ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒ'ಕಾನೆಲ್, ಡೇನಿಯೆಲ್

ವಿಕಿಸೋರ್ಸ್ದಿಂದ

ಒ’ಕಾನಲ್, ಡೇನಿಯೆಲ್: 1775-1847. ಐರ್ಲೆಂಡಿನ ರಾಜಕೀಯ ನಾಯಕ, ವಿಮೋಚಕ. 19ನೆಯ ಶತಮಾನದ ಐರಿಷ್ ಸಂಸದೀಯ ಮುಖ್ಯರಲ್ಲಿ ಪ್ರಥಮ. 1775ರ ಆಗಸ್ಟ್‌ 6ರಂದು ಕೆರಿ ಕೌಂಟಿಯ ಕಹಿರ್ಚಿವೀನಿನಲ್ಲಿ ಇವನ ಜನನ. ಚಿಕ್ಕಪ್ಪನಿಗೆ ಈತ ದತ್ತುವಾದ. ಆತ ಫ್ರಾನ್ಸಿನೊಂದಿಗೆ ಕಳ್ಳವ್ಯಾಪಾರ ನಡೆಸಿ ಪ್ರವರ್ಧಮಾನಕ್ಕೆ ಬಂದಿದ್ದ. ಫ್ರಾನ್ಸಿನ ರೋಮನ್ ಕೆಥೊಲಿಕ್ ಕಾಲೇಜುಗಳಲ್ಲಿ ಒ’ಕಾನಲ್ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲಿ ಫ್ರೆಂಚ್ ಕ್ರಾಂತಿಸೇನೆಗಳು ಆಸ್ಟ್ರಿಯನ್ ನೆದರ್ಲೆಂಡ್ಸನ್ನಾಕ್ರಮಿಸಿದುವು. ಒ’ಕಾನಲ್ ಆಗ ಇಂಗ್ಲೆಂಡಿಗೆ ಓಡಿಬಂದ. ಈ ಅನುಭವ ಈತನ ಮೇಲೆ ಪರಿಣಾಮ ಬೀರಿತು. ಜನತೆಯ ಸಾರ್ವಭೌಮಾಧಿಕಾರದಲ್ಲಿ ಇವನಿಗೆ ಸಂಪುರ್ಣ ನಂಬಿಕೆಯಿತ್ತಾದರೂ ಹಿಂಸಾತ್ಮಕ ಅತಿರೇಕಗಳು ಇವನಿಗೆ ಹಿಡಿಸುತ್ತಿರಲಿಲ್ಲ. ಲಂಡನಿನಲ್ಲಿ ಈತ ನ್ಯಾಯಶಾಸ್ತ್ರವನ್ನೋದಿ 1798ರಲ್ಲಿ ಐರ್ಲೆಂಡಿನಲ್ಲಿ ವಕೀಲಿ ಹಿಡಿದ. ಐರಿಷ್ ಸಂಸತ್ತನ್ನು ವಿಸರ್ಜಿಸಿ ಐರ್ಲೆಂಡನ್ನು ಇಂಗ್ಲೆಂಡಿನೊಂದಿಗೆ ವಿಲೀನಗೊಳಿಸುವ ಕಾಯಿದೆಯನ್ನು ವಿರೋಧಿಸಿದಾಗಲೇ ಒ’ಕಾನಲ್ ಪ್ರಸಿದ್ಧನಾದದ್ದು. ಇಂಗ್ಲೆಂಡ್ ಜಾರಿಗೆ ತಂದಿದ್ದ ಕೆಥೊಲಿಕ್ ವಿರುದ್ಧವಾದ ಕಾಯಿದೆಗಳನ್ನೆಲ್ಲ ರದ್ದು ಮಾಡಬೇಕೆಂದು ಈತ ಚಳವಳಿ ಹೂಡಿದ. ಐರಿಷರ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಒ’ಕಾನಲನ್ ಧೈರ್ಯಸಾಹಸಗಳು ಹಲವಾರು ಮೆಚ್ಚುಗೆ ಅಭಿಮಾನಗಳನ್ನು ಗಳಿಸಿದುವು.

