ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಸ್ಮಾನ್ 2

ವಿಕಿಸೋರ್ಸ್ದಿಂದ

ಉಸ್ಮಾನ್ 2

1603-1622. ತುರ್ಕಿಯ ಆಟೋಮನ್ ಸುಲ್ತಾನ. ಇಸ್ತಾನ್‍ಬುಲ್‍ನಲ್ಲಿ ಇವನ ಜನನ. ತಂದೆ ಒಂದನೆಯ ಅಹಮ್ಮದ್. ಈತ 14ನೆಯ ವಯಸ್ಸಿನಲ್ಲಿ ಪಟ್ಟಕ್ಕೆ ಬಂದ (1618). ಈತ ಶಕ್ತಿಶಾಲಿ, ಮಹತ್ವಾಕಾಂಕ್ಷಿ. ಪೋಲೆಂಡಿನಲ್ಲಿರುವ ಹೋಟಿನ್ನಿನ ಮೇಲೆ ಈತ ನಡೆಸಿದ ದಾಳಿ ವಿಫಲವಾಯಿತು. ಏಕೆಂದರೆ ಇವನ ಜನರೇ ಆದ ಜಾನಿಝೂರಿಗಳು ಹಿಡಿತ ತಪ್ಪಿ ಎದುರು ಬಿದ್ದರು. ಇವರಿಗೆ ತಕ್ಕ ಶಾಸ್ತಿಮಾಡಬೇಕೆಂದು ಈತ ಅವರ ಸಂಬಳದಲ್ಲಿ ಕಡಿತ ಮಾಡಿದ. ಇವರು ಒಂದೆಡೆ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಪಾನಕೇಂದ್ರಗಳನ್ನೆಲ್ಲ ಮುಚ್ಚಿಸಿದ. ಆದರೆ ಈ ಕ್ರಮಗಳಿಂದ ಅವರು ಇನ್ನೂ ಉದ್ರೇಕಗೊಂಡರು. ಮೆಕ್ಕಕ್ಕೆ ಹೋಗಿ ಅಲ್ಲಿಂದ ಹೊಸ ಸೈನ್ಯ ತಂದು ಇವರನ್ನು ಮಣಿಸಬೇಕೆಂಬ ಉಸ್ಮಾನನ ಹಂಚಿಕೆ ವಿಫಲವಾಯಿತು. ಸುಲ್ತಾನನ ಈ ಹಂಚಿಕೆಯನ್ನು ಮುನ್ನರಿತ ವಿರೋಧಿಗಳು ದಂಗೆಯೆದ್ದು ಉಸ್ಮಾನನನ್ನು ಸಿಂಹಾಸನದಿಂದ ತಳ್ಳಿದರಲ್ಲದೇ ಮರುದಿನ ಇಸ್ತಾನ್‍ಬುಲ್‍ನ ದುರ್ಗವೊಂದರಲ್ಲಿ ಈತನನ್ನು ಕತ್ತು ಹಿಸುಕಿ ಕೊಂದರು.

  *