ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏರ್ಲಿಕ್, ಯುಜೀನ್

ವಿಕಿಸೋರ್ಸ್ದಿಂದ

ಏರ್ಲಿಕ್, ಯುಜೀನ್: 1862-1918. ಶುದ್ಧ ಸಮಾಜವಿಜ್ಞಾನಕ್ಕೂ ನ್ಯಾಯಶಾಸ್ತ್ರಕ್ಕೂ ಮಧ್ಯವರ್ತಿಯೆನ್ನಬಹುದಾದ ನೈಯಾಯ ಸಮಾಜವಿಜ್ಞಾನದ (ಸೋಷಿಯಾಲೊಜಿ ಆಫ್ ಲಾ) ಜನಕ. ನ್ಯಾಯಶಾಸ್ತ್ರವನ್ನು ಸಮಾಜವಿಜ್ಞಾನದ ಹಿನ್ನೆಲೆಯಲ್ಲಿಟ್ಟು ಅಧ್ಯಯನ ಮಾಡುವುದರಿಂದ ಅದರ ನೈಜ ಸ್ವರೂಪ ಅರ್ಥವಾಗುತ್ತದೆಂಬ ವಾದದ ಪ್ರತಿಪಾದಕ. ಆಗ ಆಸ್ಟ್ರಿಯನ್ ಚಕ್ರಾಧಿಪತ್ಯದ ಭಾಗವಾಗಿದ್ದು ಈಗ ರಷ್ಯದಲ್ಲಿರುವ ಬುಕೋವಿನ ಪ್ರಾಂತ್ಯದ ಮುಖ್ಯ ಪಟ್ಟಣವಾದ ಚೆರ್ನಾವಿಟ್ಸ್‌ನಲ್ಲಿ ಏರ್ಲಿಕ್ ಜನಿಸಿದ. ವಿಯೆನ್ನ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದ ಪದವಿ ಪಡೆದ ಮೇಲೆ ತನ್ನ ಹುಟ್ಟೂರಿನ ವಿಶ್ವವಿದ್ಯಾಲಯದಲ್ಲಿ ಈತನಿಗೆ 1897ರಲ್ಲಿ ರೋಮನ್ ನ್ಯಾಯದ ಖಾಸಗಿ ಅಧ್ಯಾಪಕ ಹುದ್ದೆ (ಪ್ರೀವಾಟ್ ಡೊಟ್ಸೆಂಟ್) ದೊರಕಿತು. ಕೊನೆಗಾಲದವರೆಗೂ ಈತ ಅಲ್ಲೇ ಉಳಿದ. ಈತ 1918 ಅಥವಾ 1919ರಲ್ಲಿ ಅಸುನೀಗಿರಬೇಕೆಂದು ಹೇಳಲಾಗಿದೆ. ಬುಕೋವಿನ ಪ್ರಾಂತ್ಯವನ್ನು ರೂಮೇನಿಯಕ್ಕೆ ವರ್ಗಾಯಿಸಿದ್ದರಿಂದ ಆ ಸಮಯದಲ್ಲಿ ಅಲ್ಲಿ ಬಹಳ ಗಲಭೆ ಏರ್ಪಟ್ಟಿದ್ದ ಪರಿಣಾಮವಾಗಿ ಆತ ಸತ್ತ ದಿನ ಯಾವುದೆಂಬುದು ತಿಳಿಯಲಿಲ್ಲ.

