ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಸ್ಟೋನಿಯ

ವಿಕಿಸೋರ್ಸ್ ಇಂದ
Jump to navigation Jump to search

ಎಸ್ಟೋನಿಯ: ಸೋವಿಯತ್ ಒಕ್ಕೂಟದ ಗಣರಾಜ್ಯಗಳಲ್ಲೊಂದಾಗಿತ್ತು. 1991ರಲ್ಲಿ ಎಸ್ಟೋನಿಯನ್ ಸೋವಿಯತ್ ಸಮಾಜವಾದೀ ಗಣರಾಜ್ಯದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. ಸುಮಾರು 570 50' ಉತ್ತರ ಅಕ್ಷಾಂಶದಿಂದ 590 75' ಉತ್ತರ ಅಕ್ಷಾಂಶದ ವರೆಗೂ 220 ಪುರ್ವ ರೇಖಾಂಶದಿಂದ 280 10' ಪುರ್ವ ರೇಖಾಂಶದ ವರೆಗೂ ಹರಡಿದೆ. ಉತ್ತರದಲ್ಲಿ ಫಿನ್ಲೆಂಡ್ ಖಾರಿ, ಪಶ್ಚಿಮದಲ್ಲಿ ಬಾಲ್ಟಿಕ್ ಸಮುದ್ರ, ಪುರ್ವದಲ್ಲಿ ಪೈಪುಸ್ ಸರೋವರ, ಪ್ಸಾಫ್ಕ್‌ ಮತ್ತು ರಷ್ಯನ್ ಸೋವಿಯತ್ ಗಣರಾಜ್ಯ, ದಕ್ಷಿಣದಲ್ಲಿ ಲ್ಯಾಟ್ವಿಯ ಇವುಗಳ ನಡುವೆ ಇರುವ ಈ ರಾಜ್ಯ ಬಾಲ್ಟಿಕ್ ಪ್ರದೇಶದ ಮೂರು ಗಣರಾಜ್ಯಗಳ ಪೈಕಿ ಅತ್ಯಂತ ಚಿಕ್ಕದು. (ಉಳಿದೆರಡು ಲಿಥುವೇನಿಯ ಮತ್ತು ಲ್ಯಾಟ್ವಿಯ.) ಪ್ರಧಾನ ಭೂ ಭಾಗದೊಂದಿಗೆ ಪಶ್ಚಿಮದಲ್ಲಿನ 818 ದ್ವೀಪಗಳೂ ಈ ದೇಶಕ್ಕೆ ಸೇರಿವೆ. ಇವುಗಳಲ್ಲಿ ಮುಖ್ಯವಾದವು ಸೆರ್ಯಿಮ (ಅಸೆóಲ್) (163 ಚ.ಕಿಮೀ) ಹೀಯೂಮಾ (ಡೇಗೋ) (600 ಚ.ಕಿಮೀ), ಮುಹುಮಾ ಮತ್ತು ಮೊಮೊರ್ಸ್‌. ರಾಜ್ಯದ ವಿಸ್ತೀರ್ಣ 29,555 ಚ.ಕಿಮೀ ಗಳಿದ್ದುದು 1946ರ ಅನಂತರ 45,100 ಚ.ಕಿಮೀ ಆಯಿತು. ವಿಸ್ತೀರ್ಣದ ದೃಷ್ಟಿಯಿಂದ ಈ ರಾಜ್ಯದ ಸಮುದ್ರ ತೀರ ಅಧಿಕ ಉದ್ದವೆಂದೇ ಹೇಳಬೇಕು.

