ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಡಿಯನ್ ಒಪಿನಿಯನ್
ಇಂಡಿಯನ್ ಒಪಿನಿಯನ್ ದಕ್ಷಿಣ ಆಫ್ರಿಕದ ಡರ್ಬಾನಿನಲ್ಲಿ, ಮನ್ ಸುಖ್ಲಾಲ್ ನಾಜರ್ ಅವರ ಸಂಪಾದಕತ್ವದಲ್ಲಿ 1904ರ ಡಿಸೆಂಬರ್ 24ರಂದು ಗಾಂಧೀಜಿ ಪ್ರಾರಂಭಿಸಿದ ವಾರಪತ್ರಿಕೆ.
ಸವಿನಯ ಕಾಯಿದೆಭಂಗ ಚಳವಳಿಯ ಮುಖಪತ್ರವಾಗಿ, 1913ರಲ್ಲಿ ದಕ್ಷಿಣ ಆಫ್ರಿಕ ಸರ್ಕಾರ ಮಂಡಿಸಿದ್ದ ವಲಸೆಗಾರರ ನಿಯಂತ್ರಣ ವಿಧೇಯಕವನ್ನು ವಿರೋಧಿಸುವಲ್ಲಿ ಈ ವಾರಪತ್ರಿಕೆ ತಳೆದ ಪಾತ್ರ ಮಹತ್ವದ್ದು. ಅಲ್ಲಿನ ಭಾರತೀಯರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಪತ್ರಿಕೆ ಪ್ರಮುಖ ಪಾತ್ರ ವಹಿಸಿತ್ತು. ಅಹಿಂಸಾತ್ಮಕ, ಸವಿನಯ, ವಿರೋಧ ಮೂಲ ಹೋರಾಟಕ್ಕೆ ಸತ್ಯಾಗ್ರಹ ಎಂದು ಹೆಸರು (ಸೂಚಕರು; ಮದನ್ ಲಾಲ್ ಗಾಂಧಿ) ಬಂದದ್ದೂ ಈ ಪತ್ರಿಕೆಯಿಂದಲೇ.
ನಾಲ್ಕು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ತಮಿಳು) ಫೂಲ್ಸ್ಕ್ಯಾಪ್ ಆಕಾರದಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆಯ ಇಂಗ್ಲಿಷ್ ವಿಭಾಗ ಗಾಂಧೀಜಿಯ ಲೇಖನಿಗೆ ಮೀಸಲಾಗಿದ್ದವು. ಜನಪ್ರಿಯವಾಗಿದ್ದ ವೀಕ್ಲಿ ಡೈರಿ ಅಲ್ಲದೆ ಲೇಖನಮಾಲೆಯಾಗಿ ಗಾಂಧೀಜಿಯ ಹಿಂದ್ ಸ್ವರಾಜ್ಯ ಗ್ರಂಥ ಪ್ರಕಟನೆ ಈ ಪತ್ರಿಕೆಯ ವೈಶಿಷ್ಟ್ಯ.
ಡರ್ಬಾನಿನಿಂದ ಫೋನಿಕ್ಸ್ನ ಸಾಮುದಾಯಿಕ ವ್ಯವಸಾಯ ಕ್ಷೇತ್ರಕ್ಕೆ ಸ್ಥಳಾಂತರಗೊಂಡು, ಅಲ್ಲಿನ ಚಿಕ್ಕ ದೊಡ್ಡವರೆಲ್ಲರ ಬಿಡುವಿನ ದುಡಿಮೆಯೊಂದಿಗೆ, ಟ್ರೆಡಲ್ ಯಂತ್ರದಲ್ಲಿ ಅಚ್ಚಾಗುತ್ತಿದ್ದ ಈ ಪತ್ರಿಕೆ ಮುಂದೆ ಬಹುಕಾಲ ಬಾಳಲಿಲ್ಲ. (ನೋಡಿ- ಗಾಂಧೀ,-ಮೋಹನ್ದಾಸ್-ಕರಮ್ಚಂದ್) (ಪಿ.ಆರ್.ಕೆ.)