ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಸ್ಲಾಂ

ವಿಕಿಸೋರ್ಸ್ದಿಂದ

ಇಸ್ಲಾಂ ಮಹಮ್ಮದೀಯರ ಧರ್ಮಕ್ಕೆ ಇರುವ ಅರಬ್ಬೀ ಹೆಸರು. ಪೈಗಂಬರ್ ಮಹಮ್ಮದರು ಬೋಧಿಸಿದ ಅನುಜ್ಞೆಯಂತೆ, ವಿಧಿನಿಯಮಗಳಂತೆ ನಡೆಯಬೇಕೆಂಬುದೇ ಇಸ್ಲಾಂ ಧರ್ಮದ ತಿರುಳು. ಇಸ್ಲಾಂ ಎಂದರೆ ದೈವಸಂಕಲ್ಪಕ್ಕೆ ಶರಣಾಗತಿ. ಅದು ಮನುಷ್ಯನ ಸಹಜಧರ್ಮ; ಏಕೆಂದರೆ ಅವನನ್ನು ಹಾಗೆ ಸೃಷ್ಟಿಸಿದವ ಸೃಷ್ಟಿಕರ್ತ-ಅಲ್ಲಾ. ಇಸ್ಲಾಂ ಎಂಬ ಹೆಸರನ್ನು ಮೊದಲು ಕೊಟ್ಟವ ಇಬ್ರಾಹೀಂ (ಏಬ್ರಾಹಾಂ) ಎಂದು ಕುರಾನ್ ಹೇಳುತ್ತದೆ. ಇಬ್ರಾಹೀಂ ಮತ್ತು ಅವನ ಮಗ ಇಸ್ಮಾಯೀಲ್ ಅಲ್ಲಾಮಂದಿರದ (ಇದಕ್ಕೆ ಅನಂತರ ಕಾಬಾ ಎಂದು ಹೆಸರಾಯಿತು) ತಳಹದಿ ಹಾಕುತ್ತಿದ್ದಾಗ ಹೀಗೆ ಪ್ರಾರ್ಥಿಸಿದರು; ಪ್ರಭು! ನಾವು ನಿನಗೆ ಶರಣಾಗುವಂತೆ (ಮುಸ್ಲೆಮಿನ್) ಮಾಡು; ನಮ್ಮ ಸಂತತಿಯಿಂದ, ನಿನಗೆ ಅಧೀನವಾದ ಜನಾಂಗವೊದನ್ನು ಸೃಜಿಸು ಮತ್ತು ನಮ್ಮ ಭಕ್ತಿ ಮಾರ್ಗಗಳನ್ನು ನಮಗೆ ತೋರಿಸು, ನಮಗೆ ಕೃಪೆಮಾಡು. ನೀನು, ನೀನು ಮಾತ್ರವೇ ಸಂರಕ್ಷಕ, ದಯಾಮಯ.

ಅದೇ ಸಂದರ್ಭದಲ್ಲಿ ಇಬ್ರಾಹೀಂ ತನ್ನ ಮಕ್ಕಳಿಗೆ ಹೀಗೆ ವಿಧಿಸಿದ : ಓ ಮಕ್ಕಳೇ ! ನಿಶ್ಚಿತವಾಗಿಯೂ ಅಲ್ಲಾ ನಿಮಗೆ ಈ ಧರ್ಮವನ್ನು ಆರಿಸಿದ್ದಾನೆ : ಆದ್ದರಿಂದ, ನೀವು ಮುಸ್ಲಿಮರಾಗದೆ ಸಾಯಬೇಡಿ ಅಥವಾ ಜೇಕಬನಿಗೆ ಸಾವು ಬಂದಾಗ ನೀವು ಅಲ್ಲಿರುವಿರಾ? ಜೇಕಬ್ ಅವರನ್ನು ಕೇಳಿದ : ನಾನು ಸತ್ತ ಮೇಲೆ ನೀವು ಯಾರನ್ನು ಸೇವಿಸುವಿರಿ? ಅವರು ಹೇಳಿದರು : ನಿಮ್ಮ ದೇವನನ್ನು ನಿಮ್ಮ ಪಿತೃಗಳಾದ ಇಬ್ರಾಹೀಂ, ಇಸ್ಮಾಯಿಲ್ ಮತ್ತು ಐಸಾಕರ ದೇವನನ್ನು-ಅವನೊಬ್ಬನನ್ನೇ-ನಾವು ಸೇವಿಸುತ್ತೇವೆ ಮತ್ತು ಅವನಿಗೆ ಶರಣಾಗುತ್ತೇವೆ. ಹೀಗೆ ಇಸ್ಲಾಂ ಧರ್ಮದ ಚರಿತ್ರೆ ಮೊದಲಾಗುತ್ತದೆ.

ಪೈಗಂಬರನ ಮಾತಿನಲ್ಲೇ ಹೇಳುವುದಾದರೆ ಆಡಂನ ಕಾಲದಿಂದ ಜಾರಿಯಲ್ಲಿದ್ದ ಮತಧರ್ಮಗಳಲ್ಲಿ ಅತ್ಯಂತ ಪ್ರಾಚೀನವೂ ಸಂಪ್ರದಾಯಬದ್ದವೂ ಆದುದೆಂದರೆ ಇಸ್ಲಾಂ ಧರ್ಮವೇ. ಇದರ ಆಧಾರಭೂತವಾದ ಭಾವನೆಗಳು ಎರಡು : ಇಮಾನ್ - ನಂಬಿಕೆ. ಇದು ಮೊದಲನೆಯದು, ದೀನ್ - ಧರ್ಮ. ಇದು ಎರಡನೆಯದು.

ಇಸ್ಲಾಂ ಸಂಸ್ಥೆ ಐದು ಮೂಲಭೂತ ಸೂತ್ರಗಳ ಮೇಲೆ ನಿಂತಿದೆ. ದೇವರಿಗೆಲ್ಲ ದೇವನಾದ ಅಲ್ಲಾನಲ್ಲೂ ಪ್ರವಾದಿ ಪೈಗಂಬರರಲ್ಲೂ ಇರಬೇಕಾದ ನಂಬಿಕೆ ಮೊದಲನೆಯದು. ಉಳಿದ ನಾಲ್ಕೆಂದರೆ, ಪ್ರಾರ್ಥನೆ, ಉಪವಾಸ, ಜóಕಾತ್ ಮತ್ತು ಯಾತ್ರೆ. ಮೊದಲ ಸೂತ್ರಕ್ಕೆ ವ್ಯಾಖ್ಯಾನದ ಅಗತ್ಯವಿಲ್ಲವಾದ್ದರಿಂದ ಉಳಿದ ನಾಲ್ಕನ್ನು ಗಮನಿಸಬಹುದು.

