ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಡಿಯನ್ ಸಿವಿಲ್ ಸರ್ವಿಸ್

ವಿಕಿಸೋರ್ಸ್ದಿಂದ

ಇಂಡಿಯನ್ ಸಿವಿಲ್ ಸರ್ವಿಸ್

ಭಾರತವನ್ನು ಬ್ರಿಟಿಷರು ಆಳುತ್ತಿದ್ದಾಗ ದೇಶದ ಸ್ವಸ್ಥಸ್ಥಿತಿಯ ಆಡಳಿತಗಳನ್ನು ನೋಡಿಕೊಳ್ಳಲು ಸರ್ಕಾರದವರು ಏರ್ಪಡಿಸಿದ್ದ ಇಲಾಖೆ, ಅದರ ಲೋಕಸೇವಾ ಅಧಿಕಾರಿವರ್ಗ (ಐಸಿಎಸ್). ಸ್ವತಂತ್ರ ಭಾರತದಲ್ಲಿ ಈ ಹಳೆಯ ವ್ಯವಸ್ಥೆ ಕೊನೆಗೊಂಡಿದ್ದು ಅದರ ಸ್ಥಾನದಲ್ಲಿ ಹೊಸದೊಂದು ವ್ಯವಸ್ಥೆ ರೂಪುಗೊಂಡಿದೆ. ಭಾರತದಲ್ಲಿ ಲೋಕಸೇವೆಯ ಇತಿಹಾಸವನ್ನು ತಿಳಿಯಬೇಕಾದರೆ ಈಸ್ಟ್ ಇಂಡಿಯ ಕಂಪನಿಯ ಆಡಳಿತ ಚರಿತ್ರೆಯನ್ನು ಓದಬೇಕು. ರಾಜಕೀಯ ಅಧಿಕಾರ ಕಂಪನಿಯ ಕೈಗೆ ಸಿಕ್ಕಿದರೂ ಸರ್ಕಾರದ ಆಡಳಿತದ ಕೆಳದರ್ಜೆಯ ಅಧಿಕಾರಿಗಳು ಭಾರತೀಯರೇ ಆಗಿದ್ದರು. ಕಂಪನಿ ನೇಮಿಸಿಕೊಂಡಿದ್ದ ಕೆಲವು ನೌಕರರಿಗೆ ತಮ್ಮ ಕೆಲಸಗಳಲ್ಲಿ ಯಾವ ತರಬೇತೂ ಇರಲಿಲ್ಲ. ಅವರಿಗೆ ತುಂಬ ಕಡಿಮೆ ಸಂಬಳ ಕೊಡಲಾಗುತ್ತಿತ್ತು. ತಮಗೆ ಆಗುತ್ತಿದ್ದ ಖೋತಾವನ್ನು ಅವರು ಖಾಸಗಿ ವ್ಯಾಪಾರದಿಂದಲೂ ಇನಾಮುಗಳನ್ನು ಸ್ವೀಕರಿಸಿಯೂ ಭರ್ತಿಮಾಡಿಕೊಳ್ಳುತ್ತಿದ್ದರು. ಆದ್ದರಿಂದ ಅವರು ಕಡಿಮೆ ಸಂಬಳ ಪಡೆಯುತ್ತಿದ್ದರೂ ಬಹುಬೇಗ ಶ್ರೀಮಂತರಾಗುತ್ತಿದ್ದರು. ಇದನ್ನು ತಡೆಯಲು ನೌಕರರು ಕಂಪನಿಯೊಂದಿಗೆ ಒಂದು ಹೊಸ ಒಪ್ಪಂದ ಮಾಡಿಕೊಳ್ಳಬೇಕೆಂದು ಲಾರ್ಡ್ ಕ್ಲೈವ್ ಬಲಾತ್ಕರಿಸಿದ. ಇದರ ಪ್ರಕಾರ ಅವರು ಖಾಸಗಿ ವ್ಯಾಪಾರ ಮಾಡುವಂತಿರಲಿಲ್ಲ; ಬೇರೆಯವರಿಂದ ಸಂಭಾವನೆಗಳನ್ನೂ ಸ್ವೀಕರಿಸಬಾರದೆಂದಿತ್ತು. ಈ ಕಾರಣದಿಂದಲೇ ಲೋಕ ಸೇವೆಯನ್ನು ಕರಾರುಬದ್ದ ಲೋಕಸೇವೆಯೆಂದು (ಕವಿನೆಂಟೆಡ್ ಸಿವಿಲ್ ಸರ್ವಿಸ್) ಕರೆಯಲಾಯಿತು. ನಷ್ಟವನ್ನು ಭರ್ತಿಮಾಡಿಕೊಡುವ ಉದ್ದೇಶದಿಂದ ಲಾರ್ಡ್ ಕ್ಲೈವ್ ಒಂದು ಹೊಸ ಯೋಜನೆಯನ್ನು ರೂಪಿಸಿ ಇಂಗ್ಲೆಂಡಿಗೆ ಕಳುಹಿಸಿಕೊಟ್ಟ. ಆದರೆ ಅದನ್ನು ಕಂಪನಿಯ ನಿರ್ದೇಶಕರು ನಿರಾಕರಿಸಿದರು.

ಕಾರ್ನ್‍ವಾಲಿಸನ ಸುಧಾರಣೆಗಳು : ಕಂಪನಿಯ ಲೋಕಸೇವೆಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದ ಕೀರ್ತಿ ಕಾರ್ನ್‍ವಾಲಿಸನಿಗೆ ಸೇರುತ್ತದೆ. ಈತ ಎಲ್ಲ ಉನ್ನತ ಹುದ್ದೆಗಳನ್ನೂ ಇಂಗ್ಲಿಷರಿಗೂ ಐರೋಪ್ಯರಿಗೂ ಕಾದಿರಿಸಿದ. ತಮ್ಮ ಹುಟ್ಟಿನ ಬಲದಿಂದಲೂ ತಾವು ಪಡೆದ ತರಬೇತಿಯಿಂದಲೂ ರಾಜ್ಯಾಡಳಿತಕ್ಕೆ ಇಂಗ್ಲಿಷರು ಮತ್ತು ಐರೋಪ್ಯರು ಅರ್ಹರೆಂದು ಆತ ಭಾವಿಸಿದ್ದ. ಆದಾಗ್ಯೂ ಆಡಳಿತದ ಕೆಳದರ್ಜೆಯ ಅಧಿಕಾರದಲ್ಲಿದ್ದವರು ಭಾರತೀಯರೇ. ಕಂಪನಿಯ ನೌಕರರು ಖಾಸಗಿ ವ್ಯಾಪಾರದಲ್ಲಿ ನಿರತರಾಗಿರಕೂಡದೆಂದೂ ಕಾಯಿದೆಯನ್ನು ಉಲ್ಲಂಘಿಸಿದವರಿಗೆ ಕಠಿಣಶಿಕ್ಷೆ ವಿಧಿಸಲಾಗುವುದೆಂದೂ ಅವನು ಪ್ರಚುರಪಡಿಸಿದ. ಕಂಪನಿಯ ನೌಕರರು ಅಚ್ಚುಕಟ್ಟಾದ ಜೀವನ ನಡೆಸಿ, ಬಂದ ಸಂಬಳದಲ್ಲಿ ಅಲ್ಪಸ್ವಲ್ಪ ಉಳಿಸಿ ತಮ್ಮ ಸ್ವದೇಶಕ್ಕೂ ತೆಗೆದುಕೊಂಡು ಹೋಗುವಂತೆ ಮಾಡಲು ಆತ ಅವರ ಸಂಬಳ ಹೆಚ್ಚಿಸಿದ. ನೌಕರರಲ್ಲಿ ಪ್ರಾಮಾಣಿಕತೆಯನ್ನೂ ದಕ್ಷೆಯನ್ನೂ ಹೆಚ್ಚಿಸುವುದೇ ಸುಧಾರಣೆಗಳ ಮುಖ್ಯೋದ್ದೇಶವಾಗಿತ್ತು. 1793ರ ಕಾಯಿದೆಯಲ್ಲಿ ಕಾರ್ನ್‍ವಾಲಿಸನ ಸುಧಾರಣೆಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದುವು. ಕರಾರುಬದ್ದಸೇವೆಯಲ್ಲಿ ಕೊನೆಯ ಪಕ್ಷ ಮೂರು ವರ್ಷಗಳವರೆಗೂ ಇರದ ಯಾವ ನೌಕರನನ್ನೂ ಐನೂರು ಪೌಂಡು ವಾರ್ಷಿಕವೇತನವಿರುವ ಹುದ್ದೆಗಳಿಗೆ ನೇಮಿಸಕೂಡದೆಂದು ಅವನು ನಿರ್ಣಯಿಸಿದ. ಹಿರಿಯರಿಗೆ ಮಾತ್ರ ಬಡ್ತಿ ದೊರೆಯುತ್ತಿತ್ತು.

