ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರ ಪಿನಾಕಿನಿ

ವಿಕಿಸೋರ್ಸ್ ಇಂದ
Jump to navigation Jump to search

ಉತ್ತರ ಪಿನಾಕಿನಿ: ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಚನ್ನಕೇಶವ ಬೆಟ್ಟದಲ್ಲಿ ಹುಟ್ಟುವ ಒಂದು ನದಿ ಉದ್ದ 597 ಕಿಮೀ ಅದರಲ್ಲಿ 61 ಕಿಮೀ ದೂರ ಕರ್ನಾಟಕದಲ್ಲಿ ಹರಿಯುತ್ತದೆ. ವಾಯವ್ಯದಲ್ಲಿರುವ ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ 48 ಕಿಮೀ ದೂರ ಹರಿದು ಅನಂತರ ಆಂಧ್ರ ಪ್ರದೇಶವನ್ನು ಪ್ರವೇಶಿಸುತ್ತದೆ. ಅಲ್ಲಿ ಹಿಂದುಪುರ ಮತ್ತು ಪಾವಗಡ ತಾಲ್ಲೂಕಿನಲ್ಲಿ ಹರಿದು ನೆಲ್ಲೂರು ಜಿಲ್ಲೆಯಲ್ಲಿ ಬಂಗಾಲಕೊಲ್ಲಿಯನ್ನು ಸೇರುತ್ತದೆ. ಜಯಮಂಗಲಿ, ಚಿತ್ರಾವತಿ ಮತ್ತು ಪಾಪಾಗ್ನಿ ಎಂಬುವವು ಇದರ ಉಪನದಿಗಳು. ಕೋಲಾರ ಜಿಲ್ಲೆಯ ಎರಡು ಪಟ್ಟಣಗಳಾದ ಮಂಚೇನಹಳ್ಳಿ ಮತ್ತು ಗೌರಿಬಿದನೂರು ಈ ನದಿಯ ದಡದ ಮೇಲಿವೆ. ಇದು ಧನುಸ್ಸಿನಾಕಾರದಲ್ಲಿರುವುದರಿಂದ ಇದಕ್ಕೆ ಪಿನಾಕಿನಿ ಎಂಬ ಹೆಸರು ಬಂದಿರಬಹುದು. ಇದನ್ನು ಉತ್ತರ ಪೆನ್ನಾರ್ ಎಂದು ಕರೆಯುತ್ತಾರೆ. ಹೆಚ್ಚು ಮರಳನ್ನು ಹೊತ್ತು ತರುವ ಈ ನದಿ ವರ್ಷದಲ್ಲಿ ಹೆಚ್ಚುಕಾಲ ನೆಲದ ಅಡಿಯಲ್ಲಿ ಹರಿಯುತ್ತದೆ.

ಈ ನದಿಯ ಕರ್ನಾಟಕ ರಾಜ್ಯದ ಜಲಾನಯನ ಪ್ರದೇಶದಲ್ಲಿ ಸು. 116 ಕೆರೆಗಳಿವೆ. ಜಕ್ಕಲಮಡಗು ಮತ್ತು ಶ್ರೀನಿವಾಸ ಸಾಗರಗಳು ಇದರ ಎರಡು ಮುಖ್ಯ ಅಣೆಕಟ್ಟುಗಳು. ವಿದುರಾಶ್ವತ್ಥ ಪುಣ್ಯಕ್ಷೇತ್ರ ಇರುವುದು ಇದರ ದಡದಲ್ಲೇ. ಇಲ್ಲಿನ ಪವಿತ್ರ ಅಶ್ವತ್ಥಮರವನ್ನು ಮಹಾಭಾರತದ ವಿದುರನೇ ನೆಟ್ಟನೆಂದು ನಂಬಿಕೆ.