ಈ ರಾಜ್ಯದ ಉತ್ತರಾರ್ಧದಲ್ಲೂ ದ್ವೀಪಗಳಲ್ಲೂ ಸಿಲ್ಯೂರಿಯನ್ ಕಾಲದ ಡೊಲೊಮೈಟ್ ಮತ್ತು ಸುಣ್ಣಕಲ್ಲು ಶಿಲೆಗಳೂ ದಕ್ಷಿಣದಲ್ಲಿ ಡಿವೊನಿಯನ್ ಕಾಲದ ಮರಳುಕಲ್ಲುಗಳೂ ಇವೆ. ದೇಶದಾದ್ಯಂತ ಹೇರಳವಾಗಿ ಹಿಮಚಲನೆಗಳಿಂದ ಸಂಭವಿಸಿದ ಸಂಚಯನಗಳುಂಟು. ಇವು ದಕ್ಷಿಣದಲ್ಲಿ ಹೆಚ್ಚು ಒತ್ತಾಗಿವೆ. ಹಿಮಚಲನೆಯಿಂದಾದ ಸರೋವರಗಳು ಸುಮಾರು 1,500ಕ್ಕೂ ಅಧಿಕವಾಗಿವೆ. ಮಧ್ಯ ಮತ್ತು ದಕ್ಷಿಣಗಳಲ್ಲಿ ಇವನ್ನು ಹೆಚ್ಚಾಗಿ ಕಾಣಬಹುದು. ಇವುಗಳಲ್ಲಿ ವೋಟ್ರ್ಸ್‌-ಜಾರು ಅತ್ಯಂತ ದೊಡ್ಡದು.

ಮೇಲ್ಮೈ ಲಕ್ಷಣ[ಸಂಪಾದಿಸಿ]

ಇದು ಉತ್ತರ ಯುರೋಪಿನ ಮಹಾ ಮೈದಾನದ ಒಂದು ಭಾಗ, ಎಸ್ಟೋನಿಯದ ಬಹು ಭಾಗ ಸಮುದ್ರ ಮಟ್ಟದಿಂದ 90ಮೀ.ಗೂ ಕಡಿಮೆ ಎತ್ತರ ದಲ್ಲಿದೆ. ಆಗ್ನೇಯದಲ್ಲಿ ಅಲ್ಲಲ್ಲಿ ಸ್ವಲ್ಪ ಎತ್ತರದ ಪ್ರದೇಶಗಳನ್ನು ಕಾಣಬಹುದು. ಮುನಮಗಿ (306ಮೀ.)

ಎಸ್ಟೋನಿಯದ ಅತ್ಯಂತ ಎತ್ತರ ಶಿಖರ. ಉತ್ತರ ಮತ್ತು ಪುರ್ವ ಪ್ರದೇಶಗಳು ತಗ್ಗು ಬಂiÀÄಲುಗಳು. ಇವು ಸಮುದ್ರ ಮಟ್ಟದಿಂದ 24-44ಮೀ. ಎತ್ತರದಲ್ಲಿವೆ. ಈ ದೇಶದ ಎಲ್ಲ ನದಿಗಳೂ ಚಿಕ್ಕವು. ಇವುಗಳಲ್ಲಿ ಪ್ರವಾಹ ಇದ್ದೇ ಇರುತ್ತದೆ. ಇವು ಮೂರು ಬಗೆ : 1 ಫಿನ್ಲೆಂಡ್ ಖಾರಿ ಸೇರುವ ನದಿಗಳು : ಪಿರಿಟ, ನಾರ್ವ ಇವು ಜಲಪಾತಗಳಿಂದ ಕೂಡಿವೆ. 2 ರೀಗಾ ಖಾರಿ ಸೇರುವ ನದಿಗಳು : ಪಾರ್ನು, ಕಸರಿ. 3 ಪೈಪುಸ್ ಸರೋವರವನ್ನು ಸೇರುವ ನದಿಗಳು : ಎಮಜೋಗಿ, ಒಹಂಡು.

ಎಸ್ಟೋನಿಯದ ಸಮುದ್ರತೀರಗಳಲ್ಲಿ ಸಾಗರಿಕ ವಾಯುಗುಣವೂ ಒಳಭಾಗಗಳಲ್ಲಿ ಖಂಡಾಂತರ ವಾಯುಗುಣವೂ ಕಂಡುಬರುತ್ತವೆ. ಸರಾಸರಿ ಉಷ್ಣತೆ 170 ಸೆ. (ಜುಲೈ) ಮತ್ತು 50 ಸೆ. (ಫೆಬ್ರುವರಿ). ಎಸ್ಟೋನಿಯ ಸಣ್ಣ ದೇಶವಾದರೂ ಉಷúತೆಯ ವ್ಯತ್ಯಾಸಗಳು ಅಧಿಕ.

