ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರಣ್ಯಕ
ಆರಣ್ಯಕ ಶ್ರುತಿಯೆಂದು ಪ್ರಸಿದ್ಧವಿರುವ ಅಪಾರವಾದ ವೇದಸಾಹಿತ್ಯದ ಆದಿಭಾಗ ಸಂಹಿತೆ, ಮಧ್ಯವೇ ಬ್ರಾಹ್ಮಣ, ಉಪಾಂತ್ಯ ಆರಣ್ಯಕ ಮತ್ತು ಅಂತ್ಯ ಉಪನಿಷತ್ತು ಅಥವಾ ವೇದಾಂತವೆನಿಸುತ್ತವೆ. ಸಂಹಿತೆಯಲ್ಲಿ ದೇವತಾಸ್ತುತಿಗಳಾದ ಋಕ್ಕುಗಳಿಗೆ ಪ್ರಾಧಾನ್ಯ. ಬ್ರಾಹ್ಮಣದಲ್ಲಿ ಯಾಗಾದಿ ಕರ್ಮಕಾಂಡದ ವಿವರಣೆ ಮುಖ್ಯ. ಆರಣ್ಯಕದಲ್ಲಿ ಇದೇ ಕರ್ಮದ ಭೌತಿಕಸ್ವರೂಪವಿವೇಚನೆ ಹಿಂದಾಗಿ ಸಾಂಕೇತಿಕ ಇಲ್ಲವೇ ಆಧ್ಯಾತ್ಮಿಕ ತತ್ತ್ವಗಳ ಶೋಧನೆ ಮುಂದಾಗುತ್ತದೆ. ಇದೇ ಪ್ರವೃತ್ತಿ ಮತ್ತೂ ಪ್ರಬಲವಾಗಿ ಕಡೆಗೆ ಜ್ಞಾನಮೀಮಾಂಸೆಯೇ ಮುಖ್ಯವಾಗಿರುವ ಉಪನಿಷತ್ತುಗಳನ್ನು ಕಾಣುತ್ತೇವೆ. ಹೀಗೆ ಉಪನಿಷತ್ತುಗಳ ಪೂರ್ವರೂಪವೇ ಆರಣ್ಯಕವೆಂದು ತಿಳಿಯಬಹುದು. ಆರಣ್ಯೇ ಅಧ್ಯಯನಾದೇವ ಆರಣ್ಯಕನಾದೇವ ಆರಣ್ಯಕಮುದಾಹೃತಮ್ ಎಂಬ ವಚನದಂತೆ ಅರಣ್ಯದಲ್ಲಿ ಮಾತ್ರ ಅಧ್ಯಯನಕ್ಕೆ ವಿಹಿತವಾದ ವೇದಪ್ರಕಾರವೇ ಆರಣ್ಯಕವೆನ್ನಬಹುದು. ಅಥವಾ ಗೃಹಸ್ಥಾಶ್ರಮವನ್ನು ಮುಗಿಸಿದ ವಾನಪ್ರಸ್ಥರು ಮಾತ್ರ ಕಲಿಯಬಹುದಾದ ಕರ್ಮಜ್ಞಾನ ರಹಸ್ಯಗಳನ್ನೊಳಗೊಂಡ ವೇದಪ್ರಕಾರವೇ ಆರಣ್ಯಕವೆನ್ನಬಹುದು. ಎರಡು ಬಗೆಯ ವ್ಯುತ್ಪತ್ತಿಗಳನ್ನೂ ಸಂಪ್ರದಾಯ ಹಾಗೂ ಆಧುನಿಕ ವಿದ್ವತ್ತು ಸೂಚಿಸಿದೆ.
ಆರಣ್ಯಕಗಳಲ್ಲಿ ಒಮ್ಮೊಮ್ಮೆ ಪ್ರಕ್ಷಿಪ್ತಾಂಶಗಳು ಸೇರಿರಬಹುದಾದರೂ, ಪ್ರಾಚೀನ ಆರಣ್ಯಕಗಳ ಕಾಲ ಸುಮಾರು ಕ್ರಿ.ಪೂ. ಒಂದು ಸಾವಿರವೆನ್ನಬಹುದು. ಭಾಷೆಯಲ್ಲಿ ಒಮ್ಮೆ ಬ್ರಾಹ್ಮಣಗಳ ಮಾರ್ದನಿ, ಇನ್ನೊಮ್ಮೆ ಉಪನಿಷತ್ತುಗಳ ಪ್ರತಿಧ್ವನಿ ಇರುವುದು ಆರಣ್ಯಕಗಳ ವಿಶೇಷ. ಮುಂದಿನ ವ್ಯಾಕರಣ, ನಿರುಕ್ತ, ಕಲ್ಪ, ಮುಂತಾದ ವೇದಾಂಗ ವಿಚಾರಗಳೂ ಒಮ್ಮೊಮ್ಮೆ ಇಲ್ಲಿ ಬರುವುದುಂಟು.
