ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಣ್ಣಿ

ವಿಕಿಸೋರ್ಸ್ ಇಂದ
Jump to navigation Jump to search

ಉಣ್ಣಿ: ಸಂಧಿಪದಿ ವಂಶದ ಅರಾಕ್ನಿಡಾ ವರ್ಗದ ಪರೋಪಜೀವಿ. ದನಕರುಗಳು, ಎಮ್ಮೆ, ಕುರಿ, ನಾಯಿ, ಕೋಳಿ ಮುಂತಾದ ಸಾಕುಪ್ರಾಣಿಗಳ ರೋಮ, ಗರಿಗಳಿಗೆ ಕಚ್ಚಿಕೊಂಡಿದ್ದು ಅವುಗಳ ರಕ್ತಹೀರಿ ಬದುಕುತ್ತದೆ. ಉಣ್ಣಿಯ ಚಟುವಟಿಕೆಯಿಂದ ರೋಗಗಳು ಹರಡುತ್ತವೆ. ಹೀಗಾಗಿ ಇದು ಮನುಷ್ಯರ ಮತ್ತು ಪ್ರಾಣಿಗಳ ವೈರಿ. ಇದರ ಚರ್ಮದ ಮೇಲೆ ರಕ್ಷಣಾಪೊರೆ (ಕ್ಯೂಟಿಕಲ್) ಇದೆ. ಈ ಪೊರೆಗೆ ಹಿಗ್ಗುವ ಮತ್ತು ಕುಗ್ಗುವ ಶಕ್ತಿಯಿದೆ. ಗಂಡಿಗಿಂತ ಹೆಣ್ಣಿಗೆ ಶಕ್ತಿ ಹೆಚ್ಚು. ಆಶ್ರಯದಾತ ಜೀವಿಯ ರಕ್ತಹೀರಿ ಅದನ್ನು ಶೇಖರಿಸಿಟ್ಟು ಕೊಳ್ಳಲು ಹೆಣ್ಣು ಉಣ್ಣಿಯ ಜೀರ್ಣಾಂಗದಲ್ಲಿ ವಿಚಿತ್ರ ರೀತಿಯ ಚೀಲಗಳಿವೆ. ಚೆನ್ನಾಗಿ ರಕ್ತ ಕುಡಿದಾಗ ಹೆಣ್ಣು ದುಂಡಗೆ ಕಾಳಿನಂತಾಗುತ್ತದೆ. ಉಣ್ಣಿಯ ಶರೀರದಲ್ಲಿ ಶಿರ ಮತ್ತು ಎದೆಗಳೆರಡೂ ಒಂದುಗೂಡಿದಂತಿದ್ದು ಒಂದೇ ಭಾಗದಂತಿದೆ. ಇದರ ಹೆಸರು ಎದೆಶಿರ (ಸೆಫಾಲೊತೊರಾಕ್ಸ್‌). ಉಳಿದ ಭಾಗವೇ ಉದರ. ಇದು ಎದೆಶಿರದಿಂದ ಬೇರೆ. ಎದೆಶಿರದಲ್ಲಿ ಚಲಿಸಬಲ್ಲ ಶಿರದ ಮುಂಭಾಗ ಉಂಟು. ಇಲ್ಲಿ ಒಂದು ಜೊತೆ ಹರಿತವಾದ ದವಡೆಗಳು ಇರುವ ವದನಾಂಗಗಳಿವೆ. ದವಡೆಗಳ ಪಕ್ಕದಲ್ಲಿ ಗಟ್ಟಿಯಾದ ಕಾಲಿನಂತಿರುವ ಒಂದು ಜೊತೆ ಸ್ಪರ್ಶೇಂದ್ರಿಯಗಳಿವೆ. ಇವನ್ನು ಪ್ಯಾಲ್ಪಿಗಳೆನ್ನುತ್ತಾರೆ. ಬಾಯ ಮುಂಭಾಗದಲ್ಲಿ ಚೂಪಾದ ಹೈಪೊಸ್ಟೋಮ್ ಎಂಬ ಅಂಗವಿದೆ. ಇದರಲ್ಲಿ ನಾನಾ ವೃತ್ತಗಳಲ್ಲಿ ಒಂದರ ಹಿಂದೆ ಒಂದರಂತೆ ಜೋಡಿಸಿಕೊಂಡಿರುವ ಸೂಕ್ಷ್ಮವಾದ ಮೊನೆಯಾದ ಮುಳ್ಳುಗಳಿವೆ. ಇವು ಹಿಂದಕ್ಕೆ ಬಾಗಿದಂತಿದ್ದು ಆಶ್ರಯದಾತ ಜೀವಿಯ ಮಾಂಸಖಂಡವನ್ನು ಕೊರೆಯಲು ಮತ್ತು ಅದನ್ನು ಭದ್ರವಾಗಿ ಹಿಡಿಯಲು ಅನುಕೂಲತೆ ಕಲ್ಪಿಸುತ್ತವೆ. ಆದ್ದರಿಂದ ದನಕರುಗಳನ್ನು ಕಚ್ಚಿಕೊಂಡಿರುವ ಉಣ್ಣಿಯನ್ನು ಬಲವಾಗಿ ಎಳೆದರೆ ಅದರ ಹೈಪೊಸ್ಟೋಮ್ ಭಾಗ ಮಾಂಸಖಂಡವನ್ನು ತೀವ್ರವಾಗಿ ಗಾಯಗೊಳಿಸುತ್ತದೆ. ಅಲ್ಲದೆ ಇದು ಮುರಿದುಹೋಗಿ ಅಲ್ಲಿಯೇ ಉಳಿದು ಮುಂದೆ ಆ ಭಾಗದಲ್ಲಿ ದೊಡ್ಡ ವ್ರಣವಾಗುತ್ತದೆ.

ಉಣ್ಣಿಗೆ ಎಂಟು ಕಾಲುಗಳಿವೆ. ಅವೆಲ್ಲವೂ ಸಂದಿಪಾದಗಳಾಗಿವೆ. ಎದೆಶಿರ ಮತ್ತು ಉದರದ ಸ್ವಲ್ಪಭಾಗದಲ್ಲಿ ಗಟ್ಟಿಯಾದ ಕವಚದಂತಿರುವ ಮುಚ್ಚಳ ಇದೆ. ದೇಹದ ತಳಭಾಗದಲ್ಲಿ ಜನನೇಂದ್ರಿಯ ರಂಧ್ರ ಮತ್ತು ಗುದದ್ವಾರ ಇವೆ. ರಂಧ್ರದ ಸ್ಥಾನ ಶಿರದ ಹಿಂತುದಿಯಲ್ಲಿ, ದ್ವಾರದ ಸ್ಥಾನ ಹಿಂತುದಿಯಿಂದ ಸ್ವಲ್ಪ ಮುಂದಕ್ಕೆ ಉದರ ಭಾಗದಲ್ಲಿ. ಉಸಿರಾಟಕ್ಕೆ ಬೇಕಾದ ರಂಧ್ರಗಳು ನಾಲ್ಕನೆಯ ಪಾದದ ಬುಡದ ಹತ್ತಿರದಲ್ಲಿನ ತಟ್ಟೆಗಳಂಥ ರಚನೆಗಳಲ್ಲಿವೆ. ಶಿರದ ಮೇಲುಗಡೆ ಚಿಕ್ಕ ಚಿಕ್ಕ ಗಟ್ಟಿಯಾದ ರೋಮಗಳಂಥ ರಚನೆಯನ್ನಾಗಲೀ ತಟ್ಟೆಗಳಂಥ ಕವಚಗಳನ್ನಾಗಲೀ ಕಾಣಬಹುದು. ಪ್ರಾಣಿಯ ತಳಭಾಗದಲ್ಲಿಯೂ ಇಂಥ ತಟ್ಟೆಗಳು ಮತ್ತು ಸೂಕ್ಷ್ಮ ಕಾಲುವೆಗಳಂಥ ರಚನೆಗಳು ಕಂಡುಬರುತ್ತವೆ. ಈ ರೀತಿಯ ರಚನೆಗಳು ಉಣ್ಣಿಗಳ ವರ್ಗೀಕರಣಕ್ಕೆ ಬಲು ಸಹಾಯಕ.

