ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಫ್ಘಾನಿಸ್ತಾನ

ವಿಕಿಸೋರ್ಸ್ದಿಂದ

ಆಫ್ಘಾನಿಸ್ತಾನ ಮಧ್ಯ ಏಷ್ಯದಲ್ಲಿದೆ. (290 - 380 - 35 ಉ.ಅ; 600 50 - 710 35 ಪೂ.ರೇ.) ಉತ್ತರದಿಂದ ದಕ್ಷಿಣಕ್ಕೆ 560 ಕಿ.ಮೀ.ಗಳಷ್ಟು ಅಗಲವಾಗಿಯೂ ಪೂರ್ವದಿಂದ ಪಶ್ಚಿಮಕ್ಕೆ 1232 ಕಿ.ಮೀ.ಗಳಷ್ಟು ಉದ್ದವಾಗಿಯೂ ವ್ಯಾಪಿಸಿದೆ. ವಿಸ್ತೀರ್ಣ 2,50,000 ಚ.ಮೈ.ಗಳು.

ನೆಲ ಸರಾಸರಿ 4000 ಎತ್ತರವುಳ್ಳ ಪ್ರಸ್ಥಭೂಮಿ. ಉತ್ತರ ಭಾಗದಲ್ಲಿ 1500' ಎತ್ತರದ ಸಾಧಾರಣ ಮೈದಾನವಿದೆ. ಮಧ್ಯಭಾಗದಲ್ಲಿ 960 ಕಿ.ಮೀ. ಗಳವರೆಗೆ, 20,000 ಎತ್ತರವುಳ್ಳ ಹಿಂದೂಕುಷ್ ಪರ್ವತಶ್ರೇಣಿ ಈಶಾನ್ಯದಿಂದ ನೈಋತ್ಯದ ಕಡೆಗೆ ಹಬ್ಬಿದೆ. ದಕ್ಷಿಣ ಭಾಗ 6000 ಎತ್ತರವುಳ್ಳ ವಿಶಾಲವಾದ ಪ್ರಸ್ಥಭೂಮಿಯಾಗಿದೆ.

ಈ ದೇಶದ ಮೂಲಕ ಆಮೂದಾರ್ಯ ನದಿ ಉತ್ತರಕ್ಕೂ ಹರಿರುದ್ ಮತ್ತು ಮುರ್ಫಾಬ್ ನದಿಗಳು ಪಶ್ಚಿಮಕ್ಕೂ ಹೆಲ್ಮಂಡ್ ನದಿ ನೈಋತ್ಯಕ್ಕೂ ಕಾಬೂಲ್ ನದಿ ಪೂರ್ವದ ಕಡೆಗೂ ಹರಿಯುತ್ತವೆ. ನದಿಗಳ ಕಣಿವೆಗಳು ಫಲವತ್ತಾಗಿದ್ದು ಹೆಚ್ಚು ಜನಸಂಖ್ಯೆಯುಳ್ಳ ಭಾಗಗಳಾಗಿವೆ. ಕೆಲವು ಸರೋವರಗಳೂ ಉಂಟು.

ಇದು ಒಳನಾಡಿನ ಪ್ರಸ್ಥಭೂಮಿಯಾಗಿರುವುದರಿಂದ, ಬೇಸಿಗೆಯಲ್ಲಿ 700 ಫ್ಯಾ. ಉಷ್ಣಾಂಶವೂ ಚಳಿಗಾಲದಲ್ಲಿ 400-500 ಫ್ಯಾ. ಗಳಷ್ಟು ಉಷ್ಣಾಂಶವೂ ಇರುತ್ತವೆ. ಚಳಿಗಾಲದಲ್ಲಿ 10"-12" ಮಳೆಯಾಗುತ್ತದೆಯಲ್ಲದೆ ಹಿಮವೃಷ್ಟಿಯಾಗುವುದೂ ಉಂಟು. ದೇಶದ ಬಹುಪಾಲು ಸಮಶೀತೋಷ್ಣವಲಯದ ಶುಷ್ಕ ಭೂಮಿಯಾದ್ದರಿಂದ ಅಲ್ಲಲ್ಲಿ ಒರಟು ಹುಲ್ಲು, ಕುರುಚಲು, ಹಲಕೆಲವು ಬಳ್ಳಿಗಳು, ಅಂಟಿನ ಗಿಡಗಳು ಮಾತ್ರ ಇವೆ. ತೋಳ, ಮೊಲ, ಕಾಡುಟಗರು, ನರಿ, ಮುಳ್ಳುಹಂದಿಗಳು ಈ ದೇಶದ ಕೆಲವು ವನ್ಯಪ್ರಾಣಿಗಳು.

ಈ ದೇಶದಲ್ಲಿ ಕೇವಲ 15% ರಷ್ಟು ಪ್ರದೇಶ ವ್ಯವಸಾಯ ಯೋಗ್ಯವಾಗಿದೆ. ಸುಮಾರು 50% ವ್ಯವಸಾಯದ ಪ್ರದೇಶದಲ್ಲಿ ನೀರಾವರಿ ಸಹಾಯದಿಂದ ಬೇಸಾಯ ನಡೆಯುತ್ತದೆ. ಆಮೂದಾರ್ಯ, ಹೆಲ್ಮಂಡ್, ಕಾಬೂಲ್ ನದಿಗಳ ಫಲವತ್ತಾದ ಕಣಿವೆಗಳಲ್ಲಿ ಗೋದಿ, ಬಾರ್ಲಿ, ಮೆಕ್ಕೆಜೋಳ, ದ್ವಿದಳಧಾನ್ಯ, ಜೋಳ, ಸಕ್ಕರೆ, ಬೀಟ್‍ರೂಟ್, ಕಬ್ಬು, ಹೊಗೆಸೊಪ್ಪು, ಹತ್ತಿ, ಹರಳು ಬೆಳೆಯುತ್ತವೆ. ಸೇಬು, ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಏಪ್ರಿಕಾಟ್, ಪೀಚ್, ಪೇರಲ, ಪ್ಲಮ್ ಮುಂತಾದ ಹಣ್ಣುಗಳು ಹೆಚ್ಚಾಗಿ ಬೆಳೆಯುತ್ತವೆ. ಕೆಲವು ಹಣ್ಣುಗಳನ್ನು ಒಣಗಿಸಿ ರಫ್ತು ಮಾಡುತ್ತಾರೆ.

ಈ ದೇಶದಲ್ಲಿ ಕುರಿ, ದನಕರು, ಮೇಕೆಗಳನ್ನು ಮಾಂಸ, ಹಾಲು, ತುಪ್ಪಟ, ಚರ್ಮ, ಗಿಣ್ಣುಗಳಿಗಾಗಿ ಹೆಚ್ಚು ಸಂಖ್ಯೆಯಲ್ಲಿ ಸಾಕುತ್ತಾರೆ. ನದಿಗಳಲ್ಲಿ ಅಲ್ಪಸ್ವಲ್ಪ ಮೀನುಗಳನ್ನು ಹಿಡಿಯುವರು.

ಕ್ರೋಮ್, ಕಲ್ಲಿದ್ದಲು, ತಾಮ್ರ, ಕಬ್ಬಿಣ, ಅಭ್ರಕ, ಉಪ್ಪು, ಸತು, ಸೀಸ, ಗಂಧಕ, ಸುಣ್ಣಕಲ್ಲು, ಪೆಟ್ರೋಲಿಯಂ ಎಣ್ಣೆ ಮತ್ತು ನೈಸರ್ಗಿಕ ಅನಿಲಗಳು ಸ್ವಲ್ಪಮಟ್ಟಿಗೆ ಸಿಕ್ಕುತ್ತವೆ. ಖನಿಜೋದ್ಯಮ ಅಭಿವೃದ್ಧಿಗೊಂಡಿಲ್ಲ. ಮಹೀಪಾರ್, ಸಾರೋಬಿ, ಮತ್ತು ನಂಗಾಹ್ರರ್ ಎಂಬುವು ಜಲವಿದ್ಯುಚ್ಛಕ್ತಿಯ ಕೇಂದ್ರಗಳಾಗಿರುವುವು.

ಈ ದೇಶದಲ್ಲಿ, ಬಟ್ಟೆ ತಯಾರಿಕೆ, ಉಣ್ಣೆ ಹಸನುಮಾಡುವುದು, ಜಮಖಾನ, ಕಂಬಳಿ, ಸಾಬೂನು, ಸಿಮೆಂಟ್, ಸಕ್ಕರೆ ತಯಾರಿಕೆ, ಚರ್ಮ ಹದಮಾಡುವುದು, ಹತ್ತಿಗಿರಣಿ, ಹಿಟ್ಟಿನಗಿರಣಿ, ಬೆಂಕಿಪೆಟ್ಟಿಗೆ ತಯಾರಿಕೆ, ಚಿಕ್ಕ ಯಂತ್ರೋಪಕರಣಗಳ ತಯಾರಿಕೆ, ವರ್ಕ್‍ಷಾಪುಗಳು ಮುಂತಾದ ಕೈಗಾರಿಕೋದ್ಯಮಗಳು ಕಂಡುಬರುತ್ತವೆ. ಇವು ಕಾಬೂಲ್, ಕಾಂದಾಹಾರ್, ಹೀರತ್, ಸೆರಾಜ್, ಗುಲ್‍ಬಹಾರ್, ಗಾರದೆ, ಖುಮ್ರಿ-ಮುಂತಾದ ಪಟ್ಟಣಗಳಲ್ಲಿ ಕೇಂದ್ರೀಕೃತವಾಗಿವೆ.

ದೇಶ ಪರ್ವತಮಯವಾಗಿರುವುದರಿಂದ ಸಾರಿಗೆ ಸಂಪರ್ಕಗಳು ಹೆಚ್ಚಾಗಿಲ್ಲ. ಖೈಬರ್, ಕೋಜಾಕ್, ಗೋಮಲ್, ಕುರ್ರಂ, ಟೋಚಿ ಕಣಿವೆಗಳ ಮೂಲಕ ದೇಶದ ನಾನಾಕಡೆಗಳಿಂದ ಪಶ್ಚಿಮ ಪಾಕಿಸ್ತಾನ, ಇರಾನ್, ರಷ್ಯ ದೇಶಗಳ ಕಡೆಗೆ ರಸ್ತೆ ಮಾರ್ಗಗಳಿವೆ. ಇತ್ತೀಚೆಗೆ ಸಾಲಾಂಗ್ ಸುರಂಗದ ಮೂಲಕ ಕಾಬೂಲಿನಿಂದ ಉತ್ತರ ಆಫ್ಘಾನಿಸ್ತಾನಕ್ಕೆ ಹತ್ತಿರದ ಮಾರ್ಗವನ್ನು ನಿರ್ಮಿಸಲಾಗಿದೆ. ರೈಲು ಮಾರ್ಗಗಳು ಅಭಿವೃದ್ಧಿಗೊಂಡಿಲ್ಲ. ವಿಮಾನ ಮಾರ್ಗಗಳು ಹೆಚ್ಚು ಉಪಯುಕ್ತವಾಗಿವೆ. ತುಪ್ಪಟ, ಜಮಖಾನಗಳು, ಹತ್ತಿ, ಹಣ್ಣು, ಚರ್ಮಗಳು, ಇಂಗು, ಹೆಚ್ಚಾಗಿ ರಫ್ತಾಗುತ್ತವೆ. ಬಟ್ಟೆ, ಪೆಟ್ರೋಲಿಯಂ ವಾಹನಗಳು, ಟೀ, ಯಂತ್ರೋಪಕರಣಗಳು, ವಿವಿಧ ಸಿದ್ಧವಸ್ತುಗಳು, ಆಹಾರ ಪದಾರ್ಥಗಳು ಆಮದಾಗುತ್ತವೆ.

ಜನಸಂಖ್ಯೆ 16 ದಶಲಕ್ಷ (1968). ಸುಮಾರು 2 ದಶಲಕ್ಷ ಜನ, 99% ಜನ ಇಸ್ಲಾಂ ಮತೀಯರು. ಪುಷ್ಪು ಮತ್ತು ಪರ್ಷಿಯನ್ ಭಾಷೆಗಳನ್ನಾಡುತ್ತಾರೆ. ಕಾಬೂಲ್ ನಗರ (ಜನಸಂಖ್ಯೆ 4.5 ಲಕ್ಷ) ರಾಜಧಾನಿ ಮತ್ತು ವಾಣಿಜ್ಯಕೇಂದ್ರ. (ಎ.ಕೆ.)

ಪ್ರಾಕ್ತನ ಚರಿತ್ರೆ : ಈ ಬಗ್ಗೆ ಸಂಶೋಧನೆಗಳು ಪ್ರಾರಂಭವಾಗಿರುವುದು ಕೇವಲ ಎರಡು ದಶಕಗಳಿಂದ ಈಚೆಗೆ ಮಾತ್ರ. ಉತ್ತರದ ಬ್ಯಾಕ್ಟ್ರೀಯ ಪ್ರದೇಶದಲ್ಲಿ, ಬಾಲ್ಕ್ ಮತ್ತು ಹೈಬಕ್ ನಗರಗಳ ಸಮೀಪದಲ್ಲಿ ಮೌಸ್ಟಿರೀಯನ್ ರೀತಿಯ ಶಿಲಾಯುಧಗಳು ದೊರಕಿವೆ. ಹೈಬಕ್ ಬಳಿಯ ಕಾರಕಾಮರ್ ಎಂಬ ಗುಹೆಯಲ್ಲಿ ಪೂರ್ವ ಶಿಲಾಯುಗದ ಉತ್ತರ ಭಾಗದಿಂದ ಹಿಡಿದು ಸೂಕ್ಷ್ಮ ಶಿಲಾಯುಗದವರೆಗಿನ ಸಾಂಸ್ಕøತಿಕ ಸ್ತರಗಳು ಬೆಳಕಿಗೆ ಬಂದಿವೆ. ಇವು ರಷ್ಯದ ಉeóÉ್ಬಕಿಸ್ತಾನದಲ್ಲಿ ಕಂಡುಬಂದಿರುವ ಪ್ರಾಗೈತಿಹಾಸಿಕ ಸಂಸ್ಕøತಿಗಳಂತೆಯೇ ಇವೆ.

