ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉದಯಾದಿತ್ಯ 2
ಉದಯಾದಿತ್ಯ 2 ಉದಾಯಾದಿತ್ಯ ಎಂಬ ಹೆಸರಿನ, ಬೇರೆ ಬೇರೆ ಸಂತತಿಗಳಿಗೆ ಸೇರಿದ ಅನೇಕ ರಾಜರು ಭಾರತದ ಭಿನ್ನ ಭಿನ್ನ ಭಾಗಗಳಲ್ಲಿ, ಭಿನ್ನ ಭಿನ್ನ ಕಾಲಗಳಲ್ಲಿ ರಾಜ್ಯವಾಳಿದರು.
ಮಾಳವದ ಪಾರಮಾನ ಸಂತತಿಗೆ ಸೇರಿದ ಉದಯಾದಿತ್ಯ ರಾಜನ ಹೆಸರು 1080-1086ರ ಅವಧಿಯ ಶಾಸನಗಳಲ್ಲಿ ಉಲ್ಲೇಖವಾಗಿದೆ. ಶೂರನು ವಿದ್ಯಾಪಕ್ಷಪಾತಿಯೂ ಆದ ಭೋಜರಾಜನ ಅನಂತರ ಪಟ್ಟಕ್ಕೆ ಬಂದ ಅವನ ಮಗ ಜಯಸಿಂಹನನ್ನು ಚಾಲುಕ್ಯ ಚಕ್ರವರ್ತಿಯಾದ ಇಮ್ಮಡಿ ಸೋಮೇಶ್ವರ ಸೋಲಿಸಿಮಾಳವ ರಾಜ್ಯವನ್ನು ವಶಪಡಿಸಿಕೊಂಡ. ಆಗ ಭೋಜನ ಸೇನೆಯನ್ನು ಸೋಲಿಸಿ ಮತ್ತೆ ಮಾಳವವನ್ನು ವಶಪಡಿಸಿಕೊಂಡ. ಉದಯಾದಿತ್ಯ ಉದಯಪುರದಲ್ಲಿರುವ ಪ್ರಸಿದ್ಧವಾದ ನೀಲಕಂಠೇಶ್ವರ ದೇವಾಲಯವನ್ನು ಕಟ್ಟಿಸಿದ. ಈತನಿಗೆ ಲಕ್ಷ್ಮೀದೇವ, ನಾರವರ್ಮನ್ ಮತ್ತು ಜಗದ್ದೇವ ಎಂಬ ಮೂರು ಮಂದಿ ಗಂಡು ಮಕ್ಕಳಿದ್ದರೆಂದೂ ಅವರು ಒಬ್ಬರಾದ ಅನಂತರ ಮತ್ತೊಬ್ಬರಂತೆ ರಾಜ್ಯವಾಳಿದರೆಂದೂ ತಿಳಿದು ಬರುತ್ತದೆ.
ಉದಯಾದಿತ್ಯ ವರ್ಮನ್ (ಕಂಬುಜ): 5ನೆಯ ಜಯವರ್ಮನ ಆಳ್ವಿಕೆಯ ಅನಂತರ ಆತನ ಮಗನಾದ ಉದಯಾದಿತ್ಯವರ್ಮ 1049ರಲ್ಲಿ ಕಂಬುಜ ರಾಜ್ಯದ ಸಿಂಹಾಸನಕ್ಕೇರಿದ. ಈತನ ಆಳ್ವಿಕೆಯ ಕಾಲದಲ್ಲಿ ಅತ್ಯಂತ ಜಟಿಲವಾದ ಸಮಸ್ಯೆಗಳು ಉದ್ಭವವಾದುವು. ರಾಜ್ಯದಲ್ಲೆಲ್ಲ ದಂಗೆಗಳು ತಲೆದೋರಿದುವು. ದಂಗೆಯನ್ನಡಗಿಸಲು ಉದಯಾದಿತ್ಯವರ್ಮ ಅಸಮರ್ಥನಾದ. ಈ ಮಧ್ಯೆ ಚಂಪದ ರಾಜ ಕಂಬುಜಕ್ಕೆ ಮುತ್ತಿಗೆ ಹಾಕಿದ. ಅಂಥ ದುಃಸ್ಥಿತಿಯ ಸಮಯದಲ್ಲಿ 1066ರಲ್ಲಿ ಉದಯಾದಿತ್ಯವರ್ಮನ್ ಮರಣ ಹೊಂದಿದ. ಆತನ ಮಂತ್ರಿಗಳೂ ರಾಜಗುರುವೂ ಸೇರಿ ಆತನ ತಮ್ಮನಾದ ಹರ್ಷವರ್ಮನನ್ನು ಕಂಬುಜದ ಉತ್ತರಾಧಿಕಾರಿಯನ್ನಾಗಿ ಮಾಡಿದರು.
