ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಪಾಸಂ

ವಿಕಿಸೋರ್ಸ್ದಿಂದ

ಒಪಾಸಂ: ಗರ್ಭದಲ್ಲಿನ ಮರಿ ಪುರ್ಣ ಬಲಿಯುವ ಮುನ್ನವೇ ಈಯುವ ಸಂಚಿ ಸ್ತನಿ. ಆಕಾರ ಹೆಗ್ಗಣದಂತೆ. ಬಲುಚುರುಕಾದ ಪ್ರಾಣಿ. ಮಾನೊಟ್ರಿಮಾಟ ವರ್ಗ, ಪಾಲಿಪ್ರೋಟೊಡಾಂಟಿಯ ಗಣ, ಡೈಡೆಲ್ಫಿಡೇ ಕುಟುಂಬ. ತಲೆಯಿಂದ ಬಾಲದವರೆಗೆ ಇದರ ಉದ್ದ ಸು. 15". ಬಾಲ ಬೆಳ್ಳಗೆ ಅನಾವೃತವಾಗಿದೆ; ಉದ್ದ 12". ಕೋತಿಯ ಬಾಲಕ್ಕೆ ಇರುವಂತೆ ಇದರ ಬಾಲಕ್ಕೂ ಗ್ರಾಹಕ ಶಕ್ತಿಯುಂಟು; ಮರವನ್ನು ಹತ್ತುವಾಗ ಇದು ತುಂಬ ಉಪಯೋಗಕ್ಕೆ ಬರುತ್ತದೆ. ರೆಂಬೆಗೆ ಇದನ್ನು ಸುತ್ತು ಹಾಕಿಕೊಂಡು ಜೋತು ಬೀಳಬಹುದು. ಕಾಲುಗಳಿಗೂ ಹಿಡಿದುಕೊಳ್ಳುವ ಶಕ್ತಿಯಿದೆ. ಇವು ನೆಲವನ್ನು ತೋಡಲು ಬಲ್ಲವು; ಮರಗಳನ್ನು ಹತ್ತಲೂ ಬಲ್ಲವು.

ದಕ್ಷಿಣ ಅಮೆರಿಕ, ಮಧ್ಯೆ ಮತ್ತು ಉತ್ತರ ಅಮೆರಿಕಗಳಲ್ಲಿ ಅನೇಕ ತರದ ಒಪಾಸಂಗಳಿವೆ. ಅವುಗಳಲ್ಲಿ ವರ್ಜೀನಿಯ ಒಪಾಸಂ, ನೀರಿನ ಒಪಾಸಂ, ತುಪ್ಪಟವುಳ್ಳ ಒಪಾಸಂ, ಇಲಿಯಂಥ ಒಪಾಸಂ ಇತ್ಯಾದಿ ಭೇದಗಳುಂಟು. ಸಾಮಾನ್ಯ ತರದ ಒಪಾಸಂಗಳು ಅಮೆರಿಕ ದೇಶದ ಉತ್ತರ ಭಾಗದಿಂದ ಹಿಡಿದು ಅರ್ಜಂಟೈನದವರೆಗೂ ಹರಡಿವೆ. ಆದರೆ ಗಾತ್ರ, ರೂಪ ಮತ್ತು ಬಣ್ಣಗಳಲ್ಲಿ ಅವು ಬೇರೆ ಬೇರೆಯಾಗಿವೆ. ಬೆಕ್ಕಿನ ಗಾತ್ರದಿಂದ ಹಿಡಿದು ಇಲಿಯ ಗಾತ್ರದವರೆಗೂ ಇರುವುವು. ಇವು ನಿಶಾಚರಿಗಳು. ಹಗಲಲ್ಲಿ ಮರದೆಲೆಗಳ ಮರೆಯಲ್ಲಿಯೂ ಪೊಟರೆಗಳಲ್ಲೊ ಅಡಗಿಕೊಂಡು ಕಾಲ ಕಳೆಯುತ್ತವೆ. ಯಾರಾದರೂ ತಮ್ಮನ್ನು ಹಿಡಿದುಕೊಂಡಾಗ ಅಥವಾ ಶತ್ರುಗಳು ಸಮೀಪ ಬಂದಾಗ ಸತ್ತಹಾಗೆ ನಟಿಸುತ್ತವೆ. ಅಂತೆಯೇ ಒಪಾಸಂ ನಟನೆ, ಎಂಬೊಂದು ಗಾದೆ ಜನರ ಬಾಯಲ್ಲಿ ಹುಟ್ಟಿಕೊಂಡಿದೆ.

