೆಸರುಗಳು)ಗಳನ್ನಾಗಿ ತಮ್ಮ ಸ್ವಂತ ಹೆಸರಿನ ಹಿಂದಕ್ಕೆ ಸೇರಿಸುತ್ತಾರೆ. ಕೆಲವು ಆದಿವಾಸಿ ಜನ ತಮ್ಮ ತವರುಹಳ್ಳಿಗಳಿಂದ ಬಂದವರು, ಆ ಹಳ್ಳಿಗಳ ಹೆಸರುಗಳನ್ನೇ ಇಂಟಿಪೇರುಗಳಾಗಿ ಬಳಸುತ್ತಾರೆ. ಭಿನ್ನಗೋತ್ರ ವಿವಾಹ ಕಡ್ಡಾಯ. ಉತ್ತರ ಒರಿಸ್ಸಾದ ಜುವಾಂಗ್ ಮತ್ತು ಇತರ ಬುಡಕಟ್ಟುಗಳಲ್ಲಿ ಮಾಡುವಂತೆ ಸೋದರ ಪಂಗಡಗಳಾಗಿ ಮತ್ತು ಬಂಧು ಪಂಗಡಗಳಾಗಿ ಒಟ್ಟುಗೂಡಿಸುವ ಪದ್ಧತಿ ಇವರಲ್ಲಿ ಇಲ್ಲ.

ಇಡೀ ಬುಡಕಟ್ಟಿಗೆ ಒಬ್ಬ ಧಾರ್ಮಿಕ ನಾಯಕ-ಕೊಯ ಕೊಂಡ-ಇರುತ್ತಾನೆ. ಈತ ಪೌರೋಹಿತ್ಯ. ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುತ್ತಾನೆ. ಕುಲಂನಾಯಿಡು ಎಂಬ ಹೆಸರಿನ ತನ್ನ ಕೈಕೆಳಗಿನ ಕಾರ್ಯಕರ್ತರನ್ನು ಈತ ನೇಮಿಸುತ್ತಾನೆ. ಇವರು ಶುದ್ಧೀಕರಣ ಸಮಾರಂಭಗಳನ್ನು ನಡೆಸಿ, ಪಂಗಡದೊಳಗಿನ ಅಥವಾ ಅಂತರಬುಡಕಟ್ಟುಗಳ ಮದುವೆಗಳನ್ನು ಕ್ರಮಬದ್ಧಗೊಳಿಸುತ್ತಾರೆ. ಜಮೀನುದಾರಿಯ ರದ್ಧತಿಗಿಂತ ಮುಂಚೆ ಮುತ್ತಾದಾರರು ಆದಿವಾಸಿ ಹಳ್ಳಿಗಳನ್ನು ಆಳಲು ತಮ್ಮ ಪ್ರತಿನಿಧಿಗಳನ್ನು ನೇಮಿಸುತ್ತಿದ್ದರು.

ಮದುವೆಗಳು ಬಹುಮಟ್ಟಿಗೆ ಅಪಹಾರ ಪದ್ಧತಿಯವು. ಏರ್ಪಡಿಸಿದ ಮದುವೆಗಿಂತ ಇದರಲ್ಲಿ ಖರ್ಚು ಕಡಿಮೆ. ತರುಣ ತರುಣಿಯರು ಪರಸ್ಪರ ಸಂಧಿಸಲು ಸಂತೆಗಳಲ್ಲಿ, ಜಾತ್ರೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಹಲವಾರು ಅವಕಾಶಗಳು ಒದಗುತ್ತವೆ. ಆಗ ಅವರು ತಮ್ಮ ಪಲಾಯನಕ್ಕೆ ತಕ್ಕ ಏರ್ಪಾಟುಗಳನ್ನು ಮಾಡಿಕೊಳ್ಳುತ್ತಾರೆ. ಮುಂದೆ ಮದುವೆಯ ನಂಟು ಬೆಳೆಯುತ್ತದೆ. ಒಂದೇ ಹಳ್ಳಿಯ ಗಂಡು ಹೆಣ್ಣುಗಳಿಗೆ ಮದುವೆಗೆ ಅವಕಾಶವುಂಟು. ಅಂದರೆ, ಉತ್ತರ ಭಾರತದಲ್ಲಿನಂತೆ ಗ್ರಾಮ ಭಿನ್ನಗೋತ್ರವಿವಾಹ ನಿಯಮ ಇಲ್ಲ. ವಿವಾಹವಿಚ್ಛೇದನಗಳು ವಿಶೇಷವಾಗಿ ಸಂಪರ್ಕ ಪ್ರದೇಶಗಳಲ್ಲಿ ಬಹಳ ಸಾಮಾನ್ಯ. ಹೆಚ್ಚಿನ ಆದಿವಾಸಿ ಹಳ್ಳಿಗಳಲ್ಲಿ ವೈದ್ಯಕೀಯ ನೆರವು ಇಲ್ಲವಾದುದರಿಂದ ಬಾಲಮರಣ ಬಹಳ ಹೆಚ್ಚು.

ಏರ್ಪಡಿಸಿದ ಮದುವೆಗಳಲ್ಲಿ ಆಚರಿಸುವ ಸಮಾರಂಭಗಳು ಇವು : ಹುಡುಗನ ತಂದೆತಾಯಿಗಳು ಮೊದಮೊದಲಿನ ಭೇಟಿಗಳನ್ನು ನಡೆಸಿ ಹುಡುಗಿಯ ತಂದೆತಾಯಿಗಳಿಗೆ ಅಕ್ಕಿ, ಹೆಂಡದ ಸೀಸೆಗಳನ್ನು ಉಡುಗೊರೆ ಕೊಡುತ್ತಾರೆ. ಮೂರನೆಯ ಬಾರಿ ಹೆಂಡದ ಉಡುಗೊರೆ ಸ್ವೀಕೃತವಾಯಿತೆಂದರೆ ಮದುವೆಗೆ ಒಪ್ಪಿಗೆ ದೊರೆಯಿತೆಂದು ಅರ್ಥ. ಆಮೇಲೆ ಒಂದು ಒಳ್ಳೆಯ ದಿನ ಹೆಣ್ಣಿನ ಕಡೆಯವರು ಗಂಡಿನ ಮನೆಗೆ ಅವಳನ್ನು ಕರೆದುಕೊಂಡು ಹೋಗುತ್ತಾರೆ. ವಧೂವರರು ಎಲೆಗಳಿಂದ ಮಾಡಿದ ಒಂದು ಚಪ್ಪರದಲ್ಲಿ ಕುಳಿತುಕೊಳ್ಳುತ್ತಾರೆ. ಒಬ್ಬ ಮುದುಕ, ಪುರೋಹಿತನ ಪರವಾಗಿ ಅರಿಶಿನದ ನೀರನ್ನು ಅವರ ತಲೆಯ ಮೇಲೆ ಸುರಿಯುತ್ತಾನೆ. ಇದು ಉತ್ಸವದ ಮುಕ್ತಾಯ. ನಿಷೇಕ ಸಾಮಾನ್ಯವಾಗಿ ಅದೇ ರಾತ್ರಿ ನಡೆಯುತ್ತದೆ. ವರ ತೆರವನ್ನು (ವಳಿ) ಕೊಡಬೇಕು. ಇದು ಈಗ 50 ರೂಪಾಯಿಗಳವರೆಗೂ ಇರುತ್ತದೆ. ಪಲಾಯನದ ಮೂಲಕ ನಡೆವ ಮದುವೆಗಳಲ್ಲಾದರೆ ಈ ತೆರವನ್ನು ಆಮೇಲೆ ಹಲವು ಕಂತುಗಳಲ್ಲಿ ಕೂಡ ಕೊಡಬಹುದು. ವಿಧವಾ ವಿವಾಹಕ್ಕೆ ಅವಕಾಶವುಂಟು.

ಕೊಂಡದೋರ ದೇವಪಂಕ್ತಿಯಲ್ಲಿರುವ ದೇವತೆಗಳು: ಪೆದ್ದ ದೇವುಡು, ಗಂಗಾದೇವತ, ನಿಶಾನಿ ದೇವತ, ಅಮ್ಮತಲ್ಲಿ ಮತ್ತು ನಂದಿ ದೇವತ. ಪ್ರತಿಯೊಂದು ದೇವತೆಯನ್ನೂ ಒಂದು ಮರದ ಕೆಳಗೆ ಬಣ್ಣ ಬಳಿದು ಒಂದು ಮಡಕೆಯನ್ನಿಟ್ಟು ಪ್ರತಿನಿಧಿಸಲಾಗುತ್ತದೆ. ಈ ಕುಂಭದೇವಾಲಯಗಳಲ್ಲಿ ಕೋಳಿಮರಿಗಳನ್ನು, ಟಗರು ಮತ್ತು ಗೂಳಿಗಳನ್ನು ಬಲಿ ಕೊಡುತ್ತಾರೆ. ಹಿಂದುತ್ವ ಅಂಗೀಕರಿಸಿದ ಕೆಲವು ಕೊಂಡದೋರ ಮನೆಗಳಲ್ಲಿ ಶಿವ ಮತ್ತು ವೆಂಕಟೇಶ್ವರರ ಚಿತ್ರಗಳಿರುತ್ತವೆ. ಕೆಲವು ಆದಿವಾಸಿಗಳು ಸಿಂಹಾಚಲಕ್ಕೆ ಯಾತ್ರೆ ಹೋಗುತ್ತಾರೆ. ತಮ್ಮ ಗುರು ಕೊಂಡ ಕೋಯನಿಗೆ ಎಲ್ಲ ಕೊಂಡದೋರ ಕುಟುಂಬಗಳೂ ವರ್ಷಕ್ಕೊಮ್ಮೆ ರಾಗಿ ಕಾಣಿಕೆ ಕೊಡುತ್ತವೆ.

ಪಂಗಡಕ್ಕೆ ಸೇರದ ಹೊರಗಿನವರನ್ನು ಗುರುಮುಖೇನ ಅಗತ್ಯವಾದ ಪ್ರಾಯಶ್ಚಿತ್ಯಾನಂತರ ಬುಡಕಟ್ಟಿನ ಸದಸ್ಯರನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ.

ಏಜೆನ್ಸಿ ಪ್ರದೇಶಗಳ ಆದಿವಾಸಿ ಗ್ರಾಮಗಳಲ್ಲಿ ಹಲವು ಮಿಷನರಿ ತಂಡಗಳು ಕೆಲಸ ಮಾಡುತ್ತಿವೆ. ಅವುಗಳ ಪ್ರಭಾವದಿಂದ ಕೆಲವು ಕೊಂಡದೋರರು ಕ್ರೈಸ್ತರಾಗಿದ್ದಾರೆ.

ಕೊತರು : ನೀಲಗಿರಿ ಪ್ರಸ್ಥಭೂಮಿ ಪ್ರದೇಶವೊಂದರಲ್ಲಿ ಏಳು ಗ್ರಾಮಗಳಲ್ಲಿ ವಾಸಿಸುತ್ತಾರೆ. ಭಾಷೆ ತೋಡರ ಭಾಷೆಯಂತೆಯೇ. ಸಮರ್ಥ, ಕೃಷಿಗಾರರೆನ್ನಿಸಿಕೊಂಡಿದ್ದಾರೆ. ಒಳ್ಳೆಯ ಕೈಕೆಲಸಗಾರರೆಂದೂ ಹೆಸರು ಪಡೆದಿದ್ದಾರೆ. ಗಂಡಸರು ಮರಗೆಲಸ, ಕುಲುಮೆ ಕೆಲಸ, ಅಕ್ಕಸಾಲಿವೃತ್ತಿ, ಚರ್ಮ ಹದಮಾಡುವುದು ಮುಂತಾದ ಕೆಲಸಗಳಲ್ಲಿ ನಿಪುಣರು. ಹೆಂಗಸರು ಬುಟ್ಟಿ ಹೆಣೆಯುತ್ತಾರೆ. ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಾರೆ. ಎಮ್ಮೆ ಹಸುಗಳನ್ನು ಸಾಕುತ್ತಾರೆ. ಹಸುವಿನ ಹಾಲನ್ನು ಕುಡಿಯರು. ಹಾಲು ಕರೆಯುವವರು ಪುರೋಹಿತವರ್ಗದವರು ಮಾತ್ರ.

ಖೋಡರು : ಬಿಹಾರ್, ಒರಿಸ್ಸ, ಮದ್ರಾಸ್ ಪ್ರಾಂತ್ಯದ ಉತ್ತರಭಾಗ ಮುಂತಾದ ಕಡೆಗಳ ಪರ್ವತ ಪ್ರಾಂತ್ಯಗಳಲ್ಲಿದ್ದಾರೆ. ಭಾಷೆ ದ್ರಾವಿಡ. ಬಯಲುಸೀಮೆ ಹತ್ತಿರ ಇರುವವರು ಹಿಂದೂಧರ್ಮವನ್ನವಲಂಬಿಸಿದ್ದರೂ ಬೆಟ್ಟಸೀಮೆಯವರು ಪ್ರತ್ಯೇಕವಾಗಿಯೇ ಉಳಿದಿದ್ದಾರೆ. ಇವರಲ್ಲಿ ನರಬಲಿಪದ್ಧತಿ ಬಹಳ ವ್ಯಾಪಕವಾಗಿತ್ತು, ಹತ್ತೊಂಬತ್ತನೆಯ ಶತಮಾನದಲ್ಲಿ ಅದನ್ನು ನಿಷೇಧಿಸಲಾಯಿತು. ಅದಕ್ಕಾಗಿ ಮಕ್ಕಳನ್ನು ಕೊಂಡು ತರುತ್ತಿದ್ದರು. ತಂದೆತಾಯಿಗಳು ತಮ್ಮ ಯಾವುದಾದರೊಂದು ಮಗುವನ್ನು ಬಲಿಗೆಂದು ಮೀಸಲಾಗಿಡುತ್ತಿದ್ದರು. ಕೈಸೆರೆ ಸಿಕ್ಕಿದವರನ್ನು ಬಲಿ ಕೊಡುವುದಂತೂ ಸಾಮಾನ್ಯವಾಗಿತ್ತು. ತರುಣರನ್ನೇ ಹೆಚ್ಚಾಗಿ ಬಲಿ ಕೊಡುತ್ತಿದ್ದರು. ಬಲಿಯಾದವನನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಎಲ್ಲರಿಗೂ ಹಂಚುತ್ತಿದ್ದರು. ಪಾಲಿಗೆ ಬಂದ ತುಂಡನ್ನು ಪ್ರತಿಯೊಬ್ಬನೂ ತನ್ನ ಜಮೀನಿನಲ್ಲಿ ಹೂಳುತ್ತಿದ್ದ. ಇದರಿಂದ ಹಸನಾದ ಪೈರು ದೊರಕುವುದೆಂದು ನಂಬಿದ್ದರು. ಈಗ ಎಮ್ಮೆ ಅಥವಾ ಕುರಿಯನ್ನು ಬಲಿ ಕೊಡುತ್ತಾರೆ.

