ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಸ್ರೇಲ್

ವಿಕಿಸೋರ್ಸ್ದಿಂದ

ಇಸ್ರೇಲ್ ಬೈಬಲಿನ ಕಾಲದಲ್ಲಿ ಯೆಹೂದಿ ಜನಸಮುದಾಯದ ಹೆಸರಾಗಿದ್ದು ಮುಂದೆ ಹೀಬ್ರೂ ರಾಜ್ಯಕ್ಕೂ ಇದೇ ಅಂಕಿತವಾಯಿತು. ಈಗ ನೈರುತ್ಯ ಏಷ್ಯದಲ್ಲಿರುವ ಒಂದು ಗಣರಾಜ್ಯ. 1948ರ ಮೇ 15ರಂದು ಅಸ್ತಿತ್ವಕ್ಕೆ ಬಂತು. ಉತ್ತರದಲ್ಲಿ ಲೆನಾನ್, ಪೂರ್ವದಲ್ಲಿ ಸಿರಿಯ ಮತ್ತು ಜಾರ್ಡನ್, ನೈರುತ್ಯದಲ್ಲಿ ಸಂಯುಕ್ತ ಅರಬ್ ಗಣರಾಜ್ಯ (ಈಜಿಪ್ಟ್), ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರ-ಇವುಗಳ ನಡುವೆ ಪುಟ್ಟ ಕಠಾರಿಯಂತೆ ಅಕಾಬ ಖಾರಿಯ ಮೊನೆಗೆ ಮೊನೆಚಾಚಿ ನಿಂತ ಇಸ್ರೇಲು ಬಹುತೇಕ ಅರಬ್ ರಾಷ್ಟ್ರಗಳಿಂದ ಪರಿವೃತ್ತವಾಗಿದೆ. 1948ರ ವರೆಗೆ ಬ್ರಿಟಿಷ್ ರಕ್ಷಿತ ಪ್ರದೇಶವಾಗಿದ್ದ ಪ್ಯಾಲಿಸ್ಟೈನಿನ ಬಹುಭಾಗವೀಗ ಇಸ್ರೇಲಿನ ಭೂಭಾಗ. ವಿಸ್ತೀರ್ಣ 7,999 ಚ. ಮೈ. 1961ರ ಜನಗಣತಿಯ ಪ್ರಕಾರ ಪ್ರಜಾಸಂಖ್ಯೆ 21,79,491 ; ಇವರಲ್ಲಿ 19,32,357 ಜನ ಯೆಹೂದ್ಯರು ; 1,70,830 ಮಂದಿ ಮುಸ್ಲಿಮರು ; 50,543 ಕ್ರೈಸ್ತರು ; 24,282 ಮಂದಿ ಡ್ರೂಸ್ ಜನರು. ರಾಜಧಾನಿ ಚಿರೂಸಲೆಂ.

ಮೇಲ್ಮೈ ಲಕ್ಷಣ : ಮೆಡಿಟರೇನಿಯನ್ ಕರಾವಳಿಯುದ್ಧಕ್ಕೂ ಮೈದಾನ ಪ್ರದೇಶವಿದೆ. ದಕ್ಷಿಣಕ್ಕೆ ಸಾಗಿದಂತೆ ಇದರ ಅಗಲ ಹೆಚ್ಚು (ಪರಮಾವಧಿ ಅಗಲ 20 ಮೈ.). ಎಸ್ಟ್ರೇಲನ್ ಮತ್ತು ಜೆಜಿóೀಲ್ ಕಣಿವೆಗಳು ಉತ್ತರದಲ್ಲಿ ಆಕ್ರೆ ಮೈದಾನವನ್ನೂ ಜಾರ್ಡನ್ ಬಯಲನ್ನೂ ಕೂಡಿಸುತ್ತದೆ. ಉತ್ತರದ ಗ್ಯಾಲಿಲಿಯನ್ ಬೆಟ್ಟಗಳೇ ಇಸ್ರೇಲಿನಲ್ಲಿ ಅತ್ಯುನ್ನತ, ಶಿಖರಗಳ ಪೈಕಿ ಅತ್ಯಂತ ಎತ್ತರವಾದದ್ದು ಹರ್ ಮೇರಾನ್ (3,963'). ಜಾರ್ಡನ್ ಕಣಿವೆಯ ಉತ್ತರ ಭಾಗ ಸಮುದ್ರಮಟ್ಟಕ್ಕಿಂತ 500' ಎತ್ತರ; ಆದರೆ ಗ್ಯಾಲಿಲೀ ಸಮುದ್ರದ ಬಳಿಯಲ್ಲಿ ಅದು 696' ತಗ್ಗು. ನಿರ್ಜೀವ ಸಮುದ್ರದ ಮಟ್ಟ ಮೆಡಿಟರೇನಿಯನ್ ಸಮುದ್ರಮಟ್ಟಕ್ಕಿಂತ ಕೆಳಕ್ಕೆ 1,302'. ಅಕಾಬ ಖಾರಿಯವರೆಗೂ ರಿಫ್ಟ್ ಕಣಿವೆ ಹಬ್ಬಿದೆ. ಇದರ ನಡುಭಾಗ ಉಬ್ಬು (ಸಮುದ್ರ ಮಟ್ಟದಿಂದ 500'). ನೆಗೆವ್ (ದಕ್ಷಿಣ) ಪ್ರದೇಶ ಒಣನೆಲ. ಈ ಪ್ರದೇಶದ ವಾಯವ್ಯಭಾಗ ಮರಳುಕಲ್ಲುಭೂಮಿ.

