ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪವಾಸ ಮುಷ್ಕರ
ಉಪವಾಸ ಮುಷ್ಕರ: ನ್ಯಾಯವಾದ ಬೇಡಿಕೆಗಳನ್ನು ಮೂಲೆಗೊತ್ತಿದ ಸರ್ಕಾರದ ಅಥವಾ ಯಾವುದಾದರೂ ಅಧಿಕಾರದ ವಿರುದ್ಧ ಅವರ ಮನವನ್ನು ಒಲಿಸಿಕೊಳ್ಳಲು ಪ್ರಯೋಗಿಸುವ ಒಂದು ಮಾರ್ಗ (ಹಂಗರ್ ಸ್ಟ್ರೈಕ್). ಇದು ನೈತಿಕ ಪ್ರಯೋಗವಾದ ಸತ್ಯಾಗ್ರಹದ ಒಂದು ರೂಪ. ಸಮಾಜದ ಅನ್ಯಾಯಗಳನ್ನು ವಿರೋಧಿಸಲು, ಕೇಡುಮಾಡಿದವರ ವರ್ತನೆಯನ್ನು ಬದಲಾಯಿಸಲು, ಹಲವುವೇಳೆ ತಮ್ಮ ಆತ್ಮಶುದ್ಧಿಗಾಗಿಯೂ, ಜನ ಈ ಮುಷ್ಕರವನ್ನು ಕೈಗೊಳ್ಳುತ್ತಾರೆ. ಅನ್ಯಾಯ ಮಾಡಿದವರ ಮನಸ್ಸನ್ನು ಪರಿವರ್ತಿಸುವ ಸಲುವಾಗಿ ಕೈಗೊಳ್ಳುವ ಈ ಮುಷ್ಕರದಿಂದ ತಮಗೆ ಉಂಟಾಗಬಹುದಾದ ಎಲ್ಲ ತೊಂದರೆಗ ಳನ್ನು ಅನುಭವಿಸಲು ಸಿದ್ಧರಾಗಿಯೂ ಇವರು ಇರುವರು. ಇಂಥ ಮುಷ್ಕರಕ್ಕೆ ತೊಡಗುವ ಜನ ಸಾಮಾನ್ಯರಿಗಿಂತ ಭಿನ್ನರಾಗಿರಬೇಕು. ನಿಷ್ಠಾವಂತರೂ ಪ್ರಾಮಾಣಿಕರೂ ಆಗಿರುವವರು ಮಾತ್ರ ಈ ಕಾರ್ಯಗಳಿಗೆ ಉದ್ಯುಕ್ತರಾದಾಗ ಅದರಿಂದ ಬರುವ ಫಲ ಮಹತ್ತ್ವಪುರಿತ ವಾದುದಾಗಿರುತ್ತದೆ. ಮಹಾತ್ಮ ಗಾಂಧೀಜಿ ಈ ವಿಧಾನಕ್ಕೆ ಹೆಚ್ಚಿಗೆ ಪ್ರಾಶಸ್ತ್ಯ ಕೊಟ್ಟಿದ್ದರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದನ್ನು ಅನೇಕ ವೇಳೆ ಬಳಸಿದ್ದೂ ಉಂಟು. ಉಪವಾಸ ಮುಷ್ಕರ ಸ್ವಯಂ ಪ್ರೇರಿತವಾಗಿರಬೇಕು; ಹಾಗೂ ಅಹಿಂಸಾತ್ಮಕವಾಗಿರ ಬೇಕು. ಅನ್ಯಾಯದ ವಿರುದ್ಧ ಇರಬೇಕು. ಮನಸ್ಸಿನ ನೈರ್ಮಲ್ಯ, ಧಾರ್ಮಿಕ ಸತ್ಯ, ನೈತಿಕಬಲ, ಶಿಸ್ತು, ನಮ್ರತೆ ಇವನ್ನು ಪಡೆದವರು ಮಾತ್ರ ಉಪವಾಸ ಮುಷ್ಕರ ಕೈಗೊಳ್ಳಬೇಕೆಂದು ಗಾಂಧೀಜಿಯ ಅಭಿಮತ. ಇತ್ತೀಚೆಗೆ ಇದರ ವ್ಯಾಪಕತೆ, ಮಹತ್ತ್ವ ಕಡಿಮೆಯಾಗುತ್ತಿದೆ. ಏಕೆಂದರೆ ನ್ಯಾಯವಲ್ಲದ ಬೇಡಿಕೆಗಳಿಗೂ ಈ ಮುಷ್ಕರವನ್ನು ಬಳಸುತ್ತಿರುವುದರಿಂದ ಇದರ ಅಂತಃಸತ್ವ ಸವಕಲಾಗಿ ಹಾಸ್ಯಾಸ್ಪದವಾಗುತ್ತಿದೆ (ನೋಡಿ-ಸತ್ಯಾಗ್ರಹ). (ಎನ್.ಎಸ್.ಎಚ್.)