ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಋಷ್ಯಶೃಂಗ
ಋಷ್ಯಶೃಂಗ
ಜಿಂಕೆಯಂತೆ ಕೊಂಬುಳ್ಳ ಒಬ್ಬ ಋಷಿ. ಒಮ್ಮೆ ಪಾದ ಪ್ರಕ್ಷಾಳನಾರ್ಥ ನೀರಿಗಿಳಿದ ಕಶ್ಯಪವಂಶದ ವಿಭಾಂಡಕನೆಂಬ ಋಷಿ ಊರ್ವಶಿಯನ್ನು ಕಂಡು ಸ್ಖಲಿತನಾಗಲಾಗಿ ಶಾಪಗ್ರಸ್ತಳಾಗಿ ಜಿಂಕೆಯ ರೂಪವನ್ನು ಧರಿಸಿದ ದೇವಕನ್ಯೆಯೊಬ್ಬಳು ಅದೇ ಕಾಲಕ್ಕೆ ಅಲ್ಲಿಗೆ ಬಾಯಾರಿ ನೀರು ಕುಡಿಯಲು ಬಂದವಳು. ನೀರಿನೊಡನೆ ಆ ಋಷಿರೇತಸ್ಸನ್ನೂ ಕುಡಿದಳು. ಪರಿಣಾಮವಾಗಿ ಜಿಂಕೆಗೆ ಒಂದು ಗಂಡು ಮಗು ಹುಟ್ಟಿತು. ಜಿಂಕೆಯ ಗರ್ಭದಲ್ಲಿ ಜನಿಸಿದ ಆ ಮಗುವಿಗೆ ತಲೆಯಲ್ಲಿ ಕೊಂಬು ಇತ್ತು. ಇದರಿಂದ ಆ ಋಷಿಪುತ್ರನಿಗೆ ಋಷ್ಯಶೃಂಗ ಎಂದು ಹೆಸರು ಬಂತು. ತಂದೆಯನ್ನು ಬಿಟ್ಟು ಮತ್ತಾರನ್ನೂ ಕಂಡರಿಯದ ಋಷ್ಯಶೃಂಗ ಅನನ್ಯಮನಸ್ಕನಾಗಿ ಬ್ರಹ್ಮಚರ್ಯಧರ್ಮದಲ್ಲೇ ಇದ್ದ. ಇದೇ ಕಾಲಕ್ಕೆ ದಶರಥಮಹಾರಾಜನ ಬಂಧುವಾದ ಅಂಗದೇಶಾಧಿಪತಿ ಲೋ(ರೋ)ಮಪಾದ ಉಪಾಯದಿಂದ ಋಷ್ಯಶೃಂಗನನ್ನು ಬರಮಾಡಿಕೊಳ್ಳಲು ಅನಾವೃಷ್ಟಿ ಪೀಡಿತವಾದ ಅವನ ರಾಜ್ಯದಲ್ಲಿ ಸುವೃಷ್ಟಿಯಾಯಿತು. ಆ ಸಂತೋಷಕ್ಕಾಗಿ ಲೋಮಪಾದ ತನ್ನ ಸ್ನೇಹಿತನಾದ ದಶರಥ ಮಹಾರಾಜನ ಪುತ್ರಿಯೂ ತನ್ನ ಸಾಕುಮಗಳೂ ಆದ ಶಾಂತಳನ್ನು ಋಷ್ಯಶೃಂಗನಿಗೆ ಕೊಟ್ಟು ವಿವಾಹಮಾಡಿ ತನ್ನ ರಾಜ್ಯವನ್ನು ಆತನಿಗೆ ವಹಿಸಿದ.
ಕೆಲ ಕಾಲಾನಂತರ ದಶರಥ ತನ್ನ ಕುಲಗುರುವಾದ ವಸಿಷ್ಠನ ಆದೇಶದಂತೆ ಋಷ್ಯಶೃಂಗನನ್ನು ಕರೆತಂದು ಆತನಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿ ಯಜ್ಞಾಂತದಲ್ಲಿ ಅಗ್ನಿಯಿಂದ ಬಂದ ಚರುವನ್ನು ಭಕ್ಷಿಸಿ ನಾರಾಯಣವತಾರ ಸ್ವರೂಪರಾದ ರಾಮನೇ ಮೊದಲಾದ ನಾಲ್ಕು ಮಂದಿ ಮಕ್ಕಳನ್ನು ಪಡೆದ. ಋಷ್ಯಶೃಂಗ ಮಹಾಪ್ರತಾಪಿಯೂ ಯಜ್ಞನಿಷ್ಠೆಯುಳ್ಳವನೂ ಆಗಿದ್ದನೆಂದು ಪ್ರಸಿದ್ಧಿ.
ಮಾರ್ಕಂಡೇಯ ಪುರಾಣದಂತೆ ಸಾವರ್ಣಿಕಮನ್ವಂತರದ ಸಪ್ತರ್ಷಿಗಳಲ್ಲಿ ಋಷ್ಯಶೃಂಗನೂ ಒಬ್ಬ. (ಎಸ್.ಎನ್.ಕೆ.)