ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಡ

ವಿಕಿಸೋರ್ಸ್ದಿಂದ

ಉಡ: ರೆಪ್ಟೀಲಿಯ ವರ್ಗದ ವೆರಾನಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಪ್ರಾಣಿ (ಮಾನಿಟರ್ ಲಿಸರ್ಡ್) ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಇದರ ಹೆಸರು ವೆರಾನಸ್ ಬೆಂಗಾಲೆನ್ಸಿಸ್ ಇದರ ಶಾಸ್ತ್ರೀಯ ಹೆಸರು. ಭಾರತದಲ್ಲಿ ಎಲ್ಲ ಬಗೆಯ ಕಾಡು ಹಾಗೂ ಮರುಭೂಮಿಯಲ್ಲ್ಲಿ ಕಂಡುಬರುತ್ತದೆ. ಸು. 1.75 ಮೀ. ಉದ್ದ ಬೆಳೆಯುತ್ತದೆ. ಬಾಲವೇ ಸುಮಾರು ಒಂದು ಮೀ. ಉದ್ದ ಬೆಳೆಯುತ್ತದೆ. ಹಸಿರು ಅಥವಾ ಕಂದು ಬಣ್ಣದ ಈ ಉಡಕ್ಕೆ ಅಲ್ಲಲ್ಲಿ ಕಪ್ಪ್ಪು ಚುಕ್ಕೆಗಳಿರುತ್ತವೆ. ಸರೀಸೃಪ ಸುಲಭವಾಗಿ ಮರಹತ್ತಬಲ್ಲುದು ಮತ್ತು ಈಜಬಲ್ಲುದು. ಮಾಂಸಾಹಾರಿ ಸರಿಸೃಪ. ತಾನು ಹಿಡಿಯ ಬಲ್ಲ ಯಾವ ಬಗೆಯ ಪ್ರಾಣಿಯನ್ನಾದರೂ ತಿನ್ನುತ್ತದೆ. ಪಕ್ಷಿಗಳ ಮತ್ತು ಮೊಸಳೆಗಳ ಮೊಟ್ಟೆ, ಏಡಿ, ಸಣ್ಣ ಆಮೆ, ಕೀಟಗಳು ಹಾಗೂ ಪ್ರಾಣಿಗಳ ಅವಶೇಷ ಸಹ ಇದರ ಆಹಾರ ಪಟ್ಟಿಯಲ್ಲಿ ಸೇರಿದೆ. ಸಂತಾನೋತ್ಪತ್ತಿ ಸಮಯ ಏಪ್ರಿಲ್ನಿಂದ ಅಕ್ಟೋಬರ್. ಹೆಣ್ಣು ಗುಳಿ ತೋಡಿ ಮೊಟ್ಟೆ ಇಡುವುದಾದರೂ ಕೆಲವೊಮ್ಮೆ ಗೆದ್ದಲಿನ ಹುತ್ತದಲ್ಲೂ ಮೊಟ್ಟೆ ಇಡುತ್ತದೆ. ಮರಿಯಾಗಲು ಇವು 8 ರಿಂದ 9 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತದೆ. ಹೆಣ್ಣಿನ ದೇಹಗಾತ್ರವನ್ನು ಅವಲಂಬಿಸಿ 8-30 ಮೊಟ್ಟೆಗಳನ್ನು ಇಡುತ್ತದೆ.

ಮರುಭೂಮಿ ಉಡ[ಸಂಪಾದಿಸಿ]

ಭಾರತದ ಮರುಭೂಮಿಯಲ್ಲಿ ಕಂಡುಬರುವ ಮರಳು ಬೂದು ಬಣ್ಣದ ಉಡ. ವೆರಾನಸ್ ಗ್ರೀಸಿಯಸ್ ಶಾಸ್ತ್ರೀಯ ಹೆಸರು. ಬಾಲ ದುಂಡಾಗಿರುವುದು ಇದರ ವಿಶೇಷ.

ಹಳದಿ ಉಡ[ಸಂಪಾದಿಸಿ]

ಪಂಜಾಬಿನಿಂದ ಬಿಹಾರವೂ ಸೇರಿದಂತೆ ಪಶ್ಚಿಮ ಬಂಗಾಳದ ವರೆಗೆ ಕಂಡುಬರುವ ಉಡ. ವೆರಾನಸ್ ಫ್ಲಾವೆಸ್ಕೆನ್ಸ್‌ ಶಾಸ್ತ್ರೀಯ ನಾಮ. ಹಳದಿ ಅಥವಾ ಹಳದಿ ಮಿಶ್ರಿತ ಕಂದು ಬಣ್ಣದ ಉಡ. ಮಳೆಗಾಲದಲ್ಲಿ ಇದರ ಮೈಮೇಲಿನ ಪಟ್ಟೆಗಳು ನಿಚ್ಚಳವಾಗಿ ಕಾಣುತ್ತದೆ. ಇದರ ಕಡಿತ ವಿಷಕಾರಿ ಎಂದು ಹೇಳಲಾಗುತ್ತದೆ.

ನೀರಿನ ಉಡ[ಸಂಪಾದಿಸಿ]

ಭಾರತದ ಉಡಗಳಲ್ಲೇ ದೊಡ್ಡದಾದ ನೀರಿನ ಉಡ; ಸುಮಾರು 2.5 ಮೀ. ಉದ್ದ ಬೆಳೆಯುತ್ತದೆ. ವೆರಾನಸ್ ಸಾಲ್ವೇಟರ್ ಶಾಸ್ತ್ರೀಯ ಹೆಸರು. ಒಡಿಶಾ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ ಹಾಗೂ ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತದೆ. ಭಾರತವಲ್ಲದೆ ಶ್ರೀಲಂಕದಲ್ಲೂ ಕಂಡುಬರುತ್ತದೆ. ಕಪ್ಪೆ ಹಾಗೂ ಮೊಟ್ಟೆಗಳು ಇದರ ಮೆಚ್ಚಿನ ಆಹಾರ. ನೀರಿನ ಉಡವಾದರೂ ಸುಲಭವಾಗಿ ಮರ ಹತ್ತುತ್ತದೆ. ದಡದಲ್ಲಿ, ಮರದ ಪೊಟರೆ ಅಥವಾ ಹುತ್ತದಲ್ಲಿ 25-30 ಮೊಟ್ಟೆಗಳನ್ನು ಇಡುತ್ತದೆ. (ಎಚ್.ಬಿ.ಡಿ.)