ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉರ್ದುಭಾಷೆ

ವಿಕಿಸೋರ್ಸ್ ಇಂದ
Jump to navigation Jump to search

ಉರ್ದುಭಾಷೆ ಇಂಡೋ-ಯೂರೋಪಿಯನ್ ಭಾಷಾವರ್ಗಕ್ಕೆ ಸೇರಿದ ಆರ್ಯ ಭಾಷೆ. ಸಿಮಿಟಿಕ್ ಲಿಪಿಯ ಗುಂಪಿಗೆ ಸೇರಿದ ಅರಬ್ಬೀ ಲಿಪಿಯನ್ನು ಕೊಂಚ ಬದಲಾವಣೆ ಮಾಡಿ ಇದಕ್ಕೆ ಅಳವಡಿಸಿಕೊಳ್ಳಲಾಗಿದೆ. ಪರ್ಷಿಯನ್ ಲಿಪಿಯೂ ಇದನ್ನೇ ಹೋಲುತ್ತದೆ. ಬರವಣಿಗೆ ಬಲದಿಂದ ಎಡಕ್ಕೆ, ದೆಹಲಿಯ ಸುತ್ತಮುತ್ತ ಆಡುತ್ತಿದ್ದ ಶೌರಸೇನೀ ಅಥವಾ ಅಪಭ್ರಂಶದಿಂದ (12ನೆಯ ಶತಮಾನ) ಈ ಭಾಷೆ ರೂಪುಗೊಂಡಿದೆಯೆಂದು ತೋರುತ್ತದೆ.

ಆ ಕಾಲದಲ್ಲಿ ದೆಹಲಿಯ ಸುತ್ತಮುತ್ತ ವಾಡಿಕೆಯಲ್ಲಿದ್ದ ಬ್ರಜ್, ಹರ್ಯಾನಿ, ಪಂಜಾಬಿ ಮತ್ತು ರಾಜಸ್ತಾನೀ ಪ್ರಾಕೃತ ಭಾಷೆಗಳಿಂದ ಉರ್ದು ಕೆಲಮಟ್ಟಿಗೆ ಪ್ರಭಾವಗೊಂಡಿದೆಯಾದರೂ ಅನಂತರ ಪರ್ಷಿಯನ್ ಭಾಷೆಯ ಶಕ್ತಿಪೂರ್ಣ ಪ್ರಭಾವದಲ್ಲಿ ಕಳೆಯಿತು, ಇದರ ಬಹುಪಾಲು ಪದಸಂಪತ್ತು ಪರ್ಷಿಯನ್‍ನಿಂದ ಬಂದದ್ದು. ಆದರೆ ಇದು ತನ್ನ ಮೂಲ ಹಾಗೂ ವಿಶಿಷ್ಟ ಲಕ್ಷಣವನ್ನು ವ್ಯಾಕರಣ, ನುಡಿಗಟ್ಟು ಮತ್ತು ಹೇರಳ ಪ್ರಾಕೃತಪದಗಳ ಮೂಲಕ ಉಳಿಸಿಕೊಂಡಿದೆ, ಈ ಭಾಷೆ ಪರ್ಷಿಯನ್ ಮತ್ತು ತುರ್ಕಿ ಮಾತನಾಡುವ, ಆಫ್ಘಾನಿಸ್ಥಾನದಿಂದ ಬಂದು ಮೊದಲು ಲಾಹೋರಿನಲ್ಲೂ ಕಾಲಾನಂತರ ದೆಹಲಿಯಲ್ಲೂ ನೆಲೆಸಿದ ಮುಸ್ಲಿಂ ವಲಸೆಗಾರರ, ವರ್ತಕರ, ಸೂಫಿಗಳ ಮತ್ತು ದಾಳಿಕಾರರ ನಿಕಟಸಂಪರ್ಕದಿಂದ ರೂಪುಗೊಂಡಿತು.

ಘಜ್ನೀ ಸೈನ್ಯ 1027 ರಲ್ಲಿ ಮೊಟ್ಟ ಮೊದಲಿಗೆ ಲಾಹೋರಿನಲ್ಲಿ ನೆಲೆಸಿದಾಗ ಉರ್ದು ಭಾಷೆಯ ಆಸ್ತಿಭಾರವಾಯಿತು. ಪರ್ಷಿಯನ್ ಮತ್ತು ತುರ್ಕಿ ಮಾತನಾಡುವ ಸೈನಿಕರು ಅನಿವಾರ್ಯವಾಗಿ ಪ್ರಾದೇಶಿಕ ಭಾಷೆಯನ್ನು ಬಳಸಬೇಕಾಯಿತು. ಅದು ಮುಂದೆ ಪಂಜಾಭಿ ಭಾಷೆಯಾಗಿ ಬೆಳೆಯಿತಲ್ಲದೆ ಆಗಿನ ಕಾಲದ ಪರ್ಷಿಯನ್, ಅರಬ್ಬೀ ಮತ್ತು ತುರ್ಕಿ ಭಾಷೆಗಳ ಮಿಶ್ರಣವಾಗಿದ್ದು ಖಡಿಬೋಲಿಯಿಂದ ಅಷ್ಟೇನೂ ಬೇರೆಯಾಗಿರಲಿಲ್ಲ. ಅಲ್ಲಿನ ಜನತೆ ಇದರ ಪದಸಂಪತ್ತನ್ನು ಸ್ವೀಕರಿಸತೊಡಗಿತು, ಹೀಗೆ ಪರಸ್ಪರ ಸಾಮಾಜಿಕ ವ್ಯವಹಾರ ಇಬ್ಬರಿಗೆ ಅರ್ಥವಾಗುವ, ಸಮ್ಮಿಶ್ರ ಪದಸಂಪತ್ತಿನ ಆವಶ್ಯಕತೆಯನ್ನು ಎತ್ತಿಹಿಡಿಯಿತು. ಪ್ರಾಕೃತ ಪದಗಳು ಸಮಕಾಲೀನ ಇರಾನೀ ಕವಿಗಳಾದ ಫರ್ಕೂಸಿ, ಸನಈ ಮತ್ತು ಮಿನೂ ಚೆಹ್ರಿ ಅವರ ಕಾವ್ಯಗಳಲ್ಲಿ ಪ್ರವೇಶಿಸಿದುವು. ಪೃಥ್ವಿರಾಜನ ಆಸ್ಥಾನಕವಿ ಚಂದ್‍ಬರ್ದಾಯಿ ಮತ್ತು ಇನ್ನಿತರರ ಪ್ರಾಕೃತ ಕವಿಗಳಲ್ಲಿ ಪರ್ಷಿಯನ್ ಪದಗಳು ಬಳಕೆಗೆ ಬಂದುವು. ಘಜ್ನಿ ಮತ್ತು ಘೋರಿ ಸೈನ್ಯಗಳು 1193 ಮತ್ತು 1206 ರಲ್ಲಿ ದೆಹಲಿಯನ್ನು ವಶಪಡಿಸಿಕೊಂಡ ಕಾಲದಲ್ಲಿ ಪರ್ಷಿಯನ್ ಮತ್ತು ತುರ್ಕಿ ಮಾತನಾಡುವ ಹೊಸಬರು ಅಲ್ಲಿ ತಳವೂರಿದರು. ಅವರ ಸಂಪರ್ಕ ಮತ್ತು ವ್ಯವಹಾರಗಳು ಆ ಜನರನ್ನು ದೆಹಲಿಯಲ್ಲಿ ಬಳಕೆಯಲ್ಲಿದ್ದ ಖಡಿಬೋಲಿಯನ್ನು ಬಳಸುವಂತೆ ಮಾಡಿತು. ಸ್ಥಳೀಯ ಜನತೆ ಪರ್ಷಿಯನ್ ಪದಗಳನ್ನು ತಮ್ಮ ಮಾತಿನಲ್ಲಿ ಉಪಯೋಗಿಸುವಂಥ ಪರಿಸ್ಥಿತಿಯುಂಟಾಯಿತು. ಹೊಸದಾಗಿ ಬಂದವರು ಪರ್ಷಿಯನ್‍ನಿಂದ ಪ್ರಭಾವಿತವಾದ ಪ್ರಾಕೃತವನ್ನು ಪಂಜಾಬ್ ಮತ್ತು ಹರ್ಯಾಣದಿಂದ ತಂದು ಸು, 2 ಶತಮಾನಗಳವರೆಗೂ ಬಳಸಿದರು. ಇದರಿಂದ ಖಡಿಬೋಲಿಗೆ ಹೊಂದಿಕೊಳ್ಳುವುದು ಅವರಿಗೆ ಸುಲಭವಾಯಿತು. ದೆಹಲಿ ಮತ್ತು ಉತ್ತರ ಭಾರತದಲ್ಲಿ ಪರ್ಷಿಯನ್ ಆಡಳಿತ, ಆಸ್ಥಾನ (ದರ್ಬಾರ್) ಮತ್ತು ಸಾಹಿತ್ಯಕ ಭಾಷೆಯಾಗಿರುವಾಗ ಉರ್ದು ನಾಲ್ಕು ಶತಮಾನಗಳ ಕಾಲ ಜನತೆಯ ಆಡುಭಾಷೆಯಾಗಿತ್ತು.