ಲಾರ್ಡ್ ವೆಲ್ಲೆಸ್ಲಿ : ತರುಣ ನೌಕರರ ತರಬೇತಿಗಾಗಿ ಈತ ಕಲ್ಕತ್ತದಲ್ಲಿ ಒಂದು ಕಾಲೇಜು ಸ್ಥಾಪಿಸಿದ. ಕಂಪನಿಯ ನೌಕರರಾಗಿ ನೇಮಕವಾಗಿ ಬಂದ ಎಲ್ಲ ಇಂಗ್ಲಿಷರು ಈ ತರಬೇತಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಇದ್ದು ಭಾರತೀಯ ಚರಿತ್ರೆ, ನ್ಯಾಯ ಮತ್ತು ಭಾಷೆಗಳ ಬಗ್ಗೆ ಶಿಕ್ಷಣ ಪಡೆಯಬೇಕಾಗಿತ್ತು. ನಿರ್ದೇಶಕರು ಅದನ್ನು ಒಪ್ಪದ್ದರಿಂದ ಆ ಕಾಲೇಜನ್ನು ಮುಚ್ಚಬೇಕಾಯಿತು. ಆದರೂ ಆ ನಿರ್ದೇಶಕರೇ ಸ್ವಯಂ ಪ್ರೇರಣೆಯಿಂದ 1806ರಲ್ಲಿ ಹೈಲ್ ಬರಿ ಎಂಬಲ್ಲಿ ಒಂದು ಕಾಲೇಜು ಸ್ಥಾಪಿಸಿದರು. ಹೈಲ್ ಬರಿಯಲ್ಲಿ ನಾಲ್ಕು ಕಾಲಾವಧಿಯವರೆಗೆ ಇರದ ಯಾರನ್ನೂ ಭಾರತದಲ್ಲಿ ಗುಮಾಸ್ತೆಯಾಗಿ ನೇಮಕ ಮಾಡಿಕೊಳ್ಳಕೂಡದೆಂಬುದಾಗಿ 1813ರಲ್ಲಿ ಜಾರಿಗೆ ಬಂದ ಸನ್ನದು ಕಾಯಿದೆ ವಿಶದಪಡಿಸಿತು. ಅಲ್ಲದೆ ನೌಕರಿಗಾಗಿ ಬರುವ ಅಭ್ಯರ್ಥಿ ನೀತಿನಿಯಮಗಳನ್ನು ತಿಳಿದುಕೊಂಡಿದ್ದಾನೆಂದೂ ನೌಕರನಾಗಲು ಅರ್ಹತೆ ಪಡೆದಿರುವನೆಂದೂ ಆ ಕಾಲೇಜಿನ ಪ್ರಿನ್ಸಿಪಾಲರಿಂದ ಬರೆಸಿಕೊಂಡು; ಬರಬೇಕಾಗಿತ್ತು. ಆ ಕಾಲೇಜಿಗೆ ಸೇರಿಕೊಳ್ಳುತ್ತಿದ್ದ ತರುಣ ಇಂಗ್ಲಿಷರನ್ನು ನಿರ್ದೇಶಕರು ನಾಮಕರಣ ಮಾಡುತ್ತಿದ್ದರು. ಹೈಲ್‍ಬರಿ ಕಾಲೇಜು 1858ರ ವರೆಗೆ ಸಮರ್ಪಕವಾಗಿ ತನ್ನ ಜವಾಬ್ದಾರಿ ನಿರ್ವಹಿಸಿತು. ಕಂಪನಿಯ ನಿರ್ದೇಶಕರು ಅನುಭವಿಸಿಕೊಂಡು ಬರುತ್ತಿದ್ದ ವಿಶೇಷವಾದ ಹಕ್ಕನ್ನು 1853ರಲ್ಲಿ ಜಾರಿಗೆ ಬಂದ ಕಾಯಿದೆ ಕಿತ್ತುಕೊಂಡಿತು. ಕರಾರುಬದ್ಧ ಲೋಕಸೇವೆಯ ಕಡ್ಡಾಯ ವಿಧಿಗಳನ್ನು ಸಡಿಲಿಸಿತು. ಇಂಗ್ಲೆಂಡಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಆಂಗ್ಲೀಯನೂ ಆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು. ಭಾರತದ ಆಡಳಿತವರ್ಗಕ್ಕೆ ಅತ್ಯುತ್ತಮ ಹಾಗೂ ಉದಾರ ಶಿಕ್ಷಣ ಪಡೆದ ಯುವಕರನ್ನು ಒದಗಿಸಿಕೊಡುವುದೇ ಸ್ಪರ್ಧೆಯ ಮುಖ್ಯ ಗುರಿಯಾಗಿತ್ತು ಎಂಬುದು ಸರ್ ಜಾನ್ ಸ್ಟ್ರಾಚಿಯ ಅಭಿಪ್ರಾಯ. ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ವಿಶ್ವವಿದ್ಯಾನಿಲಯಗಳಲ್ಲಿದ್ದ ಆನರ್ಸ್ ವಿಷಯಗಳನ್ನು ಈ ಪರೀಕ್ಷೆಯ ಯೋಜನೆ ಒಳಗೊಂಡಿತ್ತು.

ಸುಧಾರಣೆಗಳ ವಿಷಯದಲ್ಲಿ ಕಾರ್ನ್‍ವಾಲಿಸ್ ಪ್ರಾಮಾಣಿಕತೆಯಿಂದಲೇ ನಡೆದುಕೊಂಡಿದ್ದೇನೋ ನಿಜ, ಆದರೆ ಇವುಗಳ ಪರಿಣಾಮ ಭಾರತೀಯರ ಮೇಲೆ ವಿಪತ್ಕಾರಕವಾಗಿತ್ತು. ಕಂಪನಿ ಉನ್ನತ ಹುದ್ದೆಗಳಿಗೆ ಭಾರತೀಯರನ್ನು ಪೂರ್ಣವಾಗಿ ಕೈಬಿಡಲಾಗಿದ್ದದ್ದು ಇವುಗಳ ಒಂದು ದೊಡ್ಡ ದೋಷ. ಬ್ರಿಟಿಷ್ ಭಾರತದಲ್ಲಿರುವಂತೆ ಇನ್ನಾವ ದೇಶದಲ್ಲೂ ದೇಶೀಯರನ್ನು ತಮ್ಮ ದೇಶದ ಸರ್ಕಾರದ ಕೆಲಸಗಳಿಂದ ಪೂರ್ಣವಾಗಿ ಪ್ರತ್ಯೇಕಿಸಿರುವ ಉದಾಹರಣೆ ದೊರೆಯಲಾರದು ಎಂಬುದಾಗಿ ಸರ್ ಥಾಮಸ್ ಮನ್ರೊ ಬರೆಯುತ್ತಾನೆ. ದೇಶೀಯರಿಗೆ ಅವಕಾಶವಿಲ್ಲದ್ದನ್ನು ನೋಡಿ ಆತ ಮರುಗಿದ. ನಮ್ಮ ಅಧಿಕಾರ ವಿಸ್ತರಿಸುತ್ತಿರುವಂತೆ ಈ ದಿಶೆಯಲ್ಲಿ ತಗ್ಗು ಜಾಸ್ತಿಯಾಗುತ್ತಿದೆ. ಆಡಳಿತಾಧಿಕಾರದಲ್ಲಿ ಭಾರತೀಯರನ್ನು ನಾವು ಸೇರಿಸಿಕೊಳ್ಳಲೇಬೇಕು ಎಂಬುದು ಇನ್ನೊಬ್ಬ ಆಂಗ್ಲ ಅಧಿಕಾರಿಯ ಅಭಿಪ್ರಾಯ. 1833ರ ಸನ್ನದು ಕಾಯಿದೆ ಕೊರತೆಯನ್ನು ತೆಗೆದುಹಾಕಿತು. ಯಾವ ಪ್ರದೇಶಗಳ ನಿವಾಸಿಗಳನ್ನಾಗಲಿ ಚಕ್ರವರ್ತಿಯ ಪ್ರಜೆಗಳನ್ನಾಗಲಿ ಅದರ ಮತ, ಹುಟ್ಟಿದ ಸ್ಥಳ, ವಂಶ, ವರ್ಣ ಅಥವಾ ಇಂಥ ಇನ್ನಾವ ಕಾರಣದಿಂದಲಾದರೂ ಕಂಪನಿಯಲ್ಲಿರುವ ಸ್ಥಾನಗಳಿಗೂ ಉದ್ಯೋಗಗಳಿಗೂ ಅನರ್ಹರೆಂದು ಹೇಳಕೂಡದು ಎಂಬುದಾಗಿ 1833ರ ಕಾಯಿದೆ ಶ್ರುತಪಡಿಸಿತು. ಆದರೂ ಆ ಕಾಯಿದೆಯೂ ಸತ್ತ ಕಾಗದವಾಗಿ ಉಳಿಯಿತು. ಭಾರತೀಯರ ಕುಂದುಕೊರತೆಗಳನ್ನು ನೀಗಿಸುವ ದೃಷ್ಟಿಯಿಂದ 1853ರಲ್ಲಿ ರಾಣಿ ವಿಕ್ಟೋರಿಯ ಇನ್ನೊಂದು ಘೋಷಣೆ ಹೊರಡಿಸಿದಳು. ನಮ್ಮ ಪ್ರಜೆಗಳು ಯಾವ ವರ್ಣದವರಾಗಲಿ ಅಥವಾ ಮತೀಯರಾಗಿರಲಿ, ಅವರನ್ನು ಸ್ವತಂತ್ರವಾಗಿಯೂ ನಿಷ್ಪಕ್ಷಪಾತವಾಗಿಯೂ ನಮ್ಮ ಲೋಕಸೇವೆಯ ಸ್ಥಾನಗಳಿಗೆ ಸೇರಿಸಿಕೊಳ್ಳುವುದು ನಮ್ಮ ಅಭಿಲಾಷೆ. ಅಂಥವರು ತಮ್ಮ ಜವಾಬ್ದಾರಿಯ ನಿರ್ವಹಣೆಗೆ ತಕ್ಕ ಶಿಕ್ಷಣ, ದಕ್ಷತೆ ಮತ್ತು ಪ್ರಮಾಣಿಕತೆ ಪಡೆದಿರಬೇಕು ಎಂಬುದಾಗಿ ಆ ಘೋಷಣೆ ವಿಶದಪಡಿಸಿತು. ಹೀಗೆ ಕೊಟ್ಟ ಮಾತನ್ನು ಕಾರ್ಯಕ್ಕಿಳಿಸುವುದಕ್ಕಾಗಿ ಭಾರತದ ಸೆಕ್ರೆಟರಿ ಆಫ್ ಸ್ಟೇಟ್ 1860ರಲ್ಲಿ ಒಂದು ಸಮಿತಿ ನೇಮಿಸಿದ. ಭಾರತೀಯರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವುದಕ್ಕಾಗಿ ಏಕಕಾಲದಲ್ಲಿ ಇಂಗ್ಲೆಂಡ್ ಭಾರತಗಳೆರಡರಲ್ಲೂ ಪರೀಕ್ಷೆಗಳನ್ನು ಇಟ್ಟುಕೊಳ್ಳಬೇಕೆಂದು ಆ ಸಮಿತಿ ಸೂಚಿಸಿತು. ಆದರೆ ಮಾಡಿದ ಶಿಫಾರಸುಗಳನ್ನು ಅದು ಕಾರ್ಯಗತ ಮಾಡಲಿಲ್ಲ.

