ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನಂದ ಬಜಾರ್ ಪತ್ರಿಕಾ

ವಿಕಿಸೋರ್ಸ್ದಿಂದ

ಆನಂದ ಬಜಾರ್ ಪತ್ರಿಕಾ- ಬಂಗಾಲಿ ಭಾಷೆಯಲ್ಲಿ, 1922ರಲ್ಲಿ ಮೃಣಾಲಿಕಾಂತಿ ಘೋಷ್, ಪ್ರಫುಲ್ಲಕುಮಾರ ಸರಕಾರ ಮತ್ತು ಸುರೇಶ್‍ಚಂದ್ರ ಮುಜುಂದಾರ ಈ ಮೂವರು ಸೇರಿ ಪ್ರಾರಂಭಿಸಿದ ದಿನಪತ್ರಿಕೆ; ಸುಮಾರು 1926ರ ಹೊತ್ತಿಗೆ ದೇಶದ ಪ್ರಮುಖ ಬಂಗಾಲಿ ಪತ್ರಿಕೆಯಾಯಿತು. ಬಂಗಾಲಿ ಭಾಷೆ ಜನಭಾಷೆಯಾಗಿರುವಲ್ಲೆಲ್ಲ ಇದು ಜನಪ್ರಿಯವಾಗಿದೆ. ವಾರ್ತೆಗಳ ವಿವರಪೂರ್ಣ ಪ್ರಕಟಣೆಯೇ ವೈಶಿಷ್ಟ್ಯವಾಗಿರುವ ಇದರ ನೀತಿ ಸ್ವತಂತ್ರ ಮತ್ತು ರಾಷ್ಟ್ರೀಯವೆಂದು ಘೋಷಿತ. ಪ್ರಥಮ ಸಂಪಾದಕ ಸತ್ಯೇಂದ್ರನಾಥ ಮುಜುಂದಾರ್ ಅತ್ಯಂತ ಪ್ರಸಿದ್ಧರು. ಯಾವುದೇ ಒಂದು ಸ್ಥಳದಿಂದ ಪ್ರಕಟವಾಗುವ ಯಾವುದೇ ಭಾರತೀಯ ಪ್ರಾಂತೀಯ ಭಾಷಾ ಪತ್ರಿಕೆಗಿಂತ ಇದು ಅಧಿಕ ಪ್ರಸಾರವನ್ನು ಪಡೆದಿದೆ. ಇದರ ಇಂಗ್ಲಿಷ್ ಸಹಚರಿ ದಿನಪತ್ರಿಕೆಯಾದ ಹಿಂದೂಸ್ತಾನ್ ಸ್ಟ್ಯಾಂಡರ್ಡ್ 1937ರಲ್ಲಿ ಪ್ರಾರಂಭವಾಯಿತು. ದೇಶ ಎಂಬ ಇನ್ನೊಂದು ವಾರಪತ್ರಿಕೆ ಇದರೊಂದಿಗೆ ಬಂಗಾಲಿ ಭಾಷೆಯಲ್ಲಿ ಪ್ರಕಟವಾಗುತ್ತಿದೆ. ಕೊಲ್ಕತ್ತೆಯ ಸರ್ಕಾರ ರಸ್ತೆಯಲ್ಲಿರುವ ಆನಂದ ಬಜಾರ್ ಪತ್ರಿಕಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈಗ ಪ್ರಕಟಣೆಯನ್ನು ನಿರ್ವಹಿಸುತ್ತಿದೆ. ಈಗಿನ ಸಂಪಾದಕರು ಅವೀಕ್ ಸರಕಾರ. ಕೊಲ್ಕತ್ತ ಮತ್ತು ಸಿರಿಗುರಿ ಕೇಂದ್ರಗಳಿಂದ ಪ್ರಕಟವಾಗುತ್ತಿದೆ. (ಕೆ.ಎಸ್.)