ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನೆಗೊಂದಿ

ವಿಕಿಸೋರ್ಸ್ದಿಂದ

ಆನೆಗೊಂದಿ ಮೈಸೂರು ರಾಜ್ಯಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ಹೊಸಪೇಟೆಯಿಂದ ಸುಮಾರು 16 ಕಿ.ಮೀ.ಗಳ ಮೇಲಿನ ತುಂಗಭದ್ರಾ ನದಿಯ ದಂಡೆಯಲ್ಲಿನ ಚಿಕ್ಕದೊಂದು ಗ್ರಾಮ. ಇದು ರಾಮಾಯಣ ಕಾಲದಲ್ಲಿ ಕಪಿರಾಜನಾದ ವಾಲಿಯ ರಾಜಧಾನಿಯಾಗಿತ್ತು. ಇದೇ ಕಿಷ್ಕಿಂಧವೆಂದು ಪ್ರಸಿದ್ಧವಾಗಿತ್ತು. ರಾಮಚಂದ್ರ ವಾಲಿಯನ್ನು ಕೊಂದು ಕಿಷ್ಕಿಂಧೆಯನ್ನು ಸುಗ್ರೀವನಿಗೆ ಕೊಟ್ಟನೆಂದೂ ಸುಗ್ರೀವ ಮಂತ್ರಿಯಾದ ಹನುಮಂತನ ದೌತ್ಯದಲ್ಲಿ ಕಪಿಸೇನೆಯನ್ನು ಒಯ್ದು ರಾವಣನನ್ನು ಸಂಹರಿಸಿ ಸೀತೆಯನ್ನು ಬಂಧನದಿಂದ ಬಿಡಿಸಿಕೊಂಡು ಬಂದನೆಂದೂ ರಾಮಾಯಣದಲ್ಲಿ ಹೇಳಿದೆ. ಪರ್ವತಾವಳಿಯ ಪರಿಸರದಲ್ಲಿ ನಿಸರ್ಗದ ರಕ್ಷಣೆಯಿರುವುದರಿಂದ ಸ್ವಾಭಾವಿಕ ದುರ್ಗವಾಗಿದ್ದು, ಇದು ಬಹು ಪ್ರಾಚೀನ ಕಾಲದಿಂದಲೂ ರಾಜಧಾನಿಯಾಗಿ ಪ್ರಸಿದ್ಧಿಯನ್ನೂ ಹೊಂದಿದೆ. ಯಾದವ - ಹೊಯ್ಸಳರ ಕಾಲದಲ್ಲಿ ಕಂಪಿಲರಾಯನೆಂಬ ಚಿಕ್ಕ ಪಾಳೆಯಗಾರ ಕುಮ್ಮಟ ದುರ್ಗದ ರಾಜಧಾನಿಯಿಂದ ಆನೆಗೊಂದಿ ರಾಜ್ಯವನ್ನಾಳುತ್ತಿದ್ದ. ಅಲ್ಲಾವುದ್ದೀನ್‍ಖಿಲ್ಜಿಯ ದಂಡನಾಯಕನಾದ ಮಲ್ಲಿಕಾಫರ್ ಹೊಯ್ಸಳ ಯಾದವ ಕಾಕತೀಯ ರಾಜರನ್ನು ಸೋಲಿಸಿ ಇಡೀ ಹಿಂದೂಸ್ತಾನವನ್ನು ಪಾದಾಕ್ರಾಂತವಾಗಿ ಮಾಡಬೇಕೆಂದು ಹವಣಿಸಿದಾಗ ಕಂಪಿಲರಾಯ ಕುಮಾರರಾಮನೆಂಬ ತನ್ನ ಮಗನೊಂದಿಗೆ ಆ ದಂಡನಾಯಕನನ್ನು ಸೋಲಿಸಿ ವಿಫಲ ಪ್ರಯತ್ನನನ್ನಾಗಿ ಮಾಡಿದ. ಕಡಗೆ ಮಲ್ಲಿಕಾಫರ್ ಮೋಸದಿಂದ ಕಂಪಿಲರಾಯನನ್ನು ಬಂಧಿಸಿ ದಿಲ್ಲಿಗೆ ಒಯ್ದನೆಂದೂ ಮುಸಲ್ಮಾನ ಇತಿಹಾಸಕಾರರು ಬರೆದಿದ್ದಾರೆ. ಅವನ ಜೊತೆಯಲ್ಲಿ ಬೊಕ್ಕಸಿಗರಾಗಿದ್ದ ಹಕ್ಕಬುಕ್ಕರು ಯುಕ್ತಿಯಿಂದಲೂ ಬಾಹುಬಲದಿಂದಲೂ ದೊಡ್ಡ ಸೈನ್ಯವನ್ನು ಶೇಖರಿಸಿ ಮಲ್ಲಿಕಾಫರ್‍ನ ಪ್ರತಿನಿಧಿಯನ್ನು ಹೊಡೆದೋಡಿಸಿ ಆನೆಗೊಂದಿಯ ಹತ್ತಿರ ವಿಜಯನಗರವನ್ನು (ವಿದ್ಯಾನಗರ) ಕಟ್ಟಿ, ಹೊಸದೊಂದು ರಾಜ್ಯವನ್ನು ಸ್ಥಾಪಿಸಿ ಮುಸಲ್ಮಾನರ ಆಕ್ರಮಣವನ್ನು ತಡೆದರು. ಎರಡನೆಯ ದೇವರಾಯನ ಕಾಲದಲ್ಲಿ ಈ ವಿದ್ಯಾನಗರ ಆನೆಗೊಂದಿಯನ್ನೊಳಗೊಂಡು ಜಗತ್ತಿನಲ್ಲಿಯೇ ಅತ್ಯಂತ ವಿಸ್ತಾರವುಳ್ಳ (20 ಕಿ.ಮೀ.) ಶ್ರೀಮಂತ ರಾಜಧಾನಿಯೆಂದೂ ಪ್ರಸಿದ್ಧವಾಗಿತ್ತು. ತುಳು ವಂಶದ ಕೃಷ್ಣದೇವರಾಯನ ಕಾಲದಲ್ಲಿಯಂತೂ ಇದರ ವೈಭವ ನಭೂತೋನಭವಿಷ್ಯತಿಯಾಗಿತ್ತು. ತುಂಗಭದ್ರಾ ನದಿಯ ದಂಡೆಯ ಮೇಲೆ ಸೆನಗೊಂದ್ಯಂ (ಆನೆಗೊಂದಿ) ಎಂಬ ಪಟ್ಟಣವಿತ್ತು. ಅದು ಪೂರ್ವಕಾಲದಲ್ಲಿ ರಾಜಧಾನಿಯಾಗಿತ್ತು. ಈಗಲೂ ಅದರ ಕೋಟೆಕೊತ್ತಳೆಗಳನ್ನು ಕಾಣಬಹುದು ಎಂದು ಪೇಸ್ ಎಂಬ ಪೋರ್ಚುಗೀಸ್ ಪ್ರಯಾಣಿಕ 1530ರಲ್ಲಿ ಬರೆದಿದ್ದಾನೆ. ವಿಜಯನಗರದ ಪತನಾನಂತರ ಆನೆಗೊಂದಿಯಲ್ಲಿ ಚಿಕ್ಕಜಮನೆತನವೊಂದು ಆಳುತ್ತಿತ್ತು. ಇಲ್ಲಿನ ಶೇಷಶಾಯಿ ಗುಹಾಂತರ ವಿಷ್ಣುವಿಗ್ರಹ ಪ್ರಸಿದ್ಧವಿದೆ. ಇಲ್ಲಿಯ ಹುಚ್ಚುಪ್ಪಯ್ಯನ ಮಠ, ಗಗನ ಮಹಲ್, ಗುತಂಗನಾಥಸ್ವಾಮಿ ದೇವಾಲಯ, ಪಾಳುಬಿದ್ದಿರುವ ಅರಮನೆ ಇವು ಸು. 16 - 17ನೆಯ ಶತಮಾನಕ್ಕಿಂತ ಈಚಿನವು. ಹತ್ತಿರವೇ ಮಾಧ್ವಯತಿಗಳ ಒಂಬತ್ತು ವೃಂದಾವನಗಳಿದ್ದು ಆ ಗುಂಪಿಗೆ ನವವೃಂದಾವನವೆಂಬ ಹೆಸರು ಉಂಟು. ಈ ಯತಿಗಳಲ್ಲಿ ಶ್ರೀ ಪದ್ಮನಾಭತೀರ್ಥರೂ, ವ್ಯಾಸತೀರ್ಥರೂ, ಸುಧೀಂದ್ರತೀರ್ಥರೂ ಮುಖ್ಯರಾಗಿದ್ದಾರೆ. (ಆರ್.ಎಸ್.ಪಿ.)

