ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಮೀನಿಯ

ವಿಕಿಸೋರ್ಸ್ದಿಂದ

ಆರ್ಮೀನಿಯ

ಸೋವಿಯತ್ ಗಣರಾಜ್ಯಗಳಲ್ಲೊಂದು. ಉತ್ತರದಲ್ಲಿ ಜಾರ್ಜಿಯ, ಪೂರ್ವದಲ್ಲಿ ಅಜರ್‍ಬೈಜಾನ್, ದಕ್ಷಿಣದಲ್ಲಿ ಇರಾನ್, ನೈಋತ್ಯ ಮತ್ತು ಪಶ್ಚಿಮದಲ್ಲಿ ತುರ್ಕಿ ದೇಶಗಳಿವೆ. ವಿಸ್ತೀರ್ಣ 11,583 ಚ. ಮೈಲುಗಳು, ಜನಸಂಖ್ಯೆ 21 ಲಕ್ಷ (1965). 88% ಆರ್ಮೀನಿಯರು, ಉಳಿದವರು ಅಜರ್‍ಬೈಜಾನಿಗಳು. ಅನೇಕ ಪರ್ವತ ಪಂಕ್ತಿ ಹಾಗೂ ಅಗ್ನಿ ಪರ್ವತಗಳಿಂದ ಕೂಡಿ 5000-8000 ಎತ್ತರವಿರುವ ಪ್ರಸ್ಥಭೂಮಿ ಪ್ರದೇಶವಾಗಿದೆ. ಮಧ್ಯದಲ್ಲಿ ಸೆವಾನ್ (ಗೋಕ್ಚ) ಸರೋವರವಿದೆ. ಇದು 547 ಚ.ಮೈ. ವಿಸ್ತಾರವಾಗಿ 6.273 ಎತ್ತರದಲ್ಲಿದ್ದು ಅಗ್ನಿಪರ್ವತಗಳಿಂದ ಸುತ್ತುವರಿಯಲ್ಪಟ್ಟಿದೆ. ಎತ್ತರಕ್ಕೆ ತಕ್ಕಂತೆ ವಾಯುಗುಣ ಬದಲಾವಣೆಗೊಂಡರೂ ಚಳಿಗಾಲದಲ್ಲಿ ಚಳಿ, ಬೇಸಗೆಯಲ್ಲಿ ಶಾಖ ಹೆಚ್ಚು. ವಾರ್ಷಿಕ ಮಳೆ 16.2". ಜ್ಯಾಂಗ್ ಉಪನದಿಯಿಂದ ಕೂಡಿದ ಅರಾಕ್ಸ್ ಕ್ಯಾಸ್ಪಿಯನ್ ಸಮುದ್ರವನ್ನು ಸೇರುತ್ತದೆ. ಇಲ್ಲಿನ ವಿಶಾಲವಾದ ಬಂಜರು ಮತ್ತು ಜೌಗು ಭೂಮಿಯನ್ನು ಸೆವಾನ್ ಸರೋವರ, ಅರ್ಪ, ಅರಾಕ್ಸ್ ನದಿಗಳ ನೀರಾವರಿ ವ್ಯವಸ್ಥೆಯಿಂದ ವ್ಯವಸಾಯಕ್ಕೆ ಅಳವಡಿಸಿದ್ದಾರೆ. ಎರಡನೆಯ ಮಹಾಯುದ್ಧದ ಅನಂತರ ನೀರಾವರಿಗೆ ಒಳಪಟ್ಟ ಭೂಮಿ 2 ಲಕ್ಷ ಹೆಕ್ಟೇರುಗಳು ಮತ್ತು ವ್ಯಾವಸಾಯಿಕ ಭೂಮಿ 4,60,777 ಹೆಕ್ಟೇರುಗಳು. ಇಲ್ಲಿನ ಮುಖ್ಯ ಬೆಳೆ ಗೋಧಿ, ಬಾರ್ಲಿ, ಬೀಟ್‍ರೂಟ್, ಹೊಗೆಸೊಪ್ಪು ಮತ್ತು ಹತ್ತಿ. ಇಲ್ಲಿ ಸುಮಾರು 5 ಲಕ್ಷ ದನಕರುಗಳು, 10 ಲಕ್ಷ ಕುರಿ ಮತ್ತು ಆಡು ಇವೆ. ಆರ್ಮೀನಿಯದ ಮುಖ್ಯ ಕೈಗಾರಿಕೆ ದ್ರಾಕ್ಷಾರಸ ತಯಾರಿಕೆ ಮತ್ತು ತಾಮ್ರದ ಗಣಿಕೆಲಸ. ಎರೆವನ್ ರಾಜಧಾನಿ. ಬಟ್ಟೆ, ರಾಸಾಯನಿಕ ವಸ್ತುಗಳು, ಕೃತಕ ರಬ್ಬರ್, ಟೈರುಗಳು, ಕೇಬಲ್ಲುಗಳು, ವಿದ್ಯುಚ್ಛಕ್ತಿ ತಿರುಬಾನಿಗಳು ತಯಾರಾಗುತ್ತವೆ. ಲೆನಿನಾಕನ್ ಎರಡನೆಯ ದೊಡ್ಡಪಟ್ಟಣ. ಆರಾರತ್‍ನಲ್ಲಿ ಸಿಮೆಂಟ್, ಕಿರೊವಾಕನ್‍ನಲ್ಲಿ ರಾಸಾಯನಿಕ ವಸ್ತುಗಳ ಕೈಗಾರಿಕೆಗಳಿವೆ. ಸೆವಾನ್ ಸರೋವರ ಹಾಗೂ eóÁಂಗಾ ನದಿಯ ನೀರನ್ನು ಉಪಯೋಗಿಸಿಕೊಂಡು ಹೆಚ್ಚಿನ ಪ್ರಮಾಣದ ವಿದ್ಯುಚ್ಛಕ್ತಿಯನ್ನು ತಯಾರಿಸಲಾಗುತ್ತಿದೆ. ಆರ್ಮೀನಿಯನ್ ಭಾಷೆಯ ಮುಖಾಂತರ ವಿದ್ಯಾಭ್ಯಾಸ ಮುಂದುವರಿಯುತ್ತದೆ. (ಕೆ.ಆರ್.ಆರ್.)