ದಕ್ಷಿಣದ ಮುಂಡೀಗಕ್ ಎಂಬ ಸ್ಥಳದಲ್ಲಿ ನಡೆಸಿರುವ ಉತ್ಖನನದಿಂದ ಹರಪ್ಪ ಸಂಸ್ಕøತಿಗೂ ಹಿಂದೆ ವಾಯವ್ಯ ಭಾರತದಲ್ಲಿ ಪ್ರಚಲಿತವಾಗಿದ್ದ ಕುಲ್ಲ ಸಂಸ್ಕøತಿ ಇಲ್ಲಿಯವರೆಗೂ ಹರಡಿತ್ತೆಂಬ ವಿಷಯ ತಿಳಿದುಬಂದಿದೆ. ಕುಲ್ಲ ಸಂಸ್ಕøತಿಯಕಾಲ ಕ್ರಿ.ಪೂ. ಸು. 2,500ಕ್ಕಿಂತ ಮುಂಚೆ, ಇದಕ್ಕೂ ಹಿಂದೆ ಸುಮೇರಿಯ ಸಂಸ್ಕøತಿಯ ಪ್ರಭಾವವೂ ಇಲ್ಲಿ ಇದ್ದಿತೆಂಬ ಬಗ್ಗೆ ಕುರುಹುಗಳಿರುವುದರಿಂದ ಪ್ರಾಗೈತಿಹಾಸಿಕ ಯುಗದಲ್ಲಿ ಭಾರತ ಮತ್ತು ಪಶ್ಚಿಮ ಏಷ್ಯದ ಸಂಪರ್ಕ ಆಫ್ಘಾನಿಸ್ತಾನದ ಮೂಲಕ ನಡೆಯುತ್ತಿದ್ದಿರಬಹುದೆಂದು ಊಹಿಸಲಾಗಿದೆ. ಮುಂಡೀಗಕ್‍ನ ಮೇಲ್ಪದರಗಳಲ್ಲಿ ಬೂದು ಮತ್ತು ಕಂದು ಬಣ್ಣದ ಮಡಿಕೆಗಳನ್ನು ಉಪಯೋಗಿಸುತ್ತಿದ್ದ ಮೊದಲು ಕಬ್ಬಿಣದ ಯುಗದ ಸಂಸ್ಕøತಿಯ ಅವಶೇಷಗಳಿವೆ. ಉತ್ತರ ಆಫ್ಘಾನಿಸ್ತಾನದ ಬಾಲ್ಕ್ ಬಳಿಯೂ ಇದೇ ರೀತಿಯ ಕಬ್ಬಿಣ ಯುಗದ ನೆಲೆಯೊಂದು ಗುರುತಿಸಲ್ಪಟ್ಟಿದೆ. ಅಲ್ಲದೆ ರಷ್ಯದ ಅನೌನಲ್ಲಿ ಸಹಾ ಬೂದು ಬಣ್ಣದ ಮಡಿಕೆಗಳು ಪ್ರಚಲಿತವಾಗಿದ್ದ ಸ್ತರಗಳು ಕಂಡುಬಂದಿವೆ. ಇವೆಲ್ಲ ಪೂರ್ವ ಇರಾನೀ ಭಾಷೆಯನ್ನಾಡುತ್ತಿದ್ದ ಜನರಿಗೆ ಸಂಬಂಧಪಟ್ಟವೆಂದು ಅನೇಕರು ಊಹಿಸುತ್ತಾರೆ.

ವೇದಕಾಲದ ಆರ್ಯರು ಈ ಪ್ರದೇಶದಲ್ಲಿ ಇದ್ದರೆಂಬುದಕ್ಕೆ ಸಾಹಿತ್ಯಿಕ ಆಧಾರಗಳು ಸಾಕಷ್ಟು ದೊರಕಿದ್ದರೂ ಈ ಆರ್ಯ ಜನಾಂಗದ ನೆಲೆಗಳಾವುವೂ ಬೆಳಕಿಗೆ ಬಂದಿಲ್ಲದಿರುವುದು ಆಶ್ಚರ್ಯದ ವಿಷಯ. ಹಾಗೆಯೇ ಪರ್ಷಿಯಾದ ದೊರೆ ಡೇರಿಯಸ್‍ನ ಬೆಹಿಸ್ತನ್ ಶಾಸನಗಳಲ್ಲೂ ಗ್ರೀಕ್ ಚರಿತ್ರಕಾರ ಹೊರೊಡೋಟಸ್‍ನ ಬರೆಹಗಳಲ್ಲೂ ಆಫ್ಘಾನಿಸ್ತಾನ ಅಖಮೇನಿಯ ಸಾಮ್ರಾಜ್ಯದ ಭಾಗವಾಗಿದ್ದಿತೆಂಬುದೂ ಮತ್ತು ಅಲೆಕ್ಸಾಂಡರ್ ತನ್ನ ದಂಡಯಾತ್ರೆಯಲ್ಲಿ ಈ ಪ್ರದೇಶದ ಮೂಲಕ ಹಾಯ್ದುಹೋದನೆಂಬ ವಿಷಯ ನಿಶ್ಚಿತವಾಗಿದ್ದರೂ ಅಖಮೇನಿಯನ್ನರ ಅಥವಾ ಅಲೆಕ್ಸಾಂಡರನ ಕಾಲದ ಖಚಿತ ಅವಶೇಷಗಳೇನೂ ಇಲ್ಲಿ ಇನ್ನೂ ಕಂಡುಬಂದಿಲ್ಲ. ಆದರೆ ಕಾಬೂಲಿನ ಬಳಿಯ ಚಮನ್-ಇ-ಹಜೂರಿಯಲ್ಲಿ ಸಿಕ್ಕಿದ ನಾಣ್ಯಗಳು ಅಲೆಕ್ಸಾಂಡರನ ಕಾಲಕ್ಕಿಂತ ಹಿಂದಿನದೆಂದು ಮಾತ್ರ ತಿಳಿದುಬಂದಿದೆ. ಅಲೆಕ್ಸಾಂಡರನ ಅನಂತರ ಈ ದೇಶ ಮೌರ್ಯ ಸಾಮ್ರಾಜ್ಯಕ್ಕೆ ಒಳಪಟ್ಟಿತು. ಇದೇ ಕಾಲದಲ್ಲಿ ಬೌದ್ಧಧರ್ಮ ಇಲ್ಲಿ ಕಾಲಿಟ್ಟಿತು. ಈ ಕಾಲದ ಕುರುಹಾಗಿ ಗ್ರೀಕ್ ಮತ್ತು ಅರಾಮೇಯಿಕ್ ಭಾಷೆಗಳಲ್ಲಿ ಬರೆದಿರುವ ಅಶೋಕನ ಒಂದು ಶಾಸನ ಕಾಂದಹಾರ್ ಬಳಿಯೂ ದೊರಕಿವೆ. ಈ ಪ್ರದೇಶದಲ್ಲಿ ಮೌರ್ಯರ ಅನಂತರ ರಾಜ್ಯವಾಳಿದ ಬ್ಯಾಕ್ಟ್ರೀಯನ್ನರು ಮತ್ತು ಪಾರ್ಥಿಯನ್ನರ ಕಾಲದ ಅವಶೇಷಗಳು ಬಾಲ್ಕ್-ಖುಲ್ಮ್ ಮುಂತಾದ ಪುರಾತನ ದಿಬ್ಬಗಳಲ್ಲಿ ಹುದುಗಿಹೋಗಿವೆ. ಅದೇ ಪ್ರದೇಶದ ಬೆಗ್ರಾಮ್‍ನಲ್ಲಿ ಸಿಕ್ಕಿರುವ ನಾಣ್ಯಗಳು, ಮಡಕೆಗಳು, ಭಗ್ನ ವಾಸ್ತು ಕೃತಿಗಳು, ರೋಮ್ ಮತ್ತು ಈಜಿಪ್ಟಿನಲ್ಲಿ ತಯಾರಾದ ಗಾಜಿನ ವಸ್ತುಗಳು, ಚೀನದ ಜಾಡಿಗಳು ಮತ್ತು ಹಲವು ದಂತದ ಕೆತ್ತನೆಗಳು ಸಹಾ ಬ್ಯಾಕ್ಟ್ರೀಯನ್ ಮತ್ತು ಪಾರ್ಥಿಯನ್ನರ ಕಾಲಕ್ಕೆ ಸೇರಿದುವುಗಳು.

ಕ್ರಿಸ್ತಶಕದ ಆರಂಭಕಾಲದಲ್ಲಿ ಈ ಪ್ರದೇಶ ಕುಶಾನ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಈ ಕಾಲದ ಬಹುಮುಖ ಸಾಂಸ್ಕøತಿಕ ಬೆಳೆವಣಿಗೆಯ ಪ್ರತೀಕವಾಗಿ ಹಲವಾರು ವಾಸ್ತುಶಿಲ್ಪದ ಅವಶೇಷಗಳು ಆಫ್ಘಾನಿಸ್ತಾನದ ಬೇರೆ ಬೇರೆ ಭಾಗಗಳಲ್ಲಿ ಬೆಳಕಿಗೆ ಬಂದಿವೆ. ಬೌದ್ಧಧರ್ಮದಲ್ಲಿ ಮಹಾಯಾನ ಪಂಥದ ಆವಿಷ್ಕಾರವೂ ಭಾರತೀಯ ಮತ್ತು ಗ್ರೀಕ್ ಸಂಪ್ರದಾಯಗಳ ಸಮ್ಮಿಲನದಿಂದಾದ ಗಾಂಧಾರ ಸಂಪ್ರದಾಯವೆಂಬ ಒಂದು ವಿನೂತನ ಕಲಾಪದ್ಧತಿಯ ವಿಕಾಸವೂ ಆದದ್ದು ಈ ಕಾಲದಲ್ಲಿಯೇ. ಹಿಂದೂಕುಷ್ ಪರ್ವತ ಪ್ರಾಂತ್ಯದಲ್ಲಿನ ಸುರ್ಖ ಕೋತಲ್ ಎಂಬಲ್ಲಿ ಕಾನಿಷ್ಕನ ಶಾಸನವಿರುವ ದೇವಾಲಯವೊಂದನ್ನು ಅಗೆದು ತೆಗೆದಿದ್ದಾರೆ. ಇದು ಜರತುಷ್ಟ್ರ ಧರ್ಮಕ್ಕೆ ಸಂಬಂಧಿಸಿದ ಅಗ್ನಿ ದೇವಾಲಯ. ಇದರ ರಚನೆಯಲ್ಲಿ ಗ್ರೀಕ್ ಮತ್ತು ಪರ್ಷಿಯದ ವಾಸ್ತುಸಂಪ್ರದಾಯಗಳ ಪ್ರಭಾವ ಬಹುವಾಗಿದೆ. ಇದೇ ಸ್ಥಳದಲ್ಲಿ ಸಿಕ್ಕಿರುವ ಹದ್ದಿನ ಶಿಲ್ಪಗಳಿರುವ ದೇವಪೀಠ, ಮಥುರದ ಕಾನಿಷ್ಕನ ಶಿಲ್ಪಕ್ಕೆ ಹೋಲುವ ಭಗ್ನಶಿಲ್ಪಗಳು ಮತ್ತು ಒಂದು ಅಪೂರ್ವ ಶಿವವಿಗ್ರಹ, ಕುಶಾನ ಶಿಲ್ಪ ಸಂಪ್ರದಾಯದ ಒಳ್ಳೆಯ ಉದಾಹರಣೆಗಳು. ಡಾ. ಫೂಚೆ ಬಾಲ್ಕ್‍ನಲ್ಲಿ ನಡೆಸಿರುವ ಸಂಶೋಧನೆಯಲ್ಲಿ ಕೆಲವು ಬೌದ್ಧ ಸ್ತೂಪದ ಅವಶೇಷಗಳನ್ನು ಗುರುತಿಸಿದ್ದಾನೆ. ಈ ಸ್ತೂಪಗಳು ಹೊರನೋಟಕ್ಕೆ ಇಟ್ಟಿಗೆಯಲ್ಲಿ ಕಟ್ಟಿದಂತೆ ಕಂಡರೂ ಒಳಭಾಗ ಜೇಡಿಮಣ್ಣಿನ ದೊಡ್ಡ ಗುಡ್ಡೆಯಾಗಿದ್ದು ಮೇಲ್ಪದರ ಮಾತ್ರ ಹಸಿ ಇಟ್ಟಿಗೆಯದಾಗಿರುತ್ತದೆ. ಟೇಪೆ-ಇ-ರುಸ್ತುಮ್ ಎಂಬಲ್ಲಿ ಇವುಗಳಿಗಿಂತಲೂ ಚೆನ್ನಾಗಿ ಸಂರಕ್ಷಿಸಲ್ಪಟ್ಟಿರುವ ಸ್ತೂಪವೊಂದಿದೆ. ಇದು ಹುಯೆನ್‍ತ್ಸಾಂಗ್ ಸಂದರ್ಶಿಸಿದ ಪ್ರಸಿದ್ಧ ನವವಿಹಾರದ ಭಾಗವಾಗಿತ್ತು. ಈ ಸ್ತೂಪ 177' ಚಚ್ಚೌಕದ ಜಗಲಿಯ ಮೇಲೆ ಇದೆ. ಜಗಲಿಯ ನಾಲ್ಕು ಕಡೆಯೂ 36' ಪಾವಟಿಗೆಗಳಿದ್ದು, ಜಗುಲಿಯ ಇತರ ಭಾಗಗಳು ಅರ್ಧ ಕಂಬಗಳಿಂದ ಅಲಂಕೃತವಾಗಿದೆ. ಜಗಲಿಯ ಮೇಲೆ ಇರುವ ಅರ್ಧ ಗೋಳಾಕಾರದ ಸ್ತೂಪದ ಮೇಲೂ ಕಣ್ಮಟ್ಟದವರೆಗೆ ಇದೇ ರೀತಿಯ ಅಲಂಕಾರವಿದೆ. ರಚನಾ ರೀತಿಯಲ್ಲಿ ಬಾಲ್ಕ್‍ನ ಸ್ತೂಪಗಳ ಅನುಕರಣವಿದೆ. ಇದೇ ರೀತಿಯ ಸ್ತೂಪಗಳು ಗಾಂಧಾರ, ಸ್ವಾಟ್, ಕಪಿಶ ಮತ್ತು ನಗರಾಹಾರಗಳಲ್ಲೂ ಸಹ ಇವೆ. ಇವೆಲ್ಲ ಕುಶಾನ ಸ್ತೂಪ ರಚನಾ ಶೈಲಿಗೆ ಉದಾಹರಣೆಗಳು. ಆಫ್ಘಾನಿಸ್ತಾನದ ಹಲವು ಸ್ಥಳಗಳಲ್ಲಿ ಗಾಂಧಾರ ಶಿಲ್ಪಗಳು ದೊರಕಿವೆ. ಗ್ರೀಕ್ ಶಿಲ್ಪ ರೀತಿಯ ಸ್ವಾಭಾವಿಕತೆ, ಮನುಷ್ಯರ ಶಿಲ್ಪಗಳಲ್ಲಿ ಗ್ರೀಕರ ರೀತಿಯ ಮೈಮಾಟ, ಕೇಶಬಂಧ, ವಸ್ತ್ರವಿನ್ಯಾಸ ಮುಂತಾದುವು ಕಂಡುಬಂದರೂ ಶಿಲ್ಪವಸ್ತುವಿನಲ್ಲಿ ಮಾತ್ರ ಇದು ಅಚ್ಚ ಭಾರತೀಯ. ಹೆಚ್ಚಿನ ಶಿಲ್ಪಗಳೆಲ್ಲ ಬುದ್ಧನ ಜೀವನದ ವಿವಿಧ ಘಟನೆಗಳನ್ನೋ ಬೌದ್ಧ ಜಾತಕದ ಕಥೆಗಳನ್ನೋ ಚಿತ್ರಿಸುತ್ತವೆ. ಜಲಾಲಾಬಾದ್ ಬಳಿಯ ಹಡ್ಬದಲ್ಲಿ ಗಾಂಧಾರ ಶೈಲಿಯ ಶಿಲ್ಪಕೃತಿಗಳು ಬಹಳವಾಗಿ ಸಿಕ್ಕಿವೆ. ಅಲ್ಲದೆ ಕುಶಾನರ ಕಾಲದ ಕೆಲವು ಸ್ತೂಪಾವಶೇಷಗಳೂ ಗಾಂಧಾರ ಶಿಲ್ಪಶೈಲಿಯಲ್ಲೇ ತಯಾರಿಸಿದ ಸುದ್ದೆಮಣ್ಣಿನ ವಿಗ್ರಹಗಳೂ ಇಲ್ಲಿ ದೊರಕಿವೆ.

