ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಋತ

ವಿಕಿಸೋರ್ಸ್ ಇಂದ
Jump to navigation Jump to search

ಋತ

ಋತವೆಂದರೆ ವಿಶ್ವನಿಯಮ, ವಿಶ್ವಕ್ರಮ ಮತ್ತು ನಿತ್ಯಸತ್ಯ. ವಿಶ್ವದ ಸಕಲ ವ್ಯಾಪಾರಗಳೂ ಒಂದು ಕ್ರಮಕ್ಕೆ, ನಿಯಮಕ್ಕೆ ಅಧೀನವಾಗಿವೆ. ಪ್ರಜ್ಞಾ ಚಕ್ಷುಸ್ಸಿಗೆ ಈ ಕ್ರಮದಲ್ಲಿ ಒಂದು ಲಯಬದ್ಧತೆ, ಒಂದು ಸೌಂದರ್ಯ ಗೋಚರವಾಗುತ್ತದೆ. ಈ ಲಯಬದ್ಧವಾದ ಸುಂದರವಾದ ವಿಶ್ವವ್ಯಾಪಾರಕ್ಕೆ ಪ್ರೇರಕವಾದ ಮೂಲ ಶಕ್ತಿಯೂ ಋತವೇ. ಆ ಮೂಲಶಕ್ತಿಯ ಅಭಿವ್ಯಕ್ತಿಯೇ ಪ್ರಕಾಶವೇ ಈ ಚರಾಚರ ಜಗತ್ತು. ಹೀಗೆ ಅಭಿವ್ಯಕ್ತವಾದ ಈ ಜಗತ್ತು ಋತಶಕ್ತಿಯ ಮತ್ತೊಂದು ರೂಪವಷ್ಟೇ. ಋತವೇ ಸತ್ಯ. ಸತ್ಯವೆಂದರೂ ಶಾಶ್ವತವಾದ ಅನಂತಸ್ಥಾಯಿಯಾದ ತತ್ತ್ವವೆಂದರ್ಥ. ಸತ್ಯವೆಂದರೆ ಅನಿತ್ಯಾತ್ಮಕವಾದ ಜಗತ್ತನ್ನೊಳಗೊಂಡ ನಿತ್ಯಾತ್ಮಕ ತತ್ತ್ವ ಎಂದು ಉಪನಿಷತ್ತು ಹೇಳುತ್ತದೆ.

ಆದುದರಿಂದ ಋತದ ಸ್ವರೂಪ ಎರಡು ವಿಧ. ಒಂದು-ವ್ಯತ್ಯಾಸವನ್ನು ಹೊಂದುವ ಜಗದ್‍ವ್ಯವಹಾರಗಳ ನಡುವೆ ವ್ಯತ್ಯಾಸವನ್ನು ಹೊಂದದೆ ಸ್ಥಾವರವೂ ನಿತ್ಯನಿಯಾಮಕವೂ ಆಗಿರುವ ಆದಿಶಕ್ತಿ. ಎರಡನೆಯದಾಗಿ-ಜಗತ್ತನ್ನೆಲ್ಲ ವ್ಯಾಪಿಸಿಕೊಂಡು ಕಾಲದೇಶಗಳ ನಿಯಮವನ್ನು ಪಾಲಿಸುವ ವ್ಯಾವಹಾರಿಕ ಶಕ್ತಿ. ಎಂದರೆ ವಿಶ್ವದಲ್ಲಿ ಯಾವ ಯಾವ ವ್ಯವಹಾರಗಳು ನಡೆಯುವುವೋ ಅವೆಲ್ಲವೂ ಋತದ ನಿಯಮವನ್ನೇ ಅನುಸರಿಸುತ್ತಿವೆಯೆಂದರ್ಥ.

ಋತದ ಸಹಾಯದಿಂದಲೆ ಇಂದ್ರ, ವರುಣ, ಆದಿತ್ಯ, ಅಗ್ನಿಮಿತ್ರ ಮುಂತಾದ ದಿವ್ಯಶಕ್ತಿಗಳಿಗೆ ಸ್ಫೂರ್ತಿ ದೊರಕುವುದು; ಅನಂತವೂ ಗಭೀರವೂ ಆದ ದ್ಯಾವಾ ಪೃಥಿವಿಗಳ ಅಸ್ತಿತ್ವ ಮತ್ತು ವಿಸ್ತøತಿಗೆ ಋತವೇ ಆಧಾರ; ಸಕಲ ಲೋಕಗಳೂ ಅವುಗಳ ಸಕಲ ವ್ಯಾಪಾರಗಳೂ ಋತಕ್ಕೆ ಅಧೀನವಾಗಿ ಅವುಗಳೆಲ್ಲ ಋತದಲ್ಲಿ ಅಂತರ್ಗತವಾಗಿವೆ; ಋತದ ಶಕ್ತಿ ಅಕ್ಷಯವಾದದ್ದು ಮತ್ತು ಅಕುಂಠಿತವಾದದ್ದು ಎಂದು ಶ್ರುತಿ ವರ್ಣಿಸುತ್ತದೆ. ಅಲ್ಲಿಗೆ ಋತಶಕ್ತಿಗೂ ಪರಂಜ್ಯೋತಿ ತತ್ತ್ವವಾದ ಪರಬ್ರಹ್ಮಕ್ಕೂ ತಾದಾತ್ಮ್ಯವನ್ನು-ಐಕ್ಯವನ್ನು-ಸ್ಥಾಪಿಸುತ್ತದೆಯೆಂದು ತೈತ್ತಿರೀಯ ಉಪನಿಷತ್ತು ತಿಳಿಸುತ್ತದೆ.

ಋತದ ಪಾಲನೆ ಯಜ್ಞದಿಂದ, ವಿಶ್ವವೆಲ್ಲ ಯಜ್ಞಮಯ. ಈ ವೈಶ್ವೀಯಜ್ಞ ಪಾಲನೆ, ಪೋಷಣೆ ಋತಗೋಪರಾದ ದೈವೀಶಕ್ತಿಗಳ ಮತ್ತು ಮಾನವರ ಅನ್ಯೋನ್ಯ ಭಾವನೆಯಿಂದ. ಅನ್ಯೋನ್ಯ ಭಾವಯನ್ತಃ ಶ್ರೇಯಃ ಪರಂ ಅವಾಪ್ಸ್ಯಥ ಎಂದು ಗೀತೆ ಬೋಧಿಸುತ್ತದೆ. (ನೋಡಿ- ಅವ್ಯವಸ್ಥೆ)

(ಸಿ.ಜಿ.ಪಿ.)