ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಡಂಬಡಿಕೆ

ವಿಕಿಸೋರ್ಸ್ದಿಂದ

ಒಡಂಬಡಿಕೆ: ಕೇವಲ ಲೌಕಿಕ ವ್ಯವಹಾರಗಳಲ್ಲಿ ಇಬ್ಬರು ಅಥವಾ ಎರಡು ಗುಂಪಿನವರು ತಮ್ಮೊಳಗೆ ಮಾಡಿಕೊಂಡ ಒಪ್ಪಂದವನ್ನಲ್ಲದೆ ಮತವಿಚಾರಗಳಲ್ಲಿ ಮಾಡಿಕೊಂಡ ಒಪ್ಪಂದವನ್ನೂ ಒಳಗೊಳ್ಳುತ್ತದೆ. ಎರಡನೆಯ ಬಗೆಯ ಒಪ್ಪಂದ ಪ್ರಧಾನವಾಗಿ ಕಾಣುವುದು ಹೀಬ್ರೂ ಮತದಲ್ಲಿ. ಹೀಬ್ರೂ ಭಾಷೆಯಲ್ಲಿ ಒಡಂಬಡಿಕೆಗೆ ಸಮಾನಾಂತರವಾದ ಪದ ಬೆರಿತ್. ಹೀಬ್ರೂ ಮತದಲ್ಲಿ ಈ ಪದ ದೇವರಿಗೂ ಮತ್ತು ಮಾನವರಿಗೂ ಅಥವಾ ದೇವರಿಗೂ ಮತ್ತು ಸೃಷ್ಟಿಯಾದ ಜಗತ್ತಿಗೂ ಏರ್ಪಟ್ಟ ಸಂಬಂಧವನ್ನು ನಿರ್ದೇಶಿಸುತ್ತದೆ. ಈ ಸಂಬಂಧ ಶಾಂತಿಜೀವನ, ವಿಧಿವತ್ತಾದ ಜೀವನ, ಪರಸ್ಪರ ಅಥವಾ ಏಕಪಕ್ಷೀಯ ಸಂರಕ್ಷಣೆ, ಭರವಸೆ ಮುಂತಾದುವನ್ನು ಒಳಗೊಳ್ಳುತ್ತದೆ. ಯೆಹೂದಿ ಮತದಲ್ಲಿ ಯಾಹವೆ ತಾನು ವಿಧಿಸಿದ ಹತ್ತು ಆಜ್ಞೆಗಳಿಗೆ ವಿಧೇಯರಾದ ಜನರನ್ನು ತನ್ನ ಜನವೆಂದು ಭಾವಿಸಿ ಅವರಲ್ಲಿ ಒಗ್ಗಟ್ಟನ್ನು ಏರ್ಪಡಿಸಿ ಅವರನ್ನು ಸಂರಕ್ಷಿಸಲು ಬದ್ಧನಾಗಿರುತ್ತಾನೆ. ಈ ಒಪ್ಪಂದ ಏಕಪಕ್ಷೀಯ; ಜನರನ್ನು ತನ್ನವರನ್ನಾಗಿ ಆಯ್ದುಕೊಂಡವನೂ ಜನರಿಗೆ ಕಾನೂನನ್ನು ವಿಧಿಸಿದವನೂ ಪ್ರಭುವಾದ ಯಾಹವೆಯೇ. ರಕ್ಷಣೆಯ ಆಶ್ವಾಸನೆ ನೀಡಿದವನೂ ಅವನೇ. ಈ ಒಡಂಬಡಿಕೆಗೆ ಸಂಬಂಧಪಟ್ಟ ಮತಾಚರಣೆಯುಂಟು. ಅದರಲ್ಲಿ ಪುರೋಹಿತ ಪ್ರಭುವಿನ ಪ್ರತಿನಿಧಿಯಾಗಿ ಯಾಹವೆಯ ಕೃಪಾಪುರ್ಣತೆಯನ್ನು ಹೊಗಳಿ ಅವನ ಆಜ್ಞಾನುಸಾರ ಬಾಳಬೇಕೆಂದು ಘೋಷಿಸುತ್ತಾನೆ. ಭಕ್ತರು ತಮ್ಮ ವಿಧೇಯತೆಯನ್ನು ಪ್ರಕಟಿಸಿದ ಅನಂತರ ಆ ಒಡಂಬಡಿಕೆಯ ಸಂಕೇತವಾಗಿ ಒಡಂಬಡಿಕೆಯ ರಕ್ತವನ್ನು ಪ್ರೋಕ್ಷಿಸುತ್ತಾನೆ. ಅನಂತರದಲ್ಲಿ ಪವಿತ್ರಭೋಜನ ನಡೆಯುತ್ತದೆ. (ಜಿ.ಎಚ್.)