ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉರಗಪಕ್ಷಿ

ವಿಕಿಸೋರ್ಸ್ದಿಂದ

ಉರಗಪಕ್ಷಿ: ಉರಗವರ್ಗದ ಡೈಆಪ್ಸಿಡ ಉಪವರ್ಗದ ಟೀರೋಸಾರಿಯ ಗಣದ ಗತವಂಶೀ ಪ್ರಾಣಿಗಳು (ಟಿರೋಡಾಕ್ಟೈಲ್). ಹಾರುವ ಉರಗ, ಪಕ್ಷಾಂಗುಲಿ-ಪರ್ಯಾಯ ನಾಮಗಳು. ಕೆಳ ಜುರಾಸಿಕ್ ಯುಗದಲ್ಲಿ ಆರಂಭವಾದ ಈ ಪ್ರಾಣಿಗಳು ಮೀಸೋಜೋಯಿಕ್ ಕಲ್ಪ ಕೊನೆಯವರೆಗೂ ಬಾಳಿದ್ದುದಕ್ಕೆ ಆಧಾರಗಳಿವೆ (ಸುಮಾರು 170-65 ದ. ಲ. ವ. ಪ್ರಾಚೀನಕಾಲ). ವಾಸ ಬೆಟ್ಟಗುಡ್ಡಗಳಲ್ಲಿ. ಇವನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಒಂದು ಗುಂಪಿನ ಉರಗಪಕ್ಷಿಗಳಿಗೆ ಉದ್ದವಾದ ಬಾಲ ಮತ್ತು ತುದಿಯಲ್ಲಿ ಸಮಾನಾಂತರವಾದ ರೆಕ್ಕೆ ಇದೆ. ಮತ್ತೊಂದು ಗುಂಪಿನವಕ್ಕೆ ಬಾಲವೂ ಇಲ್ಲ, ರೆಕ್ಕೆಯೂ ಇಲ್ಲ. ರ್ಹ್ಯಾಂಫೊರಿಂಕಸ್ ಟೀರೋಸಾರಿಯ ಗಣದ ಒಂದು ಜಾತಿ. ಇದರ ಜೀವಾವಶೇಷ ಇಂಗ್ಲೆಂಡಿನಲ್ಲಿ ಸಿಕ್ಕಿದೆ; ಚಿಕ್ಕದೇಹ-ಉದ್ದ 10 ಸೆಂ. ಮೀ. ಸುತ್ತಳತೆ 3.7 ಸೆಂ.ಮೀ. ತಲೆಯ ಉದ್ದ 8 ಸೆಂ.ಮೀ. ದೊಡ್ಡ ಬಾಯಿ ಅದರೊಳಗೆ ಉದ್ದ, ದಪ್ಪ ಮತ್ತು ಚೂಪು ಹಲ್ಲುಗಳು. ಕೆಳದವಡೆ ಕೂಡುವ ಸ್ಥಳದಿಂದ ಸ್ವಲ್ಪ ಮೇಲ್ಭಾಗದಲ್ಲಿ ಒಂದೊಂದು ದೊಡ್ಡ ಕಣ್ಣು ಇದೆ. ಅವುಗಳ ಸುತ್ತಲೂ ಪಕ್ಷಿಗಳಿಗಿರುವ ಹಾಗೆ ಸರದಂತೆ ಜೋಡಿಸಿದ ಎಲುಬಿನ ತಟ್ಟೆಗಳಿವೆ. ಕಣ್ಣುಗಳಿಗೆ ಸ್ವಲ್ಪ ದೂರದಲ್ಲಿ ಎರಡು ನಾಸಿಕ ರಂಧ್ರಗಳಿವೆ. 40 ಸೆಂ.ಮೀ. ಉದ್ದವುಳ್ಳ ಕತ್ತು ತಲೆಯನ್ನು ಇಕ್ಕೆಲಕ್ಕೂ ಬಾಗಿಸಲು ಅನುಕೂಲವಾಗಿತ್ತೆನ್ನಬಹುದು. ಉರಗಪಕ್ಷಿಯ ಬಾಲ ಮಾತ್ರ 40 ಸೆಂ.ಮೀ. ಉದ್ದವಿದ್ದು ಅನೇಕ ಅಸ್ಥಿ, ಸ್ನಾಯುಗಳ ಜೋಡಣೆಯಿಂದ ಗಡುಸಾಗಿತ್ತು. ಆದ್ದರಿಂದ ಇಡೀ ಬಾಲವೇ ಚಲಿಸಿರಬೇಕು ಎಂದು ಊಹಿಸಬಹುದು. ಚರ್ಮದ ಮಡಿಕೆಗಳಿಂದಾದ ಚಾಚಿದ ಪದರಗಳೇ ರೆಕ್ಕೆಗಳಾಗಿ ಮಾರ್ಪಟ್ಟಿದ್ದವು. ಇವು ಅತಿ ಉದ್ದನಾದ ಮುಂಗಾಲುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿವೆ. ಹರಡಿಕೊಂಡಾಗ ರೆಕ್ಕೆಗಳು 70 ಸೆಂ.ಮೀ ಗಳಷ್ಟು ಅಗಲವಾಗುತ್ತಿದ್ದವು. ರೆಕ್ಕೆಯ ಮುಂಭಾಗದ ಅಂಚಿನಲ್ಲಿ ಒಂದು ಬೆರಳು ಇದೆ. ರೆಕ್ಕೆಯ ಪದರ ಸುಮಾರು 5 ಸೆಂ.ಮೀ. ಅದಕ್ಕೆ ಮುಂಗಾಲಿನಿಂದ ಹಿಂಗಾಲಿನವರೆಗೂ ಶರೀರದ ಜೊತೆ ಸಂಬಂಧ ಇದೆ. ಬಾಲದ ತುದಿಯಲ್ಲಿ ಸಮಾನಂತರವಾದ ಒಂದು ಪದರವಿದೆ. ಮೊದಲ ಮೂರ ಕೈ ಬೆರಳುಗಳು ಬಿಡಿ ಬಿಡಿಯಾಗಿವೆಯಲ್ಲದೆ ಅವಕ್ಕೆ ಉದ್ದನಾದ ಉಗುರುಗಳಿವೆ. ಇವು ರೆಕ್ಕೆಯ ಮುಂಭಾಗದ ಹೊರಪಾಶರ್ವ್‌ದಲ್ಲಿದ್ದು ಆಹಾರ ಹಿಡಿಯಲು ಅಥವಾ ಹಾರಾಟದಿಂದ ಕೆಳಗೆ ಇಳಿಯಲು ಸಹಾಯ ಆಗಿದ್ದಿರಬೇಕು. ಮಂಡಿಯ ಚಿಪ್ಪು ದೇಹದಿಂದ ಹೊರಕ್ಕೆ ಚಾಚಿದೆ. ಉದ್ದನಾದ ಮೊಣಕಾಲಿನಲ್ಲಿ 5 ಕಾಲ್ಬೆರಳುಗಳಿವೆ. ಅವುಗಳಲ್ಲಿ ಒಂದು ಮಾತ್ರ ಯಾವಾಗಲೂ ಒಳಪಾಶರ್ವ್‌ಕ್ಕೂ ಕೆಳಕ್ಕೂ ಬಾಗಿರುತ್ತದೆ. ಉಳಿದ 4 ಬೆರಳುಗಳೂ ಪದರದಿಂದ ಬಂಧಿಸಲ್ಪಟ್ಟಿವೆ. ರ್ಹ್ಯಾಂಫೊರಿಂಕನ ದೇಹದ ಮೇಲೆ ಮೃದುವಾದ ಫಲಕರಹಿತ ಚರ್ಮದ ಹೊದಿಕೆ ಇದೆ. ಆದರೆ ತಲೆಯ ನೆತ್ತಿಯ ಮೇಲೆ ಗೊಂಚಲು ಕೂದಲಿನಂತಹ ಗಂಟುಗಳಿವೆ.