ಸಾರತಃ ಮುಸ್ಲಿಮನೊಬ್ಬ ತನ್ನ ಸೃಷ್ಟಿಕರ್ತನೊಡನೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಮಸೀದಿಯಲ್ಲಿ ದಿನಕ್ಕೆ ಐದು ಸಲ ಪಡೆಯುವ ಆಧ್ಯಾತ್ಮಿಕ ಸಂಪರ್ಕಕ್ಕೆ ಸಾಧನವಾದದ್ದು ಪ್ರಾರ್ಥನೆ. ಪ್ರಾರ್ಥನೆಯಲ್ಲಿ ಪ್ರತಿಯೊಬ್ಬ ಮುಸ್ಲಿಮನೂ ತನ್ನ ದೇಹ, ಆತ್ಮಗಳಿಗೆ ಕಾರಣವಾದ ಪವಿತ್ರ ಶಕ್ತಿಯ ಸಾನ್ನಿಧ್ಯದಲ್ಲಿ ತಾನಿದ್ದೇನೆಂಬುದನ್ನು ಮನಸ್ಸಿನಲ್ಲಿ ದೃಢ ಮಾಡಿಕೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ಸರ್ವ ದ್ರಷ್ಟಾರನೂ ಸರ್ವe್ಞÁತೃವೂ ಆದ ನ್ಯಾಯಾಧೀಶನ ಮುಂದಿನ ಈ ಹಾಜರಿ ಮುಸ್ಲಿಮನನ್ನು ಎಲ್ಲ ಅನೀತಿಗಳಿಂದ ಮತ್ತು ಅಪರಾಧಗಳಿಂದ ದೂರವಿರಿಸುತ್ತದೆ. ಇದು ಪ್ರಾರ್ಥನೆಯ ಮುಖ್ಯೋದ್ದೇಶಗಳಲ್ಲಿ ಒಂದು. ಕುರಾನ್ ಹೀಗೆ ಹೇಳುತ್ತದೆ : ಪ್ರಾರ್ಥನೆ ಮುಸ್ಲಿಮನನ್ನು ದೇಹದಲ್ಲಿ ಮತ್ತು ಆತ್ಮದಲ್ಲಿ ಕ್ಲುಪ್ತನನ್ನಾಗಿ, ವ್ಯವಸ್ಥಿತನನ್ನಾಗಿ, ಸ್ವಸ್ಥ ಹಾಗೂ ಶುದ್ಧನನ್ನಾಗಿ ಇರಿಸುವ ಆಧ್ಯಾತ್ಮಿಕ ಸಾಧನ. ಸಾಮೂಹಿಕ ಪ್ರಾರ್ಥನೆಗಳು ಅವನ ಮನಸ್ಸಿನಲ್ಲಿ ಸಮಷ್ಟಿ ಚೈತನ್ಯವನ್ನೂ ಸಮಾನತೆ ಸೋದರತೆಗಳ ಭಾವನೆಗಳನ್ನೂ ಉಂಟುಮಾಡುತ್ತವೆ. ದೊಡ್ಡವರಿರಲಿ ಸಣ್ಣವರಿರಲಿ, ಧನಿಕರಿರಲಿ ದರಿದ್ರರಿರಲಿ, ದೊರೆಗಳಾಗಲಿ, ಪ್ರಜೆಗಳಾಗಲಿ ಎಲ್ಲ ಮುಸ್ಲಿಮರೂ ಧರ್ಮದಲ್ಲಿ ಸಹೋದರರು. ಆರೋಗ್ಯದಿಂದಿರಲಿ ಅಥವಾ ಕಾಯಿಲೆಯಿಂದಿರಲಿ, ಮೇಲೇಳಲು ಅಶಕ್ತರಾಗಿರಲಿ, ಶಾಂತಿಕಾಲದಲ್ಲಾಗಲಿ ಯುದ್ಧ ಕಾಲದಲ್ಲಾಗಲಿ ಮುಸ್ಲಿಮರಾದವರು ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಲೇಬೇಕು : ಅದಕ್ಕಾಗಿ ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಏಕೆಂದರೆ ಪ್ರಾರ್ಥನೆಯ ಜೀವಾಳ ಕರುಣಾಮಯನಾದ ವಿಶ್ವೇಶನೊಡನೆ ಮುಸ್ಲಿಮನ ನೇರ ಸಂವಾದ.

ಉಪವಾಸದ ಪ್ರಾಶಸ್ತ್ಯ ಕುರಾನಿನಲ್ಲಿ ಹೀಗೆ ನಿರೂಪಣೆಗೊಂಡಿದೆ : ಮಾನವ ಕುಲದ ಮಾರ್ಗದರ್ಶಿಯೂ ತಪ್ಪು ಒಪ್ಪುಗಳ ಮಾನದಂಡವೂ ಆದ ಕುರಾನ್ ಪ್ರಕಾಶನಗೊಂಡ ತಿಂಗಳು ರಂಜಾನ್. ನಿಮ್ಮಲ್ಲಿ ಹಾಜರಿರತಕ್ಕವರೆಲ್ಲ ಈ ತಿಂಗಳು ಉಪವಾಸವನ್ನಾಚರಿಸಿ ಮತ್ತು ನಿಮ್ಮಲ್ಲಿ ಅನಾರೋಗ್ಯದಿಂದಿರುವವರು ಮತ್ತು ಪ್ರಯಾಣದಲ್ಲಿರುವವರು ಅಷ್ಟೇ ಸಂಖ್ಯೆಯ ಇತರ ದಿನಗಳಲ್ಲಿ ಉಪವಾಸವನ್ನಾಚರಿಸಲಿ. ಅಲ್ಲಾ ನಿಮಗೆ ಸುಖವನ್ನು ಬಯಸುತ್ತಾನೆ; ಕಷ್ಟಗಳನ್ನು ಬಯಸುವುದಿಲ್ಲ.

ಉಪವಾಸ ಎಲ್ಲ ಮುಸ್ಲಿಮರಿಗೂ-ಹೆಣ್ಣಾಗಲಿ, ಗಂಡಾಗಲಿ, ಬಡವರಾಗಲಿ, ಶ್ರೀಮಂತರಾಗಲಿ-ಕಡ್ಡಾಯವಾದುದು. ಇದರಿಂದ ಶ್ರೀಮಂತರು ಹಸಿವು. ಅವಶ್ಯಕತೆಗಳ ವೈಯುಕ್ತಿಕ ಅನುಭವ ಪಡೆಯುತ್ತಾರೆ. ಮತ್ತು ರಂಜಾನಿನ ಅವಧಿಯಲ್ಲಿ ಬಡವರು ಶ್ರೀಮಂತರ ಸಮಾನಸ್ಕಂಧರಾಗಿರುವುದರಿಂದ ಅವರನ್ನು ಅಲಕ್ಷಿಸುವಂತಿಲ್ಲ. ಆಧ್ಯಾತ್ಮಿಕ ಲಾಭಗಳ ಜೊತೆಗೆ ವೈದ್ಯರು ಉಪವಾಸಕ್ಕೆ ಬಹಳ ಮಹತ್ವ ಕೊಡುತ್ತಾರೆ. ಮತ್ತು ಆಂತರಿಕ ವ್ಯಾಧಿಗಳಿಗೆ ಅದು ಏಕೈಕ ಚಿಕಿತ್ಸೆಯೆಂದು ಭಾವಿಸುತ್ತಾರೆ.

ಜóಕಾತ್ ಎಂಬುದು ಒಂದು ಬಗೆಯ ದಾನ; ಅದರ ಉದ್ದೇಶ ಸಾಮಾಜಿಕ ಸೇವೆ. ದೀನ ದರಿದ್ರರಿಗೆ ಆಹಾರವನ್ನೀಯುವುದು. ವಾರ್ಷಿಕ ಉಳಿತಾಯದ 2 1/2% ಯಷ್ಟನ್ನು-ಬಡವರ ಹಿತಕ್ಕಾಗಿ ಪ್ರತಿಯೊಬ್ಬ ಮುಸ್ಲಿಮನೂ ಕೊಡಬೇಕು. ಜನಾಂಗದ ಒಳಿತಿಗಾಗಿ ಶ್ರೀಮಂತರು ಕೊಡಬೇಕಾಗಿದ್ದ ಕಡ್ಡಾಯ ತೆರಿಗೆಯಾಗಿತ್ತು. ಈ ಜûಕಾತ್ ಇದರಿಂದ ಮುಸ್ಲಿಮರಿಗೆ ಮಾತ್ರವಲ್ಲದೆ ಮುಸ್ಲೀಮೇತರಿಗೂ ಲಾಭವಾಗುತ್ತಿತ್ತು.

ಇಸ್ಲಾಮಿನ ನಾಲ್ಕನೆಯ ಆಧಾರ ಸ್ತಂಭವೆಂದರೆ ಹಾಜ್. ಇದರ ಅರ್ಥ, ಸಾಧ್ಯವಾದಲ್ಲಿ ಪ್ರತಿಯೊಬ್ಬ ಮುಸ್ಲಿಮನೂ ತನ್ನ ಜೀವಮಾನದಲ್ಲಿ ಕಡೆಯಪಕ್ಷ ಒಂದು ಸಲವಾದರೂ ಮೆಕ್ಕಾದಲ್ಲಿ ಪ್ರತಿ ವರ್ಷ ನಡೆಯುವ ಅಂತರರಾಷ್ಟ್ರೀಯ ಮೇಳಕ್ಕೆ ಹೋಗಬೇಕು, ಹಿಂದೂಗಳಿಗೆ ಕಾಶಿ ರಾಮೇಶ್ವರ ಯಾತ್ರೆಗಳಿದ್ದಂತೆ ಮುಸಲ್ಮಾನರಿಗೆ ಮೆಕ್ಕಾಯಾತ್ರೆ.

