ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐಸೊಪ್ರೊಪೈಲ್ ಆಲ್ಕೊಹಾಲ್

ವಿಕಿಸೋರ್ಸ್ ಇಂದ
Jump to navigation Jump to search
ಮೂಲದೊದನೆ ಪರಿಶೀಲಿಸಿ

ಐಸೊಪ್ರೊಪೈಲ್ ಆಲ್ಕೊಹಾಲ್: ಸುವಾಸನೆ ಬೀರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ ಅ3ಊ8ಔ. ರಚನಾಸೂತ್ರ

200 ಸೆಂ. ಉಷ್ಣತೆಯಲ್ಲಿ ಸಾಂದ್ರತೆ 0.7856. ಕುದಿಯುವ ಬಿಂದು 82.40 ಸೆಂ.ನೀರು ಮತ್ತು ಆಗಾರ್ಯ್‌ನಿಕ್ ಲೀನಕಾರಿಗಳೊಡನೆ ಬೆರೆಯುವುದು. ನೀರಿನೊಡನೆ ನಿಯತ ಕುದಿಮಿಶ್ರಣ (ಕುದಿಯುವ ಬಿಂದು 80.40 ಸೆಂ.) ಕೊಡುವುದು. ಈ ಮಿಶ್ರಣದಲ್ಲಿ ಗಾತ್ರಾನುಸಾರ 91% ಆಲ್ಕೊಹಾಲ್ ಇರುತ್ತದೆ. ಪೆಟ್ರೋಲಿಯಂ ಎಣ್ಣೆಯಲ್ಲಿ ಹಲವು ಭಾರವಾದ ಹೈಡ್ರೊಕಾರ್ಬನುಗಳಿರುತ್ತವೆ. ಇವನ್ನು ವಿಭಜನಾತಂತ್ರಕ್ಕೆ ಗುರಿಪಡಿಸಿದಾಗ ದೊರೆಯುವ ಕಿರಿಯ ಹೈಡ್ರೊಕಾರ್ಬನುಗಳಲ್ಲಿ ಪ್ರೊಪೈಲೀನ್ ಸಹ ಒಂದು. ಇದನ್ನು 90%-95% ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಗೊಳಿಸಿ ಅನಂತರ ನೀರು ಸೇರಿಸಿ ಕುದಿಸಿದರೆ ಐಸೊಪ್ರೊಪೈಲ್ ಆಲ್ಕೊಹಾಲ್ ಬಟ್ಟಿ ಇಳಿಯುವುದು; ಸ್ವಲ್ಪ ಐಸೊಪ್ರೊಪೈಲ್ ಈಥರ್ ಉಪವಸ್ತುವಾಗಿ ದೊರೆಯುವುದು. ಈ ಕ್ರಿಯೆಗಳನ್ನು ಕೆಳಕಂಡ ಸಮೀಕರಣಗಳು ಸೂಚಿಸುತ್ತವೆ.

ಅಸಿಟೋನನ್ನು ಸೋಡಿಯಂ ಅಮಾಲ್ಗಂನಿಂದ ಅಪಕರ್ಷಿಸಿದಾಗ ಅಥವಾ 1500-1800 ಸೆಂ. ಉಷ್ಣತೆಯಲ್ಲಿ ಒತ್ತಡ ಹೇರಿ ನಿಕ್ಕಲ್ ಅಥವಾ ತಾಮ್ರ ವೇಗವರ್ಧಕದ ಸಮ್ಮುಖದಲ್ಲಿ ಹೈಡ್ರೊಜನನ್ನು ಕೂಡಿಸಿದಾಗ ಐಸೊಪ್ರೊಪೈಲ್ ಆಲ್ಕೊಹಾಲ್ ಉಂಟಾಗುವುದು.

ಐಸೊಪ್ರೊಪೈಲ್ ಆಲ್ಕೊಹಾಲಿಗೆ ದ್ವಿತೀಯಕ ಆಲ್ಕೊಹಾಲುಗಳಿಗೆ ಇರಬೇಕಾದ ಸಮಸ್ತ ಲಕ್ಷಣಗಳೂ ಇವೆ. ಇದರ ಮುಖ್ಯ ಉಪಯೋಗ ಅಸಿಟೋನ್ ತಯಾರಿಕೆಯಲ್ಲಿ. ಸ್ಫೋಟಕಗಳು ಮತ್ತು ಪ್ಲಾಸ್ಟಿಕ್ಕುಗಳ ತಯಾರಿಕೆಯಲ್ಲಿ ಅಗಾಧ ಪ್ರಮಾಣದ ಅಸಿಟೋನ್ ಬೇಕಾಗುತ್ತದೆ. 3000ಸೆಂ. ಉಷ್ಣತೆಗೆ ಕಾಯಿಸಿದ ತಾಮ್ರದ ತಂತಿಬಲೆಯೊಂದರ ಮೂಲಕ ಐಸೊಪ್ರೊಪೈಲ್ ಆಲ್ಕೊಹಾಲಿನ ಆವಿಯನ್ನು ಹಾಯಿಸಿ ಆಸಿಟೋನ್ ಪಡೆಯುತ್ತಾರೆ.

ಐಸೊಪ್ರೊಪೈಲ್ ಆಲ್ಕೊಹಾಲ್ ನೀರು ಘನೀಭವಿಸುವುದನ್ನು ವಿರೋಧಿಸುತ್ತದೆ. ಆದ್ದರಿಂದ ಮೋಟಾರ್ ವಾಹನಗಳಲ್ಲಿ ಬಳಸುವ ನೀರು ಹೆಪ್ಪುಗಟ್ಟದಿರಲು ಇದನ್ನು ನೀರಿನೊಡನೆ ಸೇರಿಸುತ್ತಾರೆ. ಉಗುರಿನ ಪಾಲಿಷ್, ಕ್ಷೌರಕ್ಕೆ ಉಪಯೋಗಿಸುವ ಲೋಷನ್, ಅಂಗರಾಗಗಳು, ಸುಗಂಧಗಳು, ಥೈಮಾಲ್ ಇತ್ಯಾದಿಗಳ ತಯಾರಿಕೆಯಲ್ಲಿ ಐಸೊಪ್ರೊಪೈಲ್ ಆಲ್ಕೊಹಾಲಿನ ಪಾತ್ರವಿದೆ. ಇದರ ಎಸ್ಟರುಗಳು ಮೆರುಗೆಣ್ಣೆಗಳಿಗೆ (ಲಾಕ್ವರ್ಸ್‌) ಉತ್ತಮ ಲೀನಕಾರಿಗಳು. (ಎಚ್.ಜಿ.ಎಸ್.)