ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರ ಆಸ್ಟ್ರೇಲಿಯ

ವಿಕಿಸೋರ್ಸ್ದಿಂದ

ಉತ್ತರ ಆಸ್ಟ್ರೇಲಿಯ: ಆಸ್ಟ್ರೇಲಿಯದ ಆರು ರಾಜಕೀಯ ವಿಭಾಗಗಳಲ್ಲಿ ಒಂದಾದ ಉತ್ತರ ಸೀಮೆ (ನಾರ್ದರ್ನ್ ಟೆರಿಟರಿ). ಆಸ್ಟ್ರೇಲಿಯದ ಸಂಯುಕ್ತ ಸರ್ಕಾರದ ಆಳ್ವಿಕೆಗೆ ಒಳಪಟ್ಟ ಎರಡು ಪ್ರದೇಶಗಳಲ್ಲಿ ಒಂದು. (ಇನ್ನೊಂದು ಆಸ್ಟ್ರೇಲಿಯದ ರಾಜಧಾನಿಯ ಪ್ರದೇಶ.) ಆಸ್ಟ್ರೇಲಿಯದ ಉತ್ತರ ಭಾಗದ ಮಧ್ಯದಲ್ಲಿರುವ ಈ ಪ್ರಾಂತ್ಯವು ದ. ಅ. 26ಲಿ ಯಿಂದ ಆಸ್ಟ್ರೇಲಿಯದ ಉತ್ತರ ತೀರದವರೆಗೂ ಪು.ರೇ. 129ಲಿ ಸೆ.=138ಲಿಸೆ.ಯ ವರೆಗೂ ಹಬ್ಬಿದೆ. ದಕ್ಷಿಣ ಪಾಶರ್ವ್‌ದಲ್ಲಿ ಮಕರಸಂಕ್ರಾಂತಿ ವೃತ್ತ ಹಾದು ಹೋಗುತ್ತದೆಯಾದ್ದರಿಂದ ಇದು ಬಹುಮಟ್ಟಿಗೆ ಉಷ್ಣವಲಯದಲ್ಲೇ ನೆಲಸಿರುವ ಪ್ರದೇಶ. ವಿಸ್ತೀರ್ಣ: 1,349,130 ಚ.ಕಿಮೀ. ಜನಸಂಖ್ಯೆ : 200,019 (2001)

ಟಿಮಾರ್ ಸಮುದ್ರದ ಮೇಲಿರುವ ಡಾರ್ವಿನ್ ಮುಖ್ಯ ಬಂದರು, ರಾಜಧಾನಿ. ದಕ್ಷಿಣ ಭಾಗದಲ್ಲಿನ ಆಲಿಸ್ ಸ್ಟ್ರಿಂಗ್ಸ್‌ ಮುಖ್ಯಪಟ್ಟಣ.

ಮೇಲ್ಮೈಲಕ್ಷಣ

[ಸಂಪಾದಿಸಿ]

