ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂದೂರಿನ ಹೋಳ್ಕರರು
ಇಂದೂರಿನ ಹೋಳ್ಕರರು
ಮಧ್ಯಪ್ರದೇಶದಲ್ಲಿದ್ದ ಇಂದೂರ್ ಸಂಸ್ಥಾನದ ರಾಜರು. 18ನೆಯ ಶತಮಾನದಲ್ಲಿ ಪೇಷ್ವೆ ಮೊದಲನೆಯ ಬಾಜೀರಾಯ. ಮಲ್ಹಾರಿರಾವ್ ಹೋಳ್ಕರನಿಗೆ ಕೊಟ್ಟ ಜಹಗೀರಿಯಿಂದ ಈ ರಾಜ್ಯ ಪ್ರಾರಂಭವಾಯಿತು. ವಂಶದ ಮೂಲಪುರುಷ ಮಲ್ಹಾರಿರಾವ್ ಹೋಳ್ಕರ್ ಧಂಗರ್ ಅಥವಾ ಕುಬಪೈಕದವನಾಗಿದ್ದ. ಈತ ತನ್ನ ಶಕ್ತಿಪರಾಕ್ರಮಗಳಿಂದ ಪೇಷ್ವೆಯ ಅಶ್ವದಳದ ಅಧಿಪತಿಯಾದ. ಜನ್ಮಸ್ಥಳ ಪೂನಾದ ಬಳಿಯಿರುವ ಹೋಳ್ ಎಂಬ ಊರಾದ್ದರಿಂದ ಇವನ ವಂಶಕ್ಕೆ ಹೋಳ್ಕರರೆಂಬ ಹೆಸರು ಬಂತು. ಈತ 1766ರಲ್ಲಿ ಸಾಯುವ ಮೊದಲು ತನ್ನ ಶಕ್ತಿಪರಾಕ್ರಮಗಳಿಂದ ತನ್ನ ರಾಜ್ಯವನ್ನು ವಿಸ್ತರಿಸಿದ. ಇವನ ಅನಂತರ ಕ್ರಮವಾಗಿ ಮಲೇರಾಯ ಮತ್ತು ಅಹಲ್ಯಾಬಾಯಿ ರಾಜ್ಯವಾಳಿದರು. ಅಹಲ್ಯಾಬಾಯಿ 1766ರಿಂದ 1795ರ ವರೆಗೆ ರಾಜ್ಯವನ್ನು ತುಂಬ ದಕ್ಷತೆಯಿಂದ ಆಳಿ ಜನರ ಸುಖ ಸಂಪತ್ತುಗಳನ್ನು ಹೆಚ್ಚಿಸಿದ ಈಕೆ ಈ ವಂಶದಲ್ಲಿ ಅತ್ಯಂತ ಪ್ರಸಿದ್ಧಳು (ನೋಡಿ- ಅಹಲ್ಯಾಬಾಯಿ- ಹೋಳ್ಕರ್). ಈಕೆಯ ಮರಣಾನಂತರ ಸೈನ್ಯಾಧಿಕಾರಿಯಾಗಿದ್ದ ತುಕೋಜಿ ಹೋಳ್ಕರ್ ಪಟ್ಟಕ್ಕೆ ಬಂದು ಈಕೆಯ ಸಂಪ್ರದಾಯಗಳನ್ನೇ ಮುಂದುವರಿಸಿದ. ಈತನ ಮರಣಾನಂತರ (1797) ರಾಜ್ಯದಲ್ಲಿ ಅನಾಯಕತ್ವ ಪ್ರಾರಂಭವಾಯಿತು.
ತುಕೋಜಿ ಹೋಳ್ಕರನ ಅನಂತರ ಜಸವಂತರಾವ್ ಹೋಳ್ಕರ್ ಪಟ್ಟಕ್ಕೆ ಬಂದ. ಎರಡನೆಯ ಬಾಜಿರಾಯ ಬೆಸ್ಸಿನ್ ಒಪ್ಪಂದಕ್ಕೆ ಸಮ್ಮತಿಸಿದ್ದು ಇವನಿಗೆ ಸರಿಬೀಳಲಿಲ್ಲ. ಇದರಿಂದ ಎರಡನೆಯ ಮರಾಠಾ ಯುದ್ಧ ಪ್ರಾರಂಭವಾಯಿತು. ಈತ ಹಾಕಿದ ಷರತ್ತುಗಳನ್ನು ಇಂಗ್ಲಿಷರು ಒಪ್ಪಲಿಲ್ಲ. 1804ರಲ್ಲಿ ಜಯಪುರದ ರಾಜ್ಯದ ಲೂಟಿಯಾದ್ದರಿಂದ ಇಂಗ್ಲಿಷರು 1804ರಲ್ಲಿ ಯುದ್ಧ ಘೋಷಿಸಿದರು. ಕೋಟಾಕದನದಲ್ಲಿ ಇಂಗ್ಲಿಷ್ ಸೈನ್ಯಗಳನ್ನು ಸೋಲಿಸಿ ದೆಹಲಿಯನ್ನು ಮುತ್ತಿದರೂ ಇವನಿಗೆ ಅದನ್ನು ವಶಪಡಿಸಿಕೊಳ್ಳಲಾಗಲಿಲ್ಲ. ಫರೂಕಾಬಾದ್ ಕದನದಲ್ಲಿ ಈತ ಪರಾಭವಗೊಂಡ, 1806ರಲ್ಲಿ ಆದ ಒಪ್ಪಂದದ ಪ್ರಕಾರ ಈತ ರಾಜ್ಯದ ಹೆಚ್ಚು ಭಾಗವನ್ನು ಇಂಗ್ಲಿಷರಿಗೆ ಬಿಟ್ಟುಕೊಡಬೇಕಾಯಿತು. ಇವನನ್ನು ಇಂಗ್ಲಿಷರು ತಮ್ಮ ಅತ್ಯಂತ ಪ್ರಬಲ ಶತ್ರುವೆಂದು ಭಾವಿಸಿದ್ದರು. ಈತ ಅತ್ಯಂತ ದಕ್ಷಸೇನಾಪತಿಯೂ ವಿದ್ಯಾವಂತನೂ ಕ್ರೂರಿಯೂ ಆಗಿದ್ದ. ದುರಾಸೆ ಇವನಲ್ಲಿದ್ದ ದೊಡ್ಡ ದುರ್ಗುಣ. ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಈತನಿಗೆ ಬುದ್ಧಿಭ್ರಮಣೆಯಾದುದರಿಂದ ತಮ್ಮನನ್ನೂ, ಸೋದರಳಿಯನನ್ನೂ ಕೊಲ್ಲಿಸಿದ. 1811ರಲ್ಲಿ ಸತ್ತ. ಅನಂತರ ಇವನ ಮಗ, ನಾಲ್ಕು ವರ್ಷ ವಯಸ್ಸಿನ ಎರಡನೆಯ ಮಲ್ಹಾರಿರಾಯ, ಪಟ್ಟಕ್ಕೆ ಬಂದ. ಈತನ ಸಾಕುತಾಯಿ ತುಳಸೀಬಾಯಿಯೇ ರಕ್ಷಕಳಾಗಿ ನಿಂತಳು. ಈಕೆ ಸುಂದರಿಯೂ ಬುದ್ಧಿವಂತಳೂ ದೃಢಮನಸ್ಕಳೂ ಆಗಿದ್ದಳು. ಆದರೂ ರಾಜ್ಯಾಧಿಕಾರ ಅಮೀರ್‍ಖಾನ್ ಮತ್ತು ಗಫೂರ್‍ಖಾನ್ ಎಂಬ ಪಠಾಣರ ಕೈಯಲ್ಲಿತ್ತು. ಇದು ರಾಜ್ಯದ ಮರಾಠಾ ಸಿಪಾಯಿಗಳಿಗೆ ಸರಿಬೀಳದ್ದರಿಂದ ಪ್ರಾಣರಕ್ಷಣೆಗಾಗಿ ರಾಜಪುಟಾಣದ ಕೋಟಾರಾಜ್ಯಕ್ಕೆ ಓಡಿ ಹೋದಳು. ಗಫೂರ್‍ಖಾನ್ ಮತ್ತು ಅವನ ಅನುಯಾಯಿಗಳಿಂದ ಪರಿಸ್ಥಿತಿಯನ್ನೆದುರಿಸಲಾಗಲಿಲ್ಲ. ಎಲ್ಲೆಲ್ಲೂ ಅನಾಯಕತ್ವ ತಲೆದೋರಿತು (1817). ತುಳಸೀಬಾಯಿ ಇಂಗ್ಲಿಷರ ಪರವಾಗಿದ್ದಳು. ಗಫೂರ್‍ಖಾನ್ ಎರಡನೆಯ ಬಾಜೀರಾಯನ ಪಕ್ಷ ಸೇರಿ ಇಂಗ್ಲಿಷರ ಮೇಲೆ ಯುದ್ಧ ಘೋಷಿಸಿದಳು, ಹೋಳ್ಕರನ ಸೈನ್ಯ ಮಹಿದ್‍ಪುರದ ಕದನದಲ್ಲಿ ಸೋತಿತು. ಇಂದೂರಿನಲ್ಲಿ ಇಂಗ್ಲಿಷರ ಸಾರ್ವಭೌಮತ್ವ ಸ್ಥಾಪನೆಯಾಗಿ ಅನಾಯಕತ್ವ ಕೊನೆಗೊಂಡಿತು. ಮಂಡೇಸರ್ ಒಪ್ಪಂದದ (1818) ಪ್ರಕಾರ ಹೋಳ್ಕರನ ಅರ್ಧ ರಾಜ್ಯ ಇಂಗ್ಲಿಷರ ವಶವಾಯಿತು. ಹೋಳ್ಕರನ ರಾಜ್ಯದಲ್ಲಿ ಅಂತರ್ಯುದ್ಧಗಳೂ ಹೆಚ್ಚಾಗಿ ಮಧ್ಯೆ ಮಧ್ಯೆ ಶಾಂತಿ ಸ್ಥಾಪನೆಗೆ ಇಂಗ್ಲಿಷರು ಪ್ರವೇಶಿಸಬೇಕಾಯಿತು. 1857ರಲ್ಲಿ ಹೋಳ್ಕರನ ಸೈನ್ಯ ಬ್ರಿಟಿಷ್ ರೆಸಿಡೆನ್ಸಿಯನ್ನು ಮುತ್ತಿತು. ಈ ಮುತ್ತಿಗೆಯನ್ನು ಇಂಗ್ಲಿಷರು ಅತಿ ಪ್ರಯಾಸದಿಂದ ಹತ್ತಿಕ್ಕಿದರು. 1899 ರಿಂದ ಹೋಳ್ಕರನ ರಾಜ್ಯದಲ್ಲಿ ವ್ಯವಸ್ಥಿತವಾದ ಸರ್ಕಾರ ಏರ್ಪಟ್ಟು ಜನರಿಗೆ ಶಾಂತಿ ಸಮಾಧಾನ ದೊರೆಯುವಂತಾಯಿತು.
(ಎಚ್.ಜಿ.ಆರ್.)