ಇಸ್ರೇಲ್-ಲೆಬನಾನ್-ಸಿರಿಯ ಗಡಿಗಳ ಉತ್ತರದಲ್ಲಿ ಜಾರ್ಡನ್ ನದಿಯ ಉಗಮ. ಇದು ಹುಲ ಸಾಗರವನ್ನೂ ಗ್ಯಾಲಿಲೀ ಸಮುದ್ರವನ್ನು ಹೊಕ್ಕು ಹರಿದು, ಜಾರ್ಡನ್ ದೇಶ ಪ್ರದೇಶ ಮಾಡಿ, ವೃತ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಇಷ್ಟಾದರೂ ನಿರ್ಜೀವ ಸಮುದ್ರದ ನೀರು ದಡ ಉಕ್ಕಿ ಹರಿಯದಿರುವುದಕ್ಕೆ ಅಲ್ಲಿನ ಹೆಚ್ಚು ನೀರು ಆವಿಯಾಗುವುದೇ ಕಾರಣ. ಆದ್ದರಿಂದ ಆ ಸಮುದ್ರದ ನೀರಿನ ಲವಣ ಸಾಂದ್ರೀಕರಣ ಸಾಗರದ ಸರಾಸರಿಗಿಂತ ಎಂಟು ಪಟ್ಟು ಹೆಚ್ಚು.

ಇಸ್ರೇಲಿನ ಇತರ ನದಿಗಳು ಸಣ್ಣ. ಇವುಗಳ ಪೈಕಿ ಹೆಸರಿಸಬಹುದಾದವು ಎರಡು ಮಾತ್ರ : ಹೈಫದ ಬಳಿಯಲ್ಲೂ ಟೆಲ್ ಅವೀವ್‍ನಲ್ಲೂ ಅನುಕ್ರಮವಾಗಿ ಸಮುದ್ರ ಪ್ರವೇಶ ಮಾಡುವ ಕ್ವಿಸನ್ ಮತ್ತು ಯಾರ್ಕನ್. ಟೆಲ್ ಅವೀವ್ ಮತ್ತು ಚೆರೂಸಲೆಂ ನಗರಗಳಿಗೆ ಯಾರ್ಕನ್ ನದಿಯಿಂದ ನೀರು ಸರಬರಾಜು. ಉತ್ತರ ನೆಗೆವ್ ಪ್ರದೇಶದಲ್ಲಿ ನೀರಾವರಿಗೂ ಯಾರ್ಕನ್ನೇ ಆಸರೆ.

ವಾಯುಗುಣ : ಇಸ್ರೇಲಿನ ಉತ್ತರ ಭಾಗದಲ್ಲಿ ಮೆಡಿಟರೇನಿಯನ್ ವಾಯುಗುಣವಿದೆ. ಈ ಪ್ರದೇಶದ ಉತ್ತರದ ಮೈದಾನದಲ್ಲಿ ಮಳೆ 24", ದಕ್ಷಿಣಕ್ಕೆ ಸಾಗಿದಂತೆ ಕಡಿಮೆಯಾಗುತ್ತದೆ. ಗ್ಯಾಲಿಲಿಯನ್ ಬೆಟ್ಟಗಳಲ್ಲಿ ವರ್ಷಕ್ಕೆ 40". ಚೆರೂಸಲೆಂನಲ್ಲಿ 24". ಕರಾವಳಿಗಿಂತ ಜಾರ್ಡನ್ ಕಣಿವೆ ಹೆಚ್ಚ್ಚು ಬಿಸಿ, ಹೆಚ್ಚು ಶುಷ್ಕ. ನಿರ್ಜೀವಸಮುದ್ರದಲ್ಲಿ ವರ್ಷಕ್ಕೆ 2"-4" ಮಳೆ. ಅಕ್ಟೋಬರಿನಿಂದ ಏಪ್ರಿಲ್ ವರೆಗೆ ಲಘುವರ್ಷಕಾಲ ; ಡಿಸೆಂಬರ್ ಜನವರಿಗಳಲ್ಲಿ ಮಳೆ ಪರಮಾವಧಿ, ಒಣ ಬಿಸಿ ಬೇಸಗೆಯಲ್ಲಿ ನಡುಹಗಲಿನ ಉಷ್ಣತೆ 29o-38o ಸೆ (85o-100o ಫ್ಯಾ.) ವ್ಯಾಪ್ತಿಯಲ್ಲಿರುತ್ತದೆ. ಕರಾವಳಿಯಲ್ಲಿ ವಾಸಿ (15o-18o ಸೆ). ಚಳಿಗಾಲದಲ್ಲಿ ಆಗೊಮ್ಮೆ ಈಗೊಮ್ಮೆ ಇಲ್ಲಿನ ಬೆಟ್ಟಗಳ ಮೇಲೆ ಶೈತ್ಯ ತರಂಗಗಳು ಹಬ್ಬುವುದುಂಟು. ಆದರೆ ಕರಾವಳಿಯಲ್ಲೂ ಜಾರ್ಡನ್ ಕಣಿವೆಯಲ್ಲೂ ಇವು ಸುಳಿಯುವುದಿಲ್ಲ. ಬೇಸಗೆಯಲ್ಲಿ ಅರಬ್ಬೀ ಮರುಭೂಮಿಯಿಂದಲೋ ಸಿನಾಯ್‍ನಿಂದಲೋ ಒಣಗಾಳಿ ಬಿಸಿ ಬಿಸಿ ಹವೆಯನ್ನು ಹಬ್ಬಿಸುತ್ತದೆ.

