ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ ಆಲಮೇನ್

ವಿಕಿಸೋರ್ಸ್ದಿಂದ

ಎಲ್ ಆಲಮೇನ್: ಈಜಿಪ್ಟಿನ ಅಲೆಕ್ಸಾಂಡ್ರಿಯ ನಗರದ ಪಶ್ಚಿಮಕ್ಕೆ 80 ಕಿ.ಮೀ ದೂರದಲ್ಲಿರುವ ಸ್ಥಳ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಕಾಮನ್ವೆಲ್ತಿನ ಎಂಟನೆಯ ಸೇನೆಗೂ ಮಾರ್ಷಲ್ ಎಡ್ವಿನ್ ರಾಮೆಲನ ನೇತೃತ್ವದಲ್ಲಿ ಆಫ್ರಿಕದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಜರ್ಮನ್-ಇಟಾಲಿಯನ್ ಸಂಯುಕ್ತ ಪಡೆಗಳಿಗೂ ನಡುವೆ ಇಲ್ಲಿ ಎರಡು ಕದನಗಳು ನಡೆದವು (1942). ಮೊದಲನೆಯ ಕದನ ನಡೆದದ್ದು ಜೂನ್ 30ರಿಂದ ಜುಲೈ 25ರ ವರೆಗೆ. ಆಗ ಜನರಲ್ ಸರ್ ಕ್ಲಾಡ್ ಆಕಿನ್ಲೆಕ್ನ ನೇತೃತ್ವದಲ್ಲಿ ಮೊದಲ ಬಾರಿಗೆ ರಾಮೆಲನ ಸೇನೆಯನ್ನು ತಡೆಯಲಾಯಿತು. ಎರಡನೆಯ ಯುದ್ಧ ಅಕ್ಟೋಬರ್ 23ರಂದು ಆರಂಭವಾಗಿ ನವೆಂಬರ್ 4ರಂದು ಕೊನೆಗೊಂಡಿತು. ಈ ಎರಡನೆಯ ಕದನ ನಿರ್ಣಾಯಕವಾದದ್ದು. ಇದರಲ್ಲಿ ಬ್ರಿಟಿಷ್ ಸೇನೆ ಸಂಪುರ್ಣವಾಗಿ ಮೇಲುಗೈ ಸ್ಥಾಪಿಸಿತಲ್ಲದೆ, ಅನಂತರ ಆಕ್ರಮಣಕಾರರನ್ನು ಅಟ್ಟಿಸಿಕೊಂಡು ಹೋಗಿ ಇಡೀ ಉತ್ತರ ಆಫ್ರಿಕದಿಂದ ಅವರು ಕಾಲ್ತೆಗೆಯುವ ಹಾಗೆ ಮಾಡಿತು. ಎರಡನೆಯ ಕದನದ ಸಮಯದಲ್ಲಿ ಎಂಟನೆಯ ಸೇನೆಯ ದಂಡನಾಯಕ ನಾಗಿದ್ದವನು ಜನರಲ್ ಸರ್ ಬರ್ನಾಡ್ (ಅನಂತರ ಲಾರ್ಡ್) ಮಾಂಟ್ಗಮರಿ. (ನೋಡಿ- ಎರಡನೆಯ-ಮಹಾಯುದ್ಧ). (ಎ.ಎನ್.ಎಸ್.ಎಂ.)