ಉತ್ತರ ಆಫ್ಘಾನಿಸ್ತಾನದ ಹೈಬಕ್ ನಗರದ ಬಳಿ ಒಂದೇ ಬಂಡೆಯಲ್ಲಿ ಕೊರೆದ ಒಂದು ಸ್ತೂಪವೂ ಹಲವು ಬೌದ್ಧಗುಹೆಗಳೂ ಇವೆ. ಇವು ಕ್ರಿ.ಶ. 4-5ನೆಯ ಶತಮಾನಕ್ಕೆ ಸೇರಿದುವು. ಇಲ್ಲಿಯ ಗುಹೆಗಳು ಚಚ್ಚೌಕವಾಗಿದ್ದರೂ ಛಾವಣಿಯ ಭಾಗ ಮಾತ್ರ ಗುಮ್ಮಟದಂತೆ ಕೆತ್ತಲ್ಪಟ್ಟಿದೆ. ಇದು ಸಸ್ಸಾನೀಯ ವಾಸ್ತುಶೈಲಿಯ ಅನುಕರಣೆಯೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಡಾ. ಫೂಚೆ ಎಲ್ಲೋರದ ಭಾರತೀಯ ವಾಸ್ತುಶೈಲಿಯ ಛಾಯೆ ಕೂಡ ಈ ಬಂಡೆಗೆತ್ತನೆಗಳಲ್ಲಿವೆಯೆಂದು ಊಹಿಸಿದ್ದಾನೆ. ಜಲಾಲಾಬಾದ್ ಬಳಿಯ ದರುತಾದಲ್ಲಿ ಇದೇ ಬಗೆಯ ಬಂಡೆಯಲ್ಲಿ ಕೊರೆದ ಗುಹೆಗಳಿವೆ.

ಕಾಬೂಲಿನಿಂದ ಸುಮಾರು 80 ಮೈಲು ವಾಯುವ್ಯಕ್ಕಿರುವ ಬಾಮಿಯಾನ್‍ನಲ್ಲಿ ಕ್ರಿ.ಶ. 5-6ನೆಯ ಶತಮಾನದ ಅನಂತರದ ಬೌದ್ಧಶಿಲ್ಪಗಳಿವೆ. ಇವುಗಳಲ್ಲಿ ಕಮರಿಯ ಪಕ್ಕದ ದೊಡ್ಡ ಬಂಡೆಯಲ್ಲಿ ಕೊರೆದಿರುವ ಎರಡು ಬುದ್ಧವಿಗ್ರಹಗಳು ಮುಖ್ಯವಾದವು. ಒಂದು 175 ಎತ್ತರವಿದ್ದು ಪ್ರಪಂಚದಲ್ಲೇ ಅತಿ ದೊಡ್ಡ ವಿಗ್ರಹವಾಗಿದೆ. ಇನ್ನೊಂದು 120' ಎತ್ತರವಿದೆ. ಈ ಶಿಲ್ಪಗಳು ಸಸ್ಸಾನೀಯರಿಂದ ಪ್ರಭಾವಿತವಾದ ನವೀಕೃತ ಗಾಂಧಾರ ಶೈಲಿಯಲ್ಲಿವೆ. ಶಿಲ್ಪಗಳ ಪಕ್ಕದಲ್ಲಿ ವರ್ಣಚಿತ್ರಗಳೂ ಇವೆ. ಸಸ್ಸಾನೀಯರು, ಹೆಫ್ತಲೀಯರು ಮತ್ತು ಶಾಹೀ ಅರಸರ ಕಾಲದ ಅವಶೇಷಗಳು ಫೋಂಡುಕೀಸ್ತಾನದಲ್ಲಿ ಬಹಳವಾಗಿ ಸಿಕ್ಕಿವೆ. ಬಾಮಿಯನ್ ಬಳಿಯ ಜೋಹಕ್ ಎಂಬಲ್ಲಿರುವ ಇಟ್ಟಿಗೆಯ ಕೋಟೆ ಇವುಗಳಲ್ಲಿ ಮುಖ್ಯವಾದುದು. ಈ ಕಾಲಕ್ಕೆ ಸೇರಿದ ಕೆಲವು ಹಿಂದೂ ವಿಗ್ರಹಗಳು ಈ ಪ್ರಾಂತ್ಯದಲ್ಲಿ ದೊರಕಿವೆ. ಕಾಬೂಲಿನಲ್ಲಿ ಒಂದು ಹಿಂದೂ ದೇವಾಲಯವೂ ಇದೆ. ಕ್ರಿ. ಶ. 7ನೆಯ ಶತಮಾನದ ಹೊತ್ತಿಗೆ, ಆಫ್ಘಾನಿಸ್ತಾನಕ್ಕೆ ಇಸ್ಲಾಮಿನ ಸಂಪರ್ಕ ಒದಗಿದ್ದರೂ ಅದು ಪೂರ್ವವಾಗಿ ಆ ಧರ್ಮೀಯರಿಗೆ ಒಳಪಟ್ಟಿದ್ದು ಕ್ರಿ.ಶ. 10ನೆಯ ಶತಮಾನದಲ್ಲಿ. ಸಹಜವಾಗಿ ಆ ಕಾಲದಿಂದ ಈಚಿನ ಕಟ್ಟಡಗಳು ಬೇರೆಯ ವರ್ಗಕ್ಕೆ ಸೇರುತ್ತವೆ. ಕಾಬೂಲ್ ಬಳಿಯ ಲಷ್ಕರೀ ಬಜಾರಿನಲ್ಲಿ ಘಜಿû್ನ ಮಹಮ್ಮದನ ಕಾಲದ (ಕ್ರಿ.ಶ. 998-1030) ಕೋಟೆ, ಅರಮನೆ, ಮಸೀದಿ ಮದರಸ ಮತ್ತು ಗೋರಿಗಳು ಬೆಳಕಿಗೆ ಬಂದಿವೆ. ಘಜಿû್ನ ವಾಸ್ತುಶೈಲಿ ಇಸ್ಲಾಮಿ-ಅದರಲ್ಲೂ ಪರ್ಷಿಯ, ಸಂಪ್ರದಾಯಕ್ಕೆ ಸೇರಿದುದು. ಆದರೂ ಆ ಕಾಲದ ಕೆಲವು ಅಮೃತಶಿಲೆಯ ಕಟ್ಟಡಗಳು, ಅರಮನೆಯಲ್ಲಿ ಅಲಂಕರಣಕ್ಕಾಗಿ ಮಾಡಿರುವ ಸುದ್ದೆಮಣ್ಣಿನ ಶಿಲ್ಪಗಳು ಮತ್ತು ವರ್ಣಚಿತ್ರಗಳು, ಭಾರತ ಮತ್ತು ಮಧ್ಯಏಷ್ಯಾ ಕಲಾಸಂಪ್ರದಾಯಗಳ ಪ್ರಭಾವವನ್ನು ಬಿಂಬಿಸುತ್ತವೆ. ಘೋರಿ ಅರಸರ ಕಾಲದ ಭಗ್ನಕಟ್ಟಡಗಳು ಘೋರ್‍ನಲ್ಲಿವೆ. ಕಾಬೂಲ್ ನಗರದಲ್ಲಿ, ಸುಂದರ ತೋಟದ ಮಧ್ಯದಲ್ಲಿರುವ ಬಾಬರ್‍ನ ಸಮಾಧಿ ಮೊಗಲ ಅರಸರ ಕಾಲದ ಉತ್ತಮ ಕಟ್ಟಡ. ಹಾಗೆಯೇ ಅಲ್ಲಿನ ಲೋಹದ ಗುಮ್ಮಟವಿರುವ ತೈಮೂರನ ಸಮಾಧಿಯೂ ಪ್ರಖ್ಯಾತವಾದುದು. ಆಫ್ಘಾನಿಸ್ತಾನದ ಹೆರಾತ್ ನಗರ ಮುಸಲ್ಮಾನ ಸಂಸ್ಕøತಿಯ ಕೇಂದ್ರ. ಮಹಮದ್ ಘೋರಿ ಕಟ್ಟಿಸಿದ ಇಲ್ಲಿಯ ಮಸೀದಿ ಬಹಳ ದೊಡ್ಡ ಕಟ್ಟಡ. ಇದೇ ಊರಿನ ಅರ್ಗ್ ಕೋಟೆ, ಮುಸಲ್ಲಾ ಕಾಲೇಜು, ಜವಹರ್‍ಶದ್‍ನ ಸಮಾಧಿ, ಹುಸೇನ್ ಬೈಖರಾನ ಮದರಸ, ಪ್ರಸಿದ್ಧ ಮುಸಲ್ಮಾನ ಕವಿ ಅಬ್ದುಲ್ಲ ಅಸ್ಸರಿಯ ಸಮಾಧಿ ಇವು ಕ್ರಿ.ಶ. 13ರಿಂದ 18ನೆಯ ಶತಮಾನಕ್ಕೆ ಸೇರಿದ ಇತರ ಮುಖ್ಯ ವಾಸ್ತುಕೃತಿಗಳು.

ಇತ್ತೀಚಿನವರೆಗೆ ಆಫ್ಘಾನಿಸ್ತಾನದಲ್ಲಿ ಪುರಾತತ್ತ್ವಸಂಶೋಧನೆಯ ಬಗ್ಗೆ ಫ್ರೆಂಚ್ ಸಂಸ್ಥೆಯೊಂದು ಏಕಸ್ವಾಮ್ಯವನ್ನು ಹೊಂದಿದ್ದಿತಾದ್ದರಿಂದ ಆ ದೇಶದ ಬಗ್ಗೆ ಹೆಚ್ಚು ಸಾಹಿತ್ಯವೆಲ್ಲವೂ ಫ್ರೆಂಚ್ ಭಾಷೆಯಲ್ಲಿದೆ. ಪೂಚೆ, ರೀನೆಗ್ರಾಸೆ, ಜೆಮೆಯೂನೀ, ಡಿ ಶ್ಲುಂಬರ್ಗರ್ ಮುಂತಾದವರು ಆಫ್ಘಾನಿಸ್ತಾನದ ಪುರಾತತ್ತ್ವಜ್ಞರಲ್ಲಿ ಆದ್ಯರು. ಭೂಖನನಗಳಲ್ಲಿ ಸಿಕ್ಕಿರುವ ಹೆಚ್ಚು ಅವಶೇಷಗಳು ಪ್ಯಾರಿಸ್ಸಿನ ಮ್ಯೂಸಿಯಂ ಮತ್ತು ಕಾಬೂಲ್ ವಸ್ತುಸಂಗ್ರಹಾಲಯಗಳಲ್ಲಿವೆ. (ಎಸ್.ಎನ್.)

ಬುಡಕಟ್ಟುಗಳು : ಮುಖ್ಯವಾಗಿ ಆಫ್ಘನರು, ಪರ್ಷಿಯನ್ನರು, ತುರ್ಕಿಸ್ತಾನದವರು, ಮಂಗೋಲರು ಮತ್ತು ಹಿಂದೂಕುಷ್‍ನ ಆರ್ಯರು ಇಲ್ಲಿ ವಾಸಮಾಡುತ್ತಾರೆ. ರಾಜಕೀಯವಾಗಿ ಪ್ರಬಲರೆಂದರೆ ಜನಸಂಖ್ಯೆಯ 60% ಇರುವ ಆಫ್ಘನ್ನರು. ಅವರ ಬಣ್ಣ ಹಸನಾಗಿದ್ದು ಮೂಗು ಉಬ್ಬಾಗಿದೆ. ಅವರ ನಿಜವಾದ ಹೆಸರು ಫಕ್ತೂನ್ (ಇದರಿಂದಲೇ ಪಠಾಣ ಬಂದಿದೆ). ಇವರು ಪುಷ್ತು ಭಾಷೆಯನ್ನು ಬಳಸುತ್ತಾರೆ. ಮಹ್ಮಂದ್, ಮಂಗಲ್, ವಜೀರಿಗಳೇ ಆದಿಯಾದ ಅನೇಕ ಗುಂಪುಗಳು ಈ ವರ್ಗಕ್ಕೇ ಸೇರುತ್ತವೆ. ಸುಮಾರಾಗಿ ಎಲ್ಲರೂ ಮುಸಲ್ಮಾನ ಸುನ್ನಿ ಪಂಗಡದವರು. ಇವರಲ್ಲಿ ಬಹುಮಂದಿ ಪೂರ್ಣ ಅಲೆಮಾರಿಗಳು. ಎಲ್ಲರೂ ಯೋಧವಿದ್ಯೆಯಲ್ಲಿ ನಿಪುಣರು. ಗುಂಪಿನ ನಾಯಕನಿಗೆ ಖಾನ್ ಎಂದು ಹೆಸರು. ಮುಖ್ಯಸ್ಥನನ್ನು ಮಾಲಿಕ ಎನ್ನುತ್ತಾರೆ. ಮಾಲಿಕನನ್ನೂ ಖಾನನನ್ನು ರಾಜನೇ ನೇಮಿಸುತ್ತಾನೆ. ಅವನ ಪ್ರತಿನಿಧಿಯಾಗಿ ಇವರು ಪಾಳೆಯದ ಆಡಳಿತ ನಡೆಸುತ್ತಾರೆ. ವರ್ಷಂಪ್ರತಿ ಇವರು ಅರಸನಿಗೆ ಸಲ್ಲಬೇಕಾದ ಕಪ್ಪವನ್ನು ಕೊಡಬೇಕಲ್ಲದೆ ನಾಡಿನ ಸಂರಕ್ಷಣೆಗೆ ನೆರವಾಗಬೇಕು. ಪಾರಸಿ ಮತ್ತು ಅರಬ್ಬೀ ಜನರಿದ್ದ ಕಡೆಗಳಲ್ಲೆಲ್ಲ ಈಗ ತಜಕರಿದ್ದಾರೆ. ಸಾಮಾನ್ಯವಾಗಿ ಅಫ್ಘನ್ನರ ಯಜಮಾನ್ಯದಲ್ಲಿ ಉಳುಮೆ ಮಾಡುವುದೇ ಒಂದು ವೃತ್ತಿ. ಇವರು ಸುನ್ನಿ ಪಂಗಡದವರಾಗಿದ್ದು ಆಫ್ಘನರ ಆಡಳಿತ ಭಾಷೆಯಾದ ಪಾರಸಿಯನ್ನು ಬಳಸುತ್ತಾರೆ. ಇವರಲ್ಲದೆ ಬಹುಮಂದಿ ತುರುಕರು ಆಫ್ಘಾನಿಸ್ತಾನದಲ್ಲಿದ್ದಾರೆ. ಮಂಗೋಲ್ ಬುಡಕಟ್ಟಿಗೆ ಸೇರಿದ ಹಸ್ಸಾರರು ದೃಢಕಾಯರಾಗಿದ್ದು ಊಳಿಗದ ಕೆಲಸದಲ್ಲಿ ತೊಡಗಿದ್ದಾರೆ. ಇವರು ಷಿಯ ಪಂಗಡದವರು. ಭಾಷೆ ಪಾರಸಿ. ಇರಾನಿ ಪಂಗಡಕ್ಕೆ ಸೇರಿದ ಆರ್ಯರು ಕಾಬೂಲಿನ ಈಶಾನ್ಯದಲ್ಲಿದ್ದಾರೆ. ಅಮೀರ್ ಅಬ್ದುರ್ ರಹಮಾನನು ಇವರನ್ನು ಮುಸ್ಲಿಮರಾಗಿ ಮತಾಂತರಗೊಳಿಸಿದ. ಆಫ್ಘಾನಿಸ್ತಾನದಲ್ಲಿ ಅನೇಕ ಸಣ್ಣಪುಟ್ಟ ಜನರ ಬುಡಕಟ್ಟುಗಳಿವೆ.