ಅತ್ತ ಬ್ರಾಹ್ಮಣಗಳಿಗೂ, ಇತ್ತ ಉಪನಿಷತ್ತುಗಳಿಗೂ ಮಧ್ಯವರ್ತಿಯೆನಿಸುವ ಆರಣ್ಯಕ ಎರಡರ ಅಂಶಗಳನ್ನೂ ಅಷ್ಟಿಷ್ಟು ಒಳಗೊಳ್ಳುವುದರಿಂದ ಅದು ಬ್ರಾಹ್ಮಣವೆನಿಸಲೂ ಬಲ್ಲುದು, ಉಪನಿಷತ್ತು ಎನಿಸಲೂ ಬಲ್ಲದು. ಸಾಮವೇದ ಮತ್ತು ಅಥರ್ವಣ ವೇದಗಳಲ್ಲಿ ಆರಣ್ಯಕವೆಂಬ ಸ್ವತಂತ್ರ ರಚನಾ ಪ್ರಕಾರವೇ ಇಲ್ಲ. ಸಾಮವೇದದ ಆರಣ್ಯಕಸದೃಶ ರಚನೆಗೆ ಛಾಂದೋಗ್ಯ ಉಪನಿಷತ್ ಎಂದು ಅಥರ್ವಣ ವೇದಕ್ಕೆ ಮುಂಡಕೋಪನಿಷತ್ ಎಂದೂ ಹೆಸರುಗಳಿವೆ.
ಋಗ್ವೇದಕ್ಕೆ ಐತರೇಯ ಮತ್ತು ಕೌಶೀತಕೀ ಎಂಬ ಆರಣ್ಯಕಗಳೂ ಶುಕ್ಲ ಯಜುರ್ವೇದಕ್ಕೆ ಶತಪಥಬ್ರಾಹ್ಮಣದಲ್ಲಿ ಅಂತರ್ಗತವಾಗಿ ಬೃಹದಾರಣ್ಯಕ ಉಪನಿಷತ್ತೂ, ಕೃಷ್ಣಯಜುರ್ವೇದಕ್ಕೆ ತೈತ್ತೀರೀಯ ಅರಣ್ಯಕವೂ ಪ್ರಸಿದ್ಧವಾಗಿವೆ.
ಐತರೇಯ ಆರಣ್ಯಕದಲ್ಲಿ ಐದು ಖಂಡಗಳಿದ್ದು, ಕಡೆಯ ಎರಡು ಆಶ್ವಲಾಯನ ಹಾಗೂ ಶೌನಕದೃಷ್ಟವೆಂದೂ ಹೇಳಲಾಗಿದೆ. ಇದರ ಎರಡನೆಯ ಖಂಡದ 4,5,6 ಈ ಮೂರು ಮಹಾವ್ರತವೆಂಬ ವಿಧಿಯ ವಿವರಣೆ ಬಂದಿದೆ. ಈ ಆರಣ್ಯಕ ರಚನಾಕಾಲದ ವೇಳೆಗೆ ಋಗ್ವೇದದ ಪ್ರಚಲಿತ ಸಂಹಿತಾಪಾಠ ಸಿದ್ಧವಾಗಿತ್ತೆಂದು ಸ್ಪಷ್ಟವಾಗುತ್ತದೆ. ಕೌಶೀತಕೀ ಆರಣ್ಯಕದಲ್ಲಿ 15 ಅಧ್ಯಾಯಗಳಿವೆ. 3 ರಿಂದ 6 ಅಧ್ಯಾಯಗಳೇ ಕೌಶೀತಕೀ ಉಪನಿಷತ್ ಎನಿಸುತ್ತದೆ.
ಯಜುರ್ವೇದದಲ್ಲಿ ತೈತ್ತೀರೀಯ ಆರಣ್ಯಕದ 7,8,8----- ಈ ಪ್ರಪಾಠಕಗಳೇ ತೈತ್ತೀರೀಯ ಉಪನಿಷತ್ತು, 10 ನೆಯ ಪ್ರಾಪಾಠಕವೇ ಮಹಾನಾಯಣೋಪನಿಷತ್ತು. ಇದು ಕಡೆಗೆ ಬಿರುದು ಸೇರಿಸಿದಂತೆ ತೋರುತ್ತದೆ. ಶತಪಥಬ್ರಾಹ್ಮಣದ ಗ್ರಂಥಾಂತ್ಯವೇ ಬೃಹದಾರಣ್ಯಕವೆಂಬ ಉಪನಿಷತ್ತು.
ಹೀಗೆ ಆರಣ್ಯಕಗಳ ನಿಷ್ಕøಷ್ಟ ಸ್ವರೂಪಜ್ಞಾನಕ್ಕೆ ಬ್ರಾಹ್ಮಣ ಹಾಗೂ ಉಪನಿಷತ್ತುಗಳ ಸ್ಪಷ್ಟ ಪರಿಜ್ಞಾನ ಅತ್ಯವಶ್ಯ.
(ಕೆ.ಕೆ.)