ಇಂಡಿಯನ್ ಸಿವಿಲ್ ಸರ್ವಿಸ್ ಕಾಯಿದೆ : 1861ರಲ್ಲಿ ಈ ಕಾಯಿದೆ ಜಾರಿಗೆ ಬಂತು. 1793ರ ಕಾಯಿದೆಯ ಷರತ್ತುಗಳ ವಿರುದ್ಧವಾಗಿ ಮಾಡಿದ ಕೆಲವು ನೇಮಕಗಳನ್ನು ಊರ್ಜಿತಗೊಳಿಸುವುದು ಮತ್ತು ಉನ್ನತ ಹುದ್ದೆಗಳನ್ನು ಕರಾರುಬದ್ಧ ಲೋಕಸೇವಾ ನೌಕರರಿಗೆ ಮೀಸಲಾಗಿಸುವುದು ಅದರ ಮುಖ್ಯ ಉದ್ದೇಶಗಳು. ವಿಶೇಷ ಸಂದರ್ಭಗಳಲ್ಲಿ ಭಾರತ ಸರ್ಕಾರವೇ ಲೋಕಸೇವಾ ಕ್ಷೇತ್ರದಲ್ಲಿ ಬೇರೆಯವರನ್ನೂ ನೇಮಿಸಬಹುದಾಗಿತ್ತು. ಸೆಕ್ರೆಟರಿ ಆಫ್ ಸ್ಟೇಟ್ ಅಧಿಕಾರಿಗೆ ಕಾಗದ ಬರೆದು ಆ ರೀತಿ ನೇಮಕಮಾಡಿಕೊಳ್ಳುವುದಕ್ಕೆ ಕಾರಣಗಳನ್ನು ತಿಳಿಸಿ, ಅವರಿಂದ ಹನ್ನೆರಡು ತಿಂಗಳೊಳಗಾಗಿ ಅನುಮತಿ ಪಡೆಯಬೇಕಾಗಿತ್ತು. ಕರಾರುಬದ್ದ ಲೋಕಸೇವೆಗೆ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳುವಾಗ ಲೋಕಸೇವಾ ಕಮಿಷನರರ ಮೇಲ್ವಿಚಾರಣೆಯಲ್ಲಿ ಪ್ರತಿ ವರ್ಷವೂ ಲಂಡನ್ನಿನಲ್ಲಿ ಸ್ಪರ್ಧಾ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. 1860ರಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಅಭ್ಯರ್ಥಿಗಳ ಕನಿಷ್ಠ. ವಯಸ್ಸು 22 ಆಗಿರಬೇಕಾಗಿತ್ತು. 1866ರಲ್ಲಿ ವಯಸ್ಸಿನ ಮಿತಿಯನ್ನು 21ಕ್ಕೆ ಇಳಿಸಲಾಯಿತು. 1878ರಲ್ಲಿ ಅದನ್ನು 19ಕ್ಕೆ ಇಳಿಸಲಾಯಿತು. ತತ್ಪರಿಣಾಮವಾಗಿ ಭಾರತೀಯರು ಈ ಪರೀಕ್ಷೆಗಳಲ್ಲಿ ಸ್ಪರ್ಧಿಸುವುದು ಅಸಾಧ್ಯವಾಯಿತು. 1870ರವರೆಗೆ ಒಬ್ಬ ಭಾರತೀಯ ಮಾತ್ರ ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ, ವಯಸ್ಸೂ ಸಾಮಾಜಿಕ, ಮತೀಯ, ಆರ್ಥಿಕವೇ ಮುಂತಾದ ಕಾರಣಗಳೂ ಭಾರತೀಯರು ಮುಂದೆ ನುಗ್ಗಿ ಇಂಗ್ಲೆಂಡಿಗೆ ಹೋಗಿ ಪರೀಕ್ಷೆಗಳಲ್ಲಿ ಇಂಗ್ಲಿಷರಂತೆ ಸ್ಪರ್ಧಿಸಲು ತಡೆಯೊಡ್ಡಿದುವು. ಲಾರ್ಡ್ ಲಾರೆನ್ಸ್ ಬುದ್ಧಿವಂತರಾದ ಬಡ ಭಾರತೀಯರು ಮುಂದೆ ನುಗ್ಗಿ ಇಂಗ್ಲೆಂಡಿಗೆ ಹೋಗಿ ಭಾರತದ ವಿವಿಧ ಆಡಳಿತ ವರ್ಗಗಳಿಗೆ ಅರ್ಹತೆ ಹೊಂದಲು ಶಿಕ್ಷಣ ಪಡೆಯುವುದು ಸಾಧ್ಯವಾಗುವಂತೆ ವರ್ಷಕ್ಕೆ 200 ಪೌಂ. ವಿದ್ಯಾರ್ಥಿವೇತನ ನಿಗದಿಮಾಡಿ, ಆಯ್ಕೆಯಾದ ವಿದ್ಯಾರ್ಥಿ ಅಲ್ಲಿ ಮೂರುವರ್ಷಗಳ ಕಾಲ ಇರುವುದಕ್ಕಾಗಿ ಅವಕಾಶ ಮಾಡಿಕೊಟ್ಟ. ಈ ರೀತಿಯಾಗಿ ಹನ್ನೊಂದು ವಿದ್ಯಾರ್ಥಿವೇತನಗಳನ್ನು ಕೊಡಬೇಕೆಂದು ಅವನ ಶಿಫಾರಸ್ಸನ್ನು ಆಗ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಡ್ಯೂಕ್ ಆಫ್ ಆರ್ಗಿಲ್ ತಳ್ಳಿಹಾಕಿದ. 1870ರ ಕಾಯಿದೆ ಲೋಕಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದ ಭಾರತೀಯರನ್ನು ಕರಾರು ಬದ್ಧ ನೌಕರಿಗಳಲ್ಲಿ ಮೀಸಲಾದ ಸ್ಥಾನಗಳಿಗೆ ನೇಮಿಸಬಹುದೆಂದು ಅವಕಾಶ ಮಾಡಿಕೊಟ್ಟಿತು. ಆದರೆ ಇವುಗಳ ಬಗ್ಗೆ ಸೂತ್ರಗಳನ್ನು ರೂಪಿಸಿಕೊಳ್ಳಲು ಹನ್ನೊಂದು ವರ್ಷ ಹಿಡಿಯಿತು. ಭಾರತೀಯರು ಕರಾರುಬದ್ಧ ಲೋಕಸೇವೆಗಳಿಗೆ ಕಾಲಿಡದಂತೆ ಮಾಡಿ, ಅವರಿಗೆ ಪ್ರತ್ಯೇಕವಾಗಿ ಒಂದು ದೇಶೀಯ ಸೇವೆಯನ್ನು (ನೇಟಿವ್ ಸರ್ವಿಸ್) ನಿರ್ಮಿಸುವ ಲಾರ್ಡ್ ಲಿಟ್ಟನ್ನನ ಹೊಸ ಯೋಜನೆಯನ್ನು ಸೆಕ್ರೆಟರಿ ಆಫ್ ಸ್ಟೇಟ್ ಒಪ್ಪಲಿಲ್ಲ. 1870ರ ಕಾಯಿದೆಗೆ ಸೂತ್ರಗಳನ್ನು ರೂಪಿಸಿದ ಮೇಲೆ ಗವರ್ನರ್ ಜನರಲ್ ಕರಾರುಬದ್ಧ ಲೋಕಸೇವೆಗಳಲ್ಲಿ ಮೀಸಲಾಗಿದ್ದ ಸ್ಥಾನಗಳಿಗೆ ಒಳ್ಳೆಯ ಮನೆತನಕ್ಕೆ ಸೇರಿದ ಹಾಗೂ ಸಾಮಾಜಿಕ ಸ್ಥಾನಮಾನಗಳಿರುವ ಭಾರತೀಯರನ್ನು ನೇಮಿಸಬೇಕೆಂದು ವಿವರಿಸಲಾಯಿತು. ಈ ನೇಮಕಗಳು ಸೆಕ್ರೆಟರಿ ಆಫ್ ಸ್ಟೇಟ್ ಪ್ರತಿವರ್ಷವೂ ಮಾಡುವ ನೇಮಕಗಳ ಆರನೆಯ ಒಂದು ಭಾಗಕ್ಕಿಂತ ಹೆಚ್ಚಾಗಿರಕೂಡದಾಗಿತ್ತು. ಕಾಯಿದೆಬದ್ಧ ಲೋಕಸೇವೆ (ಸ್ಟಾಚ್ಯುಟರಿ ಸಿವಿಲ ಸರ್ವಿಸ್) ಹೊಸದಾಗಿ ಸ್ಥಾಪಿತವಾದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. 1885ರಲ್ಲಿ ಸ್ಥಾಪಿತವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಈ ವಿಚಾರವನ್ನು ಪರಿಶೀಲಿಸಿತು. ಕರಾರುಬದ್ಧ ಲೋಕಸೇವೆಗಳಿಗೆ ಆಯ್ಕೆ ಮಾಡುವುದಾದರೆ ಭಾರತ ಮತ್ತು ಇಂಗ್ಲೆಂಡು ಇವೆರಡರಲ್ಲೂ ಪ್ರತಿವರ್ಷವೂ ಏಕಕಾಲದಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ಅದು ನಿರ್ಣಯಿಸಿತು.

