ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇರುಳುಗಳ್ಳತನ

ವಿಕಿಸೋರ್ಸ್ದಿಂದ

ಇರುಳುಗಳ್ಳತನ - ರಾತ್ರಿ ನಡೆಯುವ ಅತಿಕ್ರಮ ಪ್ರವೇಶದ ಒಂದು ಬಗೆ. ಅತ್ಯಂತ ಘೋರವೆನಿಸಿದೆ. ಇನ್ನೊಂದು ಬಗೆಯೆಂದರೆ ಹಗಲುಗಳ್ಳತನ.

ತಾನು ಪ್ರವೇಶಿಸುವುದಕ್ಕೋಸ್ಕರವೇ ತನ್ನಿಂದ ಅಥವಾ ತನ್ನ ಸಹಾಯಕನಿಂದ ಮಾಡಲ್ಪಟ್ಟ ದ್ವಾರದಿಂದ ಇಲ್ಲವೆ ಕಿಟಿಕಯಂಥ ದ್ವಾರದಿಂದ, ಇಲ್ಲವೆ ಮುಚ್ಚಿದ ದ್ವಾರವನ್ನು ಬಲತ್ಕಾರದಿಂದ ತೆರೆದು ಅಥವಾ ಬೀಗ (ಕೀಲಿ) ಮುರಿದು ಇಲ್ಲವೆ ಗೋಡೆ ಏರಿ ಅಥವಾ ಕಟ್ಟಡದ ಮೇಲೆ ಹತ್ತಿ ಅಥವಾ ಯಾರೊಬ್ಬನ ಮೈಮೇಲೆ ಹೋಗಿ (ಅಸಾಲ್ಟ್) ಇಲ್ಲವೆ ಅವನ ಮೇಲೆ ಬಲಾತ್ಕಾರ ಪ್ರಯೋಗಮಾಡಿ ಅಥವಾ ಹೆದರಿಕೆ ಹಾಕಿ ರಾತ್ರಿಕಾಲದಲ್ಲಿ ಮನೆಯಲ್ಲಿ ಅಥವಾ ಹೊರಮನೆಯಲ್ಲಿ (ಔಟ್ ಹೌಸ್) ಅತಿಕ್ರಮ ಪ್ರವೇಶ ಮಾಡಿದರೆ ಅದು ಇರುಳುಗಳ್ಳತನ ಅಥವಾ ರಾತ್ರಿ ಮನೆಯೊಡೆಯುವುದು ಎನಿಸಿಕೊಳ್ಳುತ್ತದೆ (ಬಗ್ರ್ಲರಿ). ಇದು ಪೀನಲ್ ಕೋಡಿನ 447ನೆಯ ಕಲಮಿನ ಪ್ರಕಾರ ಅಪರಾಧವಾಗುತ್ತದೆ.

ರಾತ್ರಿ ಕನ್ನ ಕೊರೆದು, ಕಳ್ಳತನಕ್ಕಾಗಲಿ, ಅಥವಾ ಇನ್ನಾವುದಾದರೂ ಅಪರಾಧವನ್ನು ಎಸಗುವುದಕ್ಕಾಗಲಿ ಮಾಡುವ ಮನೆಯ ಅಕ್ರಮಪ್ರವೇಶ ಕನ್ನಗಳ್ಳತನವಾಗುತ್ತದೆ. ಇದು ಇರುಳುಗಳ್ಳತನದ ಒಂದು ಪ್ರಭೇದ.

ಇಲ್ಲಿ ಮನೆಯೆಂದರೆ ಡೇರೆ, ಹಡಗು ಇಲ್ಲವೇ ಪೂಜಾಮಂದಿರ, ವಸ್ತುಗಳ ಉಗ್ರಾಣ-ಇವೆಲ್ಲ ಸೇರುತ್ತವೆ.

ಕನ್ನಗಳ್ಳತನಮಾಡುವವ ಮನೆಯನ್ನು ಕೊರೆದೇ ಪ್ರವೇಶಿಸಬೇಕಿಲ್ಲ. ಮನುಷ್ಯ ಪ್ರವೇಶಕ್ಕೆ ದೇಶ ಅವಕಾಶವುಳ್ಳ ಕಿಟಿಕಿಯಿಂದಾಗಲಿ, ಚಿಮಣಿಯ ತೂತಿನಿಂದಾಗಲಿ, ಇನ್ನಾವ ತರಹದ ಬಿಲದ್ವಾರಗಳಿಂದಾಗಲಿ ಪ್ರವೇಶಿಸಿದರೆ ಈ ಅಪರಾಧವಾಗುತ್ತದೆ.

ಕೀಲಿಮುರಿದು ಕದವನ್ನು ಕಿತ್ತು, ದ್ವಾರದಲ್ಲಿ ಇದ್ದವರನ್ನು ಬೆದರಿಸಿ ಪ್ರವೇಶಿಸಿದರೂ ಅಪರಾಧವಾಗುತ್ತದೆ. ಹೇಗಾದರೂ ಅಪರಾಧೋದ್ದೇಶದಿಂದ ಪ್ರವೇಶ ಪಡೆದ ಮೇಲೆ ಮೇಲ್ಕಂಡ ಯಾವ ರೀತಿಯಲ್ಲಾದರೂ ಹೊರಬಂದರೂ ಇದೇ ಅಪರಾಧವಾಗುತ್ತದೆ. ಇಲ್ಲಿ ಇರುಳೆಂದರೆ ಸೂರ್ಯಾಸ್ತದ ಅನಂತರ ಸೂರ್ಯೋದಯಕ್ಕೆ ಮೊದಲು-ಎಂದು ವ್ಯಾಖ್ಯೆ ಮಾಡಲಾಗಿದೆ.

ಕಳ್ಳತನಕ್ಕಾಗಿ ಮನೆ ಒಡೆದು ಅಕ್ರಮ ಪ್ರವೇಶಮಾಡಿದವನ ವಿಷಯದಲ್ಲಿ ಬೇರೆ ದುರುದ್ದೇಶದವನಿಗಿಂತ ಹೆಚ್ಚು ಶಿಕ್ಷೆಯನ್ನು ಕಾಯಿದೆ ವಿಧಿಸುತ್ತದೆ. ಅದರಂತೆ ಹಗಲು ಪ್ರವೇಶಕ್ಕಿಂತ ರಾತ್ರಿ ಮನೆ ಒಡೆದು ಪ್ರವೇಶಿಸುವುದಕ್ಕೆ ಅಧಿಕ ಶಿಕ್ಷೆಯನ್ನು ವಿಧಿಸಲಾಗಿದೆ.

(ಆರ್.ಆರ್.ಟಿ.)