ಗೊಂಡರು : ಭಾರತದಲ್ಲಿ ಇವರು ಸುಮಾರು ಮೂವತ್ತು ಲಕ್ಷದಷ್ಟಿದ್ದಾರೆ. ಹೆಚ್ಚಾಗಿ ಮಧ್ಯಪ್ರದೇಶದಲ್ಲಿ. ದ್ರಾವಿಡ ಭಾಷೆಯನ್ನಾಡುವ ಪಂಗಡಗಳಲ್ಲಿ ಇವರದೇ ಬಹು ದೊಡ್ಡದು. 14 ಮತ್ತು 15ನೆಯ ಶತಮಾನದಲ್ಲಿ ಮಧ್ಯಪ್ರದೇಶವನ್ನು ಗೊಂಡ್ ರಾಜವಂಶೀಯರೇ ಆಳುತ್ತಿದ್ದರು. ಹಿಂದೂ ರೈತರು 16ನೆಯ ಶತಮಾನದಲ್ಲೇ ಅಲ್ಲಿಗೆ ಬಂದು ನೆಲೆಸತೊಡಗಿದರು. ಗೊಂಡರು ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ನಿಲ್ಲಬೇಕಾಯಿತು. ಪ್ರಧಾನ ಕಸುಬು ಕೃಷಿ. ಕೆಲವರು ಮರಗೆಲಸ, ಕುಲುಮೆ ಕೆಲಸ ಮುಂತಾದ ಉದ್ಯೋಗಗಳನ್ನು ಕಲಿತಿದ್ದಾರೆ. ನಾಗಪೂಜೆ, ಸೂರ್ಯಪೂಜೆ, ಪಿತೃಪೂಜೆಗಳು ರೂಢಿಯಲ್ಲಿವೆ. ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದವರೆಗೂ ನರಬಲಿ ಅವರಲ್ಲಿ ರೂಢಿಯಲ್ಲಿತ್ತು. ನಾನಾ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಹಾವುಗಳು ಇರುವೆಗಳನ್ನೂ ಬಿಡರು. ಅತಿಯಾಗಿ ಮದ್ಯ ಸೇವಿಸುತ್ತಾರೆ. ಆದರೂ ಅವರು ಭಂಗಿಗಳ ಕೆಲಸವನ್ನು ಮಾತ್ರ ಮಾಡುವುದಿಲ್ಲ.

ಚೆಂಚುಗಳು : ಭಾರತದ ಅತಿಪ್ರಾಚೀನ ಜನಾಂಗಗಳಲ್ಲೊಬ್ಬರಾದ ಇವರು ಆಂಧ್ರಪ್ರದೇಶದ ಪೂರ್ವಘಟ್ಟಗಳ ಪ್ರಾಂತ್ಯದಲ್ಲಿದ್ದಾರೆ. ಅಂಗರಚನೆ ಮುಂತಾದವಲ್ಲಿ ಅವರೊಂದು ಸಂಕೀರ್ಣ ಜನಾಂಗ. ಭಾಷೆ ತೆಲುಗು. 1941ರಲ್ಲಿ ಅವರ ಸಂಖ್ಯೆ 3,865 ರಷ್ಟಿತ್ತು. ಕೆಲವರು ಪ್ರಾಚೀನ ಕೃಷಿ ಮತ್ತು ಪಶುಪಾಲನಾಕ್ರಮಗಳನ್ನವಲಂಬಿಸಿದ್ದರೂ ಅನೇಕರು ಇನ್ನೂ ಬೇಟೆಯಾಡುವ, ಕಾಡಿನ ಕಂದಮೂಲಗಳು ಸೊಪ್ಪುಗಳನ್ನು ಶೇಖರಿಸುವ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಅವರ ತೊಡುಗೆ ಒಂದು ತುಂಡು ಬಟ್ಟೆ ಮಾತ್ರ. ಬಿಲ್ಲು, ಬಾಣ, ಮಚ್ಚುಗತ್ತಿ-ಇವು ಆಯುಧಗಳು. ತಾವೇ ತಯಾರಿಸಿದ ಮಾದಕ ಪಾನೀಯವೊಂದನ್ನು ಹೆಚ್ಚಾಗಿ ಸೇವಿಸುತ್ತಾರೆ.

ತೋಡರು : ವಾಸಸ್ಥಳ ನೀಲಗಿರಿ ಪರ್ವತಪ್ರದೇಶ. ಚಹರೆಯಲ್ಲಿ ಇವರು ಇತರ ಆದಿವಾಸಿಗಳಿಗಿಂತ ಕೊಂಚ ಭಿನ್ನವಾಗಿದ್ದಾರೆ. ದೃಢಕಾಯರು, ಎತ್ತರವಾದ ಆಳುಗಳು, ನೇರವಾದ ಮೂಗು, ವಿಪುಲವಾದ ಕೂದಲು. ಭೂವ್ಯವಸಾಯ ಬೇಕಿಲ್ಲ; ಅವರ ಆರ್ಥಿಕ ಜೀವನ, ಮತಸಂಪ್ರದಾಯಗಳು ಎಮ್ಮೆಯ ಸುತ್ತ ಬೆಳೆದಿವೆ. ತೋಡ ಗ್ರಾಮದಲ್ಲಿ ಮೂರು ವಿಭಾಗಗಳನ್ನು ಕಾಣಬಹುದು : 1. ಎಮ್ಮೆಗಳ ದೊಡ್ಡಿ ಅದು ದೇವಾಲಯ ಕೂಡ, 2. ಎಮ್ಮೆಕರುಗಳನ್ನು ಕೂಡುವ ದೊಡ್ಡಿ, 3. ವಾಸದ ಮನೆಗಳು. ಈ ಮನೆಗಳು ಅರ್ಧವರ್ತುಲಾಕೃತಿಯ ಗುಡಿಸಲುಗಳು ಹಾಲು ಕರೆಯುವ ಕೆಲಸ ಗಂಡಸರಿಂದಲೇ ಆಗಬೇಕು. ಕೊಟ್ಟಿಗೆಯೊಳಗೆ ಹೆಂಗಸರು ಬರಲೇಕೂಡದು. ಹಾಲು ಕರೆಯುವ ಸಾಧಾರಣ ಎಮ್ಮೆಗಳಲ್ಲದೆ ಪೂಜೆಗೆ ಸಂಬಂಧಿಸಿದ ಎಮ್ಮೆಗಳು ಕೊಟ್ಟಿಗೆಯಲ್ಲಿ ಇರುತ್ತವೆ. ಆಗಾಗ್ಯೆ ಈ ಎಮ್ಮೆಗಳನ್ನು ಪವಿತ್ರಕ್ಷೇತ್ರಗಳಿಗೆ ಅಟ್ಟಿಕೊಂಡು ಹೋಗುತ್ತಾರೆ. ಆ ಸಂದರ್ಭಗಳಲ್ಲಿ ಗ್ರಾಮಸ್ಥರೆಲ್ಲ ಎಮ್ಮೆಗಳೊಂದಿಗೆ ಹೋಗಬಹುದು. ಎಮ್ಮೆಗಳು ತುಳಿದ ಈ ದಾರಿಯಲ್ಲಿ ಹೆಂಗಸರು ತಿರುಗಾಡಕೂಡದು. ತೋಡರು ಮಾಂಸವನ್ನು ತಿನ್ನುವುದಿಲ್ಲ. ಅವರು ತಿನ್ನುವ ಧಾನ್ಯ ಬಡಗರಿಂದ ಕಾಣಿಕೆ ರೂಪದಲ್ಲಿ ಬರುತ್ತೆ. ಧಾನ್ಯದೊಂದಿಗೆ ತಿನ್ನಲು ಬೇಕಾದ ಕಾಯಿಪಲ್ಯಗಳನ್ನು ತೋಡರು ಅರಣ್ಯದಿಂದ ಒದಗಿಸಿಕೊಳ್ಳುತ್ತಾರೆ. ಅವರಲ್ಲಿ ಬಹುಪತಿ ಪದ್ಧತಿಯಿದೆ. ಕನ್ಯೆ ಒಬ್ಬನನ್ನು ಮದುವೆಯಾದ ಮೇಲೆ ಅವನ ಸಹೋದರರಿಗೂ ಪತ್ನಿಯಾಗುತ್ತಾಳೆ. ಅವರಲ್ಲಿ ರೂಢಿಯಲ್ಲಿದ್ದ ಶಿಶುಹತ್ಯಾಪದ್ಧತಿ ಕೊನೆಗೊಂಡ ಮೇಲೆ ಇತ್ತೀಚೆಗೆ ಸ್ತ್ರೀಯರ ಸಂಖ್ಯೆ ಹೆಚ್ಚಿ ಬಹುಪತಿ ಪದ್ಧತಿ ಸಡಿಲವಾಗುತ್ತಿದೆ. (ಎಚ್.ಆರ್.ವಿ.)

ನಾಗಾ ಬುಡಕಟ್ಟುಗಳು : ಪ್ರತ್ಯೇಕ ರಾಜ್ಯದ ಸ್ಥಾನಮಾನಗಳನ್ನು ಪಡೆದಿರುವ (1960) ನಾಗಾ ಪ್ರದೇಶದಲ್ಲಿ ಇರುವ ಜನರು. ಈ ದುರ್ಗಮ ಕೊಳ್ಳ ಅಸ್ಸಾಮಿನ ಗಹನ ಪರ್ವತಗಳ ನಡುವೆ ಇದೆ. 1944ರ ಮೊದಲು ಬ್ರಿಟಿಷ್ ಆಡಳಿತವಿದ್ದಾಗಲೂ ಈ ಭಾಗಕ್ಕೆ ಸಾಕಷ್ಟು ಸಂಪರ್ಕಗಳೇರ್ಪಟ್ಟಿರಲಿಲ್ಲ. ಬ್ರಿಟಿಷ್, ಭಾರತೀಯ ಹಾಗೂ ಜಪಾನಿ ಸೈನಿಕರೊಂದಿಗೆ ಬಹುಕಾಲದ ಸಂಪರ್ಕದಿಂದಾಗಿ ಬುಡಕಟ್ಟಿನ ಪ್ರಾಚೀನತೆ ಮಾಯವಾಗಿ ನಾಗಾಗಳ ಮನಸ್ಸಿನಲ್ಲಿ ಒಂದು ಕ್ರಾಂತಿಮನೋಭಾವ ಮಾಡಿತು. ಕ್ರೈಸ್ತಮತಕ್ಕೆ ಸಾಮೂಹಿಕವಾಗಿ ಪರಿವರ್ತನೆ ನಡೆದದ್ದು ನಾಗಾಬುಡಕಟ್ಟುಗಳ ವೇಗವಾದ ಆಧುನೀಕರಣಕ್ಕೆ ಸಹಕಾರಿಯಾಯಿತು. ಹಿಂದೂ ಗ್ರಂಥಗಳಲ್ಲಿ ಅವರನ್ನು ಕಿರಾತರೆಂದು ಕರೆದಿರುವ ಉಲ್ಲೇಖಗಳಿವೆಯಾದರೂ ಹಿಂದೂಧರ್ಮ ಅನೇಕ ನಾಗಾ ಬುಡಕಟ್ಟುಗಳನ್ನು ಹೆಸರಿಸಿಯೇ ಇಲ್ಲ. ಇದಕ್ಕೆ ಒಂದೇ ಒಂದು ಅಪವಾದ ಹಿಂದೂಗಳೇ ಆಗಿಬಿಟ್ಟ ಮಣಿಪುರದ ಮೇಥಿಗಳು. ನಾಗಾಗಳು ಅವರು ವಾಸಸ್ಥಾನಕ್ಕೆ ಪೂರ್ವದಿಂದ ಬರ್ಮ ಮೂಲಕವಾಗಿ ಬಂದು ನೆಲೆಸಿದವರು ಎಂದು ನಂಬಲಾಗಿದೆ. ಆದರೆ 350,000 ಇರುವ ನಾಗಾಗಳನ್ನು ಹನ್ನೆರಡು ಬುಡಕಟ್ಟುಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದಕ್ಕೂ ತನ್ನದೇ ರಾಜ್ಯವಿದೆ. ಪಕ್ಕದಲ್ಲಿ ವಾಸಮಾಡುವ ಪಂಗಡಕ್ಕೇ ಅರ್ಥವಾಗದಂಥ ತನ್ನದೇ ಭಾಷೆಯಿದೆ. ಎತ್ತರದ ಬೆಟ್ಟದ ಇಳುಕಲ ಮೇಲೆ ಇದ್ದ ನಾಗಾ ಹಳ್ಳಿಗಳು ಭದ್ರವಾದ ಆಳ್ವೇರಿಗಳಿಂದ ಸುತ್ತುವರಿದು ಹೆಚ್ಚು ಕಡಿಮೆ ದುರ್ಗಗಳಂತೆಯೇ ಇದ್ದವು. ನಾಗಾಗಳು ಒಳ್ಳೆಯ ಬೇಸಾಯಗಾರರು. ಕೆಲವು ಪ್ರದೇಶಗಳಲ್ಲಂತೂ ಅವರ ಮಟ್ಟ ಗದ್ದೆಗಳು ಪ್ರಾಚೀನ ವ್ಯವಸಾಯ ಕ್ರಮದ ಅದ್ಭುತಗಳಾಗಿವೆ. ಪ್ರತಿಯೊಂದು ಬುಡಕಟ್ಟಿನ ತರುಣರೂ ಒಂದು ಸೇನಾತುಕಡಿಯಂತೆ ವ್ಯವಸ್ಥಿತವಾಗಿ ತಮ್ಮದೇ ನಿದ್ರಾಶಾಲೆಗಳಲ್ಲಿ ಅಥವಾ ಮೊರುಂಗ್‍ಗಳಲ್ಲಿ ಮಲಗುತ್ತಾರೆ. ಹಳ್ಳಿಗಳು ಒಂದೇ ಸಮನೆ ಒಂದರೊಡನೊಂದು ಕಾದಾಡುತ್ತಿದ್ದುದರಿಂದ ಮೊರುಂಗ್‍ಗಳು ಕಾವಲುದಾಣಗಳಾಗಿ, ಸೈನಿಕ ಶಿಬಿರಗಳಾಗಿ, ವಿನೋದಶಾಲೆಗಳಾಗಿ ಕೆಲಸ ಮಾಡುತ್ತಿದ್ದುದೂ ಉಂಟು. ಕೊನೆಯ ಪಕ್ಷ ಒಂದೇ ಒಂದಾದರೂ ಯುದ್ಧದಲ್ಲಾದ ಘಾತದ ಗುರುತು ಮೈಯಲ್ಲಿಲ್ಲದ ಯುವಕನನ್ನು ಯಾವ ಹುಡುಗಿಯೂ ಮದುವೆಯಾಗುತ್ತಿರಲಿಲ್ಲ. ಶತ್ರುಗಳ ತಲೆಯನ್ನು ಕತ್ತರಿಸಿ ಹಳ್ಳಿಗೆ ತಂದ ಯೋಧರನ್ನು ಗಂಡಸರು ಹೆಂಗಸರೆಲ್ಲರೂ ಬಹುವಾಗಿ ಗೌರವಿಸುತ್ತಿದ್ದರು. ಆಗಾಗ ವಿಜಯೋತ್ಸವಗಳನ್ನು ಏರ್ಪಡಿಸಲಾಗುತ್ತಿತ್ತು. ಆಗ ಉತ್ಸವಗಳ ಪರಂಪರೆಯೇ ಜರುಗುತ್ತಿತ್ತು. ಮಿಥಾನ್‍ಗಳ ಬಲಿಯೂ ನಡೆಯುತ್ತಿತ್ತು. ಅವುಗಳನ್ನು ಆಚರಿಸುವವರಿಗೆ ವಿವಿಧ ಪದವಿಗಳು ಸ್ಥಾನಮಾನಗಳು ಇರುತ್ತಿದ್ದುದಲ್ಲದೆ, ಕೆಲವು ಆಭರಣಗಳನ್ನು ಧರಿಸುವ ಹಕ್ಕುಗಳೂ ದೊರೆಯುತ್ತಿದ್ದುವು. ಇವುಗಳಿಗಾಗಿ ನಾಗಾಗಳು ಹೆಚ್ಚಿನ ಸಂಪನ್ಮೂಲಗಳನ್ನೂ ಸತ್ವವನ್ನೂ ಹೊಂದಿರಬೇಕಾಗಿತ್ತು. ಇವುಗಳಲ್ಲಿ ಅನೇಕ ಪದ್ಧತಿಗಳು ಅವರಲ್ಲಿ ಈಗಲೂ ಬಳಕೆಯಲ್ಲಿವೆ.