ಚರಿತ್ರೆ : ಪೂರ್ವದಲ್ಲಿ ಭಾರತ, ಪಶ್ಚಿಮದಲ್ಲಿ ಪರ್ಷಿಯ ಮತ್ತು ಇತರ ಪಶ್ಚಿಮ ಏಷ್ಯ ದೇಶಗಳು, ಉತ್ತರಕ್ಕೆ ಚೀನ ಮತ್ತು ಮಧ್ಯ ಏಷ್ಯ, ಇವುಗಳ ನಡುವೆ ಇರುವುದರಿಂದ ಪ್ರಾಚೀನಕಾಲದಿಂದಲೂ ಈ ಪ್ರದೇಶ ಚಾರಿತ್ರಿಕ ಪ್ರಾಮುಖ್ಯ ಪಡೆದಿದೆ. ಭಾರತದಿಂದ ಪರ್ಷಿಯಕ್ಕೆ ಹೋಗಬೇಕಾದರೆ ಅಥವಾ ಚೀನಕ್ಕೆ ಹೋಗಬೇಕಾದರೆ, ಈ ಪರ್ವತಮಯ ದೇಶದ ಕಣಿವೆಗಳ ಮುಖಾಂತರ ಹೋಗಬೇಕು. ಪರ್ಷಿಯದ ಪ್ರಸ್ಥಭೂಮಿಯ ಪೂರ್ವಭಾಗವನ್ನು ಆಫ್ಘಾನಿಸ್ತಾನ ಆಕ್ರಮಿಸಿರುವುದರಿಂದ ಅವೆರಡು ದೇಶಗಳ ಸಂಪರ್ಕ ಸುಲಭ. ಆದ್ದರಿಂದ ಇರಾನಿನ ಸಂಸ್ಕøತಿ ಆಫ್ಘನ್ನರ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಭಾರತ, ಚೀನಾ ಸಂಸ್ಕøತಿಗಳೂ ಗಮನಾರ್ಹವಾದ ಪ್ರಭಾವ ಬೀರಿವೆ.

ಆಫ್ಘಾನಿಸ್ತಾನದ ಇತಿಹಾಸ ಇರಾನಿನ ಅಕೇಮೆನಿಡೇ ದೊರೆಗಳ (ಕ್ರಿ.ಪೂ. 550-330) ಕಾಲದಿಂದ ಪ್ರಾರಂಭವಾಗುತ್ತದೆ. (ನೋಡಿ- ಅಕೇಮೆನಿಡೇ). ಕೈರಸ್ ಆಫ್ಘಾನಿಸ್ತಾನದ ಅನೇಕ ಪ್ರದೇಶಗಳನ್ನು ಗೆದ್ದ. ಮೊದಲನೆಯ ಡೇರಿಯಸ್ ಆಡಳಿತವನ್ನು ಭದ್ರಪಡಿಸಿದ. ಅಲೆಕ್ಸಾಂಡರ್ ಬಂದು ಪರ್ಷಿಯವನ್ನು ಗೆಲ್ಲುವವರೆಗೂ (ನೋಡಿ- ಅಲೆಕ್ಸಾಂಡರ್-ಮಹಾಶಯ) ಅದು ಅಕೇಮೆನಿಡೇ ದೊರೆಗಳ ಆಳ್ವಿಕೆಗೇ ಸೇರಿತ್ತು. ಅಲೆಕ್ಸಾಂಡರನ ಮರಣಾನಂತರ ಅದು ಸೆಲ್ಯೂಕಸ್ ದೊರೆಗಳ ಆಧೀನಕ್ಕೆ ಬಂದಿತು. ಮೌರ್ಯ ದೊರೆಯಾದ ಚಂದ್ರಗುಪ್ತ ಸು. ಕ್ರಿ. ಪೂ. 305ರಲ್ಲಿ ಸೆಲ್ಯೂಕಸ್‍ನನ್ನು ಸೋಲಿಸಿದ ಮೇಲೆ, ಆಫ್ಘಾನಿಸ್ತಾನದ ಪರೋಪಮೀಸಡೆ ಮತ್ತು ಅರಕೋಸಿಯ ಪ್ರಾಂತ್ಯಗಳು ಮೌರ್ಯ ಸಾಮ್ರಾಜ್ಯಕ್ಕೆ ಸೇರಿಹೋದುವು. ಅಶೋಕನ ಕಾಲದಲ್ಲೂ ಈ ಪ್ರದೇಶಗಳು ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದುವೆನ್ನುವುದಕ್ಕೆ ಶಾಸನಗಳ ಆಧಾರವಿದೆ. ಬೌದ್ಧಧರ್ಮ ಅಲ್ಲಿಗೂ ಹರಡಿತ್ತು. ಆದರೆ ಕೊಂಚ ಕಾಲದಲ್ಲೆ ಅದು ಕ್ಷೀಣಿಸಿತು. ಅನಂತರ ಸಿಥಿಯನ್ನರು, ಪಾರ್ಥಿಯನ್ನರು, ಯೂಚಿ, ಕುಶಾನರು ಮುಂತಾದ ನಾನಾ ಜನರ ದಾಳಿಗೆ ಸಿಕ್ಕಿ ದೇಶ ಶಾಂತಿಯನ್ನು ಕಾಣಲೇ ಇಲ್ಲ. ಒಂದೇ ದೇಶವಾಗಿ ಉಳಿಯಲೂ ಇಲ್ಲ. ಏಳನೆಯ ಶತಮಾನದಲ್ಲಿ ಮುಸ್ಲಿಮರು ಪಶ್ಚಿಮದ ಪ್ರಾಂತ್ಯಗಳನ್ನಾವರಿಸಿಕೊಂಡಾಗಲೇ ಕೊಂಚ ಸ್ಥಿರವಾದ ಧರ್ಮ ಜನರಲ್ಲಿ ಹರಡಿತೆನ್ನಬಹುದು. ಆಗ ಸಣ್ಣ ಸಣ್ಣ ಮುಸ್ಲಿಂ ರಾಜ್ಯಗಳು ಸ್ಥಾಪಿತವಾದುವು. ಮುಸ್ಲಿಂ ಧರ್ಮ ಕೊಂಚ ಕೊಂಚವಾಗಿ ಹರಡತೊಡಗಿತು. ಈ ಮುಸ್ಲಿಂ ರಾಜ್ಯಗಳಲ್ಲಿ ಅತ್ಯಂತ ಪ್ರಖ್ಯಾತ ರಾಜ್ಯ, ಫಜ್ನಿಯಿಂದಾಳಿದ ಸುಲ್ತಾನ್ ಮಹಮೂದನದು (11ನೆಯ ಶತಮಾನ). ಇವನು ಪಶ್ಚಿಮದ ಖುರಾಸಾನ್‍ನಿಂದ ಪೂರ್ವದಲ್ಲಿ ಪಂಜಾಬಿನವರೆಗೂ ರಾಜ್ಯವನ್ನು ವಿಸ್ತರಿಸಿದ. 1152ರಲ್ಲಿ ಘೋರ್ ಸುಲ್ತಾನ ಫಜ್ನಿ ರಾಜ್ಯವನ್ನು ವಶಪಡಿಸಿಕೊಂಡ. ಮುಂದೆ ಆಫ್ಘಾನಿಸ್ತಾನ್ ಚಂಘೇಸ್‍ಖಾನನ ದಾಳಿಗೆ ತುತ್ತಾಯಿತು. ಅವನನ್ನು ಪ್ರತಿಭಟಿಸಿದವರೆಲ್ಲ, ಹೆಂಗಸರು ಮಕ್ಕಳೆನ್ನದೆ, ಮಂಗೋಲರ ಕತ್ತಿಗೆ ತುತ್ತಾದರು. ನಗರಗಳು ನೆಲಸಮವಾದುವು. ಅವನ ವಂಶಜನಾದ ಬಾಬರ್, ಉತ್ತರ ಹಿಂದೂಸ್ತಾನವನ್ನು ಗೆಲ್ಲುವ ಪ್ರಯತ್ನಕ್ಕೆ ಕಾಬೂಲನ್ನು ಆಧಾರಸ್ಥಾನವನ್ನಾಗಿ ಮಾಡಿಕೊಂಡ (16ನೆಯ ಶತಮಾನ). ಈ ಕಾಲದಲ್ಲಿ ಆಫ್ಘಾನಿಸ್ತಾನದ ಎಲ್ಲ ತಂಡಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದವು. ಹೊಸದಾಗಿ ಅಲ್ಲಿ ಬಂದು ನೆಲೆಸಿದವರೂ ಮುಸಲ್ಮಾನರಾಗಿದ್ದರು.

ಹೀಗೆ ಆಫ್ಘಾನಿಸ್ತಾನದಲ್ಲಿ ಒಂದೇ ಮತಧರ್ಮ ಹರಡಿದುದು, ಅಲ್ಲಿ ಐಕ್ಯ ಬೆಳೆಯುವುದಕ್ಕೆ ಸಹಕಾರಿಯಾಯಿತು. ಇಲ್ಲಿಯವರೆಗೆ ದೇಶ, ಇರಾನಿಯನ್, ಫಜ್ನಿವಿಡ್, ಮಂಗೋಲಿಯನ್ ಅಥವಾ ಮೊಗಲ್ ರಾಜ್ಯಗಳ ಒಂದು ಅಂಗವಾಗಿತ್ತು. 1747ರಲ್ಲಿ ಪರ್ಷಿಯದ ದೊರೆ ನಾದಿರ್‍ಷಾ ಕಾಲವಾದ ಮೇಲೆ, ಅವನ ಅಂಗರಕ್ಷಕಪಡೆಯ ದಳಪತಿಯಾಗಿದ್ದ ಅಹಮದ್‍ಷಾ ಅಬ್ದಾಲಿ ಆಫ್ಘಾನಿಸ್ತಾನದ ದೊರೆಯಾಗಿ ದುರಾನಿ ವಂಶವನ್ನು ಸ್ಥಾಪಿಸಿದ. ಸ್ವತಂತ್ರ ಆಫ್ಘಾನಿಸ್ತಾನದ ಚರಿತ್ರೆ ಆ ವರ್ಷ ಪ್ರಾರಂಭವಾಯಿತೆನ್ನಬಹುದು.