ಪ್ರಪಂಚದ ಮೂಲೆಮೂಲೆಗಳಿಂದ ಸಾವಿರಾರು ಮಂದಿ, ಭಿನ್ನ ಭಿನ್ನ ದೇಶಗಳಿಗೆ, ವರ್ಣಗಳಿಗೆ ಮತ್ತು ಜನಾಂಗಗಳಿಗೆ ಸೇರಿದ ದೊರೆಗಳು ಮತ್ತು ದರಿದ್ರರು ಸರಳವಾದ, ಹೊಲಿಗೆಯಿಲ್ಲದ ವಸ್ತ್ರಗಳನ್ನು ಧರಿಸಿ, ಬರಿಗಾಲಿನಲ್ಲಿ, ಬರಿತಲೆಯಲ್ಲಿ ಬಂದು ಒಂದು ಕೇಂದ್ರಸ್ಥಳದಲ್ಲಿ ಸೇರುವಂಥ ಈ ಮೇಳ ಇಸ್ಲಾಮೀ ಸಾಮ್ಯವಾದದ ವಾರ್ಷಿಕ ಪ್ರದರ್ಶನವಾಗಿದ್ದು, ಸೋದರತೆ, ಸಮಾನತೆಗಳನ್ನು ವ್ಯಕ್ತಪಡಿಸುವುದು ಮಾತ್ರವಲ್ಲದೆ, ಎಲ್ಲ ಮಾನವಕುಲದ ಪರವಾಗಿ ಉದ್ದೇಶದ ಏಕತೆಯನ್ನು ಸಾರುತ್ತದೆ. ಪುರುಷರ ಮತ್ತ್ತು ಸ್ತ್ರೀಯರ, ಮುದುಕರ ಮತ್ತು ಯುವಕರ ಈ ಪ್ರವಾಹಗಳು ಅಸಂಖ್ಯ ಕಷ್ಟಗಳನ್ನು ಸಹಿಸಿ, ಪ್ರಾಣಕ್ಕೂ ಆಸ್ತಿಗೂ ಇರುವ ಅಪಾಯವನ್ನು ಲೆಕ್ಕಿಸದೆ ಮರಳಿನ ಸಮುದ್ರಕ್ಕೆ ಬರುತ್ತವೆ. ಅವೆಲ್ಲಕ್ಕೂ ಒಂದೇ ಗುರಿ-ಅಲ್ಲಾನಿಗೆ ತಮ್ಮ ಗೌರವವನ್ನು ಸಮರ್ಪಿಸುವುದು; ಅವನನ್ನು ಸರ್ವತ್ರ ಕಾಣಬಹುದಾಗಿದ್ದರೂ ಸಾಮೂಹಿಕವಾಗಿ ಆತನನ್ನು ತಮ್ಮೆಲ್ಲರ ದೈವವೆಂದರು ಉದ್ಘೋಷಿಸುವುದು ಅವರ ಬಯಕೆ. ಇದು ಹಾಜ್ ಸಂಸ್ಥೆ.

ಹೀಗೆ ಇಸ್ಲಾಂ ದೇವರ ಬಗ್ಗೆ ಹೇಗೋ ಹಾಗೆ ಸಹಮಾನವರ ಬಗ್ಗೆಯೂ ನಮಗೆ ಇರಬೇಕಾದ ಕರ್ತವ್ಯ ಶ್ರದ್ಧೆಯನ್ನು ಬೋಧಿಸುತ್ತದೆ.

ಷರೀಯತ್ ಎಂದರೆ ಇಸ್ಲಾಮಿನ ಶಾಸನ. ಯಾವುದು ಧರ್ಮಬದ್ದ, ಯಾವುದು ನಿಷಿದ್ಧ ಎಂಬುದನ್ನಿದು ತಿಳಿಸುತ್ತದೆ. ಕೆಲವು ಕೃತ್ಯಗಳನ್ನು ಭಗವಂತನ ಹಕ್ಕುಗಳೆಂದೂ ಕೆಲವನ್ನು ಮಾನವರ ಹಕ್ಕುಗಳೆಂದೂ ಹೆಸರಿಸಲಾಗಿದೆ ಈ ಎರಡೂ ವರ್ಗದ ಕೃತ್ಯಗಳನ್ನು ಸಂಪೂರ್ಣ ಮತ್ತು ಆಂಶಿಕ ಎಂದು ಪುನರ್ವಿಭಾಗಿಸಲಾಗಿದೆ. ಭಗವಂತನ ಸಂಪೂರ್ಣ ಹಕ್ಕುಗಳಲ್ಲಿ ಇವು ಸೇರಿವೆ. 1. ಶ್ರದ್ದೆ ಅಥವಾ ಇಮಾನ್. 2. ಐದು ನಿರ್ದಿಷ್ಟ ಸಮಯಗಳಲ್ಲಿ ಪ್ರಾರ್ಥನೆ. 3. ರಂಜಾನಿನ ಉಪವಾಸ. 4. ಆಹ್ನ್ಸ ಅಥವಾ ಜûಕಾತ್. 5. ಯಾತ್ರೆ 6. ಖುಮ್ಸ್-ಎಂದರೆ ಶತ್ರುವನ್ನು ಸೋಲಿಸುವುದರಿಂದ ಬಂದ ಲಾಭದಲ್ಲಿ ಅಥವಾ ಗಣಿಯಲ್ಲಿ ಸಿಕ್ಕಿದ್ದರಲ್ಲಿ ಐದನೆಯ ಒಂದು ಭಾಗವನ್ನು ಸರ್ಕಾರಕ್ಕೆ ಸಲ್ಲಿಸುವುದು. 7. ಕೊಲೆ ಮಾಡದಿರುವುದು. 8. ಮಾದಕ ಪಾನೀಯಗಳನ್ನು ಸೇವಿಸದಿರುವುದು. 9. ವ್ಯಭಿಚಾರ, ಜೂಜು ಮುಂತಾದವುಗಳಲ್ಲಿ ತೊಡಗದಿರುವುದು.

ಭಗವಂತನ ಆಂಶಿಕ ಹಕ್ಕುಗಳು ಯಾವುವೆಂದರೆ, ವ್ಯಕ್ತಿಗೆ ಸಂಬಂಧಿಸಿದ್ದರೂ ಸರ್ಕಾರದ ಉಸ್ತುವಾರಿಗೆ ಒಳಪಟ್ಟಿರತಕ್ಕವು; ಅಂದರೆ ಕಳ್ಳತನ ಇತ್ಯಾದಿ.

ವ್ಯಕ್ತಿಗತ ಹಕ್ಕುಗಳಲ್ಲಿ ಇವು ಸೇರಿವೆ; 1. ವ್ಯಕ್ತಿಯ ಕ್ಷೇಮ. 2. ಪ್ರತಿಷ್ಠೆಯ ಕ್ಷೇಮ. 3. ಆಸ್ತಿಯ ಕ್ಷೇಮ. 4. ವಿವಾಹಸಂಬಂಧಗಳ ಕ್ಷೇಮ. 5. ಪೋಷಕತ್ವದ ಕ್ಷೇಮ. 6. ಅನುವಂಶಿಕತೆಯ ಹಕ್ಕುಗಳ ಕ್ಷೇಮ. 7. ಎಲ್ಲ ನ್ಯಾಯಬದ್ಧ ಕೃತ್ಯಗಳಲ್ಲಿ ಸ್ವಾತಂತ್ರ್ಯದ ಕ್ಷೇಮ.

ಆಂಶಿಕವಾದ ವ್ಯಕ್ತಿಗತ ಮತ್ತು ಸರ್ಕಾರದ (ಭಗವಂತನ) ಹಕ್ಕುಗಳು ಮತ್ತೊಬ್ಬರ ಪ್ರತಿಷ್ಠೆಯ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದವು ಅಥವಾ ಮತ್ತೊಬ್ಬರ ಶೀಲದ ಮೇಲೆ ಆಕ್ರಮಣವೆಸಗುವಂಥವು. ಈ ಸಂದರ್ಭಗಳಲ್ಲಿ ಆಕ್ರಮಣಕಾರಿಯ ಮೇಲೆ ಸರ್ಕಾರ ಸ್ವತಂತ್ರ ಕ್ರಮವನ್ನು ಕೈಗೊಳ್ಳಬೇಕು.