ಈ ಪ್ರದೇಶದ ಬಹುಭಾಗ ಬರಡು. ವರ್ಣರಹಿತ, ಸುಮಾರು ಒಂದು ಸಾವಿರ ಮೈಲಿ ಉದ್ದವಿರುವ ಕರಾವಳಿ ಅಂಕು ಡೊಂಕಾಗಿರುವುದಾದರೂ ಅದು ತಗ್ಗಾಗಿಯೂ ಚಪ್ಪಟೆಯಾಗಿಯೂ ಇದೆ. ಸೆರಗಿನಂತೆ ಉದ್ದಕ್ಕೂ ಗುಲ್ಮ ವೃಕ್ಷಗಳು ದಟ್ಟೈಸಿವೆ. ಮರಳು ತುಂಬಿದ ಕಡಲುದಂಡೆಗಳಿಗೂ ಮಣ್ಣಿನ ಜಗತಿಗಳಂತಿರುವ ನದೀ ಮುಖಗಳಿಗೂ ನಡುನಡುವೆ ವಿರಳವಾಗಿ ಮರಳುಗಲ್ಲುಗಳಿಂದೊಡಗೂಡಿದ ಸುಣ್ಣ ಜೇಡಿ ಹಾಗೂ ಕಬ್ಬಿಣದ ಗಟ್ಟಿ ಅದಿರುಗಳಿರುವ ಭೂಶಿರಗಳಿವೆ. ವಿಕ್ಟೋರಿಯ, ಡಾಲಿ, ರೋಪರ್, ಮೆಕಾರ್ಥರ್ ಮುಖ್ಯ ನದಿಗಳು. ಇವೆಲ್ಲ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹುಟ್ಟಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಹರಿಯುತ್ತವೆ. ಮಳೆಗಾಲದಲ್ಲಿ ಇವುಗಳಲ್ಲಿ ತುಂಬು ಪ್ರವಾಹ; ಒಣಋತುವಿನಲ್ಲಿ ಇವು ಸಣ್ಣ ಸಣ್ಣ ಮಡುಗಳ ಸಾಲುಗಳಂತಾಗುತ್ತವೆ. ಇವಕ್ಕೆ ನೀರು ಒದಗಿಸುವ ಒಂದು ಮುಖ್ಯ ಪ್ರದೇಶವೆಂದರೆ ಬಾಕಿರ್ಲ್‌ ಪ್ರಸ್ಥಭೂಮಿ. ಇದು ಪಶ್ಚಿಮ ಆಸ್ಟ್ರೇಲಿಯದ ಪ್ರಸ್ಥಭೂಮಿಯ ವಿಸ್ತರಣೆ. ಸಮುದ್ರದಂಡೆಗೆ ಸಮಾನಾಂತರದಲ್ಲಿ ವಾಯವ್ಯ-ಆಗ್ನೇಯವಾಗಿ ಹಬ್ಬಿದೆ. ಇಲ್ಲೂ ವಿಕ್ಟೋರಿಯ ನದೀ ಜಿಲ್ಲೆಯಲ್ಲೂ ಸೊಂಪಾದ ಹುಲ್ಲುಗಾವಲುಗಳಿವೆ. ಈ ಪ್ರಸ್ಥಭೂಮಿಯ, ನೈರುತ್ಯದಲ್ಲಿ ನೆಲ ಇಳಿಜಾರು; ಇದಕ್ಕೆ ದಕ್ಷಿಣದಲ್ಲಿರುವುದೇ ವುಡ್ಸ್‌ ಸರೋವರ. ದಕ್ಷಿಣದಲ್ಲಿ ಪೂರ್ವ ಪಶ್ಚಿಮವಾಗಿ ಹಬ್ಬಿರುವ ಮ್ಯಾಕ್ ಡಾನೆಲ್ ಪರ್ವತಶ್ರೇಣಿಯಲ್ಲಿ 1525 ಮಿ. ಎತ್ತರದ ಶಿಖರಗಳುಂಟು. ಇದರ ದಕ್ಷಿಣಕ್ಕೆ ಅಮೆಡ್ಯೂಸ್ ಸರೋವರ. ಈಶಾನ್ಯದಲ್ಲಿ ಹಾಟ್ರ್ಸ್‌ ಪರ್ವತಶ್ರೇಣಿ. ದಕ್ಷಿಣದ ಪಶ್ಚಿಮಾಗ್ರದಲ್ಲಿ ಪೀಟರ್ಮನ್ ಪರ್ವತಶ್ರೇಣಿಯೂ ಪೂರ್ವದಲ್ಲಿ ಸಿಂಪ್ಸನ್ ಮರುಭೂಮಿಯೂ ಇವೆ.