ತನ್ನ ಜೀವಿತದ ಮುಖ್ಯ ಕಾಲದಲ್ಲಿ ಏರ್ಲಿಕ್ ರೂಢಿಸಿಕೊಂಡ ಅಭಿಪ್ರಾಯಗಳ ಕ್ರೋಢೀಕೃತ ರೂಪವೇ ಈತನ ಫಂಡಮೆಂಟಲ್ ಪ್ರಿನ್ಸಿಪಾಲ್ಸ್‌ ಆಫ್ ದಿಸೋಷಿಯಲೊಜಿ ಆಫ್ ಲಾ (1913) ಎಂಬ ಗ್ರಂಥ. ಆಗ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡ್ ವಿನಾ ಉಳಿದ ದೇಶಗಳಲ್ಲಿನ ನ್ಯಾಯಪದ್ಧತಿಯೆಲ್ಲ ಆ ಕಾಲದಲ್ಲಿ ಪ್ರಚಲಿತವಿದ್ದ ಕಲ್ಪನೆಯ ತಳಹದಿಯ ಮೇಲೆ ಕಟ್ಟಿದ್ದಾಗಿತ್ತು. ವ್ಯವಹಾರ ಯಾವುದೇ ಇರಲಿ, ಪ್ರಚಲಿತವಿರುವ ಕಾಯಿದೆಗಳ ಹಾಗೂ ಅಧಿಕೃತ ನ್ಯಾಯಾಲಯಗಳ ತೀರ್ಪುಗಳ ವ್ಯವಸ್ಥೆಯ ಆಧಾರದಮೇಲೆ ಅದನ್ನು ಇತ್ಯರ್ಥ ಮಾಡುವುದು ಸಾಧ್ಯವೆಂಬುದು ಸ್ಥೂಲವಾಗಿ ಈ ಮತ. ಈ ಸಿದ್ಧಾಂತವನ್ನು ಪ್ರಧಾನವಾಗಿ ವಿರೋಧಿಸಿದವನೆಂದರೆ ಜರ್ಮನಿಯ ಹರ್ಮನ್ ಕಾಂಟರೋವಿಚ್. ಆತನದು ಸ್ವತಂತ್ರ ನ್ಯಾಯದ ಸಿದ್ಧಾಂತ. ಏರ್ಲಿಕ್ ಇದನ್ನು ಸಮರ್ಥಿಸಿದನಾದರೂ ಇದನ್ನೇ ಸಂಪುರ್ಣವಾಗಿ ಅನುಸರಿಸಲಿಲ್ಲ; ಇದರಿಂದಲೂ ಮುಂದೆ ಹೋದ. ನ್ಯಾಯ ತೀರ್ಪುಗಳಲ್ಲಿ ವ್ಯಕ್ತವಾದ ನ್ಯಾಯಕ್ಕೂ ಸಾಮಾಜಿಕ ಕಟ್ಟಳೆಗಳಲ್ಲಿ ಪ್ರಕಟವಾಗಿರುವ ನ್ಯಾಯಕ್ಕೂ ಇರುವ ವ್ಯತ್ಯಾಸವನ್ನೂ ಗಮನಿಸಬೇಕೆಂಬುದು ಏರ್ಲಿಕನ ವಾದ. ಸಮಾಜದಲ್ಲಿ ಇಡೀ ನ್ಯಾಯವ್ಯವಸ್ಥೆಯನ್ನರಿಯಲು ಕಾಯಿದೆಗಳ ನ್ಯಾಯವಷ್ಟೇ ಸಾಲದು ಎಂಬ ವಾದವನ್ನು ಮಂಡಿಸಿದವರಲ್ಲಿ ಏರ್ಲಿಕನೇ ಮೊದಲಿಗನಲ್ಲ. ರಸ್ಸೊ-ಪೋಲಿಷ್ ನ್ಯಾಯಶಾಸ್ತ್ರಜ್ಞ ಲೆಫ್ ಪೆಟ್ರಜಿಟ್ಸ್ಕಿ ಈ ಬಗ್ಗೆ ಚರ್ಚಿಸಿದ್ದಾನೆ (1905-07). ನ್ಯಾಯಕ್ಕೆ ಮನೋವಿಜ್ಞಾನವೇ ತಳಹದಿಯೆಂದೂ ವ್ಯಕ್ತಿಯ ಮನಸ್ಸಿನ ವರ್ತನೆಯೇ ಇದರ ಬಗ್ಗೆ ನಿರ್ಣಾಯಕವೆಂದೂ ಆತನ ವಾದ. ಪಿಟಿರಿಮ್ ಎ. ಸರೋಕಿನ್ ಮತ್ತು ನಿಕೊಲಸ್ ಟಿಮಷೆಫ್ ಆತನ ಪಂಥದವರು. ಆದರೆ ವ್ಯಕ್ತಿಗತ ಮನೋವಿಜ್ಞಾನಕ್ಕೆ ಆತ ನೀಡಿದ ಮಹತ್ವ ತಪ್ಪೆಂದು ಇವರ ಮತ. ಸಾಮೂಹಿಕ ಮನೋವಿಜ್ಞಾನದ ಪ್ರಾಮುಖ್ಯವನ್ನು ಇವರು ಒತ್ತಿ ಹೇಳಿದರಲ್ಲದೆ ಕೊನೆಗೆ ನ್ಯಾಯವನ್ನು ಸಮಾಜಶಾಸ್ತ್ರದ ಸೀಮೆಯೊಳಕ್ಕೆ ತಂದರೆನ್ನಬಹುದು.

ಏರ್ಲಿಕನ ಕಾಲದಲ್ಲೇ ಬದುಕಿದ್ದ ರಾಸ್ಕೊ ಪೌಂಡನೂ ಸಮಾಜಶಾಸ್ತ್ರೀಣ ನ್ಯಾಯಶಾಸ್ತ್ರದ ಬಗ್ಗೆ ಲೇಖನಗಳನ್ನು ಬರೆದ. ಪುಸ್ತಕ ನ್ಯಾಯಕ್ಕೂ ಜೀವನ ನ್ಯಾಯಕ್ಕೂ ಇರುವ ವ್ಯತ್ಯಾಸವನ್ನು ತೋರಿಸಲು ಈತ ಯತ್ನಿಸಿದ್ದಾನೆ.