ಪೈಗಂಬರರ ಉಪದೇಶಗಳ ಸಾರ ಸರ್ವಸ್ವವನ್ನು ಮಥನಮಾಡಿ ಬಂದ ಮುಖ್ಯಾಂಶಗಳನ್ನು ತತ್ತ್ವಗಳ ರೂಪದಲ್ಲಿ ಬಹು ಸಂಗ್ರಹವಾಗಿ ಇಲ್ಲಿ ಹೇಳಲಾಗಿದೆ. ಶ್ರದ್ಧಾವಂತನಾದವನು ಈ ವಿಷಯಗಳಲ್ಲಿ ಅವಿಚಲವಾದ ನಂಬಿಕೆಯನ್ನಿಡಬೇಕಾದುದು ಅಗತ್ಯ : ದೇವರನ್ನು ಅವನ ದೂತರು ಮತ್ತು ಗ್ರಂಥಗಳನ್ನು ಅವನ ಪ್ರತಿನಿಧಿಗಳಾದ ಪ್ರವಾದಿಗಳನ್ನು ನಂಬಬೇಕು. ಭಗವಂತನ ಆಜ್ಞೆಗಳನ್ನು ಶಂಕಿಸಬಾರದು. ಪುನರುತ್ಥಾನದ ಮತ್ತು ತೀರ್ಪಿನ ದಿನದ ವಿಷಯದಲ್ಲಿ ನಿಷ್ಠೆಯ ನಂಬಿಕೆ ಅಗತ್ಯ. ಪವಿತ್ರ ಕುರಾನಿನಲ್ಲಿ ಮತ್ತು ಅದರ ಸಂಪ್ರದಾಯ ಪರಂಪರೆಯಲ್ಲಿ ಉಕ್ತವಾಗಿರುವಂಥವೇ ಅನುಕರಣಯೋಗ್ಯವಾದ ನೀತಿನಿಯಮಗಳು (ಅದೇಲ್‍ಗಳು).

ಪ್ರಾರ್ಥನೆ ಮತ್ತು ಪೂಜೆ (ಇಬಾದತ್) ಭವಗತ್ ಸಾನ್ನಿಧ್ಯವನ್ನು ಪಡೆಯಲು ಮಾನವನಿಗಿರುವ ಸುಲಭ ಮಾರ್ಗ. ಉಷಃಕಾಲ, ಪ್ರಾತಃಕಾಲ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ-ಹೀಗೆ ದಿನದಲ್ಲಿ ಐದು ಬಾರಿ ಪ್ರಾರ್ಥನೆ (ಸಲತ್) ಮಾಡಬೇಕು. ಇವುಗಳಲ್ಲಿ ಇಷ್‍ರಕ್ (ಸೂರ್ಯೋದಯದ ಬಳಿಕದ್ದು), ಜಹ ಮತ್ತು ತಹಜ್ಜದ್ (ಮಧ್ಯರಾತ್ರಿಯದು) ಪ್ರಾರ್ಥನೆಗಳನ್ನು ಮಾಡುವ ಅಥವಾ ಬಿಡುವ ವಿಷಯ ವ್ಯಕ್ತಿಗೆ ಸೇರಿದ್ದು. ಮೌಜ್ಜಿನ್ (ಘೋಷಕ) ಪ್ರಾರ್ಥನೆಗೆ ಮೊದಲು ಕೂಗಿ ಹೇಳುವ ಮಾತುಗಳು ಹೀಗಿವೆ : ಭಗವಂತ ದೊಡ್ಡವ, ಅಲ್ಲಾನ ವಿನಾ ದೇವರಿಲ್ಲವೆಂಬುದಕ್ಕೆ ನಾನು ಸಾಕ್ಷಿ. ಮಹಮ್ಮದ್ ಭಗವಂತನ ಪ್ರವಾದಿಯೆಂಬುದಕ್ಕೆ ನಾನು ಸಾಕ್ಷಿ. ಪ್ರಾರ್ಥನೆಗೆ ಬರಲು ತ್ವರೆಮಾಡಿ, ಮುಕ್ತಿಗೆ ಬರಲು ತ್ವರೆಮಾಡಿ, ಅಲ್ಲಾನ ವಿನಾ ದೇವರಿಲ್ಲ. ಈ ವಾಕ್ಯಗಳು ಪ್ರಾರ್ಥನೆಗೆ ಇಸ್ಲಾಂ ಕೊಟ್ಟಿರುವ ಪ್ರಾಧಾನ್ಯವನ್ನು ಎತ್ತಿ ತೋರಿಸುತ್ತವೆ.

ಇಸ್ಲಾಂ ಪ್ರಕಾರ ಮಾನವನ ನಿಜವಾದ ವ್ಯಕ್ತಿತ್ವದಲ್ಲಿ ಏನೂ ಕೆಡುಕಿಲ್ಲ; ಆದರೆ ಅವನಲ್ಲಿ ಕೆಡುಕುಮಾಡಲು ಪ್ರಲೋಭನಗೊಳ್ಳುವ ದೌರ್ಬಲ್ಯವಿದೆ. ಆದ್ದರಿಂದ ಕೆಡುಕು ಮಾನವಸ್ವಭಾವವಲ್ಲ. ಅರ್ಜಿತ ಗುಣ. ಅದೊಂದು ಮಾನಸಿಕ ವ್ಯಾಧಿ; ಅದನ್ನು ಸರಿಯಾದ ಬೋಧನೆ ಮತ್ತು ಶಿಕ್ಷಣದಿಂದ ಗುಣಪಡಿಸಬಹುದು. ಸ್ವಭಾವದಿಂದ ಕೆಟ್ಟವನಾದ ಸೈತಾನ್ ಪಾಪಮಾಡಿದವರಲ್ಲಿ ಎಂದರೆ ದೇವರ ಆಜ್ಞೆಗೆ ಅವಿಧೇಯರಾದವರಲ್ಲಿ ಮೊದಲಿಗ. ಅವನ ಪಾಪಗಳೆಂದರೆ ಸ್ವಪ್ರತಿಷ್ಠೆ ಮತ್ತು ಅಹಂಕಾರ; ಇವು ಮಹಾಪಾಪಗಳಲ್ಲಿ ಸೇರಿವೆ. ಕೆಟ್ಟ ಪ್ರವೃತ್ತಿಯೆಂಬುದು ಪಾಶವೀ ಆತ್ಮದ ಪ್ರೇರಣೆ. ಕುರಾನಿನ ಒಂದು ಮೂಲಭಾಗ ಹೇಳುತ್ತದೆ :

"ಜೋಸೆಫ್ ಹೇಳುತ್ತಾನೆ. ನಾನು (ದೌರ್ಬಲ್ಯದಿಂದ) ಸರ್ವತಂತ್ರನೆಂದು ಘೋಷಿಸುವುದಿಲ್ಲ ಅತ್ಯಂತ ನಿಶ್ಚಯವಾಗಿ ನನ್ನ ಪಾಶವೀ ಆತ್ಮ ಕೆಡುಕನ್ನು ಪ್ರಚೋದಿಸುತ್ತದೆ (ಆದ್ದರಿಂದ ಮನುಷ್ಯ ಕೆಡುಕನ್ನಾಚರಿಸುತ್ತಾನೆ); ಆದರೆ ಅದರ ಬಗೆಗೆ ಪರಮಾತ್ಮನಿಗೆ ಕರುಣೆಯಿದೆ".

ಆದಕಾರಣ, ಪಾಶವೀ ಆತ್ಮವನ್ನು ನಿಜವಾದ ವ್ಯಕ್ತಿತ್ವಕ್ಕೆ ಅಧೀನಗೊಳಿಸಿದರೆ, ಮನುಷ್ಯ ಕೆಡುಕಿನಿಂದ ಬಿಡುಗಡೆಗೊಳ್ಳಬಹುದು. ಪಾಪಗಳನ್ನು ದೊಡ್ಡವು ಮತ್ತು ಚಿಕ್ಕವೆಂದು ವಿಂಗಡಿಸಲಾಗಿದೆ. ಈ ವಿಂಗಡಣೆಗೆ ಕುರಾನಿನ ಆಧಾರ ಹೀಗಿದೆ : "ಮಹಾಪಾಪಗಳನ್ನು ವರ್ಜಿಸಿ, ಕೇವಲ ಲಘುತರವಾದ ಅಪರಾಧಗಳನ್ನು ಎಸಗುವವರಿಗೆ ಭಗವಂತ ನಿಜವಾಗಿಯೂ ದಯೆ ಸೂಸುತ್ತಾನೆ".