ವಾಯವ್ಯ ಮಾರುತಗಳಿಂದ ಇಲ್ಲಿ ಮಳೆಯಾಗುತ್ತದೆ. ಬೇಸಗೆಯಲ್ಲಿ ಪರಿಸರಣ ಮಳೆ ಸಾಮಾನ್ಯ. ಮಳೆಯ ವಾರ್ಷಿಕ ಸರಾಸರಿ 60 ಸೆಂಮೀ ಹಿಮ ಬೀಳುವುದು ಹೆಚ್ಚು. ಚಳಿಗಾಲದಲ್ಲಿ ಒಳಭಾಗಗಳಲ್ಲಿ 25 ಸೆಂಮೀ ದಪ್ಪನಾಗಿ ಹಿಮ ಬೀಳುವುದುಂಟು. ಉತ್ತರ ತೀರದಲ್ಲಿ

ವರ್ಷಕ್ಕೆ 130-145 ದಿನಗಳ ಕಾಲ ಹಿಮ ಕವಿದಿರುತ್ತದೆ. ಪಶ್ಚಿಮದಲ್ಲಿ ಈ ಅವಧಿ 50-70 ದಿನ.

ಒಂದನೆಯ ಮಹಾಯುದ್ಧಕ್ಕೆ ಮುಂಚೆ ದೇಶದ 1/4 ಭಾಗ ಕಾಡುಗಳಿಂದ ಕೂಡಿತ್ತು. ಇವುಗಳಲ್ಲಿ ಶೇ. 70 ಎಲೆ ಮೊನಚಿನವು. ಸ್ಪ್ರೂಸ್, ಪೈನ್ ಮರಗಳು ಮುಖ್ಯವಾದವು. ಭೂ ಸುಧಾರಣೆಯ ಪರಿಣಾಮವಾಗಿ ಕಾಡುಗಳನ್ನು ಬಹುತೇಕ ಕಡಿಯಲಾಗಿದೆ. ಈಗ ಅಲ್ಲಲ್ಲಿ ಓಕ್ ಮರದ ಕಾಡುಗಳಿವೆ.

ವ್ಯವಸಾಯ, ಕೈಗಾರಿಕೆ ಇತ್ಯಾದಿ[ಸಂಪಾದಿಸಿ]

ಎಸ್ಟೋನಿಯದಲ್ಲೂ ಡೆನ್ಮಾರ್ಕಿನಂತೆ ಮಿಶ್ರವ್ಯವಸಾಯ ಸಾಮಾನ್ಯ. 1919ರಲ್ಲಿ ಆದ ಸುಧಾರಣೆಯ ಪರಿಣಾಮವಾಗಿ ಭೂಮಿ ಸಾಮಾನ್ಯ ಜನತೆಯ ಕೈಸೇರಿತು. 1939ರ ಹೊತ್ತಿಗೆ ಸರಾಸರಿ 58 ಎಕರೆ ವಿಸ್ತಾರದ 1,39,984 ಹಿಡುವಳಿಗಳಿದ್ದವು. ಅನಂತರ ಇವುಗಳ ಸಂಧ್ಯ 88,000ಕ್ಕೆ ಇಳಿಯಿತು. 1949ರಿಂದೀಚೆಗೆ ಸಾಮೂಹಿಕ ವ್ಯವಸಾಯ ರೂಢಿಗೆ ಬಂದು, ಕೃಷಿಯ ನೆಲವನ್ನೆಲ್ಲ ಕಾಲ್ಖಾeóïಗಳನ್ನಾಗಿ (ಸಾಮೂಹಿಕ ಭೂಮಿ) ವಿಂಗಡಿಸಲಾಯಿತು. 1935ರಲ್ಲಿ ಇವುಗಳ ಸಂಖ್ಯೆ 1,137. ರೈ, ಗೋಧಿ, ತೋಕೆಗೋಧಿ, ಆಲೂಗೆಡ್ಡೆ, ಅಗಸೆಗಳು ಮುಖ್ಯ ಬೆಳೆಗಳು. ಹಿಂದೆ ಈ ರಾಜ್ಯ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗ ಇದು ಹೆಚ್ಚುವರಿ ದೇಶ ಪಶುಪಾಲನೆಯೂ ಸಾಮಾನ್ಯ ಮಹಾಯುದ್ಧದ ಸಮಯದಲ್ಲಿ ಈ ಕಸಬಿಗೆ ಧಕ್ಕೆ ತಗುಲಿತಾದರೂ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ (1951-55) ಇದು ಮತ್ತೆ ಮೊದಲಿನ ಸ್ಥಾನ ಪಡೆಯಿತು. ದನಕರು, ಹಂದಿ, ಕುರಿ, ಕುದುರೆ, ಕೋಳಿಗಳು ಮುಖ್ಯ ಪ್ರಾಣಿಗಳು. ಬೆಣ್ಣೆ, ಗಿಣ್ಣು, ಘನೀಕರಿಸಿದ ಹಾಲು ಮುಂತಾದವುಗಳ ವಾರ್ಷಿಕ ಉತ್ಪನ್ನ 10 ಲಕ್ಷ ಟನ್ನುಗಳಿಗಿಂತಲೂ ಹೆಚ್ಚು.