ವಾಯುಗುಣ

[ಸಂಪಾದಿಸಿ]

ತೀರಪ್ರದೇಶ ಭಾರತದ ದಖನ್ ಪ್ರಸ್ಥಭೂಮಿಯಂತೆ ಮಾನ್ಸೂನ್ ಮಾದರಿಯ ವಾಯುಗುಣ ಹೊಂದಿದೆ. ಇಲ್ಲಿ ಮಾನ್ಸೂನ್ ಮಾರುತಗಳು ವಾಯವ್ಯ ದಿಕ್ಕಿನಿಂದ ಬೀಸುತ್ತವೆ. ನವೆಂಬರಿನಿಂದ ಏಪ್ರಿಲ್ ತಿಂಗಳವರೆಗೆ ಬೇಸಗೆ. ಆಗ ತೀರ ಪ್ರದೇಶದಲ್ಲಿ ಹೆಚ್ಚು ಮಳೆ. ಜನವರಿ ತಿಂಗಳು ಹೆಚ್ಚು ಶಾಖ. 50ಲಿಸೆ. ಉಷ್ಣತೆ. ಮೇ-ಅಕ್ಟೋಬರ್ ಚಳಿಗಾಲ, 33.3ಲಿ ಸೆ. ಉಷ್ಣತೆ. ಈ ಪ್ರದೇಶ ಉಷ್ಣವಲಯದ ವಾಯುಗುಣದಿಂದ ಕೂಡಿರುವುದರಿಂದ ಇಲ್ಲಿ ಮಾನ್ಸೂನ್ ಕಾಡುಗಳೂ ಗುಲ್ಮವೃಕ್ಷದ ಕಾಡುಗಳೂ ಕಂಡುಬರುತ್ತವೆ. ಉತ್ತರದ ತೀರಪ್ರದೇಶ ದಲ್ಲಿ ಸವನ್ನ ಮಾದರಿಯ ಹುಲ್ಲುಗಾವಲಿಂದ ಕೂಡಿದ ಕಾಡುಗಳಿವೆ. ನೀಲಗಿರಿ ಮರ ಧಾರಾಳ. ಆಸ್ಟ್ರೇಲಿಯದ ಇತರ ಕಡೆಗಳಲ್ಲಿರುವಂತೆ ಇಲ್ಲೂ ಕಾಂಗರೂ, ಮೊಸಳೆ, ಹಾವು, ಮೊಲ, ಬಗೆಬಗೆಯ ಪಕ್ಷಿಗಳು, ಕಪ್ಪೆ, ಮೀನು ಇವೆ. ಹಿಂದೆ ಟಿಮಾರ್ನಿಂದ ಇಲ್ಲಿಗೆ ತಂದ ಕಾಡೆಮ್ಮೆಗಳನ್ನು ಚರ್ಮಕ್ಕಾಗಿ ಬೇಟೆಯಾಡಲಾಗಿದೆ. ಮಳೆಗಾಲದಲ್ಲಿ ಸೊಳ್ಳೆ ವಿಪರೀತ. ಗೆದ್ದಲಿನ ಹಾವಳಿಯೂ ಬಹಳ. ಮಳೆ ಕಡಿಮೆಯಾಗಿದ್ದು ಮಣ್ಣೂ ಫಲವತ್ತಾಗಿಲ್ಲದಿರುವುದರಿಂದ ಹೆಚ್ಚು ವ್ಯವಸಾಯ ಸಾಧ್ಯವಿಲ್ಲ. ಸವನ್ನ ಹುಲ್ಲುಗಾವಲಿನ ಪ್ರದೇಶಗಳಲ್ಲಿ ದನ ಕುರಿಗಳನ್ನು ಸಾಕುವುದು ಜನರ ಮುಖ್ಯ ಕಸುಬು. ಗಣಿಗಾರಿಕೆಯೂ ತೀರಪ್ರದೇಶದಲ್ಲಿ ಮೀನುಗಾರಿಕೆಯೂ ಈ ಪ್ರದೇಶದ ಜನರ ಇತರ ಕಸುಬು. ಖನಿಜೋತ್ಪತ್ತಿ, ಕೈಗಾರಿಕೆ: ಡಾರ್ವಿನ್ನಿಗೆ 80 ಕಿಮೀ ದಕ್ಷಿಣಕ್ಕಿರುವ ರಂಜಂಗಲ್ನಲ್ಲಿ 1949ರಲ್ಲಿ ಯುರೇನಿಯಂ ಪತ್ತೆಯಾಗಿ 1954ರಲ್ಲಿ ಇದರ ಪರಿಷ್ಕರಣ ಕೈಗಾರಿಕೆ ಆರಂಭವಾದಂದಿನಿಂದ ಇಲ್ಲಿ ಗಣಿ ಉದ್ಯಮ ಬೆಳೆದಿದೆ. ಆದರೆ ಇದರ ಪ್ರಮಾಣ ಹಾಗೂ ಮೌಲ್ಯ ಎಷ್ಟೆಂಬುದು ಕಾಯ್ದಿಟ್ಟ ರಹಸ್ಯ. ಉಳಿದ ಖನಿಜಗಳ ಮೌಲ್ಯದಲ್ಲಿ ಅರ್ಧಪಾಲು ತಾಮ್ರದ್ದು; 3ನೆಯ ಒಂದು ಭಾಗ ಚಿನ್ನ. ಇವೆರಡನ್ನೂ ಟೆನ್ನಾಂಟ್ ಕ್ರೀಕ್ ಎಂಬಲ್ಲಿ ತೆಗೆಯಲಾಗುತ್ತಿದೆ. ಹಾಟ್ಸ್‌ ಪರ್ವತ ಶ್ರೇಣಿಯಲ್ಲಿ ಮ್ಯಾಂಗನೀಸ್ ಮತ್ತು ಅಭ್ರಕ ದೊರಕುತ್ತವೆ. ತವರ, ಬೆಳ್ಳಿ ಇಲ್ಲಿ ಸಿಗುವ ಇತರ ಎರಡು ಲೋಹಗಳು.