ಸಸ್ಯ, ಪ್ರಾಣಿವರ್ಗ : ಇಲ್ಲಿನ ಸ್ವಾಭಾವಿಕ ಸಸ್ಯಗಳೆಲ್ಲ ಅದೃಶ್ಯವಾಗಿದೆ. ಕಾರಣ ಬೇಸಾಯ, ಆಡುಗಳ ಕಾಟ, ಗ್ಯಾಲಿಲಿ, ಷರಾನ್‍ಗಳಲ್ಲಿ ತಮ್ಮ ಪೂರ್ವಜರ ಪ್ರತಿ ನಿಧಿಗಳಾಗಿ ಅಲ್ಲಲ್ಲಿ ಓಕ್ ಮರಗಳು ಒಂಟೊಂಟಿಯಾಗಿ ನಿಂತಿವೆ. ಕಾರ್ಮೆಲ್ ಶಿಖರದ ಮೇಲೆ ಅಲೆಪ್ಪೊ ಪೈನ್ ಮರಗಳು ಇನ್ನೂ ಸಾಯದಿವೆ. ಜೆರೂಸಲೆಂನಲ್ಲೂ ನ್ಯಾಜûರತ್‍ನಲ್ಲೂ ಹೊಸದಾಗಿ ಇಷ್ಟಿಷ್ಟು ಕಾಡು ಬೆಳೆದಿದೆ. ಕರಾವಳಿಯ ಮರಳು ಗುಡ್ಡೆಗಳಲ್ಲೂ ನೆಗೆವ್‍ನಲ್ಲೂ ಮರುಭೂಮಿಯ ಕುರುಚಲು ಮಾತ್ರ ಬೆಳೆಯುವುದು ಸಾಧ್ಯ.

ಬೆಳೆ, ಖನಿಜ ; ಗೋಧಿ, ಬಾರ್ಲಿ, ಹತ್ತಿ, ಹೊಗೆಸೊಪ್ಪು, ಬೀಟ್‍ರೂಟ್, ನೆಲಗಡಲೆ, ಹಣ್ಣು - ಇವು ಮುಖ್ಯ ಬೆಳೆ, ಪೊಟಾಷ್, ಬ್ರೊಮೈನ್, ಕಾಗೆಬಂಗಾರ, ಗಂಧಕ, ಕಾಸ್ಟಿಕ್ ಸೋಡ, ಪೆಟ್ರೋಲ್, ಇವು ಖನಿಜಗಳು.

ಹೀಬ್ರೂ ಅಧಿಕೃತ ಭಾಷೆ. ಎರಡು ಸಮಾನಾಂತರ ನೀಲಿಪಟ್ಟೆಗಳ ನಡುವೆ ಬಿಳಿಯ ಮೈಮೇಲೆ ಷಟ್ಕೋನ ನಕ್ಷತ್ರವಿರುವ ಇಸ್ರೇಲೀ ಬಾವುಟಕ್ಕೆ ಪ್ರಖ್ಯಾತ ದಿವ್ಯe್ಞÁನಿಯಾದ ಡೇವಿಡ್ ದೊರೆಯ ಧ್ವಜದ ಹೋಲಿಕೆಯಿದೆ.

ಟೆಲ್ ಅವೀವ್, ಹೈಫ, ರಾಮತ್‍ಗಾನ್ ಮುಖ್ಯ ನಗರಗಳು, ಹೈಫ, ಜಾಫಗಳು ಮುಖ್ಯ ಬಂದರುಗಳು.

ಇಸ್ರೇಲಿ ಪೌಂಡ್ ಇಲ್ಲಿನ ನಾಣ್ಯ. 1 ಇಸ್ರೇಲಿ ಪೌಂ = 100 ಅಗುರಟ್ (ಏಕವಚನ : ಅಗೊರ), 1, 5, 10, 25 ಅಗುರಟ್, 1/2 ಪೌಂ. ನಾಣ್ಯಗಳೂ 1, 5, 10, 50 ಪೌಂ. ನೋಟುಗಳೂ ಚಲಾವಣೆಯಲ್ಲಿದೆ. ವಿನಿಮಯ ದರ : 8.40 ಇಸ್ರೇಲಿ ಪೌಂ. = 1 ಪೌಂ. ಸ್ಟರ್ಲಿಂಗ್. 3.50 ಇಸ್ರೇಲಿ ಪೌಂ. = 1 ಡಾಲರ್ (ಅಮೆರಿಕ ಸಂ. ಸಂ.) (ಎಸ್.ಎನ್.ಎ.ಆರ್.)

