ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ಲ ಅಥವಾ ಏನೂ ಇಲ್ಲ ಎಂಬ ನಿಯಮ
ಎಲ್ಲ ಅಥವಾ ಏನೂ ಇಲ್ಲ ಎಂಬ ನಿಯಮ: ಅಂಗಕ್ರಿಯಾ ವಿಜ್ಞಾನದಲ್ಲಿ, ನರ, ಸ್ನಾಯುಗಳ ತೆರನ ಉದ್ರೇಕಗೊಳ್ಳುವ ಊತಕಗಳಲ್ಲಿ ಚೋದನೆಯ ಎದುರಾಗಿ ಮಾರುವರ್ತನೆ ಆಗುವ ಸಂದರ್ಭಗಳ ಒಂದು ನಿಯಮ (ಆಲ್ ಆರ್ನನ್ ಲಾ). ವಿದ್ಯುತ್ತಿನ ಆಗವಣೆಯ ಸೊಕ್ಕೆಯಿಂದ (ಇಂಡಕ್ಷನ್ ಷಾಕ್) ಒಂದು ಸ್ನಾಯು ಅದರ ಜೋರಿಗೆ ತಕ್ಕಂತೆ ಕುಗ್ಗುತ್ತದೆ, ಇಲ್ಲವಾದರೆ ತೆಪ್ಪನಿರುತ್ತದೆ. ಆಗುವುದಾದರೆ, ಸ್ನಾಯುವಿನ ಆಗಿನ ಸ್ಥಿತಿಯಲ್ಲಿ ಎಷ್ಟೇ ಬಲವಾದ ಚೋದನೆಯೇ ಆಗಲಿ ಸಾಧ್ಯವಿರುವಷ್ಟೂ ದೊಡ್ಡದಾಗಿ, ಬಲವಾಗಿ ಕುಗ್ಗುವುದೆಂದು ಮೊದಲು (1871) ಗುಂಡಿಗೆಯ ಸ್ನಾಯುವಿನ ವಿಚಾರವಾಗಿ ಹೇಳಿದವ ಚೌಡಿಚ್. ಆಗಿನ ಕಾಲಕ್ಕೆ ಈ ನಿಯಮ ಕೇವಲ ಗುಂಡಿಗೆಗೆ ಮಾತ್ರ ಹೇಳಬಹುದೇ ಹೊರತು ಉಳಿದ ಸ್ನಾಯುಗಳು ನರಗಳ ತೆರನ ಊತಕಗಳಿಗಲ್ಲವೆಂಬ ನಂಬಿಕೆಯಿತ್ತು. ಎಷ್ಟು ಕಡಿಮೆ ಬಲದ ಚೋದನೆಯಿಂದಾದರೂ ಎಲುಗಟ್ಟಿನ (ಸ್ಕೆಲಿಟಲ್) ಸ್ನಾಯುಗಳನ್ನು ಕೊಂಚವಾದರೂ ಕುಗ್ಗಿಸಬಹುದೆಂಬ ಕಲ್ಪನೆಯಿತ್ತು. ಸ್ನಾಯು, ನರಗಳಲ್ಲಿ ನೂರಾರು ಸಾವಿರಾರು ತಂತುಗಳು ಇರುವುದೇ ಈ ಕಲ್ಪನೆಗೆ ಆಧಾರ. ಆದರೆ ಎಲುಗಟ್ಟಿನ ಸ್ನಾಯುಗಳ, ನರಗಳ ಒಂದೊಂದು ತಂತುವೂ ಒಂದು ಬಲದ ಚೋದನೆಯಿಂದ ಕುಗ್ಗುತ್ತದೆ. ಇಲ್ಲವಾದರೆ ಏನೇನೂ ಕುಗ್ಗದೆಂದು ಈಗ ಗೊತ್ತಾಗಿದೆ. ಮಾರುವರ್ತನೆಯ ಪ್ರಮಾಣ ಹೆಚ್ಚು ಕಡಿಮೆ ಆಗುವುದೇ ಇಲ್ಲವೆಂದು ಇದರ ಅರ್ಥವಲ್ಲ. ಊತಕದ ಸ್ಥಿತಿಗೆ ತಕ್ಕಂತೆ ಅದರ ಮಾರುವರ್ತಿಸುವ ನಿಜಗೆಲಸವೂ ಇರುವುದು. ಹಿಂದಿನ ಮಾರುವರ್ತನೆಯಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ನೀಡಿದ ಚೋದನೆಗೆ ಮಾರುವರ್ತನೆ ಎಂದಿಗಿಂತಲೂ ಕಡಿಮೆಯೇ. ಚೋದನೆ ಸಾಕಷ್ಟಿದ್ದರೆ, ಅದರ ಬಲಕ್ಕೂ ಮಾರುವರ್ತನೆಯ ಪ್ರಮಾಣಕ್ಕೂ ಸಂಬಂಧವಿರದು. ವಿಶೇಷೀಕರಿತ ಊತಕಗಳಾದ ಗುಂಡಿಗೆಯ, ಎಲುಗಟ್ಟಿನ ಸ್ನಾಯುಗಳಲ್ಲಿ, ನರಗಳಲ್ಲಿ ಒಟ್ಟಿನಲ್ಲಿ ನಿಜಗೆಲಸದ ಮಾರು ವರ್ತನೆ ಒಂದೇ ತೆರನಾಗಿ ಇರುವುದೆಂದು ಈ ನಿಜಸಂಗತಿಗಳು ತೋರುತ್ತವೆ. ಹೀಗಾಗುವುದರ ಸರಿಯಾದ ಕಾರಣ ಗೊತ್ತಿಲ್ಲವಾದರೂ ಇರುವ ಬಲವೆಲ್ಲ ಒಂದೇ ಬಾರಿಗೆ ಕಳೆವಂತೆ ಮಾಡುವ ಸಿಡಿತಕ್ಕೆ ಹೋಲಿಸಬಹುದಷ್ಟೆ. (ಡಿ.ಎಸ್.ಎಸ್.)