ನಿವಾಸ ಮತ್ತು ಜೀವನಚರಿತ್ರೆ[ಸಂಪಾದಿಸಿ]

ಎಲ್ಲ ಉಣ್ಣಿಗಳೂ ತಮ್ಮ ಜೀವಮಾನದ ಕೆಲವು ಭಾಗವನ್ನು ಪರಾಶ್ರಯದಲ್ಲಿಯೇ ಕಳೆಯುತ್ತವೆ. ಸಾಮಾನ್ಯವಾಗಿ ಬಹಳ ಪ್ರಭೇದಗಳು ಸ್ತನಿಗಳಲ್ಲಿ ಪರೋಪಜೀವಿಗಳಾಗಿ ವಾಸಿಸುವುದುಂಟು. ಆದರೆ ಕೆಲವು ಪ್ರಭೇದಗಳು ಪಕ್ಷಿಗಳು, ಬಾವಲಿ, ಹಾವು, ಹಲ್ಲಿ ಮುಂತಾದ ಪ್ರಾಣಿಗಳನ್ನು ಆಶ್ರಯಿಸಿ ಜೀವನ ನಡೆಸುತ್ತವೆ. ಕೆಲವು ನಿರ್ದಿಷ್ಟವಾಗಿ ಒಂದೇ ರೀತಿಯ ಆಶ್ರಯದಾತನನ್ನು ಹೊಂದಿದ್ದರೆ ಮತ್ತೆ ಕೆಲವಕ್ಕೆ ಆ ರೀತಿಯ ಕಟ್ಟುಪಾಡುಗಳು ಕಂಡುಬರುವುದಿಲ್ಲ. ಉಣ್ಣಿಗಳಲ್ಲಿ ಎರಡು ಕುಟುಂಬಗಳಿವೆ. ಮೊದಲನೆಯದು ಇಕ್ಸೊಡಿಡೆ, ಎರಡನೆಯದು ಅರ್ಗಾಸಿಡೆ.

ಇಕ್ಸೊಡಿಡೆ ಕುಟುಂಬದ ಇಲ್ಲ ಉಣ್ಣಿಗಳ ಜೀವನಚರಿತ್ರೆಯೂ ಸಾಮಾನ್ಯವಾಗಿ ಒಂದೇ ತೆರ. ಸಂಭೋಗಕ್ರಿಯೆಯಾದ ಕೆಲವು ದಿವಸಗಳ ಮೇಲೆ ಹೆಣ್ಣು ಉಣ್ಣಿ ಆಶ್ರಯದಾತನ ಶರೀರದಿಂದ ಬೇಕಾದಷ್ಟು ರಕ್ತಹೀರಿ ಭೂಮಿಗೆ ಬಿದ್ದು ಮೊಟ್ಟೆಯಿಡಲು ಉಪಕ್ರಮಿಸುತ್ತದೆ. ಮೊಟ್ಟೆಗಳನ್ನು ಭೂಮಿಯ ಮೇಲಾಗಲೀ ಒಂದು ಚಿಕ್ಕಗುಂಡಿ ತೋಡಿ ಅದರೊಳಗಾಗಲೀ ಇಡುತ್ತದೆ. ಒಂದು ಸಲಕ್ಕೆ ಇಡುವ ಮೊಟ್ಟೆಗಳ ಸಂಖ್ಯೆ ನೂರರಿಂದ ಹತ್ತು ಸಾವಿರದವರೆಗೆ. ಸೂರ್ಯನ ಶಾಖದಿಂದ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಇದಕ್ಕೆ ಬೇಕಾದ ಕಾಲಾವಕಾಶ 2-3 ವಾರಗಳು. ಆದರೆ ಚಳಿಗಾಲದಲ್ಲಿಟ್ಟ ಮೊಟ್ಟೆಗಳು ಬೇಸಗೆ ಕಾಲದ ವರೆಗೂ ಒಡೆಯುವುದೇ ಇಲ್ಲ. ಮೊಟ್ಟೆಯೊಡೆದು ಹುಟ್ಟಿ ಬಂದ ಎಳೆಯ ಜೀವಿಗಳ ಹೆಸರು ಲಾರ್ವಾಗಳು. ಇವನ್ನು ಸುಲಭವಾಗಿ ಗುರುತಿಸಬಹುದು. ಇವಕ್ಕೆ ಕೇವಲ ಆರು ಕಾಲುಗಳಿದ್ದರೆ ವಯಸ್ಕ ಉಣ್ಣಿಗೆ ಎಂಟು ಕಾಲುಗಳಿವೆ. ಲಾರ್ವಾಗಳು ಹುಲ್ಲಿನ ಎಸಳುಗಳ ಮೇಲೆ ಕುಳಿತುಕೊಂಡು ಆಶ್ರಯದಾತ ಜೀವಿಯ ಬರುವಿಕೆಗೆ ಕಾಯುತ್ತವೆ. ಬಂದರೆ ಮುಂದಿನ ಕ್ರಿಯೆ ಆರಂಭ. ಇಲ್ಲವಾದರೆ ಸಾಯುತ್ತವೆ. ಹೀಗೆ ಕಾಯುತ್ತಿರುವಾಗ ಕುಳಿತಿರುವ ಹುಲ್ಲಿನ ಎಸಳುಗಳೇನಾದರೂ ಅಲುಗಾಡಿದರೆ ಕೂಡಲೇ ಅವು ನಿಮಿರಿ ಬೇಕಾದ ಆಶ್ರಯದಾತನ ಶರೀರಕ್ಕೆ ಫಕ್ಕನೆ ಅಂಟಿಕೊಂಡುಬಿಡುತ್ತವೆ. ಅಲ್ಲಿಂದ ರಕ್ತಹೀರಿ ಆ ಮರಿಗಳು ಬೆಳೆಯುತ್ತವೆ. ಚೆನ್ನಾಗಿ ರಕ್ತಕುಡಿದು ಆಶ್ರಯದಾತನ ಶರೀರದಿಂದ ಇವು ಕೆಳಗೆ ಬಿದ್ದುಹೋಗುತ್ತವೆ. ಅಲ್ಲಿ ಯಾವುದಾದರೊಂದು ಕಲ್ಲಿನ ಅಥವಾ ಇತರ ವಸ್ತುವಿನ ಮರೆಯಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಒಂದೆರಡು ವಾರ ಹೀಗೆ ಕಳೆದು ಮುಂದೆ ಪೊರೆ ಬಿಡಲಾರಂಭಿಸುತ್ತವೆ. ಆಗ ಹೊಸ ಚರ್ಮ ಬೆಳೆಯುತ್ತದೆ. ಈ ಮಧ್ಯೆ ಶರೀರದೊಳಗೆ ಅಂಗಗಳಲ್ಲಿ ಪರಿವರ್ತನೆಗಳು ನಡೆಯುತ್ತವೆ. ಕಡೆಯಲ್ಲಿ ಈ ಜೀವಿಗಳಿಗೆ ಇನ್ನೊಂದು ಜೊತೆ ಕಾಲುಗಳು ಹುಟ್ಟಿ ಒಟ್ಟು ಎಂಟುಕಾಲುಗಳಾಗುತ್ತವೆ. ಆದರೂ ಜನನೇಂದ್ರಿಯಗಳು ಬೆಳೆದಿರುವುದಿಲ್ಲ. ಈ ರೀತಿಯ ಅಪ್ರೌಢ ಜೀವಿಯ ಹೆಸರು ನಿಂಫ್. ಇವು ಮತ್ತೆ ಹುಲ್ಲು ಮತ್ತು ಗಿಡಬಳ್ಳಿಗಳನ್ನು ಹತ್ತಿ ತಮಗೆ ಆಶ್ರಯ ಕೊಡಬಲ್ಲ ಜೀವಿಗಳನ್ನು ಕಾಯುತ್ತ ಕುಳಿತುಕೊಳ್ಳುತ್ತವೆ. ಇದು ಎರಡನೆಯ ನಿರಶನವ್ರತ. ಆಶ್ರಯದಾತ ಆ ಕಡೆ ಬಂದಾಗ ಅದರ ಮೈಗೆ ಅಂಟಿಕೊಂಡು ಮತ್ತೆ ಆಹಾರಸೇವನೆ ಪ್ರಾರಂಭಿಸುತ್ತವೆ. ಚೆನ್ನಾಗಿ ರಕ್ತಕುಡಿದು ಕೆಲಕಾಲದಲ್ಲಿಯೇ ಮತ್ತೆ ನೆಲಕ್ಕೆ ಬಿದ್ದು ಹೋಗುತ್ತವೆ. ಕೆಲವು ವಾರಗಳನ್ನು ಕಳೆದು ಪೊರೆ ಬಿಡುತ್ತವೆ. ಇಷ್ಟರಲ್ಲಿ ಇವುಗಳ ಶರೀರದೊಳಗೆ ಜನನೇಂದ್ರಿಯಗಳು ಬೆಳೆದಿರುತ್ತವೆ. ಇಲ್ಲಿಗೆ ಉಣ್ಣಿ ಪ್ರೌಢಾವಸ್ಥೆಗೆ ತಲುಪುತ್ತದೆ. ಇಂಥ ಉಣ್ಣಿಗಳು ಮತ್ತೆ ಆಶ್ರಯದಾತನನ್ನು ಕಾಯುತ್ತ ಕುಳಿತುಕೊಳ್ಳುತ್ತವೆ. ಈ ಗುಂಪಿನಲ್ಲಿ ಹೆಣ್ಣು ಗಂಡುಗಳೆರಡೂ ಇರುತ್ತವೆ. ಕಾಯುವ ಕಾಲದಲ್ಲಿಯೇ ಸಂಭೋಗ ಕ್ರಿಯೆಯೂ ನಡೆದುಹೋಗುತ್ತದೆ. ಹೀಗೆ ಬೆಳೆದ ಉಣ್ಣಿಗಳು ಆಶ್ರಯ ಕೊಡುವವರ ಶರೀರವನ್ನು ತಲುಪಿ ಅದರ ಚರ್ಮಕ್ಕೆ ನೇತುಬೀಳುತ್ತವೆ. ಈಗ ರಾಕ್ಷಸಿಯಂತೆ ಹೆಣ್ಣು ರಕ್ತಹೀರಲಾರಂಭಿ ಸುತ್ತದೆ. ಚೆನ್ನಾಗಿ ಕುಡಿದ ಒಂದು ಹೆಣ್ಣು ಒಂದು ಗಜ್ಜುಗದ ಗಾತ್ರಕ್ಕಿರುವುದೂ ಉಂಟು.

ಉಣ್ಣಿಯ ಕೆಲವು ಪ್ರಭೇದಗಳಲ್ಲಿ ಗಂಡು ಪರೋಪಜೀವಿಯಲ್ಲ ಜೊತೆಗೆ ಗಂಡಿಗೆ ಹೆಣ್ಣಿಗಿಂತ ಚಿಕ್ಕದಾದ ಮತ್ತು ವಿಭಿನ್ನ ರೀತಿಯ ವದನಾಂಗಗಳಿವೆ. ಉಣ್ಣಿಗಳ ಎಲ್ಲ ಪ್ರಭೇದಗಳಲ್ಲೂ ಗಂಡು ಸಂಭೋಗ ಕ್ರಿಯೆಯಾದ ಸ್ವಲ್ಪಕಾಲದಲ್ಲಿಯೇ ಸತ್ತುಹೋಗುತ್ತದೆ. ಲಾರ್ವಾಗಳು ಆಹಾರವಿಲ್ಲದೆ ಆರು ತಿಂಗಳವರೆಗೂ ಬದುಕಬಲವು. ಮುಚ್ಚಳ ಹಾಕಿದ ಸೀಸೆಯೊಳಗಿದ್ದ ವಯಸ್ಕ ಉಣ್ಣಿಗಳು ಐದು ವರ್ಷಗಳವರೆಗೆ ಆಹಾರವಿಲ್ಲದೆ ಉಳಿದಿವೆ. ಆದರೆ ಪ್ರತಿಯೊಂದು ಉಣ್ಣಿಯ ಪ್ರಭೇದದಲ್ಲೂ ಜೀವನಚರಿತ್ರೆ ಮೇಲೆ ಹೇಳಿದ ರೀತಿಯಲ್ಲಿಯೇ ನಡೆಯುವುದಿಲ್ಲ. ಕೆಲವಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.

