ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪಪಾಂಡವರು

ವಿಕಿಸೋರ್ಸ್ ಇಂದ
Jump to navigation Jump to search

ಉಪಪಾಂಡವರು: ದ್ರೌಪದಿಯ ಐದು ಮಂದಿ ಮಕ್ಕಳು. ಪ್ರತಿವಿಂಧ್ಯನ ತಂದೆ ಧರ್ಮರಾಜ. ಶ್ರುತಸೋಮನ ತಂದೆ ಭೀಮಸೇನ. ಶ್ರುತಕೀರ್ತಿಯ ತಂದೆ ಅರ್ಜುನ. ಈತನನ್ನು ಶ್ರುತಕರ್ಮ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಮಹಾಭಾರತ ಯುದ್ಧದ ಹದಿನಾರನೆಯ ದಿವಸ ಈತ ಶಲ್ಯನೊಡನೆ ಯುದ್ಧ ಮಾಡಿ ಸೋತ. ಶತಾನೀಕನ ತಂದೆ ನಕುಲ. ಶ್ರುತಸೇನನ ತಂದೆ ಸಹದೇವ.

ಮಹಾಭಾರತ ಯುದ್ಧ ಮುಗಿದ ರಾತ್ರಿಯಲ್ಲಿ ಈ ಐದು ಮಂದಿ ಸಹೋದರರೂ ಶಿಬಿರದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅಶ್ವತ್ಥಾಮ ಯಾರಿಗೂ ತಿಳಿಯದಂತೆ ಶಿಬಿರಕ್ಕೆ ನುಗ್ಗಿ ಇವರ ತಲೆಗಳನ್ನು ತುಂಡರಿಸಿದ. ಉಪಪಾಂಡವರು ಪೂರ್ವಜನ್ಮದಲ್ಲಿ ವಿಶ್ವೇದೇವತೆಗಳಾಗಿದ್ದವರು. ಹರಿಶ್ಚಂದ್ರನ ಪತ್ನಿಯಾದ ಚಂದ್ರಮತಿಯನ್ನು ವಿಶ್ವಾಮಿತ್ರ ಋಷಿ ಪೀಡಿಸುತ್ತಿದ್ದುದನ್ನು ಕಂಡು ಈ ದೇವತೆಗಳು ಮರುಕಗೊಂಡು ವಿಶ್ವಾಮಿತ್ರನನ್ನು ತೆಗಳಿದರು. ಕುಪಿತನಾದ ವಿಶ್ವಾಮಿತ್ರ ಭೂಲೋಕದಲ್ಲಿ ಮನುಷ್ಯರಾಗಿ ಹುಟ್ಟುವಂತೆ ಶಾಪಕೊಟ್ಟ. ಹೆದರಿದ ವಿಶ್ವೇದೇವತೆಗಳು ವಿಶ್ವಾಮಿತ್ರನನ್ನು ಕಂಡು ಕೇಳಿಕೊಂಡಾಗ ಮದುವೆಗೆ ಮೊದಲೇ ಸತ್ತು ಶಾಪದಿಂದ ವಿಮೋಚಿತರಾಗುವಂತೆ ಅನುಗ್ರಹಿಸಿದ. ಅದರಂತೆ ದ್ರೌಪದಿಯಲ್ಲಿ ಉಪಪಾಂಡವರಾಗಿ ಹುಟ್ಟಿ ಮದುವೆಗೆ ಮುಂಚೆಯೇ ಸತ್ತು ಶಾಪದಿಂದ ವಿಮುಕ್ತರಾದರು ಎಂದು ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. (ಎಸ್.ಎನ್.ಕೆ.)