ಹಳೆಯ ಆರ್ಮೀನಿಯ ದೇಶದ ವಿಸ್ತಾರ 40,000 ಚ.ಮೈ. ಈ ರಾಜ್ಯ ಕ್ರಿ.ಪೂ. 6ನೆಯ ಶತಮಾನದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಕೆಲವು ಕಾಲದ ಮೇಲೆ ಇದು ರೋಮ್‍ರಾಜ್ಯದ ಒಂದು ಅಂಗವಾಯಿತು. ಮಧ್ಯಯುಗದಲ್ಲಿ ಮತ್ತೆ ಸ್ವತಂತ್ರವಾದ ಈ ರಾಜ್ಯದಲ್ಲಿ ಅಲ್ಲಿಯ ಅರಸರು ಆಳುತ್ತಿದ್ದರು. ಕ್ರಿ.ಶ. 1400ರಿಂದ ಮುಂದೆ ಇದನ್ನು ತುರುಕರು ಮತ್ತು ಪಾರ್ಸಿಗಳು ತಮ್ಮ ತಮ್ಮೊಳಗೆ ಹಂಚಿಕೊಂಡರು. ಕ್ರಿ. ಶ. 19ನೆಯ ಶತಮಾನ ಆರಂಭದಲ್ಲಿ ಇದರ ಬಹಳ ಭಾಗವನ್ನು ರಷ್ಯದವರು ಗೆದ್ದುಕೊಂಡರು. ಮೊದಲ ಮಹಾಯುದ್ಧದ ಕಾಲದವರೆಗೆ ಇದರಲ್ಲಿ ತುರುಕರು, ಪಾರ್ಸಿಗಳು ಮತ್ತು ರಷ್ಯನ್ನರಿಗೆ ಸೇರಿದ ಮೂರು ಭಾಗಗಳಿದ್ದುವು.