ಅಹಮ್ಮದ್‍ಷಾ ಹಿಂದೂಸ್ಥಾನದ ದಂಡಯಾತ್ರೆಯನ್ನು ಕೈಗೊಂಡು 3ನೆಯ ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸಂಪೂರ್ಣವಾಗಿ ಸೋಲಿಸಿದ. ಆದರೆ ಹಿಂದೂಸ್ಥಾನದಲ್ಲಿ ನೆಲಸಲು ಇಷ್ಟವಿಲ್ಲದೆ ಹಿಂತಿರುಗಿದ. ಆದರೂ ಪಂಜಾಬಿನಲ್ಲಿ ನೆಲೆಸಿದ ದುರಾನಿಯವರನ್ನು ರಣಜಿತ್‍ಸಿಂಗ್ ಓಡಿಸಿ ಸಿಖ್ ರಾಜ್ಯವನ್ನು ಸ್ಥಾಪಿಸಬೇಕಾಯಿತು. 1801ರಲ್ಲಿ eóÁಮನ್‍ಷಾ ಪದಚ್ಯುತನಾಗಿ ಷಾಷೂಜ ಅಮೀರನಾದ. ಬರಕ್ಸೆ ಕುಲದವರು ರಾಜಕೀಯದಲ್ಲಿ ಪ್ರಭಾವಕ್ಕೆ ಬಂದರು. ಬ್ರಿಟಿಷ್ ಸರ್ಕಾರ ಷಾ ಷೂಜನ ಸ್ನೇಹ ಬಯಸಿತು. ಆದರೆ 1810ರಲ್ಲಿ ಷಾ ಷೂಜ ಪದಚ್ಯುತನಾಗಿ ಬ್ರಿಟಿಷರ ರಕ್ಷಣೆಯಲ್ಲಿದ್ದ. ಮತ್ತೆ ಸಿಂಹಾಸನವನ್ನು ಪಡೆಯಲು ಗುಟ್ಟಾಗಿ ಯತ್ನಿಸುತ್ತಿದ್ದ. 30 ವರ್ಷಗಳ ಕಾಲ ಆಫ್ಘಾನಿಸ್ತಾನದ ಬರಕ್ಸೆ ಕುಲದವರೂ ರಣಜಿತ್‍ಸಿಂಗ್‍ನೂ ದ್ವೇಷದಿಂದ ಪರಸ್ಪರ ಯುದ್ಧ ಮಾಡುತ್ತಿದ್ದು ರಣಜಿತ್‍ಸಿಂಗ್ ಮುಲ್ತಾನ್, ಪೆಷಾವರ್ ಮತ್ತು ಕಾಶ್ಮೀರ್ ಪ್ರದೇಶಗಳನ್ನು ವಶಮಾಡಿಕೊಂಡ. ಆಫ್ಘಾನಿಸ್ತಾನದ ಪರಸ್ಪರ ವೈಷಮ್ಯಗಳೇ ರಣಜಿತ್‍ಸಿಂಗನಿಗೆ ಅನುಕೂಲವಾಯಿತು. ಬರಕ್ಸೆ ಕುಲದ ಪ್ರಭಾವವನ್ನು ಅನೇಕ ಪಾಳೆಯಗಾರರು ಸಹಿಸಲಿಲ್ಲ. ಅಂತರ್ಯುದ್ಧಕ್ಕೆ ಅವಕಾಶವಾಯಿತು. ಬರಕ್ಸೆ ಕುಲದ ದೋಸ್ತ್ ಮಹಮ್ಮದ್ ಪ್ರಾಬಲ್ಯಕ್ಕೆ ಬಂದ. ಪರ್ಷಿಯ ದೇಶ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ನೀತಿಯನ್ನು ಅನುಸರಿಸುತ್ತಿರುವುದು ರಷ್ಯನ್ನರ ಬೆಂಬಲದಿಂದ ಎಂಬುದು ವ್ಯಕ್ತವಾಯಿತು. ದೋಸ್ತ್ ಮಹಮ್ಮದ್ ಬ್ರಿಟಿಷರನ್ನು ನಂಬದೆ ಇದ್ದರೂ ಅವರ ಸಹಾಯವನ್ನು ಅಪೇಕ್ಷಿಸಿ ಸಂಧಿ ಪ್ರಸ್ತಾಪ ಮಾಡಿದ. ಆದರೆ ಲಾರ್ಡ್ ಆಕ್ಲಂಡ್ ಕಾಬೂಲಿನಲ್ಲಿ ತನ್ನ ಕೈಗೊಂಬೆಯ ರಾಜನನ್ನು ನೇಮಿಸಿದರೆ ಬ್ರಿಟಿಷರ ಪ್ರಾಬಲ್ಯ ಹೆಚ್ಚುವುದೆಂದು ಯೋಚಿಸಿ ಷಾ ಷೂಜನನ್ನು ಮತ್ತೊಮ್ಮೆ ಅಮೀರನನ್ನಾಗಿ ಘೋಷಿಸಿದ. ದೋಸ್ತ್ ಮಹಮ್ಮದ್ ತನ್ನ ನಡತೆಯಿಂದ ಶೂರನೆಂಬುವುದನ್ನು ಸ್ಪಷ್ಟಪಡಿಸಿ ಬ್ರಿಟಿಷರಿಗೆ ಶರಣಾಗತನಾದ. ಈ ಹೊಸ ಆಡಳಿತವನ್ನು ರಕ್ಷಿಸಲು ಕಾಬೂಲಿನಲ್ಲಿ ಒಂದು ಬ್ರಿಟಿಷ್ ಸೈನ್ಯ ನೆಲೆಸಿತು. ಲಾರ್ಡ್ ಆಕ್ಲಂಡ್‍ನ ಆಫ್ಘನ್ ನೀತಿ ಎಲ್ಲರಿಂದಲೂ ಖಂಡಿಸಲ್ಪಟ್ಟಿದೆ. ರಾಜಕೀಯ ದೃಷ್ಟಿಯಿಂದ ಆಫ್ಘನ್ ಯುದ್ಧ ದುರ್ದೈವವೆಂದೂ ನೈತಿಕ ದೃಷ್ಟಿಯಿಂದ ಅನ್ಯಾಯವೆಂದೂ ಒಪ್ಪಿಕೊಳ್ಳಬೇಕು. ಆದರೆ 1837ರಲ್ಲಿ ಲಾರ್ಡ್ ಆಕ್ಲಂಡ್‍ನಿಗಿದ್ದ ಕ್ಲಿಷ್ಟ ಸಮಸ್ಯೆಗಳನ್ನು ವಿಮರ್ಶಿಸಿದರೆ ಅವನ ಆ ನೀತಿ ಹೇಗೆ ಅನಿವಾರ್ಯವಾಗಿತ್ತೆಂಬುದು ಗೋಚರವಾಗುತ್ತದೆ. ಮುಖ್ಯವಾಗಿ ಏಷ್ಯದಲ್ಲಿ ರಷ್ಯನ್ನರ ಪ್ರಭಾವವೇ ಈ ನೀತಿಗೆ ಹಿನ್ನೆಲೆ. 1809 ಮತ್ತು 1814ರಲ್ಲಿ ಮಾಡಿಕೊಂಡಿದ್ದ ಟೆಹರಾನ್ ಒಪ್ಪಂದದಂತೆ ಬ್ರಿಟಿಷರು ಪರ್ಷಿಯ ದೇಶಕ್ಕೆ ಯಾವ ಯೂರೋಪಿಯನ್ನರ ಆಕ್ರಮಣ ವಿರುದ್ಧವಾಗಿಯಾದರೂ ಸಹಾಯ ಮಾಡಬೇಕಾಗಿತ್ತು. 1826ರಲ್ಲಿ ರಷ್ಯನರು ಪರ್ಷಿಯನ್ನರ ಮೇಲೆ ಯುದ್ಧ ಮಾಡಿದಾಗ ಪರ್ಷಿಯನ್ನರು ಬ್ರಿಟಿಷರ ಸಹಾಯವನ್ನು ಅಪೇಕ್ಷಿಸಿದರು. ಆದರೆ ಬ್ರಿಟಿಷರು ಸಹಾಯ ಮಾಡದೆ ಪರ್ಷಿಯನ್ನರೇ ಆಕ್ರಮಣ ನೀತಿಯನ್ನು ಅನುಸರಿಸಿದರೆಂದು ಹೇಳಿದ್ದು ಸತ್ಯಕ್ಕೆ ವಿರುದ್ಧವಾಗಿತ್ತು. ಪರ್ಷಿಯನ್ನರಿಗೆ ಸಹಾಯ ಮಾಡುವ ಷರತ್ತನ್ನೂ ಒಪ್ಪಂದದಿಂದ ರದ್ದು ಮಾಡಿದರು. ಏಷ್ಯದಲ್ಲಿ ರಷ್ಯನ್ನರ ಬೆದರಿಕೆ ನಿಜವಾಗಿದ್ದರೂ ಭಾರತದ ವಾಯುವ್ಯಗಡಿಗೆ ಇದರಿಂದ ವಿಪತ್ತು ಎಂಬುದು ಕೇವಲ ಭ್ರಮೆಯೆಂದು ಹೇಳಬೇಕು. ರಷ್ಯನ್ನರು ಭಾರತದ ವಾಯುವ್ಯಗಡಿಗೆ ಬರಬೇಕಾದರೆ ಸುಲಭ ಸಾಧ್ಯವಲ್ಲ. ಅದರಲ್ಲೂ ಮಾಸ್ಕೊದಿಂದ ಸಿಂಧೂ ನದಿಯ ತೀರಕ್ಕೆ ಬರಬೇಕಾದರೆ ಬಹು ದೂರ. ರಷ್ಯನರ ಕೊನೆಯ ಠಾಣೆಗಳು 1600 ಕಿ.ಮೀ. ದೂರದಲ್ಲಿದ್ದುವು. ಅವರ ಬೆದರಿಕೆಯನ್ನು ಆ ಕಾಲದ ಬ್ರಿಟಿಷ್ ರಾಜಕಾರಣಿಗಳು ಉತ್ಪ್ರೇಕ್ಷಿಸಿದರೆಂದು ಹೇಳಬೇಕು. ಆದರೂ ರಷ್ಯನರು ಆಫ್ಘಾನಿಸ್ತಾನದ ಆಕ್ರಮಣಕ್ಕೆ ಪರ್ಷಿಯನ್ನರಿಗೆ ಗುಟ್ಟಾಗಿ ಪ್ರೋತ್ಸಾಹ ಕೊಟ್ಟಿದ್ದರು. ದೋಸ್ತ್ ಮಹಮ್ಮದ್ ರಣಜಿತ್‍ಸಿಂಗ್‍ನಿಂದ ಪೆಷಾವರ್‍ಅನ್ನು ತನಗೆ ಹಿಂದಕ್ಕೆ ಕೊಡಿಸಿದರೆ ಬ್ರಿಟಿಷರ ಸ್ನೇಹ ಮಾಡಿಕೊಳ್ಳುವುದಾಗಿ ಹೇಳಿದ್ದು ಅವರಿಗೆ ಒಪ್ಪಿಗೆಯಾಗಲಿಲ್ಲ. ರಣಜಿತ್‍ಸಿಂಗ್ ಒಪ್ಪಂದದ ಪ್ರಕಾರ ಬ್ರಿಟಿಷರ ಸ್ನೇಹಿತನಾಗಿ ನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದ. ಆದ್ದರಿಂದ ದೊಸ್ತ್ ಮಹಮ್ಮದ್‍ನ ಷರತ್ತು ಒಪ್ಪಿಗೆಯಾಗಲಿಲ್ಲ. ಆದರೂ ಆಕ್ಲಂಡ್ ಸ್ವಲ್ಪ ಚಾತುರ್ಯ ತೋರಿಸಿದ್ದರೆ ಮುಂದೆ ನಡೆದ ಘೋರ ಘಟನೆಗಳಿಗೆ ಅವಕಾಶವಿರುತ್ತಿರಲಿಲ್ಲ.

1838ರಲ್ಲಿ ಲಾರ್ಡ್ ಆಕ್ಲಂಡ್ ರಣಜಿತ್‍ಸಿಂಗ್ ಮತ್ತು ಷಾ ಷೂಜರೊಡನೆ ಒಂದು ತ್ರಿಗುಣಾತ್ಮಕ ಒಪ್ಪಂದ ಮಾಡಿಕೊಂಡ. ಅದರ ಪ್ರಕಾರ ಸಿಖ್ಖರ ಮತ್ತು ಬ್ರಿಟಿಷರ ಸೈನ್ಯಗಳ ಸಹಾಯದಿಂದ ಷಾ ಷೂಜನನ್ನು ಕಾಬೂಲಿಗೆ ರಾಜನಾಗಿ ಮಾಡಬೇಕಾಗಿತ್ತು. ಬ್ರಿಟಿಷರ ಸೈನ್ಯ ಫೆರೋeóïಪುರದಲ್ಲಿ ಗುಂಪು ಕೂಡಿತು. ಪಂಜಾಬಿನ ಮೂಲಕ ಹೋಗಲು ರಣಜಿತ್‍ಸಿಂಗ್ ಅದಕ್ಕೆ ಅನುಮತಿ ಕೊಡಲಿಲ್ಲ. ಆದ್ದರಿಂದ ಸಿಂಧ್ ಮತ್ತು ಬಲೂಚಿಸ್ತಾನದ ಮೂಲಕ ಅದು ಹೋಗಬೇಕಾಯಿತು. ಸಿಂಧ್ ಮೂಲಕ ಹೋಗಿದ್ದು 1832ರಲ್ಲಿ. ಇದರಿಂದ ಸಿಂಧ್‍ನ ಅಮೀರರೊಡನೆ ಮಾಡಿಕೊಂಡ ಕೌಲಿನ ಉಲ್ಲಂಘನೆಯಾಯಿತು. ಬ್ರಿಟಿಷ್ ಸೈನಿಕರು ಕಾಂದಹಾರ್ ಮತ್ತು ಫಜ್ನಿಗಳನ್ನು ಸ್ವಾಧೀನ ಮಾಡಿಕೊಂಡರು. ದೋಸ್ತ್ ಮಹಮ್ಮದ್ ಕಾಬೂಲನ್ನು ಬಿಟ್ಟ. ಷಾ ಷೂಜ ಕಾಬೂಲಿಗೆ ಬಂದ. ಅವನ ಬಗ್ಗೆ ಜನ ಯಾವ ಉತ್ಸಾಹವನ್ನೂ ತೋರಿಸಲಿಲ್ಲ. ಅದು ಒಂದು ಪ್ರೇತಯಾತ್ರೆಯ ಮೆರವಣಿಗೆಯ ಹಾಗೆ ಇತ್ತು. ಏನೂ ತೋಚದೆ ದೋಸ್ತ್ ಮಹಮ್ಮದ್ ಬ್ರಿಟಿಷರಿಗೆ ಅಧೀನನಾಗಿ ಕಲ್ಕತ್ತೆಯಲ್ಲಿ ಖೈದಿಯಾದ. ಈ ಸಂದಿಗ್ಧಸ್ಥಿತಿಯಲ್ಲಿ ಲಾರ್ಡ್ ಆಕ್ಲೆಂಡ್ ಅನೇಕ ತಪ್ಪುಗಳನ್ನು ಮಾಡಿದ. ಕಾಬೂಲಿನಲ್ಲಿ ಬ್ರಿಟಿಷರ ಸೈನ್ಯಕ್ಕೆ ಮುಖ್ಯಸ್ಥನನ್ನಾಗಿ ನಾಟ್ಟ್‍ನನ್ನು ಮುಖ್ಯ ಸೈನ್ಯಾಧಿಪತಿ ನೇಮಿಸಿದ್ದರೂ ಆಕ್ಲಂಡ್ ಜನರಲ್ ಎಲ್‍ಫಿನ್‍ಸ್ಟನ್‍ನನ್ನು ನೇಮಿಸಿದ. ಬ್ರಿಟಿಷರು ಷಾ ಷೂಜನ ಇಚ್ಛೆಯಂತೆ ಬಾಲಾ ಹಿಸ್ಸಾರ್ ಎಂಬ ಪ್ರಬಲವಾದ ಕೋಟೆಯನ್ನು ಖಾಲಿ ಮಾಡಬೇಕಾಯಿತು. ಇದರಿಂದ ಬ್ರಿಟಿಷರ ಸೈನ್ಯ ಆಫ್ಘನ್ನರ ಆಕ್ರಮಣಕ್ಕೆ ತುತ್ತಾಯಿತು. ಷಾ ಷೂಜ ತನ್ನ ಸ್ವಂತ ಜನರ ವಿಶ್ವಾಸವನ್ನು ಕಳೆದುಕೊಂಡು, ಬ್ರಿಟಿಷರ ಕೈಗೊಂಬೆಯೆಂಬ ಉಪೇಕ್ಷೆಗೊಳಗಾದ. ಈ ಸಂದರ್ಭದಲ್ಲಿ ಬ್ರಿಟಿಷರ ಸೈನ್ಯವನ್ನೂ ಷಾ ಷೂಜನನ್ನೂ ಹಿಂದಕ್ಕೆ ಕರೆದುಕೊಂಡಿದ್ದರೆ ಎಷ್ಟೊ ಅನುಕೂಲವಾಗುತ್ತಿತ್ತು. ಆದರೆ ಲಾರ್ಡ್ ಆಕ್ಲಂಡ್ ಈ ರೀತಿ ಮಾಡಿದರೆ ತನ್ನ ಗೌರವಕ್ಕೆ ಚ್ಯುತಿ ಎಂದು ಯೋಚಿಸಿ ತನ್ನ ಕಾರ್ಯವನ್ನು ಮುಂದುವರಿಸಿದ. ಆಘ್ಘಾನಿಸ್ತಾನದಲ್ಲಿ ಎಲ್ಲೆಲ್ಲೂ ಅಶಾಂತಿ ಅತೃಪ್ತಿ ಹರಡಿತು.