ಸಮುದ್ರತೀರದಲ್ಲಿ ಮೀನುಗಾರಿಕೆ ಒಂದು ಮುಖ್ಯ ಕಸಬು. ಇದನ್ನು ಆಧುನಿಕಗೊಳಿಸಲಾಗಿದೆ. ಕೆಲವು ಕಡೆ ತುಪ್ಪಳು ಚರ್ಮ ತಯಾರಿಕೆಯೂ ಉಂಟು. ಕೈಗಾರಿಕೆಗಳಿಗೆ ಅಗತ್ಯವಾದ ಶಕ್ತಿ ಸಾಧನಗಳು ಇಲ್ಲಿ ಹೇರಳ. ನ್ಯಾಫ್ತ, ಪೆಟ್ರೋಲಿಯಂ ಮೊದಲಾದ ಜಲಜನಕ ಇಂಗಾಲ ಸಂಯುಕ್ತ ಪದರಗಲ್ಲುಗಳು ಉತ್ತರ ಹಾಗೂ ಪುರ್ವ ಭಾಗಗಳಲ್ಲಿ ಹರಡಿವೆ. ಈ ಜೇಡಿ ಪದರಗಲ್ಲುಗಳಿಂದ ಪೆಟ್ರೋಲಿಯಂ, ಮೃದುಚಾಲಕ ಎಣ್ಣೆಗಳು, ರಾಳ ಮತ್ತು ಕಲ್ಲರಗುಗಳನ್ನು ಹೊರತೆಗೆಯಲಾಗುತ್ತದೆ. 1955ರಲ್ಲಿ 8,10,000ಟನ್ ಎಣ್ಣೆ ತಯಾರಿಕೆಯ ಗುರಿ ಇದ್ದು ಅದನ್ನು ಸಾಧಿಸಲಾಯಿತು. ಕೋಹ್ಟ್ಲಾ ಜಾರ್ವೆ ಮುಖ್ಯ ತೈಲ ಶೋಧನಕೇಂದ್ರ. ಅಲ್ಲಿಂದ 160 ಕಿಮೀ ದೂರದಲ್ಲಿರುವ ಲೆನಿನ್ಗ್ರಾಡಿಗೆ 1948ರಲ್ಲೂ ಟ್ಯಾಲಿನಿಗೆ 1953ರಲ್ಲೂ ಎಣ್ಣೆ ಸಾಗಿಸಲು ಕೊಳವೆ ಹಾಕಲಾಯಿತು. ಜಲವಿದ್ಯುತ್ತಿನ ಉತ್ಪಾದನೆಯೂ ಈಚೆಗೆ ಅಧಿಕಗೊಂಡಿದೆ. (1949ರಲ್ಲಿ 25 ಕೋಟಿ ಕಿ.ವ್ಯಾ.), ಎಲ್ಲಮಾ, ಪಾರ್ನ ಇವು ಉಷ್ಣ ವಿದ್ಯುತ್ ತಯಾರಿಕೆಯ ಕೇಂದ್ರಗಳು. ಟ್ಯಾಲಿನ್ ರಂಜಕ ಮತ್ತು ಲವಣಗಳ ಕೈಗಾರಿಕಾ ಕೇಂದ್ರ. ಹತ್ತಿ ಜವಳಿ ಈ ದೇಶದ ಮುಖ್ಯ ಕೈಗಾರಿಕೆ. ಇದಕ್ಕೆ ನಾರ್ವೆ ಮುಖ್ಯ ಕೇಂದ್ರ. ಇದಲ್ಲದೆ ರೇಯಾನ್, ಅಗಸೆ, ಉಣ್ಣೆ ಮತ್ತು ಸೆಣಬಿನ ಗಿರಣಿಗಳೂ ಇಲ್ಲುಂಟು. ಉತ್ತರದಲ್ಲಿ ಮರ ಕೊಯ್ಯುವ ಕೈಗಾರಕೆ ಮುಖ್ಯ. ಇದರೊಂದಿಗೆ ಅಲ್ಲಲ್ಲಿ ಸಿಮೆಂಟ್, ಗಾಜು, ಜಿಪ್ಸಂ ಕಾರ್ಖಾನೆಗಳೂ ಬೆಳೆದಿವೆ.