19ನೆಯ ಶತಮಾನದ ಅಂತ್ಯಕ್ಕೆ ತುರುಕರು ಆರ್ಮೀನಿಯರ ಕೊಲೆ ಮಾಡತೊಡಗಿದರು. ಆದುದರಿಂದ ಯೂರೋಪಿನಲ್ಲಿ ಆರ್ಮೀನಿಯನ್ನರ ಬಗೆಗೆ ಸಹಾನುಭೂತಿ ಮತ್ತು ಆತ್ಮೀಯ ಭಾವಗಳು ಹುಟ್ಟಿದುವು. 1908ರಲ್ಲಿ ತುರುಕ ಯುವಕರು ಹೆಚ್ಚಾದ ವ್ಯವಸ್ಥಿತ ರೀತಿಯಲ್ಲಿ ಆರ್ಮೀನಿಯರ ಕೊಲೆಯ ಕಾರ್ಯವನ್ನು ಕೈಗೊಂಡರು ಆಗ ಸು. 80,000 ಆರ್ಮೀನಿಯನ್ನರು ಕೊಲ್ಲಲ್ಪಟ್ಟರೆಂದು ತಿಳಿದುಬಂದಿದೆ.

ಆ ರೀತಿಯಲ್ಲಿ ಆರ್ಮೀನಿಯ ಗಣರಾಜ್ಯ 1918ರಲ್ಲಿ ತಲೆಯೆತ್ತಿತು. ಯೂರೋಪಿನ ಶಕ್ತಿಕೂಟದವರು ಇದನ್ನು 1920ರಲ್ಲಿ ಮನ್ನಿಸಿದರು. ಆದರೆ ಇದರ ಬಾಳ್ವೆ ನಾನಾ ಬಗೆಯಾಗಿ ಕೆಲವೇ ವರ್ಷಗಳಲ್ಲಿ ಕೊನೆಗೊಂಡಿತು. ಆಗ ಇಲ್ಲಿ ಬೋಲ್ಷೆವಿಸ್ಪರ ಪ್ರಭಾವ ಬೆಳೆಯುತ್ತಿದ್ದುದರಿಂದ 1921ರಲ್ಲಿ ಸೋವಿಯತ್ ಮಾದರಿಯ ಗಣರಾಜ್ಯ ರೂಪುಗೊಂಡಿತು.

ಕ್ರೈಸ್ತ ಪಂಥ ಕ್ರಿ.ಶ. 3ನೆಯ ಶತಮಾನದಲ್ಲಿ ಮೊದಲು ಇಲ್ಲಿ ತಳವೂರಿತು. ಆಡಳಿತ ಮತ್ತು ನಿಯಮಾಚರಣೆಗಳಲ್ಲಿ ಇದು ಗ್ರೀಕರ ಕ್ರೈಸ್ತಪಂಥವನ್ನು ಹೋಲುತ್ತದೆಯಾದರೂ ತಮ್ಮ ಧರ್ಮದ ಹಿರಿಯರ ಅಧಿಕಾರದಲ್ಲಿ ಇದು ಬೇರೆಯಾಗಿಯೇ ಬಾಳಿದೆ. ಜಗತ್ತಿನಲ್ಲಿ ಇದೇ ಅತಿ ಪ್ರಾಚೀನವಾದ ಕ್ರೈಸ್ತಪಂಥವೆಂದು ಅಲ್ಲಿಯವರು ಸಾರುತ್ತಾರೆ.

(ಎಚ್.ಜಿ.ಬಿ.)