ದೊಡ್ಡ ದಂಗೆ (1841) : ಕಾಬೂಲಿನಲ್ಲಿ ದೊಡ್ಡ ದಂಗೆ ಎದ್ದಿತು. ಕಾನೂನನ್ನು ಉಲ್ಲಂಘಿಸಿ ಬ್ರಿಟಿಷ್ ಅಧಿಕಾರಿಯಾದ ಬನ್ರ್ಸ್‍ನನ್ನು ಕೊಲ್ಲಲಾಯಿತು. ಇಂಥ ಪರಿಸ್ಥಿತಿಯಲ್ಲೂ ಆಫ್ಘಾನಿಸ್ತಾನದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ತತ್‍ಕ್ಷಣವೇ ಮಧ್ಯಸ್ತಿಕೆ ವಹಿಸದೆ ಇದ್ದರು. ದೋಸ್ತ್ ಮಹಮ್ಮದ್‍ನ ಮಗನಾದ ಮಹಮ್ಮದ್ ಅಕ್ಬರ್‍ಖಾನ್ ಆಫ್ಘನರ ನಾಯಕನಾಗಿದ್ದ. ಬ್ರಿಟಿಷ್ ಅಧಿಕಾರಿಗಳು ಅವನ ಹತ್ತಿರ ಮಾತುಕತೆ ನಡೆಸಲು ಪ್ರಯತ್ನಿಸಿದರು. ಆದರೆ ಯಾವ ಷರತ್ತೂ ಇಲ್ಲದೆ ಬ್ರಿಟಿಷರು ತಮಗೆ ಶರಣಾಗತರಾಗಬೇಕೆಂದು ಆಫ್ಘನರು ಕೇಳಿದರು. ಬ್ರಿಟಿಷರು ಒಪ್ಪಲಿಲ್ಲ. ಇದರಿಂದ ಸಂಧಿಗ್ಧಸ್ಥಿತಿ ಉಂಟಾಯಿತು. ಬ್ರಿಟಿಷ್ ಅಧಿಕಾರಿ ಮ್ಯಾಕ್‍ನಾಟನ್ ತನ್ನ ವಕ್ರನೀತಿಯಿಂದಾಗಿ ಅಕ್ಬರ್‍ಖಾನ್‍ನೊಡನೆ ಯಾವ ತೀರ್ಮಾನಕ್ಕೂ ಬರಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ದಂಗೆಕೋರರು ಮ್ಯಾಕ್‍ನಾಟನ್ನನನ್ನು ಕೊಂದು ಹಾಕಿದರು. ಪರಿಣಾಮವಾಗಿ ಆಫ್ಘಾನಿಸ್ತಾನದಲ್ಲಿದ್ದ 16,000 ಬ್ರಿಟಿಷರು ಅಲ್ಲಿಂದ ಹಿಮ್ಮೆಟ್ಟಲು ಸಂಕಲ್ಪಿಸಿದರು. ಸಾಧ್ಯವಾಗದ ಅನೇಕರು ಕೊಲ್ಲಲ್ಪಟ್ಟರು. ಬ್ರಿಟಿಷ್ ಸೈನಿಕರ ಪೈಕಿ 120 ಜನರನ್ನು ಅಕ್ಬರ್‍ಖಾನ್ ಸೆರೆಹಿಡಿದ. ಡಾಕ್ಟರ್ ಬ್ರೈಡನ್ ಮಾತ್ರ ಜಲಾಲ್‍ಬಾದನ್ನು ಸುರಕ್ಷಿತವಾಗಿ ಸೇರಿದ. ಆಫ್ಘಾನಿಸ್ತಾನದಲ್ಲಿ ನಡೆದ ಈ ವಿಪತ್ತಿನ ಸುದ್ದಿ ಭಾರತ ಮತ್ತು ಇಂಗ್ಲೆಂಡಿನಲ್ಲಿ ಕೋಲಾಹಲ ಎಬ್ಬಿಸಿತು. ಬ್ರಿಟಿಷ್ ಸರ್ಕಾರ ಲಾರ್ಡ್ ಆಕ್ಲಂಡ್‍ನನ್ನು ಹಿಂದಕ್ಕೆ ಕರೆಸಿ ಲಾರ್ಡ್ ಎಲ್ಲೆನ್‍ಬರೋನನ್ನು ಗವರ್ನರ್ ಜನರಲ್‍ನನ್ನಾಗಿ ನೇಮಿಸಿತು (1842). ಈತ ಹಿಂದಿನ ಕರಾರನ್ನು ರದ್ದುಗೊಳಿಸಿ ಸೈನಿಕ ದೃಷ್ಟಿಯಿಂದ ಏನು ಅಗತ್ಯವೊ ಹಾಗೆ ನಡೆದುಕೊಳ್ಳಲು ಸಂಕಲ್ಪಿಸಿದ. ಆದರೆ ಫಜ್ನಿಯಲ್ಲಿ ಪಾಮರ್ ಎಂಬೊಬ್ಬ ಶತ್ರುಗಳಿಗೆ ಶರಣಾಗತನಾದನೆಂಬ ಸುದ್ದಿಯನ್ನು ತಿಳಿದು, ಕಾಬೂಲ್ ಮತ್ತು ಕಾಂದಹಾರ್‍ಗಳಿಂದ ಬ್ರಿಟಿಷರು ಹಿಂದಿರುಗಲು ಆಜ್ಞೆ ಮಾಡಿದ. ಈ ಆಜ್ಞೆಗೆ ಸೈನ್ಯದ ಉನ್ನತಾಧಿಕಾರಿಗಳು ವಿರುದ್ಧಾಭಿಪ್ರಾಯವನ್ನು ಸೂಚಿಸಿದರು. ಖುರ್ದ್ ಕಾಬೂಲ್ ಕಣಿವೆಯ ಹತ್ತಿರ ಪೊಲಾಕ್ ಅಕ್ಬರ್‍ಖಾನ್‍ನನ್ನು ಸಂಪೂರ್ಣವಾಗಿ ಸೋಲಿಸಿದ. ಆತ ಕಾಬೂಲನ್ನು ಪ್ರವೇಶಿಸಿ ಬಾಲಾಹಿಸ್ಸರ್ ಕೋಟೆಯ ಮೇಲೆ ಬ್ರಿಟಿಷ್ ಧ್ವಜವನ್ನು ಏರಿಸಿದ. ನಾಟ್ಟನೂ ಅವನನ್ನು ಸೇರಿದ. ತಮ್ಮ ಮೇಲೆ ಮಾಡಿದ ಕ್ರೌರ್ಯಗಳ ಸೇಡನ್ನು ತೀರಿಸಿಕೊಳ್ಳಲು ಬ್ರಿಟಿಷರ ಸೈನ್ಯ ಮದ್ದುಗುಂಡಿನಿಂದ ಕಾಬೂಲಿನ ದೊಡ್ಡಪೇಟೆಯನ್ನು ಭಸ್ಮ ಮಾಡಿತು. ಅದಾದ ಮೇಲೆ ಬ್ರಿಟಿಷ್ ಸೈನ್ಯಗಳು ಆಫ್ಘಾನಿಸ್ತಾನವನ್ನು ಬಿಟ್ಟು ಬಿಟ್ಟವು. ಲಾರ್ಡ್ ಎಲ್ಲೆನ್‍ಬರೊ ಅಕ್ಟೋಬರ್ 1842ರಲ್ಲಿ ಒಂದು ಬಹಿರಂಗ ಪ್ರಕಟಣೆಯನ್ನು ಹೊರಡಿಸಿದ. ಬ್ರಿಟಿಷ್ ಸರ್ಕಾರ ಆಫ್ಘಾನಿಸ್ತಾನದಲ್ಲಿ ಜನರು ಒಪ್ಪಿದ ಯಾವ ಸರ್ಕಾರವನ್ನೇ ಆಗಲಿ ಮಾನ್ಯ ಮಾಡುವುದಾಗಿಯೂ ಆ ಸರ್ಕಾರ ನೆರೆಹೊರೆಯ ದೇಶಗಳೊಡನೆ ಸ್ನೇಹದಿಂದ ವರ್ತಿಸಬೇಕೆಂದೂ ಹಾಗೆ ಮಾಡಿದ್ದೇ ಆದರೆ ಬ್ರಿಟಿಷ್ ಸರ್ಕಾರ ಶಾಂತಿ ಸ್ಥಾಪನೆಗೆ ಸಹಾಯ ಮಾಡುವುದಾಗಿಯೂ ಈ ಪ್ರಕಟಣೆಯ ಮುಖ್ಯ ಸಾರಾಂಶ. ದೋಸ್ತ್ ಮಹಮ್ಮದ್‍ನನ್ನು ಕಲ್ಕತ್ತದ ಜೈಲಿನಿಂದ ಬಿಡುಗಡೆ ಮಾಡಿ ಕಾಬೂಲಿಗೆ ಹೋಗಲು ಅನುಮತಿ ಕೊಡಲಾಯಿತು. ಆತ 1863ರವರೆಗೆ ಕಾಬೂಲಿನಲ್ಲಿ ರಾಜ್ಯವಾಳಿದ.

ಮೊದಲನೆಯ ಆಫ್ಘನ್ ಯುದ್ಧ ಬ್ರಿಟಿಷರಿಗೆ ದೊಡ್ಡ ಅಪಜಯ ತಂದಿತು. ಹೆಚ್ಚು ನಷ್ಟವೂ ಆಯಿತು. 20,000 ಜನ ಕೊಲ್ಲಲ್ಪಟ್ಟರು. 15 ದಶಲಕ್ಷ ಪೌಂಡುಗಳು ಖರ್ಚಾದುವು. ಯುದ್ಧವಾದ ಮೇಲೂ ದೋಸ್ತ್ ಮಹಮ್ಮದನೇ ಕಾಬೂಲಿಗೆ ಅಮೀರನಾದ. ಬ್ರಿಟಿಷ್ ಸರ್ಕಾರ ಆಫ್ಘಾನಿಸ್ತಾನದ ಮೇಲೆ ಯಾವ ರೀತಿಯಾದ ಹತೋಟಿಯನ್ನು ಹೊಂದಲೂ ಸಾಧ್ಯವಾಗಲಿಲ್ಲ. ಲಾರ್ಡ್ ಎಲ್ಲೆನ್‍ಬರೊ ಫಜ್ನಿಯಿಂದ ಸೋಮನಾಥ ದೇವಸ್ಥಾನದ ಬಾಗಿಲುಗಳನ್ನು ಹಿಂದಕ್ಕೆ ತಂದದ್ದೇ ದೊಡ್ಡ ಸಾಧನೆ ಎಂದು ಬಡಾಯಿ ಕೊಚ್ಚಿಕೊಂಡ. ಇವು ನಿಜವಾದ ಬಾಗಿಲುಗಳಲ್ಲವೆಂದು ಹಿಂದೂಗಳು ಲಕ್ಷ್ಯಮಾಡದೆ ಇದ್ದರು. ಹಿಂದೂದೇಶದ ಮುಸ್ಲಿಮರ ಮನಸ್ಸಿಗೆ ನೋವಾಯಿತು. ಪ್ರಪಂಚದ ಇತಿಹಾಸದಲ್ಲಿ ಇಷ್ಟು ನಷ್ಟಕರವಾದ ಯುದ್ಧ ಇನ್ನು ಯಾವುದೂ ಇಲ್ಲವೆಂದು ಇತಿಹಾಸಕಾರ ಕಾಯೆ ಬರೆದಿದ್ದಾನೆ. ಹೀರಕ್‍ನಿಂದ ಪರ್ಷಿಯನರ ಸೈನ್ಯ ಹಿಂದಕ್ಕೆ ಹೋದಮೇಲೆ ಬ್ರಿಟಿಷರು ಆಫ್ಘಾನಿಸ್ತಾನದಲ್ಲಿ ಮಧ್ಯಸ್ಥಿಕೆ ವಹಿಸಲು ಯಾವ ನ್ಯಾಯವೂ ಇರಲಿಲ್ಲ. ದೋಸ್ತ್ ಮಹಮ್ಮದ್ ಸ್ವತಂತ್ರ ರಾಜನಾಗಿ ರಷ್ಯ ದೇಶದೊಡನೆ ಒಪ್ಪಂದ ಮಾಡಿಕೊಳ್ಳಲು ಯಾವ ಅಡ್ಡಿಯೂ ಇರಲಿಲ್ಲ. ಆದರೂ ಬ್ರಿಟಿಷರ ಒತ್ತಾಯದಿಂದ ರಷ್ಯನರ ಪ್ರತಿನಿಧಿಯನ್ನು ಕಾಬೂಲಿನಿಂದ ವಾಪಸ್ಸು ಕಳುಹಿಸಿದ. ದೊಸ್ತ್ ಮಹಮ್ಮದ್ ಷಾ ಷೂಜನಿಗಿಂತ ಆಡಳಿತದಲ್ಲಿ ಹೆಚ್ಚು ದಕ್ಷತೆ ಮತ್ತು ಸಾಮಥ್ರ್ಯವನ್ನು ಹೊಂದಿದ್ದ. ಲಾರ್ಡ್ ಆಕ್ಲಂಡ್, ಷಾ ಷೂಜನನ್ನು ಅಮೀರನನ್ನಾಗಿ ಮಾಡಲು ಯತ್ನಿಸಿದ್ದು ದೊಡ್ಡ ತಪ್ಪು. ರಾಜಕೀಯ ಮತ್ತು ಸೈನಿಕ ಉಪಯುಕ್ತತೆಗೆ ವಿರೋಧವಾಗಿ ಈ ಯುದ್ಧ ನಡೆಯಿತೆಂದು ಒಪ್ಪಿಕೊಳ್ಳಬೇಕು.

ದೋಸ್ತ್ ಮಹಮ್ಮದ್ 1863ರವರೆಗೂ ರಾಜ್ಯವಾಳಿದ. ಬ್ರಿಟಿಷರ ಸ್ನೇಹವನ್ನು ಕಾಪಾಡಿಕೊಂಡ, ಆದರೆ ಆತ ಸತ್ತಮೇಲೆ (1863) ಸಿಂಹಾಸನದ ಬಾಧ್ಯಸ್ತಿಕೆಗೆ ಅವನ 16 ಮಕ್ಕಳಲ್ಲಿ ಜಗಳವುಂಟಾಯಿತು. ದೋಸ್ತ್ ಮಹಮ್ಮದ್ ಷೇರ್ ಅಲಿ ತನ್ನ ಉತ್ತರಾಧಿಕಾರಿಯೆಂದು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿದ್ದ. ಆದರೆ ಮಹಮ್ಮದ್ ಅಫಜûಲ್ ಮತ್ತು ಮಹಮ್ಮದ್ ಅಸ್ಸಿಮ್‍ಖಾನ್‍ರು ರಾಜ್ಯಕ್ಕೆ ವಾರಸದಾರರಾಗಿ ಯುದ್ಧ ಮಾಡಲು ಸಿದ್ಧತೆ ಮಾಡಿಕೊಂಡರು. ವೈಸರಾಯ್ ಲಾರ್ಡ್ ಲಾರೆನ್ಸ್ ಷೇರ್ ಅಲಿಯನ್ನು ಕಾಬೂಲಿನ ರಾಜನಾಗಿ ಮಾನ್ಯ ಮಾಡಿದ್ದರೂ ಆಫ್ಘಾನಿಸ್ತಾನದ ಒಳ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲವೆಂದು ಖಂಡಿತವಾಗಿ ತಿಳಿಸಿದ. ಆಫ್ಘಾನಿಸ್ತಾನದ ವಿಚಾರದಲ್ಲಿ ತಾಟಸ್ಥ್ಯ ನೀತಿಯೇ ಸರಿಯೆಂದೂ ಅದರಿಂದ ಅಫ್ಘನರ ಪ್ರೀತಿಯನ್ನು ಪಡೆಯಬಹುದೆಂದೂ ಆತ ನಂಬಿದ್ದ. 1868ರಲ್ಲಿ ಷೇರ್ ಅಲಿ ಆಫ್ಘಾನಿಸ್ತಾನದಲ್ಲಿ ಭದ್ರವಾದ ಆಡಳಿತವನ್ನು ಸ್ಥಾಪಿಸಿ ಬ್ರಿಟಿಷರ ಸ್ನೇಹವನ್ನು ಹೊಂದಿದ್ದ. ಲಾರ್ಡ್ ಮೇಯೋ ಮತ್ತು ಲಾರ್ಡ್ ನಾರ್ತ್‍ಬ್ರೂಕರೂ ಲಾರೆನ್ಸ್‍ರ ನೀತಿಯನ್ನೇ ಅನುಸರಿಸಿದರು. ಆದರೆ ಲಾರ್ಡ್ ಲಿಟ್ಟನ್ ತಾಟಸ್ಥ್ಯನೀತಿಯನ್ನು ರದ್ದು ಮಾಡಿದ ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಮತ್ತೊಮ್ಮೆ ವಿಪತ್ತನ್ನು ಅನುಭವಿಸಬೇಕಾಯಿತು.