ಉದಯಾದಿತ್ಯ ಎಂಬ ಹೆಸರಿನ ರಾಜಕುಮಾರನೊಬ್ಬ ಹೊಯ್ಸಳ ಸಂತತಿಯಲ್ಲಿದ್ದ. ಒಂದನೆಯ ಬಲ್ಲಾಳ, ವಿಷ್ಣುವರ್ಧನ ಮತ್ತು ಉದಯಾದಿತ್ಯ ಈ ಮೂವರು ಸಹೋದರರು ಇಮ್ಮಡಿ ವಿನಯಾದಿತ್ಯನ ಮೊಮ್ಮಕ್ಕಳು ಮತ್ತು ಯುವರಾಜ ಎರೆಯಂಗನ ಮಕ್ಕಳು. ವಿಷ್ಣುವರ್ಧನ ಚೋಳರನ್ನು ಸೋಲಿಸಿ ಗಂಗವಾಡಿಯನ್ನು (1116) ವಶಪಡಿಸಿಕೊಂಡ ಅನಂತರ ತನ್ನ ಕಿರಿಯ ತಮ್ಮನಾದ ಉದಯಾದಿತ್ಯನನ್ನು ಕೋಲಾರ ಪ್ರದೇಶದ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ್ದ. ಈತ 1123ರಲ್ಲಿ ಬೇತಮಂಗಲ ಎಂಬಲ್ಲಿ ಮರಣ ಹೊಂದಿದ.
ಉದಯಾದಿತ್ಯ ಎಂಬ ಹೆಸರಿನ ನೊಳಂಬ ಪಲ್ಲವರಾಜನೊಬ್ಬನಿದ್ದ. ಸುಮಾರು 750ರಿಂದ 1055ರ ವರೆಗೆ ಆಂಧ್ರದ ಅನಂತಪುರ, ಮೈಸೂರಿನ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಕೆಲವು ಭಾಗಗಳನ್ನೊಳಗೊಂಡ ರಾಜ್ಯವನ್ನು ನೊಳಂಬವಾಡಿ ಎಂಬುದಾಗಿ ಕರೆಯಲಾಗಿತ್ತು. ನೊಳಂಬರು ಗಂಗರ ಮಾರಸಿಂಹನೊಳಂಬ ಕುಲಾಂತಕನಿಂದ 974ರಲ್ಲಿ ಸೋಲಿಸಲ್ಪಟ್ಟ ಮೇಲೆ ಅವರು ಬಳ್ಳಾರಿ ಜಿಲ್ಲೆಯ ಕಂಪಿಲೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಹಲವು ಕಾಲ ತಮ್ಮ ಆಳ್ವಿಕೆಯನ್ನು ಮುಂದುವರಿಸಿದರು. ಜಗದೇಕಮಲ್ಲ ನೊಳಂಬ ಪಲ್ಲವ ರಾಜನ ಅನಂತರ 1035ರ ಸುಮಾರಿನಲ್ಲಿ ಉದಯಾದಿತ್ಯ ನೊಳಂಬ (ಪಲ್ಲವ ಪೆರುಮಾನಂದಿ) ರಾಜನಾದ. ಈತನ ವಿಷಯವಾಗಿ ಹೆಚ್ಚು ವಿವರಗಳು ತಿಳಿದು ಬರುವುದಿಲ್ಲ.
ಉದಯಾದಿತ್ಯ ಎಂಬ ಹೆಸರಿನ ರಾಜನೊಬ್ಬ ಜಯಂತೀಪುರದ ಕದಂಬ ಸಂತತಿಯಲ್ಲಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಈತ ಧರ್ಮಖೇದಿಯ ಮಗ. ಉದಯಾದಿತ್ಯ ಶ್ವೇತಗಂಗ ಮನೆತನದ ರಾಜನಾದ ದೇವೇಂದ್ರವರ್ಮನ ಸಾಮಂತನಾಗಿದ್ದ. 1081ರಲ್ಲಿ ಹುಟ್ಟಿದ ಕಂಬಕಾಯ ಶಾಸನ ಉದಯಾದಿತ್ಯನಿಂದ ಸ್ಥಾಪಿತವಾಯಿತು. ಪಾರ್ತಕಿ ಮೇದಿ ಶಾಸನದಲ್ಲಿ ಉದಯಖೇದಿ ಎಂಬ ರಾಜನ ಉಲ್ಲೇಖವಿದೆ. ಉದಯಖೇದಿ ಎಂಬುದು ಉದಯಾದಿತ್ಯನ ಮತ್ತೊಂದು ಹೆಸರಾಗಿರಬೇಕೆಂದು ಹಲವು ವಿದ್ವಾಂಸರು ಊಹಿಸಿದ್ದಾರೆ. ಪಾರ್ತಕಿ ಮೇದಿ ಶಾಸನ ಎಪಿಗ್ರಾಫಿಯ ಇಂಡಿಕದ 3ನೆಯ ಸಂಪುಟದಲ್ಲಿ ಅಚ್ಚಾಗಿದೆ.
(ಜಿ.ಆರ್.ಆರ್.)