ಮಹಾಪಾಪಗಳಲ್ಲಿ ಮುಖ್ಯವಾದ ಕೆಲವು ಹೀಗಿವೆ : ವ್ಯಕ್ತಿಗೆ ದೇವರ ಸಾಹಚರ್ಯ ಕಲ್ಪಿಸುವುದು : ಉದ್ದೇಶಪೂರ್ವಕ ಕೊಲೆಮಾಡುವುದು; ವ್ಯಭಿಚಾರ; ಕಳವು; ಅಸಹಜವಾದ ಅಪರಾಧ; ಕುಡಿತ; ದುಬಾರಿ ಬಡ್ಡಿ ಹಾಕುವುದು; ತಂದೆ ತಾಯಿಗಳಿಗೆ ಅವಿಧೇಯತೆ ತೋರುವುದು : ಕ್ವಾಜ್ಪ್ ಅಥವಾ ವಿವಾಹಪೂರ್ವ ಸಂಭೋಗ: ಸುಳ್ಳು ಸಾಕ್ಷಿ; ಅನಾಥರಿಗೆ ಮೋಸ; ಭಗವತ್ಕಾರುಣ್ಯದ ಬಗ್ಗೆ ನಿರಾಶೆ; ಯುದ್ದದಲ್ಲಿ ಹೇಡಿತನ : ಪ್ರಾರ್ಥನೆಗಳ ಲಕ್ಷ್ಯ; ಜೂಜಾಟ; ಉಪವಾಸಗಳ ಅಲಕ್ಷ್ಯ.

ಯಾವುದೇ ಪಾಪಕ್ಕಾಗಿ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟರೆ ಅದರಿಂದ ಭಗವಂತನ ಕರುಣೆ ಮತ್ತು ಮುಕ್ತಿ ದೊರಕಬಹುದು. ಮುಸ್ಲಿಮನಲ್ಲದವನೊಬ್ಬ ಇಸ್ಲಾಂ ಧರ್ಮವನ್ನವಲಂಬಿಸಿದರೆ, ಅವನ ಹಿಂದಿನ ದೋಷಗಳೆಲ್ಲ ನಿವಾರಣೆಯಾಗುತ್ತವೆ. ಮುಸ್ಲಿಮನಾದವ ದೊಡ್ಡ ಪಾಪವೊಂದರಿಂದ ಪಾಪಿಯಾದರೂ ವಿಶ್ವಾಸ ದ್ರೋಹಿಯಾಗುವುದಿಲ್ಲ.

ಆತ್ಮಹತ್ಯೆಯೊಂದು ಪಾಪ; `ಶ್ರದ್ಧಾಳುವೊಬ್ಬ ಮತ್ತೊಬ್ಬ ಶ್ರದ್ಧಾಳುವನ್ನು ತಪ್ಪು ತಿಳಿವಳಿಕೆಯಿಂದಲ್ಲದೆ ಕೊಲ್ಲುವುದು ತಪ್ಪಾಗುತ್ತದೆ ಎಂಬ ಕುರಾನಿನ ವಾಕ್ಯದಲ್ಲಿ ಇದಕ್ಕೆ ಪುಷ್ಟಿ ದೊರೆಯುತ್ತದೆ. ತನ್ನನ್ನು ತಾನು ಕೊಂದುಕೊಳ್ಳುವುದರಲ್ಲಿ ತಪ್ಪು ತಿಳುವಳಿಕೆಗಿಂತ ಸರಿಯಾದ ಉದ್ದೇಶವೇ ಕಂಡುಬರುತ್ತದಾದ ಕಾರಣ ಅದೊಂದು ಪಾಪ. ಸಂಪ್ರದಾಯದ ಪ್ರಕಾರ ತನ್ನನ್ನು ತಾನು ಕೊಂದುಕೊಳ್ಳುವವ ನರಕದಲ್ಲಿ ನರಳುತ್ತಾನೆ. ಇಸ್ಲಾಮಿನಲ್ಲಿ, ಜೀವಕ್ಕೆ ಗೌರವವುಂಟು, ಅದರ ನಾಶಕ್ಕೆ ಅದರ ಮಾಲೀಕನೆ ಕಾರಣನಾದರೂ ಅದು ನಿಷಿದ್ಧ, ಈ ಕಾರಣದಿಂದ, ಮುಸ್ಲಿಂ ರಾಷ್ಟ್ರಗಳಲ್ಲಿ ಆತ್ಮಹತ್ಯೆಯಿಂದಾಗುವ ಮರಣಗಳು ವಿರಳ. ಮುಸ್ಲಿಮನಾದ ಭಗವಂತನ ಆಜ್ಞೆಗಳಿಗೆ ಒಳಪಡಬೇಕು ಮತ್ತು ಅಪರಿಹಾರ್ಯವಾದ ಎಲ್ಲ ಪ್ರಸಂಗಗಳನ್ನೂ ಉಲ್ಲಾಸದಿಂದ ಅಂಗೀಕರಿಸಬೇಕು. ಕೆಲವು ಘಟನೆಗಳನ್ನು ಮಾನವ ಜೀವಿಗಳ ವಿಷಯದಲ್ಲಿ ಸರ್ವಶಕ್ತನಾದ ದೇವರು ವಿಧಿಸಿರುವ ಪರೀಕ್ಷೆಗಳೆಂದು ತೆಗೆದುಕೊಳ್ಳಬೇಕು-ಎಂಬ ಮಾತಿಗೆ ಕುರಾನಿನ ಈ ವಾಕ್ಯ ಪುಷ್ಟಿಯನ್ನೀಯುತ್ತದೆ : "ಆತ ನಿಮ್ಮನ್ನು ಭಯದಿಂದ, ಹಸಿವಿನಿಂದ, ಆಸ್ತಿ ನಷ್ಟದಿಂದ, ಬದುಕು ಮತ್ತು ಫಲಗಳಿಂದ ನಿಶ್ಚಿತವಾಗಿ ಪರೀಕ್ಷಿಸುತ್ತಾನೆ; (ಓ ಪ್ರವಾದಿಯೇ), ರೋಗಿಗೆ (ಈ ಎಲ್ಲ ಪರೀಕ್ಷೆಗಳ ಸಂದರ್ಭದಲ್ಲಿ) ಸುವಾರ್ತೆಗಳನ್ನು ನೀಡು, ಆಗ ಆತ ದುರದೃಷ್ಟಕ್ಕೆ ಸಿಕ್ಕಿದ್ದರೂ 'ನಿಜವಾಗಿ ನಾವು ಭಗವಂತನಿಗೆ ಸೇರಿದವರು, ಅವನಲ್ಲಿಗೇ ಖಂಡಿತ ಮರಳುತ್ತೇವೆ ಎಂದು ಹೇಳುತ್ತಾನೆ.

ಈ ದೃಷ್ಟಿಯಿಂದ, ಆತ್ಮಹತ್ಯೆಗೆ ಯತ್ನಿಸುವ ಪ್ರತಿಯೊಬ್ಬನೂ ಭಗವಂತನೇ ದುರದೃಷ್ಟಗಳ ರೂಪದಲ್ಲಿ ಕಳುಹಿಸಿರುವ ಪರೀಕ್ಷೆಗಳ ವಿರುದ್ಧ ನಿಜವಾಗಿಯೂ ದಂಗೆ ಎದ್ದಂತಾಗುತ್ತದೆ.

ಇಸ್ಲಾಮಿನ ಪ್ರಕಾರ ಯಜ್ಞದ ಹಿಂದಿರುವ ಭಾವನೆ ದರಿದ್ರರಿಗೆ ಸಹಾಯ ಮಾಡುವುದು ಅಥವಾ ಜನರ ಹಸಿವನ್ನು ತಣಿಸುವುದು. ಅದು ಔದಾರ್ಯದ ಅಥವಾ ಹಬ್ಬದ ಆಚರಣೆ. ಮುಸ್ಲಿಮರಲ್ಲಿ ಯe್ಞÁಹುತಿಗೊಂಡ ಪ್ರಾಣಿಯ ಮಾಂಸವನ್ನು ಆಹ್ವಾನಿತರೆಲ್ಲ ಬಳಸುತ್ತಾರೆ. ಅದು ಆರಾಧನೆಯ ವಿಹಿತಕರ್ಮ.