ಷೇರ್‍ಆಲಿಯೊಡನೆ ಕಟ್ಟುನಿಟ್ಟಾದ ವ್ಯಾವಹಾರಿಕ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಲಾರ್ಡ್ ಲಿಟ್ಟನ್ ನಿಶ್ಚಯಿಸಿದ. ಅಮೀರ್‍ನ ಷರತ್ತುಗಳನ್ನು ಒಪ್ಪಿ, ಹೊರಗಿನಿಂದ ಆಕ್ರಮಣ ನಡೆದರೆ ಸಹಾಯ ಮಾಡುವುದಾಗಿ ಲಿಖಿತ ಭರವಸೆಯನ್ನು ಕೊಟ್ಟ. ಆದರೆ ಷೇರ್‍ಅಲಿ ಹೀರಕ್‍ನಲ್ಲಿ ಬ್ರಿಟಿಷ್ ರೆಸಿಡೆಂಟ್‍ನ ನೇಮಕಕ್ಕೆ ಒಪ್ಪಬೇಕಾಯಿತು. ರಾಣಿ ಭಾರತದ ಚಕ್ರವರ್ತಿನಿ ಎಂಬ ಬಿರುದನ್ನು ಒಪ್ಪಲು ಷೇರ್‍ಅಲಿ ಬ್ರಿಟಿಷ್ ನಿಯೋಗ ಮಂಡಳಿಯೊಂದನ್ನು ಆಫ್ಘಾನಿಸ್ತಾನದಲ್ಲಿ ಸ್ವಾಗತಿಸಬೇಕಾಯಿತು. ಷೇರ್‍ಅಲಿ ಇದಕ್ಕೆ ಒಪ್ಪಲಿಲ್ಲ. ಯಾವ ರೀತಿಯಾದ ಭರವಸೆಯನ್ನೂ ಕೊಡಲು ನಿರಾಕರಿಸಿದ. ಬ್ರಿಟಿಷ್ ರೆಸಿಡೆಂಟ್‍ನ ನೇಮಕಕ್ಕೂ ಒಪ್ಪಿಗೆ ಕೊಡಲಿಲ್ಲ. ಇವೇ ಎರಡನೆಯ ಆಫ್ಘನ್ ಯುದ್ಧಕ್ಕೆ ಕಾರಣಗಳು. ರಷ್ಯ ಮತ್ತು ಬ್ರಿಟನ್ ಎಂಬ ಎರಡು ಕಬ್ಬಿಣದ ಮಡಿಕೆಗಳ ಮಧ್ಯೆ ಆಫ್ಘಾನಿಸ್ತಾನ ಒಂದು ಮಣ್ಣಿನ ಸಣ್ಣ ಮಡಿಕೆ ಎಂದು ಲಿಟ್ಟನ್ ತಿಳಿದಿದ್ದ. ಆಫ್ಘಾನಿಸ್ತಾನ ಬಲವಾದ ರಾಷ್ಟ್ರವಾಗದೇ ಇರಲು ಅದನ್ನು ಪ್ರತ್ಯೇಕ ಭಾಗಗಳಾಗಿ ಒಡೆದರೆ ಅನುಕೂಲವೆಂದು ಆತ ಭಾವಿಸಿದ, ಡಿಸ್ರೇಲಿಯ ಸಾಮ್ರಾಜ್ಯಶಾಹಿ ನೀತಿಯನ್ನು ಲಾರ್ಡ್ ಲಿಟ್ಟನ್ ಆಫ್ಘಾನಿಸ್ತಾನದಲ್ಲಿ ಪ್ರಯೋಗಿಸಿದ.

ಎರಡನೆಯ ಆಫ್ಘಾನ್ ಯುದ್ಧ (1878-80): ರಷ್ಯನ್ನರ ಬೆದರಿಕೆಯಿಂದ ಷೇರ್‍ಆಲಿ ರಷ್ಯ ದೇಶದೊಡನೆ ಶಾಶ್ವತವಾದ ಸ್ನೇಹಕ್ಕೆ ಒಪ್ಪಬೇಕಾಯಿತು. ಕಾಬೂಲಿನಲ್ಲಿ ರಷ್ಯನ್ನರ ಮಂಡಳಿ ಬಂದಿದ್ದನ್ನು ತಿಳಿದು ಲಾರ್ಡ್ ಲಿಟ್ಟನ್ ಬ್ರಿಟಿಷ್ ರಾಯಭಾರಿಯ ನೇಮಕಕ್ಕೆ ಒಪ್ಪಬೇಕೆಂದು ಷೇರ್‍ಅಲಿಗೆ ತಿಳಿಸಿದ. ಷೇರ್‍ಅಲಿ ಒಪ್ಪಲಿಲ್ಲ. ರಷ್ಯನ್ನರ ನಿಯೋಗ ಕಾಬೂಲನ್ನು ಬಿಟ್ಟರೂ ಲಾರ್ಡ್ ಲಿಟ್ಟನ್ ಬ್ರಿಟಿಷ್ ರೆಸಿಡೆಂಟನ ನೇಮಕಕ್ಕೆ ಒತ್ತಾಯಪಡಿಸಿದ. ಷೇರ್‍ಅಲಿ ರಷ್ಯದ ಕೈಗೊಂಬೆಯಾಗಲು ಅವಕಾಶಕೊಡಬಾರದೆಂದು ಲಿಟ್ಟನ್ನನ ಆಶೆ. ಸ್ವತಂತ್ರ ಪ್ರಭುವಾಗಿ ಬ್ರಿಟಿಷ್ ರೆಸಿಡೆಂಟ್‍ನ ನೇಮಕಕ್ಕೆ ಷೇರ್‍ಅಲಿ ಒಪ್ಪದೇ ಇದ್ದದ್ದು ಸರಿ. ಬಲವಂತದಿಂದ ನೇಮಿಸುವುದಕ್ಕೆ ಬ್ರಿಟಿಷ್ ಸರ್ಕಾರಕ್ಕೆ ಯಾವ ಹಕ್ಕೂ ಇರಲಿಲ್ಲ. ಹೀಗಿದ್ದರೂ ಲಿಟ್ಟನ್ ಬಲವಂತದಿಂದ ಬ್ರಿಟಿಷ್ ರಾಯಭಾರಿಯನ್ನು ಹೇರಿದ. ಷೇರ್‍ಅಲಿ ಕಾಬೂಲಿನಲ್ಲಿದ್ದ ರಷ್ಯನ್ನರ ರಾಯಭಾರಿಯ ಸಲಹೆಯನ್ನು ಕೇಳಿದ್ದು ಲಿಟ್ಟನ್‍ನಿಗೆ ಉದ್ರೇಕ ಉಂಟುಮಾಡಿತು. ಲಿಟ್ಟನ್ ಸರ್ ನೆವಿಲ್ ಛೇಂಬರ್‍ಲಿನ್‍ನನ್ನು ಪೆಷಾವರ್‍ಗೆ ನಿಯೋಗಿಯಾಗಿ ಕಳುಹಿಸಿದ. ನಿಯೋಗಕ್ಕೆ ಮಸೀದಿಯಿಂದ ಮುಂದಕ್ಕೆ ಹೋಗಲು ಅಲಿ ಅವಕಾಶ ಕೊಡಲಿಲ್ಲ. ಲಿಟ್ಟನ್‍ನಿಗೆ ಕೋಪ ಬಂದು ಕ್ರಿ.ಶ. 1878ರ ನವಂಬರ್ ತಿಂಗಳಿನಲ್ಲಿ ಅಂತ್ಯ ನಿರ್ಧಾರ ಕೈಗೊಂಡ. ಅಮೀರ್ ಯಾವ ಷರತ್ತೂ ಇಲ್ಲದೆ ಕ್ಷಮಾಪಣೆ ಕೇಳಬೇಕೆಂದೂ ಬ್ರಿಟಿಷ್ ರಾಯಭಾರಿಯ ನೇಮಕಕ್ಕೆ ಒಪ್ಪಬೇಕೆಂದೂ ತಿಳಿಸಲಾಯಿತು. ಜವಾಬು ಬರದೇ ಇದ್ದುದರಿಂದ ಬ್ರಿಟಿಷ್ ಸೈನ್ಯಗಳು ಆಫ್ಘಾನಿಸ್ತಾನಕ್ಕೆ ನುಗ್ಗಲು ಆಜ್ಞೆ ಮಾಡಲಾಯಿತು. ತನ್ನ ದೇಶದ ಮೇಲೆ ಆಕ್ರಮಣ ಮಾಡಿದ ಬ್ರಿಟಿಷರ ವಿರುದ್ಧ ಸಹಾಯ ಮಾಡಲು ಷೇರ್ ಅಲಿ ರಷ್ಯ ದೇಶಕ್ಕೆ ಮನವಿಮಾಡಿದ. ಆದರೆ ರಷ್ಯ ಯಾವ ಸಹಾಯವನ್ನೂ ಮಾಡದೆ ದ್ರೋಹವನ್ನು ಪ್ರಕಾಶಪಡಿಸಿತು. ಷೇರ್ ಅಲಿ ದಿಕ್ಕಿಲ್ಲದೆ ಓಡಿಹೋಗಿ 1879ರ ಫೆಬ್ರವರಿಯಲ್ಲಿ ಸತ್ತುಹೋದ. ಅವನ ಮಗ ಯಾಕೂಬ್ ಖಾನ್ ಬ್ರಿಟಿಷರಿಗೆ ಶರಣಾಗತನಾಗಿ ಗಂಡಮಕ್ ಒಪ್ಪಂದ ಮಾಡಿಕೊಂಡ. ಯಾಕೂಬ್ ಖಾನ್ ತನ್ನ ವಿದೇಶ ನೀತಿಯನ್ನು ಬ್ರಿಟಿಷ್ ಸರ್ಕಾರದ ಸೂಚನೆಯಂತೆ ರೂಪಿಸುವುದಾಗಿ ಒಪ್ಪಿದ. ಕಾಬೂಲಿನಲ್ಲಿ ಕಾಯಂ ಆಗಿ ಬ್ರಿಟಿಷ್ ರೆಸಿಡೆಂಟ್‍ನನ್ನು ಇಟ್ಟುಕೊಳ್ಳುವುದಕ್ಕೆ ಸಮ್ಮತಿಸಿದ. ಕುರಂ ಕಣಿವೆಯನ್ನು ಬ್ರಿಟಿಷ್ ಸರ್ಕಾರಕ್ಕೆ ಕೊಡಲು ಒಪ್ಪಿದ. ಪ್ರತಿಯಾಗಿ ಬ್ರಿಟಿಷ್ ಸರ್ಕಾರ ಸೈನ್ಯ, ಧನ ಮತ್ತು ಇತರ ಯುದ್ಧ ಸಾಮಗ್ರಿಗಳ ಸಹಾಯವನ್ನು ಮಾಡುವುದಾಗಿಯೂ ಅಮೀರನನ್ನು ಸಿಂಹಾಸನದ ಮೇಲೆ ಸ್ಥಿರವಾಗಿರಿಸಲು ಸಕಲ ಪ್ರಯತ್ನ ಮಾಡುವುದಾಗಿಯೂ ಭರವಸೆ ಕೊಟ್ಟಿತು. ಬ್ರಿಟಿಷರು ತಮ್ಮ ಸೈನ್ಯ ಪಡೆಗಳನ್ನು ಆಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆದುಕೊಳ್ಳಲು ಒಪ್ಪಿದರು. ರಾಬಟ್ಸ್ ಎಂಬ ಇತಿಹಾಸಕಾರನ ಅಭಿಪ್ರಾಯದಂತೆ ಈ ಒಪ್ಪಂದ ಲಿಟ್ಟನ್ನನ ಆಫ್ಘನ್ ನೀತಿಯ ಪರಮಾವಧಿ ಎಂದು ಹೇಳಬಹುದು. ಈ ಒಪ್ಪಂದ ಡಿಸ್ರೇಲಿಯ ದೃಷ್ಟಿಯಲ್ಲಿ ಭಾರತ ಸರ್ಕಾರಕ್ಕೆ ಒಂದು ಶಾಸ್ತ್ರೀಯ ಗಡಿಯನ್ನು ಸ್ಥಾಪಿಸಿತು. ಆದರೆ ಈ ಒಪ್ಪಂದ ಕೇವಲ ಕ್ಷಣಿಕವಾದದ್ದು. ಆಫ್ಘನ್ನರು ಕಾಬೂಲಿನಲ್ಲಿ ಬ್ರಿಟಿಷ್ ರೆಸಿಡೆಂಟ್‍ನ ನೇಮಕಕ್ಕೆ ವಿರೋಧ ತೋರಿಸಿದರು. ಬ್ರಿಟಿಷ್ ಸರ್ಕಾರದ ಅಧೀನನಾದ ಯಾಕೂಬ್‍ನನ್ನು ನಿಕೃಷ್ಟವಾಗಿ ಕಂಡರು. ಸ್ಥಿರತೆ, ಶೀಲಗಳಿಲ್ಲದ ಹೊಸನವಾಬನ ನುಣಚಿಕೊಳ್ಳುವ ಗುಣ ಹೊರಬಿತ್ತು. ಕಾಬೂಲಿಗೆ ಬಂದ ಬ್ರಿಟಿಷ್ ರೆಸಿಡೆಂಡ್ ಕಾವಗ್ನರಿಯನ್ನು ಕೇವಲ ಒಂದೂವರೆ ತಿಂಗಳಲ್ಲಿ ಆಫ್ಘನ್ ಸೈನಿಕರು ಕೊಂದು ಹಾಕಿದರು. ಈ ಕೊಲೆ ಗಂಡಮಕ್ ಒಪ್ಪಂದಕ್ಕೆ ತಿಲಾಂಜಲಿಯಾಯಿತು. ಬ್ರಿಟಿಷ್ ಸೈನ್ಯಗಳನ್ನು ಆಫ್ಘಾನಿಸ್ತಾನಕ್ಕೆ ತತ್‍ಕ್ಷಣವೇ ರವಾನಿಸಲಾಯಿತು. 1879ರ ಅಕ್ಟೋಬರ್‍ನಲ್ಲಿ ಬ್ರಿಟಿಷರು ಛರಸಿಯಾಬ್ ಕದನದಲ್ಲಿ ಆಫ್ಘನರನ್ನು ಸೋಲಿಸಿದರು. ಯಾಕೂಬನನ್ನು ಕೈದಿಯಂತೆ ಭಾರತಕ್ಕೆ ಕಳುಹಿಸಿದರು. ಬ್ರಿಟಿಷ್ ಸರ್ಕಾರ ಆಫ್ಘಾನಿಸ್ತಾನವನ್ನು ಪ್ರತ್ಯೇಕ ಭಾಗಗಳಾಗಿ ಒಡೆಯಲು ಸಂಕಲ್ಪಿಸಿತು. ಈ ಸಮಯದಲ್ಲಿ ದೋಸ್ತ್ ಮಹಮ್ಮದನ ಮೊಮ್ಮಗನಾದ ಅಬ್ದುಲ್ ರಹಮಾನ್ ರಂಗಭೂಮಿಗೆ ಪ್ರವೇಶಿಸಿದ. ಇದುವರೆಗೂ ರಷ್ಯ ಸರ್ಕಾರದ ಆಶ್ರಯದಲ್ಲಿದ್ದ ಅಬ್ದುಲ್ ರಹಮಾನ್ ಆಫ್ಘಾನಿಸ್ತಾನಕ್ಕೆ ಹಿಂತಿರುಗಿ ಬಂದು ತನ್ನ ಅದೃಷ್ಟವನ್ನು ಪರೀಕ್ಷೆ ಮಾಡಿದ. ಕಾಲ ವಿಳಂಬ ಮಾಡದೆ ಲಿಟ್ಟನ್ ಅಬ್ದುಲ್ ರಹಮಾನ್‍ನನ್ನು ಆಫ್ಘಾನಿಸ್ತಾನದ ಅಮೀರನಾಗಿ ಮಾನ್ಯ ಮಾಡಬೇಕೆಂದಿರುವಾಗ ಇಂಗ್ಲೆಂಡಿನಲ್ಲಿ 1880ರಲ್ಲಿ ಬೇರೆ ಸರ್ಕಾರ ಆಡಳಿತಕ್ಕೆ ಬಂದಿದ್ದರಿಂದ ಲಿಟ್ಟನ್ ಹಿಂದಕ್ಕೆ ಹೋಗಬೇಕಾಯಿತು. ಲಾರ್ಡ್ ಲಿಟ್ಟನ್ ಅಬ್ದುಲ್ ರಹಮಾನ್‍ನನ್ನು ಆಫ್ಘಾನಿಸ್ತಾನದ ಅಮೀರನಾಗಿ ಅಂಗೀಕರಿಸಿ ಇಂಗ್ಲೆಂಡ್ ವಿನಾ ಬೇರೆ ದೇಶಗಳೊಡನೆ ಯಾವ ರಾಜಕೀಯ ಸಂಪರ್ಕವನ್ನೂ ಇಟ್ಟುಕೊಳ್ಳಕೂಡದೆಂದೂ ಪಿಷಿನ್ ಮತ್ತು ಸಿಬಿ ಜಿಲ್ಲೆಗಳು ಬ್ರಿಟಿಷ್ ಸರ್ಕಾರದ ಆಡಳಿತದಲ್ಲಿರಬೇಕೆಂದೂ ಷರತ್ತು ಹಾಕಿದ. ಅಮೀರನಿಗೆ ಭಾರತ ಸರ್ಕಾರ ಪ್ರತಿ ವರ್ಷವೂ ಸಹಾಯ ಧನವನ್ನು ಕೊಡಲು ಒಪ್ಪಿತು. ಆಫ್ಘಾನಿಸ್ತಾನದ ವಿದೇಶ ನೀತಿ ಬ್ರಿಟಿಷರ ಆಧೀನದಲ್ಲಿದ್ದುದರಿಂದ ಕಾಬೂಲ್‍ನಲ್ಲಿ ಬ್ರಿಟಿಷ್ ರೆಸಿಡೆಂಟ್‍ನ ನೇಮಕದ ಅವಶ್ಯಕತೆ ಇರಲಿಲ್ಲ. ಈ ತೀರ್ಮಾನ ಬಹುಕಾಲದವರೆಗೂ ಆಚರಣೆಯಲ್ಲಿತ್ತು. ಅಬ್ದುಲ್ ರಹಮಾನ್ ಅಮೀರನಾಗಿರುವವರೆಗೂ ಬ್ರಿಟಿಷ್ ಸರ್ಕಾರ ಆಫ್ಘಾನಿಸ್ತಾನದೊಡನೆ ವಿರಸವಿಲ್ಲದ ಸಂಬಂಧವನ್ನು ಹೊಂದಿತ್ತು. ಅಯೂಬ್ ಖಾನ್, ಅಬ್ದುಲ್ ರಹಮಾನ್‍ನ ಅಧಿಕಾರವನ್ನು ಆಕ್ಷೇಪಿಸಲು ಮೈವಾಂಡ ಮತ್ತು ಕಾಂದಹಾರ್‍ಗಳಲ್ಲಿ ಅವನನ್ನು ಸೋಲಿಸಲಾಯಿತು. ಲಾರ್ಡ್ ಲಿಟ್ಟನ್ ಆಫ್ಘಾನಿಸ್ತಾನದಿಂದ ಬ್ರಿಟಿಷ್ ಸೈನ್ಯಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡ. ಎರಡನೆಯ ಆಫ್ಘನ್ ಯುದ್ಧ ಬ್ರಿಟಿಷರಿಗೆ ದೊಡ್ಡ ಅನರ್ಥವಾಗಿ ಪರಿಣಮಿಸಿತು. ಲಾರ್ಡ್ ಲಿಟ್ಟನ್ ಆಕ್ರಮಣ ನೀತಿಯನ್ನು ಅನುಸರಿಸಿದನೆಂದೂ ಮೊದಲನೆಯ ಆಫ್ಘನ್ ಯುದ್ಧದಿಂದ ಪಾಠ ಕಲಿಯಲಿಲ್ಲವೆಂದೂ ಖಂಡಿಸುವವರಿದ್ದಾರೆ. ಆದರೂ ಈ ಯುದ್ಧದ ಪರಿಣಾಮವಾಗಿ ರಷ್ಯದ ಪರ ಇದ್ದ ಷೇರ್ ಅಲಿಯನ್ನು ತೆಗೆದುಹಾಕಿ ಬ್ರಿಟಿಷ್ ಸರ್ಕಾರದೊಡನೆ ಸ್ನೇಹ ಸೂಚಿಸಿದ ಅಬ್ದುಲ್ ರಹಮಾನ್‍ನನ್ನು ಅಮೀರನನ್ನಾಗಿ ಮಾಡಿದ್ದು ಒಂದು ದೊಡ್ಡ ಸಾಧನೆಯೆಂದು ಹೇಳಬೇಕು. ಕಾಬೂಲಿನಲ್ಲಿ ರಷ್ಯನ್ನರ ಪ್ರಭಾವವನ್ನು ತಡೆಗಟ್ಟಲಾಯಿತು. ಕೇಲತ್‍ನ ಖಾನ್ ಬ್ರಿಟಿಷ್ ಸರ್ಕಾರದ ಹತೋಟಿಯಲ್ಲಿದ್ದ ಬಲೂಚಿಸ್ತಾನ ಪ್ರಾಂತ್ಯವಾಯಿತು. ಕ್ವೆಟ್ಟವೂ ಬ್ರಿಟಿಷರ ಹತೋಟಿಗೆ ಬಂತು.

