ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಪಿಕ್ಯೂರಸ್
ಎಪಿಕ್ಯೂರಸ್ ಕ್ರಿ. ಪೂ. 342-270. ಗ್ರೀಕ್ ದಾರ್ಶನಿಕ, ಎಪಿಕ್ಯೂರಿಯಾನಿಸಮ್ ಎಂಬ ಸಿದ್ಧಾಂತದ ಸ್ಥಾಪಕ. ಈತ ಅಥೆನ್ಸಿನ ಪೌರ. ಹುಟ್ಟಿದ್ದು ಸೇಮಾಸ್‍ನಲ್ಲಿ, 323ರಲ್ಲಿ ಅಥೆನ್ಸ್ ನಗರಕ್ಕೆ ಬಂದ. ಅಲ್ಲಿಂದ ಕೊಲೊಫನ್ ಎಂಬ ಸ್ಥಳಕ್ಕೆ ತೆರಳಿದ. ಅಲ್ಲಿ ತಂದೆಯೊಂದಿಗೆ ಅಧ್ಯಾಪಕವೃತ್ತಿಯನ್ನು ಕೈಗೊಂಡ. ಮೊದಮೊದಲು ವ್ಯಾಕರಣದ ಪಾಠವನ್ನು ಹೇಳಿಕೊಡಲು ತೊಡಗಿದ. ಅನಂತರ ಅವನ ಆಸಕ್ತಿ ದರ್ಶನಶಾಸ್ತ್ರದ ಕಡೆಗೆ ಹೊರಳಿತು. 306ರಲ್ಲಿ ಮತ್ತೆ ಅಥೆನ್ಸ್‍ಗೆ ಬಂದ. ಅಲ್ಲೊಂದು ಉದ್ಯಾನವನವನ್ನು ಕೊಂಡು ಅಲ್ಲಿ ತನ್ನ ಶಾಲೆಯನ್ನು ಸ್ಥಾಪಿಸಿದ. ತನ್ನ ಅಂತ್ಯಕಾಲದವರೆವಿಗೂ ಅಲ್ಲಿಯೇ ಇದ್ದ. ಈತ ರಾಜಕಾರಣದಲ್ಲಿ ಪ್ರವೇಶಿಸಲು ಒಡಂಬಡಲಿಲ್ಲ. ಎಲೆಯಮರೆಯ ಕಾಯಿಯಂತೆ ಅಗೋಚರನಾಗಿ ಬಾಳು-ಎನ್ನುವುದೇ ಇವರ ಜೀವನದ ಸೂತ್ರವಾಗಿತ್ತು. ಈತ ಒಳ್ಳೆಯ ಪೌರನಾಗಿದ್ದ, ಒಳ್ಳೆಯ ಸ್ನೇಹಿತನಾಗಿದ್ದ. ಆಹಾರ ವಿಹಾರಗಳಲ್ಲಿ ಬಹು ಮಿತ. ಇಹಲೋಕದಲ್ಲಿ ಒಳ್ಳೆಯ ಬಾಳು ಬಾಳಬೇಕೆಂಬುದು ಇವನ ಧ್ಯೇಯವಾಗಿತ್ತು. ತತ್ತ್ವ ಜಿe್ಞÁಸೆಯ ವ್ಯರ್ಥಾಲಾಪದಲ್ಲಿ ಕಾಲಕಳೆಯುವುದಕ್ಕಿಂತಲೂ ಜೀವನದ ಅನುಷ್ಠಾನದ ಕಡೆಗೆ ಹೆಚ್ಚು ಗಮನಕೊಡಬೇಕೆಂದು ಬೋಧಿಸಿದ. ಜೀವನದ ಗುರಿ ಸುಖ ಅನ್ನುವ ಮಾತನ್ನು ಈತ ಅದರ ಸಾಧಾರಣವಾದ ವಿಷಯಸುಖ ಅನ್ನುವ ಅರ್ಥದಲ್ಲಿ ಉಪಯೋಗಿಸಲಿಲ್ಲ. ಮನಶ್ಶಾಂತಿ ಇಲ್ಲದೆ ಸುಖ ಅಸಾಧ್ಯವೆಂದು ಬೋಧಿಸಿದ. ನಿಜವಾದ ಸುಖಕ್ಕೆ ಮನಸ್ಸಿನ ನೆಮ್ಮದಿ ಅವಶ್ಯಕವೆಂದ. ಈ ನೆಮ್ಮದಿ ತಮ್ಮ ಆಸೆಗಳನ್ನು ಕಡಿಮೆ ಮಾಡಿಕೊಳ್ಳುವುದರಿಂದ, ಆತ್ಮ ಸಂಯಮದಿಂದ, ಜೀವನವನ್ನು ಸರಳವಾಗಿ ಮಾಡಿಕೊಳ್ಳುವುದರಿಂದ ಪ್ರಾಪ್ತವಾಗುವುದೆಂದು ಇವನ ಅಭಿಪ್ರಾಯ. ಈತ ಸತ್ಸಂಗಕ್ಕೆ ತುಂಬಾ ಬೆಲೆ ನೀಡಿದ. ಇವರ ಜೀವನ ಸ್ವಲ್ಪಮಟ್ಟಿಗೆ ನಿವೃತ್ತಿಪರವಾಗಿತ್ತು. ಮನಶ್ಶಾಂತಿಯನ್ನು ಕೆಡಿಸುವ ಜನಸಂದಣಿಯಲ್ಲಿ ಈತ ಸೇರುತ್ತಿರಲಿಲ್ಲ. ಸ್ವಲ್ಪಮಟ್ಟಿಗೆ ಅನಾಸಕ್ತಿ ಮನಸ್ಸಿನ ಸುಖಶಾಂತಿಗಳಿಗೆ ಅವಶ್ಯಕವೆಂದು ಈತನ ತೀರ್ಮಾನ. ಪ್ರಧಾನತಃ ಈತ ಭೌತವಾದಿ. ಅಲೌಕಿಕವಾದ ವಿಷಯಗಳಲ್ಲಿ ಇವನಿಗೆ ಶ್ರದ್ಧೆ ಇರಲಿಲ್ಲ. ಇವರ ಭೌತವಾದ. ಚಾರ್ವಾಕ ದರ್ಶನಕ್ಕೆ ಸದೃಶವಾಗಿದ್ದರೂ ವಿಷಯಸುಖವನ್ನೇ ಅರಸುವ ಚಾರ್ವಾಕ ಇವನಾಗಿರಲಿಲ್ಲ. ಇವನನ್ನು ಸುಶಿಕ್ಷಿತ ಚಾರ್ವಾಕನೆಂದು ಕರೆಯಬಹುದು. ಎಪಿಕ್ಯೂರಸನ ಬೋಧನೆಯನ್ನು ಎಪಿಕ್ಯೂರಿಸಂ ಎಂದು ಕರೆಯುತ್ತಾರೆ. ಅತ್ಯುತ್ತಮವಾದ ಸುಖ ಧರ್ಮ ಮತ್ತು ಶಾಂತಿಗಳಿಂದ ದೊರೆಯತಕ್ಕದ್ದು. ಅಂಥ ಸುಖವನ್ನು ಸಂಪಾದಿಸುವುದು ಮಾನವನ ಕರ್ತವ್ಯವೆಂದು ಗುರು ಬೋಧಿಸಿದರೂ ಅವನ ಅನುಯಾಯಿಗಳು ಈ ಸುಖದ ಸ್ವರೂಪವನ್ನು ಆಭಾಸಗೊಳಿಸಿ ಅದನ್ನು ಇಂದ್ರಿಯ ಭೋಗೇಚ್ಛೆಯನ್ನಾಗಿಸಿದರು. ಈಗ ರೂಢಿಯಲ್ಲಿರುವುದು ಈ ಆಭಾಸದ ಅರ್ಥವೆ. (ಎಂ.ವೈ.)