ವ್ಯಾಪಾರ

[ಸಂಪಾದಿಸಿ]

ಈ ಪ್ರದೇಶದ ಉತ್ಪನ್ನಗಳು ಇತರ ರಾಜ್ಯಗಳಿಗೆ ಸಾಗುತ್ತವೆ. ಇಲ್ಲಿಯವರು ತಮಗೆ ಬೇಕಾದ ಸಿದ್ಧವಸ್ತುಗಳನ್ನೂ ಆಹಾರವನ್ನೂ ಆ ರಾಜ್ಯಗಳಿಂದ ತರಿಸಿಕೊಳ್ಳುತ್ತಾರೆ. ಇಲ್ಲಿ ಸರ್ಕಾರದ ವರಮಾನಕ್ಕಿಂತ ವೆಚ್ಚ ಆರು ಪಾಲು ಹೆಚ್ಚು.

ಡಾರ್ವಿನ್ ಪಟ್ಟಣದಿಂದ ಬಿರ್ಡುಂವರೆಗೆ ಮಾತ್ರ ಸಂಪರ್ಕವುಂಟು. ಉತ್ತರ ದಕ್ಷಿಣವಾಗಿ ಹೆದ್ದಾರಿಯಿದೆ. ದಕ್ಷಿಣದ ಆಲಿಸ್ ಸ್ಪ್ರಿಂಗ್ಸ್‌ನಿಂದ ದಕ್ಷಿಣ ಆಸ್ಟ್ರೇಲಿಯಕ್ಕೆ ಇನ್ನೊಂದು ರೈಲುಮಾರ್ಗವುಂಟು. ಡಾರ್ವಿನ್ ಬಂದರಿನಿಂದ ಹಡಗುಗಳು ಆಸ್ಟ್ರೇಲಿಯದ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸಿದೆ. ವಿದೇಶೀ ಹಡಗು ಸಂಚಾರವೂ ಉಂಟು. ಇಲ್ಲಿ ಮೂಲ ನಿವಾಸಿಗಳಲ್ಲದವರ ಸಂಖ್ಯೆ 27,095. ಶುದ್ದ ಮೂಲನಿವಾಸಿಗಳ ಸಂಖ್ಯೆ ಕ್ರಮವಾಗಿ ಏರುತ್ತಿದೆ. ಒಟ್ಟು ಸುಮಾರು 1,73,530 ಚ.ಕಿಮೀ ವಿಸ್ತೀರ್ಣದ ಹದಿನೇಳು ಪ್ರದೇಶಗಳು ಮೂಲನಿವಾಸಿಗಳಿಗಾಗಿ ಮೀಸಲಾಗಿವೆ. (ಪಿ.ಎಚ್.)