ಆರ್ಥಿಕ ವ್ಯವಸ್ಥೆ : ಇಸ್ರೇಲಿನ ಆರ್ಥಿಕ ಚಟುವಟಿಕೆ ಪ್ರಾರಂಭದಿಂದಲೂ ಎರಡು ಸಮಸ್ಯೆಗಳನ್ನು ಎದುರಿಸುತ್ತ ಬಂದಿದೆ. ಮೊದಲನೆಯದು, ಸತತವಾದ ಯುದ್ಧಭಯ. ಎರಡನೆಯದು, ಹೆಚ್ಚುತ್ತಿರುವ ವಲಸೆಗಾರರು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಈ ಸಣ್ಣ ರಾಷ್ಟ್ರ ಸಾಧಿಸುತ್ತಿರುವ ಆರ್ಥಿಕ ಪ್ರಗತಿ ಗಮನಾರ್ಹ. 1966-67ರಲ್ಲಿ ಮಾತ್ರ ಇಸ್ರೇಲ್ ಸ್ವಲ್ಪ ಮಟ್ಟಿಗಿನ ಆರ್ಥಿಕ ಕುಸಿತವನ್ನೆದುರಿಸಬೇಕಾಗಿ ಬಂತು. ಈ ವರ್ಷದಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. 1967ರ ಜೂನ್‍ನಲ್ಲಿ ಪ್ರಾರಂಭವಾದ ಯುದ್ಧದಿಂದಾಗಿ ಇಸ್ರೇಲಿನ ಆರ್ಥಿಕ ಚಟುವಟಿಕೆ ಉತ್ತೇಜನ ಪಡೆದುಕೊಂಡಿತೆಂದು ಹೇಳಬಹುದು.

ಕೃಷಿ : ಇಸ್ರೇಲಿನ ಕೃಷಿ ವಿಧಾನದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಇಲ್ಲಿನ ಕೃಷಿಯ ಒಂದು ಪ್ರಮುಖ ಅಂಶವೆಂದರೆ, ಆಧುನಿಕ ಕೃಷಿ ವಿಧಾನಗಳಿಗೆ ಹೊಂದಿಕೊಳ್ಳಲು ಸಹಾಯಕವಾಗುತ್ತಿರುವ ಸಹಕಾರಿ ಬೇಸಾಯಕ್ರಮ. ಇಲ್ಲಿ ಅನೇಕ ವಿಧವಾದ ಸಹಕಾರಿ ಬೇಸಾಯ ಪದ್ಧತಿಗಳಿವೆ. ಇವೆಲ್ಲಕ್ಕೂ ಆಧಾರಭೂತವಾಗಿ ಮೊಷಾವ್ ಮತ್ತು ಕಿಬುಟ್ಜ್ ಎಂಬ ಎರಡು ಹಿಡುವಳಿ ವ್ಯವಸ್ಥೆಗಳಿವೆ. ಮೊಷಾವ್ ಎಂಬುದು ಸಣ್ಣ ಹಿಡುವಳಿದಾರರ ಸಹಕಾರಿ ಬೇಸಾಯ ಗ್ರಾಮ. ಇಲ್ಲಿನ ಪ್ರತಿ ಹಿಡುವಳಿಯೂ ಸಮಾನ ಪ್ರಮಾಣದ್ದಾಗಿದ್ದು, ರೈತ ತನ್ನ ಪಾಲಿನ ಭೂಮಿಯ ಮೇಲೆ ಸಾಕಷ್ಟು ಶ್ರಮಪಟ್ಟು ದುಡಿಯುತ್ತಾನೆ. ತನ್ನ ಜಮೀನಿನ ಉತ್ಪಾದನೆಗೆ ರೈತನೇ ಜವಾಬ್ದಾರನಾಗಿದ್ದರೂ ಗ್ರಾಮ ಸಹಕಾರಿ ವ್ಯವಸ್ಥೆ ಈತನಿಗೆ ಆರ್ಥಿಕ ಭದ್ರತೆ ನೀಡುವ ಹೊಣೆ ಹೊರುತ್ತದೆ. ಅದು ಈತನಿಗೆ ಹಣವನ್ನೂ ಉತ್ಪನ್ನಕ್ಕೆ ಮಾರುಕಟ್ಟೆಯನ್ನೂ ಒದಗಿಸುತ್ತದೆ. ಕಿಬುಟ್ಜ್ ಎಂಬುದು ಇನ್ನೊಂದು ಬಗೆಯ ಹಿಡುವಳಿ ವ್ಯವಸ್ಥೆ. ಇದು ಇಸ್ರೇಲಿಗೇ ವಿಶಿಷ್ಟವಾದ ಸಾಮೂಹಿಕ ಹಿಡುವಳಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸಂಪತ್ತನ್ನು ಸಾಮೂಹಿಕವಾಗಿ ರೂಢಿಸಿ, ಶ್ರಮವನ್ನು ಸಾಮೂಹಿಕವಾಗಿ ವಿನಿಯೋಗಿಸಿ, ಆದಾಯ ವ್ಯಯಗಳನ್ನು ಸಾಮೂಹಿಕವಾಗಿ ನಿರ್ವಹಿಸಿ, ಬೇಸಾಯ ನಡೆಸಲಾಗುತ್ತದೆ. ಪ್ರತಿಯೊಬ್ಬ ರೈತನೂ ತನ್ನ ಶಕ್ತ್ಯನುಸಾರ ಕೆಲಸ ಮಾಡಬೇಕು. ಆತನಿಗೆ ಕೂಲಿಯ ರೂಪದಲ್ಲಿ ಹಣ ಕೊಡಲಾಗುವುದಿಲ್ಲ. ಆದರೆ ಕಿಬುಟ್ಜ್ ಆತನಿಗೆ ಅಗತ್ಯವಿರುವ ಇಲ್ಲ ಜೀವನೋಪಯೋಗಿ ವಸ್ತುಗಳನ್ನೂ ಒದಗಿಸುತ್ತದೆ. ಇವೆರಡು ಕ್ರಮಗಳು ಬಹಳ ಮಟ್ಟಿಗೆ ಇಸ್ರೇಲಿನಲ್ಲಿ ಜಾರಿಯಲ್ಲಿವೆ.

ಇಸ್ರೇಲಿನ ಬೇಸಾಯ ಯೋಗ್ಯಭೂಮಿ 1948-49ರಲ್ಲಿ 4 ಲಕ್ಷ ಎಕರೆಯಿದ್ದು, ಅದು 1965-66ರಲ್ಲಿ 10 ಲಕ್ಷ ಎಕರೆಗೆ ಏರಿತು. ಇದರಲ್ಲಿ ಸುಮಾರು 4 ಲಕ್ಷ ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ. ಕೃಷಿಯ ಉತ್ಪನ್ನವನ್ನು ವರ್ಷಂಪ್ರತಿ 8%-10% ರಷ್ಟು ಹೆಚ್ಚಿಸುವ ಆಶಯವನ್ನಿಟ್ಟುಕೊಳ್ಳಲಾಗಿದೆ. ಇಸ್ರೇಲಿನ ಅತಿಮುಖ್ಯ ಬೆಳೆಯೆಂದರೆ ಜಂಬೀರ ಹಣ್ಣು. ಇವನ್ನು ಹೆಚ್ಚಾಗಿ (ಒಟ್ಟು ಉತ್ಪನ್ನದ 45%) ನಿರ್ಯಾತ ಮಾಡಲಾಗುತ್ತಿದೆ. 1966-67ರಲ್ಲಿ 10,82,000 ಟನ್‍ಗಳಷ್ಟು ಜಂಬೀರ ಫಲಗಳನ್ನು ಉತ್ಪಾದಿಸಲಾಗಿತ್ತು. ಬ್ರಿಟನ್, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ಮುಖ್ಯ ಗ್ರಾಹಕ ರಾಷ್ಟ್ರಗಳು.

ಕೈಗಾರಿಕೆ : ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗಾವಕಾಶ ಒದಗಿಸಿಕೊಡುವ ದೃಷ್ಟಿಯಿಂದ ಇಸ್ರೇಲು ಕೈಗಾರಿಕೆಗಳಿಗೆ-ಮುಖ್ಯವಾಗಿ ಸಣ್ಣ ಕೈಗಾರಿಕೆಗಳಿಗೆ-ಪ್ರಾಧಾನ್ಯ ಕೊಡುತ್ತ ಬಂದಿದೆ. 1960ರ ಕೈಗಾರಿಕೆ ಸಮೀಕ್ಷೆಯನ್ವಯ 83%ರಷ್ಟು ಕೈಗಾರಿಕೆಗಳಲ್ಲಿ 14ಕ್ಕಿಂತಲೂ ಕಡಿಮೆ ಕೆಲಸಗಾರರಿದ್ದರು. 1966ರಲ್ಲಿ ಕೈಗಾರಿಕಾರಂಗದಲ್ಲಿ 2,25,000 ಜನ ಕೆಲಸ ಮಾಡುತ್ತಿದ್ದರು. ವಜ್ರದ ಕತ್ತರಿಸಾಣೆ. ಜವಳಿ, ರಾಸಾಯನಿಕ ವಸ್ತು, ಕಾಗದ, ಟೈರ್, ವಿದ್ಯುತ್ ಸಲಕರಣೆ-ಇವು ಮುಖ್ಯ ಕೈಗಾರಿಕೆಗಳು. ಆಮದು ಮಾಡಿಕೊಂಡ ಪಟ್ಟೆಗಳಿಂದ ಆಕ್ರೆಯಲ್ಲಿ ಉಕ್ಕು ಉತ್ಪಾದಿಸಲಾಗುತ್ತಿದೆ. ದಕ್ಷಿಣ ಆರಾಡ್‍ನಲ್ಲಿ ಕೃತಕ ಗೊಬ್ಬರ ಹಾಗೂ ಗಂಧಕದ ಆಸಿಡ್ ತಯಾರಿಸುವ ಕಾರ್ಖಾನೆ ನಿರ್ಮಿಸುವ ಯತ್ನ ನಡೆದಿದೆ.

