ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರರಾಮಚರಿತೆ

ವಿಕಿಸೋರ್ಸ್ದಿಂದ

ಉತ್ತರರಾಮಚರಿತೆ: ಭವಭೂತಿ ಕವಿ ಕೃತ (ಸು. 700) ಮೂರು ನಾಟಕಗಳ ಲ್ಲೊಂದು. ಅವುಗಳಲ್ಲಿ ಆತ್ಯುತ್ಕೃಷ್ಟ ಕೃತಿಯೆಂದು ಖ್ಯಾತಿವೆತ್ತಿದೆ. ಏಳಂಕದ ಈ ನಾಟಕಕ್ಕೆ ರಾಮಕಥೆ ಮೂಲವಾದರೂ ಖಚಿತವಾದ ಯಾವ ಮೂಲದಿಂದ ಕವಿ ವಸ್ತುವನ್ನು ಆರಿಸಿಕೊಂಡಿದ್ದಾನೆಂದು ಹೇಳಲು ಬಾರದು. ಏಕೆಂದರೆ ರಾಮಾಯಣ ಕಥೆ ಮಹಾಭಾರತ, ಬ್ರಹ್ಮ, ಗರುಡ, ಪದ್ಮ, ಸ್ಕಾಂದ, ಅಗ್ನಿ, ಕೂರ್ಮ, ಭಾಗವತ ಮೊದಲಾದ ಪುರಾಣೇತಿಹಾಸ ಗಳಲ್ಲೂ ಬರುತ್ತದೆ. ಅಲ್ಲದೆ ಜೈನ, ಬೌದ್ಧ ರಾಮಾಯಣಗಳು ಬೇರೆ ಇವೆ. ಇವುಗಳಲ್ಲಿ ಯಾವುವು ಭವಭೂತಿಗಿಂತ ಹಿಂದಿನವು ಎಂದು ಗುರುತಿಸುವುದೂ ಕಷ್ಟ. ಹೀಗಾಗಿ ಭವಭೂತಿ ಯಾವ ಮೂಲವನ್ನು ಅನುಸರಿಸಿದ್ದಾನೆಂದು ಹೇಳುವುದು ಸಾಧ್ಯವಾಗಿಲ್ಲ. ಪ್ರಾಯಃ ಭಾಸನಂತೆ ಈತನೂ ಪುರಾಣಕ್ಕಿಂತ ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ತನ್ನ ನಾಟಕಗಳನ್ನು ಬರೆದನೆಂದೂ ವ್ಯತ್ಯಾಸವಿರುವ ಕಡೆ ಅದು ಕವಿಕಲ್ಪಿತವೆಂದೂ ಹೇಳಬಹುದು. ಉತ್ತರರಾಮಚರಿತೆ ಕವಿಯ ಕೊನೆಯ ನಾಟಕವಾಗಿರಬಹುದು. ಕಥೆ ಹೀಗಿದೆ: ಪೂರ್ಣ ಗರ್ಭಿಣಿಯಾದ ಸೀತೆಯನ್ನು ರಾಮನೊಡನೆ ಬಿಟ್ಟು ಉಳಿದೆಲ್ಲ ಬಂಧುಬಳಗದವರು ಯಜ್ಞವನ್ನು ನೋಡಲು ಋಷ್ಯಶೃಂಗಾಶ್ರಮಕ್ಕೆ ಹೋಗುತ್ತಾರೆ. ಇತ್ತ ಸತಿಪತಿಯರು ರಾಮಾಯಣದ ಚಿತ್ರಪಟಗಳನ್ನು ನೋಡುತ್ತ ಆಯಾಸ ಕಳೆದುಕೊಳ್ಳುತ್ತಾರೆ. ಹಾಗೆಯೇ ಸೀತೆ ನಿದ್ರೆಹೋಗುತ್ತಾಳೆ. ಗೂಢಚಾರ ದುರ್ಮುಖ ಅದೇ ಹೊತ್ತಿನಲ್ಲಿ ಬಂದು ಸೀತಾ ವಿಷಯಕವಾದ ಜನಾಪವಾದವನ್ನು ತಿಳಿಸುತ್ತಾನೆ. ಇನ್ನು ಸೀತೆಯನ್ನು ಬಿಟ್ಟುಬಿಡುವುದೊಳಿತೆಂದು ನಿಶ್ಚಯಿಸಿ ಶ್ರೀರಾಮ ಅವಳನ್ನು ವನಕ್ಕೆ ಕರೆದುಕೊಂಡು ಹೋಗಲು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. ಋಷ್ಯಾಶ್ರಮಕ್ಕೆ ಹೋಗಬೇಕೆಂಬ ತನ್ನ ಹಳೆಯ ಬಯಕೆ ಕೈಗೂಡಿತೆಂದು ಸೀತೆ ಹೋಗುತ್ತಾಳೆ. ಪಂಚವಟಿಯಲ್ಲಿ ಅತ್ರೇಯಿ ವಾಸಂತಿಯರ ಸಂಭಾಷಣೆಯಿಂದ ಎರಡನೆಯ ಅಂಕ ಪ್ರಾರಂಭವಾಗುತ್ತದೆ. ವಾಲ್ಮೀಕಿ ಋಷಿಯ ಆಶ್ರಮದಲ್ಲಿ ಲವಕುಶರ ಬೆಳವಣಿಗೆ, ವಿದ್ಯಾಭ್ಯಾಸ, ಜೃಂಭಕಾಸ್ತ್ರಗಳ ಸಿದ್ಧಿ, ರಾಮಾಯಣದ ರಚನೆ, ಹಿರಣ್ಮಯೀ ಸೀತೆಯೊಡನೆ ಅಶ್ವಮೇಧಯಾಗ ಮಾಡಲು ರಾಮನ ಮನೀಷೆ,-ಶೂದ್ರತಪಸ್ವಿ ಶಂಬೂಕನನ್ನು ವಧಿಸಲು ಜನಸ್ಥಾನಕ್ಕೆ ರಾಮ ಬರುವುದು-ಹೀಗೆ ಕಥೆ ಮುಂದುವರಿದಿದೆ. ಶಂಬೂಕ ಸಾಯುವಾಗ ಆ ಸ್ಥಳ ಜನಸ್ಥಾನವೆಂದು ಹೇಳಲು ರಾಮನ ಹಳೆಯ ನೆನಪುಗಳು ಕೆರಳುತ್ತವೆ. ಇನ್ನು ಮೂರನೆಯ ಅಂಕ, ಸೀತೆ ಮಕ್ಕಳ ಹನ್ನೆರಡನೆಯ ಜನ್ಮೋತ್ಸವಕ್ಕಾಗಿ ಅಲ್ಲಿ ಗೋದಾವರೀ ತೀರಕ್ಕೆ ಬಂದಿದ್ದಾಳೆ. ರಾಮನೂ ಅಲ್ಲಿಯೇ ದುಃಖಿಸುತ್ತ ಆಗಾಗ ಎಚ್ಚರ ತಪ್ಪುತ್ತ ಕೊರಗುತ್ತಿದ್ದಾನೆ. ಗಂಗಾದೇವಿ ದಯಪಾಲಿಸಿದ ಅದೃಶ್ಯವಿದ್ಯೆಯಿಂದ ರಾಮನನ್ನು ಸೀತೆ ಸಂತೈಸಿ ಬದುಕಿಸುತ್ತಾಳೆ. ವಾಸಂತಿ ಕಟುವಾಗಿ ಟೀಕಿಸುವುದರಿಂದ ರಾಮ ದುಃಖಿತನಾಗಿ ಪುನಃ ಪುನಃ ಮೂರ್ಛೆಹೋಗುತ್ತಾನೆ. ಸೀತೆ ಮುಟ್ಟಿ ಮುಟ್ಟಿ ಎಚ್ಚರಿಸುತ್ತಾಳೆ. ಸೀತೆಗೆ ರಾಮನ ನೈಜಪ್ರೇಮದ ನಿದರ್ಶನವಾಗಿ ಸಮಾಧಾನವಾಗುತ್ತದೆ. ನಾಲ್ಕನೆಯ ಅಂಕದಲ್ಲಿ ಈ ವಿಷಯ ತಿಳಿದ ಜನಕನ ಕೋಪ: ವಸಿಷ್ಠ ಅರುಂಧತಿ, ಕೌಸಲ್ಯೆ, ಜನಕರ ಪರಸ್ಪರ ಸಂಭಾಷಣೆ; ಲವಕುಶರನ್ನು ನೋಡಿ ಉಂಟಾದ ಆನಂದ-ಇವು ಬಂದಿವೆ. ಯಜ್ಞಾಶ್ವವನ್ನು ಕಟ್ಟಿಹಾಕಿರುವುದರಿಂದ ಲವಕುಶ-ಚಂದ್ರಕೇತುಗಳಲ್ಲಿ ನಡೆದ ಘೋರಯುದ್ಧದ ವಿವರ ಐದನೆಯ ಅಂಕದಲ್ಲಿ ಬರುತ್ತದೆ. ಅಕಸ್ಮಾತ್ ರಾಮಚಂದ್ರ ಅಲ್ಲಿಗೆ ಬಂದು ಸರ್ವರನ್ನೂ ಸಂತೈಸುವುದು, ರಾಮಾಯಣಶ್ರವಣ, ಜೃಂಭಕಾಸ್ತ್ರಪ್ರಯೋಗದ ಪ್ರಕರಣ, ಲವಕುಶರ ಸಂದರ್ಶನದಿಂದ ರಾಮನಿಗೆ ಉಂಟಾದ ಅನಿರ್ವಚನೀಯ ಆನಂದ, ಕೊನೆಯ ಗರ್ಭಾಂಕ ದಲ್ಲಿ ಸೀತಾ ಪರಿತ್ಯಾಗ ನಾಟಕದ ಪ್ರಯೋಗ, ಅದನ್ನು ನೋಡಿ ರಾಮನಿಗೂ ಅಲ್ಲಿ ನೆರೆದ ಸಮಸ್ತರಿಗೂ ಮನಸ್ಸಿನ ಮೇಲಾದ ಪರಿಣಾಮ, ಪರಿವರ್ತನ, ಕೊನೆಗೆ ಅರುಂಧತಿ ಮಹಾಜನಗ ಳೆದುರಿಗೆ, ಸೀತೆಯನ್ನು ರಾಮನಿಗೊಪ್ಪಿಸುವುದು, ಪುನರ್ಮಿಲನವನ್ನು ಕಂಡು ಪ್ರಜೆಗಳೆಲ್ಲರೂ ಸಂತೋಷಪಡುವುದು-ಈ ಸಂಗತಿಗಳಿವೆ. ನಾಟಕ ಆನಂದದಲ್ಲಿ ಪರ್ಯವಸಾನವಾಗುತ್ತದೆ.

ಉತ್ತರರಾಮಚರಿತದ ಕಥೆ ಹಳೆಯದಾದರೂ ಕವಿಯ ಕಲಾಕೃತಿ ಚಿರನೂತನವಾಗಿದೆ. ತಾರ್ಕಿಕವಾಗಿ, ಸುಸಂಬದ್ಧವಾಗಿ ಮೂಲಕಥೆಯನ್ನು ಕವಿ ಪರಿವರ್ತಿಸಿಕೊಂಡಿದ್ದಾನೆ. ಸೀತಾತ್ಯಾಗದ ಸನ್ನಿವೇಶ ಪೂರ್ಣ ಕವಿಕಲ್ಪಿತ. ಲೋಕಾರಾಧನೆ ರಾಜನಿಗೆ ಒಂದು ಪವಿತ್ರ ವ್ರತ. ಪ್ರಜಾನಾಂ ರಂಜನಾತ್ ರಾಜಾ. ದಶರಥ ಅದನ್ನು ಪುರೈಸಲು ರಾಮನನ್ನೂ ಪ್ರಾಣವನ್ನೂ ಬಿಟ್ಟ. ಅತಿರಥಿ ದಶರಥನ ಮಗನಾಗಿ ರಾಮಚಂದ್ರ ಸೀತೆಯ ವಿಷಯವಾಗಿ ಬಂದ ಜನಾಪವಾದಶಲ್ಯವನ್ನು ಕಿತ್ತೊಗೆಯಲು ಹಿಂದೆಮುಂದೆ ನೋಡಲಿಲ್ಲ. ಕರ್ತವ್ಯನಿರತ ನಾಗಿರಲು ವಸಿಷ್ಠರ ಸಂದೇಶ ಬೇರೆ ಅವನ ಎದುರಿಗಿತ್ತು. ಪ್ರಜೆಗಳು ದುರ್ಜನರು ಎಂದು ಯಾರಾದರೂ ಆಡಿಕೊಂಡರೆ ಅದನ್ನು ಆತ ಸಹಿಸ. ಇಕ್ಷ್ವಾಕುವಂಶದ ಗೌರವರಕ್ಷಣೆಯಲ್ಲಿ ಆತನಿಗೆ ಅತೀವಶ್ರದ್ಧೆ. ಪ್ರೇಮದ ಮಡದಿ, ಜೀವನದ ಸಾರಸರ್ವಸ್ವಳಾದ ಸೀತೆಯನ್ನು ಅಡವಿಗೆ ಅಟ್ಟಿ ಹೇಗೆ ವಿರಹಜ್ವಾಲೆಯನ್ನು ಸಹಿಸುವುದು? ದುರ್ಮುಖನ ಮಾತು ರಾಮನ ಮರ್ಮವನ್ನು ಛೇದಿಸಿತು. ದಿಕ್ಕುಗಾಣದೇ ಕಡುಬಡುವನಂತಾಗಿ ದುರ್ದೈವಿಯಾದ ತಾನು ಮಾಡುವುದಾದರೂ ಏನನ್ನು ಎಂದು ಗೋಳಿಟ್ಟ. ಪತಿಧರ್ಮವನ್ನು ಪಾಲಿಸಿದರೆ ರಾಜಧರ್ಮದ ವಿನಾಶ, ರಾಜಧರ್ಮರಕ್ಷಣೆ ಮಾಡಿದರೆ ಪತಿಧರ್ಮದ ಅಧಃಪತನ. ಹೀಗೆ ಧರ್ಮಸಂಕಟದಲ್ಲಿ ಬಿದ್ದು ಒಂದರೆಕ್ಷಣ ವಿಚಾರಿಸಿದ. ಮನೆಯಲ್ಲಿ ಸಾಕಿ ಸಲಹಿ ನಂಬಿದ ಪಕ್ಷಿಯನ್ನು ಕೈಯಾರೆ ಕೊಲ್ಲುವ ಕಟುಕನ ಹಾಗೆ ಸೀತೆಯನ್ನು ಅಡವಿಗಟ್ಟಲು ನಿರ್ಧರಿಸಿದ. ಅಪೂರ್ವಕರ್ಮ ಚಾಂಡಾಲನಾದೆ, ಕ್ರೂರಪಾತಕಿಯಾದೆ ಎಂದು ಕಣ್ಣೀರ ಕೋಡಿಯನ್ನೇ ಹರಿಸಿದ. ರಾಜಧರ್ಮ ಮೇಲಾಯಿತು. ಆದರೂ ಪತಿಧರ್ಮ ಅಳಿಯಲಿಲ್ಲ, ಪ್ರೇಮ ಕುಂದಲಿಲ್ಲ. ಸೀತೆ ಕಾಡಿಗೆ ಹೋಗಬೇಕಾಯಿತು. ಶಂಬೂಕವಧ ವೃತ್ತಾಂತ ಸೀತಾರಾಮರ ಶರೀರವಿಯೋಗವನ್ನು ಮಾತ್ರ ತೋರಿಸಿ, ಅನ್ಯೋನ್ಯ ಹೃದಯಗಳ ಅಭೇದ್ಯ ಪ್ರೇಮಘನತೆಯನ್ನು ದಿಗ್ದರ್ಶಿಸುತ್ತದೆ. ರಾಮ ಸಂತಪ್ತನಾದರೂ ಧರ್ಮಮೂರ್ತಿ. ಸೀತೆ ಪ್ರೇಮಮಯಿ, ಪತಿನಾರಾಯಣೆ, ಕ್ಷಮಾಶಾಲಿನಿ. ರಾಮ ಗೈದ ಸೀತಾ ತ್ಯಾಗದಲ್ಲಿ ಕೋಪಕ್ಕಿಂತಲೂ ಅನುಕಂಪವೇ ಹೆಚ್ಚುವಂತೆ ಕವಿ ಸಂವಿಧಾನ ಕೌಶಲವನ್ನು ತೋರಿಸಿದ್ದಾನೆ. ಮುನಿಗಳು ಸೀತೆಗೆ ಮಾಡಿದ ಆಶೀರ್ವಾದ, ಜೃಂಭಕಾಸ್ತ್ರಗಳು ಇವೇ ಮೊದಲಾದ ಸಂದರ್ಭಗಳಿಂದ ಭವಿಷ್ಯದ ಸುಖಾವಹ ಫಲಸಿದ್ಧಿಯನ್ನು ಸೂಚಿಸಿದ್ದಾನೆ. ಅದೃಶ್ಯರೂಪಿಣಿ ಸೀತೆಯ ಸನ್ನಿವೇಶ, ರಾಮನ ಮನೋಭೂಮಿಕೆಯನ್ನು ತೋರಿಸಲು ಸಾಕ್ಷಿಯಾಗಿದೆ. ಅಲ್ಲಲ್ಲಿ ರಾಮನನ್ನು ತೆಗಳುವ ಪ್ರಸಂಗಗಳಲ್ಲಿ ರಾಮನ ಕೃತಿ ಸ್ತುತ್ಯವಲ್ಲವೋ ಏನೋ ಎಂಬುವಂತೆ ಕವಿ ತೋರಿಸಿದ್ದಾನೆ. ರಾಮ, ಲವಕುಶರ ಸುಕುಮಾರ ಮಿಲನ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ಗರ್ಭಾಂಕದ ತಂತ್ರಚಾತುರ್ಯವಂತೂ ಬಹಳ ಮಾರ್ಮಿಕವಾಗಿದೆ. ಪೌರಜನರಿಗೆ ಅಂತ ರಾರ್ಥವನ್ನು ಮನವರಿಕೆ ಮಾಡಿಕೊಡುವುದೇ ಇದರ ಮುಖ್ಯ ಉದ್ದೇಶ. ಸೀತೆಯ ಸೀಮಾತೀತ ದುಃಖದರ್ಶನದಿಂದ ರಾಮನ ಮನಸ್ಸು ಪುನರ್ಮಿಲನಕ್ಕೆ ಹಾತೊರೆಯುತ್ತದೆ. ನಾಟಕ ಮಂಗಳಮಯವಾಗುತ್ತದೆ. ಪಾತ್ರಚಿತ್ರಣ ಇಲ್ಲಿನ ಧ್ವನಿಗೆ ಅನುಗುಣವಾಗಿ ಅನುಪಮವಾಗಿದೆ. ರಾಮ ಮಾನನಿಧಿ, ಮಾನವೀಯತೆಯ ಮಹತಿಯ ಪ್ರತೀಕ. ಎರಡು ಶಾಶ್ವತ ಸತ್ಯಗಳ ದ್ವಂದ್ವದಲ್ಲಿ ಸಾಮರಸ್ಯವನ್ನು ಉಳಿಸಿಕೊಳ್ಳಲು ಆತ ಪ್ರಯತ್ನಿಸುತ್ತಾನೆ. ಅಸಾಮಾನ್ಯ ಸತ್ತ್ವಶಾಲಿ, ರಾಮಚಂದ್ರ, ಅದ್ವೈತಂ ಸುಖದುಃಖಯೋಃ- ಎಂಬುದು ಸತ್ಯವಾದರೆ ರಾಮಸೀತೆಯರ ಪ್ರೇಮ ಅನನ್ಯಸಾಮಾನ್ಯವಾದು ದೆಂದು ಕವಿಯೊಡನೆ ಹೇಳಬಹುದು. ಪತಿಯ ಕರ್ತವ್ಯದ್ರವ್ಯವನ್ನು ರಾಜಧರ್ಮ ಯಜ್ಞದಲ್ಲಿ ಆಹುತಿ ಕೊಟ್ಟು, ಅನನ್ಯಸಾಮಾನ್ಯವಾದ ಸೀತಾತ್ಯಾಗದಲ್ಲಿ ವ್ಯಕ್ತವಾದ ರಾಮಚಂದ್ರನ ಮಹೋಜ್ಜ್ವಲ ಮನಃಸ್ಥೈರ್ಯದ ಪರಿಣಾಮವನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ರಾಮ ಸ್ಥಿತಪ್ರಜ್ಞನಂತೆ ಕಾಣುತ್ತಾನೆ. ದುಃಖ ಸಂವೇದನಾಯ್ಯೆವ ರಾಮೇ ಚೈತನ್ಯಮಾಹಿತಂ. ಹೃದಯ ಸಾವಿರ ಹೋಳಾಗಿ ಸಿಡಿದಿತ್ತು. ಸೀತಾ ವಿವಾಸನ ಪಟೋಃ ಕರುಣಾ ಕುತಸ್ತೇ. ಹೀಗೆ ತನ್ನನ್ನೇ ಹೀಯಾಳಿಸಿಕೊಂಡ, ರಾಮ. ಸೀತೆಯ ಪಾತ್ರವೂ ಅಷ್ಟೇ ಕಲಾಪ್ರಪೂರ್ಣ ವಾಗಿ ರೂಪು ಗೊಂಡಿದೆ. ರಾಮ ತನ್ನನ್ನು ಕಾಡಿಗಟ್ಟಿದುದು ಸರಿಯೇ ಎಂದು ಸಂಶಯ ಸಂತಾಪಗಳುಂಟಾ ದಾಗ್ಯೂ ಅವನ ಬಗ್ಗೆ ಪ್ರೇಮದ್ರೋಹದ ಕಲ್ಪನೆ ಅವಳ ಮನದಲ್ಲಿಲ್ಲ. ರಾಜಧರ್ಮದ ಶ್ರೀಮದ್ಗಾಂಭೀರ್ಯವನ್ನೂ ರಾಮನ ನಿರುಪಾಯತೆಯನ್ನೂ ಅವನ ಮನದಳಲನ್ನೂ ಮನಗಂಡು ಅವಳ ಅಂತಃಕರಣ ಕರಗಿಹೋಗಿದೆ. ರಾಮನ ಪ್ರೇಮದಾಳವನ್ನು ಕಾಣುವ ಸುಯೋಗವನ್ನು ಅಲಭ್ಯಲಾಭವೆಂದು ಹೊಗಳುತ್ತಾಳೆ. ಪ್ರೇಮದ ನೆಲೆ ಬೆಲೆಗಳನ್ನು ಕಂಡವ ಭವಭೂತಿಯೊಬ್ಬನೇ ಎಂದೆನಿಸುತ್ತದೆ. ಹೆಣ್ಣು ಕಷ್ಟಸಹಿಷ್ಣುವಾಗಿರಬೇಕು, ಸಾಧ್ವೀಶಿರೋಮಣಿ ಯಾಗಿರಬೇಕು. ಪತಿಯ ಪ್ರೇಮದಲ್ಲಿ ಪೂರ್ಣ ವಿಶ್ವಾಸವಿದ್ದರೆ ಮಾತ್ರ ಇದು ಸಾಧ್ಯ ಎಂದು ಭವಭೂತಿ ಸೂಚಿಸಿದ್ದಾನೆ.

