ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಡಿಯನ್ ನ್ಯಾಷನಲ್ ಆರ್ಮಿ

ವಿಕಿಸೋರ್ಸ್ ಇಂದ
Jump to navigation Jump to search

ಇಂಡಿಯನ್ ನ್ಯಾಷನಲ್ ಆರ್ಮಿ- ಈ ಹೆಸರಿನ ಪ್ರಸಿದ್ಧ ಸೈನ್ಯವನ್ನು ಕಟ್ಟಿದವರು ಸುಭಾಸ್‍ಚಂದ್ರ ಬೋಸ್. ಕಟ್ಟಿದ ಸಂದರ್ಭ ಗಮನಾರ್ಹವಾದುದು. ಮೊದಲ ಮಹಾಯುದ್ಧವಾದ ಮೇಲೆ ಭಾರತೀಯ ರಾಷ್ಟ್ರೀಯ ಚಳವಳಿಯನ್ನು ದೂರ ಪ್ರಾಚ್ಯದಲ್ಲೂ ಹರಡಲು ಮೊಟ್ಟಮೊದಲನೆಯದಾಗಿ ಪ್ರಯತ್ನ ಮಾಡಿದವರು ರಾಶ್‍ಬಿಹಾರಿ ಬೋಸ್. ಈ ಪ್ರಯತ್ನದ ಫಲವಾಗಿ ಜಪಾನಿನಲ್ಲಿ ಭಾರತೀಯ ಸ್ವಾತಂತ್ರ್ಯ ಮಂಡಲಿ ಸ್ಥಾಪಿತವಾಯಿತು. ಜಪಾನೀಯರ ಸಹಾಯ, ಸಹಕಾರದಿಂದ ಕೆಲಸವನ್ನು ಆರಂಭಿಸಿದ ರಾಶ್‍ಬಿಹಾರಿ ಬೋಸ್ ಎರಡನೆಯ ಮಹಾಯುದ್ಧ ಪ್ರಾರಂಭವಾಗುವವರೆಗೆ ಅಹೋರಾತ್ರಿ ದುಡಿದರು. ಬ್ರಿಟನ್ ಮತ್ತು ಅಮೆರಿಕದ ವಿರುದ್ಧವಾಗಿ 1941ರಲ್ಲಿ ಜಪಾನ್ ಯುದ್ಧವನ್ನು ಘೋಷಿಸಿದಾಗ ಜಪಾನಿನ ಭಾರತೀಯ ಸ್ವಾತಂತ್ರ್ಯದ ಮಂಡಲಿಯ ಆಶ್ರಯದಲ್ಲಿ ಭಾರತವನ್ನು ಬ್ರಿಟನ್ನಿನ ಹಿಡಿತದಿಂದ ವಿಮುಕ್ತಿಗೊಳಿಸಲು ಶಸ್ತ್ರಾಸ್ತ್ರಗಳ ಚಳವಳಿಯನ್ನು ಆರಂಭಿಸಲು ತಮಗೆ ಎಲ್ಲ ನೆರವನ್ನು ನೀಡಬೇಕೆಂದು ಬೋಸರು ಮತ್ತು ಮಿತ್ರರು ಜಪಾನ್ ಸರ್ಕಾರವನ್ನು ಪ್ರಾರ್ಥಿಸಿದರು. ಬೋಸ್‍ನ ಯೋಜನೆಯನ್ನು ಜಪಾನಿನ ಪ್ರಧಾನಿ ಟೊಜೊ ಬಹುವಾಗಿ ಮೆಚ್ಚಿಕೊಂಡು, ಎಲ್ಲ ಸಹಾಯವನ್ನು ಒದಗಿಸಿಕೊಟ್ಟ. ದೂರಪ್ರಾಚ್ಯದಲ್ಲಿ ನೆಲೆಸಿದ್ದ ಎಲ್ಲ ಭಾರತೀಯರ ಅಭಿಪ್ರಾಯವನ್ನು ಪಡೆದು ಬ್ಯಾಂಗ್ಕಾಕ್‍ನಲ್ಲಿ ಭಾರತೀಯ ಸ್ವಾತಂತ್ರ್ಯ ಮಂಡಲಿಯ ಆಶ್ರಯದಲ್ಲಿ ಪೂರ್ವ ಏಷ್ಯದಲ್ಲಿ ನೆಲಸಿದ್ದ ಭಾರತೀಯರ ಪ್ರತಿನಿಧಿಗಳ ಸಭೆ ಕರೆದು, ಬೋಸರನ್ನು ಅದರ ನಾಯಕನನ್ನಾಗಿ ಆರಿಸಲಾಯಿತು. ಸಭೆ ಮುಕ್ತಾಯಗೊಂಡ ಮೇಲೆ ಮಂಡಲಿಯ ಶಾಖೆಗಳನ್ನು ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಯಿತು. ಸಿಂಗಪುರದಲ್ಲಿ ಶಸ್ತ್ರಸಜ್ಜಿತ ಸೇವಕರುಗಳಿಗೆ ತರಬೇತು ಕೊಡಲಾಯಿತು. ಯುದ್ಧ ಕೈದಿಗಳೇ ಅಧಿಕ ಸಂಖ್ಯೆಯಲ್ಲಿದ್ದ ಆ ಪಡೆಯಲ್ಲಿ ಒಗ್ಗಟ್ಟು, ಶಿಸ್ತು, ಸಂಯಮ ಮಾಯವಾದವು. ಸುಭಾಸ್‍ಚಂದ್ರಬೋಸರೇ ಸ್ವಾತಂತ್ರ್ಯ ಚಳವಳಿಯನ್ನು ಹರಡಲು ತಕ್ಕವರೆಂದು ಭಾವಿಸಿ, ರಾಶ್ ಬಿಹಾರಿ ಬೋಸ್ ಜಪಾನಿನ ಸರ್ಕಾರದ ಅನುಮತಿ ಪಡೆದು ಅವರನ್ನು ಪೂರ್ವ ಏಷ್ಯಕ್ಕೆ ಬರುವಂತೆ ಆಹ್ವಾನಿಸಿದರು. ಸುಭಾಸ್‍ಚಂದ್ರ ಬೋಸ್ 1943ರ ಜೂನ್ 13ರಂದು ಟೋಕಿಯೊಗೆ ಆಗಮಿಸಿದರು. ಭಾರತೀಯ ಸ್ವಾತಂತ್ರ್ಯದ ಮಂಡಲಿಯ ಅಧ್ಯಕ್ಷರಾಗಿ ಅವರು 1943ನೆಯ ಅಕ್ಟೋಬರ್ 21ರಂದು ಆeóÁದ್ ಹಿಂದ್ ತಾತ್ಕಾಲಿಕ ಸರ್ಕಾರವನ್ನು ಘೋಷಿಸಿದರು. ಚಳವಳಿಯನ್ನು ತೀವ್ರಗೊಳಿಸುವುದಕ್ಕಾಗಿ ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು.