ಇತಿಹಾಸ

[ಸಂಪಾದಿಸಿ]

16ನೆಯ ಶತಮಾನದಲ್ಲಿ ಉತ್ತರ ಆಸ್ಟ್ರೇಲಿಯ ಮೊದಲ ಬಾರಿಗೆ ಪಾಶ್ಚಾತ್ಯರ ಕಣ್ಣಿಗೆ ಬಿತ್ತು. ಆಬೆಲ್ ಟಾಸ್ಮನ್ ಇದರ ತೀರದ ಗುಂಟ ಸಮುದ್ರಯಾನ ಮಾಡಿದ. ಮಲೆಯರೂ ಇಂಡೊನೇಷ್ಯನ್ನರೂ ಮುತ್ತಿನ ಆಸೆಗಾಗಿ ಈ ಪ್ರದೇಶದ ಅಂಚಿನ ಕಡಲ ಅಡಿಯಲ್ಲಿ ಮುಳುಗುತ್ತಿದ್ದರು. ಮಾಥ್ಯು ಫ್ಲಿಂಡರ್ಸ್‌ 1803ರಲ್ಲಿ ಪ್ರಥಮವಾಗಿ ಇದರ ತೀರದ ನಕ್ಷೆ ರಚಿಸಿದ. 1818ರಲ್ಲಿ ಫಿಲಿಪ್ ಕಿಂಗ್ನ ನೇತೃತ್ವದಲ್ಲಿ ಬಂದ ಪರಿಶೋಧಕರು ಇಲ್ಲಿನ ನದೀಮುಖಗಳ ಹಾಗೂ ಕೊಲ್ಲಿಗಳ ನಕ್ಷೆ ರಚಿಸಿದರಲ್ಲದೆ, ಈಗ ಡಾರ್ವಿನ್ ಬಂದರು ರೇವಿನ ಪ್ರದೇಶವನ್ನು ಗುರುತಿಸಿದರು. ಈ ಪ್ರದೇಶದಲ್ಲಿ ಸೈನಿಕ ನೆಲೆಗಳನ್ನೇರ್ಪಡಿಸುವ ಪ್ರಯತ್ನಗಳೂ ನಡೆದವು. ಡಚ್ಚರು ಈ ಭಾಗದಲ್ಲೂ ಕಾಲೂರದಂತೆ ಮಾಡುವುದೇ ಈ ಎಲ್ಲ ಚಟುವಟಿಕೆಗಳ ಉದ್ದೇಶವಾಗಿತ್ತು.