ಮುಸ್ಲಿಮನಾದವ ಮರಣವನ್ನು ಬಯಸಬಾರದು, ಏಕೆಂದರೆ, ಆತ ಸದಾಚಾರಿಯಾಗಿದ್ದರೆ, ಅದರಿಂದ ಅವನ ಜೀವಮಾನ ದೀರ್ಘವಾಗಬಹುದು, ಕೆಟ್ಟವನಾಗಿದ್ದರೆ ಒಳಿತನ್ನೆಸಗುವ ಮತ್ತು ಕೆಡುಕಿಗಾಗಿ ಪಶ್ಚಾತ್ತಾಪಪಡುವ ಅವಕಾಶ ಅವನಿಗಿದ್ದೀತು. ಆದರೆ ಸಾವನ್ನೆದುರಿಸಬೇಕಾದ ಆತ್ಮ ಭಗವದಿಚ್ಛೆಗೆ ಶರಣಾಗಬೇಕು ಮತ್ತು ಉಲ್ಲಸಿತ ಹೃದಯದಿಂದ ಅದಕ್ಕೆ ತನ್ನನ್ನರ್ಪಿಸಿಕೊಳ್ಳಬೇಕು. ಕುರಾನ್ ಪ್ರಕಾರ ಪ್ರತಿಯೊಂದು ಜೀವಿಗೂ ಮರಣದ ವೇಳೆ ನಿಶ್ಚಿತವಾಗಿದೆ. ಸಮಾಧಿಯಾದ ಬಳಿಕ. ಮೃತವ್ಯಕ್ತಿ ಮುಂಕರ್ ಮತ್ತು ನಕಿರ್ ಎಂಬಿಬ್ಬರು ದೇವದೂತರನ್ನು ಸಂಧಿಸುತ್ತಾನೆ; ಅವರು ಅವನನ್ನು ಅವನ ಧರ್ಮ, ದೇವರು ಮತ್ತು ಶ್ರದ್ಧೆಗಳ ಬಗೆಗೆ ಪ್ರಶ್ನಿಸುತ್ತಾರೆ; ಅವರು ಅವನನ್ನು ಅವನ ಧರ್ಮ, ದೇವರು ಮತ್ತು ಶ್ರದ್ಧೆಗಳ ಬಗೆಗೆ ಪ್ರಶ್ನಿಸುತ್ತಾರೆ. ಮೃತವ್ಯಕ್ತಿಯ ಆತ್ಮದಿಂದ ಅವರು ತೃಪ್ತಿಕರವಾದ ಉತ್ತರಗಳನ್ನು ಪಡೆದಲ್ಲಿ, ಅವನನ್ನು ಪುನರುತ್ಥಾನದ ದಿನದವರೆಗೆ ಪ್ರಶಾಂತವಾದ ಅವಸ್ಥೆಯಲ್ಲಿ ಇರಿಸುತ್ತಾರೆ. ಇಲ್ಲವಾದರೆ, ಪುನರುತ್ಥಾನವಾಗುವ ತನಕ ಆತ ಹಿಂಸೆಗೆ ಗುರಿಯಾಗಬೇಕು. ಅನಂತರ ಒಳಿತು ಕೆಡುಕುಗಳೆರಡನ್ನೂ ಪರೀಕ್ಷಿಸಿ ಪುನರುತ್ಥಾನವಾಗುವ ತನಕ ಆತ ಹಿಂಸೆಗೆ ಗುರಿಯಾಗಬೇಕು. ಅನಂತರ ಒಳಿತು ಕೆಡುಕುಗಳೆರಡನ್ನೂ ಪರೀಕ್ಷಿಸಿ ಪುರಸ್ಕಾರವನ್ನೊ ಶಿಕ್ಷೆಯನ್ನೊ ವಿಧಿಸಲಾಗುವುದು. ಸಾವು ಹಾಗೂ ಪುನರುತ್ಥಾನಗಳ ನಡುವಣ ಅವಸ್ಥೆಯನ್ನು ಬeóರ್ï ಅಖ್ ಎಂದು ಕರೆದಿದೆ. ಸೂಫಿಗಳ ಪ್ರಕಾರ ಅದು ಅರ್ಧಭೌತಿಕ ಮತ್ತು ಅರ್ಧ ಆಧ್ಯಾತ್ಮಕ ಜೀವನ. ಮುಸ್ಲಿ ಪಾಪಿಗಳ (ಷಫ) ಪರವಾಗಿ ತೀರ್ಪಿನ ದಿನದಂದು ಪ್ರವಾದಿ ಮಧ್ಯಸ್ತಿಕೆ ವಹಿಸುವನೆಂದು ಸಂಪ್ರದಾಯವಾಗಿ ಮುಸ್ಲಿಮರಲ್ಲಿ ಸಾಮಾನ್ಯವಾಗಿರುವ ನಂಬಿಕೆ. ಕುರಾನ್ ಪ್ರಕಾರ. ಮುಸ್ಲಿಮನಾದ ಭಗವತ್ಕರುಣೆಯಲ್ಲಿ ಭರವಸೆ ಕಳೆದುಕೊಳ್ಳಕೂಡದು. ತನ್ನ ಬದುಕಿನ ಯಾವುದಾದರೊಂದು ಘಟ್ಟದಲ್ಲಿ ಪಶ್ಚಾತ್ತಾಪ ಪಡುವುದರ ಮೂಲಕ ಆತ ಮೋಕ್ಷ ಗಳಿಸಬಹುದು.

ದೇವತೆಗಳ ಅಸ್ತಿತ್ವವನ್ನು ಇಸ್ಲಾಂ ಒಪ್ಪುತ್ತದೆ. ಜ್ವಾಲಾದೇಹಿಗಳಾದ ಅವರು ದೇವರಿಗೂ ಮಾನವರಿಗೂ ನಡುವೆ ಇದ್ದಾರೆ. ಗೇಬ್ರಿಯಲ್, ಮೈಕೇಲ್, ಅಜ್ರೇಲ್ ಮತ್ತು ಇಸ್ರಾಫಿಲ್-ಇವರು ನಾಲ್ವರು ಪ್ರಸಿದ್ಧ ದೇವತೆಗಳು. ದಾನವಾಂಶವನ್ನುಳ್ಳವರೂ ಇದ್ದಾರೆ. ಇಬ್ಲಿಸ್ ಅಂಥವರಲ್ಲಿ ಒಬ್ಬ. ಆಡಮ್ಮನಿಗೆ ಗೌರವ ಸಲ್ಲಿಸಿದ ಈತನನ್ನು ದೇವರು ಬಹಿಷ್ಕರಿಸಿದ. ಈ ಎಲ್ಲರಿಗೂ ಹುಟ್ಟು ಸಾವುಗಳುಂಟು. ಪ್ರವಾದಿಗಳ ಮೂಲಕ ದೇವರ ಸಂದೇಶ ಕಾಲಕಾಲಕ್ಕೆ ನಡೆದುಬಂದಿದೆ. ಅಂಥ 104 ಪವಿತ್ರಗ್ರಂಥಗಳಲ್ಲಿ ಕೇವಲ ನಾಲ್ಕು ಮಾತ್ರ ಉಳಿದಿವೆ. ಅವುಗಳಲ್ಲಿ ಕುರಾನು ಒಂದು. ಪ್ರವಾದಿಗಳಲ್ಲಿ ಆರು ಜನ ಹಳೆಯ ಸಂಪ್ರದಾಯಗಳನ್ನು ತೊಡೆದು ಹಾಕಿ ಧರ್ಮವನ್ನು ಪರಿಷ್ಕರಿಸಿದ್ದಾರೆ. ಕಾಲಾನುಕ್ರಮದಲ್ಲಿ ಅವರ ಹೆಸರುಗಳು ಹೀಗಿವೆ : ಆಡಮ್, ನೋವ, ಏಬ್ರಹಾಂ, ಮೋಸೆಸ್, ಜೀಸಸ್ ಮತ್ತು ಮಹಮ್ಮದ್.