ಜಪಾನೀಯರ ಶಸ್ತ್ರಾಸ್ತ್ರಗಳನ್ನು ಒದಗಿಸಿಕೊಟ್ಟು ಬೋಸರು ಸೇನೆಗೆ ಹೊಸ ಚೇತನವನ್ನು ತುಂಬಿದರು. ಜೈಹಿಂದ್, ಚಲೋ ದಿಲ್ಲಿ-ಎಂಬ ವೀರ ಘೋಷಣೆಗಳನ್ನು ಬಳಕೆಗೆ ತಂದರು. ಯುದ್ಧದಿಂದಲ್ಲದೆ ಬೇರಾವ ಸಾಧನದಿಂದಲೂ ಭಾರತದ ಸ್ವಾತಂತ್ರ್ಯ ಸಾಧ್ಯವಿಲ್ಲವೆಂದು ಘೋಷಿಸಿ, ಚಳವಳಿಯನ್ನು ಸಮರದ ತಳಹದಿಯ ಮೇಲೆ ರೂಪಿಸಿ, ತೀವ್ರಗೊಳಿಸಿದರು. ಮುಖ್ಯ ಸೇನಾಧಿಪತ್ಯವನ್ನು ತಾವೇ ವಹಿಸಿಕೊಂಡು, ದಂಡೆತ್ತಿ ಹೋಗಿ ಬ್ರಿಟಿಷ್ ಸೈನ್ಯದ ಮೇಲೆ ಬಿದ್ದು, ಅವರನ್ನೂ ಅವರ ನೆಲಗಳನ್ನೂ ಧ್ವಂಸ ಮಾಡತೊಡಗಿದರು. ಚಳವಳಿಯನ್ನು ಕ್ರಮಬದ್ಧವಾಗಿಯೂ ದಕ್ಷತೆಯಿಂದಲೂ ನಡೆಸುವ ಉದ್ದೇಶದಿಂದ ಅವರು ಆeóÁದ್ ಹಿಂದ್ ತಾತ್ಕಾಲಿಕ ಸರ್ಕಾರದ ಮೂಲ ಕೇಂದ್ರವನ್ನು ಸಿಂಗಪುರದಿಂದ ರಂಗೂನಿಗೆ ವರ್ಗಾಯಿಸಿದರು.

1944ನೆಯ ಸೆಪ್ಟೆಂಬರ್‍ನಲ್ಲಿ ಇಟಲಿ ಸೋತು ಶರಣಾದುದು ಆeóÁದ್ ಹಿಂದ್ ಚಳವಳಿಗೆ ಭಾರಿ ಪೆಟ್ಟು ಬಿದ್ದಂತಾಯಿತು. ಅಮೆರಿಕ ಪೆಸಿಫಿಕ್ ಸಾಗರದಲ್ಲಿ ತನ್ನ ನೆಲೆಗಳನ್ನು ಮತ್ತೆ ಪಡೆದುಕೊಂಡದ್ದರಿಂದ ಜಪಾನ್ ಹೆಚ್ಚಿನ ಗಮನವನ್ನು ತನ್ನ ನಗರ ರಕ್ಷಣೆಯ ಕಡೆ ಹರಿಸಬೇಕಾಯಿತು. ತತ್ಪರಿಣಾಮವಾಗಿ ಆeóÁದ್ ಹಿಂದ್ ಸೈನ್ಯಕ್ಕೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ನೆರವನ್ನು ಜಪಾನ್ ಕೊಡಲಾರದೆ ಹೋಯಿತು. ಇಂಡೋ-ಬರ್ಮ ಗಡಿಯಲ್ಲಿ ಆeóÁದ್ ಹಿಂದ್ ಸೈನ್ಯ ನಡೆಸಿದ ಹೋರಾಟ ಸಾರ್ಥಕವಾಗಲಿಲ್ಲ. ಸೈನ್ಯ ವೀರಾವೇಶದಿಂದ ಯುದ್ಧ ಮಾಡಿದರೂ ಇಂಫಾಲ್ ಮತ್ತು ಕೊಹಿಮ ಆಕ್ರಮಣಗಳಲ್ಲಿ ಸೋತುಹೋಯಿತು. ಮಣಿಪುರವನ್ನು ರಕ್ಷಿಸುವುದಕ್ಕಾಗಿ ಬ್ರಿಟನ್ ಶಕ್ತಿಮೀರಿ ಹೋರಾಡಿತು. ಅದರ ಶಸ್ತ್ರಾಸ್ತ್ರಗಳು ಉತ್ತಮ ದರ್ಜೆಯವಾಗಿದ್ದವು. ಸ್ವಲ್ಪಕಾಲದ ಮೇಲೆ ಗಡಿಯ ಸಮರಗಳಲ್ಲಿ ಬ್ರಿಟಿಷ್ ಯುದ್ಧ ಯಂತ್ರಗಳ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾಗಲೇ ಇಲ್ಲ. 1944ರ ಹೊತ್ತಿಗೆ ಆeóÁದ್ ಹಿಂದ್ ಸೈನ್ಯ ಯುದ್ಧವನ್ನು ಪೂರ್ಣವಾಗಿ ಕಳೆದುಕೊಂಡಿತೆಂದೇ ಹೇಳಬಹುದು. 1945ರ ಆದಿಭಾಗದಲ್ಲಿ ಬರ್ಮದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಬ್ರಿಟಿಷ್ ಸೈನ್ಯ ತಂಡೋಪತಂಡವಾಗಿ ಧಾವಿಸಲು ಪ್ರಾರಂಭಿಸಿತು. ಅವರು ಮಾಂಡಲೆಯನ್ನು ವಶಪಡಿಸಿಕೊಂಡು ಅನಂತರ ರಂಗೂನನ್ನು ತಮ್ಮ ಅಧೀನಪಡಿಸಿಕೊಂಡರು. 1945ರ ಆಗಸ್ಟ್‍ನಲ್ಲಿ ಜಪಾನ್ ಶರಣಾಗತವಾಯಿತು. ಇದರ ಜೊತೆಯಲ್ಲಿಯೇ ಆeóÁದ್ ಹಿಂದ್ ಚಳವಳಿ ನಿಂತಿತು. ಈ ಚಳವಳಿ ಜಪಾನೀಯರ ಯುದ್ಧದೊಂದಿಗೆ ಬೆರೆತುಹೋದದ್ದರಿಂದ ಜಪಾನ್ ಸೋತಾಗ ಚಳವಳಿಯೂ ಕೊನೆಗೊಂಡಿತು.

ಭಾರತ ರಾಷ್ಟ್ರೀಯ ಸೇನೆಯ ಅಧಿಕಾರಿಗಳನ್ನು ಭಾರತದಲ್ಲಿ ವಿಚಾರಣೆಗೆ ಗುರಿ ಪಡಿಸಿದಾಗ ಆ ಸೇನೆಯ ಮಹತ್ತ್ವವೇನೆಂಬುದು ಎಲ್ಲರಿಗೂ ಗೊತ್ತಾಯಿತು. ಭಾರತದ ರಾಜಕೀಯ ಪಕ್ಷಗಳೂ ಜನತೆಯೂ ಅವರನ್ನು ಸ್ವಾತಂತ್ರ್ಯ ಯೋಧರೆಂದು ಹೊಗಳಿದವು. ಅವರನ್ನು ಸೆರೆಮನೆಗಳಿಂದ ಬಿಡುಗಡೆ ಮಾಡಬೇಕೆಂದು ಭಾರತದಲ್ಲಿ ಗಲಭೆಗಳು, ಚಳವಳಿಗಳು ನಡೆದವು. ಭಾರತದ ಕೋಟಿ ಕೋಟಿ ಜನರ ಮನಸ್ಸಿನಲ್ಲಿ ಭಾರತ ರಾಷ್ಟ್ರೀಯ ಸೈನ್ಯ ಶಾಶ್ವತ ಸ್ಥಾನವನ್ನು ಪಡೆದಿದೆ. ಅದು ವಿಶ್ವದ ವಿವಿಧ ಭಾಗಗಳಲ್ಲಿ ಜರುಗಿದ ಸಮರಗಳಲ್ಲಿ ಭಾಗವಹಿಸಿ, ತನ್ನ ಧೈರ್ಯೋತ್ಸಾಹಗಳನ್ನು ಪ್ರದರ್ಶಿಸಿ ಭಾರತೀಯರಿಗೆ ಕೀರ್ತಿಯನ್ನು ತಂದು ಕೊಟ್ಟಿತು. ವಿಶ್ವದ ದೃಷ್ಟಿಯಲ್ಲಿ ಅದರ ಗೌರವ ಘನತೆಗಳು ಮೇಲೇರಿದವು. ಭಾರತದ ಸ್ವಾತಂತ್ರ್ಯ ಸಾಧನೆಗೆ ಭಾರತ ರಾಷ್ಟ್ರೀಯ ಸೇನೆಯ ಕೊಡುಗೆ ಗಮನಾರ್ಹವಾದದ್ದು.