ಖಿಲ್ಜಿ ದಾಳಿಗಳ (2294-1311) ಮೂಲಕ ಹೊಸಭಾಷೆ ಗುಜರಾತಿನಿಂದ ದಕ್ಷಿಣ ಭಾರತಕ್ಕೆ ಬಂತು. ಮೊದಲು ಬಹಮನಿ ನಂತರ ಇದು ಹೊಮ್ಮಿದ ದಖನ್ನಿನ ಐದು ರಾಜ್ಯಗಳ 350 ವರ್ಷಗಳ ಆಳ್ವಿಕೆಯಲ್ಲಿ ಉರ್ದುಭಾಷೆ ದಕ್ಷಿಣ ಭಾರತದಲ್ಲಿ ಹೊರವಾಗಿ ಬೆಳೆಯಿತು. ಪ್ರದೇಶದ ಹೆಸರಿನಿಂದಲೇ ಅದಕ್ಕೆ ದಖನಿ ಎಂದು ಹೆಸರು ಬಂತು. ಆಗ ಈ ಭಾಷೆ 14ನೆಯ ಶತಮಾನದಲ್ಲಿ ದೆಹಲಿಯಲ್ಲಿ ಮಾತನಾಡುತ್ತಿದ್ದ ಭಾಷೆಯೇ ಆಗಿತ್ತು. ಅನಂತರ ಉತ್ತರದಲ್ಲಿ ಇದು ಪರ್ಷಿಯನ್ ಭಾಷೆಯ ತೀವ್ರ ಪ್ರಭಾವದಿಂದ ಅಭಿವೃದ್ಧಿಗೊಂಡು ಉರ್ದುವಾಯಿತು. ದಕ್ಷಿಣದಲ್ಲಿ ಇದು ತನ್ನ ಮೂಲ ಲಕ್ಷಣಗಳನ್ನು ಬಹುಪಾಲು ಉಳಿಸಿಕೊಂಡಿತಲ್ಲದೆ ಮರಾಠಿ, ಗುಜರಾತಿ ಮತ್ತು ಕೆಲವು ಪ್ರಾದೇಶಿಕ ಭಾಷೆಗಳಿಂದ ಕೆಲಮಟ್ಟಿಗೆ ಪ್ರಭಾವಗೊಂಡಿತು. ಗುಜರಾತಿನಲ್ಲಿ ಗುಜರಾತಿ ಭಾಷೆಗಳಿಂದ ಪ್ರಭಾವಗೊಂಡು `ಗುಜ್ರಿ ಹೆಸರು ಪಡೆಯಿತು. ಹೀಗೆ ದಕ್ಷಿಣ ಭಾರತದಲ್ಲಿ ದಖನಿ ಕಾವ್ಯ ಮತ್ತು ಸಾಹಿತ್ಯಕಭಾಷೆಯಾಗಿ ಬಳಕೆಯಾಯಿತು. (ನೋಡಿ- ದಖನೀ-ಭಾಷೆ,-ಸಾಹಿತ್ಯ). ಕ್ರಮೇಣ ಉತ್ತರ ಮತ್ತು ದಕ್ಷಿಣದವರ ಪ್ರತ್ಯೇಕತಾಮನೋಭಾವ ಹೆಚ್ಚುತ್ತಾ ಹೋಯಿತು.