ಎಸ್ಟೋನಿಯ ಸಣ್ಣ ದೇಶವಾದರೂ ಇಲ್ಲಿನ ಸಂಚಾರ ಮಾರ್ಗ ಚೆನ್ನಾಗಿ ಬೆಳೆದಿದೆ. (ರೈಲು ಮಾರ್ಗ 1,702ಕಿಮೀ ರಸ್ತೆ 21,500ಕಿಮೀ) ಪಲ್ಡಿಸ್ಕಿ ಪಾರ್ನು ಮುಖ್ಯ ಬಂದರುಗಳು. ಎಸ್ಟೋನಿಯದ ಜನಸಂಖ್ಯೆ 13,32,900 (2005), 56% ಮಂದಿ ಪಟ್ಟಣಿಗರು. ಇವರ ಪೈಕಿ ಅಧಿಕ ಸಂಖ್ಯೆಯ ಜನ ಉತ್ತರ ತೀರದ ಪಟ್ಟಣಗಳಾದ ಟ್ಯಾಲಿನ್ (2,81,714) ಮತ್ತು ಟಾರ್ಟುಗಳಲ್ಲಿ (74,263) ವಾಸಿಸುತ್ತಾರೆ. ಎಸ್ಟೋನಿಯದ ಜನರ ಪೈಕಿ ಸುಮಾರು 73% ಎಸ್ಟೋನಿಯನ್ನರು. ಇವರು ಪಿನ್ನರ ಸಂಬಂಧಿಗಳು. ಉಳಿದವರಲ್ಲಿ ರಷ್ಯನ್ನರು (22%) ಮುಖ್ಯ. ಫಿನ್, ಉಕ್ರೇನಿಯನ್, ಬೆಲೊರಷ್ಯನ್ ಜ್ಯೂ ಜನ ಇತರರು. ಈ ದೇಶದ ವ್ಯಾಪಾರ ಹೆಚ್ಚಾಗಿ ರಷ್ಯದೊಂದಿಗೆ ನಡೆಯುತ್ತಿತ್ತು. 1919-39ರ ಅವಧಿಯಲ್ಲಿ ಗ್ರೇಟ್ ಬ್ರಿಟನ್ ಮತ್ತು ಜರ್ಮನಿಗಳೊಂದಿಗೆ ವ್ಯಾಪಾರ ಬೆಳೆಯಿತು. ಎರಡನೆಯ ಮಹಾಯುದ್ದದ ಅನಂತರ ಮತ್ತೆ ರಷ್ಯದೊಂದಿಗೆ ವ್ಯಾಪಾರ ಸಂಬಂಧ ಅಧಿಕವಾಗಿದೆ. ಇಲ್ಲಿನ ಹಣ ಕ್ರೂನ್. (ಕೆ.ಆರ್.ಆರ್.)