ಏರ್ಲಿಕನ ಹಾದಿಯಲ್ಲೇ ವಿಚಾರ ಮಾಡಿದ ಇತರರೆಂದರೆ ಸ್ವೀಡನಿನ ಅಪ್ಸಾಲ ಪಂಥದವರು. ನ್ಯಾಯದ ಮೂಲ ಕಲ್ಪನೆಗಳೇ ತಪ್ಪೆಂಬುದು ಇವರ ಮತ. ಹಕ್ಕುಗಳು ಬಾಧ್ಯತೆಗಳು ಎಂಬುವೇ ಇಲ್ಲ; ಈ ಬಗ್ಗೆ ಮಾನವನ ಭಾವನೆಗಳಿವೆ ಅಷ್ಟೆ, ಎಂದು ಇವರು ವಾದಿಸಿದ್ದಾರೆ.

ಪುಸ್ತಕದ ಬದನೆಕಾಯಷ್ಟೆ ನ್ಯಾಯವಲ್ಲ; ಇದು ಸಮಾಜದ ಒಂದು ವಾಸ್ತವ ಸಂಗತಿ ಎಂಬ ಬಗ್ಗೆ ವಿಚಾರ ಹರಿಸಿದವೆಂಬ ದೃಷ್ಟಿಯಲ್ಲಿ ಈ ಅಧ್ಯಯನಗಳೆಲ್ಲ ಉಪಯುಕ್ತವಾಗಿವೆ. ಮಾನವ ಯಾವ ರೀತಿ ವರ್ತಿಸುತ್ತಾನೆ ಎಂಬುದರ ಮೇಲಿಂದ ಇದನ್ನರಿಯಬಹುದು. ಸಂಘಟಿತ ಸಮಾಜದಲ್ಲೆಲ್ಲ ಇದನ್ನು ಕಾಣಬಹುದು ಎಂದು ಈತ ವಾದಿಸಿದ. ಆದ್ದರಿಂದ ನ್ಯಾಯದ ಇರುವಿಕೆ, ವ್ಯಾಪ್ತಿ, ಅದರ ಕಟ್ಟಾಜ್ಞೆ-ಇವು ಪುರ್ವ ನಿಯಮಿತ ಕಲ್ಪನೆಗಳಿಂದ ಉಂಟಾಗುವುದಿಲ್ಲ; ಸಮಾಜದ ಸತ್ಯಗಳನ್ನು ಇದು ಪ್ರತಿಬಿಂಬಿಸ ಬೇಕಾಗುತ್ತದೆ. ಆದುದರಿಂದ ನ್ಯಾಯಾಲಯ ಇರುವ ನ್ಯಾಯವನ್ನೇ ಎತ್ತಿ ಹಿಡಿಯುತ್ತದೆಯೆಂದು ಹೇಳುವುದಾದರೆ ಅದು ತಪ್ಪಾಗುತ್ತದೆ. ಸಾಮಾಜಿಕ ಸತ್ಯಗಳನ್ನು ಒಳಗೊಂಡ ನ್ಯಾಯವನ್ನು ನ್ಯಾಯಾಲಯ ನಿರ್ಮಾಣ ಮಾಡಬೇಕಾಗುತ್ತದೆ. ಏಕೆಂದರೆ, ಸಮಾಜದಲ್ಲಿ ಕೇವಲ ಅಧಿಕಾರರೂಢ ನ್ಯಾಯವಲ್ಲದೆ, ಅನಧಿಕಾರರೂಢ ಕಟ್ಟಳೆಗಳು ಅನೇಕವಿರುತ್ತವೆ ಮತ್ತು ವ್ಯಕ್ತಿಗಳು ಈ ಅನಧಿಕಾರರೂಢ ನ್ಯಾಯವನ್ನೂ ಪರಿಪಾಲಿಸುತ್ತಿರುತ್ತಾರೆ. ಹಾಗೆ ವ್ಯಕ್ತಿಗಳು ನ್ಯಾಯವನ್ನು ಪರಿಪಾಲಿಸಲಿಕ್ಕೂ, ಪರಿಪಾಲನೆ ಮಾಡದಿರುವುದಕ್ಕೂ ಅವರ ಮನೋಭೀಷ್ಟ ಸನ್ನಿವೇಶಗಳು ಮೂಲಕಾರಣ. ನೈಜವಾದ ನ್ಯಾಯ ದೊರಕಬೇಕಾದರೆ ಈ ಸಾಮಾಜಿಕ ಸನ್ನಿವೇಶಗಳು ಮತ್ತು ವ್ಯಕ್ತಿಗಳ ಮನೋಭೀಷ್ಟಗಳನ್ನು ನೆನಪಿನಲ್ಲಿಟ್ಟು ನ್ಯಾಯ ಮಾಡಬೇಕು ಮತ್ತು ದೊರಕಿಸಿಕೊಡಬೇಕು ಎಂಬುದು ಏರ್ಲಿಕನ ತರ್ಕದ ತಿರುಳು.