ಏಕೋರಸಃ ಕರುಣ ಏವ ನಿಮಿತ್ತ ಭೇದಾತ್ ಭಿನ್ನಃ ಪೃಥಕ್ ಪೃಥಗಿವಾಶ್ರಯತೇ ವಿವರ್ತಾನ್ | ಆವರ್ತಬುದ್ಬುದ ತರಂಗಮಯಾನ್ ವಿಕಾರಾನ್ ಅಂಭೋ ಯಥಾ ಸಲಿಲಮೇವ ತು ತತ್ಸಮಗ್ರಂ || ಎಂಬ ಭವಭೂತಿಯ ಸಿದ್ಧಾಂತ ನಾಟಕದ ಉದ್ದಕ್ಕೂ ಚಿತ್ರಿತವಾಗಿರುವ ಕರುಣರಸ ಪ್ರತಿಪಾದನೆಯಲ್ಲಿ ಸ್ಪಷ್ಟವಾಗಿ ತೋರುತ್ತದೆ. ಇದಕ್ಕೆ ನೇರಕಾರಣ ರಾಮಾಯಣದ ಮೂಲಕಥಾ ಸನ್ನಿವೇಶ. ರಾಮ ವೀರಾಗ್ರಣಿಯಾದ ರಾಜನಾದರೇನು? ಜನಕನಂದಿನಿ ಸೀತೆ ರಾಮಚಂದ್ರನ ಪ್ರೇಮದ ಪುತ್ಥಳಿಯಾದರೂ ಮುತ್ತಿನಂಥ ಮಕ್ಕಳ ತಾಯಿಯಾದರೂ ಏನು ಗತಿಯಾಯ್ತು? ಅಪಿಗ್ರಾವಾ ರೋದಿತ್ಯಪಿ ದಲತಿ ವಜ್ರಸ್ಯ ಹೃದಯಂ. ನಿಸರ್ಗವೇ ಕಣ್ಣೀರಿಟ್ಟಿತೆಂದು-ಸಹೃದಯರ ಕರುಳು ಕತ್ತರಿಸುವಂತೆ ಕವಿ ನುಡಿದಿದ್ದಾನೆ. ಜೀವನ ಬಿಡಿಸಲಾರದ ಸಮಸ್ಯೆಗಳ ಗ್ರಂಥಿ. ಪುಟ ಪಾಕಪ್ರತೀತಾಶೋ ರಾಮಸ್ಯ ಕರುಣೋರಸಃ, ರಾಮ, ಸೀತೆ, ಕೌಸಲ್ಯೆ, ಅರುಂಧತಿ, ಜನಕ, ಭಾಗೀರಥಿ, ವಾಸಂತಿ-ಎಲ್ಲರಿಗೂ ದುಃಖ; ಎಲ್ಲರೂ ಶೋಕಸ್ರೋತದ ರಭಸಕ್ಕೆ ಸಿಕ್ಕವರೆ. ಭವಭೂತಿಯ ಉತ್ತರರಾಮ ಚರಿತೆ ಸಹೃದಯರ ಅಂತಃಕರಣವನ್ನು ಸೂರೆಗೊಂಡಿದೆ. ಶೃಂಗಾರ, ತಿಳಿಹಾಸ್ಯ, ವೀರ, ವಾತ್ಸಲ್ಯ, ಅದ್ಭುತ, ಶಾಂತ ರಸಗಳು ಆನುಷಂಗಿಕವಾಗಿ ಬಂದು ಮೂಲ ಕರುಣರಸ ಪ್ರತಿಪಾದನೆಯನ್ನು ಪುಷ್ಟೀಕರಿಸುತ್ತವೆ. ಉತ್ತರೇರಾಮಚರಿತೇ ಭವಭೂತಿರ್ವಿಶಿಷ್ಯತೇ. ಜೀವನದಲ್ಲಿ ಆಳವಾದ ಅನುಭವ ಪಡೆದ ಕವಿ ಪರಿಣತಪ್ರಜ್ಞನಾಗಿ ಪ್ರೇಮದ ಉದಾತ್ತ ತತ್ತ್ವಗಳನ್ನು ನಾಟಕದಲ್ಲಿ ಸೇರಿಸಿದ್ದಾನೆ. ಪ್ರೇಮದ ನಾನಾ ರೂಪಗಳಾದ ಭಕ್ತಿ, ರತಿ, ವಾತ್ಸಲ್ಯ, ಸ್ನೇಹಗಳ ಚಿತ್ರಣ ಕಲಾವೈಭವದಿಂದ ಕೂಡಿದೆ. ಪ್ರೇಮ ಅವಿನಾಶಿ, ಅವಿಕಾರಿ, ಪವಿತ್ರ, ಆನಂದಮಯ. ಪ್ರೇಮವೇ ಜೀವನ. ಇದೇ ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶ. ಇದೇ ಸೀತಾರಾಮರ ಆದರ್ಶಜೀವನ. ಇದನ್ನು ತಂತ್ರಕೌಶಲದಿಂದ ಹೃದಯಂಗಮವಾಗಿ ಚಿತ್ರಿಸಿರುವುದರಿಂದಲೇ ಈ ನಾಟಕಕ್ಕೆ ಈ ಬಗೆಯ ಖ್ಯಾತಿ. (ನೋಡಿ-ಭವಭೂತಿ) (ಎ.ಎಲ್.ಎಚ್.)