ಇತಿಹಾಸ[ಸಂಪಾದಿಸಿ]

ಎಸ್ಟೋನಿಯದ ಇತಿಹಾಸ ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದದ್ದು. ಒಂದನೆಯ ಶತಮಾನದಲ್ಲಿ ಬದುಕಿದ್ದ ರೋಮನ್ ಇತಿಹಾಸಕಾರ ಟೌಸಿಟಸನ ಕೃತಿಯೊಂದರಲ್ಲಿ ಪ್ರಪ್ರಥಮವಾಗಿ ಎಸ್ಟೋನಿಯದ ಉಲ್ಲೇಖವಿದೆ.

ಇತಿಹಾಸಕಾರರಿಗೆ ತಿಳಿದಿರುವ ಮಟ್ಟಿಗೆ ಈ ದೇಶದ ಜನ ಮೊಟ್ಟಮೊದಲ ಬಾರಿಗೆ ಆಕ್ರಮಣಕ್ಕೆ ತುತ್ತಾದದ್ದು 9ನೆಯ ಶತಮಾನದಲ್ಲಿ. ಆಗ ಜೈತ್ರಯಾತ್ರೆಯಲ್ಲಿ ನಿರತರಾಗಿದ್ದ ವೈಕಿಂಗರು ಈ ನಾಡಿನ ಮೂಲಕ ಹಾದು ಹೋದರಂತೆ. ಈ ಆಕ್ರಮಣಕಾರರು ಯೋಧರು ಮಾತ್ರವೇ ಆಗಿರಲಿಲ್ಲ; ವರ್ತಕರೂ ಆಗಿದ್ದರು ಆದ್ದರಿಂದ ಎಸ್ಟೋನಿಯನ್ನರು ಇವರಿಂದ ಅನೇಕ ವಿಚಾರಗಳನ್ನು ಕಲಿತರು. ಎಸ್ಟೋನಿಯನ್ನರು ಆಗ ಕ್ರೈಸ್ತರಾಗಿರಲಿಲ್ಲ. 11, 12ನೆಯ ಶತಮಾನಗಳಲ್ಲಿ ಡೇನರೂ ಸ್ವೀಡರೂ ಇವರನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸಲು ಪ್ರಯತ್ನಿಸಿ ವಿಫಲರಾದರು. ಸುಮಾರು ಇದೇ ಕಾಲಕ್ಕೆ ರಷ್ಯನ್ನರು ಈ ದೇಶದ ಮೇಲೆ 13 ಸಾರಿ ದಂಡಯಾತ್ರೆ ಮಾಡಿದರಾದರೂ ಇದನ್ನು ಸಂಪುರ್ಣವಾಗಿ ವಶಪಡಿಸಿಕೊಳ್ಳಲಾಗಲಿಲ್ಲ. ಜರ್ಮನಿಯ ಹೋಲ್ಸ್ಟೈನ್ ಪ್ರದೇಶದ ಪಾದ್ರಿ ಮೈನ್ಹಾರ್ಡ್‌ 12ನೆಯ ಶತಮಾನದಲ್ಲಿ ಎಸ್ಟೋನಿಯದ ನೆರೆನಾಡುಗಳಲ್ಲಿ ಕ್ರೈಸ್ತಧರ್ಮ ಪ್ರಚಾರದಲ್ಲಿ ತೊಡಗಿದ. ಇವನ ಅನಂತರ ಬಂದ ಬರ್ಟೋಲ್ಡ್‌ ಈ ಕೆಲಸಕ್ಕೆ ಕತ್ತಿ ಬಳಸಿದ. ಇದಕ್ಕೆ ದಂಡವಾಗಿ ಈತ ಕದನವೊಂದರಲ್ಲಿ ತಲೆ ಒಪ್ಪಿಸಬೇಕಾಯಿತು.