ಮುಖ್ಯ ನಾಗಾ ಬುಡಕಟ್ಟುಗಳು ಇವು : 1. ಕೊನ್ಯಾಕ್‍ಗಳು : ತ್ವಾನ್‍ಸಾಂಗ್ ಜಿಲ್ಲೆಯವರು. ಸುಮಾರು 63,000 ಜನ ಇದ್ದಾರೆ. ತಲೆಬೇಟೆ ಅವರಲ್ಲಿ ಇನ್ನೂ ಇದೆ ಎಂದು ಹೇಳಲಾಗಿದೆ. 2. ಆವೋಗಳು: ಜನಸಂಖ್ಯೆ ಸುಮಾರು 50,000. ಕೊನ್ಯಾಕ್‍ಗಳ ಅನಂತರ ಹೆಚ್ಚಿನ ಸಂಖ್ಯೆಯುಳ್ಳವರು ಎಂದರೆ ಇವರೇ; ಅತ್ಯಂತ ವಿದ್ಯಾವಂತ ಜನಾಂಗ. ಮೊದಲನೆಯ ಚರ್ಚ್ ಅವರಲ್ಲಿ ಸ್ಥಾಪಿತವಾಯಿತು. ನಾಗಾ ಪ್ರದೇಶದ ಈ ಹಿಂದಿನ ಮುಖ್ಯಮಂತ್ರಿ ಈ ಬುಡಕಟ್ಟಿನವನೇ ಆಗಿದ್ದ. 3. ಸೆಮಾಗಳು : ಜನಸಂಖ್ಯೆಯ ದೃಷ್ಟಿಯಿಂದ ಮೂರನೆಯದು : 48,000. ಯೋಧ ಜನಾಂಗ. ಭಾರತೀಯ ಸೈನ್ಯಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಕೊಟ್ಟಿದೆ. ಈ ಜನ ದಂಗೆಕೋರರ ಯೋಧದಳಗಳ ಬೆನ್ನು ಮೂಳೆಯಾಗಿದ್ದಾರೆ. 4. ಅಂಗಾಮಿಗಳು : ಜನಸಂಖ್ಯೆ ಸುಮಾರು 36,000. ಇವರು ನಾಗಾ ಜನಾಂಗಗಳಲ್ಲೆಲ್ಲ ಅತ್ಯಂತ ಎತ್ತರವಾದವರು, ಸುಂದರರು. ದಂಗೆಕೋರರ ನಾಯಕ ಪಿeóÉೂ ಒಬ್ಬ ಅಂಗಾಮಿ. ಹಾಗೆಯೇ ನಾಗಾ ರಾಜ್ಯದ ಮುಖ್ಯಮಂತ್ರಿ ಕೂಡ.

ಉಳಿದ ಪಂಗಡಗಳು ಹೀಗಿವೆ : ಚಾಕೆಸಾಂಗ್‍ಗಳು-ಜನಸಂಖ್ಯೆ 31,000, ಚಾಂಗ್‍ಗಳು-ಜನಸಂಖ್ಯೆ 21,000, ಲ್ಹೋತಾಗಳು-ಜನಸಂಖ್ಯೆ 23,000, ರೆಂಗ್ಮಾಗಳು-ಜನಸಂಖ್ಯೆ 5,000, ಫೋಮ್‍ಗಳು-ಜನಸಂಖ್ಯೆ 13,000, ಸಾಂಗ್‍ತಾಮ್‍ಗಳು-ಜನಸಂಖ್ಯೆ 20,700, ಯಿಮ್‍ಚುಂಗ್‍ಗಳು-ಜನಸಂಖ್ಯೆ 17,000, ಜೆಲಿಯಾಂಗ್‍ಗಳು-ಜನಸಂಖ್ಯೆ 5,250.

ನಾಗಾ ಜನಾಂಗಗಳ ದೈಹಿಕ ಲಕ್ಷಣಗಳಲ್ಲಿ ಬಹಳ ವೈವಿಧ್ಯವಿದೆ. ಅಂಗಾಮಿಗಳ ಎತ್ತರ. ಆದರೆ ಸೆಮಾಗಳು ಕುಳ್ಳು, ಹೆಚ್ಚು ಸ್ಪಷ್ಟವಾಗಿ ಮಂಗೊಲಾಯ್ಡ್ ಲಕ್ಷಣವುಳ್ಳವರು. ಅವರ ಸಾಂಪ್ರದಾಯಿಕ ಸಂಸ್ಕøತಿಯಲ್ಲೂ ಬೇಕಾದಷ್ಟು ವ್ಯತ್ಯಾಸಗಳಿದ್ದುವು. ಕೆಲವು ಬುಡಕಟ್ಟುಗಳು ಹಲವು ಮೈಲುಗಳವರೆಗೆ ಸುದ್ದಿಯನ್ನು ಮುಟ್ಟಿಸಬಲ್ಲ ದೊಡ್ಡ ನಗಾರಿಗಳನ್ನು ಅಥವಾ ಒಂದು ಬಗೆಯ ದಾರುವಾದ್ಯವನ್ನು ಮಾಡುತ್ತಿದ್ದವು. ಕೆಲವು ಜನಾಂಗಗಳವರು ಸತ್ತವರನ್ನು ಹೂತರೆ ಮತ್ತೆ ಕೆಲವರು ಸುಡುತ್ತಿದ್ದರು. ಇನ್ನೂ ಕೆಲವರು-ಕೊನ್ಯಾಕ್ ಮುಂತಾದವರು-ಹೆಣಗಳನ್ನು ವೇದಿಕೆಗಳ ಮೇಲೆ ಇಟ್ಟುಬಿಡುತ್ತಿದ್ದರು. ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲೂ ಅವರಲ್ಲಿ ವೈವಿಧ್ಯವಿದೆ. ಸೆಮಾ ಮತ್ತು ಚಾಂಗ್‍ಗಳಲ್ಲಿ ಶಕ್ತಿಯುತರಾದ ಮುಖಂಡರು ಅಥವಾ ಅಂಗ್‍ಗಳು ಪವಿತ್ರರಾದವರೆಂದು ಪರಿಗಣಿತರಾಗುತ್ತಾರೆ. ಆವೋಗಳಲ್ಲಿ ರಾಜಕೀಯ ಅಧಿಕಾರ ಮುಖ್ಯ ಕುಟುಂಬಗಳ ಹಿರಿಯರದು. ಅಂಗಾಮಿಗಳು, ಲ್ಹೋತಾಗಳು ಮತ್ತು ರೆಂಗ್ಮಾಗಳು ಹೆಚ್ಚಾಗಿ ಪ್ರಜಾಪ್ರಭುತ್ವ ಉಳ್ಳವರು.

ನಾಗಾಗಳ ಮುಖ್ಯ ಆಹಾರ ಅಕ್ಕಿ, ಗೋಮಾಂಸ, ಹಂದಿಮಾಂಸ, ಅಕ್ಕಿಹೆಂಡಗಳೆಂದರೆ ಅವರಿಗೆ ಬಹಳ ಇಷ್ಟ. ಚೀನಿಯರಂತೆ ಅವರಿಗೂ ಹಾಲನ್ನು ಕಂಡರೆ ಜುಗುಪ್ಸೆ. ಆದರೆ ಮಿಷನರಿಗಳ ಪ್ರಭಾವದಿಂದಾಗಿ ಹಾಲಿನ ಬಳಕೆ ಹೆಚ್ಚುತ್ತಿದೆ. ನಾಗಾ ಯೋಧರು ಅಗಲವಾದ ಶಿರೋವಸ್ತ್ರಗಳನ್ನು ಧರಿಸುತ್ತಾರೆ. ಉದ್ದನೆಯ ಈಟಿಗಳಿಂದ ಮತ್ತು ದೊಡ್ಡ ದಾವೋ ಅಥವಾ ಕೈಕೊಡಲಿಗಳಿಂದ ಸಜ್ಜುಗೊಳ್ಳುತ್ತಾರೆ. ಮಣಿಗಳು ಮತ್ತು ತೋಳ್ಬಳೆಗಳಿಂದ ಅಲಂಕರಿಸಿಕೊಳ್ಳುತ್ತಾರೆ.

ಕ್ರೈಸ್ತರಾಗಿ ಮತಾಂತರಗೊಳ್ಳುವುದಕ್ಕೆ ಮೊದಲು ನಾಗಾಧರ್ಮ ಇತರ ಅಂಥ ಜನಾಂಗಗಳ ಧರ್ಮದಂತೆಯೇ ಇತ್ತು. ಅವರು ಪರಮ ಸೃಷ್ಟಿಕರ್ತನಲ್ಲೂ ಅಸಂಖ್ಯ ಪ್ರೇತಾತ್ಮಗಳು ಹಾಗೂ ಪಿಶಾಚಿಗಳಲ್ಲೂ ನಂಬಿಕೆಯಿಟ್ಟಿದ್ದರು. ಈ ಪ್ರೇತಾತ್ಮಗಳನ್ನು ಸಂತೈಸಲು, ಅವರ ಅನುಗ್ರಹಗಳನ್ನು ಪಡೆಯಲು ಪುರೋಹಿತರಿದ್ದರು. ಅವರ ಸಾಂಪ್ರದಾಯಿಕವಾದ ಹೆಚ್ಚಿನಶಕ್ತಿ ತಲೆಯಲ್ಲಿ ಇರುತ್ತದೆಯಾದ್ದರಿಂದ ದೇಹದಿಂದ ಅದನ್ನು ಕತ್ತರಿಸಿ ತಂದಾತ ಗದ್ದೆಗಳಿಗೆ ಮತ್ತು ಹಳ್ಳಿಗಳಿಗೆ ಆ ಶಕ್ತಿಯನ್ನು ವರ್ಗಾಯಿಸಬಹುದು ಎಂಬ ನಂಬಿಕೆ ಇದ್ದುದರಿಂದ ಅವರು ಬಹುತೇಕವಾಗಿ ತಲೆಹೋಕರಾಗಿದ್ದರು. ಉದ್ದ ಕೂದಲಿನ ಹೆಂಗಸಿನ ತಲೆಯಾದರಂತೂ ಗದ್ದೆಗಳಲ್ಲಿ ಬೆಳೆಯೂ ಹೆಚ್ಚಾಗಿ ಬರುತ್ತದೆ ಎಂಬ ನಂಬಿಕೆ ಇತ್ತು. ನಾಗಾರಾಜ್ಯದಲ್ಲಿ ತಯಾರಾದ ಅತ್ಯಂತ ವೈಭವೋಪೇತವಾದ ವಸ್ತ್ರಗಳನ್ನು ಯಶಸ್ವೀ ತಲೆಗಡುಕ ಮತ್ತು ಅವನ ಹತ್ತಿರದ ನಂಟರು ಮಾತ್ರವೇ ಧರಿಸಬಹುದಾಗಿತ್ತು. ಉದಾಹರಣೆಗೆ : ಯುದ್ಧ ನೃತ್ಯಗಳು, ಪದಕಗಳಾಗಿ ಧರಿಸುತ್ತಿದ್ದ ತಲೆಯ ಆಕೃತಿಯ ಶಿಲ್ಪಗಳನ್ನು ನೋಡಿದರೆ ತಲೆಗಡುಕತನ ಪರೋಕ್ಷವಾಗಿ ಲಲಿತಕಲೆಗಳನ್ನು ಹೇಗೆ ಪ್ರಚೋದಿಸಿತೆಂಬುದು ತಿಳಿಯುತ್ತದೆ. ಬ್ರಿಟಿಷರು ತಲೆಗಡುಕತನವನ್ನು ನಿಲ್ಲಿಸಲು ಅತ್ಯಂತ ತೀವ್ರವಾದ ಕ್ರಮವನ್ನು ಕೈಕೊಂಡು ಹೆಚ್ಚು ಕಡಿಮೆ ಯಶಸ್ವಿಯಾದರು.

ಹೆಚ್ಚಿನ ನಾಗಾಗಳು ಇಂದು ಕ್ರೈಸ್ತರಾಗಿದ್ದಾರೆ. ಆದರೆ ನಾಗಾಲಕ್ಷಣವಾದ ಧಾಳಿಕೋರತನ ಇನ್ನೂ ತಗ್ಗಿಲ್ಲ. ನಾಗಾರಾಜ್ಯದಲ್ಲಿ ಈಗ ನಾಗಾ ಧರ್ಮಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿರುವ ಆರುನೂರಕ್ಕಿಂತ ಹೆಚ್ಚಿನ ಚರ್ಚ್‍ಗಳಿವೆ.

ನಾಗಾ ಉಪಭಾಷೆಗಳು ಇಂಡೋ ಬರ್ಮನ್ ಭಾಷಾವರ್ಗಕ್ಕೆ ಸೇರುತ್ತವೆ. ಅಂತರ ಜನಾಂಗ ಸಂಪರ್ಕಕ್ಕೆ ನಾಗಾಗಳು ಅಸ್ಸಾಮೀಭಾಷೆಯ ಒಂದು ಬಗೆಯ ವಿಕೃತ ರೂಪವನ್ನು ಬಳಸುತ್ತಾರೆ. ಆದರೆ ಈಚಿನ ದಿನಗಳಲ್ಲಿ ಅವರಲ್ಲಿ ಹಲವರಿಗೆ ಇಂಗ್ಲಿಷ್ ಮತ್ತು ಹಿಂದಿ ಬರುತ್ತದೆ. ನಾಗಾರಾಜ್ಯದ ಸರ್ಕಾರ ಹಿಂದಿಯನ್ನು ಸಂಪರ್ಕಭಾಷೆಯನ್ನಾಗಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ: ಇಂಗ್ಲಿಷನ್ನೇ ಉಳಿಸಿಕೊಳ್ಳಬೇಕೆನ್ನುತ್ತದೆ.

ಬಡಗರು : ನೀಲಗಿರಿ ಪರ್ವತಗಳಲ್ಲಿ ವಾಸಿಸುವ ರೈತಜನರು. ಇವರಾಡುವ ಭಾಷೆ ಕನ್ನಡವನ್ನು ಹೋಲುತ್ತದೆ. ಮೈಸೂರು ಕಡೆಯಿಂದ ವಲಸೆಬಂದವರೆಂದು ಕೆಲವರ ಅಭಿಪ್ರಾಯ. ಆದರೆ ಅಂಗರಚನೆಯಲ್ಲಿ ತೋಡ ಮತ್ತು ಕೊತ ಜನರನ್ನು ಹೋಲುತ್ತಾರೆ. ಬೆಟ್ಟದ ಇಳಿಜಾರನ್ನು ಕಡಿದು ಮೆಟ್ಟಲುದಿಬ್ಬಗಳನ್ನಾಗಿ ಮಾಡಿ ಊಬುಗೋಧಿ, ಜವೆ, ಈರುಳ್ಳಿ ಮುಂತಾದುವನ್ನು ಬೆಳೆಯುತ್ತಾರೆ. ಕೃಷಿಕೆಲಸ ಹೆಚ್ಚಾಗಿ ಹೆಂಗಸರಿಗೆ ಸೇರಿದ್ದು. ಗಂಡಸರು ನೆಡುತೋಟಗಳಲ್ಲಿ ಕೂಲಿಗಳಾಗಿಯೊ ಕೈಗೆಲಸದವರಾಗಿಯೊ ದುಡಿಯುತ್ತಾರೆ. ಪಶುಪಾಲನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ನೆರೆಯ (ತೋಡರು ಮುಂತಾದವರು) ಜನರಿಗೆ ದನಗಳಿಗೆ ಬೇಕಾದ ಆಹಾರವನ್ನೊದಗಿಸಿದರೂ ತಾವೂ ದನಗಳನ್ನು ಸಾಕುತ್ತಾರೆ. ಹೈನು ಶೇಖರಿಸಿ ಮಾರುತ್ತಾರೆ. ಹೈನುವೃತ್ತಿ ಬ್ರಹ್ಮಚಾರಿಗಳಾದ ಪುರೋಹಿತವರ್ಗದವರ ಮೇಲ್ವಿಚಾರಣೆಯಲ್ಲಿದೆ. ಬಡಗರು ನೆರೆಯ ಕೊತಜನರೊಂದಿಗೆ ವಿನಿಮಯ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಕೃಷಿ ಉತ್ಪನ್ನಗಳನ್ನು ಅವರಿಗೆ ಒದಗಿಸಿ ಅವುಗಳಿಗೆ ಬದಲಾಗಿ ವ್ಯವಸಾಯೋಪಕರಣಗಳು, ಮೃತ್ಪಾತ್ರೆಗಳು ಮುಂತಾದವನ್ನು ಪಡೆಯುತ್ತಾರೆ. ಶವಸಂಸ್ಕಾರದ ಸಂದರ್ಭಗಳಲ್ಲಿ ಬಡಗರು ಕೊತಜನರಿಗೆ ಧಾನ್ಯ ಮತ್ತು ಎಮ್ಮೆಯನ್ನೊದಗಿಸುತ್ತಾರೆ. ಕೊತ ಕುಲದವರು ಮದುವೆಗಳಲ್ಲಿ ಮತ್ತು ಉತ್ತರಕ್ರಿಯೆಗಳಲ್ಲಿ ಬಡಗರಿಗೆ ವಾದ್ಯಗಳನ್ನೊದಗಿಸುತ್ತಾರೆ. ನೆರೆಯ ಇನ್ನೊಂದು ಪಂಗಡದವರಾದ ಕುರುಬರ ಮಂತ್ರವಾದಿ (ವಿಚ್ ಡಾಕ್ಟರ್) ಬಡಗರಿಗೂ ವೈದ್ಯ. ಅವರ ಈ ಸೇವೆಗಾಗಿ ಬಡಗರು ವಾರ್ಷಿಕ ತೆರಿಗೆ ಕೊಡುತ್ತಾರೆ. ಬಡಗರ ಗ್ರಾಮ ಒಂದೇ ಹುಲ್ಲುಚಾವಣಿ ಇರುವ ಅನೇಕ ಮನೆಗಳ ಗುಂಪು. ಗ್ರಾಮದ ಮುಖಂಡ ಅವರಲ್ಲೆಲ್ಲ ಅತ್ಯಂತ ಅನುಕೂಲಸ್ಥನಾದವನು. ಗ್ರಾಮದ ಆಡಳಿತ ಆತ ಮತ್ತು ಇತರ ಹಿರಿಯರು ಸೇರಿದ ಒಂದು ಸಭೆಯ ಕೈಲಿದೆ. ಯಾರಾದರೂ ಸತ್ತರೆ ಅದೊಂದು ವಿದ್ಯುಕ್ತ ಉತ್ಸವ ಸಂದರ್ಭ. ಸಂಗೀತ ನೃತ್ಯಾದಿಗಳು ಜರುಗಬೇಕು. ಮೃತನ ಆತ್ಮಕ್ಕಂಟಿದ ಪಾಪವೆಲ್ಲ ಹೊರಬರುತ್ತೆಂಬ ನಂಬಿಕೆಯಿಂದ ಒಂದು ಕರುವನ್ನು ಶವದಸುತ್ತ ಮೂರು ಸಲ ಸುತ್ತಿಸುತ್ತಾರೆ. ಅನಂತರ ಆ ಕರು ಪಾವಿತ್ರ್ಯ ಪಡೆಯುತ್ತದೆ. ಆಮೇಲೆ ಅದನ್ನು ಸ್ವೇಚ್ಛೆಯಾಗಿ ತಿರುಗಾಡಲು ಬಿಟ್ಟುಬಿಡುತ್ತಾರೆ; ಅದನ್ನು ಯಾರು ಮಾರಕೂಡದು, ಕೊಲ್ಲಕೂಡದು. ಬಡಗರು ಎಲ್ಲ ಪಿತೃಗಳ ಸ್ಮರಣಾರ್ಥವಾಗಿ ವಿಶೇಷ ಕರ್ಮಗಳನ್ನೂ ಆಗಾಗ್ಯೆ ನಡೆಸುತ್ತಾರೆ.

ಬೊಂಡೊ : ಸುಮಾರು ಐದು ಸಾವಿರ ಜನರಿರುವ ಅತ್ಯಂತ ಪ್ರಾಚೀನ ಆದಿವಾಸಿ ಜನಾಂಗ. ಒರಿಸ್ಸದ ಕೋರಾಪುಟ್ ಜಿಲ್ಲೆಯಲ್ಲಿ ಮಚ್‍ಕುಂದ್ ನದಿಯ ವಾಯುವ್ಯಕ್ಕಿರುವ ಉನ್ನತ ಪರ್ವತಗಳಲ್ಲಿ ವಾಸಿಸುತ್ತಾರೆ. ತಮ್ಮನ್ನು ರೆಮೊಗಳೆಂದು ಕರೆದುಕೊಳ್ಳುತ್ತಾರೆ. ಅವರಿಗೆ ತಮ್ಮದೇ ಆದ ಒಂದು ಉಪಭಾಷೆ. ಅವರ ನೆರೆಹೊರೆಯ ಗಡಬ, ಪರೆಂಗ್ ಮತ್ತು ದಿದಾಯಿ ಜನರು ಆಡುವ ಭಾಷೆಗೆ ಅದು ಹತ್ತಿರದ ಸಂಬಂಧಿಯಾಗಿದೆ. ಪ್ರತ್ಯೇಕತೆಯಿಂದಾಗಿ ಬೊಂಡೊ ಜನ ತಮ್ಮ ಮೂಲಸಂಸ್ಕøತಿಯ ಬಹುಭಾಗವನ್ನು ಉಳಿಸಿಕೊಂಡಿದ್ದಾರೆ. ಅವರು ಸವೋರರಂತೆ ಉತ್ತಮ ಬೇಸಾಯಗಾರರು. ಬೆಟ್ಟದ ಇಳಿಕಲುಗಳನ್ನು ಮಟ್ಟಮಾಡಲು ಎಚ್ಚರಿಕೆಯಿಂದ ಬದುಕಟ್ಟಲು ಅಣೆಕಟ್ಟುಗಳನ್ನು ಕಟ್ಟಿ ತಮ್ಮ ಮಟ್ಟವಾದ ಬತ್ತದ ಗದ್ದೆಗಳಿಗೆ ನೀರು ಹಾಯಿಸಲು ತುಂಬ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಹಣ್ಣಿನ ತೋಟಗಳನ್ನು ಬೆಳೆಸಿ, ಹೆಚ್ಚಾದ ಹಣ್ಣುಗಳನ್ನು ಮಾರುತ್ತಾರೆ. ಬೆಟ್ಟದ ಇಳಿಕಲುಗಳಲ್ಲಿ ಸರದಿ ಬೇಸಾಯ ಮಾಡುವುದೂ ಉಂಟು. ಬೊಂಡೊ ಬೆಟ್ಟಗಳು ಇನ್ನೂ ಜನವಿದೂರವಾಗಿರುವುದರಿಂದ ಹಣ ಸಾಲಕೊಡುವವರ ಮತ್ತು ಇತರ ಸುಲಿಗೆಗಾರರ ದೃಷ್ಟಿಯಿಂದ ಅವರು ಪಾರಾಗಿದ್ದಾರೆ.

ಬೊಂಡೊ ಸಂಸ್ಕøತಿಯ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಗಂಡಸರು ಉದ್ದವಾಗಿ ಕೂದಲು ಬೆಳೆಸಿಕೊಳ್ಳುತ್ತಾರೆ. ಹೆಂಗಸರು ತಲೆಯನ್ನು ನುಣ್ಣಗೆ ಬೋಳಿಸಿಕೊಳ್ಳುತ್ತಾರೆ. ಹೆಂಗಸರು ತಮ್ಮ ಎದೆಗೆ ಕೆಲವೇ ಅಂಗುಲ ಅಗಲವಿರುವ ಕಿರಿದಾದ ಒಂದು ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಕುತ್ತಿಗೆಯಿಂದ ಹೊಕ್ಕುಳವರೆಗೆ ಮರೆಮಾಡುವ ಒಂದೇ ಒಂದು ಸಾಧನವೆಂದರೆ ಮಣಿಗಳು ಮತ್ತು ಹಿತ್ತಾಳೆ ಉಂಗುರಗಳನ್ನು ಪೋಣಿಸಿದ ಅಸಂಖ್ಯಾತ ಮಾಲೆಗಳು. ಹೆಂಗಸರು ದೃಢಸ್ವಭಾವವುಳ್ಳವರು. ಮುಂದೆ ವಿವಾಹ ಬಾಂಧವ್ಯಕ್ಕೆ ಎಡೆಗೊಡುವ ಸ್ತ್ರೀ ಪುರುಷರ ಭೇಟಿಗಳನ್ನು ತಾವೇ ಏರ್ಪಡಿಸುತ್ತಾರೆ. ತರುಣ ತರುಣಿಯರಿಗೆ ಬೇರೆ ಬೇರೆ ನಿದ್ರಾಶಾಲೆಗಳಿದ್ದರೂ ಅವುಗಳ ಒಂದೇ ಒಂದು ಕೆಲಸ ಭಾವೀ ಸತಿಪತಿಗಳನ್ನು ಪರಸ್ಪರ ಸಂಧಿಸುವಂತೆ ಮಾಡುವುದು. ಬೊಂಡೊ ಸಂಸ್ಕøತಿಯಾದರೋ ವಿವಾಹಪೂರ್ವ ಲೈಂಗಿಕ ಸಂಬಂಧಗಳಿಗೆ ಅನುಮತಿ ಕೊಡುವುದಿಲ್ಲ. ಹುಡುಗ ಹುಡುಗಿಯರು ತಮ್ಮ ತಮ್ಮ ಜೊತೆಗಾರರನ್ನು ಆರಿಸಿಕೊಳ್ಳಬೇಕಾಗುತ್ತದೆ. ಎಲ್ವಿನ್‍ನ ಪ್ರಕಾರ ಬೊಂಡೊ ಜನ ನ್ಯೂನ ಲೈಂಗಿಕ ಪ್ರವೃತ್ತಿಯವರು. ಅವರ ಪ್ರಣಯದಲ್ಲಿ ನಯನಾಜೂಕುಗಳು ಇಲ್ಲ.

ಒಬ್ಬ ತರುಣ ತನ್ನ ಜೊತೆಗಾತಿಯನ್ನು ಆರಿಸಿಕೊಂಡಾದ ಮೇಲೆ ಮದುವೆಗೆ ತಂದೆತಾಯಿಗಳ ಸಾಂಪ್ರದಾಯಿಕ ಅನುಮತಿಯನ್ನು ಪಡೆಯಬೇಕು. ಅವರು ಶ್ರೀಮಂತರಾಗಿದ್ದರೆ ಮದುವೆ ಬಹಳ ವಿಸ್ತಾರವಾಗಿ ಸೆಬಂಗ್ ಎನಿಸಿಕೊಳ್ಳುತ್ತದೆ. ಅದರಲ್ಲಿ ಅನೇಕ ಸಲದ ಸಂದರ್ಶನ, ಕನ್ಯಾಶುಲ್ಕ, ಉಡುಗೊರೆಗಳ ವಿನಿಮಯ, ಕೋಣದ ಬಲಿ ಇವೆಲ್ಲ ಇರುತ್ತವೆ. ಕಡಿಮೆವೆಚ್ಚದ ಇನ್ನೂ ಎರಡು ಬಗೆಯ ಮದುವೆಗಳಿವೆಯಾದರೂ ಹೆಚ್ಚಿನ ಸಂಖ್ಯೆಯವು ಅಪಹಾರ ಸ್ವರೂಪದವು (ಗುಬಾಯ್ ಗೋಡೊ - ಓಡಿ ಹೋಗುವುದು). ವಿಧವಾ ವಿವಾಹಕ್ಕೆ ಅನುಮತಿ ಇದೆ. ಆದರೆ ಅನೇಕ ಸಲ ಅದು ಸತ್ತ ಗಂಡನ ಅಣ್ಣನೊಂದಿಗೆ ನಡೆಯುತ್ತದೆ.

