ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಕಲವ್ಯ
ಏಕಲವ್ಯ: ದ್ರೋಣಾಚಾರ್ಯರ ಶಿಷ್ಯರಲ್ಲೊಬ್ಬ. ಧನುರ್ವಿದ್ಯೆಯಲ್ಲಿ ನಿಷ್ಣಾತನಾದವ. ಹಿರಣ್ಯಧನುವೆಂಬ ಬೇಡನ ಸಾಕುಮಗ. ದ್ರೋಣಾಚಾರ್ಯರಲ್ಲಿ ಧನುರ್ವಿದ್ಯೆಯನ್ನು ಕಲಿಯಬೇಕೆಂಬ ಅಭಿಲಾಷೆಯಿಂದ ಬಂದು ಬೇಡಿ, ತಿರಸ್ಕೃತನಾದರೂ ಹತಾಶನಾಗದೆ ಮಣ್ಣಿನಿಂದ ದ್ರೋಣಾಚಾರ್ಯರ ಪ್ರತಿಮೆಯನ್ನು ಮಾಡಿ ಅತ್ಯಂತ ಭಕ್ತಿಯಿಂದ ಅದಕ್ಕೆ ಗುರುಸೇವೆಯನ್ನು ಸಲ್ಲಿಸಿ ಬಿಲ್ಲುಗಾರಿಕೆಯನ್ನು ಕಲಿಯುತ್ತ ಅದರಲ್ಲಿ ಅನ್ಯಾದೃಶವಾದ ನೈಪುಣ್ಯವನ್ನು ಸಂಪಾದಿಸಿದ. ಆತನಿಗೆ ಶಬ್ದವೇದಿತ್ವವೂ ಸಾಧಿಸಿತು.
ಒಂದು ದಿನ ಬೇಟೆಯಾಡಲು ಬಂದ ಕುರುಪಾಂಡವರ ನಾಯಿ ಏಕಲವ್ಯನನ್ನು ಅಟ್ಟಿಸಿಕೊಂಡು ಹೋಗಲಾಗಿ ತನ್ನ ಕೈಚಳಕದಿಂದ ಏಕಲವ್ಯ ಬೊಗಳುತ್ತಿದ್ದ ನಾಯ ಬಾಯಲ್ಲಿ ಏಳು ಬಾಣಗಳನ್ನು ನಾಟಿಸಿದ. ಇಂಥ ಚಮತ್ಕಾರವನ್ನೆಸಗಿದ ಬಿಲ್ಲುಗಾರನ ಹಸ್ತಲಾಘವಕ್ಕೆ ಎಲ್ಲರೂ ಬೆರಗಾದರು. ಅರ್ಜುನನಿಗಂತೂ ತನ್ನನ್ನು ಮೀರಿಸುವ ಬಿಲ್ಲುಗಾರನಿದ್ದಾನಲ್ಲ ಎಂಬ ಬೇಗುದಿಯುಂಟಾಯಿತು. ಅರ್ಜುನನಿಗೆ ಮಾತುಕೊಟ್ಟ ದ್ರೋಣಾಚಾರ್ಯರು ಏಕಲವ್ಯನಿದ್ದೆಡೆಗೆ ಬಂದು ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯನ್ನಾಗಿ ಬೇಡಲು, ಸ್ವಲ್ಪವೂ ಹಿಂದೆಮುಂದೆ ನೋಡದೆ ಪರಿಶುದ್ದ ಭಕ್ತಿಭಾವದಿಂದ ಏಕಲವ್ಯ ತನ್ನ ಹೆಬ್ಬೆರಳನ್ನು ಕತ್ತರಿಸಿಕೊಟ್ಟ. ಹೆಬ್ಬೆರಳು ಹೋದರೂ ಬಿಲ್ಲುಗಾರಿಕೆಯ ಅಭ್ಯಾಸವನ್ನು ಮಾತ್ರ ಆತ ಬಿಡಲಿಲ್ಲ. ಇವನ ಮಗ ಕೇತುಮಂತನನ್ನು ಭಾರತಯುದ್ಧದಲ್ಲಿ ಭೀಮಸೇನ ಕೊಂದ. ಇವನಾದರೋ ದುರ್ಯೋಧನನ ಪರವಾಗಿ ಭಾರತಯುದ್ಧದಲ್ಲಿ ಹೋರಾಡಿ ಶ್ರೀ ಕೃಷ್ಣನಿಂದ ಹತನಾದ. ಏಕಲವ್ಯನ ಹೆಸರು ಗುರುಭಕ್ತಿಗೂ ಧನುರ್ವಿದ್ಯೆಗೂ ಪ್ರಖ್ಯಾತವಾಗಿದೆ.
ಏಕಲವ್ಯನ ಈ ಕಥೆ ಕನ್ನಡದ ಮೂವರು ಪ್ರಸಿದ್ಧ ಲೇಖಕರಿಗೆ ರೂಪಕಸಾಮಗ್ರಿಯನ್ನೊ ದಗಿಸಿದೆ. ಕೈಲಾಸಂ ಅವರು ಪರ್ಪಸ್ ಮತ್ತು ಫುಲ್ಫಿಲ್ಮೆಂಟ್ ಎಂಬ ಎರಡು ನಾಟಕ ಗಳನ್ನು ರಚಿಸಿದ್ದಾರೆ. ಕುವೆಂಪು ಅವರು ತಮ್ಮ ಬೆರಳ್ಗೆ ಕೊರಳ್ ಎಂಬ ನಾಟಕದಲ್ಲಿ ಬೆರಳನ್ನು ಬೇಡಿದ ದ್ರೋಣರು ಹೇಗೆ ಕರ್ಮಫಲವಾಗಿ ತಮ್ಮ ಕೊರಳನ್ನು ಅರ್ಪಿಸಿದರು ಎಂಬ ವಸ್ತುವನ್ನು ಬಹುಗಂಭೀರವಾಗಿ ಚಿತ್ರಿಸಿದ್ದಾರೆ. ಹಾಗೆಯೇ ಗೋವಿಂದಪೈಗಳು ಇದೇ ವಸ್ತುವನ್ನಾಧಾರವಾಗುಳ್ಳ ಹೆಬ್ಬೆರಳು ಎಂಬ ನಾಟಕವನ್ನು ರಚಿಸಿದ್ದಾರೆ. ದಿವಂಗತ ಕಾಶಿವಿಶ್ವನಾಥಶೆಟ್ಟಿ ಅವರೂ ಏಕಲವ್ಯ ಎಂಬ ನಾಟಕವನ್ನು ರಚಿಸಿದ್ದಾರೆ. (ಎಸ್.ಎಸ್.ಬಿ.)