ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಗಿ

ವಿಕಿಸೋರ್ಸ್ದಿಂದ

ಉಗಿ: ನೀರಿನ ಬಾಷ್ಪ (ವೇಪರ್) ಅಥವಾ ಅನಿಲರೂಪದಲ್ಲಿರುವ ನೀರು (ಸ್ಟೀಂ) ಯಂತ್ರಚಾಲನದಲ್ಲಿಯೂ ಉಷ್ಣಪುರೈಕೆಯಲ್ಲಿಯೂ ಇದರ ಬಳಕೆ ಸಾರ್ವತ್ರಿಕವಾಗಿದೆ. ನೀರು ಉಗಿಯಾಗಿ ಪರಿವರ್ತನೆಗೊಳ್ಳುವ ಉಷ್ಣತೆ ಉಗಿ ಆವಿಗೆಯ (ಬಾಯ್ಲರ್ ಅಥವಾ ಕುದಿಪಾತ್ರೆ) ಅಥವಾ ಉತ್ಪಾದಕದ (ಜನರೇಟರ್) ಒಳಗಿನ ಸಂಮರ್ದವನ್ನು ಅವಲಂಬಿಸಿದೆ. ಉತ್ಪಾದಕದ ಒಳಗೆ ಉತ್ಪನ್ನವಾಗುವ ಉಗಿಯ ಉಷ್ಣತೆಯೂ ಅಲ್ಲಿನ ನೀರಿನ ಉಷ್ಣತೆಯೂ ಸಮತೋಲದಲ್ಲಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ (ಉಗಿಯ ಉಷ್ಣತೆ = ನೀರಿನ ಉಷ್ಣತೆ) ಉಗಿ ಪರ್ಯಾಪ್ತವಾಗಿದೆ (ಸ್ಯಾಚುರೀಟೆಡ್) ಎನ್ನುತ್ತೇವೆ. ಉಗಿ ಸಂಪೂರ್ಣವಾಗಿ ಬಾಷ್ಪವೇ ಆಗಿರಬಹುದು—ಇದು ಒಣ ಉಗಿ (ಡ್ರೈ ಸ್ಟೀಮ್) ಅಥವಾ ತೇವಪುರಿತವಾಗಿರಬಹುದು—ಇದು ಆದರ್ರ್‌ ಉಗಿ(ವೆಟ್ ಸ್ಟೀಮ್): ಉಗಿಯೊಂದಿಗೆ ಇತರ ಅನಿಲಗಳು ಮಿಶ್ರಗೊಂಡಿರುವು ದುಂಟು—ಆಗ ಇದೊಂದು ಮಿಶ್ರಣ. ಸಂಮರ್ದವನ್ನು ವ್ಯತ್ಯಸ್ತಗೊಳಿಸದೆ ಉಗಿಯನ್ನು ನೀರಿನ ಸಂಪರ್ಕದಿಂದ ಬೇರ್ಪಡಿಸಿದ ತರುವಾಯ ಅದನ್ನು ಮತ್ತಷ್ಟು ಕಾಯಿಸಬಹುದು. ಇದು ಅತಿ ತಪ್ತಉಗಿ (ಸೂಪರ್ ಹೀಟೆಡ್ ಸ್ಟೀಂ). ಉಗಿಯಲ್ಲಿರುವ ಶಕ್ತಿಯನ್ನು (ಎನರ್ಜಿ) ಮೂರು ಭಾಗಗಳಾಗಿ ವಿಂಗಡಿಸಿದೆ: 1.ನೀರನ್ನು ಅದರ ಪ್ರಾರಂಭದ ತಾಪಮಾನದಿಂದ (ಸಾಮಾನ್ಯವಾಗಿ 00 ಸೆ. ಎಂದು ಆಂಗೀಕರಿಸುತ್ತೇವೆ) ಕುದಿಯುವ ತಾಪಮಾನಕ್ಕೆ ಏರಿಸಲು ಬೇಕಾಗುವ ದ್ರವದ ಎಂಥಾಲ್ಪಿ. 2. ನೀರನ್ನು ಕುದಿಯುವ ತಾಪಮಾನದಲ್ಲಿ ಉಗಿಯಾಗಿ ಪರಿವರ್ತಿಸಲು ಬೇಕಾಗುವ ಬಾಷ್ಪೀಕರಣದ ಎಂಥಾಲ್ಪಿ. 3. ಉಗಿಯನ್ನು ಅದರ ಅಂತಿಮ ತಾಪಮಾನಕ್ಕೆ ಏರಿಸುವ ಅಧಿಕೋಷ್ಣದ (ಸೂಪರ್ ಹೀಟ್) ಎಂಥಾಲ್ಪಿ (ನೋಡಿ- ಎಂಥಾಲ್ಪಿ). ಉಷ್ಣ ಶಕ್ತಿಯನ್ನು ಕಳಕೊಂಡಂತೆ ಅತಿತಪ್ತ ಉಗಿ ಆದರ್ರ್‌ವಾಗಿ ಕ್ರಮೇಣ ಬಿಸಿನೀರಾಗಿ ದ್ರವೀಕರಿಸುತ್ತದೆ. ಉಗಿಯ ತಯಾರಿ ಬಲು ಸುಲಭ; ಜನಾರೋಗ್ಯಕ್ಕೆ ಇದರಿಂದ ಹಾನಿ ಇಲ್ಲ: ಮತ್ತು ಬಳಸುವ ಪಾತ್ರೆ ಪದಾರ್ಥಗಳನ್ನು ನಾಶಗೊಳಿಸುವುದಿಲ್ಲ. ಈ ಕಾರಣಗಳಿಂದ ಶಕ್ತಿಯ ಸುಲಭ ಆಕರವಾಗಿ ಇದು ವಿಪುಲವಾಗಿ ಬಳಕೆಯಲ್ಲಿದೆ.