ಧೈರ್ಯ, ಸ್ವಾತಂತ್ರ್ಯ, ಸಮಾನತೆ, ಗುಂಪಿನ ಬಗೆಗೆ ನಿಷ್ಠೆ, ಮೇಲೆ ಬೀಳುವಿಕೆ, ಕ್ರೌರ್ಯ, ಆಗಾಗ ಸೋಮಾರಿತನ ಮತ್ತು ರಗಳೆಯಿಂದ ಕೂಡಿದ ಸಮಾರಂಭಗಳು - ಇವುಗಳ ಒಂದು ವಿಚಿತ್ರ ಮಿಶ್ರಣ ಬೊಂಡೊ ಜನರ ಲಕ್ಷಣ. ಈ ಬುಡಕಟ್ಟಿನವರಲ್ಲಿ ಕಂಡುಬರುವ ಕೊಲೆ ಮತ್ತು ಕ್ರೌರ್ಯಗಳು ಮನಶ್ಶಾಸ್ತ್ರದ ಒಂದು ಅಚ್ಚರಿಯಾಗಿದೆ.

ಬ್ರಾಹೂಈ : ಬಲೂಚಿಸ್ತಾನದ ಪೂರ್ವ ಮತ್ತು ಪಶ್ಚಿಮ ಬಲೂಚಿ ಪಂಗಡಗಳ ನಡುವೆ ಇರುವ ಜನರು. ಅಂಗರಚನೆಯಲ್ಲಿ ಬಲೂಚಿಗಳನ್ನು ಬಹುಮಟ್ಟಿಗೆ ಹೋಲುತ್ತಾರೆ. ಸಂಸ್ಕøತಿಯಲ್ಲೂ ಅಷ್ಟೇ. ಆದರೆ ಅವರ ವೈಶಿಷ್ಟ್ಯ, ಅವರ ಭಾಷೆ ಮಾತ್ರ; ದಕ್ಷಿಣ ಭಾರತಕ್ಕೆ ಸೀಮಿತವಾಗಿರುವ ದ್ರಾವಿಡ ಭಾಷೆಯನ್ನು ಹೋಲುತ್ತದೆ. ತಾವೊಂದು ಸಂಕೀರ್ಣ ಜನಾಂಗವೆಂದು ಅವರೇ ಹೇಳಿಕೊಳ್ಳುತ್ತಾರೆ. ಸ್ಥಳೀಯ ಗುಂಪುಗಳೆರಡು. ಭಾರತದ ಜಾಟರಿಗೆ ಸಂಬಂಧಿಸಿದ ಗುಂಪುಗಳು ನಾಲ್ಕು. ಇರಾನಿನ ಜನರಿಗೆ ಸಂಬಂಧಿಸಿದವು ಎರಡು. ಆಫ್‍ಘನರ ಗುಂಪಿಗೆ ಸೇರಿದವು ಎರಡು. ಈ ಪಂಗಡಗಳೆಲ್ಲ ಹದಿನೆಂಟನೆಯ ಶತಮಾನದಲ್ಲಿ ಒಂದುಗೂಡಿ ಒಬ್ಬ ಖಾನನ ಆಳ್ವಿಕೆಗೆ ಒಳಪಟ್ಟುವು. ಇತ್ತೀಚೆಗೆ ಅವರೆಲ್ಲ ಹೆಚ್ಚಾಗಿ ಬ್ರಾಹೂಈ ಭಾಷೆಯನ್ನೇ ಬಳಸತೊಡಗಿದ್ದಾರೆ.

ಮೈಸೂರಿನ ಸ್ಥಳಜನ್ಯ ಆದಿವಾಸಿಗಳು : ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಈ ಆದಿವಾಸಿಕುಲದವರಿಗೆ ಬೇರೆ ಬೇರೆ ಹೆಸರುಗಳುಂಟು. ಮೈಸೂರು ಜಿಲ್ಲೆಯಲ್ಲಿ ಅಂಥ ಮೂರು ಕುಲಗಳಿವೆ. ಅವರಾರೂ ಅಸ್ಪøಶ್ಯರಲ್ಲ. ಪ್ರತಿಯೊಂದಕ್ಕೂ ಅವರದೇ ಆದ ಸಂಪ್ರದಾಯಗಳೂ ರೂಢಿಗಳೂ ಇವೆ. ಅವರಾರೆಂದರೆ 1. ಸೋಲಿಗರು; 2. ಬೆಟ್ಟದ ಕುರುಬರು ಮತ್ತು 3. ಜೇನು ಕುರುಬರು. ಕೊನೆಯೆರಡು ಜಾತಿಗಳವರು ನೆಲೆಸಿರುವ ಕ್ಷೇತ್ರಗಳ ಎಲ್ಲೆ ಅಷ್ಟು ಪ್ರತ್ಯೇಕವಾಗಿಲ್ಲ; ಒಂದೇ ಕ್ಷೇತ್ರದಲ್ಲಿ ಸಮ್ಮಿಳಿತವಾಗಿ ನೆಲೆಸಿರುವ ಎರಡು ಕುಲಗಳಂತೆ ಇವರು ಜೀವಿಸುತ್ತಿದ್ದಾರೆ. ಕೊಡಗಿನ ಉತ್ತರ ಭಾಗದಿಂದ ಹೊರಟು ಕುರುಬರ ಈ ಎರಡು ಕುಲಗಳೂ ವಾಸಮಾಡುತ್ತಿರುವ ಪ್ರದೇಶ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡದೇವನಕೋಟೆ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳವರೆಗೂ ಹರಡಿದೆ. ವೈನಾಡು ಮತ್ತು ನೀಲಗಿರಿ ಜಿಲ್ಲೆಗಳಲ್ಲೂ ಇವರು ವಲಸೆ ಬಂದಿರುವ ಕುರುಹು ಕಾಣಿಸಿಕೊಳ್ಳುತ್ತದೆ. ಇವರ ಭಾಷೆ ಮತ್ತು ಜೀವನರೀತಿ ಸ್ಥಳಗಳ ಸನ್ನಿವೇಶಕ್ಕೆ ತಕ್ಕಂತೆ ಭಿನ್ನವಾಗಿದ್ದರೂ ಇವರು ಸ್ವತಂತ್ರವಾದ ಬೇರೆ ಬೇರೆ ಕುಲಕ್ಕೆ ಸೇರಿದ ಮೂಲಪುರುಷರಿಂದ ಜನಿಸಿದವರು.

ಸೋಲಿಗರು ನೆಲೆಸಿರುವ ಕ್ಷೇತ್ರ ಅಷ್ಟು ಬೇರೆ ಬೇರೆಯಾಗಿಲ್ಲ. ಇವರು ಚಾಮರಾಜನಗರ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಕಾಡುಗಳಲ್ಲಿ ನೆಲೆಸಿದ್ದಾರೆ. ಇವರ ಹರವು ಕೊಳ್ಳೆಗಾಲ ಮತ್ತು ಕೊಯಿಮತ್ತೂರಿನ ಪೂರ್ವ ಘಟ್ಟದಿಂದೀಚಿನ ತಾಲ್ಲೂಕುಗಳವರೆಗೂ ವ್ಯಾಪಿಸಿದೆ. ಸೋಲಿಗರಲ್ಲಿ ಸ್ವಕುಲದಲ್ಲೇ ಮದುವೆ ಮಾಡಿಕೊಳ್ಳುವ ಉರಳಿ, ಮಲೆ, ಕಾಡು, ಉರುಬತ್ತಿ ಸೋಲಿಗ ಎಂಬ ನಾಲ್ಕು ಜಾತಿಗಳಿವೆ.

ಸ್ವಭಾವತಃ ಈ ಕುಲಗಳ ಜನ ಅಡವಿಗಳಲ್ಲಿ ಬಾಳಲು ಇಷ್ಟಪಡುತ್ತಾರೆ. ವನಪರಿಸರಕ್ಕೆ ಅವರ ಜೀವನ ಹೊಂದಿಕೊಂಡಿದೆ. ಹಳ್ಳಿಗಳಿಂದಲೂ ಪಟ್ಟಣಗಳಿಂದಲೂ ಅವರು ದೂರವಿರಲು ಬಯಸುತ್ತಾರೆ; ಗಂಡಸರಿಗಿಂತ ಹೆಂಗಸರಲ್ಲಿ ಈ ಬಯಕೆ ಹೆಚ್ಚು. ಆದರೆ ಇತ್ತೀಚೆಗೆ ಈ ಕುಲಗಳ ಜನರು ನಾಗರಿಕರ ಸಮೀಪದಲ್ಲಿ ಸ್ಥಿರವಾಗಿ ನೆಲೆಸಿರುವುದು ಕಂಡುಬಂದಿದೆ. ಇವರ ಆಚಾರಗಳಲ್ಲೂ ಬದಲಾವಣೆಗಳು ಕಾಣಹತ್ತಿವೆ.

ಸ್ಥಳಪರಿಸ್ಥಿತಿಗನುಸಾರವಾಗಿ ಈ ಜನ ಅಡವಿಯ ಬಾಳಿಗೆ ಹೊಂದಿಕೊಂಡಿದ್ದಾರೆ. ತಮ್ಮ ತಲೆಗೂದಲನ್ನು ಹೆಣೆದುಕೊಳ್ಳುವುದು, ಉಗುರುಗಳನ್ನು ಪರಿಷ್ಕರಿಸಿಕೊಳ್ಳುವುದು, ಸ್ನಾನ ಮಾಡುವುದು ಮುಂತಾದವುಗಳಿಗೆ ಇವರು ವಿಶೇಷ ಗಮನ ಕೊಡುವುದಿಲ್ಲ. ಕಾಡಿನಲ್ಲಿ ಅಡ್ಡಿತಡೆಗಳಿಲ್ಲದೆ ಸರಾಗವಾಗಿ ಸಂಚರಿಸಲು ಇವರ ಅರೆಬೆತ್ತಲೆತನ ಅನುಕೂಲವಾಗಿದೆ. ವೇಗವಾಗಿ ಸಂಚರಿಸುವುದರಲ್ಲಿ ಹೆಣ್ಣೂ ಗಂಡೂ ಸಮಾನ ಸ್ಪರ್ಧಿಗಳಾಗಿದ್ದಾರೆ. ನಾಗರಿಕನಾಗಲಿ ದುಷ್ಟಮೃಗವಾಗಲಿ ಕಣ್ಣಿಗೆ ಬಿದ್ದಾಗ ಈ ಜನ ತಮಗೆ ಸಹಜವಾದ ನಾಚಿಕೆಯಿಂದಲೋ ಅಥವಾ ಅಂಜಿಕೆಯಿಂದಲೋ ಮಿಂಚಿನಂತೆ ಮರೆಯಾಗುತ್ತಾರೆ. ಗಂಡಿನ ಹೆಜ್ಜೆ ಹಿಡಿದು ಹೆಂಗಸು ಮಾಯವಾಗುತ್ತಾಳೆ. ಆದಿವಾಸಿಗಳು ತಪ್ಪದೆ ಗುಡಿಸಲುಗಳಲ್ಲಿ ವಾಸಮಾಡುತ್ತಾರೆ. ಇಂಥ ಗುಡಿಸಲುಗಳ ಸಮೂಹಕ್ಕೆ ಹಡಿಗಳೆಂದು ಹೆಸರು. ಹಡಿಯಲ್ಲಿ ಹಟ್ಟಿಗಳು ಹೆಚ್ಚಾಗಿರುವುದಿಲ್ಲ. ಸುತ್ತಲಿನ ಕಾಡುಗಳಲ್ಲಿ ತಮಗೆ ಆಹಾರವಸ್ತುಗಳು ಕೊರೆಯಾಗದಿರುವಂತೆ ನೋಡಿಕೊಳ್ಳುವ ಮತ್ತು ಇತರ ಕಾರಣಗಳ ಸಲುವಾಗಿ ಇವರು ಅಧಿಕ ಸಂಖ್ಯೆಯಾಗಿ ಒಟ್ಟಿಗೆ ಕಲೆತಿರಲು ಬಯಸುವುದಿಲ್ಲ. ಹಟ್ಟಿಗಳು ತುಂಬ ಸರಳವಾಗಿವೆ. ಇವನ್ನು ಬೊಂಬು ಮತ್ತು ಎಲೆಗಳಿಂದ ಕಟ್ಟುತ್ತಾರೆ. ಸಗಣಿ ಮತ್ತು ಮಣ್ಣುಗಳಿಂದ ಸಾರಿಸಿ ಹಟ್ಟಿಗಳನ್ನು ಚೊಕ್ಕಟವಾಗಿಡುತ್ತಾರೆ. ತಮ್ಮ ಹಡಿಗಳ ಸುತ್ತಣ ಜಾಗವನ್ನು ಬಹಳ ನಿರ್ಮಲವಾಗಿಡುತ್ತಾರೆ. ಸ್ಥಳದಿಂದ ಸ್ಥಳಕ್ಕೆ ಹರಡಿಗಳನ್ನು ಬದಲಾಯಿಸುವುದು ಈ ಜನಕ್ಕೆ ಸಾಮಾನ್ಯವಾದ ರೂಢಿ. ಈ ಹಟ್ಟಿಗಳನ್ನು ಬಿಟ್ಟರೆ ಅವರಿಗೆ ಮತ್ತೇನೂ ಆಸ್ತಿ ಇಲ್ಲವೆಂದೇ ಹೇಳಬಹುದು. ಅನ್ನ ನೀರು ದೊರೆಯುವ ಸ್ಥಳಗಳನ್ನಾರಸಿಯೋ ಕೆಲವು ವೇಳೆ ಸಾಂಕ್ರಾಮಿಕ ರೋಗಗಳ ಹಬ್ಬುಗೆಗೆ ಹೆದರಿಯೋ ಸಾಮಾನ್ಯವಾಗಿ ಇವರು ತಮ್ಮ ಹಡಿಗಳನ್ನು ಬೇರೆಡೆಗೆ ಎತ್ತುತ್ತಾರೆ. ಪದೇಪದೇ ಹೀಗೆ ಬದಲಾಯಿಸುವುದಕ್ಕೆ ಅಡ್ಡತಡೆಗಳಿಲ್ಲದೆ ಇಲ್ಲ. ಪ್ರತಿಯೊಂದು ಕುಲಕ್ಕೂ ಒಂದು ಕ್ಷೇತ್ರಪರಿಮಿತಿಯುಂಟು. ಅದಕ್ಕೆ ಜಮ್ಮ ಎಂದು ಹೆಸರು. ತಮ್ಮ ವೈಯಕ್ತಿಕ ಜಮ್ಮವನ್ನು ಅವರು ಅತಿಕ್ರಮಿಸುವುದಿಲ್ಲ. ಪ್ರತಿಯೊಂದು ಪಂಗಡಕ್ಕೂ ಮೊದಲ ಎಂಬ ಮುಂದಾಳಿದ್ದಾನೆ. ಆತ ದೇವ ಬಳಗವೆಂದು ಆ ಜನ ನಂಬುತ್ತಾರೆ. ತಮ್ಮ ಸಾಮಾಜಿಕ ರೀತಿನೀತಿಗಳಲ್ಲಿ ತಪ್ಪದೆ ಈತ ಹೇಳಿದಂತೆ ಕೇಳುತ್ತಾರೆ. ಹಡಿಯಲ್ಲಿ ಬಿದ್ದಿರುವ ಒಂದು ಹೆಣವನ್ನು ಕೂಡ ಈತನ ಸಮ್ಮತಿಯಿಲ್ಲವೆ ಎತ್ತಿ ಹೂಳಲಾಗುವುದಿಲ್ಲ.