ಐಚಿಸನ್ ಆಯೋಗ : ಈ ಪರಿಸ್ಥಿತಿಯನ್ನು ಪರಿಶೀಲಿಸುವ ದೃಷ್ಟಿಯಿಂದ ಲಾರ್ಡ್ ಡಫರಿನ್ 1886ರಲ್ಲಿ ಸರ್ ಚಾರಲ್ಸ್ ಐಚಿಸನ್ನನ ಅಧ್ಯಕ್ಷತೆಯಲ್ಲಿ ಒಂದು ಆಯೋಗ ನೇಮಿಸಿದ. ಲೋಕಸೇವೆಯಲ್ಲಿ ತಮಗೆ ಹೆಚ್ಚಿನ ಉದ್ಯೋಗವಕಾಶ ದೊರೆತು ಉನ್ನತಸ್ಥಾನಗಳನ್ನು ಅಲಂಕರಿಸುವ ಹಕ್ಕು ತಮಗೆ ಬರಬೇಕೆಂಬ ಭಾರತೀಯ ಕೇಳಿಕೆಯ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವುದೇ ಅದರ ಮುಖ್ಯ ಕೆಲಸ. ಭಾರತ ಮತ್ತು ಇಂಗ್ಲೆಂಡುಗಳಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಸಬೇಕೆಂಬುದರ ವಿರುದ್ಧವಾಗಿ ಅದು ವರದಿ ಮಾಡಿತು. ಈ ರೀತಿಯಾಗಿ ನಡೆಸುವ ಸ್ಪರ್ಧಾ ಪರೀಕ್ಷೆಗಳಿಂದ ಕೇವಲ ಕೆಲವು ವರ್ಗಗಳು ಮಾತ್ರ ಲಾಭ ಪಡೆಯುತ್ತವೆಂದು ಅದು ತಿಳಿಸಿತು. ಖಾಲಿ ಜಾಗಗಳು ಕೆಲವೇ ಇದ್ದು ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಎಲ್ಲರಿಗೂ ಉದ್ಯೋಗ ಒದಗಿಸಿಕೊಡಲು ಸಾಧ್ಯವಿಲ್ಲವೆಂದೂ ನೌಕರಿ ದೊರಕದ ಅಭ್ಯರ್ಥಿಗಳು ಮುಂದೆ ದೇಶದಲ್ಲಿ ಅತೃಪ್ತಿ ಹರಡುವರೆಂದೂ ಅದು ವಾದಿಸಿತು. ಕರಾರುಬದ್ಧ ಹಾಗೂ ಕರಾರುಬದ್ಧವಲ್ಲದ ಲೋಕಸೇವೆಗಳೆಂಬ ತಾರತಮ್ಯವನ್ನು ರದ್ದುಗೊಳಿಸಬೇಕೆಂದು ಅದು ಶಿಫಾರಸು ಮಾಡಿತು. ಆಡಳಿತ ವರ್ಗವನ್ನು ಸಾಮ್ರಾಜ್ಯ ಸೇವಾವರ್ಗ (ಇಂಪೀರಿಯಲ್ ಸರ್ವಿಸಸ್) ಪ್ರಾಂತೀಯ ಸೇವಾವರ್ಗ (ಪ್ರೋವಿನ್ಷಿಯಲ್ ಸರ್ವಿಸಸ್) ಮತ್ತು ಕೆಳದರ್ಜೆಯ ಸೇವಾವರ್ಗ (ಸಬಾರ್ಡಿನೇಟ್ ಸರ್ವಿಸಸ್) ಎಂಬುದಾಗಿ ಮೂರು ಭಾಗಗಳಾಗಿ ವಿಂಗಡಿಸಿ, ಪ್ರಮುಖ ಹುದ್ದೆಗಳನ್ನು ಮೊದಲಿನ ಎರಡು ವರ್ಗದವರು ಅನುಭವಿಸಿಕೊಂಡು ಬರಬೇಕೆಂದು ಅದು ವಿವರಿಸಿತು. ಅಲ್ಲದೆ ಕಾಯಿದೆಬದ್ಧ ಲೋಕಸೇವೆಯನ್ನು ರದ್ದುಪಡಿಸಬೇಕೆಂದು ಶಿಫಾರಸು ಮಾಡಿತು. 1893ರಲ್ಲಿ ಕಾಮನ್ಸ್ ಸಭೆ ಒಂದು ನಿರ್ಣಯ ಮಾಡಿ, ಭಾರತದ ಲೋಕಸೇವೆಗಳಿಗಾಗಿ ನೇಮಕ ಮಾಡಲು ಇಂಗ್ಲೆಂಡ್ ಒಂದರಲ್ಲೇ ನಡೆಸುತ್ತಿದ್ದ ಸ್ಪರ್ಧಾ ಪರೀಕ್ಷೆಗಳನ್ನು ಇನ್ನು ಮುಂದೆ ಇಂಗ್ಲೆಂಡ್ ಮತ್ತು ಭಾರತಗಳೆರಡರಲ್ಲೂ ನಡೆಸಬೇಕೆಂದು ವಿಶದಪಡಿಸಿತು. ಅದು ಅಪಾಯಕಾರಿಯಾದ ಕೆಲಸವೆಂದು ಭಾವಿಸಿದ ಭಾರತ ಸರ್ಕಾರ ಅದರ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.

ಇಸ್ಲಿಂಗ್‍ಟನ್ ಆಯೋಗ : ಭಾರತದ ಲೋಕಸೇವೆಗಳ ಸ್ಥಿತಿಗತಿಗಳನ್ನು ಪರೀಕ್ಷಿಸಲು 1912ರಲ್ಲಿ ಲಾರ್ಡ್ ಇಸ್ಲಿಂಗ್‍ಟನ್ನನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಯಿತು. ಅದರ ವರದಿ 1915ರಲ್ಲಿಯೇ ಸಿದ್ಧವಾದರೂ ಅದರ ಪ್ರಕಟನೆಯ ಕೆಲಸ ನಡೆದದ್ದು ಜೂನ್ 1917ರಲ್ಲಿ. ಅದರ ಶಿಫಾರಸುಗಳು ಜಾರಿಗೆ ಬರುವುದಕ್ಕೆ ಮೊದಲೇ 1917ರ ಆಗಸ್ಟ್ ಘೋಷಣೆ ಹೊರಬಿದ್ದಿತು. ಪ್ರತಿಯೊಂದು ಆಡಳಿತ ಶಾಖೆಯಲ್ಲೂ ಭಾರತೀಯರನ್ನು ಹೆಚ್ಚಿಸುವುದೇ ಸರ್ಕಾರದ ನೀತಿಯಾಗಿದೆ ಎಂದು ಸೆಕ್ರೆಟರಿ ಆಫ್ ಸ್ಟೇಟ್ ಮಾಂಡೆಗೊ ಕಾಮನ್ಸ್ ಸಭೆಯಲ್ಲಿ ಘೋಷಿಸಿದ. (ನೋಡಿ- ಇಸ್ಲಿಂಗ್‍ಟನ್-ಆಯೋಗ)

1918ರ ವರದಿಯ ಶಿಫಾರಸುಗಳು : ಆಡಳಿತ ಸಮಸ್ಯೆಗಳ ನಿಜವಾದ ಅನುಭವ ಪಡೆಯಲು ಕೆಲವೇ ಜನ ಅವಕಾಶ ಹೊಂದಿರುವುದು ಭಾರತೀಯ ಲೋಕಸೇವೆಯಲ್ಲಿ ಒಂದು ದೊಡ್ಡ ದೌರ್ಬಲ್ಯವೆಂದೂ ದೇಶದ ಆಡಳಿತ ಯಂತ್ರದಲ್ಲಿ ಹೆಚ್ಚು ಹೆಚ್ಚು ಮಂದಿ ಭಾರತೀಯರನ್ನು ಸೇರಿಸಿಕೊಳ್ಳಬೇಕೆಂದೂ ವರ್ಣದ ಮೇಲೆ ರೂಪಿತವಾದ ತಾರತಮ್ಯವನ್ನು ತೆಗೆದು ಹಾಕಬೇಕೆಂದೂ ಇಂಗ್ಲೆಂಡ್ ಮತ್ತು ಭಾರತಗಳೆರಡರಲ್ಲೂ ಏಕಕಾಲದಲ್ಲಿ ಸ್ಪರ್ಧಾ ಪರೀಕ್ಷೆಗಳನ್ನು ನಡೆಸಬೇಕೆಂದೂ ಭಾರತೀಯ ಲೋಕಸೇವೆಯ ಶ್ರೇಷ್ಠ ಹುದ್ದೆಗಳಲ್ಲಿ 33%ರಷ್ಟು ನೇಮಕವನ್ನು ಭಾರತದಲ್ಲೇ ಮಾಡಬೇಕೆಂದೂ ಈ ಪ್ರಮಾಣವನ್ನು ಪ್ರತಿವರ್ಷವೂ 1 1/2% ಯಂತೆ ಹೆಚ್ಚು ಮಾಡುತ್ತ ಹೋಗಬೇಕೆಂದೂ ಇತರ ಆಡಳಿತ ವರ್ಗಗಳಲ್ಲಿಯೂ ಇದೇ ಪ್ರಮಾಣವನ್ನು ಇಟ್ಟುಕೊಳ್ಳಬೇಕೆಂದೂ ಅತ್ಯುತ್ತಮ ಐರೋಪ್ಯ ಮತ್ತು; ಇಂಗ್ಲಿಷ್ ಅಧಿಕಾರಿಗಳನ್ನು ಭಾರತಕ್ಕೆ ಆಕರ್ಷಿಸುವ ದೃಷ್ಟಿಯಿಂದ ಹೆಚ್ಚಿನ ಸಂಬಳ, ವಿಶ್ರಾಂತಿವೇತನ, ರಜಾ ಮತ್ತು ಸಮುದ್ರದಾಚೆಯ ಭತ್ಯೆಗಳನ್ನು ಕೊಡಬೇಕೆಂದೂ ಪ್ರತಿಯೊಬ್ಬ ನೌಕರನೂ ಅವನು ಎಲ್ಲೇ ಇರಲಿ, ತನ್ನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವಾಗ ಆತನಿಗೆ ರಕ್ಷಣೆ ಮತ್ತು ಬೆಂಬಲ ಕೊಡುವುದು ಸರ್ಕಾರದ ಆದ್ಯ ಕರ್ತವ್ಯವೆಂದೂ 1918ರ ವರದಿ ಹೇಳಿತು.

ಭಾರತದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸುವುದಾಗಿ ಬ್ರಿಟಿಷ್ ಸರ್ಕಾರ ಘೋಷಣೆ ಹೊರಡಿಸಿದ ಮೇಲೆ ಲೋಕಸಭೆಯ ಸದಸ್ಯರು ಬಹಳ ಪೇಚಿಗೆ ಸಿಕ್ಕಿಕೊಂಡರು. ಮೊದಲು ಅವರೇ ರಾಜ್ಯಾಡಳಿತ ನಡೆಸುತ್ತಿದ್ದರು. ಹೊಸದಾಗಿ ಸ್ಥಾಪಿಸಿದ ಸರ್ಕಾರದಲ್ಲಿ ತಮ್ಮನ್ನು ಭಾರತೀಯ ಮಂತ್ರಿಗಳು ಹತೋಟಿಯಲ್ಲಿಟ್ಟುಕೊಂಡು, ತಮ್ಮ ಮೇಲೆ ದಬ್ಬಾಳಿಕೆ ನಡೆಸುವರೆಂದು ಅವರು ಹೆದರಿದರು. ತಾವು ಅವಮಾನಿತರಾಗುವ ಸಂಭವವೂ ಉಂಟೆಂದು ಭಾವಿಸಿ ಅವರು ತಮಗೆ ರಕ್ಷಣೆ ಬೇಕೆಂದು ಸರ್ಕಾರವನ್ನು ಒತ್ತಾಯಪಡಿಸಿದರು. ವಿಶ್ರಾಂತಿ ವೇತನವನ್ನು ಪಡೆಯುವುದಕ್ಕೆ ಎಷ್ಟು ಕಾಲಪರಿಮಿತಿ ಬೇಕೋ ಅದಕ್ಕಿಂತ ಮೊದಲೇ ಇಚ್ಛೆಪಟ್ಟಲ್ಲಿ ಭಾರತದ ಸೇವಾವರ್ಗದಿಂದ ನಿವೃತ್ತಿ ಹೊಂದಬಹುದೆಂದೂ ಅಂಥವರಿಗೆ ಅವರ ಸೇವೆಗನುಗುಣವಾಗಿ ವಿಶ್ರಾಂತಿ ವೇತನ ದೊರಕಿಸಿ ಕೊಡುವುದಾಗಿಯೂ ಸರ್ಕಾರ ಭರವಸೆ ಕೊಟ್ಟಿತು. ಇಷ್ಟಾದರೂ ಆಡಳಿತವರ್ಗದವರಿಗೂ ಭಾರತೀಯ ಜನತೆಗೂ ಇದ್ದ ಬಾಂಧವ್ಯ ಕೆಟ್ಟಿತು. ಶಾಸನ ಸಭೆಗಳಲ್ಲಿ ಅವರನ್ನು ಟೀಕಿಸಲಾಯಿತು. ಅಸಹಕಾರ ಚಳವಳಿಯ ಕಾಲದಲ್ಲಿ ಈ ನೌಕರರೂ ಇವರ ಸಂಸಾರದವರೂ ಜನರ ಸಂಶಯಕ್ಕೆ ಗುರಿಯಾದರು. ಪದಾರ್ಥಗಳ ಬೆಲೆ ದುಬಾರಿಯಾದ್ದರಿಂದ ಇವರ ಸ್ಥಿತಿ ಸ್ವಲ್ಪ ಕೆಟ್ಟಿತು. 1924ರಲ್ಲಿ ಸುಮಾರು 345 ಉನ್ನತ ಅಧಿಕಾರಿಗಳು ನಿವೃತ್ತಿ ಪಡೆದರು. ಅಧಿಕ ಸಂಖ್ಯೆಯಲ್ಲಿ ಐರೋಪ್ಯರು ಮತ್ತು ಇಂಗ್ಲಿಷರು ಭಾರತೀಯ ಆಡಳಿತ ವರ್ಗಕ್ಕೆ ಸೇರದಿದ್ದದ್ದು ಸರ್ಕಾರಕ್ಕೆ ಒಂದು ಕಠಿಣ ಸಮಸ್ಯೆಯನ್ನು ತಂದೊಡ್ಡಿತು. ಆಡಳಿತ ವರ್ಗದ ಭಾರತೀಕರಣವಾಗುತ್ತಿಲ್ಲವೆಂದು ಭಾರತೀಯರು ಟೀಕಿಸುತ್ತಲೇ ಇದ್ದರು. ಆಡಳಿತವರ್ಗದ ಆಯ್ಕೆ ಹಾಗೂ ಹತೋಟಿಯ ಬಗ್ಗೆ ಸೆಕ್ರೆಟರಿ ಆಫ್ ಸ್ಟೇಟ್ ಯಾವ ಅಧಿಕಾರವನ್ನೂ ಹೊಂದಿರಕೂಡದೆಂದು ಅವರು ವಾದಿಸಿದರು.