ಇಸ್ರೇಲಿನ ಕೈಗಾರಿಕಾ ವ್ಯವಸ್ಥೆಯನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ಹೆಚ್ಚಿನ ಕೂಲಿ. ಬಂಡವಾಳದ ಕೊರತೆ ಹಾಗೂ ಆಮದಿನ ಅವಲಂಬನೆ. ವಿದ್ಯುತ್ತಿನ ಬೇಡಿಕೆ ಹೆಚ್ಚುತ್ತಿರುವುದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಗಮನ ಕೊಡಲಾಗಿದೆ. 1960-64ರ ಅವಧಿಯಲ್ಲಿ ಇದು ದ್ವಿಗುಣಗೊಂಡು 456 ಕೋಟಿ. ಕಿ. ವಾ. ಮುಟ್ಟಿತು. ಇಸ್ರೇಲಿನ 1967ರ ತೈಲೋತ್ಪಾದನೆ 1,35,400 ಟನ್.

ಮೃತ ಸಮುದ್ರ ಪ್ರದೇಶದಲ್ಲಿ ಪೊಟಾಷ್, ಮೆಗ್ನೀಸಿಯಂ, ಬ್ರೋಮೈಡ್‍ಗಳ ಮತ್ತು ನೆಗೇವ್‍ನಲ್ಲಿ ತಾಮ್ರ, ಫಾಸ್‍ಫೇಟ್‍ಗಳ ಉತ್ಪಾದನೆಯನ್ನು ವೃದ್ಧಿಗೊಳಿಸಲಾಗುತ್ತಿದೆ. 1961ರಲ್ಲಿ ನೆಗೆವ್‍ನ ಫಾಸ್‍ಫೇಟ್ ಉತ್ಪಾದನೆ 2,25,000 ಟನ್. ಮತ್ತೊಂದು ಮುಖ್ಯ ಕೈಗಾರಿಕೆಯೆಂದರೆ ವಜ್ರದ್ದು. ಈ ಕೈಗಾರಿಕೆಯಲ್ಲಿ 10,000ಕ್ಕೂ ಮಿಕ್ಕು ಕೆಲಸಗಾರರಿದ್ದಾರೆ.

ಹಣಕಾಸು : ಬ್ಯಾಂಕ್ ಆಫ್ ಇಸ್ರೇಲ್ ಇಲ್ಲಿನ ಕೇಂದ್ರೀಯ ಬ್ಯಾಂಕು, 28 ವಾಣಿಜ್ಯ ಬ್ಯಾಂಕುಗಳೂ 8 ಅಡಮಾನ ಬ್ಯಾಂಕುಗಳೂ 18 ಸಹಕಾರಿ ಪತ್ತಿನ ಸಂಘಗಳೂ ಇವೆ. ಇಸ್ರೇಲಿನದು ಮಿಶ್ರ ಆರ್ಥಿಕ ವ್ಯವಸ್ಥೆ. ಖಾಸಗಿ ಹಾಗೂ ಸರ್ಕಾರಿ ಹಣನಿಯೋಜನೆ ನಡೆಯುತ್ತಿದೆ. ವಿಶ್ವದ ನಾನಾಕಡೆ ಇರುವ ಯೆಹೂದ್ಯರು ಇಸ್ರೇಲಿನಲ್ಲಿ ಹಣ ಹೂಡುತ್ತಾರೆ ; ಇದಕ್ಕೆ ಹಣ ನೀಡುತ್ತಾರೆ. ವಿದೇಶೀ ಬಂಡವಾಳ ನಿಯೋಜನೆಯೂ ಕಡಿಮೆಯಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಪಶ್ಚಿಮ ಮರ್ಜನಿಗಳು ಈ ರಾಷ್ಟ್ರಕ್ಕೆ ಹೆಚ್ಚಾಗಿ ಆರ್ಥಿಕ ನೆರವು ನೀಡಿದೆ.

ವಿದೇಶೀ ವ್ಯಾಪಾರ ರಂಗದಲ್ಲಿ ಇಸ್ರೇಲ್ ಸತತವಾಗಿ ಪ್ರತಿಕೂಲ ಪಾವತಿ ಶಿಲ್ಕಿನ ಸಮಸ್ಯೆ ಎದುರಿಸಬೇಕಾಗಿದೆ. ಅಭಿವೃದ್ಧಿಗಾಗಿ ಇದು ಹೆಚ್ಚಾಗಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದೇ ಕಾರಣ. 1967ರಲ್ಲಿ ನಿರ್ಯಾತದ ಮೌಲ್ಯ 50ಕೋಟಿ ಡಾಲರ್ ; ಆಯಾತ 71 ಕೋಟಿ ಡಾಲರ್. ಉತ್ಪಾದಿತ ವಸ್ತು, ಸಿಮೆಂಟ್, ಉಕ್ಕು, ಕಬ್ಬಿಣ, ಚರ್ಮ ಮುಂತಾದವು ಆಯಾತ. ಜವಳಿ, ಖನಿಜ ವಸ್ತು, ಈಳೆಜಾತಿ ಹಣ್ಣು, ರಾಸಾಯನಿಕ ಪದಾರ್ಥ ಮತ್ತು ವಜ್ರ ಇವು ನಿರ್ಯಾತ. (ಸಿ.ಕೆ.ಆರ್.)