ಇದು ತಿನ್ನದ ವಸ್ತುವೇ ಇಲ್ಲ; ಹುಳು ಹುಪ್ಪಟೆಗಳನ್ನು ಹೆಚ್ಚಾಗಿ ಮೆಲ್ಲುತ್ತದೆ. ರುಚಿಯ ವಿಷಯದಲ್ಲಿ ತುಂಬ ಭೋಗಿಯಿದು. ಹಣ್ಣು ಅಥವಾ ಗೆಡ್ಡೆ, ಕರಟಿಕಾಯಿ, ಹಸಿರುಕಾಳು, ಮರಿಹುಳುಗಳು, ಪುಟ್ಟ ಹಕ್ಕಿಗಳ ಮೊಟ್ಟೆಗಳು-ಇವು ಇದಕ್ಕೆ ಬಹು ಹಿತಕರವಾದ ಆಹಾರ. ಆಸ್ಟ್ರೇಲಿಯ ಖಂಡದಲ್ಲಿ ಅನೇಕ ಜಾತಿಯ ಸಂಚಿ ಪ್ರಾಣಿಗಳಿವೆ (ಮಾರ್ಸೂಪಿಯಲ್ಸ್‌). ಇವನ್ನು ಹಲವು ವೇಳೆ ಒಪಾಸಂಗಳೆಂದು ಕರೆಯುವುದುಂಟು. ಆದರೆ ಇವಕ್ಕೆ ಸಾಮಾನ್ಯವಾಗಿ ಫಲಾನ್ಜರ್ಸ್‌ ಎಂದು ಹೆಸರು. ಅಮೆರಿಕದ ಒಪಾಸಂಗಳಿಗಿಂತ ಇವು ತೀರ ಭಿನ್ನವಾಗಿವೆ;

ಇವುಗಳಿಗೆ ಚಟುವಟಿಕೆ ಹೆಚ್ಚು. ಕೂದಲು ಹೇರಳವಾಗಿದೆ. ಬಾಲ ಬಲು ಉದ್ದವಾಗಿ, ಹೊರಲಾರದಷ್ಟು ಕೂದಲಿನಿಂದ ಆವೃತವಾಗಿದೆ. ಗರ್ಭಧಾರಣೆಯ ಅವಧಿ ಬಲು ಕಡಿಮೆ; ಗರ್ಭದಿಂದ ಹೊರ ಬರುವಾಗ ಮರಿಗಳು ಅರ್ಧಮಾತ್ರ ಬೆಳೆದಿರುತ್ತವೆ. ತಾಯಿ ಒಂದು ಸೂಲಿಗೆ ಹತ್ತರಿಂದ ಹದಿನೆಂಟರವರೆಗೆ ಮರಿ ಹಾಕುತ್ತದೆ. ಆದರೆ ಅದಕ್ಕೆ ಹದಿಮೂರೇ ಮೊಲೆತೊಟ್ಟುಗಳಿರುವುದರಿಂದ ಕೆಲವು ಮರಿಗಳನ್ನು ಅದು ಸಾಮಾನ್ಯವಾಗಿ ತ್ಯಜಿಸುತ್ತದೆ. ಬಲಿಯುವ ಮುನ್ನವೇ ಜನ್ಮತಾಳುವ ಮರಿಗಳನ್ನು ಬಹುತೇಕ ಒಪಾಸಂಗಳು. ಹೊಟ್ಟೆಯ ಹಿಂಬದಿಯಲ್ಲಿರುವ ಸಂಚಿ ಅಥವಾ ಚೀಲಗಳಲ್ಲಿ ಇಟ್ಟುಕೊಂಡು ಬಲಿಯುವವರೆಗೂ ರಕ್ಷಿಸುತ್ತವೆ. ಹೊಟ್ಟೆಯ ಮೇಲೆ ಚೀಲ ಇಲ್ಲದಿರುವ ಜಾತಿಗಳಲ್ಲಿ ಮರಿಗಳು ತಾಯ ಮೊಲೆ ಕಚ್ಚಿಕೊಂಡೋ ತಾಯ ಮೈಯನ್ನು ತಬ್ಬಿಕೊಂಡೋ ಆಶ್ರಯ ಪಡೆಯುತ್ತವೆ. (ಎ.)