ಆದಿವಾಸಿಗಳಿಗೆ ಭೂತಗಳಲ್ಲಿ ನಂಬಿಕೆ ಹೆಚ್ಚು. ಅವರ ಪೂಜಾವಿಧಾನ ಹಿಂದೂಗಳಂತೆಯೇ. ಕುಲದೇವ ಮತ್ತು ದೇವತೆಯನ್ನು ಪೂಜೆ ಮಾಡಲೂ ಜಾತ್ರೆಗಳಿಗೆ ಹೋಗಲೂ ಕುಟುಂಬದೊಡನೆ ಮೈಲಿಗಟ್ಟಲೆ ಪ್ರಯಾಣಮಾಡುತ್ತಾರೆ. ಸಂತೋಷವಾಗಿ ದೀರ್ಘಕಾಲ ಉಳಿಯಬೇಕೆಂಬ ಅಪೇಕ್ಷೆ ಅವರಿಗಿಲ್ಲ; ಆದರೂ ಅದು ಸತ್ವವುಳ್ಳದ್ದು. ಇಂಥ ಸಂಯೋಗಗಳಲ್ಲಿ ಅವರ ಕುಟುಂಬವೆಲ್ಲ ಏಕೀಭವಿಸಿ ಸಮಾನವಾಗಿ ಪಾಲುಗೊಳ್ಳುತ್ತಾರೆ. ಗಂಡಸರು ತಮ್ಮ ಹೆಂಗಸರು ಶೃಂಗಾರವಾಗಿರಬೇಕೆಂದು ಬಯಸುತ್ತಾರೆ. ಹೆಂಗಸರು ನವೀನ ವಸ್ತುಗಳಿಗೆ ಸುಲಭವಾಗಿ ಮನಸೋಲುತ್ತಾರೆ. ಮಗ ತಂದೆಯನ್ನೂ, ಹೆಂಡತಿ ಗಂಡನನ್ನೂ ಅನುಸರಿಸಿ ಕಾಡಿನಲ್ಲಿ ಸಂಚರಿಸುತ್ತ ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆ. ನೋಡಿ ಅನುಕರಿಸುವುದರ ಮೂಲಕ ಇವರ ಕಲಿವು ಜರುಗುತ್ತದೆಯೇ ಹೊರತು ಇನ್ನೊಬ್ಬರ ಉಪದೇಶದ ಮೂಲಕ ಅಲ್ಲ. ಈ ವಿಷಯದಲ್ಲಿ ಇವರು ಪ್ರಾಣಿಗಳನ್ನು ಹೋಲುತ್ತಾರೆ. ಒಬ್ಬ ತಂದೆ ತನ್ನ ಮಗನಿಗೆ ವಿದ್ಯೆ ಕಲಿಸುವುದನ್ನಾಗಲಿ ಅಥವಾ ತಾಯಿ ಮಗಳಿಗೆ ಹೇಳಿಕೊಡುವುದನ್ನಾಗಲಿ ಕಾಣುವುದು ಅಪೂರ್ವ. ಇವರ ಪ್ರಪಂಚಜ್ಞಾನ ತುಂಬ ಮಿತವಾದುದು. ಬಯಕೆಗಳು ಅತ್ಯಲ್ಪ. ಮಿದುಳು ಯಂತ್ರದಂತೆ ಕೆಲಸ ಮಾಡುತ್ತದೆ. ಹೊಸಭಾವನೆಗಳನ್ನು ಅದರೊಳಕ್ಕೆ ತೂರಿಸಿ ನೆಲೆಗೊಳ್ಳುವಂತೆ ಮಾಡಲು ತುಂಬ ಕಾಲ ಹಿಡಿಯುತ್ತದೆ. ಹಾಗೆಯೇ ಬೇರೂರಿರುವ ಭಾವನೆಗಳನ್ನು ಹೊರಗಟ್ಟುವುದೂ ಕಷ್ಟ. ತರ್ಕಬದ್ಧವಾಗಿ ಆಲೋಚಿಸುವುದು ಅವನ ಚಿಂತಾರಹಿತ ಮನಸ್ಸಿನಿಂದ ದೂರವಾಗಿದೆ. ಸಂಪ್ರದಾಯ ಮತ್ತು ಅಭ್ಯಾಸ ಇವುಗಳು ಅವರನ್ನು ನಡೆಸುತ್ತವೆಯೇ ಹೊರತು ಹೊಸ ಕಲಿಕೆಯಲ್ಲ. ಹೆಂಗಸು ಗಂಡಸಿಗಿಂತ ಹೊಸ ಪ್ರಭಾವಗಳಿಗೆ ಹೆಚ್ಚಾಗಿ ಮನಗೊಡುತ್ತಾಳೆ.

ತಮ್ಮ ಪರಿಸರದ ಪರಿಸ್ಥಿತಿಗೆ ತಕ್ಕಂತೆ ಈ ಆದಿವಾಸಿಗಳ ಆಹಾರ ತುಂಬ ಸರಳವಾಗಿದೆ. ಇವರು ಸಿಕ್ಕಿದ್ದನ್ನು ತಿನ್ನುತ್ತಾರೆ. ಮಾಂಸಾಹಾರದಲ್ಲಿ ಪ್ರೀತಿ ಹೆಚ್ಚು. ಧಾನ್ಯಗಳು, ಗೆಡ್ಡೆಗೆಣಸುಗಳು, ಜೇನು, ಹಣ್ಣು ಇತ್ಯಾದಿಗಳನ್ನು ತಿನ್ನುತ್ತಾರೆ. ಸಿಕ್ಕಿದಾಗ ಹೊಟ್ಟೆ ಬಿರಿಯುವಷ್ಟು ಉಣ್ಣುತ್ತಾರೆ. ಕೆಲವು ಸಮಯಗಳಲ್ಲಿ ತಮ್ಮ ಬಂಧುಬಳಗವನ್ನೆಲ್ಲ ಕರೆಸಿಕೊಂಡು ತಾವು ಕಲೆಹಾಕಿದ್ದನ್ನೆಲ್ಲ ಒಂದು ಕಾಳೂ ಉಳಿಯದಂತೆ ತಿಂದು ಮೋಜುಮಾಡುವುದು ಉಂಟು. ಒಂದು ರೀತಿಯಲ್ಲಿ ಇವರ ಜೀವನ ಪ್ರಾಣಿಜೀವನದಂತೆಯೇ ಇದೆ. ಕೂಡಿಹಾಕುವುದರಲ್ಲಿ ಇವರಿಗೆ ವಿಶ್ವಾಸವಿಲ್ಲ. ಅಂಥ ಆಲೋಚನೆ ಮನಸ್ಸಿಗೇ ಸುಳಿಯದು. ಈ ಜನಕ್ಕೆ ಖಾರ ತುಂಬಾ ಇಷ್ಟ. ಬೇರು ಕಾಂಡಗಳನ್ನು, ಗೆಡ್ಡೆಗಳನ್ನು ಕೆಲವು ವೇಳೆ ಹಸಿಯಾಗಿಯೂ ಕೆಲವು ವೇಳೆ ಸುಟ್ಟೂ ತಿನ್ನುತ್ತಾರೆ.

ಇತ್ತೀಚಿನವರೆಗೂ ಸರದಿ ವ್ಯವಸಾಯವೇ ತಪ್ಪದ ರೂಢಿಯಾಗಿತ್ತು. ನೆಲವನ್ನು ಕೋಲಿನಿಂದಲೋ ಒರಟಾದ ಉಪಕರಣಗಳಿಂದಲೋ ಕೆದಕಿ ಬೀಜ ಬಿತ್ತುತ್ತಾರೆ. ಬತ್ತ, ರಾಗಿ, ಜೋಳ ಇವು ಮುಖ್ಯ ಧಾನ್ಯಗಳು. ಜೊತೆಗೆ ಮೆಣಸಿನಕಾಯಿ, ಸೋರೆ, ಸಾಸುವೆ, ಬಾಳೆ ಮುಂತಾದವನ್ನು ಬೆಳೆಯುತ್ತಾರೆ. ಬೆಳೆಗಳನ್ನು ಕಾಡುಮೃಗಗಳಿಂದ ಕಾಪಾಡಿಕೊಳ್ಳಲು ಹೊಲಗಳ ಸುತ್ತ ಹಟ್ಟಿಗಳನ್ನು ಹಾಕಿಕೊಳ್ಳುವುದಲ್ಲದೇ ಹಗಲಿರುಳು ಬೆಂಕಿ ಉರಿಸುತ್ತಾರೆ. ಇರುಳಿನಲ್ಲಿ ಬೆಂಕಿಯ ಸುತ್ತ ಕುಳಿತು ಮೈಕಾಸಿಕೊಳ್ಳುತ್ತಾರೆ. ಎಲ್ಲೆಂದರಲ್ಲಿ ಸಂಚರಿಸದಂತೆ ನಿರ್ಬಂಧಗಳನ್ನು ಹಾಕಿ ಕೆಲವು ನಿರ್ದಿಷ್ಟ ಕ್ಷೇತ್ರಗಳ ಮಿತಿಗೊಳಪಡಿಸಿರುವುದರ ಪರಿಣಾಮವಾಗಿ ಅವರ ರೂಢಿಗಳು ಬದಲಾಯಿಸುತ್ತ ಬಂದಿವೆ. ಕಾಡಿನ ಕೆಲಸಗಳಲ್ಲಿ ಅವರು ಪ್ರತಿ ವರ್ಷವೂ ವನಪಾಲಕರೊಡನೆ ಜಾಗದಿಂದ ಜಾಗಕ್ಕೆ ಸಂಚರಿಸುತ್ತಾರೆ. ಆ ಕ್ಷೇತ್ರದಲ್ಲಿ ಖಾಲಿ ಇದ್ದ ಕಡೆ ಬೇಸಾಯ ಮಾಡುತ್ತಾರೆ. ಈ ಹೊಸ ಪದ್ಧತಿ ಅವರಿಗೆ ರುಚಿಸದಿದ್ದರೂ ಅವರು ಅದರ ಉಪಯುಕ್ತತೆಯನ್ನು ಅರಿತುಕೊಂಡು ಅದಕ್ಕೆ ಒಗ್ಗಿಕೊಳ್ಳುವ ಸೂಚನೆಗಳು ಕಂಡುಬಂದಿವೆ. ಈ ಆದಿವಾಸಿಕುಲಗಳನ್ನು ದೇಶದ ಅನೇಕ ಭಾಗಗಳಲ್ಲಿ ನೆಲೆಗೊಳಿಸುವ ಕಾರ್ಯಕ್ರಮಕ್ಕೂ ಈ ಮನೋಧರ್ಮ ಅನ್ವಯಿಸುತ್ತದೆ.

ದೇಶದ ಈ ಭಾಗದ ಅರಣ್ಯ ಸಂರಕ್ಷಣೆ, ಪುರೋಭಿವೃದ್ಧಿಗಳ ಕೆಲಸಗಳು ಇವರ ಮೂಲಕವೇ ನಡೆಯುತ್ತಿದೆ. ಮರ ಕಡಿಯುವುದು, ದಿಮ್ಮಿ ಮಾಡುವುದು, ಗಿಡ ನೆಡುವುದು, ಕಳೆ ಕೀಳುವುದು, ಪಾಕು ಮಾಡುವುದು ಇತ್ಯಾದಿ ಒರಟು ಕೆಲಸಗಳಿಗೆಲ್ಲ ಇವರು ಎತ್ತಿದ ಕೈ. ಅಡವಿಯ ಅಂತರಾಳದಲ್ಲಿ ನಡೆಸಬೇಕಾದ ಅನೇಕ ಕೆಲಸಗಳಿಗೆ ಇವರು ತುಂಬಾ ಉಪಯುಕ್ತವಾಗಿದ್ದಾರೆ.

ಗಂಡಸರ ಉಡಿಗೆ ತೊಡಿಗೆ ಮತ್ತು ನಡೆವಳಿಕೆಗಳು ಎಂದಿನಂತೆಯೇ ಇವೆ. ವಸ್ತುಗಳು ದೊರೆತಂತೆ, ಹಣವಿದ್ದಂತೆ ಇವರ ಉಡುಪಿನ ರೀತಿಗಳೂ ಇರುತ್ತವೆ. ಸೋಲಿಗರ ಹೆಂಗಸರು ತಮ್ಮ ಸೀರೆಯನ್ನು ಕೊಡಗಿನವರಂತೆ ಸೆರಗನ್ನು ಬಲಹೆಗಲಿನ ಮೇಲೆ ಇಳಿಯ ಬಿಟ್ಟು ಎದೆಯ ಮೇಲು ಭಾಗದಲ್ಲಿ ಒಂದು ಗಂಟು ಹಾಕಿ ಉಡುತ್ತಾರೆ. ಆದರೆ ಬೆಟ್ಟಕುರುಬ ಹೆಣ್ಣುಗಳು ಸೀರೆಯನ್ನು ಪಂಚೆಯಂತೆ ಎದೆಮುಚ್ಚುವ ಹಾಗೆ ಸುತ್ತುತ್ತಾರೆ. ಬೆಟ್ಟದ ಕುರುಬರು ಹೆಂಗಸರು ಮಿಕ್ಕೆರಡು ಜಾತಿಗಳವರಂತೆ ಕುಪ್ಪುಸ ಹಾಕಿಕೊಳ್ಳುವುದಿಲ್ಲ. ಆದರೂ ಈ ಮೂರು ಕುಲಗಳಲ್ಲೂ ಹೆಂಗಸರೂ ಗಂಡಸರೂ ತಮ್ಮ ತಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಸಭ್ಯತೆಯನ್ನರಿತಿದ್ದಾರೆ. ಹೆಂಗಸರು ಒಡವೆಗಳನ್ನು ಧರಿಸಿ ಆಚರಿಸಿಕೊಳ್ಳುತ್ತಾರೆ. ಅನೇಕ ಸಲ ಗಂಡಸರಿಗೆ ಈ ವಿಚಾರದಲ್ಲಿ ಶ್ರದ್ಧೆಯಿರುವಂತೆ ತೋರುವುದಿಲ್ಲ. ತಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಶೃಂಗರಿಸಿಕೊಳ್ಳುವುದರಲ್ಲಿ ಹೆಂಗಸರಿಗೆ ಆಸಕ್ತಿಯುಂಟು. ಅನೇಕ ವೇಳೆ ಕಾಡಿನಲ್ಲಿ ದೊರೆಯುವ ಬಣ್ಣ ಬಣ್ಣದ ಹೂಗಳು ಇವರ ಮೈಮೇಲೆ ಮೆರೆಯುತ್ತವೆ. ತಲೆಗೆ ಎಣ್ಣೆ ಸವರಿ ಕೂದಲನ್ನು ಬಾಚಿಕೊಳ್ಳುವುದೂ ಇವರಿಗೆ ಸಾಮಾನ್ಯವಾಗಿದೆ. ಕೂದಲನ್ನು ಗಂಟು ಹಾಕುವ ಮಾದರಿ ಅವರವರ ಇಚ್ಛೆಯಂತಿರುತ್ತದೆ.

