ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಹ್ವಾನಿತ ಧನ
ಗೋಚರ
ಹಣವನ್ನು ಪಾವತಿಮಾಡಬೇಕೆಂಬುದಾಗಿ ತಿಳಿಸುವ ನಿರ್ಣಯದ ತಿಳಿವಳಿಕೆಯನ್ನು ಷೇರುದಾರನಿಗೆ ಕೊಟ್ಟಾಗ ಆತ ಕಂಪೆನಿಗೆ ಸಂದಾಯ ಮಾಡಬೇಕಾದ ಹಣದ ಮೊತ್ತ (ಕಾಲ್ ಮನಿ). ಕೂಡುಬಂಡವಾಳ ಕಂಪನಿಯ ಷೇರುದಾರ ತನ್ನ ಆವೇದನ ಪತ್ರದ ಜೊತೆಯಲ್ಲಿಯೇ ತಾನು ಪಡೆಯುವ ಷೇರಿನ ಪೂರ್ತಿ ಹಣವನ್ನು ಕೊಡಬೇಕಾದ ಅಗತ್ಯವಿಲ್ಲ. ಈ ಹಣವನ್ನು ಹಲವು ಕಂತುಗಳಲ್ಲಿ-ಎಂದರೆ ಆವೇದನ ಪತ್ರ ಸಲ್ಲಿಸುವಾಗ, ಷೇರುಗಳನ್ನು ಹಂಚಿದಾಗ ಮತ್ತು ಹಣ ಬೇಕೆಂದು ಕಂಪೆನಿ ಕರೆ ನೀಡಿದಾಗ-ಹೀಗೆ ಕ್ರಮವಾಗಿ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಆಹ್ವಾನಿತಧನವೆನ್ನುವುದು ಷೇರು ಮೌಲ್ಯದ ಒಂದು ಭಾಗ. ಈ ಧನವನ್ನು ಷೇರುದಾರ ಒಂದು ನಿಯಮಿತ ಅವಧಿಯಲ್ಲಿ ಪಾವತಿ ಮಾಡಬೇಕು. ಇಲ್ಲದಿದ್ದರೆ ಅಂಥವನ ಷೇರು ಅಥವಾ ಷೇರುಗಳನ್ನು ಮುಟ್ಟುಗೋಲುಹಾಕಿಕೊಳ್ಳಲು ಕಂಪೆನಿಗೆ ಅಧಿಕಾರವಿರುತ್ತದೆ.