ಆಡಳಿತ ಹಾಗೂ ಸಾಮಾಜಿಕ ವ್ಯವಸ್ಥೆ : ಇಸ್ರೇಲ್ ಒಂದು ಗಣರಾಜ್ಯ. ಅಲ್ಲಿ ಲಿಖಿತ ಸಂವಿಧಾನವಿಲ್ಲ. ಸರ್ವೋಚ್ಚ ಅಧಿಕಾರ ಕ್ನೆಸೆಟ್ಟಿಗೆ ಸೇರಿದ್ದು. ಅದು ಅನುಪಾತಿ ಪ್ರಾತಿನಿಧ್ಯವನ್ನನುಸರಿಸಿ, ಸಾರ್ವತ್ರಿಕವಾಗಿ, ವಯಸ್ಕರ (18 ವರ್ಷಕ್ಕೆ ಕಡಿಮೆಯಿಲ್ಲದವರು) ಮತದಾನದಿಂದ ಆರಿಸಿ ಬಂದ ಪ್ರತಿನಿಧಿಗಳ ಸಭೆ. ಅದರ ಕಾಲಾವಧಿ ನಾಲ್ಕು ವರ್ಷ. ರಾಷ್ಟ್ರಾಧ್ಯಕ್ಷನ ಚುನಾವಣೆ ಐದು ವರ್ಷಕ್ಕೊಂದು ಸಲ. ಪ್ರಧಾನಿ ಮತ್ತು ಅವನ ಮಂತ್ರಿಮಂಡಲ ಕ್ನೆಸೆಟ್ಟಿಗೆ ಹೊಣೆ. ನ್ಯಾಯಾಂಗದಲ್ಲಿ ಪೌರಸಭಾ ನ್ಯಾಯಾಲಯಗಳೂ ದಂಡಾಧಿಕಾರಿ (ಮ್ಯಾಜಿಸ್ಟ್ರೇಟ್) ನ್ಯಾಯಾಲಯಗಳೂ ಜಿಲ್ಲಾ ನ್ಯಾಯಾಲಯಗಳೂ ತುದಿಯಲ್ಲಿ ಸರ್ವೋಚ್ಚ ನ್ಯಾಯಲಯವೂ ಇದೆ ; ಮತಧರ್ಮ ವಿಷಯಗಳಲ್ಲಿ ಯೆಹೂದ್ಯರಿಗೆ. ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ಪ್ರತ್ಯೇಕ ನ್ಯಾಯಾಲಯಗಳಿವೆ. ಮತಕ್ಕೆ ಸಂಬಂಧಿಸಿದ ವಿಷಯಗಳಿಗೆ ಪ್ರತ್ಯೇಕ ಮಂತ್ರಿಯಿದ್ದಾನೆ; ಕ್ರೈಸ್ತರಿಗೆ, ಮುಸ್ಲಿಮರಿಗೆ ಮತ್ತು ಯೆಹೂದ್ಯರಿಗೆ ಪ್ರತ್ಯೇಕ ಇಲಾಖೆಗಳಿವೆ. 5-14 ವರ್ಷಗಳ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವುಂಟು. ಮತೀಯ ಪಾಠಶಾಲೆಗಳೂ ಇವೆ. 1925ರಲ್ಲಿ ಸ್ಥಾಪಿತವಾದ ಹೀಬ್ರೂ ವಿಶ್ವವಿದ್ಯಾಲಯ, ಉಚ್ಚ ವಿದ್ಯಾಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಮೀಸಲಾದ ಸ್ವತಂತ್ರ ಸಂಸ್ಥೆ, ಜೆರೂಸಲೆಂನಲ್ಲಿದೆ.