ಆನೆಗೊಂದಿ ಭೂಸುಧಾರಣಾ ನೀತಿ ಉಲೇಖಾರ್ಹವಾಗಿದೆ. ಕೃಷ್ಣದೇವರಾಯ ತನ್ನ ಮಂತ್ರಿಯಾದ ಅಪ್ಪಾಜಿಯ ಸಹಕಾರದಿಂದ ಭೂಮಿಯನ್ನು ರಾಯರೇಖಾ ಎಳೆಯುವುದರ ಮೂಲಕ ಅಳತೆ ಮಾಡಿದ, ಕಂದಾಯ ಮಾಡಿದ. ಈ ಪದ್ಧತಿಯನ್ನು ಮುಂದಿನ ಅನೇಕರು ತಮ್ಮ ರಾಜ್ಯಗಳಲ್ಲಿ ಜಾರಿಗೆ ತಂದರು. 1896ರಲ್ಲಿ ಭೂಸುಧಾರಣೆಗೆ ಕೈಹಾಕಿದ ಇಂಗ್ಲೀಷ್ ಅಧಿಕಾರಿಗಳು ಆನೆಗೊಂದಿಯ ವಿಧಾನವನ್ನು ಕೊಂಡಾಡಿದ್ದಾರೆ. (ಬಿ.ಎಂ.)