ಬ್ರಿಟಿಷರ ಆಡಳಿತಭದ್ರತೆಗೆ ಭಾರತೀಕರಣ ಬಹಳ ಸಹಾಯಕವಾಯಿತು. ಪ್ರತಿಯೊಂದು ಕಡೆಯೂ ಆಡಳಿತ ವರ್ಗದ ಒಂದು ಪಡೆಯ, ಪಾಳೆಯದ ನಿರ್ಮಾಣವಾಯಿತು. ಯುದ್ಧ ಮಾಡುವ ಸೈನ್ಯಕ್ಕಿಂತ ಈ ಅಧಿಕಾರಿಗಳ ತಂಡ ಹೆಚ್ಚು ಪ್ರಯೋಜನಕಾರಿಯಾಯಿತು. ಈ ಪಡೆಯಲ್ಲಿ ದೇಶಾಭಿಮಾನಿಗಳೂ ರಾಷ್ಟ್ರೀಯ ಭಾವನೆಯುಳ್ಳವರೂ ಅನೇಕರಿದ್ದರು. ಆದರೆ ವೈಯುಕ್ತಿಕವಾಗಿ ದೇಶಾಭಿಮಾನವಿದ್ದರೂ ಸೈನಿಕರಂತೆ ಅವರಿಗೂ ಒಂದು ಆಡಳಿತ ನಿಯಮವಿತ್ತು. ಅವಿಧೇಯತೆ, ದ್ರೋಹ ಅಥವಾ ಪ್ರತಿಭಟನೆಗಳಿಗೆ ಕ್ರೂರ ಶಿಕ್ಷೆ ಕಾದಿರುತ್ತಿತ್ತು. ಹೀಗೆ ಈ ಒಂದು ಆಡಳಿತವರ್ಗದ ನಿರ್ಮಾಣವಾಯಿತಲ್ಲದೆ ಇದರಲ್ಲಿನ ಅಧಿಕಾರದ ಆಸೆಯಿಂದ ಇತರರಲ್ಲೂ ಹೆಚ್ಚಾಗಿ ಅನೀತಿ ಬೆಳೆಯಿತು. ಈ ಆಡಳಿತ ವರ್ಗದವರು ಬ್ರಿಟಿಷ್ ಅಧಿಕಾರಿಗಳಿಗೂ ಜನರಿಗೂ ಮಧ್ಯಸ್ಥರಾದರು.

ದೇಶದಲ್ಲಿ ಇತರ ಉದ್ಯಮಗಳಿಗೆ ಅವಕಾಶವಿಲ್ಲದೆ ಜೀವನಕ್ಕೆ ಬೇರೆ ಮಾರ್ಗವಿಲ್ಲದ್ದರಿಂದ ಸರಕಾರಿ ನೌಕರಿಗೆ ಒಂದು ವಿಶೇಷ ಪ್ರಾಮುಖ್ಯ ದೊರೆಯಿತು. ನ್ಯಾಯವಾದಿಗಳೂ ವೈದ್ಯರೂ ಆಗಲು ಕೆಲವರಿಗೆ ಅವಕಾಶವಿದ್ದರೂ ಹೆಚ್ಚು ಸಂಪಾದನೆಯ ಭರವಸೆ ಇರಲಿಲ್ಲ. ಕೈಗಾರಿಕೆಗಳಿರಲಿಲ್ಲ. ವ್ಯಾಪಾರವೆಲ್ಲ ಅನೇಕ ತಲೆಮಾರುಗಳಿಂದ ಒಂದೇ ವರ್ಗದವರ ಕೈಯಲ್ಲಿತ್ತು. ಹೊಸ ವಿದ್ಯಾಭ್ಯಾಸದಿಂದ ವ್ಯಾಪಾರ ಅಥವಾ ಕೈಗಾರಿಕೆಗೆ ಪುರಸ್ಕಾರ ದೊರೆಯಲಿಲ್ಲ. ಅದರ ಮುಖ್ಯ ಉದ್ದೇಶವೇ ಸರ್ಕಾರಿ ನೌಕರಿ. ವಿದ್ಯಾಭ್ಯಾಸದ ಪದ್ಧತಿಯೇ ಸಂಕುಚಿತವಾಗಿದ್ದರಿಂದ ಉದ್ಯೋಗಶಿಕ್ಷಣ ಪಡೆಯಲು ಅವಕಾಶವೂ ಬಹಳ ಕಡಿಮೆ ಇತ್ತು. ಕಾಲೇಜುಗಳ ಪದವೀಧರರು ಅಧಿಕ ಸಂಖ್ಯೆಯಲ್ಲಿ ಹೊರಬರಲಾರಂಭಿಸಿದ್ದರಿಂದ ಸರ್ಕಾರದ ಆಡಳಿತ ಶಾಖೆ ಬೆಳೆಯುತ್ತಿದ್ದರೂ ಅವರೆಲ್ಲರಿಗೂ ಸ್ಥಾನ ಕಲ್ಪಿಸಲು ಸಾಧ್ಯವಾಗದೆ ಪೈಪೋಟಿ ಆರಂಭವಾಯಿತು. ಒಟ್ಟಿನಲ್ಲಿ ಬ್ರಿಟಿಷ್ ಸರ್ಕಾರ ಭಾರತದಲ್ಲಿ ನೌಕರಿ ಕೊಡುವ ಒಂದು ದೊಡ್ಡ ಸಂಸ್ಥೆಯಾಯಿತು. ಈ ಅಧಿಕಾರ ವರ್ಗ ಒಂದು ದೊಡ್ಡ ಯಂತ್ರವಾಯಿತು. ಯಂತ್ರ ಸೂತ್ರಗಳೆಲ್ಲ ಮೇಲಾಧಿಕಾರಿಗಳ ಕೈಯಲ್ಲಿದ್ದು ಬಿಗಿಯಿಂದ ನಡೆಯುತ್ತಿತ್ತು. ಅಧಿಕಾರ ಹಂಚಲು ಇದ್ದ ದೊಡ್ಡ ಅವಕಾಶವನ್ನು ಬ್ರಿಟಿಷರು ದೇಶದಲ್ಲಿ ಅಧಿಕಾರವನ್ನು ಭದ್ರಗೊಳಿಸುವುದಕ್ಕೂ ಅಸಮಾಧಾನಗೊಂಡ ವಿರೋಧಿಗಳನ್ನು ತುಳಿಯುವುದಕ್ಕೂ ಸರ್ಕಾರದ ನೌಕರಿಯಲ್ಲಿ ಸೇರಿಕೊಳ್ಳಲು ಕಾತರರಾಗಿದ್ದ ಬೇರೆ ಬೇರೆ ಪಂಗಡಗಳಲ್ಲಿ ಪೈಪೋಟಿಯನ್ನೂ ವೈಷಮ್ಯವನ್ನೂ ಹೆಚ್ಚಿಸುವುದಕ್ಕೂ ದುರುಪಯೋಗಪಡಿಸಿಕೊಂಡರು.

ಲೀ ಆಯೋಗ (1923) : ಭಾರಿ ಭಾರಿ ಹುದ್ದೆಗಳನ್ನು ಭಾರತೀಯರಿಗೆ ಕೊಡುವ ಬಗ್ಗೆ 1923ರಲ್ಲಿ ಒಂದು ಸಮಿತಿ ಅಸ್ತಿತ್ವಕ್ಕೆ ಬಂತು. ಅದರ ಅಧ್ಯಕ್ಷ ಲೀ ಆಗಿದ್ದುದರಿಂದ ಅದಕ್ಕೇ ಲೀ ಆಯೋಗವೆಂದು ಹೆಸರಾಯಿತು. ಅದು ಅನೇಕ ಶಿಫಾರಸುಗಳನ್ನು ಮಾಡಿತು. ಭಾರತೀಯ ಲೋಕಸೇವೆಯ ಬಗ್ಗೆ ಇಂಡಿಯನ್ ಪೊಲೀಸ್ ಸರ್ವಿಸ್, ಇಂಡಿಯನ್ ಫಾರೆಸ್ಟ್ ಸರ್ವಿಸ್ ಮತ್ತು ನೀರಾವರಿ ಕೆಲಸಗಳಿಗಾಗಿ ನೇಮಕಗೊಂಡ ಎಂಜಿನಿಯರ್ಸ್ ಸರ್ವಿಸ್ ಇವುಗಳನ್ನು ಸೆಕ್ರೆಟರಿ ಆಫ್ ಸ್ಟೇಟ್ ಸ್ವತಃ ನೋಡಿಕೊಳ್ಳಬೇಕೆಂದು ಸೂಚಿಸಲಾಯಿತು. ಇಂಡಿಯನ್ ಎಜುಕೇಷನಲ್ ಸರ್ವಿಸ್, ಇಂಡಿಯನ್ ವೆಟರ್ನರಿ ಸರ್ವಿಸ್ ಮತ್ತು ಇಂಡಿಯನ್ ಮೆಡಿಕಲ್ ಸರ್ವಿಸ್ (ಅಸೈನಿಕ) ಪೂರ್ಣವಾಗಿ ಪ್ರಾಂತ್ಯದ ಮಂತ್ರಿಗಳ ಹತೋಟಿಯಲ್ಲಿಯೇ ಇರಬೇಕೆಂದೂ ಸಮಗ್ರ ಭಾರತದ ಆಧಾರದ ಮೇಲೆ ಮಾಡಲಾಗುತ್ತಿದ್ದ ನೇಮಕಗಳನ್ನು ಕೂಡಲೇ ನಿಲ್ಲಿಸಬೇಕೆಂದೂ ವಿಧೇಯಕವಾಯಿತು. ಅಷ್ಟರೊಳಗೆ ಯಾರು ಯಾರು ನೇಮಕಗೊಂಡಿದ್ದರೋ ಅವರೆಲ್ಲರೂ ಸಮಗ್ರ ಭಾರತದ ಸ್ಥಾನಮಾನಗಳೆಲ್ಲವನ್ನೂ ಉಳಿಸಿಕೊಳ್ಳತಕ್ಕದ್ದೆಂದು ತಿಳಿಸಲಾಯಿತು. ಆದಾಗ್ಯೂ ಆಡಳಿತವರ್ಗಗಳಿಗೆ ಹೊಸದಾಗಿ ಮಾಡುವ ನೇಮಕಗಳ ಪೂರ್ಣ ಜವಾಬ್ದಾರಿ ಪ್ರಾಂತ್ಯ ಸರ್ಕಾರಗಳಿಗಿರುತ್ತದೆಂದೂ ವಿವರಿಸಲಾಯಿತು. ಆದರೆ ಈ ಬದಲಾವಣೆ ಇಂಡಿಯನ್ ಮೆಡಿಕಲ್ ಸರ್ವಿಸಿಗೆ ಅನ್ವಯಿಸುವಂತಿರಲಿಲ್ಲ. ಪ್ರತಿಯೊಂದು ಸಂಸ್ಥಾನವೂ ತನ್ನ ವೈದ್ಯ ವಿಭಾಗಕ್ಕೆ ಎಷ್ಟು ಮಂದಿ ಅಧಿಕಾರಿಗಳನ್ನು ತೆಗೆದುಕೊಳ್ಳಬೇಕಾಗಿತ್ತೋ ಅಷ್ಟು ಮಂದಿಯನ್ನು ಭಾರತದ ಮೆಡಿಕಲ್ ಡಿಪಾರ್ಟ್‍ಮೆಂಟ್ ಆಫ್ ದಿ ಆರ್ಮಿ ಎಂಬುದರಿಂದ ಎರವಲು ಪಡೆಯಬೇಕಾಗಿತ್ತು. ಭಾರತೀಕರಣ ಅತಿವೇಗದಿಂದ ಸಾಗಬೇಕೆಂದು ಲೀ ಆಯೋಗ ಶಿಫಾರಸು ಮಾಡಿತು. ಭಾರತೀಯ ಲೋಕಸೇವೆಯಲ್ಲಿ 19% ರಷ್ಟು ಉನ್ನತ ಹುದ್ದೆಗಳನ್ನು ಐರೋಪ್ಯರನ್ನೂ ಭಾರತೀಯರನ್ನೂ ಸಮಾನ ಸಂಖ್ಯೆಯಲ್ಲಿ ಆರಿಸಿಕೊಳ್ಳಬೇಕೆಂದೂ ವಿವರಿಸಲಾಯಿತು. 15 ವರ್ಷದೊಳಗಾಗಿ ಭಾರತೀಯ ಲೋಕಸೇವೆಯಲ್ಲಿ ಅರ್ಧ ಭಾರತೀಯರೂ ಉಳಿದರ್ಧ ಐರೋಪ್ಯರೂ ಇರುವರೆಂದು ಲೆಕ್ಕ ಹಾಕಲಾಯಿತು. ಇಂಡಿಯನ್ ಪೊಲೀಸ್ ಸರ್ವಿಸ್‍ನಲ್ಲಿ ಐದು ಮಂದಿ ಐರೋಪ್ಯರಿಗೆ ಮೂರು ಮಂದಿ ಭಾರತೀಯರಂತೆ ಆಯ್ಕೆ ನಡೆಸಬೇಕಾಯಿತು. 1949ರ ಹೊತ್ತಿಗೆ ಪೊಲೀಸ್ ಇಲಾಖೆಯಲ್ಲಿ ಅರ್ಧದಷ್ಟು ಮಂದಿ ಐರೋಪ್ಯರೂ ಇನ್ನರ್ಧ ಭಾರತೀಯರೂ ಇರುವರೆಂದು ಅಂದಾಜು ಹಾಕಲಾಯಿತು. ಅರಣ್ಯ ಇಲಾಖೆಗೆ ನೂರಕ್ಕೆ 75 ಭಾರತೀಯರನ್ನೂ 25 ಐರೋಪ್ಯರನ್ನೂ ಆಯ್ಕೆ ಮಾಡಬೇಕಾಗಿತ್ತು. ನೀರಾವರಿ ಶಾಖೆಗೆ ಎಂಜಿನಿಯರನ್ನು ನೇಮಕ ಮಾಡಿಕೊಳ್ಳುವಾಗ ಸಮಾನ ಸಂಖ್ಯೆಯಲ್ಲಿ ನೇರವಾಗಿ ಭಾರತೀಯರನ್ನೂ ಐರೋಪ್ಯರನ್ನೂ ಆಯ್ಕೆ ಮಾಡಬಹುದಾಗಿತ್ತು.

ಕೇಂದ್ರ ಇಲಾಖೆಗಳ ಬಗ್ಗೆ ಲೀ ಕಮಿಷನ್ ಕೆಲವು ಶಿಫಾರಸುಗಳನ್ನು ಮಾಡಿತು: 1 ರಾಜಕೀಯ ಇಲಾಖೆಗೆ ಪ್ರತಿವರ್ಷವೂ ಆಯ್ಕೆಯಾಗುವ ಒಟ್ಟು ಸಂಖ್ಯೆಯಲ್ಲಿ 25 ಸ್ಥಾನಗಳನ್ನು ಭಾರತೀಯರಿಗೆ ಕೊಡಬೇಕು. 2 ಇಂಪೀರಿಯಲ್ ಕಸ್ಟಮ್ಸ್‍ಗೆ ಅರ್ಧಕ್ಕಿಂತ ಕಡಿಮೆ ಇಲ್ಲದಂತೆ ಭಾರತೀಯರನ್ನು ತೆಗೆದುಕೊಳ್ಳಬೇಕು. 3 ಉನ್ನತ ಟೆಲಿಗ್ರಾಫ್ ಮತ್ತು ವೈರ್‍ಲೆಸ್ ವಿಭಾಗಕ್ಕೆ 25% ಜನರನ್ನು ಇಂಗ್ಲೆಂಡಿನಲ್ಲೂ 75%ರಷ್ಟು ಮಂದಿಯನ್ನು ಭಾರತದಲ್ಲೂ ನೇಮಿಸಿಕೊಳ್ಳಬೇಕು. 4 ರೈಲ್ವೆಗಳಲ್ಲಿ ಸಾಧ್ಯವಾದಷ್ಟು ಶೀಘ್ರವಾಗಿ ಭಾರತೀಯರನ್ನು 75%ರಷ್ಟಕ್ಕೆ ಏರಿಸಿ, ಉಳಿದ 25%ರಷ್ಟು ಅಧಿಕಾರಿಗಳನ್ನು ಇಂಗ್ಲೆಂಡಿನಲ್ಲಿ ಆರಿಸಬೇಕು. ಅಲ್ಲದೆ ನೌಕರರಿಗೆ ಹೆಚ್ಚು ಸಂಬಳವನ್ನೂ ಇತರ ಅನುಕೂಲಗಳನ್ನೂ ಒದಗಿಸಬೇಕೆಂದೂ ಈ ಸಮಿತಿ ಸರಕಾರಕ್ಕೆ ತಿಳಿಸಿತು. ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಐರೋಪ್ಯರೂ ಅವರ ಪತ್ನಿಯರೂ ಸ್ವದೇಶಕ್ಕೆ ನಾಲ್ಕು ಬಾರಿ ಹೋಗಿ ಬರುವುದಕ್ಕೂ ಅವಕಾಶವಿತ್ತು. ಅವರಿಗೆ ಐರೋಪ್ಯ ವೈದ್ಯರ ಸೌಲಭ್ಯ ದೊರೆಯುವಂತೆ ಆಯಿತು. ಭಾರತದಲ್ಲಿರುವಾಗ ಸಿವಿಲ್ ಸದಸ್ಯ ಸತ್ತರೆ ಅವನ ಪತ್ನಿಯನ್ನು ಸರಕಾರವೇ ತನ್ನ ಖರ್ಚಿನಿಂದ ಸ್ವದೇಶಕ್ಕೆ ಕಳುಹಿಸಬೇಕಾಯಿತು. ಭಾರತೀಯ ಲೋಕಸೇವೆಯ ಅಧಿಕಾರಿ ಉನ್ನತ ದರ್ಜೆ ಮುಟ್ಟಿದರೆ ಆತನ ವಿಶ್ರಾಂತಿ ವೇತನ ಜಾಸ್ತಿಯಾಗುತ್ತಿತ್ತು. ಕುಟುಂಬ ಪಿಂಚಣಿ ನಿಧಿ ಯೋಜನೆ ಜಾರಿಗೆ ಬಂತು. ಭಾರತದಲ್ಲಿ ಒಂದು ಲೋಕಸೇವಾ ಆಯೋಗವಿರಬೇಕೆಂದು 1919ರ ಕಾಯಿದೆ ಸೂಚಿಸಿತು. ಆದರೆ ಅದು ಅಸ್ತಿತ್ವಕ್ಕೆಬರಲಿಲ್ಲ. ಲೀ ಆಯೋಗವೂ ಕೂಡಲೇ ಒಂದು ಲೋಕಸೇವಾ ಆಯೋಗ ರಚಿತವಾಗಬೇಕೆಂದು ಶಿಫಾರಸು ಮಾಡಿತು.