ಆಮೇಲೆ ಬಂದ ಪಾದ್ರಿ ಬಲುಮೆಯ ಬದಲು ಒಲುಮೆಯ ಮಾರ್ಗ ಹಿಡಿದ. ಅಲ್ಲಿನ ಜನರಿಂದ ಕೋಟೆ ಕೊತ್ತಲ ಕಟ್ಟಿಸಿ ಅವರನ್ನೇ ಸೈನ್ಯಕ್ಕೆ ಸೇರಿಸಿಕೊಂಡು ಅವರಿಂದಲೇ ವಸಾಹತು ನಿರ್ಮಿಸಿದ. ಈತ ಎಸ್ಟೋನಿಯಕ್ಕೂ ಮುಂದುವರಿದ. ಧರ್ಮದ ಹೆಸರಿನಲ್ಲಿ ಜರ್ಮನಿಯಿಂದ ಪ್ರವಾಹದಂತೆ ಮುನ್ನುಗ್ಗುತ್ತಿದ್ದ ಯೋಧರ ಮುಂದೆ ಎಸ್ಟೋನಿಯನ್ನರು ತಣ್ಣಗಾದರು. ಇದೇ ವೇಳೆಗೆ ನೆರೆಯ ರಷ್ಯದ ದೊರೆಗಳೂ ಇಲ್ಲಿಗೆ ನುಗ್ಗಿದರು. ಡೆನ್ಮಾರ್ಕಿನ ದೊರೆಯೂ ದಂಡೆತ್ತಿ ಬಂದ. ಹೀಗೆ ಎಸ್ಟೋನಿಯದ ನೆಲ ಹಲವರ ಪಾಲಾಯಿತು. ಎಸ್ಟೋನಿಯನ್ನರು ಊಳಿಗದಾಳುಗಳಾದರು.

15ನೆಯ ಶತಮಾನದ ವೇಳೆಗೆ ದಕ್ಷಿಣದಲ್ಲಿ ಪೋಲೆಂಡ್ ಲಿಥುವೇನಿಯಗಳೂ ಪುರ್ವದ ಮಸ್ಕೊವಿಯೂ ಎಸ್ಟೋನಿಯದ ಮೇಲೆ ಪ್ರಭಾವ ಬೀರಲಾರಂಭಿಸಿದುವು. ನಾಲ್ಕನೆಯ ಐವಾನ್ ದಿ ಟೆರಿಬಲ್ (1530-84) ಎಸ್ಟೋನಿಯವನ್ನಾಕ್ರಮಿಸಿದ. ಮುಂದೆ ರಷ್ಯನ್ನರನ್ನು ಸೋಲಿಸಿ ಸ್ವೀಡರು ಬಂದರು.

ಪದೇ ಪದೇ ಸಂಭವಿಸುತ್ತಿದ್ದ ಯುದ್ದಗಳ ಫಲವಾಗಿ ಎಸ್ಟೋನಿಯದ ಬೆಳೆವಣಿಗೆಯಾಗಲಿಲ್ಲ. ಎಷ್ಟೋ ನೆಲ ಪಾಳು ಬಿದ್ದಿತು. ಜರ್ಮನ್ ಶ್ರೀಮಂತರು ಇದರ ಮೇಲೆ ತಮ್ಮ ಒಡೆತನ ಸ್ಥಾಪಿಸಿದರು. ಸ್ವೀಡಿಷ್ ದೊರೆಗಳು ಇವರನ್ನು ಹತೋಟಿಗೆ ತರಲು ಯತ್ನಿಸುತ್ತಿದ್ದರು.

