ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಈಸ್ಟರ್

ವಿಕಿಸೋರ್ಸ್ದಿಂದ

ಈಸ್ಟರ್ ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳು ಉಪವಾಸ ಮಾಡುತ್ತಾರೆ. ಶುಭ ಶುಕ್ರವಾರದ ಅನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ನಲಿಯುತ್ತಾರೆ. ವಿವಿಧ ರೀತಿಯಲ್ಲಿ ಅಲಂಕರಣಗೊಂಡ ಮೊಟ್ಟೆಗಳನ್ನು ಪರಸ್ಪರ ವಿನಿಮಯ ಮಾಡುವುದು ಒಂದು ರೂಢಿ. (ಎನ್.ಎಸ್.ಎಚ್.ಎ.)

ಈಸ್ಟರ್ ಹಬ್ಬ ಪೂರ್ವದ ಉಪವಾಸ: ಹಬ್ಬಕ್ಕೆ ಹಿಂದಿನ ನಲವತ್ತು ದಿನಗಳ ವ್ರತೋಪವಾಸಗಳಿಗೆ (ಲೆಂಟ್) ಕ್ರೈಸ್ತರಲ್ಲಿ ಹೆಚ್ಚಿನ ಪ್ರಾಮುಖ್ಯವಿದೆ. ಲೆಂಟ್ ಎಂದರೆ ಇಂಗ್ಲಿಷ್‍ನಲ್ಲಿ ವಸಂತವೆಂದು ಅರ್ಥ. ಈ ಕಟ್ಟಳೆ ಅದೇ ಋತುವಿನಲ್ಲಿ ಬರುತ್ತದೆ. ಈ ವ್ರತ ಬಹಳ ಪ್ರಾಚೀನವಾದುದು. ಕ್ರಿಸ್ತ ತನ್ನ ಬಹಿರಂಗ ಜೀವನವನ್ನು ಆರಂಭಿಸುವುದಕ್ಕೆ ಮುನ್ನ ನಲವತ್ತು ದಿನಗಳು ಜಪ, ಧ್ಯಾನ, ಉಪವಾಸಗಳಲ್ಲಿ ಕಳೆದಿದೆನೆಂಬ ಹೊಸ ಒಡಂಬಡಿಕೆಯ ವರದಿಯೇ ಈ ಸಂಪ್ರದಾಯಕ್ಕೆ ಮುಖ್ಯ ಹಿನ್ನಲೆ. ಈ ಅವಧಿಯಲ್ಲಿ ಕ್ರೈಸ್ತರು ಪ್ರಾಯಶ್ಚಿತ್ತ ಮನೋಭಾವದಿಂದ ಉಪವಾಸ, ದೇಹದಂಡನೆ, ಮಾಂಸಾಹಾರ ವರ್ಜನೆ ಇತ್ಯಾದಿಗಳನ್ನು ಕೈಕೊಳ್ಳಬೇಕೆಂದು ರೋಮನ್ ಚರ್ಚ್ ಬೋಧಿಸುತ್ತದೆ. ಪ್ರಾಚೀನ ಕಾಲದಲ್ಲಿ ಈ ವ್ರತದ ವಿಧಿಗಳು ತುಂಬ ಕಟ್ಟುನಿಟ್ಟಾಗಿದ್ದವು; ಇತ್ತೀಚೆಗೆ ಆಧುನಿಕ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ, ಅವನ್ನು ಸಡಿಲಿಸಲಾಗಿದೆ. ಈಗ ಉಪವಾಸ ಕೇವಲ ವಿಭೂತಿ ಬುಧವಾರ (ಆಷ್ ವೆಡ್‍ನೆಸ್‍ಡೆ) ಮತ್ತು ಶುಭ ಶುಕ್ರವಾರಗಳಿಗಷ್ಟೇ (ಗುಡ್‍ಫ್ರೈಡೆ) ಸೀಮಿತವಾಗಿದೆ. ಈ ವ್ರತದ ಅವಧಿಯ ಕೊನೆಯ ವಾರವನ್ನು ಪವಿತ್ರವಾರವೆಂದು ಪರಿಗಣಿಸಲಾಗಿದೆ.

(ಡಿ.ವಿ.ವಿ.)