ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಹವನೀಯ

ವಿಕಿಸೋರ್ಸ್ದಿಂದ

ಆಹವನೀಯ- ಶ್ರೌತಕರ್ಮಗಳಲ್ಲಿ ಉಪಯೋಗಿಸುವ ಮೂರು ಅಗ್ನಿಗಳಲ್ಲಿ ಒಂದು. ಅಗ್ನ್ಯಾಧಾನ ಕ್ರಿಯಾನಂತರ ದ್ವಿಜರಿಗೆ ಗಾರ್ಹಪತ್ಯ, ದಕ್ಷಿಣಾಗ್ನಿ ಮತ್ತು ಅಹವನೀಯ ಎಂಬ ಅಗ್ನಿಗಳು ಸಿದ್ಧವಾಗುತ್ತವೆ. ಅರಣಿಯಿಂದ ಕಡೆದು ಪಡೆದ ಅಗ್ನಿಯನ್ನು ಅದಕ್ಕಾಗಿ ನಿರ್ಮಿಸಿದ ಕುಂಡಗಳಲ್ಲಿ ಇಡಬೇಕು. ಇವುಗಳಲ್ಲಿ ಯಾಗಶಾಲೆಯೊಳಗೆ ಪೂರ್ವದಿಕ್ಕಿನಲ್ಲಿರುವ ಕುಂಡದಲ್ಲಿ ಸೂರ್ಯಬಿಂಬ ಅರ್ಧ ಉದಯಿಸಿದಾಗ ಇಟ್ಟು ಸಿದ್ಧವಾದ ಅಗ್ನಿಯೇ ಅಹವನೀಯ. ಯಾಗದಲ್ಲಿ ಯಜಮಾನನ ಪಾತ್ರ ಪ್ರಧಾನವಾದರೂ ಈ ಅಗ್ನಿಯಲ್ಲಿ ಹೋಮ ಮಾಡುವವ ಅಧ್ವರ್ಯು ಎಂಬ ಋತ್ವಿಕ್ಕು. ಈ ಅಗ್ನಿಯನ್ನು ಆರದಂತೆ ಕಾಪಾಡಿಕೊಂಡು ಬರುವುದು ಒಂದು ವಿಧ. ಗಾರ್ಹಪತ್ಯಾಗ್ನಿಯಿಂದ ಅಹವನೀಯ ಕುಂಡಕ್ಕೆ ಅಗ್ನಿಯನ್ನು ಪ್ರತಿನಿತ್ಯದಲ್ಲೂ ತಂದಿಟ್ಟುಕೊಂಡು ಹೋಮಕರ್ಮಾನಂತರ ಆ ಅಗ್ನಿಯನ್ನು ಬಿಡುವುದು ಇನ್ನೊಂದು ವಿಧ. (ಎಸ್.ಎನ್.ಕೆ.)