ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಪಲ್ಟನ್, ಸರ್ ಎಡ್ವರ್ಡ್ ವಿಕ್ಟರ್

ವಿಕಿಸೋರ್ಸ್ದಿಂದ

ಆಪಲ್ಟನ್, ಸರ್ ಎಡ್ವರ್ಡ್ ವಿಕ್ಟರ್ (1892-1965). ಬ್ರಿಟಿಷ್ ಭೌತಶಾಸ್ತ್ರಜ್ಞ. ರೇಡಿಯೊ ತರಂಗಗಳ ಪ್ರಸಾರದ ವಿಷಯದಲ್ಲಿ ಮುಖ್ಯ ಸಂಶೋಧನೆ ನಡೆಸಿದ. ಭೂಮಿಯಿಂದ 230 ಕಿ.ಮೀ. ಈ ಎತ್ತರದಲ್ಲಿರುವ ವಿದ್ಯುತ್ಕಣಯುಕ್ತವಾದ ವಲಯವನ್ನು ಸಂಶೋಧಿಸಿದ. ಆಪಲ್ಟನ್‍ಸ್ತರ (ಪದರ)ವೆಂದೇ ಅದನ್ನು ಕರೆಯಲಾಗಿದೆ. ಅಯಾನ್‍ಗೋಳದ ಎಫ್-ಪ್ರದೇಶದಲ್ಲಿಯ ಒಂದು ಅಯಾನೀಕೃತ ಪದರ. ಸೂರ್ಯಾಭಿಮುಖ ಗೋಳಾರ್ಧ ಕುರಿತಂತೆ ಇದರಲ್ಲಿ ಎಫ್-1 ಮತ್ತು ಎಫ್-2 ಪದರಗಳಿವೆ. ರಾತ್ರಿ ಗೋಳಾರ್ಧದಲ್ಲಿ ಕೇವಲ ಎಫ್-2 ಪದರ ಮಾತ್ರ ಇರುವುದು. 50ಮೆ. ಹಟ್ರ್ಸ್ ಆವೃತ್ತಿಗಳವರೆಗೂ ಎಫ್-ಪದರ ರೇಡಿಯೋ ತರಂಗಗಳನ್ನು ಪ್ರಸರಿಸಬಲ್ಲದು. ಇದಕ್ಕಾಗಿ 1947ರಲ್ಲಿ ನೊಬೆಲ್ (ಭೌತಶಾಸ್ತ್ರ) ಪಾರಿತೋಷಕ ಲಭಿಸಿತು. (ನೋಡಿ- ಅಯಾನ್‍ಗೋಳ) ಜನನ ಬ್ರಾಡ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ ಅದೇ ಊರಿನಲ್ಲಿ ಮತ್ತು ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ. 1924-1936ರ ವರೆಗೆ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಯೋಗಿಕ ಭೌತಶಾಸ್ತ್ರದ ವೀಟ್‍ಸ್ಟನ್ ಪ್ರಾಧ್ಯಾಪಕನಾಗಿದ್ದು 1936-39ರಲ್ಲಿ ಕೇಂಬ್ರಿಜ್‍ನಲ್ಲಿ ಜ್ಯಾಕ್ ಸೋನೀಯನ್ ಪ್ರಾಧ್ಯಾಪಕನಾದ. 1939-47ರವರೆಗೆ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಇಲಾಖೆಯ ಕಾರ್ಯದರ್ಶಿಯಾಗಿದ್ದ. 1949ರಲ್ಲಿ ಎಡಿನ್‍ಬರೊ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕಗೊಂಡ. 1927ರಲ್ಲಿ ಇವನಿಗೆ ಎಫ್.ಆರ್.ಎಸ್. ಗೌರವ ಲಭಿಸಿತು. (ಟಿ.ಎಸ್.ಎಸ್.)