ಜೂರಾಸಿಕ್ ಕಲ್ಪದ ಗುಬ್ಬಚ್ಚಿಗಿಂಗಲೂ ದೊಡ್ಡವಲ್ಲದ ಪಕ್ಷಾಂಗುಲಿಗಳು ಬಾಲವಿಲ್ಲದ ಗುಂಪಿಗೆ ಸೇರಿವೆ. ಕ್ರಿಟೀಷಿಯಸ್ ಕಲ್ಪದಲ್ಲಿ ಬಾಲವುಳ್ಳ ಪಕ್ಷಾಂಗುಲಿ ವಂಶ ನಾಶವಾದರೂ ಅದರ ಸಂತತಿ ಮುಂದುವರಿದು ಅತ್ಯಧಿಕ ಗಾತ್ರವನ್ನು ತಾಳಿತು. ಇದೇ ಕಾನ್ಸಾಸ್ ಜಾಕಿನಲ್ಲಿ ಸಿಕ್ಕಿದ ಟಿರಾನೊಡಾನ್ (ಟೀರೋಸಾರಿನ ಒಂದ ಜಾತಿ). ಈ ಪ್ರಾಣಿಗೆ 18" ಉದ್ದದ ರೆಕ್ಕೆಯಿತ್ತು. ಅದರ ತಲೆಯ ಉದ್ದ 4". ಬಹುಶಃ ಪಕ್ಷಾಂಗುಲಿಗಳ ಪೈಕಿ ಇದೇ ಅತ್ಯಂತ ದೊಡ್ಡ ಪ್ರಾಣಿಯಾಗಿದ್ದಿರಬೇಕು. ದೇಹ ದೊಡ್ಡದಿದದರೂ ಶರೀರ ಮಾತ್ರ ಹಗುರವಾಗಿತ್ತು. ರೆಕ್ಕೆಯ ಎಲುಬುಗಳು ಬಲು ತೆಳುವಾದ ಪದರದಿಂದ ಕೂಡಿದ್ದುವು. ಅಲ್ಲದೆ ಅವಕ್ಕೆ 1"ನಷ್ಟು ವ್ಯಾಸದ ಗಾಳಿ ಅವಕಾಶವೂ ಇತ್ತು. ಕಾನ್ಸಾಸ್ ಮತ್ತು ಇಂಗ್ಲಿಷ್ ಚಾಕುಗಳಲ್ಲಿ ಸಿಕ್ಕಿರುವ ಪಳೆಯುಳಿಕೆಗಳ ಆಧಾರದ ಮೇರೆಗೆ ಅವು ಭೂಮಿಯಿಂದ ಸುಮಾರು ನೂರಾರು ಮೈಲಿದೂರ ಹಾರಿರಲು ಸಾಧ್ಯ ಎಂದು ಊಹಿಸಬಹುದು. ಈ ಪ್ರಾಣಿಯ ಮಿದುಳು ಪಕ್ಷಿಯ ಮಿದುಳಿನಷ್ಟಿತ್ತು. ಘ್ರಾಣೀಂದ್ರಿಯವಿರಲಿಲ್ಲವಾದ್ದರಿಂದ ದೃಷ್ಟಿಯ ಮೂಲಕವೇ ಅದು ಆಹಾರವನ್ನು ಗುರುತಿಸುತ್ತಿತ್ತೆನ್ನಬಹುದು (ನೋಡಿ -[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಟಿರಾನೊಡಾನ್). (ಕೆ.ಎಂ.ವಿ.)