ಸತ್ತವರನ್ನು ಗೋರಿಗೊಳಿಸಿದ ಮೇಲೆ ಅವರ ಆತ್ಮಗಳು ತಮ್ಮ ತಮ್ಮ ಪಾಪ ಪುಣ್ಯಗಳಿಗೆ ತಕ್ಕಂತೆ ಸುಖವನ್ನೋ ಪಡೆದು ಸ್ವರ್ಗಕ್ಕೋ ನರಕಕ್ಕೋ ಹೋಗುತ್ತವೆ. ದೇವರಲ್ಲಿ ಮತ್ತು ಪ್ರವಾದಿಯಲ್ಲಿ ದೃಢನಂಬಿಕೆ ಉಳ್ಳವರು ನೇರ ಸ್ವರ್ಗಕ್ಕೆ ಹೋಗುತ್ತಾರೆ. ಪ್ರವಾದಿಗಳಿಗೆ ಈ ಭಾಗ್ಯ ಉಂಟು; ಅಥವಾ ಹಸಿರು ಹಕ್ಕಿಯಾಗಿ ಸ್ವರ್ಗೋದ್ಯಾನದಲ್ಲಿ ಆನಂದದಿಂದಿರುತ್ತಾರೆ. ಈ ಭಾಗ್ಯ ಹುತಾತ್ಮರಿಗುಂಟು. ಸಾಮಾನ್ಯರ ಆತ್ಮಗಳು ತಮ್ಮ ಗೋರಿಗಳ ಬಳಿಯೇ ಉಳಿಯುತ್ತವೆ. ಇಲ್ಲದಿದ್ದರೆ ಆಡಂನ ಜೊತೆ ಮೊದಲ ಸ್ವರ್ಗದಲ್ಲಿರುತ್ತವೆ. ಪಾಪಿಗಳ ಆತ್ಮಗಳು ಹರ್ದಮೌತ್ ಪ್ರಾಂತ್ಯದಲ್ಲಿ ಉಳಿಯುತ್ತದೆ ಅಥವಾ ಭೂಮಿ ಮತ್ತು ಸ್ವರ್ಗ-ಎರಡನ್ನೂ ಕಳೆದುಕೊಂಡು ತ್ರಿಶಂಕುಗಳಾಗಿ ಪಡಬಾರದ ಯಾತನೆಗೆ ಗುರಿಯಾಗುತ್ತವೆ.

ನರಕದಲ್ಲಿ ಏಳು ಭಾಗಗಳಿವೆ. ಅಲ್ಲಿ ಬಿದ್ದ ಪಾಷಂಡಿಗಳಿಗೆ ಸುಲಭದಲ್ಲಿ ಮುಕ್ತಿ ಇಲ್ಲ. ಪಶ್ಚಾತ್ತಾಪದಿಂದ ಪರಿಷ್ಕಾರಗೊಂಡಲ್ಲಿ ಮುಸಲ್ಮಾನರು ನರಕದಿಂದ ಬಿಡುಗಡೆ ಪಡೆಯಬಹುದು.

ಸುಂತಿ ಇಸ್ಲಾಂ ಧರ್ಮದಲ್ಲಿನ ನಂಬಿಕೆಯ ಮುದ್ರ ಸ್ವರೂಪವಾದ್ದು. ಆರರಿಂದ ಎಂಟು ವರ್ಷದ ಮಕ್ಕಳಿಗೆಲ್ಲ ಇದನ್ನು ಮಾಡಲಾಗುತ್ತದೆ. ಕುರಾನಿನ ಪ್ರಕಾರ ದ್ರಾಕ್ಷರಸದಂಥ ಮಾದಕದ್ರವ್ಯಗಳ ಸೇವನೆ ಕೂಡದು. ಇನ್ನೂ ಕಟ್ಟುನಿಟ್ಟಾಗಿರುವವರು ಅಫೀಮು, ಕಾಫಿ, ಹೊಗೆಸೊಪ್ಪುಗಳನ್ನು ಸೇವಿಸರು. ಮಾಂಸಾಹಾರದಲ್ಲೂ ಒಂದು ವಿವೇಕ ಉಂಟು. ರಕ್ತ, ಹಂದಿ ಮಾಂಸ, ವಯಸ್ಸಾಗಿ ಅಥವಾ ಕಾಯಿಲೆಯಿಂದ ಸತ್ತ ಪ್ರಾಣಿ, ದೇವರ ಹೆಸರಿನಲ್ಲಿ ಕಡಿದಂಥ ಪ್ರಾಣಿ, ಪೆಟ್ಟು ಕೊಟ್ಟು ಕೊಂದಂಥಾದ್ದು, ಬೇರೊಂದು ಪ್ರಾಣಿ ಕಚ್ಚಿಕೊಂದದ್ದು-ಇಂಥವು ಸೇವನಾಬಾಹಿರ. ದೇವರ ಹೆಸರಿನಲ್ಲಿ ಶುದ್ಧವಾದ ಪ್ರಾಣಿಗಳನ್ನು ಯುಕ್ತವಿಧಿಯಿಂದ ಮಾತ್ರ ಕಡಿದು ಅವುಗಳ ಮಾಂಸವನ್ನು ಬಳಸತಕ್ಕದ್ದೆಂದು ಸೂಚಿಸಲಾಗಿದೆ.

ಅಂತೆಯೇ ಜೂಜಾಟ ನಿಷಿದ್ಧ. ಜೂಜುಗಾರನ ಸಾಕ್ಷಿಯನ್ನು ನ್ಯಾಯಾಲಯ ಒಪ್ಪದು. ಪರಧನಾಪಹರಣ ಮಹಾ ಪಾಪ. ಅದೇರೀತಿ ಕಲೆಯ ಹೆಸರಿನಲ್ಲಿ ಮಾನವರ ಚಿತ್ರಗಳನ್ನು ಬರೆಯುವುದೂ ಹೇಯ. ಹಾಗೆ ಮಾಡಿದವರು ನರಕಕ್ಕೆ ಹೋಗುತ್ತಾರೆ.

ಯುದ್ಧ, ಜಗಳಗಳನ್ನು ಸಾಮಾನ್ಯವಾಗಿ ಒಪ್ಪದಿದ್ದರೂ ಪಾಷಂಡಿಗಳ ವಿರುದ್ಧ ನಡೆಸುವ ಧರ್ಮಯುದ್ಧವನ್ನು ಇಸ್ಲಾಂ ಒಪ್ಪುತ್ತದೆ. ಅಂಥ ಯುದ್ಧಗಳಲ್ಲಿ ವೀರಮರಣ ಪಡೆದವರನ್ನು ಹುತಾತ್ಮರೆಂದು ಗೌರವಿಸುತ್ತಿದ್ದರು. ಶತ್ರುಗಳಿಗೆ ಬದುಕಲು ಇದ್ದುದು ಎರಡೇ ಮಾರ್ಗ. ಒಂದು ಇಸ್ಲಾಮನ್ನು ಸ್ವೀಕರಿಸುವುದು. ಎರಡು ಕೇಳಿದಷ್ಟು ಪರಿಹಾರ ಕೊಡುವುದು. ಇಲ್ಲದಲ್ಲಿ ಯುದ್ದವೇ ಅದರ ಅದೃಷ್ಟವನ್ನು ನಿಶ್ಚಯಿಸುತ್ತಿತ್ತು.

ಇಸ್ಲಾಂ ಧರ್ಮದ ಒಳತಿರುಳನ್ನು ಪರಿಶೀಲಿಸಿದರೆ ವಿಶ್ವದ ಎಲ್ಲ ಪ್ರಮುಖ ಧರ್ಮಗಳ ತಾತ್ಪರ್ಯವೂ ಒಂದೇ ಎಂಬ ಭಾವನೆ ಪುಷ್ಟಿಗೊಳ್ಳುತ್ತದೆ. ಪ್ರಾರ್ಥನೆ, ಸರಳಜೀವನಕ್ರಮ, ದಾನಧರ್ಮ, ಪರೋಪಕಾರ, ಆತ್ಮೋದ್ಧಾರ ಮುಂತಾದ ಎಲ್ಲ ಧರ್ಮಗಳ ಪಲ್ಲವಿ. ಅವನ್ನೇ ಇಸ್ಲಾಂನಲ್ಲೂ ಕಾಣಬಹುದು. ಪ್ರಾರ್ಥನೆಗಳು ಮುಸ್ಲಿಮನ ಧಾರ್ಮಿಕ ಕರ್ತವ್ಯಗಳಲ್ಲಿ ಲಘುವಾದ ಭಾಗವೇನಲ್ಲ; ಏಕೆಂದರೆ ಅವು ಎಚ್ಚರಿಕೆಯಿಂದ ಕೂಡಿದ ಸಿದ್ಧತಾಶುದ್ಧಿಗಳನ್ನೊಳಗೊಳ್ಳುತ್ತವೆ; ನಿಜಕ್ಕೂ ಶುಚಿರ್ಭೂತತೆ ದೈವಿಕತೆಯ ಒಂದು ಮುಖ್ಯ ಅಂಗವೆಂಬುದನ್ನು ಪ್ರವಾದಿ ತನ್ನ ಅನುಯಾಯಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ; ಮತ್ತು ಮುಸ್ಲಿಮರ ಕಟ್ಟುನಿಟ್ಟಿನ ಶೌಚ ಅದರ ವಾಸ್ತವಿಕ ಪ್ರಭಾವದಲ್ಲಿನ ಒಂದು ಸೊಗಸಾದ ಲಕ್ಷಣವಾಗಿದೆ. ಮಸೀದಿಯ ಪ್ರಾರ್ಥನೆಗಳಲ್ಲಿ ಸಮೃದ್ಧವಾದ ಮತ್ತು ನಿಜವಾದ ಕಳಕಳಿಯಿದೆ. ಆರಾಧಕರು ಅವುಗಳಲ್ಲಿ ಆಸಕ್ತಿಯಿಂದ ಸೇರುತ್ತಾರೆ. ಪ್ರವಾದಿ ಮನೆಯಲ್ಲಿ ಖಾಸಗಿಯಾಗಿ ಪ್ರಾರ್ಥನೆ ಮಾಡಬೇಕೆಂದು ಆಗಾಗ ಒತ್ತಿ ಹೇಳುತ್ತಾನೆ; ಮತ್ತು ದೇವರನ್ನರ್ಚಿಸುತ್ತ ಇರುಳನ್ನು ಕಳೆಯುವ ವ್ಯಕ್ತಿಯನ್ನು ವಿಶೇಷವಾಗಿ ಕೊಂಡಾಡುತ್ತಾನೆ.