ಆರ್ಗಾಸಿಡೆ ಕುಟುಂಬಕ್ಕೆ ಸೇರಿದ ಉಣ್ಣಿಗಳ ಜೀವನಚರಿತ್ರೆಯೇ ಮತ್ತೊಂದು ಬಗೆ. ಇವು ಆಶ್ರಯದಾತ ಜೀವಿಯ ಶರೀರದ ಬದಲು ಆ ಜೀವಿ ವಾಸಿಸುವ ಗೂಡುಗಳಲ್ಲಿನ ಬಿಲಗಳಲ್ಲಿ ಇರುತ್ತವೆ. ಇಲಿಯ ಬಿಲ, ಮೊಲದ ಗೂಡು, ಕೋಳಿಯ ಗೂಡುಗಳಲ್ಲಿ ಇವು ಹೆಚ್ಚು. ಆಶ್ರಯದಾತ ಗೂಡು ಸೇರಿದಾಗ ಅದರ ಮೈಗಂಟಿ ರಕ್ತ ಹೀರುವುದು ಇವುಗಳ ಗುಣ. ರಕ್ತಹೀರಿ ಕೇವಲ ಹತ್ತು ಮಿನಿಟುಗಳಲ್ಲಿ ಕೆಳಗೆ ಬೀಳುತ್ತವೆ. ಆದರೆ ಕೆಲವು ಜೀವಿಗಳಲ್ಲಿ ಕೆಳಗೆ ಬೀಳಲು ಹಲವು ದಿವಸಗಳೇ ಬೇಕು. ಆದ್ದರಿಂದ ಇವು ಆಶ್ರಯದಾತರಿಂದ ದೂರ ಹೋಗಲು ಸಾಧ್ಯವೇ ಇಲ್ಲ. ಹೆಣ್ಣು ಆರ್ಗಾಸಿಡೆ ಸಾಮಾನ್ಯವಾಗಿ ಸಂಭೋಗಾನಂತರ ಒಂದು ವಾರದಲ್ಲಿ ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡಲು ತೊಡಗುವುದು. ಅವು ಐವತ್ತರಿಂದ ನೂರಾರು ಇರಬಹುದು. ಒಂದು ಗುಂಪಿನ ಮೊಟ್ಟೆಗಳಿಗೂ ಮತ್ತೊಂದು ಗುಂಪಿನ ಮೊಟ್ಟೆಗಳಿಗೂ ಎರಡರಿಂದ ನಾಲ್ಕು ತಿಂಗಳ ಅಂತರವಿರುವುದು. ಅಥವಾ ಕೆಲವು ಪ್ರಭೇದಗಳಲ್ಲಿ ಹೆಣ್ಣು ಕೆಲವು ತಿಂಗಳುಗಳು ಕಳೆದಮೇಲೆ ಮೊಟ್ಟೆಯಿಡಲು ಪ್ರಾರಂಭಿಸುತ್ತದೆ. ಮೊಟ್ಟೆಗಳು ಆಶ್ರಯದಾತನ ವಾಸಸ್ಥಾನದಲ್ಲಿ ಅಥವಾ ಓಡಾಡುವೆಡೆಗಳಲ್ಲಿ ಇರುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಆಶ್ರಯ ಕೊಡುವ ಜೀವಿ ಸುಲಭವಾಗಿ ಸಿಕ್ಕುತ್ತದೆ. ಕೆಲವು ಪ್ರಭೇದಗಳ ಲಾರ್ವಾಗಳು ಪೊರೆ ಬಿಡುವುದಕ್ಕೆ ಮುಂಚೆಯೂ ಪೊರೆ ಬಿಟ್ಟಮೇಲೆಯೂ ಚೆನ್ನಾಗಿ ರಕ್ತ ಹೀರುತ್ತವೆ. ಮತ್ತ ಕೆಲವು ಲಾರ್ವಾಗಳು ಆಹಾರ ಸೇವನೆಯಿಲ್ಲದೇ ಪೊರೆಬಿಟ್ಟು ನಿಂಫ್ಗಳಾಗಿ ಆಹಾರ ಸೇವಿಸಲುಪಕ್ರಮಿಸುತ್ತವೆ. ಇವು 2-5 ಬಾರಿ ಪೊರೆ ಬಿಡುವುದುಂಟು. ಮರಿ ಹೊರ ಬಂದಂದಿನಿಂದ ವಯಸ್ಕ ಜೀವಿಯಾಗಲು 3-12 ತಿಂಗಳುಗಳಾಗಬೇಕು. ಇಂಥವು ಆಹಾರ ತೆಗೆದುಕೊಳ್ಳದೆ 5-7 ವರ್ಷಗಳವರೆಗೆ ಬುದುಕುತ್ತವೆ.

