ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈರೋಡು
ಗೋಚರ
ಈರೋಡು ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯಲ್ಲಿರುವ ಒಂದು ಪಟ್ಟಣ, ರೈಲ್ವೆಜಂಕ್ಷನ್. ಅದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಕೊಯಮತ್ತೂರಿನಿಂದ ಈಶಾನ್ಯಕ್ಕೆ 100 ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯ ಮೇಲಿದೆ. ಜನಸಂಖ್ಯೆ 74,102 (1961). ಕೊಯಮತ್ತೂರು-ಸೇಲಂ ರೈಲು ಹಾದಿಯ ಮಧ್ಯೆ ಇರುವ ಈರೋಡಿನಿಂದ ತಿರುಚಿರಾಪಳ್ಳಿಗೆ ಒಂದು ಮಾರ್ಗ ಕವಲೊಡೆಯುತ್ತದೆ. ಈರೋಡು ವ್ಯಾಪಾರ ಹಾಗೂ ಕೈಗಾರಿಕಾ ಕೇಂದ್ರ. ನಗರದ ಸುತ್ತಣ ಪ್ರದೇಶದಲ್ಲಿ ಬೆಳೆಯುವ ಹತ್ತಿಯನ್ನು ಹಿಂಜಿ ಬೇಲುಗಳಾಗಿ ಮಾಡುವ ಕೈಗಾರಿಕೆ ಇಲ್ಲಿ ಬಲು ಹಿಂದಿನಿಂದ ಬೆಳೆದು ಬಂದಿದೆ. ಇಲ್ಲಿ ಒಂದು ತಾಂತ್ರಿಕ ಶಿಕ್ಷಣ ಕಾಲೇಜೂ ಇದೆ. ಈರೋಡಿನ ಸುತ್ತಣ ಪ್ರದೇಶ ಫಲವತ್ತಾದ್ದರಿಂದ ಇದು ನೆರೆಹೊರೆಯವರ ದಾಳಿಗಳಿಗೆ ಪದೇ ಪದೇ ತುತ್ತಾಗುತ್ತಿತ್ತು.