ಭಾರತ ಸರ್ಕಾರದ ಕಾಯಿದೆ (1935) : 1935ರ ಮಸೂದೆ ಪಾರ್ಲಿಮೆಂಟಿನ ಮುಂದೆ ಚರ್ಚೆಗೆ ಬಂದಾಗ, ಅದು ಕಾಯಿದೆಯಾಗುವ ಸೂಚನೆಗಳನ್ನು ಕಂಡ ಭಾರತೀಯ ನೌಕರರು ಹೊಸದಾಗಿ ನಿರ್ಮಾಣಗೊಳ್ಳಲಿದ್ದ ಸರ್ಕಾರದಲ್ಲಿ ತಮ್ಮ ಸ್ಥಾನಮಾನಗಳಿಗೆ ಎಲ್ಲಿ ಧಕ್ಕೆ ಬರುವುದೋ ಎಂದು ಹೆದರಿ ತಮಗೆ ಸರಿಯಾದ ರಕ್ಷಣೆಗಳನ್ನು ಕೊಡಬೇಕೆಂದು ಮನವಿ ಸಲ್ಲಿಸಿದರು. ತತ್ಪರಿಣಾಮವಾಗಿ 1935ರ ಕಾಯಿದೆಯಲ್ಲಿ ಭಾರತೀಯ ಲೋಕಸೇವೆಯ ಬಗ್ಗೆ ಕೆಲವು ನಿಯಮಗಳನ್ನು ಮಾಡಲಾಯಿತು. ಮುಂದೆ ನಡೆಯುವ ಎಲ್ಲ ನೇಮಕಗಳಿಗೂ ಒಂದು ರೀತಿಯಾದ ಹೊಸ ರೂಪ ಕೊಡಲಾಯಿತು. ನೌಕರರು ಅನುಭವಿಸುತ್ತಿದ್ದ ಎಲ್ಲ ರಿಯಾಯಿತಿಗಳನ್ನೂ ಮಾನ್ಯ ಮಾಡಲಾಯಿತು. ಸಂವಿಧಾನ ಕಾಯಿದೆಯಲ್ಲಿ ನಮೂದಿಸಲಾಗಿರುವ ಭಾರತೀಯ ಲೋಕಸೇವಾ ಸದಸ್ಯರ ಹಕ್ಕು ಬಾಧ್ಯತೆಗಳನ್ನೂ ಅವರ ನ್ಯಾಯಬದ್ಧವಾದ ಅಭಿರುಚಿಗಳನ್ನೂ ರಕ್ಷಿಸುವುದಕ್ಕಾಗಿ ಗವರ್ನರ್ ಜನರಲ್ಲನಿಗೂ ಪ್ರಾಂತ್ಯದ ಗವರ್ನರುಗಳಿಗೂ ವಿಶೇಷವಾದ ಅಧಿಕಾರ ಕೊಡಲಾಯಿತು. ಭಾರತದಲ್ಲಿರುವ ಪ್ರತಿಯೊಬ್ಬ ನೌಕರನೂ ಚಕ್ರವರ್ತಿಯ ಇಚ್ಛೆಗನುಗುಣವಾಗಿ ತನ್ನ ನೌಕರಿ ಹೊಂದಿರಬಲ್ಲನೆಂದು ವಿವರಿಸಲಾಯಿತು. ನೌಕರನ ಹುದ್ದೆಯನ್ನು ರದ್ದುಗೊಳಿಸಿದ್ದಾದರೆ ಅವನಿಗೆ ಪರಿಹಾರ ಕೊಡಬೇಕಾಗಿತ್ತು. ಚಕ್ರವರ್ತಿ ಅನ್ಯಾಯವಾಗಿ ಯಾರನ್ನಾದರೂ ನೌಕರಿಯಿಂದ ತೆಗೆದು ಹಾಕಿದರೆ ಆ ಆಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಬಹುದಿತ್ತು. ನೇಮಕ ಮಾಡಿಕೊಳ್ಳುವ ಅಧಿಕಾರಿಗಿಂತ ಕಡಿಮೆ ಅಧಿಕಾರವುಳ್ಳವನು ಯಾವ ನೌಕರನನ್ನು ಕೆಲಸದಿಂದ ತೆಗೆದುಹಾಕುವ ಹಕ್ಕು ಪಡೆದಿರುತ್ತಿರಲಿಲ್ಲ. ತನ್ನ ಕೃತ್ಯದ ಬಗ್ಗೆ ಆತನಿಂದ ಸಮಜಾಯಿಷಿ ಕೇಳಿ ಪಡೆಯುವವರೆಗೆ ಯಾವ ನೌಕರನನ್ನು ತೆಗೆಯುವಂತೆಯೂ ಇರಲಿಲ್ಲ. ಅವನನ್ನು ಕೆಳದರ್ಜೆಗೆ ಇಳಿಸುವಂತೆಯೂ ಇರಲಿಲ್ಲ. ಫೆಡರಲ್ ಕ್ಷೇತ್ರದಲ್ಲಿ ಲೋಕಸೇವೆಗೆ ನೌಕರರನ್ನು ನೇಮಕಮಾಡುವ ಅಧಿಕಾರವನ್ನು ಗವರ್ನರ್ ಜನರಲ್ಲನಿಗೆ ಕೊಡಲಾಯಿತು. ಆದರೆ ಆತ ಭಾರತೀಯ ಲೋಕಸೇವೆ, ಪೊಲೀಸ್ ಇಲಾಖೆ ಮತ್ತು ವೈದ್ಯ ಇಲಾಖೆಗಳಿಗೆ (ಅಸೈನಿಕ) ನೇಮಕ ಮಾಡುವಂತಿರಲಿಲ್ಲ. ಅಲ್ಲದೆ ಆತ ಸೇವಾನಿಯಮಾವಳಿಯನ್ನೂ ಅವರೇ ಮಾಡಬೇಕಾಗಿತ್ತು. ರೈಲ್ವೆ ಇಲಾಖೆಗೆ ಅಧಿಕಾರಿಗಳನ್ನು ನೇಮಿಸುವಾಗ ಗವರ್ನರ್ ಜನರಲ್ ತನ್ನ ಅಧಿಕಾರವನ್ನು ಫೆಡರಲ್ ರೈಲ್ವೆಗೆ ವಹಿಸುತ್ತಿದ್ದ. ರೈಲ್ವೆಯಲ್ಲಿ ಉನ್ನತ ಹುದ್ದೆಗಳಿಗೆ ನೇಮಕ ಮಾಡುವಾಗ ಫೆಡರಲ್ ರೈಲ್ವೆ ಲೋಕಸೇವಾ ಆಯೋಗದ ಸಲಹೆ ಪಡೆಯಬೇಕಾಗಿತ್ತು. ಯಾವ ಅಧಿಕಾರಿಯೊಂದಿಗಾಗಲಿ ವ್ಯವಹರಿಸುವಾಗ ಸೆಕ್ರೆಟರಿ ಆಫ್ ಸ್ಟೇಟ್, ಗವರ್ನರ್-ಜನರಲ್ ಮತ್ತು ಗವರ್ನರುಗಳು ಸಮಾನವಾದ ಅಧಿಕಾರ ಹೊಂದಿರುತ್ತಿದ್ದರು. ನೊಂದ ನೌಕರರು ತಮ್ಮ ಅಹವಾಲುಗಳನ್ನು ಗವರ್ನರ್, ಗವರ್ನರ್-ಜನರಲ್ ಅಥವಾ ಸೆಕ್ರೆಟರಿ ಆಫ್ ಸ್ಟೇಟ್ ಇವರಿಗೆ ಸಲ್ಲಿಸಬಹುದಾಗಿತ್ತು. ಯಾರಿಗಾದರೂ ಅನ್ಯಾಯವಾಗಿದ್ದ ಪಕ್ಷಕ್ಕೆ ಅವರಿಗೆ ಸೆಕ್ರೆಟರಿ ಪರಿಹಾರ ಕೊಡಬಹುದಾಗಿತ್ತು. ನೌಕರರ ಸಂಬಳ ಸಾರಿಗೆ ಮತ್ತು ವಿಶ್ರಾಂತಿ ವೇತನ-ಇವುಗಳಾವುವೂ ಶಾಸನ ಸಭೆಗಳ ಮತಕ್ಕೆ ಒಳಪಟ್ಟಿರುತ್ತಿರಲಿಲ್ಲ. ನಿವೃತ್ತಿ ವೇತನವನ್ನು ಭಾರತದ ಬೊಕ್ಕಸದಿಂದ ಕೊಡುತ್ತಿರಲಿಲ್ಲ. ಭಾರತೀಯ ಸೈನಿಕನ ವಿಧವೆ ಹಾಗೂ ಅನಾಥರ ಸಂಚಿತನಿಧಿ, ಉನ್ನತಸೇವಾ (ಭಾರತೀಯ) ಸಂಸಾರದ ನಿವೃತ್ತಿವೇತನದ ನಿಧಿ ಮತ್ತಿತರ ಸಂಚಿತ ನಿಧಿಗಳನ್ನು ಚಕ್ರವರ್ತಿಯಿಂದ ನೇಮಕವಾದ ಕಮಿಷನರುಗಳ ಕೈಯಲ್ಲಿ ಇಡಲಾಗುತ್ತಿತ್ತು. ಇಷ್ಟಲ್ಲದೆ 1935ರ ಕಾಯಿದೆ ಕೇಂದ್ರದಲ್ಲಿ ಫೆಡರಲ್ ಲೋಕಸೇವಾ ಆಯೋಗವಿರಬೇಕೆಂದೂ ಸೂಚಿಸಿತು. ಎರಡು-ಮೂರು ಪ್ರಾಂತ್ಯಗಳ ಉಪಯೋಗಕ್ಕಾಗಿ ಸಂಯುಕ್ತ ಲೋಕಸೇವಾ ಆಯೋಗವಿರಬೇಕೆಂದೂ ಅದು ಅವಕಾಶ ಮಾಡಿಕೊಟ್ಟಿತು. ಫೆಡರಲ್ ಲೋಕಸೇವಾ ಆಯೋಗದಲ್ಲಿರಬೇಕಾದ ಸದಸ್ಯ ಸಂಖ್ಯೆಯನ್ನು ಗವರ್ನರ್-ಜನರಲ್ಲನೂ ಪ್ರಾಂತ್ಯಗಳ ಲೋಕಸೇವಾ ಆಯೋಗಗಳ ಸಂಖ್ಯೆಯನ್ನು ಪ್ರಾಂತ್ಯ ಗವರ್ನರುಗಳೂ ನಿರ್ಣಯಿಸಬೇಕಾಗಿತ್ತು. ಅವುಗಳಲ್ಲಿದ್ದ ಅರ್ಧದಷ್ಟು ಸದಸ್ಯರು ಭಾರತದಲ್ಲಿ ಕೊನೆಯ ಪಕ್ಷ ಹತ್ತು ವರ್ಷಗಳವರೆಗಾದರೂ ನೌಕರಿಯಲ್ಲಿರಬೇಕಾಗಿತ್ತು.