ವಿವಾಹ ಪದ್ಧತಿ ಸರಳವಾಗಿದ್ದರೂ ಕೌತುಕಾಸ್ಪದವಾಗಿದೆ. ಸೋದರಮಾವನ ಮಗಳನ್ನೋ ಇಲ್ಲ ನೆಂಟರಲ್ಲದವರ ಕನ್ಯೆಯನ್ನೊ ತಂದುಕೊಳ್ಳುವುದು ರೂಢಿ. ಒಬ್ಬ ಗಂಡನಿಗೆ ಹಲವು ಹೆಂಡಿರಿರುವುದುಂಟು. ಒಂದು ಹೆಣ್ಣಿಗೆ ಹಲವು ಗಂಡಂದಿರಿರುವುದು ಕಾಣಬರುವುದಿಲ್ಲ. ಎರಡು ಕುಟುಂಬದವರು ತಮ್ಮ ಹೆಣ್ಣುಗಳನ್ನು ಪರಸ್ಪರವಾಗಿ ಕೊಟ್ಟು ತರುವುದುಂಟು. ಅವರಲ್ಲಿ ಮೂರು ತರದ ಪದ್ಧತಿಗಳು ಕಂಡುಬರುತ್ತವೆ. ತಂದಿಟ್ಟುಕೊಳ್ಳುವುದು, ಎತ್ತಿಕೊಂಡು ಹೋಗುವುದು ಮತ್ತು ವ್ಯವಹಾರ ನಡೆಸಿ ಮದುವೆಯಾಗುವುದು. ದಂಡತೆತ್ತು ಅಥವಾ ಅಡಿಗೆ ಔತಣವಿತ್ತು ಕೆಟ್ಟ ನಡತೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕುಲದಿಂದ ಹೊರಕ್ಕೆ ತಳ್ಳುತ್ತಾರೆ. ಈ ಜನ ಇತರ ಜನದಂತೆ ತಮ್ಮ ಮದುವೆಯನ್ನು ವಿಜೃಂಭಣೆಯಿಂದ ನಡೆಸುವುದನ್ನು ಕಲಿತಿದ್ದಾರೆ.

ವಿಧವಾ ವಿವಾಹ ಅಪರೂಪವಲ್ಲ. ಗಂಡಹೆಂಡಿರಿಬ್ಬರಲ್ಲಿ ಒಬ್ಬರು ಅಸಮ್ಮತಿಸಿದರೂ ಸರಿ ವಿವಾಹ ವಿಚ್ಛೇದನಕ್ಕೆ ಆಸ್ಪದವುಂಟು. ಕೆಲ ಸಮಯಗಳಲ್ಲಿ ವಿಚ್ಛೇದನಕ್ಕೆ ಅಪೇಕ್ಷೆಪಟ್ಟವರು ಮದುವೆಯ ಖರ್ಚನ್ನು ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ಕೈಮಕ್ಕಳು ತಾಯಿಯ ಹತ್ತಿರವಿರುತ್ತವೆ. ಬೆಳೆದ ಮಕ್ಕಳ ಮೇಲೆ ತಂದೆಗೆ ಸ್ವಾಮ್ಯವುಂಟು. ಮಗ ಮದುವೆಯಾದ ಮೇಲೆ ಬೇರೆ ಮನೆಯಲ್ಲಿ ವಾಸಮಾಡುವುದು ರೂಢಿಯಲ್ಲಿದೆ. ಮುಟ್ಟಾದಾಗ ಹೆಣ್ಣು ಐದು ದಿನ ಹೊರಗಿರುವುದು ಪದ್ಧತಿ.

ಬೆಟ್ಟಕುರುಬರ ಭಾಷೆ, ಮಲಯಾಳಿ, ಕನ್ನಡ, ಕೊಡವ ಮತ್ತು ತಮಿಳಿನ ಬೆರಕೆ. ಕಾಡುಕುರುಬರೂ ಸೋಲಿಗರೂ ಹಳಗನ್ನಡದ ಅಪಭ್ರಂಶವನ್ನಾಡುತ್ತಾರೆ.

ಕಷ್ಟಪಟ್ಟು ದುಡಿಯುವುದರ ಪರಿಣಾಮವಾಗಿ ಈ ಜನರ ಆರೋಗ್ಯ, ಮೈಕಟ್ಟು ಚೆನ್ನಾಗಿದೆ. ಹಿಂದೆ ಮಲೇರಿಯ ಜ್ವರಕ್ಕೆ ಸಾಮಾನ್ಯವಾಗಿ ಈಡಾಗುತ್ತಿದ್ದರು.

ಔಷಧಿ, ಶಸ್ತ್ರಕ್ರಿಯೆ, ಚುಚ್ಚುಮದ್ದುಗಳಲ್ಲಿ ಇವರಿಗೆ ವಿಶ್ವಾಸವಿಲ್ಲ. ಮೈಯ ಸಣ್ಣ ಪುಟ್ಟ ಗಾಯಗಳನ್ನೂ ಹಸಿರಿನ ಔಷಧಗಳಿಂದ ವಾಸಿಮಾಡಿಕೊಳ್ಳುತ್ತಾರೆ. ದೈವ ಮುನಿಸಿಕೊಂಡದ್ದರಿಂದ ತಮಗೆ ಕಾಯಿಲೆ ಬಂತೆಂದು ಸಾಮಾನ್ಯವಾಗಿ ಭಾವಿಸುತ್ತಾರೆ.

ಬೆಟ್ಟಕುರುಬರು ಮಿಕ್ಕೆರಡು ಕುಲದವರಿಗಿಂತ ಹೆಚ್ಚು ಕಷ್ಟಸಹಿಷ್ಣುಗಳು, ನಂಬಿಕೆಗೂ ಅರ್ಹರು. ಜೇನು ಕುರುಬರೂ ಸೋಲಿಗರೂ ಮರಹತ್ತುವುದರಲ್ಲಿ ಗಟ್ಟಿಗರು. ಮಿಕ್ಕ ಎರಡು ಕುಲಗಳಿಗಿಂತ ಸೋಲಿಗರು ಹೆಚ್ಚು ನಾಗರಿಕರು. ಇತ್ತೀಚಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೃಢ ಪ್ರಯತ್ನಗಳ ಫಲವಾಗಿ ಈ ಜನರನ್ನು ಒಂದೆಡೆಯಲ್ಲಿ ನೆಲೆಗೊಳಿಸುವ ಕಾರ್ಯ ಮುಂದುವರಿಯುತ್ತಿದೆ. ಹೊಸ ತಲೆಮಾರಿನ ಜನ ವಿದ್ಯೆ ಕಲಿಯಲುಪಕ್ರಮಿಸಿ ನಾಗರಿಕರೊಂದಿಗೆ ಹೆಚ್ಚು ಹೆಚ್ಚಾಗಿ ಬೆರೆತು ಬಾಳುವ ಸಾಮಥ್ರ್ಯವನ್ನು ಪಡೆಯುತ್ತಿದ್ದಾರೆ. ಎಲ್ಲ ದೆಸೆಗಳಲ್ಲಿಯೂ ಅವರ ಆಚಾರ ವ್ಯವಹಾರಗಳು ಬದಲಾಯಿಸುತ್ತಿವೆ.

ಸವೋರರು: ತಮ್ಮದೇ ಆದ ಸವೋರ ಭಾಷೆಯನ್ನಾಡುವ ಈ ಜನಸಂಖ್ಯೆಯಲ್ಲಿ ಸುಮಾರು ನಾಲ್ಕು ಲಕ್ಷ ಜನರಿದ್ದಾರೆ. ಅವರಲ್ಲಿ ಸು. 80% ಒರಿಸ್ಸದಲ್ಲೂ ಉಳಿದವರು ಆಂಧ್ರದಲ್ಲೂ ಇದ್ದಾರೆ. 4,800 ಜನ ಅಸ್ಸಾಮಿನ ಟೀ ತೋಟಗಳಲ್ಲಿದ್ದಾರೆ. ಈ ಬುಡಕಟ್ಟಿನಲ್ಲಿ ಹದಿನಾಲ್ಕು ಉಪವಿಭಾಗಗಳಿವೆ. ಅತ್ಯಂತ ಪ್ರಾಚೀನರಾದ ಕೋರಾಪುಟ್‍ನ ಲಾಂಜಿಯಾ ಸವೋರರು ಹಿತ್ತಾಳೆ ಕೆಲಸಗಾರರು, ಮನೆ ಸವೋರರು, ರಾಯ್‍ಗಡದ ರಾಯ್ಕರು, ಜಾದುಗಳು, ಬುಟ್ಟಿ ಹೆಣಿಗೆ ಮಾಡುವ ಕಿಂಡಾಲ್ ಅಥವಾ ತಂಕ್ಲಾ ಸವೋರರು, ಅತ್ಯಂತ ಕೆಳಮಟ್ಟದವರೆಂದು ಪರಿಗಣಿತರಾಗಿರುವ ಅರ್ಸಿಗಳು, ಕಂಚೇರರು, ಕುರುಬ ಸವೋರರು ಗೋಮಾಂಸ ತಿನ್ನುವುದನ್ನು ಪೂರ್ಣವಾಗಿ ಬಿಟ್ಟುಕೊಟ್ಟು ಉನ್ನತಮಟ್ಟದವರೆಂದು ಪರಿಗಣಿತರಾಗಿರುವ ಶುದ್ಧ ಅಥವಾ ಜಾತಿ ಸವೋರರು, ತೆಲುಗರಾಗಿ ಬಿಟ್ಟಿರುವ ಕಂಪ ಸವೋರರು, ಮಡಕೆ ಮಾಡುವ ಕುಂಬಿಟ್‍ಗಳು, ಮನೆಗಳಂತೆಯೇ ಹಿತ್ತಾಳೆ ಕೆಲಸಗಾರರಾದ ಗೊಂತಾರರು ಮತ್ತು ಕಮ್ಮಾರರಾದ ಲೂವಾಗಳು, ಜಾತಿ ಸವೋರರು ಅವರ ಮೂಲದ ಸವೋರ ಭಾಷೆಯನ್ನು ಬಿಟ್ಟಿರುವುದಲ್ಲದೆ, ಮೂಲ ಆದಿವಾಸಿ ಸಂಸ್ಕøತಿಯ ಬಹುಪಾಲನ್ನೂ ಕಳೆದುಕೊಂಡು, ನೆರೆಯ ಒರಿಯ ಜಾತಿಯ ಜನಗಳಿಂದ ಬೇರ್ಪಡಿಸಲು ಅಸಾಧ್ಯರಾಗಿದ್ದಾರೆ. ಇಲ್ಲಿ ಕೊಟ್ಟಿರುವ ಸಾಂಸ್ಕøತಿಕ ವರ್ಣನೆ ಲಾಂಜಿಯಾ ಸವೋರರಿಗೆ ಅನ್ವಯಿಸುತ್ತದೆ. ಧರಿಸುವ ಕೌಪೀನದ ಮುಂಭಾಗವನ್ನು ಉದ್ದವಾಗಿ ಬಾಲದಂತೆ ಇಳಿಯಬಿಡುವುದರಿಂದ ಅವರನ್ನು ಲಾಂಜಿಯಾ ಅಥವಾ ಬಾಲವುಳ್ಳ ಸವೋರರು ಎಂದು ಕರೆಯುತ್ತಾರೆ.

ಈ ಪ್ರಾಚೀನ ಸವೋರರು ಗಂಜಾಮ್ ಮತ್ತು ಕೋರಾಪುಟ್ ಜಿಲ್ಲೆಗಳ ಅತ್ಯಂತ ದುರ್ಗಮವಾದ ಪರ್ವತಪ್ರದೇಶಗಳಲ್ಲಿದ್ದಾರೆ. ಬೆಟ್ಟದ ಇಳುಕಲಲ್ಲಿ ಅವರ ಹಳ್ಳಿಗಳು, ಸಾಲು ಮನೆಗಳಿಂದ ಸುಂದರವಾಗಿ ನಿರ್ಮಿತವಾಗಿರುತ್ತವೆ. ಸವೋರರ ಮುಖ್ಯ ಜೀವನಮಾರ್ಗ ಸರದಿ ಬೇಸಾಯ. ಇದಕ್ಕಾಗಿ ಬೆಟ್ಟಗಳ ಇಳುಕಲನ್ನು ಕಡಿದು ಹಸನು ಮಾಡುವುದಕ್ಕೆ ಮುಂಚೆ ಪುರೋಹಿತ ಹಂದಿಯನ್ನೋ ಕೋಳಿಯನ್ನೋ ಲೋಬೋಸಮ್‍ಗೆ (ಭೂಮಿದೇವತೆ) ಅರ್ಪಿಸುತ್ತಾನೆ. ಹಸನು ಮಾಡಿದ ಪ್ರದೇಶ ಸುಟ್ಟ ಮರಗಳ ಬೂದಿಯಿಂದ ಫಲವತ್ತಾದ ಮೇಲೆ, ವಿವಿಧ ಬೀಜಗಳನ್ನು ನೆಡುತ್ತಾರೆ. ದ್ವಿದಳ ಧಾನ್ಯಗಳು, ಬೀನ್ಸ್, ಹರಳು, ರಾಗಿ, ಸಾವೆ ಮುಂತಾದ ಧಾನ್ಯಗಳು ಮತ್ತು ಬೆಟ್ಟಕ್ಕಿಗಳನ್ನು ಒಟ್ಟಿಗೆ ಹಾಕುತ್ತಾರೆ. ಬೆಟ್ಟದ ಇಳುಕಲುಗಳನ್ನು ಮಟ್ಟ ಹೊಡೆದು ಕಷ್ಟಪಟ್ಟು ಅವುಗಳಿಗೆ ಬದುಗಳನ್ನು ಕಟ್ಟಿ ಗದ್ದೆಗಳಿಗೆ ಝರಿಗಳಿಂದ ನೀರು ಹಾಯಿಸುತ್ತಾರೆ.

ಬೆಟ್ಟ ಸವೋರರಲ್ಲಿ ಹೆಸರು ಹೇಳುವಂಥ ಪಂಗಡಗಳು ಯಾವುವೂ ಇಲ್ಲ. ನಾಲ್ಕು ಐದು ತಲೆಮಾರುಗಳಷ್ಟು ಹಿಂದಿನಿಂದ ಬಂದ ಒಂದೊಂದು ಕುಟುಂಬ, ಬಿರಿಂದ ಎಂದು ಕರೆಯುವಂಥದು, ಎಲ್ಲ ಬಗೆಯ ವಿಧಿ, ವಿವಾಹ ಮತ್ತಿತರ ಸಾಮಾಜಿಕ ಉದ್ದೇಶಗಳಿಗಾಗಿ ಅಳತೆಗೋಲಿದ್ದಂತೆ. ಮದುವೆಯಾದ ಮಾತ್ರಕ್ಕೆ ಹೆಂಗಸು ತನ್ನ ಬಿರಿಂದದಲ್ಲಿ ಬದಲಾವಣೆ ಹೊಂದುವುದಿಲ್ಲವಾದುದರಿಂದ ಅವಳ ಅಂತ್ಯ ಸಂಸ್ಕಾರವನ್ನು (ಗುಅರ್) ಅವಳ ತವುರಿನ ಬಿರಿಂದ ಸದಸ್ಯರೇ ಮಾಡುತ್ತಾರೆ. ಅವಳ ಮದುವೆಯಾದ ಹಳ್ಳಿಯ ಶ್ಮಶಾನದಿಂದ ಅವಳ ಮೂಳೆಗಳನ್ನು ತವರು ಮನೆಗೆ ತರುತ್ತಾರೆ.

ಸವೋರ ಸಮಾಜದಲ್ಲಿನ ಆಡಳಿತ ಪದ್ಧತಿಯಲ್ಲಿ ಆಡಳಿತ ದರ್ಜೆ ಇದೆ. ಗಮಂಗ್ ಎಂದು ಕರೆಯುವ ಗ್ರಾಮ ಮುಖಂಡನೇ ಆ ಪ್ರದೇಶದ ಆಡಳಿತ ಮಾನ್ಯ ಮಾಡಿರುವ ಲೌಕಿಕ ನಾಯಕ. ದೊಲ್ಲ್-ಬೆಹೇರ ಮತ್ತು ಮೊಂದಲ್ಲರು ಅವನಿಗೆ ನೆರವಾಗುತ್ತಾರೆ. ಧಾರ್ಮಿಕ ನಾಯಕನನ್ನು ಬುಯ್ಯ ಎಂದು ಕರೆಯುತ್ತಾರೆ. ಈ ನಾಲ್ವರು ಮತ್ತು ಅವರ ಬಿರಿಂದರು ಸವೋರ ಶ್ರೀಮಂತವರ್ಗವೆನಿಸುತ್ತಾರೆ. ಸಾಮಾನ್ಯ ಜನರನ್ನು ರೊಯತ್ತರೆಂದು ಕರೆಯಲಾಗುತ್ತದೆ. ರೊಯತ್ತರಿಗೂ ಶ್ರೀಮಂತರಿಗೂ ಅಂತರ ವಿವಾಹಕ್ಕೆ ಸಾಮಾನ್ಯವಾಗಿ ಅನುಮತಿಯಿಲ್ಲ. ಶ್ರೀಮಂತರು ಸಂಖ್ಯೆಯಲ್ಲಿ ಕಡಿಮೆಯಿರುವುದರಿಂದ ಮದುವೆ, ಅದರಲ್ಲೂ ಅವರ ಹೆಂಗಸರಿಗೆ ಕಷ್ಟ. ಬಹುಪತ್ನಿತ್ವದಿಂದ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗಿದೆ. ಗಮಂಗ್ ದಾಯಾದಿಗಳ ಪರಸ್ಪರ ವಿವಾಹಕ್ಕೆ ಸವೋರರಲ್ಲಿ ಅವಕಾಶವಿದೆ. ಎಷ್ಟೋಸಲ ಅದನ್ನೇ ಅಪೇಕ್ಷಿಸುವುದೂ ಉಂಟು. ಮದುವೆಯ ಸಮಾರಂಭಗಳು ಬಹಳ ಸರಳ. ಗಂಡಿನ ಕಡೆಯವರು ಕೊಡುವ ಒಂದು ಮಡಕೆ ಈಚಲ ಹೆಂಡವನ್ನು ಸ್ವೀಕರಿಸುವುದರಿಂದ ಗಂಡಿನ ಒಪ್ಪಿಗೆಯನ್ನು ಪಡೆದಂತಾಗುತ್ತದೆ. ನಿಶ್ಚಿತಾರ್ಥ ಅಂತಿಮ ತೀರ್ಮಾನಕ್ಕೆ ಬರುವುದು ಒಂದು ಬಾಣವನ್ನು ಸ್ವೀಕರಿಸುವುದರಿಂದ. ಕನ್ಯಾಶುಲ್ಕ ಕೊಡಲೇಬೇಕು. ಸೋದರೀ ಸಂಬಂಧ (ಸತ್ತವನ ಹೆಂಡತಿಯನ್ನು ಅವನ ತಮ್ಮ ಅಥವಾ ಬೇರೊಬ್ಬ ಹತ್ತಿರ ಸಂಬಂಧಿ ಮದುವೆ ಮಾಡಿಕೊಳ್ಳಬೇಕೆಂಬ ನಿಯಮ) ಮತ್ತು ಬಹುಪತ್ನಿತ್ವಗಳು ಸಾಮಾನ್ಯ. ವ್ಯಕ್ತಿ ಪ್ರಮುಖನಾದಷ್ಟೂ ಅವನ ಪತ್ನಿಯರ ಸಂಖ್ಯೆ ಹೆಚ್ಚಾಗಿರುತ್ತದೆ.

ಸವೋರ ಸ್ತ್ರೀಯರು ಶ್ರಮಜೀವಿಗಳು. ತಮ್ಮ ಆರ್ಥಿಕ ಪ್ರಾಮುಖ್ಯದಿಂದಾಗಿ ಉತ್ತಮ ಸ್ಥಾನ ಗೌರವವನ್ನು ಪಡೆಯುತ್ತಾರೆ. ಯಾವ ಕನ್ಯೆಗೂ ಅವಳ ಇಷ್ಟವನ್ನು ತಿಳಿದುಕೊಳ್ಳದೆ ಮದುವೆ ಮಾಡುವುದಿಲ್ಲ. ಹೆಂಗಸರು ಷಾಮನಿನ್ (ಸ್ತ್ರೀಪುರೋಹಿತರು) ಆಗುವುದೂ ಉಂಟು. ಸವೋರರು ತಮ್ಮ ಮಕ್ಕಳ ಮೇಲೆ ತುಂಬ ಕರುಣೆ, ಪ್ರೀತಿಗಳನ್ನುಳ್ಳವರು. ಸವೋರ ಹಳ್ಳಿಯಲ್ಲಿ ಮಕ್ಕಳು ಅಳುವುದೇ ಕಾಣಿಸುವುದಿಲ್ಲ. ಅವರು ಮಕ್ಕಳನ್ನು ದೊಡ್ಡವರಂತೆಯೇ ಸಮಾರಂಭಗಳಲ್ಲಿ ಭಾಗವಹಿಸಲು, ಬೀಡಿ ಸೇದಲು, ಕುಡಿಯಲು ಬಿಡುತ್ತಾರೆ.

ಸವೋರ ದೇವಪಂಕ್ತಿಯಲ್ಲಿ ಬಹುಸಂಖ್ಯೆಯ ದೇವದೇವಿಯರಿರುವುದಲ್ಲದೇ, ದೇವತ್ವ ಹೊಂದಿದ ಪಿತೃಗಳೂ ಇದ್ದು, ಬದುಕನ್ನು ನಿರಂತರವಾಗಿ ಗಮನಿಸುತ್ತ ಅದರ ಆಗುಹೋಗುಗಳಲ್ಲಿ ಪಾತ್ರವಹಿಸುತ್ತಾರೆ. ರೋಗಗಳಿಗೆ ಕಾರಣ ಯಾವುದೋ ಪ್ರೇತಾತ್ಮಗಳ ಕೋಪ; ಪರ್ವತ, ಅರಣ್ಯ, ಗದ್ದೆ, ಮನೆಗಳ ಅಧಿದೇವತೆಗಳಾಗಿರುವ ಈ ಪ್ರೇತಾತ್ಮಗಳು ತಮ್ಮದೇ ಆದ ಒಂದು ಕೆಳ ಜಗತ್ತಿನಲ್ಲಿ ವಾಸಿಸುತ್ತಾರೆಂದು ನಂಬಲಾಗಿದೆ. ಇವರೊಂದಿಗೆ ವ್ಯವಹರಿಸಲು ಅಸಂಖ್ಯಾತ ಸ್ತ್ರೀಪುರುಷ ಪುರೋಹಿತರು ಸವೋರರಲ್ಲಿದ್ದಾರೆ. ತಮ್ಮ ವ್ಯವಹಾರದಲ್ಲಿ, ಮೂಗು ಹಾಯಿಸುವ ಈ ಪ್ರೇತಾತ್ಮಗಳಿಗೆ ಕಾಣಿಕೆಗಳನ್ನು ಪ್ರಾಣಿಗಳನ್ನು ವರ್ಷದ ಎಲ್ಲ ಕಾಲಗಳಲ್ಲೂ ಅಸಂಖ್ಯ ಸಂದರ್ಭಗಳಲ್ಲಿ ಅರ್ಪಿಸುತ್ತಾರೆ. ಪ್ರತಿಯೊಂದು ಕಾಯಿಲೆಗೂ ಕೊನೆಗೆ ಒಂದು ತಲೆನೋವಿಗೂ ಪುರೋಹಿತನನ್ನೇ ವಿಚಾರಿಸಬೇಕು; ಅದಕ್ಕೆ ದೇವತೆಯನ್ನು ತುಷ್ಟಿಪಡಿಸಬೇಕು. ಸಾಮಾನ್ಯವಾಗಿ ಡಾಮ್ ಬುಡಕಟ್ಟಿಗೆ ಸೇರಿದ ಸಾಲಿಗನಿಂದ, ಸಾಲವಾಗಿ ತೆಗೆದುಕೊಂಡ ಹಣದಿಂದ ಬಲಿಕೊಡಲು ಕೋಣಗಳನ್ನು ಕೊಳ್ಳುತ್ತಾರೆ. ಅವರ ಹೆಚ್ಚಿನ ಹಬ್ಬಗಳಲ್ಲಿ ವಿಪರೀತ ಕುಡಿತ, ನರ್ತನಗಳಿರುತ್ತವೆ. ಧರ್ಮದ ಹೆಸರಿನಲ್ಲಿ ತುಂಬ ಸಾಲ ಮಾಡಿರುವ ಸವೋರರು ತೀರ ಬಡವರಾಗಿದ್ದಾರೆ. ಧರ್ಮ ಹೇರಿರುವ ಈ ಹೊರೆಯಿಂದ ತಪ್ಪಿಸಿಕೊಳ್ಳಲು ಕ್ರೈಸ್ತಧರ್ಮ ಕೆಲವರಿಗೆ ಒಂದು ದಾರಿಯನ್ನೊದಗಿಸಿದೆ. ಹಲವು ಕ್ರೈಸ್ತ ಮಿಷನ್ನುಗಳು ಸವೋರರ ನಡುವೆ ಧರ್ಮಬೋಧೆಯನ್ನು ಬಹು ಚುರುಕಾಗಿ ನಡೆಸುತ್ತಿದ್ದಾರೆ.

ಸವೋರರು ತುಂಬ ಸಂಗೀತ ಪ್ರಿಯರು, ಅವರಲ್ಲಿ ಬೇಕಾದಷ್ಟು ಸಂಗೀತ ವಾದ್ಯಗಳಿವೆ. ಚೆನ್ನಾಗಿ ಬಲ್ಲವರು ಹಲವು ಉತ್ತಮ ಗುಣಗಳಿಗಾಗಿ ಅವರನ್ನು ಮೆಚ್ಚುತ್ತಾರೆ. ವಿದ್ವಾಂಸರು ಅವರನ್ನು ಋಗ್ವೇದದಲ್ಲಿ ಉಲ್ಲೇಖಿತವಾಗಿರುವ ಶಬರರೊಂದಿಗೆ ಸಮೀಕರಿಸುವುದುಂಟು. ಸವೋರರು ತುಂಬ ಹಿಂದೆ ಬಹು ವಿಸ್ತಾರವಾಗಿ ಹರಡಿಕೊಂಡಿದ್ದು, ಬಹಳ ದೀರ್ಘವಾದ ಚರಿತ್ರೆಯನ್ನು ಹೊಂದಿದ್ದ ಆದಿವಾಸಿಗಳು; ಆದರೆ ಅದೆಲ್ಲ ಈಗ ಕಳೆದುಹೋದ ಚರಿತ್ರೆಯಾಗಿದೆ.

ಈ ಲೇಖನದಲ್ಲಿ ಪ್ರಾತಿನಿಧಿಕವಾಗಿ ಕೆಲವು ಆದಿವಾಸಿ ಬುಡಕಟ್ಟುಗಳ ಬಗ್ಗೆ ಹೇಳಲಾಗಿದೆ. ಇವಲ್ಲದೆ ಇನ್ನೂ ಅನೇಕ ಬುಡಕಟ್ಟುಗಳ ಬಗ್ಗೆ ಶಾಸ್ತ್ರೀಯ ವ್ಯಾಸಂಗ ನಡೆಯಬೇಕಾಗಿದೆ. ಕೇರಳದ ಮಲೆಯ ಒರಿಯನರು, ಪುಲಯನರು, ವೆಡ್ಡರು, ಪಣಿಯನರು, ಉರಲೀ, ಬಿಹಾರದ ಗಡಬರು, ಬಿಹಾರ್ ಮತ್ತು ಒರಿಸ್ಸಾದ ಮುಂಡರು, ಬಿಹಾರ್ ಮತ್ತು ಬಂಗಾಳದ ಸಂತಾಲರು, ಮಧ್ಯ ಪ್ರದೇಶದ ಮರಿಯರು, ಭಿಲ್ಲರು, ಆಂಧ್ರದ ರೆಡ್ಡಿಗಳು, ಅಸ್ಸಾಮಿನ ಖಾಸಿಗಳು-ಇವರ ಬಗ್ಗೆ ಸಾಕಷ್ಟು ಮಾಹಿತಿ ದೊರೆತಿವೆ.

(ನೋಡಿ- ಎಲ್ವಿನ್,-ವೆರಿಯರ್) (ಎ.ಎ.ಐ.)