ಮಧ್ಯ ಹಾಗೂ ಪಶ್ಚಿಮ ಆಫ್ರಿಕದಲ್ಲಿ ಇಸ್ಲಾಮಿನ ಪ್ರಭಾವ ಒಟ್ಟಿನಲ್ಲಿ ಅತ್ಯಂತ ಹಿತಕರ ಸ್ವರೂಪದ್ದಾಗಿದೆಯೆಂದು ಎಲ್ಲ ಜಾಗೃತ ಹಾಗೂ ಪ್ರಾಮಾಣಿಕ ವೀಕ್ಷಕರು ಒಪ್ಪಿಕೊಳ್ಳುತ್ತಾರೆ. ತನ್ನ ಪ್ರಚಾರಕರಿಂದ ತುಂಬಿಹೋಗಿರುವ ಆ ವಿಶಾಲ ಪ್ರಾಂತ್ಯದಲ್ಲೆಲ್ಲ ಅದು ಸಂಯಮ ಸಹನೆಗಳ ಸ್ವಭಾವವನ್ನು ಪ್ರಚೋದಿಸಿದೆ; ಅದರ ಬೋಧನೆಯ ಪ್ರಭಾವ ಎಷ್ಟು ಅಪಾರವೆಂದರೆ, ಮುಸ್ಲಿಮ ನಿವಾಸಿಗಳಿರುವೆಡೆಗಳಲ್ಲಿ-ನಾಸ್ತಿಕರಿರುವ ನಗರಗಳಲ್ಲಿ ಕೂಡ-ಕುಡಿತದಿಂದ ಮತ್ತನಾದ ಒಬ್ಬ ವ್ಯಕ್ತಿಯನ್ನು ಕಾಣುವುದೂ ದುರ್ಲಭ ಎನ್ನಲಾಗಿದೆ.

ಸೆನೆಗಾಲ್‍ನಿಂದ ಲಾಗೋಸ್‍ವರೆಗೆ, ಎರಡು ಸಾವಿರ ಮೈಲಿಗಳ ಅಂತರದಲ್ಲಿ, ಒಂದು ಮಸೀದಿಯಾದರೂ ಇಲ್ಲದಿರುವಂಥ ಮುಖ್ಯ ನಗರ ಕಾಣಸಿಗದು. ಯಾವನಾದರೂ ನಾಸ್ತಿಕ-ಆತ ಎಷ್ಟೇ ಯಃಕಶ್ಚಿತ್ ಅಥವಾ ಕೀಳಾಗಿರಲಿ-ಇಸ್ಲಾಮನ್ನು ಸ್ವೀಕರಿಸಿದ ಕೂಡಲೇ, ಅವನಿಗೆ ಸಮಾನತೆ ತೋರಿ ಸಮಾಜಕ್ಕೆ ಸೇರಿಸಿಕೊಳ್ಳುವುದನ್ನು ನೋಡಿದರೆ ಈ ಧರ್ಮದ ಮನೋವೈಶಾಲ್ಯ ವ್ಯಕ್ತವಾಗುತ್ತದೆ.

ಮುಸ್ಲಿಂ ಉಪಾಧ್ಯಾಯರು ತಮ್ಮ ನೆರೆಯೊರೆಯವರ ಮೇಲೆ ಆಚರಣೆ ಮತ್ತು ಉಪದೇಶಗಳಿಂದ ಸತ್ ಪ್ರಭಾವ ಬೀರುತ್ತಿರುವುದಕ್ಕೆ ಅನೇಕ ನಿರ್ಶನಗಳಿವೆ. ಮಧ್ಯ ಹಾಗೂ ಪಶ್ಚಿಮ ಆಫ್ರಿಕದಲ್ಲಿ ಇಸ್ಲಾಂ ಹರಡಿದ್ದರಿಂದ, ಗುಲಾಮ ವ್ಯಾಪಾರದ, ದಾರುಣತೆಯ ವಿರುದ್ಧ ಅದು ಬಹು ಮುಖ್ಯವಾದ ರಕ್ಷಣೆಯಾಗಿ ಪರಿಣಮಿಸಿದೆ. ತನ್ನನ್ನು ಅವಲಂಬಿಸಿದ ಜನಾಂಗಕ್ಕೆ ಇಸ್ಲಾಂ ರಕ್ಷಣೆಯನ್ನೊದಗಿಸಿದೆ. ಅವರನ್ನು ಒಂದು ಪ್ರಬಲ ಧಾರ್ಮಿಕ ಬಾಂಧವ್ಯದಲ್ಲಿ ಪರಿಣಾಮಕಾರಿಯಾಗಿ ಒಗ್ಗೂಡಿಸಿ, ಶಕ್ತರಾದ ಗುಲಾಮೀ ವ್ಯಾಪಾರಿಗಳ ಪ್ರಯತ್ನಗಳನ್ನವರು ತಮ್ಮ ಸಂಘಟಿತಕಾರ್ಯಗಳಿಂದ ವಿಫಲಗೊಳಿಸಲು ಸಹಾಯಮಾಡಿದೆ.

ಇಸ್ಲಾಮಿ ಜನ ಸಹಜವಾಗಿ ಸಾಹಸಪ್ರಿಯರು. e್ಞÁನಾಕಾಂಕ್ಷಿಗಳು. ಅರಬ್ಬೀ ಭಾಷೆಯ ಅಧ್ಯಯನದಿಂದ ಅವರು ಸಾಹಿತ್ಯಾಕಾಂಕ್ಷಿಗಳಾಗಿ ಉದಾತ್ತದೃಷ್ಟಿಯನ್ನೂ ವಿಶಾಲ ಅಭಿರುಚಿಗಳನ್ನೂ ತಮ್ಮ ನಾಸ್ತಿಕ ಸಹಜೀವಿಗಳಿಂದ ತಮ್ಮನ್ನು ಬೇರ್ಪಡಿಸುವಂಥ ಶಕ್ತಿಯುತ ಸ್ವಭಾವಗಳನ್ನೂ ಪಡೆದುಕೊಂಡರು. ಕೈರೋದಲ್ಲಿರುವ ಅಜ್ಹರ್ ವಿಶ್ವವಿದ್ಯಾಲಯದ ಮಹಾ ಮಸೀದಿಯಲ್ಲಿ ಅಧ್ಯಯನ ಮಾಡುವುದಕ್ಕಾಗಿ ವಿದ್ಯಾರ್ಥಿಗಳು ಆಫ್ರಿಕದ ಉದ್ದಕ್ಕೂ ಬರಿಗಾಲಿನಲ್ಲಿ ಪಯಣ ಮಾಡುವುದುಂಟು.

ಈಗ ಇಸ್ಲಾಮಿನ ಒಂದು ಅವಶ್ಯಾಂಗವೆಂದು ಪರಿಗಣಿತವಾಗಿರುವ ದುರ್ದಮ ಸಂಸ್ಕಾರಗಳ ವ್ಯವಸ್ಥೆಯ ಜಟಿಲ ಜಾಲವನ್ನು ಮೂಲದಲ್ಲಿ ನಾವು ಕಾಣೆವು. ಇಸ್ಲಾಂ ಒಂದು ಸರಳ ಸುಲಭವಾದ ಧರ್ಮ; ಯಾವ ಅಸ್ಪಷ್ಟತೆಯೂ ಇಲ್ಲದ್ದು.

(ಎಸ್.ಜಿ.ಎಂ.)