ಸ್ವತಂತ್ರ ಭಾರತದಲ್ಲಿ : ಭಾರತ ಸ್ವಾತಂತ್ರ್ಯ ಕಾಯಿದೆಯ ಹತ್ತನೆಯ ಪ್ರಕರಣದ ಪ್ರಕಾರ ಇಂಡಿಯನ್ ಸಿವಿಲ್ ರದ್ದಾಯಿತು. ಈ ವ್ಯವಸ್ಥೆಯಲ್ಲಿದ್ದ ಅಧಿಕಾರಿಗಳಿಗೆ ಪರಿಹಾರ ಕೊಡಬೇಕೆಂದು ವಾದವನ್ನು ಸರ್ದಾರ್ ಪಟೇಲರು ಒಪ್ಪಲಿಲ್ಲ. ಕೊನೆಗೆ ಐರೋಪ್ಯ ಅಧಿಕಾರಿಗಳನ್ನು ನಿವೃತ್ತಿಗೊಳಿಸಿ ಅವರಿಗೆ ಪರಿಹಾರ ಕೊಡತಕ್ಕದ್ದೆಂದೂ ಭಾರತೀಯ ಅಧಿಕಾರಿಗಳು ತಮ್ಮ ಸೇವಾವಧಿ ಮುಗಿಯುವವರೆಗೂ ಮುಂದುವರಿಯತಕ್ಕದ್ದೆಂದೂ ತೀರ್ಮಾನವಾಗಿ ಇವರಿಗೆ ಕೆಲವು ವಿನಾಯಿತಿಗಳನ್ನು ಕೊಡಲಾಯಿತು. ರದ್ದಾದ ಈ ವ್ಯವಸ್ಥೆಯ ಸ್ಥಾನದಲ್ಲಿ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ಎಂಬ ಹೊಸ ವ್ಯವಸ್ಥೆಯ ರಚನೆಯಾಯಿತು.

ಭಾರತದ ಹೊಸ ರಾಜ್ಯಾಂಗದಲ್ಲಿ ಲೋಕಸೇವಾ ಆಯೋಗಗಳು : ಭಾರತದ ಹೊಸ ಸಂವಿಧಾನ ಲೋಕಸೇವೆಗಳ ಬಗ್ಗೆ ಪ್ರತ್ಯೇಕ ಕಾನೂನುಗಳನ್ನು ರಚಿಸಿದೆ. ರಾಜ್ಯಾಂಗದ 309ನೆಯ ಅನುಚ್ಛೇದದ ಪ್ರಕಾರ ಶಾಸಕಾಂಗ ಆಡಳಿತ ವರ್ಗಗಳಿಗೆ ನೌಕರರನ್ನು ಆರಿಸಿಕೊಳ್ಳುವ ವಿಧಾನವನ್ನು ಸುಧಾರಿಸಿ, ಕೇಂದ್ರ ಮತ್ತು ಸಂಸ್ಥಾನಗಳ ಸಹಾಯ ಸಹಕಾರಗಳಿಂದ ಲೋಕಸೇವೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಂಡು ಅವರ ಸೇವಾನಿಯಮಾವಳಿ ಮತ್ತಿತರ ಪ್ರಶ್ನೆಗಳನ್ನು ಕೂಲಂಕಷವಾಗಿ ವಿಮರ್ಶಿಸಿ, ನಿರ್ಣಯ ಮಾಡಬೇಕಾಗಿದೆ. ಶಾಸಕಾಂಗ ಇನ್ನಷ್ಟು ಮಾಡುವುದಕ್ಕೆ ಮೊದಲು ರಾಷ್ಟ್ರಾಧ್ಯಕ್ಷರಾಗಲಿ ಗವರ್ನರ್ ಆಗಲಿ ನೌಕರರ ಕ್ಷೇಮಾಭ್ಯುದಯಕ್ಕೆ ಮತ್ತು ಅವರ ಆಯ್ಕೆಗೆ ಸಂಬಂಧಪಟ್ಟ ನಿಯಮವನ್ನು ರಚಿಸುವುದು ಅವರ ಅಧಿಕಾರಕ್ಕೆ ಬಿಟ್ಟದ್ದಾಗಿದೆ. 310ನೆಯ ಅನುಚ್ಛೇದದ ಪ್ರಕಾರ, ರಕ್ಷಣಾ ಇಲಾಖೆಯಾಗಲಿ ಭಾರತದ ಇನ್ನಾವ ಇಲಾಖೆಯಲ್ಲಾಗಲಿ ಕೆಲಸಮಾಡುವ ವ್ಯಕ್ತಿ ರಾಷ್ಟ್ರಾಧ್ಯಕ್ಷರ ಇಚ್ಛೆಗನುಸಾರವಾಗಿ ಸೇವೆ ಸಲ್ಲಿಸಬೇಕು. ಸಂಸ್ಥಾನದ ಲೋಕ ಸೇವೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಂಸ್ಥಾನದ ಗವರ್ನರ್ ಸುಪ್ರೀತನಾಗುವಂತೆ ತನ್ನ ಜವಾಬ್ದಾರಿ ನಿರ್ವಹಿಸಬೇಕು. 311ನೆಯ ಅನುಚ್ಛೇದದ ಪ್ರಕಾರ ಕೇಂದ್ರದ ಲೋಕಸೇವೆಯಲ್ಲಿರುವ ಅಥವಾ ಸಮಗ್ರ ಭಾರತದ ಸೇವೆಯಲ್ಲಿರುವ ಅಥವಾ ಸಂಸ್ಥಾನದ ಆಡಳಿತ ವರ್ಗದಲ್ಲಿರುವ ಯಾವ ಅಧಿಕಾರಿಯನ್ನಾಗಲಿ ಸರಿಯಾದ ಕಾರಣವಿಲ್ಲದೆ ಕೆಲಸದಿಂದ ತೆಗೆಯುವಂತಿಲ್ಲ. ಕಾರಣಗಳನ್ನು ಕೊಡಲು ಸಾಕಷ್ಟು ಅವಕಾಶ ಕೊಡದೆಯೂ ಯಾವ ಅಧಿಕಾರಿಯನ್ನಾಗಲಿ ಕೆಲಸದಿಂದ ತೆಗೆಯುವಂತಿಲ್ಲ. ಅವನನ್ನು ಆಗಿನ ಸ್ಥಾನಮಾನದಿಂದ ಕೆಳದರ್ಜೆಗೆ ಇಳಿಸುವಂತೆಯೂ ಇಲ್ಲ. ಆದರೆ ಕಳ್ಳರಿಗೂ ರಾಷ್ಟ್ರದ್ರೋಹಿಗಳಿಗೂ ಇದು ಅನ್ವಯಿಸುವುದಿಲ್ಲ.

ಲೋಕಸೇವಾ ಆಯೋಗಗಳು : 315ನೆಯ ಅನುಚ್ಛೇದದ ಪ್ರಕಾರ ಭಾರತದ ಒಕ್ಕೂಟಕ್ಕೆ ಒಂದು ಲೋಕಸೇವಾ ಆಯೋಗವೂ ಪ್ರತಿ ರಾಜ್ಯಕ್ಕೂ ಒಂದು ಲೋಕಸೇವಾ ಆಯೋಗವೂ ಇರಬೇಕಾಗಿದೆ. ಎರಡು ಅಥವಾ ಹೆಚ್ಚಿನ ಸಂಖ್ಯೆಯ ರಾಜ್ಯಗಳು ಒಟ್ಟಿಗೆ ಸೇರಿ ತಮಗೆ ಒಂದೇ ಲೋಕಸೇವಾ ಆಯೋಗ ಸಾಕೆಂದು ಹೇಳಿ, ಆ ರಾಜ್ಯಗಳ ಶಾಸನಾಂಗಗಳು ಒಂದು ನಿರ್ಣಯಮಾಡಿ ಕೇಂದ್ರಕ್ಕೆ ಕಳುಹಿಸಿಕೊಟ್ಟರೆ, ಸಂಸತ್ತು ಆ ನಿರ್ಣಯದ ಆಧಾರದ ಮೇಲೆ ಒಂದು ಆಜ್ಞೆಯೊರಡಿಸಿ, ಸಂಯುಕ್ತ ರಾಜ್ಯ ಲೋಕಸೇವಾ ಆಯೋಗ ಸ್ಥಾಪಿಸಬಹುದು. ರಾಜ್ಯಪಾಲರ ಪ್ರಾರ್ಥನೆಯ ಮೇಲೆ ಕೇಂದ್ರ ಲೋಕಸೇವಾ ಆಯೋಗವೇ, ರಾಷ್ಟ್ರಾಧ್ಯಕ್ಷರ ಅಪ್ಪಣೆ ಪಡೆದು, ರಾಜ್ಯದ ಕೆಲಸವನ್ನೂ ನಿರ್ವಹಿಸಬಹುದು. 316ನೆಯ ಅನುಚ್ಛೇದದ ಪ್ರಕಾರ ಒಕ್ಕೂಟದ ಆಯೋಗದ ಅಥವಾ ಸಂಯುಕ್ತ ಆಯೋಗದ ಅಧ್ಯಕ್ಷನನ್ನು ರಾಷ್ಟ್ರಾಧ್ಯಕ್ಷರೂ ರಾಜ್ಯದ ಆಯೋಗದ ಅಧ್ಯಕ್ಷನನ್ನು ರಾಜ್ಯಪಾಲರೂ ನೇಮಿಸಬಹುದಾಗಿದೆ. ಪ್ರತಿ ಆಯೋಗದ ಅರ್ಧದಷ್ಟು ಸದಸ್ಯರೂ ತಾವು ಅದರ ಸದಸ್ಯರಾಗುವುದಕ್ಕೆ ಮುನ್ನ ಹತ್ತು ವರ್ಷಗಳ ಕಾಲ ಕೇಂದ್ರ ಸರಕಾರದಲ್ಲೂ ಸಂಸ್ಥಾನದಲ್ಲೂ ಸೇವೆ ಸಲ್ಲಿಸಿರಬೇಕು. ಪ್ರತಿಯೊಬ್ಬ ಸದಸ್ಯನೂ ಸಾಮಾನ್ಯವಾಗಿ ಆರು ವರ್ಷ ಕಾಲ ಆ ಪದವಿಯಲ್ಲಿರಬಹುದು. (ಬಿ.ಎಂ.)