1884ರಲ್ಲಿ ಮೆರ್ವನ್ನು ಆಕ್ರಮಿಸಿದರು. ಇದು ಬ್ರಿಟಿಷ್ ಸರ್ಕಾರಕ್ಕೆ ಕಳವಳವನ್ನುಂಟುಮಾಡಿತು. 1885ರ ಮಾರ್ಚಿನಲ್ಲಿ ಪ್ರಸಿದ್ಧ ಪಂಜದೇ ಘಟನೆ ನಡೆಯಿತು. ಈ ಸ್ಥಳದಲ್ಲಿ ರಷ್ಯ ಮತ್ತು ಆಫ್ಘನ್ ಸೈನಿಕರಿಗೆ ಹೋರಾಟನಡೆದು ಪರಿಸ್ಥಿತಿ ಅಪಾಯಕಾರವಾಗಿ ಕಂಡು ಬಂತು. ಆದರೆ ವೈಸರಾಯ್ ಲಾರ್ಡ್ ಡಫರಿನ್ನನ ಪ್ರಯತ್ನದಿಂದಲೂ ಅಬ್ದುಲ್ ರಹಮಾನ್ ತೋರಿಸಿದ ಆತ್ಮಸಂಯಮದಿಂದಲೂ ವಿಷಮಸ್ಥಿತಿಗೆ ಅವಕಾಶವಾಗಲಿಲ್ಲ. ಅಬ್ದುಲ ರಹಮಾನ್ ಈ ಘಟನೆಯನ್ನು ಉಪೇಕ್ಷಿಸಿದ. ಕೊನೆಗೆ ಪಂಜದೇ ತನಗೆ ಸೇರಿದ್ದೇ ಎಂದು ಸಂಶಯಪಟ್ಟ. ಯುದ್ಧದ ಹೆದರಿಕೆ ಮಾಯವಾಯಿತು. ಆಕ್ಸಸ್ (ಆಮಾ ದಾರ್ಯ) ನದಿಯನ್ನು ರಷ್ಯದ ಗಡಿಯಾಗಿ ಅಂಗೀಕರಿಸಲಾಯಿತು. ಲಾರ್ಡ್ ಡಫರಿನ್ನನ ಚಾತುರ್ಯ ಮತ್ತು ವಾತ್ಸಲ್ಯದಿಂದ ಈ ಸಮಸ್ಯೆ ಶಾಂತರೀತಿಯಾಗಿ ಕೊನೆಗೊಂಡಿತು. ಆಫ್ಘಾನಿಸ್ತಾನ ಎರಡು ಬೀಸುವ ಕಲ್ಲಿನಮಧ್ಯೆ ಸಿಕ್ಕಿಕೊಂಡು ಪುಡಿಯಾಗಿದೆ. ದೇವರ ರಕ್ಷಣೆಯಿಲ್ಲದಿದ್ದರೆ ದೇಶ ಸಿಂಹ ಮತ್ತು ಕರಡಿಗಳ ವಕ್ರದೃಷ್ಟಿಗೆ ಬಿದ್ದಿರುವ ಬಡಮೇಕೆಯಂತೆ ಯಾವಾಗಲೋ ಆಹುತಿ ಆಗುತ್ತಿತ್ತು. ಇದು ಅಬ್ದುಲ್ ರಹಮಾನ್ ಸಂಕಟದಿಂದ ನುಡಿದ ಮಾತು.

1991ಲ್ಲಿ ಅಬ್ದುಲ್ ರಹಮಾನ್ ಸತ್ತ. ಹಬೀಬ್‍ಉಲ್ಲ ಸಿಂಹಾಸನಕ್ಕೆ ಬಂದ. ಸ್ವಲ್ಪಕಾಲ ಹೊಸ ಅಮೀರ ಭಾರತ ಸರ್ಕಾರದೊಡನೆ ಸ್ನೇಹ ತೋರಿಸಲಿಲ್ಲ. 1905ರಲ್ಲಿ ಈ ಮನಸ್ತಾಪದ ಬದಲು ಮತ್ತೊಮ್ಮೆ ಸ್ನೇಹ ಉಂಟಾಗಿ ಅಮೀರ್ ಬ್ರಿಟಿಷರಿಂದ ಧನಸಹಾಯ ಪಡೆದ. ಆದರೂ ಅಮೀರ ರಷ್ಯದ ಪರ ಎಂದು ಸಂಶಯ ಪಡಲಾಯಿತು. ಆಫ್ಘಾನಿಸ್ತಾನ ತನ್ನ ಪ್ರಭಾವಕ್ಕೆ ಒಳಗಾಗಿಲ್ಲವೆಂಬುದನ್ನು ರಷ್ಯ ಒಪ್ಪಿಕೊಂಡಿತು. ಇನ್ನು ಮುಂದೆ ರಷ್ಯ ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಸರ್ಕಾರದ ಸಲಹೆಯನ್ನು ಪಡೆಯಲು ಸಮ್ಮತಿಸಿತು. ಆದರೆ ಅಮೀರ ಈ ಷರತ್ತುಗಳನ್ನು ಅನುಮೋದಿಸಲಿಲ್ಲ. 1919ರಲ್ಲಿ ಹಬೀಬ್‍ಉಲ್ಲ ಕೊಲ್ಲಲ್ಪಟ್ಟ. ಪ್ರಜೆಗಳು ಅವನ ಪಾಶ್ಚಾತ್ಯ ರೀತಿಯ ಸುಧಾರಣೆಗಳನ್ನು ವಿರೋಧಿಸಿದರು. ಹಬೀಬ್‍ಉಲ್ಲನ ಮಗನಾದ ಅಮಾನುಲ್ಲ ಬ್ರಿಟಿಷ್ ಸರ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ. ಇದೇ ಮೂರನೆಯ ಆಫ್ಘನ್ ಯುದ್ಧಕ್ಕೆ ಕಾರಣವಾಯಿತು. ರಷ್ಯನ್ನರ ಪ್ರೇರಣೆಯಿಂದ ಅಮಾನುಲ್ಲ ತನ್ನ ಸ್ವಾತಂತ್ರ್ಯವನ್ನು ಘೋಷಿಸಿ ಭಾರತದ ಗಡಿಯಮೇಲೆ ಆಕ್ರಮಣ ಮಾಡಿದ. ಕೊನೆಗೆ 1919ರಲ್ಲಿ ರಾವಲ್ಪಿಂಡಿ ಒಪ್ಪಂದವಾಯಿತು. ಅದರಂತೆ ಬ್ರಿಟಿಷ್ ಸರ್ಕಾರ ಆಫ್ಘಾನಿಸ್ತಾನಕ್ಕೆ ಇನ್ನು ಮುಂದೆ ಧನಸಹಾಯವನ್ನೂ ಮಾಡಬೇಕಾಗಿಲ್ಲ. 1922ರಲ್ಲಿ ಲಂಡನ್‍ನಲ್ಲಿ ಆಫ್ಘಾನಿಸ್ತಾನದ ಪ್ರತಿನಿಧಿಯಾಗಿ ಒಬ್ಬ ಆಫ್ಘನ್ ಮಂತ್ರಿಯನ್ನು, ಕಾಬೂಲಿನಲ್ಲಿ ಬ್ರಿಟಿಷರ ಪರವಾಗಿ ಒಬ್ಬ ಮಂತ್ರಿಯನ್ನು ನೇಮಿಸಲಾಯಿತು. ಆದರೆ ಆಫ್ನನ್ನರು ಅಮಾನುಲ್ಲನ ಸುಧಾರಣೆಗಳನ್ನು ವಿರೋಧಿಸಿ 1928ರಲ್ಲಿ ಅವನನ್ನು ಪದಚ್ಯುತನನ್ನಾಗಿ ಮಾಡಿದರು. ಕೊನೆಗೆ ನಾದಿರ್‍ಷಹ ಅಮೀರನಾಗಿ ಬ್ರಿಟಿಷರೊಡನೆ ಸ್ನೇಹದಿಂದ ವರ್ತಿಸಿದ. ಈಗ ಆಫ್ಘಾನಿಸ್ತಾನ ಸ್ವತಂತ್ರ ರಾಷ್ಟ್ರವಾಗಿದೆ. ಈಚೆಗೆ ದೇಶದ ಬೆಳೆವಣಿಗೆಯ ಯೋಜನೆಗಳು ಕಾರ್ಯಗತವಾಗುತ್ತಿವೆ. ಗುಲಾಮಗಿರಿ ರದ್ದಾಗಿದೆ. ಕಡ್ಡಾಯಶಿಕ್ಷಣ ಜಾರಿಗೆ ಬಂದಿದೆ. ಕೈಗಾರಿಕೆಗಳು ಬೆಳೆಯುತ್ತಿವೆ. 1947 ರಿಂದೀಚೆಗೆ ಫಕ್ತೂನಿಗಳು ತಮಗೇ ಪ್ರತ್ಯೇಕ ರಾಷ್ಟ್ರ ಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. (ಬಿ.ಎಸ್.ಕೆ.)