ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಳಕಲ್ಲು

ವಿಕಿಸೋರ್ಸ್ದಿಂದ

ಇಳಕಲ್ಲು ಬಿಜಾಪುರ ಜಿಲ್ಲೆಯ ಹನಗುಂದ ತಾಲ್ಲೂಕಿನ ಒಂದು ಮುಖ್ಯ ಊರು. ಹುನಗುಂದದ ದಕ್ಷಿಣಕ್ಕೆ 13 ಕಿ.ಮೀ.ಗಳ ದೂರದಲ್ಲಿದೆ. ಸನ್ನಿವೇಶ : 15( 55' ಉ. ಅ. 76( 7' ಪೂ. ರೇ. ಇಲ್ಲಿನ ಸೀರೆಗಳು ಬಹಳ ಪ್ರಸಿದ್ಧ, ನೇಯ್ಗೆಯ ಹಾಗೂ ಬಣ್ಣಹಾಕುವ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ. ಈ ಊರಿನಲ್ಲಿ ಬನಶಂಕರಿ, ಬಸವಣ್ಣ, ಮತ್ತು ವೆಂಕೋಬ ದೇವಸ್ಥಾನಗಳಿವೆ. ಕೊನೆಯದು ಪೂರ್ವಕಾಲದ ಶಿಲ್ಪಕಲೆಯಿಂದ ಕೂಡಿದೆ. ಇಲ್ಲಿ ಬಳಸಲಾಗಿರುವ ಇಲ್ಲಿನ ಕಂಬಗಳನ್ನು ಐಹೊಳೆಯಿಂದ ತಂದಿರಬಹುದೆಂದು ನಂಬಿಕೆ. ದೇವಸ್ಥಾನದ ಕಲ್ಲಿನ ಚಾವಣಿಯಲ್ಲಿ ದೂಲ ಮತ್ತು ಅಡ್ಡಪಟ್ಟಿಗಳನ್ನು ಕೆತ್ತಲಾಗಿದೆ. ಮಹಂತಸ್ವಾಮಿಗಳೆಂಬ ವಿರಕ್ತ ಸ್ವಾಮಿಗಳೊಬ್ಬರು ಇಲ್ಲಿ ಒಂದು ವೀರಶೈವ ಮಠವನ್ನು ಸ್ಥಾಪಿಸಿದ್ದಾರೆ. ಇದನ್ನು ಈ ಸ್ಥಳದ ಎಲ್ಲ ವಿಭಾಗದ ಜನರೂ ಆಧರಿಸುತ್ತಾರೆ.

ಇಲ್ಲಿನ ಪೌರಸಭೆ 1867ರಲ್ಲಿ ಸ್ಥಾಪಿತವಾಯಿತು. ಅದರ 21 ಜನ ಸದಸ್ಯ ಸ್ಥಾನಗಳಲ್ಲಿ 2 ಮಹಿಳೆಯರಿಗಾಗಿ ಮೀಸಲಿವೆ. ಸದಸ್ಯರನ್ನು ನಾಲ್ಕು ವರ್ಷಗಳಿಗೊಂದಾವರ್ತಿ ಚುನಾಯಿಸಲಾಗುತ್ತದೆ. ಇಲ್ಲಿ ಎರಡು ಪ್ರೌಢಶಾಲೆಗಳು, ಒಂದು ಕಾಲೇಜು ಹಾಗೂ ಒಂದು ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜು ಇವೆ. (ಕೆ.ಎನ್.ಸಿ.)