ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಕೆಯಾಸೆಕಿ

ವಿಕಿಸೋರ್ಸ್ದಿಂದ

ಇಕೆಯಾಸೆಕಿ- ಒಂದು ಧೂಮಕೇತು. ಇಕೆಯಾ ಮತ್ತು ಸೆಕಿ ಎಂಬ ಹೆಸರಿನ ಜಪಾನಿನ ತರುಣ ಖಗೋಳವೀಕ್ಷಕರು ಇದನ್ನು ಮೊದಲು ಗುರುತಿಸಿದುದರಿಂದ ಅವರ ಹೆಸರಿನಿಂದ ಪ್ರಖ್ಯಾತವಾಗಿದೆ. ಮೊದಲು ಕಂಡದ್ದು 1965ರ ಸೆಪ್ಟೆಂಬರ್ ತಿಂಗಳ 18ರ ಮುಂಜಾನೆ. ಮುಂದಿನ ದಿನಗಳಲ್ಲಿ ಆಗ್ನೇಯ ಆಕಾಶದಲ್ಲಿ ಸೂರ್ಯನ ವಿರುದ್ಧ ದಿಕ್ಕಿಗೆ ಬಾಲಚಾಚಿ ಹೊಳೆಯುತ್ತಿದ್ದ ಈ ಧೂಮಕೇತುವನ್ನು ಬರಿಗಣ್ಣಿನಿಂದಲೂ ನೋಡಬಹುದಿತ್ತು. ಸೆಕೆಂಡಿಗೆ 480 ಕಿ.ಮೀ. ಗಿಂತಲೂ ಹೆಚ್ಚಿನ ವೇಗದಿಂದ ಇದು ಸೂರ್ಯನೆಡೆಗೆ ಧಾವಿಸುತ್ತಿತ್ತು. ಕೊಡೈಕೆನಾಲ್ ವೀಕ್ಷಣಾಲಯದ ವರದಿಯ ಪ್ರಕಾರ ಇದರ ಪ್ರಕಾಶ ಪ್ರೋಸಿಯಾನ್ ನಕ್ಷತ್ರದಷ್ಟು (ಅ. 16 ರಂದು), ಮುಂದಿನ ದಿವಸಗಳಲ್ಲಿ ಅದು ಸೂರ್ಯನಮೇಲೆ ಬಡಿದಪ್ಪಳಿಸಿ ನಾಶವಾಗಿ ಹೋಗುವುದೆಂದು ನಿರೀಕ್ಷಿಸಿದ್ದರು. ಆದರೆ ಹೀಗಾಗಲಿಲ್ಲ. ಸೂರ್ಯನಿಂದ 4,99,209 ಕಿ.ಮೀ. ದೂರದಲ್ಲಿದ್ದಾಗ ಇಕೆಯಾಸೆಕಿ ಎರಡಾಗಿ ಒಡೆಯಿತು. ದೊಡ್ಡ ಭಾಗ ಸೂರ್ಯನ ಕಡೆಗೆ ಧಾವಿಸಿ ಸ್ವಲ್ಪ ಕಾಲಾನಂತರ ಮರೆಯಾಯಿತು. ಇದರ ಬಾಲವನ್ನು ಪ್ರಪಂಚದ ಅನೇಕ ವೀಕ್ಷಣಾಲಯಗಳು ರೋಹಿತದರ್ಶಕ ವಿಧಾನಗಳಿಂದ ಅಧ್ಯಯಿಸಿ ಅದರ ಉದ್ದ 32,00,000 ಕಿ.ಮೀ. ಇತ್ತೆಂದೂ ಅದರಲ್ಲಿ ಸೋಡಿಯಂ, ಕಬ್ಬಿಣ, ನಿಕ್ಕಲ್, ತಾಮ್ರ, ಪೊಟ್ಯಾಸಿಯಂ, ಅಯಾನೀಕೃತ ಕ್ಯಾಲ್ಸಿಯಂಗಳು ಇದ್ದುವೆಂದೂ ತಿಳಿಸಿವೆ ಅಕ್ಟೋಬರ್ 29ರಂದು ಮರೆಯಾದ ಈ ಧೂಮಕೇತುವನ್ನು ನವೆಂಬರ್ ತಿಂಗಳ ಮೊದಲವಾರದಲ್ಲಿ ಪುನಃ ಸೆಕಿ ಮೊದಲಾದ ವೀಕ್ಷಕರು ನೋಡಿದರು. ಇಂಥದೇ ಒಂದು ಧೂಮಕೇತು 1822ರಲ್ಲಿ ಕಾಣಿಸಿಕೊಂಡಿತ್ತು. ಇಕೆಯಾಸೆಕಿ ಧೂಮಕೇತುವಿನ ಆವರ್ತಕಾಲ 1,000 ವರ್ಷವಿರಬಹುದೆಂದು ವಿಜ್ಞಾನಿಗಳ ಅಭಿಪ್ರಾಯ. ಈ ಧೂಮಕೇತುವಿನ ಕಕ್ಷೆಯ ಸೂರ್ಯಸಮೀಪ ಬಿಂದುವಿನ (ಪೆರಿಹೆಲಿಯನ್) ದೂರ (ಸೂರ್ಯನಿಂದ) 3,86,400 ಕಿ.ಮೀ. ಇದನ್ನು ತಲುಪಿದ ತಾರೀಕು 21 ಅಕ್ಟೋಬರ್ 1965.