ಸರ್ಕಾರದ ದಬ್ಬಾಳಿಕೆಯ ವಿರುದ್ಧವಾಗಿ ದೇಶಾದ್ಯಂತ ಸಭೆ ನಡೆಸಿ, ಕೆಥೋಲಿಕರ ನ್ಯಾಯಬದ್ಧ ಬೇಡಿಕೆಗಳಿಗಾಗಿ ಈತ ಸಲ್ಲಿಸಿದ ಮನವಿಗೆ ಪ್ರಾಟೆಸ್ಟಂಟರೂ ಬೆಂಬಲ ನೀಡಿದರು. 1814ರಲ್ಲಿ ಜಾನ್ ಮ್ಯಾಗೀ ಎಂಬ ಪ್ರಾಟೆಸ್ಟಂಟ್ ಪತ್ರಿಕೋದ್ಯಮಿಗೆ ಸರ್ಕಾರ ಶಿಕ್ಷೆ ವಿಧಿಸಿದಾಗ ಆಗಿನ ವೈಸ್ರಾಯಿಯನ್ನು ಒ’ಕಾನಲ್ ಕಟುವಾಗಿ ಟೀಕಿಸಿ ಇಡೀ ಸರ್ಕಾರಿ ವ್ಯವಸ್ಥೆಯ ವಿರುದ್ಧವಾಗಿ ಪ್ರತಿಭಟನೆ ಸಲ್ಲಿಸಿದ. ಜಾನ್ ಮ್ಯಾಗೀ ಕೊನೆಗೂ ದಂಡ ತೆರಬೇಕಾಯಿತು. ಆಗ ಒ’ಕಾನಲನ ಶ್ರೀಮಂತ ಬೆಂಬಲಿಗರು ದೂರವಾದರೂ ಒ’ಕಾನಲ್ ಎದೆಗುಂದಲಿಲ್ಲ. ಲಾರ್ಡ್ ವೆಲೆಸ್ಲಿ ವೈಸರಾಯಿಯಾಗಿ ನೇಮಕಗೊಂಡಾಗ (1821) ಒ’ಕಾನಲನ ಹೋರಾಟದ ಉತ್ಸಾಹ ಮತ್ತೆ ಹೊಮ್ಮಿತು. ಕೆಥೊಲಿಕ್ ಜನರಿಂದ ತಲಾ 1 ಪೆನಿಯಂತೆ ಮಾಸಿಕ ಚಂದಾ ವಸೂಲಿ ಮಾಡಿ ಚಳವಳಿ ಮುಂದುವರಿಸಿದ. ಕೆಥೊಲಿಕರ ಹಕ್ಕನ್ನು ಪುರಸ್ಕರಿಸುವ ಅನೇಕ ಮಸೂದೆಗಳು ಪಾರ್ಲಿಮೆಂಟಿನ ಮುಂದೆ ಬಂದು ಪರಾಜಿತವಾದುವು. ಆದರೆ ಐರ್ಲೆಂಡಿನಲ್ಲಿ ಸ್ವಾತಂತ್ರ್ಯ ಪ್ರಜ್ಞೆ ತಳೆದ ಹೊಸ ತಲೆಮಾರೊಂದರ ನಿಮಾರ್ಣವಾಯಿತು. 1828ರಲ್ಲಿ ಪಾರ್ಲಿಮೆಂಟಿಗೆ ನಡೆದ ಉಪಚುನಾವಣೆಯೊಂದರಲ್ಲಿ ಒ’ಕಾನಲ್ ಅದ್ಭುತ ಜಯಗಳಿಸಿದನಾದರೂ ಈತ ಸದಸ್ಯನಾಗಿ ಆಸನ ಸ್ವೀಕರಿಸುವುದು ಸಾಧ್ಯವಾಗಲಿಲ್ಲ. ಆದರೆ ಐರಿಷ್ ಜನಾಭಿಪ್ರಾಯ ಎತ್ತ ಸಾಗುತ್ತಿದೆಯೆಂಬುದು ಆಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಡ್ಯೂಕ್ ಆಫ್ ವೆಲಿಂಗ್ಟನನಿಗೆ ಅರಿವಾಗಿ, ಆತ 1829ರಲ್ಲಿ ಸುಧಾರಣೆಗಳನ್ನು ಜಾರಿಗೆ ತಂದ. ಒ’ಕಾನಲ್ ಕಾಮನ್ಸ್‌ ಸಭೆಯ ಸದಸ್ಯನಾಗಿ ಪ್ರತಿಷ್ಠಾಪಿತನಾದಾಗ ಆತನ ಪ್ರತಿಭೆಯೂ ವ್ಯಕ್ತಿತ್ತ್ವವೂ ಸಂಪುರ್ಣವಾಗಿ ಪ್ರಕಟವಾದುವು. ಈತನ ಹಿಂಬಾಲಕರಾದ ಐರಿಷ್ ಸದಸ್ಯರು ಒ’ಕಾನಲನ ಬಾಲ ಎಂದೇ ಹೆಸರು ಗಳಿಸಿದರು. 