ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐಸ್ಲೆಂಡ್ ಸ್ಪಾರ್
ಐಸ್ಲೆಂಡ್ ಸ್ಪಾರ್: ಕ್ಯಾಲ್ಸೈಟಿನ ಒಂದು ರೂಪ. ನಿರ್ವರ್ಣ, ಪಾರಕ ವಸ್ತು. ಹೆಚ್ಚಾಗಿ ಐಸ್ಲೆಂಡಿನಲ್ಲಿ ಸಿಗುತ್ತದೆ. ಸಮಚತುರ್ಭುಜೀಯ ಆಕೃತಿಯ ಈ ಖನಿಜದ ಸಾಪೇಕ್ಷಸಾಂದ್ರತೆ 2.7; ಕಾಠಿಣ್ಯ 3. ಇದಕ್ಕಿರುವ ದ್ವಿವಕ್ರೀಭವನ (ಡಬಲ್ ರಿಫ್ರ್ಯಾಕ್ಷನ್) ಗುಣದ ಮೇಲೆ ಇದರ ಮೌಲ್ಯವನ್ನು ನಿರ್ಧರಿಸುತ್ತಾರೆ. ಧ್ರುವವರ್ಣದರ್ಶಕ (ಪೋಲಾರಿಸ್ಕೋಪ್), ನಿಕಾಲ್-ಅಶ್ರಗ ಮತ್ತಿತರ ದೃಗುಪಕರಣಗಳಲ್ಲಿ ಇದರ ಬಳಕೆ ಹೆಚ್ಚು (ನೋಡಿ- ಕ್ಯಾಲ್ಸೈಟ್). * ಐಸ್ಲೆಂಡಿಕ್ ಸಾಹಿತ್ಯ: ಐಸ್ಲೆಂಡಿಕ್ ಸಾಹಿತ್ಯ ಪ್ರಾಚೀನ ಸ್ಕಾಂಡಿನೇವಿಯದ ಸಾಹಿತ್ಯ, ಸಂಸ್ಕೃತಿಗಳಿಂದ ಹುಟ್ಟಿದುದು. ಕೇವಲ ಶ್ರುತರೂಪದಲ್ಲಿದ್ದ ಪ್ರಾಚೀನ ಸ್ಕಾಂಡಿನೇವಿಯದ ಸಾಹಿತ್ಯವನ್ನು ಐಸ್ಲೆಂಡಿನ ಸಾಹಿತ್ಯ ಎಂದು ಕರೆಯಬಹುದು. ಏಕೆಂದರೆ ಅದರ ಬಹುಭಾಗ ಐಸ್ಲೆಂಡಿನಲ್ಲೇ ಉಳಿದುಕೊಂಡು ಬಂದಿತು. ಅಲ್ಲದೆ ಕೆಲವು ಕೃತಿಗಳೂ ಐಸ್ಲೆಂಡಿನಲ್ಲೇ ರಚಿತವಾದುವು. ಒಂದನೆಯ ಹೆರಾಲ್ಡ್ ಫೇರ್ಹೇರ್ ಎಂಬ ಸ್ಕಾಂಡಿನೇವಿಯದ ದೊರೆ ಶ್ರೀಮಂತ ವಿರೋಧವಾದ ಧೋರಣೆಯನ್ನು ತಾಳಿದನಾಗಿ ಹಲವು ಗಣ್ಯ ಶ್ರೀಮಂತ ಮನೆತನಗಳು ಐಸ್ಲೆಂಡಿಗೆ ವಲಸೆ ಹೋಗಿ ನೆಲೆಸಿದುವು. ಈ ಜನಾಂಗದ ಸಂಸ್ಕೃತಿಯ ಸಂಜಾತಗುಣ ಕಾವ್ಯಾಭಿರುಚಿ. ಈ ಪರಂಪರೆಯಲ್ಲಿ ಐಸ್ಲೆಂಡಿನ ಸಾಹಿತ್ಯ ವಿಕಾಸಗೊಂಡಿತು. ಗ್ರೀಕ್ ಕಾವ್ಯ, ಕ್ರೈಸ್ತಧರ್ಮ ಇವು ಯಾವುದರ ಪ್ರಭಾವವೂ ಬೀಳದ ಶುದ್ಧ ಜಮಾರ್ಯ್‌ನಿಕ್ ವೈಶಿಷ್ಟ್ಯದಲ್ಲೇ ಇದು ಆರಂಭವಾಯಿತು. ನಮಗೆ ದೊರೆಯುವ ಐಸ್ಲೆಂಡಿನ ಸಾಹಿತ್ಯದ ಕೃತಿಗಳು 9ನೆಯ ಶತಕದಿಂದೀಚಿನವು. ಇವೂ 12ನೆಯ ಶತಕದವರೆಗೂ ಕೇವಲ ಶ್ರುತ ರೂಪದಲ್ಲಿದ್ದು 13 ಮತ್ತು 16ನೆಯ ಶತಮಾನಗಳಲ್ಲಿ ಕಾವ್ಯ ಎಡ ಮತ್ತು ಗದ್ಯ ಎಡ ಎಂಬ ಎರಡು ಗ್ರಂಥಗಳ ಸಂಗ್ರಹದಲ್ಲಿ ಮೊದಲು ಪ್ರಕಟವಾದುವು. (ನೋಡಿ- ಎಡ)