1862ರ ವರ್ಷ ಈ ಪ್ರದೇಶದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಆಗ ಮೆಕ್ ಡೂವಲ್ ದಕ್ಷಿಣ ಆಸ್ಟ್ರೇಲಿಯದಿಂದ ಅಡಿಲೇಡ್ ನದೀಮುಖದವರೆಗೆ ಪ್ರಯಾಣ ಮಾಡಿದ. ದಕ್ಷಿಣೋತ್ತರವಾಗಿ ಆಸ್ಟ್ರೇಲಿಯವನ್ನು ದಾಟಿದವರಲ್ಲಿ ಇವನೇ ಮೊದಲಿಗ. ಈ ಕಾರಣದಿಂದ ಉತ್ತರ ಆಸ್ಟ್ರೇಲಿಯ ತನಗೆ ಸೇರಿದ್ದೆಂದು ದಕ್ಷಿಣ ಆಸ್ಟ್ರೇಲಿಯ ವಾದ ಹೂಡಿತು. ದಕ್ಷಿಣ ಆಸ್ಟ್ರೇಲಿಯವೇ ಈ ಭಾಗದ ಆಡಳಿತ ನಡೆಸತಕ್ಕದ್ದೆಂದು ಇಂಗ್ಲೆಂಡಿನ ವಸಾಹತು ಕಾರ್ಯದರ್ಶಿ ಆಜ್ಞಾಪಿಸಿದ. ಈ ಪ್ರದೇಶದ ಆಡಳಿತ ಸಂಪರ್ಕವನ್ನು ಸಮುದ್ರದ ಮೂಲಕವೇ ಇಟ್ಟುಕೊಳ್ಳಬೇಕಾಗಿತ್ತು. ಮೊದಲು ಅಡಿಲೇಡ್ ನದಿಯ ಬಳಿಯ ಪ್ರದೇಶದಿಂದಲೂ ಅನಂತರ ಡಾರ್ವಿನ್ನಿನಿಂದಲೂ ಆಡಳಿತ ನಡೆಸಲಾಗುತ್ತಿತ್ತು. ಅಡಿಲೇಡಿನಿಂದ ಡಾರ್ವಿನ್ನಿಗೆ 1872ರಲ್ಲಿ ತಂತಿವ್ಯವಸ್ಥೆ ಏರ್ಪಟ್ಟಿತು. ಕೇವಲ ಎರಡೇ ವರ್ಷಗಳಲ್ಲಿ ನಿರ್ಮಿಸಲಾದ ಸುಮಾರು 3200 ಕಿಮೀ ದೂರದ ಈ ವ್ಯವಸ್ಥೆ ಒಂದು ದೊಡ್ಡ ಸಾಧನೆ. 1940ರ ವರೆಗೂ ಈ ಪ್ರದೇಶದಲ್ಲಿದ್ದ ತಂತಿವ್ಯವಸ್ಥೆ ಇದೊಂದೇ.