18ನೆಯ ಶತಮಾನದಲ್ಲಿ ರಷ್ಯದ ಜಾ಼ರ್ ಪೀಟರ್ ಕೊನೆಗೂ ಈ ದೇಶವನ್ನು ಸಂಪುರ್ಣವಾಗಿ ಗೆದ್ದ. ಇಡೀ ಬಾಲ್ಟಿಕ್ ಪ್ರದೇಶವೇ ರಷ್ಯದ ಅಧೀನವಾಯಿತು. ಮುಂದಿನ ಕೆಲವು ದಶಕಗಳಲ್ಲಿ ಎಸ್ಟೋನಿಯದಲ್ಲಿ ಅನೇಕ ಭೂ ಸುಧಾರಣೆಗಳು ಜಾರಿಗೆ ಬಂದು ರೈತರ ಸ್ಥಿತಿ ಸ್ವಲ್ಪ ಉತ್ತಮಗೊಂಡಿತು. ಕೈಗಾರಿಕೆಗಳು ಬೆಳೆದವು. ಅಕ್ಷರಸ್ಥರ ಸಂಖ್ಯೆಯೂ ಹೆಚ್ಚಿತು. ಕ್ರಮೇಣ ಎಸ್ಟೋನಿಯದ ಜನರಲ್ಲಿ ಜಾಗೃತಿಯುಂಟಾಯಿತು.

1905ರಲ್ಲಿ ರಷ್ಯದಲ್ಲಿ ಸಂಭವಿಸಿದ ಕ್ರಾಂತಿ ಆ ದೇಶದ ಎಲ್ಲೆಯನ್ನು ದಾಟಿ ಎಸ್ಟೋನಿಯವನ್ನೂ ತಲಪದಿರಲಿಲ್ಲ. ಇಲ್ಲಿನ ಜನ ಸಂಘಟಿತರಾಗಿ ಸ್ವಾಯತ್ತೆಯ ಬೇಡಿಕೆ ಮುಂದಿಟ್ಟರು. 1917ರ ಕ್ರಾಂತಿಯ ಫಲವಾಗಿ ಎಸ್ಟೋನಿಯಕ್ಕೆ ಸ್ವಯಂ ಆಡಳಿತದ ಸ್ಥಾನ ಲಭಿಸಿತು.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನ್ನರ ಆಕ್ರಮಣಕ್ಕೊಳಗಾಗಿದ್ದ ಎಸ್ಟೋನಿಯ ಆ ಯುದ್ಧಾಂತ್ಯದಲ್ಲಿ ವಿಮೋಚನೆ ಹೊಂದಿತಾದರೂ ಮುಂದೆ ರಷ್ಯದ ಕೆಂಪು ಸೇನೆ ಈ ದೇಶವನ್ನು ಪ್ರವೇಶಿಸಿತು. 1920ರಲ್ಲಿ ಶಾಂತಿಯ ಕೌಲಿಗೆ ಸಹಿಯಾದರೂ ಎಸ್ಟೋನಿಯಕ್ಕೆ ನೆಮ್ಮದಿ ಉಳಿಯಲಿಲ್ಲ. 1940ರ ಆಗಸ್ಟ್‌ನಲ್ಲಿ ಇದು ಗಣರಾಜ್ಯವಾಗಿ ಸೋವಿಯತ್ ಒಕ್ಕೂಟಕ್ಕೆ ಸೇರಿತು.ಆದರೆ ಬಹುಕಾಲ ಈ ಸ್ಥಿತಿ ಮುಂದುವರಿಯಲಿಲ್ಲ. ಮರುವರ್ಷ ಇಲ್ಲಿಗೆ ಜರ್ಮನ್ನರು ನುಗ್ಗಿದರು. ಯುದ್ಧದ ಕೊನೆಯ ಘಟ್ಟದಲ್ಲಿ ಜರ್ಮನ್ನರು ಹಿನ್ನಡೆದಾಗ ಎಸ್ಟೋನಿಯದ ಭವಿಷ್ಯ ಮತ್ತೆ ಸೋವಿಯತ್ ಒಕ್ಕೂಟಕ್ಕೆ ಹಸ್ತಾಂತರವಾಯಿತೆನ್ನಬಹುದು. ಈಗ ಇದು ಈ ಒಕ್ಕೂಟದ ಒಂದು ಗಣರಾಜ್ಯವಾಗಿ ಮುಂದುವರಿಯುತ್ತಿದೆ. *