ದಕ್ಷಿಣ ರಾಜ್ಯಗಳ ಆಡಳಿತಗಾರರು ತಮ್ಮನ್ನು ದಖನಿಗಳೆಂದೂ ಹೊರಗಿನವರನ್ನು ಅಂದರೆ ಉತ್ತರದವರನ್ನು ಆಫಾಕಿಗಳೆಂದೂ ಕರೆದುಕೊಂಡರು. ಈ ಭೇದ ಆಸ್ಥಾನದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಉಳಿಯಿತು. ಪರಿಣಾಮವಾಗಿ ದೆಹಲಿಯ ಆಸ್ಥಾನ ಮತ್ತು ಸಾಹಿತ್ಯಕ ಭಾಷೆಯದ ಪರ್ಷಿಯನ್ನಿನ ಪೈಪೋಟಿಯಿಂದ ಉರ್ದು ಬೆಳೆಯತೊಡಗಿತು. ಸು. 1375ರ ವರೆವಿಗೂ ದೆಹಲಿ ಉರ್ದುವಿಗೂ ದಕ್ಷಿಣದ ಉರ್ದುವಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಮುಂದೆ ಅವು ಎರಡು ರೀತಿಯಲ್ಲಿ ಬೆಳೆದವು. ದಖನಿ ಒಂದು ವಿಶಿಷ್ಟ ಭಾಷೆಯಾಗಿ ಅದರಲ್ಲಿ ಕವಿ ಮತ್ತು ಸಾಹಿತಿಗಳು ಶ್ರೀಮಂತ ಸಾಹಿತ್ಯವನ್ನು ರಚಿಸಿದರು. ದಕ್ಷಿಣದ ಸುಲ್ತಾನರು ಈ ಭಾಷೆಗೆ ಪ್ರೋತ್ಸಾಹವನು ನೀಡಿದರಲ್ಲದೇ ತಾವೇ ಸುಂದರ ಕಾವ್ಯಗಳನ್ನು ರಚಿಸಿದರು. ಔರಂಗಜೇಬನ ದಾಳಿ ಮತ್ತು ಮೊಘಲರ ಆಳ್ವಿಕೆಗಳು ಉತ್ತರದ ಉರ್ದುವಿನ ಪ್ರಭಾವ ದಖನಿಯ ಮೇಲೆ ಹೆಚ್ಚುವಂತೆ ಮಾಡಿದುವು. ಇದರಿಂದಾಗಿ ಈ ಕಾಲದ ಅಂತ್ಯದಲ್ಲಿ ಈ ಭಾಷೆ ತನ್ನ ಪಥವನ್ನು ಬದಲಾಯಿಸಿತು. ಕ್ರಮೇಣ ದಖನಿ ದಕ್ಷಿಣಭಾರತದಲ್ಲಿ 3ರಿಂದ 4 ಶತಮಾನದ ಉಜ್ಜ್ವಲ ಸಾಹಿತ್ಯಕ ಚಟುವಟಿಕೆಯಿಂದಾಗಿ ಉತ್ತರ ಭಾರತದ ಆಡುಭಾಷೆಯಾಗಿದ್ದ ಉರ್ದುವಿನ ಸಾಹಿತ್ಯಕ ಚಟುವಟಿಕೆಗೆ ನಾಂದಿಯಾಯಿತು. ದಖನಿ ಭಾಷೆಯ ಸಾಹಿತ್ಯಕ ಚಟುವಟಿಕೆ ದಕ್ಷಿಣ ಭಾರತದಲ್ಲಿ ಮೊಘಲರ ಆಳ್ವಿಕೆ ಮುಗಿದ ಮೇಲೂ ಹೈದರಾಬಾದಿನ ಆಸಿಫ್‍ಜಹಿ, ಹೈದರಾಲಿಯ ಖುದದಾದ ಸುಲ್ತಾನಶಾಹಿ, ಮೈಸೂರಿನ ಟಿಪ್ಪುಸುಲ್ತಾನ ಮುಂತಾದ ಅರಸರ ಆಶ್ರಯದಲ್ಲಿ ಮತ್ತು ಕರ್ಣಾಟಕದ ನವಾಬರು, ಸಿದ್ಹೋಟ್ (ಕಡಪ ಜಿಲ್ಲೆ) ಮತ್ತು ಕರ್ನೂಲುಗಳಲ್ಲಿ ಮುಂದುವರಿಯಿತು. ಆದರೆ ದಖನಿ ಭಾಷೆ ತನ್ನ ಮೂಲ ಲಕ್ಷಣವನ್ನು ಕ್ರಮೇಣ ಕಳೆದುಕೊಂಡು ಉರ್ದೀಕರಣಗೊಂಡಿತು. ದಕ್ಷಿಣ ಭಾರತದಲ್ಲಿ ಇಂದಿಗೂ ದಖನಿ ಆಡುಭಾಷೆಯಾಗಿಯೂ ಉರ್ದು ಸಾಹಿತ್ಯಕ ಭಾಷೆಯಾಗಿಯೂ ಉಳಿದಿವೆ.