1800ರ ವಿಲೀನವನ್ನು ರದ್ದುಗೊಳಿಸಬೇಕೆಂದು ಒ’ಕಾನಲ್ ಚಳವಳಿ ಹೂಡಿದ. ಈತ ವ್ಹಿಗ್ ಪಕ್ಷದೊಂದಿಗೆ ಸಹಕರಿಸಿದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ. ಏತನ್ಮಧ್ಯೆ ಇಂಗ್ಲೆಂಡಿನ ಸರ್ಕಾರ ಇವನಿಗೆ ಸಾರ್ವಜನಿಕ ಹುದ್ದೆಗಳ ಆಸೆ ತೋರಿಸಿತು. ಆದರೆ ಒ’ಕಾನೆಲ್ ಆ ಆಮಿಷಕ್ಕೆ ಬಲಿ ಬೀಳಲಿಲ್ಲ. ಈತ ವಕೀಲಿವೃತ್ತಿಯನ್ನೂ ತ್ಯಜಿಸಿದ್ದರಿಂದ ಇವನ ಜೀವನೋಪಾಯಕ್ಕಾಗಿಯೂ ಚಳವಳಿಗಾಗಿಯೂ ಮಿತ್ರರು ಉದಾರವಾಗಿ ಹಣ ನೀಡಿದರು. ವಿದೇಶೀ ಸರ್ಕಾರದೊಂದಿಗೆ ಸಹಕರಿಸುವುದರಿಂದ ಫಲವಿಲ್ಲವೆಂಬುದು ಒ’ಕಾನಲ್ಗೆ ಮನವರಿಕೆಯಾದಾಗ ಪಾರ್ಲಿಮೆಂಟ್ ಸಭೆಗೆ ಹೋಗುವುದನ್ನೇ ನಿಲ್ಲಿಸಿದ. ಆಗ ಡಬ್ಲಿನಿನಲ್ಲಿ ಸೇರಲಿದ್ದ ಬೃಹತ್ ಸಭೆಯೊಂದನ್ನು ಸರ್ಕಾರ ನಿಷೇಧಿಸಿದ್ದಲ್ಲದೆ ಜನರನ್ನಡಗಿಸಲು ದಂಡನ್ನೇ ಸಜ್ಜಾಗಿ ನಿಲ್ಲಿಸಿತು. ಒ’ಕಾನಲ್ ಮತ್ತು ಆತನ ಸಹಚರಿಗಳು ಬಂಧನಕ್ಕೊಳಗಾದರು. ಲಾಡ್ರ್ಸ್‌ ಸಭೆಗೆ ಅಪೀಲು ಹೋದಾಗ ಶಿಕ್ಷೆ ರದ್ದಾಗಿ ಅವರು ಬಿಡುಗಡೆಗೊಂಡರು.

ಒ’ಕಾನಲ್ಗೆ ಅರಿವಿಲ್ಲದೆ ಮುಪ್ಪು ಬಂತು, ಶಕ್ತಿ ಕುಂದಿತು. ತರುಣ ಐರ್ಲೆಂಡಿಗರು ಒ’ಕಾನೆಲನ ಸಾವಧಾನದ ನಾಯಕತ್ವವನ್ನೊಪ್ಪಲಿಲ್ಲ. ಬಿರುಗಾಳಿಯ ಜೀವವೊಂದು ಅವರಿಗೆ ತಲೆಯಾಳಾಗಬೇಕಾಗಿತ್ತು. ಐರ್ಲೆಂಡಿನಲ್ಲಿ ಆಲೂಗೆಡ್ಡೆಯ ಕ್ಷಾಮ ಹಬ್ಬಿದಾಗ ಸರ್ಕಾರದ ಪರಿಹಾರಕ್ಕಾಗಿ ಈತ ತನ್ನ ಮುಪ್ಪಿನಲ್ಲೂ ಶ್ರಮಿಸಿದ. ಹವಾ ಬದಲಾವಣೆಗಾಗಿ ರೋಮಿಗೆ ಹೋಗುತ್ತಿದ್ದಾಗ ಹಾದಿಯಲ್ಲೆ ಒ’ಕಾನೆಲ್ ತೀರಿಕೊಂಡ. ಆಗ ಐರ್ಲೆಂಡಿನಲ್ಲಿ ಏರ್ಪಟ್ಟ ಬೃಹತ್ ಸಭೆಗಳೂ ಪ್ರದರ್ಶನಗಳೂ ಈತನೆಷ್ಟು ಜನಪ್ರಿಯನಾಗಿದ್ದನೆಂಬುದರ ಸಂಕೇತಗಳಾಗಿದ್ದುವು. (ಎಸ್.ವಿ.ಡಿ.)