ಸಮಾಜ ಕ್ಷೇಮಕ್ಕೆ ಹೆಚ್ಚು ಗಮನ ಕೊಡಲಾಗಿದೆ. ಸುಸಜ್ಜಿತವಾದ ಅನೇಕ ಆಸ್ಪತ್ರೆಗಳಿವೆ. ಮುದುಕರು, ರೋಗಿಗಳು ಮತ್ತು ಅಂಗವಿಕಲರಿಗಾಗಿ ಮುಲ್ಟಾನ್ ಎಂಬ ಸಂಸ್ಥೆಯಿದೆ. ಅಂತರರಾಷ್ಟ್ರೀಯ ಯೆಹೂದ್ಯ ಸ್ತ್ರೀ ಸಂಘ ಅನೇಕ ಶಿಶು ಸಂರಕ್ಷಣಾಲಯಗಳನ್ನೂ ಶಿಶುವಿಹಾರಗಳನ್ನೂ ಕಿಂಡರ್ ಗಾರ್ಟನ್ ಶಾಲೆಗಳನ್ನೂ ಕಸಬು ಶಿಕ್ಷಣ ಶಾಲೆಗಳನ್ನೂ ದಾದಿಯರ ತರಬೇತಿ ಕೇಂದ್ರಗಳನ್ನೂ ನಡೆಸುತ್ತದೆ. ರಾಷ್ಟ್ರೀಯ ವಿಮಾ ಕಾಯಿದೆಯಲ್ಲಿ ವೃದ್ಧಾಪ್ಯ ವೇತನ, ಉತ್ತರಜೀವಿಗಳ ವಿಮೆ, ಪ್ರಸೂತಿ ವಿಮೆ. ಕುಟುಂಬ ಭತ್ಯೆ ಮುಂತಾದವಕ್ಕೆ ಅವಕಾಶ ಕೊಟ್ಟಿದೆ. ಕೆಲವು ವಿಶಿಷ್ಟ ಸೇವಾವಸತಿಗಳಿವು : 1 ಕಿಬುಟ್ಜ್ ಮತ್ತು ಕ್ವುಟ್ಜ. ಇವು ಸಾಮುದಾಯಿಕ ವಸತಿಗಳು. ಇಲ್ಲಿ ಸ್ವತ್ತು, ಗಳಿಕೆ ಎಲ್ಲವೂ ಎಲ್ಲರಿಗೂ ಸೇರಿದ್ದು ಕಾರ್ಯಗಳ ವ್ಯವಸ್ಥೆಯೂ ಸಾಮೂಹಿಕವಾಗಿಯೇ ನಡೆಯುತ್ತದೆ. 2 ಮೋಷಾವ್ ಆವ್ಡಿಂ. ಇವು ಶ್ರಮಿಕ ಹಿಡುವಳಿದಾರರ ಸಹಕಾರ ವಸತಿಗಳು; ಸದಸ್ಯರೆಲ್ಲರಿಗೂ ಪರಸ್ಪರ ಸಹಾಯ ಮತ್ತು ಅನುಕೂಲಾವಕಾಶಗಳೊದಗಬೇಕೆಂಬ ಉದ್ದೇಶದಿಂದ ನಿರ್ಮಿತವಾದವು. ಕೂಲಿಯ ಕೆಲಸಗಾರರಿಗೆ ಇಲ್ಲಿ ಅವಕಾಶವಿಲ್ಲ. 3 ಮೋಷಾವ್ ಷಿಟೂಫಿ ; ಕಿಬುಟ್ಜ್‍ನಂತೆಯೇ ಇವೂ ಸಾಮುದಾಯಿಕ ವಸತಿಗಳು. ಆದರೆ ಇವುಗಳಲ್ಲಿ ಪ್ರತಿಯೊಂದು ಸಂಸಾರಕ್ಕೂ ಪ್ರತ್ಯೇಕ ವಸತಿಗೃಹವಿದೆ ; ಗೃಹಕೃತ್ಯವನ್ನೆಲ್ಲ ಸಂಸಾರದವರೇ ನಿರ್ವಹಿಸಬೇಕು. 4 ಮೋಷಾವ್ : ಸಣ್ಣ ಹಿಡುವಳಿದಾರರ ವಸತಿಗಳು. ಕೂಲಿ ಕೆಲಸಗಾರರಿಗೆ ಇಲ್ಲಿ ಅವಕಾಶವಿದೆ. 5 ಮೋಷಾವ : ಇಲ್ಲಿ ಭೂಮಿ ಮತ್ತು ಇತರ ಆಸ್ತಿಗಳ ಖಾಸಗಿ ಒಡೆತನವಿದೆ. ಪ್ರತಿಯೊಬ್ಬನೂ ತನ್ನ ಯೋಗಕ್ಷೇಮವನ್ನು ತಾನೇ ಸಾಧಿಸಿಕೊಳ್ಳಬೇಕು.

ರಾಜ್ಯದ ರಕ್ಷಣಾ ವ್ಯವಸ್ಥೆ ಬಲು ಸಮರ್ಪಕ. ಪ್ರತಿ ಯುವಕನೂ ಕಡ್ಡಾಯವಾಗಿ ಸೈನಿಕ ಶಿಕ್ಷಣ ಪಡೆಯಬೇಕು. ಯೆಹೂದ್ಯರು ದೇಶಕ್ಕೆ ವಲಸೆ ಬರುವುದನ್ನು ಪ್ರೋತ್ಸಾಹಿಸಿ ನಿಯಂತ್ರಿಸುವ ಮತ್ತು ಅವರ ಹೊಸ ಪೌರತ್ವವನ್ನು ಭದ್ರಪಡಿಸುವ ಕೆಲಸವನ್ನು ಪ್ಯಾಲಿಸ್ಟೈನ್ ಯೆಹೂದ್ಯ ನಿಯೋಗ ನಡೆಸುತ್ತಿದೆ. ಯಿಸ್ಟಾಡ್ರೂಟ್ ಎಂಬ ಯೆಹೂದ್ಯ ಕಾರ್ಮಿಕ ಮಹಾಪರಿಷತ್ತು 1920ರಲ್ಲಿ ಸ್ಥಾಪಿತವಾಯಿತು. 1965ರಲ್ಲಿ ಅದರ ಸದಸ್ಯರ ಸಂಖ್ಯೆ 9,15,000 ; ಅದರಲ್ಲಿ 40,000 ಅರಬ್ಬರೂ ಇದ್ದರು. ಇತರ ಸಣ್ಣ ಸಣ್ಣ ವೃತ್ತಿಸಂಘಗಳೂ ಕೆಲವಿವೆ. (ಆರ್.ಟಿ.ಎಸ್.)