ವಲೀ ಕವಿಯ ದಖನಿ ಕಾವ್ಯ ದೆಹಲಿಯನ್ನು ಪ್ರವೇಶಿಸಿದ ನಂತರ (17,00,1722) ಉತ್ತರ ಭಾರತದಲ್ಲಿ ಉರ್ದು ಕಾವ್ಯ ಮತ್ತು ಸಾಹಿತ್ಯದ ಉಬ್ಬರ ಕಂಡುಬಂತು. ಅಲ್ಲಿ ಪರ್ಷಿಯನ್ನಿನ ತೀವ್ರ ಪ್ರಭಾವಕ್ಕೆ ಉರ್ದುಭಾಷೆ ಒಳಗಾದುದಲ್ಲದೆ ಬಹುಪಾಲು ಪರ್ಷಿಯನ್ನೀಕರಣಗೊಂಡಿತು. ಇದಕ್ಕೆ ಕಾರಣ ಪರ್ಷಿಯನ್ ಭಾಷೆ ಸೊಗಸಾಗಿ ಬೆಳೆದು ಸಂಸ್ಕಾರಗೊಂಡು ಸಾಂಸ್ಕøತಿಕ ಭಾಷೆಯಾಗಿದ್ದುದು. ಪರ್ಷಿಯನ್ನಿನ ಪದಸಂಪತ್ತಿಗೆ ಸಮಾನವಾಗಬಲ್ಲ ಪದಸಂಪತ್ತು ಪ್ರಾಕೃತ ಭಾಷೆಯಲ್ಲಿರಲಿಲ್ಲ. ಅದು ಕೇವಲ ಆಳುವವರ, ವೀರರ, ಯುದ್ಧದ ಮತ್ತು ಪ್ರೇಮದ ಭಾಷೆಯಾಗಿತ್ತು. ಅಲ್ಲದೆ ಪರ್ಷಿಯನ್ ಭಾಷೆಯಲ್ಲಿನ ಪದಗಳು ಮಧುರವಾಗಿಯೂ ಕಿವಿಗೆ ಹಿತವಾಗಿಯೂ ಇದ್ದುವು. ಖಿಲ್ಜಿ ಮತ್ತು ತುಘಲಕರ ಅನಂತರ ಬಂದ ಮೊಘಲರ ಕಾಲದಲ್ಲಿ ಅಂದರೆ 1857ರ ವರೆವಿಗೂ ಉರ್ದು ಭಾಷೆಯ ಪರ್ಷಿಯನ್ನೀಕರಣ ಮುಂದುವರಿಯಿತೆಂದೇ ಹೇಳಬೇಕು. ಪರ್ಷಿಯನ್ ಭಾಷೆ ಮತ್ತು ಸಾಹಿತ್ಯ ಉರ್ದುಭಾಷೆಗೆ ಮಾದರಿಯಾದುವು. ಪರ್ಷಿಯನ್ನೀಕರಣ ಉರ್ದುಭಾಷೆಗೆ ಕಾಂತಿಯನ್ನಿತ್ತಿತು. ಅಕ್ಬರನ ಆಳ್ವಿಕೆಯಲ್ಲಿ ಸರ್ಕಾರಿಸೇವೆಗೆ ಸೇರಲು ಪರ್ಷಿಯನ್ ಭಾಷಾಜ್ಞಾನ ಕಡ್ಡಾಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಕøತಕ್ಕೆ ಸೋದರಿ ಭಾಷೆಯಾದ ಪರ್ಷಿಯನ್ ಭಾಷಾ ಪದಸಂಪತ್ತು ಮತ್ತು ನುಡಿಗಟ್ಟು ಪ್ರಾಕೃತಕ್ಕೆ ಚೆನ್ನಾಗಿ ಒಗ್ಗಿಕೊಂಡಿತು. ದೆಹಲಿ ಮತ್ತು ಲಖನೌದ ಬಹುಪಾಲು ಕವಿಗಳು ದ್ವಿಭಾಷಾ ಕವಿಗಳಾಗಿದ್ದರು. ಅವರು ಪರ್ಷಿಯನ್ ಮತ್ತು ಉರ್ದುವಿನಲ್ಲಿ ಕಾವ್ಯವನ್ನು ರಚಿಸಿದರು. 