ನಿರೀಕ್ಷಣ, ಸಾಧಾರಣೀಕರಣ, ಅವಲೋಕಿತಾಂಶಗಳ ಜೋಡಣೆ, ನಿರ್ದಿಷ್ಟ ಸಂದರ್ಭಗಳಲ್ಲಿ ಈ ಫಲಿತಾಂಶಗಳ ಅನ್ವಯ ಈ ವಿಧಾನದಿಂದ ಸಮಾಜದ ಕಟ್ಟಳೆಗಳನ್ನರಿಯಬಹುದೆಂದು ಏರ್ಲಿಕ್ ಸೂಚಿಸಿದ್ದಾನೆ. ಇದು ಆಗಿನ ಸಮಾಜವಿಜ್ಞಾನಿ ಅನುಸರಿಸುತ್ತಿದ್ದ ವಿಧಾನವೇ ಆಗಿದೆ.

ಸಾಮಾಜಿಕ ನ್ಯಾಯಶಾಸ್ತ್ರದ ಜೊತೆಗೆ ಈ ಪುಸ್ತಕದಲ್ಲಿ ಏರ್ಲಿಕ್ ನಾನಾ ದೇಶಗಳ ನ್ಯಾಯ ಬೆಳೆವಣಿಗೆಯನ್ನು ಕುರಿತು ವಿವೇಚಿಸಿದ್ದಾನೆ. ನ್ಯಾಯಾ ಸಮಾಜವಿಜ್ಞಾನಕ್ಕಾಗಿ ಮೀಸಲಾದ ಅಧ್ಯಾಯಗಳು ಕೊನೆಯ ಎರಡು ಮಾತ್ರ, ಆದರೆ ಇದು ಒಂದು ಸಮರ್ಪಕ ಶಾಸ್ತ್ರವಾಗಿ ಬೆಳೆಯುವುದಕ್ಕೆ ಆವಶ್ಯವಾದಷ್ಟು ನೇರ್ಪಾಗಿ ಇಲ್ಲಿ ಈ ಬಗ್ಗೆ ವಿವೇಚನೆ ನಡೆದಿಲ್ಲ. ಯಾವ ನಿಟ್ಟಿನಲ್ಲಿ ಇದು ಬೆಳೆಯಬಲ್ಲದೆಂಬ ನಿರ್ದಿಷ್ಟ ಕಲ್ಪನೆಯೂ ಇಲ್ಲ.

ನ್ಯಾಯದ ಬೆಳೆವಣಿಗೆ, ಅದರ ವಿನ್ಯಾಸ-ಇವುಗಳ ಬಗ್ಗೆ ಈ ತೆರನಾದ ಅಧ್ಯಯನ ಆವಶ್ಯಕವಾದರೂ ಯಾವುದು ನ್ಯಾಯ ಎಂಬುದನ್ನು ಯಾವ ಮಾಪನ ಕ್ರಮದಿಂದ ಕಂಡುಹಿಡಿಯಬೇಕೆನ್ನುವುದರ ಬಗ್ಗೆ ಸಾಕಷ್ಟು ಮಾರ್ಗದರ್ಶನವನ್ನು ಈ ಸಾಮಾಜಿಕ ಅಧ್ಯಯನಕ್ರಮ ನೀಡಲಿಲ್ಲ. ನ್ಯಾಯಕ್ಕೆ ಉಗಮಸ್ಥಾನವಾದ ಸಮಾಜ ವ್ಯವಸ್ಥೆಯನ್ನೂ ಅದು ಎಡೆಕೊಡುವ ಹಿತಾಸಕ್ತಿಗಳನ್ನೂ ಗಮನಕ್ಕೆ ತಂದುಕೊಂಡಿಲ್ಲವಾದ ಕಾರಣ ಈ ತೆರನಾದ ಅಧ್ಯಯನ ಅಪ್ರಬುದ್ಧ ಶಾಸ್ತ್ರವಾಗಿಯೇ ಉಳಿದಿದೆ. (ಎಲ್.ಎಸ್.)