ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಷ್ಟನ್ ವಿನಿಫ್ರೆಡ್

ವಿಕಿಸೋರ್ಸ್ದಿಂದ

1888-1965. ಇಂಗ್ಲಿಷ್ ಕಾದಂಬರಿಕಾರ್ತಿ. ಕಾವ್ಯನಾಮ ಕ್ಲೆಮನ್ಸ್ ಡೇನ್. ಹುಟ್ಟು ಲಂಡನ್ನಿನಲ್ಲಿ. 16ನೆಯ ವರ್ಷದಲ್ಲಿ ಜಿನೀವದಲ್ಲಿ ಒಂದು ವರ್ಷ ಫ್ರೆಂಚ್ ಪಾಠ ಹೇಳುತ್ತಿದ್ದು ಆಮೇಲೆ ಮೂರು ವರ್ಷ ಕಲಾಭ್ಯಾಸ ಮಾಡಿದಳು. ಮತ್ತೆ ಸ್ವಲ್ಪಕಾಲ ಐರ್ಲೆಂಡಿನಲ್ಲಿ ಉಪಾಧ್ಯಾಯಿನಿಯಾಗಿದ್ದು 1913ರಲ್ಲಿ ಡಯಾನ ಕರ್ಟಿಸ್ ಎಂಬ ಹೆಸರಿನಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದಳು. ಇವಳು ಬರೆದ ಮೊದಲ ಕಾದಂಬರಿ ರೆಜಿಮೆಂಟ್ ಆಫ್ ವಿಮೆನ್ (1917). ಉಪಾಧ್ಯಾಯಿನಿಯ ಜೀವನಚಿತ್ರಣ ಇದರ ವಸ್ತು. ಲೆಜೆಂಡ್ (1919) ಎಂಬುದು ಇನ್ನೊಂದು ಕಾದಂಬರಿ. ಇದು ಆಮೇಲೆ ನಾಟಕವಾಗಿ ರೂಪಾಂತರ ಹೊಂದಿತು.

ವಾಂಡರಿಂಗ್ ಸ್ಟಾರ್ಸ್ (1928), ಬ್ರೂಂ ಸ್ಟೇಜಸ್ (1931), ದಿ ಮೂನ್ ಈಸ್ ಫೆಮಿನೈನ್ (1938), ಹಿ ಬ್ರಿಂಗ್ಸ್ ಗ್ರೇಟ್ ನ್ಯೂಸ್ (1944), ದಿ ಫ್ಲವರ್ ಗರ್ಲ್ (1954) ಎಂಬುವು ಈಕೆಯ ಇತರ ಕಾದಂಬರಿಗಳು. ವಿಲ್ ಷೇಕ್ಸ್ಪಿಯರ್ (1921) ಎಂಬುದು ಈಕೆ ಬರೆದ ನಾಟಕಗಳಲ್ಲೊಂದು. ಬ್ರಾಂಟಿಗಳ ವಿಚಾರ ಕುರಿತ ವೈಲ್ಡ್ ಡಿಸೆಂಬರ್ಸ್ (1933) ಎಂಬುದೂ ಚಾಟರ್ಟನ್ನನನ್ನು ಕುರಿತ ಕಮ್ ಆಫ್ ಏಜ್ (1934) ಎಂಬುದೂ ಇನ್ನೆರಡು ನಾಟಕಗಳು. 1953ರಲ್ಲಿ ಈಕೆಗೆ ಸಿ.ಬಿ.ಇ. ಪ್ರಶಸ್ತಿ ಲಭಿಸಿತು.