1700 ರಿಂದ ಸುಮಾರು ನೂರು ವರ್ಷಗಳ ಕಾಲ ದೆಹಲಿ ಸಾಹಿತ್ಯಕ ಚಟುವಟಿಕೆಗಳ ಕೇಂದ್ರವಾಗಿತ್ತು. ಮುಂದಿನ ಸತತ ರಾಜಕೀಯ ಅನಾಯಕತ್ವದಿಂದಾಗಿ ವಿದ್ವಾಂಸರು ಮತ್ತು ಕವಿಗಳು ದೆಹಲಿ ಆಡಳಿತದಿಂದ ಸ್ವತಂತ್ರಗೊಂಡ ಲಖನೌಗೆ ವಲಸೆ ಹೋದರು. ಅಲ್ಲಿ ಉರ್ದು ವ್ಯಾಕರಣ, ಭಾಷೆ ಮತ್ತು ನುಡಿಗಟ್ಟಿನ ಚೌಕಟ್ಟು ಸಿದ್ಧವಾಯಿತು. ಕಾವ್ಯರಚನಾ ಸ್ವಾತಂತ್ರ್ಯ ನಿಗದಿಗೊಂಡಿತು. ಛಂದಸ್ಸು, ಅಲಂಕಾರ, ಉಪಮೆ, ರೂಪಗಳು ಸಿದ್ಧವಾದುವು. ಒಟ್ಟಿನಲ್ಲಿ ಉರ್ದುಭಾಷೆ 19ನೆಯ ಶತಮಾನದಲ್ಲಿ ಲಖನೌದಲ್ಲಿ ವ್ಯವಸ್ಥೆಗೊಂಡು ನಿಯಂತ್ರಣಗೊಂಡಿತು. ಮೊಘಲ್ ರಾಜನಾದ ಬಹಾದುರ್ ಷಾಹನ ಆಳ್ವಿಕೆಯ ಕೊನೆಗೆ (19ನೆಯ ಶತಮಾನದ ಮಧ್ಯ) ದೆಹಲಿಯಲ್ಲಿ ಸಾಹಿತ್ಯಕ ಚಟುವಟಿಕೆ ಪುನರಾರಂಭವಾಯಿತು. ಅಲ್ಲಿಂದ ಮುಂದೆ ದೆಹಲಿ, ಲಖನೌಗಳೆರಡೂ ಉರ್ದುಭಾಷೆ ಮತ್ತು ಸಾಹಿತ್ಯದ ಪ್ರಮುಖ ಕೇಂದ್ರಗಳಾದುವು. ಇದರೊಡನೆ ಪಟ್ನ, ಮುರ್ಇದಾಬಾದ್, ಟೊಂಕ್, ಭೋಪಾಲ್, ಮಂಗ್ರೋಲ್, ರಾಮಪುರ, ಹೈದರಾಬಾದು ಆಸ್ಥಾನಗಳು ಕವಿ, ವಿದ್ವಾಂಸ ಬರಹಗಾರರನ್ನು ಆಕರ್ಷಿಸಿದವು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ (1857) ಫಲವಾಗಿ ಸಾಹಿತಿಗಳು ದೆಹಲಿಯಿಂದ ನಿರ್ಗಮಿಸಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದರು. ಇದರಿಂದ ಉರ್ದು ಭಾಷೆ ಮತ್ತು ಸಾಹಿತ್ಯ ದೇಶದಲ್ಲೆಲ್ಲ ಹರಡಿತು.

	ಬ್ರಿಟಿಷ್ ಆಳ್ವಿಕೆಯ ಆರಂಭದಿಂದ ಉರ್ದು ಹೊಸ ತಿರುವನ್ನು ಪಡೆದು ಅವರ ಭಾಷೆ ಮತ್ತು ನಾಗರೀಕತೆಯ ಪ್ರಭಾವದಿಂದ ಆಧುನಿಕತೆಯ ಕಡೆಗೆ ಸಾಗಿತು. ಅದುವರೆಗೂ ಉರ್ದು ಕಾವ್ಯಭಾಷೆಯಾಗಿತ್ತು. ಪ್ರಧಾನ ಬರೆದ ಉರ್ದು ಗದ್ಯವೆಲ್ಲವೂ ಸಾಂಪ್ರದಾಯಕವಾಗಿದ್ದುವು. ಈಸ್ಟ್ ಇಂಡಿಯಾ ಕಂಪೆನಿಯ ಬ್ರಿಟಿಷ್ ಅಧಿಕಾರಿಗಳಿಗೆ ದೇಶೀ ಭಾಷೆಗಳನ್ನು ಕಲಿಸಲು ಆರಂಭವಾದ (1800) ಪೋರ್ಟ್ ವಿಲಿಯಂ ಕಾಲೇಜಿನಲ್ಲಿ ಉರ್ದು ಗದ್ಯ ಅಭಿವೃದ್ಧಿಗೊಂಡಿತು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅಲಿಘರ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಸರ್ ಸೈಯದ್ ಅಹಮದ್‍ಖಾನ್ ತನ್ನ ಅಮೂಲ್ಯ ಕಾಣಿಕೆಗಳಿಂದ ಉರ್ದು ಗದ್ಯದ ಭಾಷೆಯನ್ನು ಸರಳಗೊಳಿಸಿ ಸಾಂಪ್ರದಾಯಕತೆಯನ್ನು ಹೋಗಲಾಡಿಸಿ ಶಾಸ್ತ್ರೀಯಗೊಳಿಸಿದ. ಇಂಗ್ಲಿಷ್ ಕೃತಿಗಳ ಅನುವಾದ ಉರ್ದುಭಾಷೆ ಮತ್ತು ಸಾಹಿತ್ಯದ ಅವಕಾಶವನ್ನು ಹೆಚ್ಚಿಸಿದುದಲ್ಲದೆ ಶಾಸ್ತ್ರೀಯ ಪರಿಭಾಷೆ ಮತ್ತು ಪದಕೋಶವನ್ನು ಶ್ರೀಮಂತಗೊಳಿಸಿತು. ದೆಹಲಿಯಲ್ಲಿ ಬ್ರಿಟಿಷ್ ಸರ್ಕಾರದ ಆಡಳಿತ ಭಾಷೆಯಾಗಿದ್ದ ಪರ್ಷಿಯನ್ನಿನ ಸ್ಥಾನವನ್ನು ಉರ್ದು ಆಕ್ರಮಿಸಿ ಇಂಗ್ಲಿಷ್ ಆ ಸ್ಥಾನವನ್ನು ಪಡೆಯುವವರೆಗೂ ವಿರಾಜಿಸಿತು.

ಉರ್ದು ವರ್ಣಮಾಲೆಯಲ್ಲಿ 35 ಅಕ್ಷರಗಳಿವೆ. ಅರಬ್ಬೀಯಲ್ಲಿ 28 ಅಕ್ಷರಗಳಾದರೆ ಪರ್ಷಿಯನ್‍ನಲ್ಲಿ 32. ಪ್(ಠಿ), ಚ್ (ಛಿಟ), ಗ್ (g) ಗಳು ಪರ್ಷಿಯನ್ ಮತ್ತು ಉರ್ದುವಿನಲ್ಲಿ ಸಮಾನ ಧ್ವನಿಗಳು. ಟ್ (ಣ), ಡ್ (ಜ), ಡ (ಖ) ನಂಥ ವಿಶಿಷ್ಟ ಅಕ್ಷರಗಳು ಭಾರತದ ಪ್ರಾಕೃತದಿಂದ ಉರ್ದು ವರ್ಣಮಾಲೆಗೆ ಹೊಸದಾಗಿ ಸೇರಿದುವು. ಈ ಏಕಾಕ್ಷರಗಳ ಜತೆಗೆ ಭೇ (bhe), ಥೆ (ಣhe), ಝೀಮ್(ರಿheem), ಛೀಮ್(ಛಿheem) ಮೊದಲಾದ ಹದಿನಾರು ಮಹಾಪ್ರಾಣಾಕ್ಷರಗಳು ಇವೆ.

ಹಿಂದ್ ಅಥವಾ ಇಂಡಿಯ (ಭಾರತ) ಎಂಬುದರ ಮೂಲ ಅರ್ಥದಲ್ಲಿ ಈ ಆಡು ಭಾಷೆಯನ್ನು ಹಿಂದಿಯೆಂದು ಕರೆದರು. ದೆಹಲಿಯ ಮೊಟ್ಟ ಮೊದಲ ಬರಹಗಾರ ಅಮೀರ್ ಖುಸ್ರೋ (ಮರಣ 1322) ಇದನ್ನು ಹಿಂದವೀ ಎಂದು ಕರೆದ. ಇದು ಕಾವ್ಯ ರಚನೆಗೆ ಬಳಕೆಯಾದಾಗ ರೀಖ್ತ ಎಂದಾಯಿತು: ಆರಂಭಿಕ ಕಾವ್ಯಕ್ಕೂ ಇದೇ ಹೆಸರಾಯಿತು. (1950). ಇದರ ಅರ್ಥಪತನಗೊಂಡು, ಅಚ್ಚಿಗೆ ಹುಯ್ದು, ಮತ್ತು ಸುರಿದ-ಎಂದು; ಅಂದರೆ ಮೂಲ ಭಾಷೆಯಿಂದ ಭಿನ್ನವಾದುದರಿಂದ ಇದು ಅಪಭ್ರಂಶ. ಭಿನ್ನ ಭಾಷೆಗಳ ಪದಗಳನ್ನು ಎರವಲಾಗಿ ಪಡೆದು ಹೊಂದಿಕೊಂಡು ಬೆಸುಗೆಯಾಗಿ ಎರಕಗೊಂಡ ಭಾಷೆ. ಪರ್ಷಿಯನ್ ಮತ್ತು ಅರಬ್ಬೀ ಭಾಷೆಗಳಿಂದ ಬಂದ ಪ್ರಾಕೃತ ರೂಪಗಳು ಈ ಭಾಷೆಗೆ ಸುರಿಯಲ್ಪಟ್ಟುದರಿಂದ ಸುರಿದ ಭಾಷೆ ಎನಿಸಿತು. ರಾಜಸೇನೆಯ ಭಾಷೆ ಅರ್ಥ ಬರುವ ಜûಬಾನೆ ಉರ್ದು-ಎ-ಮುಅಲ್ಲಾ ಎಂಬ ಹೆಸರನ್ನು ಕೊಟ್ಟವು ಷಹಜಹಾನ್ ಚಕ್ರವರ್ತಿ. ಕ್ರಮೇಣ ಜûಬಾನ್ ಮತ್ತು ಮುಅಲ್ಲ ಪದಗಳನ್ನು ಕಳೆದುಕೊಂಡು ಉರ್ದು ಪದ ಬಳಕೆಗೆ ಬಂತು. ಉರ್ದು ತುರ್ಕಿ ಪದ ಇದಕ್ಕೆ ಪ್ರತಿಯಾಗಿ ಇಂಗ್ಲಿಷಿನಲ್ಲಿ ಅಲೆದಾಡುವ ಜನಗಳ ಗುಂಪು (ಹೋರ್ಡ್) ಎಂಬುದುಂಟು. ದಖನಿ ಮತ್ತು ಹಿಂದಿ ಭಾಷೆ ದಕ್ಷಿಣದಲ್ಲಿ ಬೆಳೆದಂತೆ ಉತ್ತರದಲ್ಲಿ ಇದನ್ನು ಜûಬಾನೆ ಹಿಂದೂಸ್ತಾನ್ (ಭಾರತದ ಭಾಷೆ) ಮತ್ತು ಉರ್ದು ಎಂದು ಕರೆದರು.

ಉರ್ದು ಸಾಕಷ್ಟು ಪ್ರಾಚೀನ ಭಾಷೆ: ಈಗಲೂ ಜೀವಂತವಾಗಿರುವ ಭಾಷೆ. ರಚನೆ, ವ್ಯಾಕರಣ ಮತ್ತು ಅನ್ವಯಗಳ ದೃಷ್ಟಿಯಿಂದ ಉರ್ದುವಿಗೂ ಹಿಂದಿಗೂ ಹೆಚ್ಚಿನ ವ್ಯತ್ಯಾಸ ಕಾಣದು. ಅವಕ್ಕೆ ಬಹುಪಾಲು ಪದಭಂಡಾರವೂ ಅವಕ್ಕೆ ಒಂದೇ ಆಗಿದೆ. ಆದರೆ ಲಿಪಿ ಎರಡಕ್ಕೂ ಬೇರೆ ಬೇರೆ. ಉರ್ದುವಿನಲ್ಲಿ ಅರಭ್ಬೀ ಮತ್ತು ಪರ್ಷಿಯನ್ ಪದಗಳು ಹೆಚ್ಚು. ಹಿಂದಿಯಲ್ಲಾದರೋ ಸಂಸ್ಕøತ ಪದಗಳು ಹೆಚ್ಚು. ಈಗ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಉರ್ದು ಪ್ರಾಂತ್ಯ ಭಾಷೆಗಳಲ್ಲೊಂದಾಗಿದೆ. ಪಂಜಾಬು, ಉತ್ತರ ಪ್ರದೇಶ, ಬಿಹಾರ ಮೊದಲಾದ ಉತ್ತರಭಾರತದ ಕೆಲವು ಭಾಗಗಳಲ್ಲಿ ಇದರ ವ್ಯಾಪ್ತಿ ಹೆಚ್ಚು, ಉರ್ದು ಮಾತನಾಡುವವರ ಸಂಖ್ಯೆ ಭಾರತದಲ್ಲಿ ಸು.2 1/3 ಕೋಟಿಯಾದರೆ ಪ್ರಪಂಚದಲ್ಲಿ 5.5 ಕೋಟಿ (1968).

(ಎಂ.ವೈ.ಕೆ.; ಎಂ.ಎಂ.ಎಚ್.)

(ಪರಿಷ್ಕರಣೆ: ಸಿ.ಎಸ್.ರಾಮಚಂದ್ರ)