ಉಣ್ಣಿಗಳು ತರುವ ರೋಗಗಳು: ದನಕರುಗಳಲ್ಲಿ ಸಾಕುಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಉಣ್ಣಿಗಳು ರೋಗಗಳನ್ನು ಹರಡುತ್ತವೆ. ಮರುಕಲಿಜ್ವರ ತರುವ ಸ್ಟೈರೊಖೀಟ ಜೀವಾಣುಗಳು, ಚುಕ್ಕೆ ಜ್ವರ ಮುಂತಾದ ರೋಗಗಳನ್ನು ತರುವ ರಿಕೆಟ್ಸಿಯ ಜೀವಿಗಳು ಹರಡುವುದು ಮುಖ್ಯವಾಗಿ ಉಣ್ಣಿಗಳಿಂದಲೇ. ಇದಲ್ಲದೆ ಬಾಬೆಸ್ಸಿಡೆ ಮತ್ತು ಅನಪ್ಲಾಸ್ಮ ಮತ್ತು ಟುಲರೋಮಿಯ ಮುಂತಾದ ಕಾಯಿಲೆಗಳನ್ನು ತರುವ ಬ್ಯಾಕ್ಟೀರಿಯಗಳು ಹರಡುವುದು ಸಹ ಉಣ್ಣಿಗಳಿಂದಲೇ. ಕೆಲವು ಜೀವಾಣುಗಳೂ ಉಣ್ಣಿಗಳಿಂದಾಗಿ ಒಂದು ಪ್ರಾಣಿಯಿಂದ ಮತ್ತೊಂದಕ್ಕೆ ಹರಡುತ್ತ ವೆಂದು ಇತ್ತೀಚೆಗೆ ತಿಳಿದುಬಂದಿದೆ. ಕುರಿಗಳಿಗೆ ಬರುವ ಲ್ಯೂಪಿಂಗ್ ರೋಗಕ್ಕೆ ಕಾರಣವಾದ ವೈರಸ್ಸುಗಳು ಉಣ್ಣಿಗಳಿಂದಲೇ ಹರಡುತ್ತವೆ.

ಉಣ್ಣಿ ರಕ್ತಹೀರುವುದರಿಂದಾಗುವ ಅನಾಹುತವೇನೂ ಕಡಿಮೆಯಿಲ್ಲ. ಮಿತಿಮೀರಿದಾಗ ಆಶ್ರಯ ನೀಡಿದ ಪ್ರಾಣಿ ಬದುಕುವುದೇ ಅಸಾಧ್ಯವಾಗಬಹುದು. ಕಾರಣ ರಕ್ತಹೀನತೆ. ಜೆಲ್ಲಿಸನ್ಸ್‌ ಮತ್ತು ಖೋಸ್ ಹೇಳಿರುವ ಪ್ರಕಾರ 60-80 ಹೆಣ್ಣು ಉಣ್ಣಿಗಳು ಒಂದು ಮೊಲವನ್ನು 5-7 ದಿನಗಳ ಅವಧಿಯಲ್ಲಿ ಕೊಂದವು (1938). ರಕ್ತಹೀರುವುದರ ಜೊತೆಗೆ ಉಣ್ಣಿ ಬಿಡುವ ವಿಷ ಪದಾರ್ಥವೂ ಇದಕ್ಕೆ ಕಾರಣ. ಶ್ಜೂಹಾರ್ಥ್‌ ಎಂಬ ವಿಜ್ಞಾನಿ 1950ರಲ್ಲಿ ತಾನು ಸಾಕಿದ್ದ ಉಣ್ಣಿಗಳ ಪಂಜರದೊಳಕ್ಕೆ ಇಲಿಗಳನ್ನು ಬಿಟ್ಟ. ಇಲಿಗಳು ಕೇವಲ ಮೂರು ಗಂಟೆಗಳಲ್ಲಿಯೇ ಸತ್ತುಬಿದ್ದವು. ಉಣ್ಣಿ ಎಲ್ಲಿಯೇ ಇದ್ದರೂ ಅದರ ಆಹಾರ ರಕ್ತ. ಹಸುವಿನ ಕೆಚ್ಚಲಿನ ಮೇಲಿದ್ದರೂ ಅದು ಹೀರುವುದು ರಕ್ತವನ್ನೇ. ಸರ್ವಜ್ಞಕವಿ “ಉಣ್ಣಿ ಕೆಚ್ಚಲೊಳಿದ್ದು ಉಣ್ಣದದು ನೊರೆಹಾಲು” ಎಂದು ಸುಂದರವಾಗಿ ಉಣ್ಣಿಯ ಚಿತ್ರಣ ನೀಡಿದ್ದಾನೆ. 1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ ಉಣ್ಣಿಗಳಿಂದ ಹರಡಿತು. ರೋಗಕಾರಕ ವೈರಸ್ಸನ್ನು ಹರಡಲು ಉಣ್ಣಿಗಳು ಮಧ್ಯವರ್ತಿಗಳ ಪಾತ್ರ ವಹಿಸುವುವು. (ಎಲ್.ಎಸ್.ಜಿ.)