ಕಬ್ಬು, ರಬ್ಬರ್, ಕಾಫಿ ಮುಂತಾದ ಹಣದ ಬೆಳೆ ಬೆಳೆಯಲು ಪ್ರಯತ್ನಗಳು ನಡೆದವು. ಆದರೆ ಪ್ರತಿಕೂಲ ವಾಯುಗುಣ, ದೂರ ಹಾಗೂ ಪ್ರತಿಕೂಲವಾದ ಜಮೀನು ಹಿಡುವಳಿ ಪದ್ಧತಿ ಇವುಗಳಿಂದಾಗಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಈ ತೋಟಗಳನ್ನು ಬೆಳೆಸಲೂ ಲೋಕೋಪಯೋಗಿ ಕಾಮಗಾರಿಗಾಗಿಯೂ ಚೀನಿಯರನ್ನು ಕರೆಸಲಾಗಿತ್ತು. ಅವರು ಚಿನ್ನದ ಆಸೆಗೆ ಬಲಿ ಬಿದ್ದು ಆ ಲೋಹದ ಅನ್ವೇಷಣೆಯಲ್ಲಿ ತೊಡಗಿ ಭಗ್ನಮನೋರಥರಾದರು. ಡಾರ್ವಿನ್ನಿನಿಂದ ದಕ್ಷಿಣಕ್ಕೆ ಪೈನ್ಕ್ರೀಕ್ವರೆಗೆ ಸುಮಾರು 200 ಕಿಮೀ. ದೂರ ದಕ್ಷಿಣ ಆಸ್ಟ್ರೇಲಿಯದ ಪೋರ್ಟ್ ಆಗಸ್ಟದಿಂದ ಆಲಿಸ್ ಸ್ಪ್ರಿಂಗ್ಸ್‌ಗೂ ರೈಲು ಮಾರ್ಗಗಳು ನಿರ್ಮಾಣವಾದವು. 1911ರಲ್ಲಿ ಆಸ್ಟ್ರೇಲಿಯ ಸರ್ಕಾರ ಈ ಪ್ರದೇಶದ ಆಡಳಿತವನ್ನು ದಕ್ಷಿಣ ಆಸ್ಟ್ರೇಲಿಯದಿಂದ ತೆಗೆದುಕೊಂಡಿತು. ಉತ್ತರ ಸೀಮೆಯ ನಾನಾ ಸಮಸ್ಯೆಗಳ ಬಗ್ಗೆ ಆಯೋಗಗಳು ವರದಿ ಸಲ್ಲಿಸಿದವು. ಇದರ ಆಡಳಿತದಲ್ಲಿ ನಾನಾ ಸುಧಾರಣೆಗಳಾದವು. 20ನೆಯ ಶತಮಾನದ 2ನೆಯ ದಶಕದಲ್ಲಿ ಇದನ್ನು ಮಧ್ಯ ಆಸ್ಟ್ರೇಲಿಯ ಮತ್ತು ಉತ್ತರ ಆಸ್ಟ್ರೇಲಿಯ ಎಂದು ಎರಡು ಭಾಗ ಮಾಡಲಾಯಿತು. ಆದರೆ 1931ರಲ್ಲಿ ಇವನ್ನು ಮತ್ತೆ ಒಂದುಗೂಡಿಸಲಾಯಿತು. ಅಂತೂ ಈ ಪ್ರದೇಶ ಸಮಸ್ಯೆಗಳಿಂದ ತುಂಬಿದೆ. ಪ್ರಗತಿ ನಿಧಾನ. ಡಾರ್ವಿನ್ನಿನಲ್ಲಿ ಕಾರ್ಮಿಕ ತೊಂದರೆಗಳು ಹೆಚ್ಚು.

20ನೆಯ ಶತಮಾನದ 3ನೆಯ ದಶಕದಲ್ಲಿ ವಿಮಾನ ಸೌಲಭ್ಯ ಬೆಳೆದಾಗ ಡಾರ್ವಿನ್ ಹೆಚ್ಚು ಪ್ರಾಮುಖ್ಯಕ್ಕೆ ಬಂತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಇದರ ಮೇಲೆ ಕಣ್ಣುಹಾಕಿದರು. 1942ರಲ್ಲಿ ಡಾರ್ವಿನ್ ಜಪಾನಿಗಳ ಬಾಂಬಿಗೆ ಗುರಿಯಾಗಲಾಗಿ ಉತ್ತರ ಆಸ್ಟ್ರೇಲಿಯದಲ್ಲೇ ಸೈನಿಕ ನೆಲೆಗಳನ್ನು ಸ್ಥಾಪಿಸಲಾಯಿತು. ಆಸ್ಟ್ರೇಲಿಯ ಸರ್ಕಾರಕ್ಕೆ ಈ ಪ್ರದೇಶದಲ್ಲಿ ಆಸಕ್ತಿ ಹೆಚ್ಚಿತು. ಯುದ್ಧಾನಂತರ ಇಲ್ಲಿ ಗಣಿಗಾರಿಕೆಯನ್ನು ಬೆಳೆಸಲಾಗುತ್ತಿದೆ. ಮೂಲನಿವಾಸಿಗಳ ಹಿತರಕ್ಷಣೆಯ ಕಾರ್ಯ ಸಾಗಿದೆ. 1962ರಲ್ಲಿ ಅವರಿಗೆ ಮತದಾನದ ಹಕ್ಕು ಲಭಿಸಿತ್ತು. ಅವರಿಗಾಗಿ ಅನೇಕ ಶಾಲೆಗಳನ್ನು ತೆರೆಯಲಾಯಿತು.