ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರಾ(ವಿರಾಟರಾಜನ ಮಗಳು)

ವಿಕಿಸೋರ್ಸ್ ಇಂದ
Jump to navigation Jump to search

ಉತ್ತರಾ(ವಿರಾಟರಾಜನ ಮಗಳು): ಉತ್ತರಾ ವಿರಾಟರಾಜನ ಮಗಳು. ಅಭಿಮನ್ಯುವಿನ ಹೆಂಡತಿ. ಉತ್ತರಕುಮಾರನ ತಂಗಿ. ಅರ್ಜುನ ಸುಭದ್ರೆಯರ ಸೊಸೆ. ಪರೀಕ್ಷಿದ್ರಾಜನ ತಾಯಿ. ತ್ರಿಗರ್ತರು ವಿರಾಟರಾಜನ ಗೋವುಗಳನ್ನು ಹಿಡಿಯಲು ಅವರಿಗೆ ಸಹಾಯಕರಾಗಿ ಬಂದ ಕೌರವ ಸೇನೆಯನ್ನು ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನ ಎದುರಿಸಿದ. ಸಂತೋಷಗೊಂಡ ವಿರಾಟರಾಜ ಅರ್ಜುನನಿಗೆ ಉತ್ತರೆಯನ್ನು ಕೊಡಲು ಹೋದಾಗ ಅದುವರೆಗೂ ತನ್ನ ಮಗಳಂತೆ ನೋಡಿದ ಉತ್ತರೆಯನ್ನು ಮದುವೆಯಾಗಲು ಅರ್ಜುನ ನಿರಾಕರಿಸಿ ಆಕೆಯನ್ನು ತನ್ನ ಮಗ ಅಭಿಮನ್ಯುವಿಗೆ ತಂದುಕೊಂಡ. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಪದ್ಮಪ್ಯುಹವನ್ನು ಭೇದಿಸಿ ಹೊರಬರಲಾರದೆ ಅಭಿಮನ್ಯು ಮಡಿದ. ಬಸುರಿಯಾಗಿದ್ದ ಉತ್ತರೆ ವಿಧವೆಯಾದಳು. ಕುರುಕ್ಷೇತ್ರ ಯುದ್ಧಮುಗಿದಾಗ ಪಾಂಡವರ ಮೇಲಿನ ಸೇಡಿನ ಕಿಡಿ ಸಿಡಿದು ಅಶ್ವತ್ಥಾಮ ಬ್ರಹ್ಮಶಿರಾಸ್ತ್ರವನ್ನು ಪ್ರಯೋಗಿಸಿದ. ಅದು ಪಾಂಡವರ ಸಂತತಿಯನ್ನು ನಾಶಮಾಡುವುದೆಂದು ತಿಳಿದ ಶ್ರೀಕೃಷ್ಣ ಅಸ್ತ್ರವನ್ನು ಹಿಂದಕ್ಕೆ ಕರೆಯುವಂತೆ ಕೋರಿದಾಗ ಅಶ್ವತ್ಥಾಮ ನಿರಾಕರಿಸಿದ. ಆದರೂ ಕೃಷ್ಣನ ಕೃಪೆಯಿಂದ ಮಗು ಬದುಕಿತು. ಪರೀಕ್ಷಿತ್ ಎಂಬ ಹೆಸರಿನಿಂದ ಖ್ಯಾತವಾಗಿ ಕುರುಸಂತತಿಯ ಕುಡಿಯಾಗಿ ವಂಶವನ್ನು ಬೆಳೆಸಿತು.