ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಲಂಪಿಯ 2

ವಿಕಿಸೋರ್ಸ್ದಿಂದ

ಒಲಂಪಿಯ2: ಗ್ರೀಸಿನ ಪಶ್ಚಿಮ ಪೆಲಿಪೊನೀಸ್ನ ಒಂದು ಸ್ಥಳ, ಪುರಾತನ ಗ್ರೀಕರ ಜ್ಯೂóಸ್ ದೇವತಾಕ್ಷೇತ್ರ. ಸಮುದ್ರದಿಂದ ಸುಮಾರು 16 ಕಿಮೀ ದೂರದಲ್ಲಿ, ಆಲ್ಫೀಯಸ್ ಮತ್ತು ಕ್ಲೇಡಿಯಸ್ ನದಿಗಳ ಸಂಗಮದ ಬಳಿ, ಕ್ರೋನಿಯಸ್ ಬೆಟ್ಟದ ತಪ್ಪಲಿನ ವಿಶಾಲ ಕಣಿವೆಯ ಹಸಿರು ನೆಲದ ಮೇಲೆ, ಪ್ರಾಚೀನ ವೈಭವದ ಮೂಕಸಾಕ್ಷಿಯಾಗಿ ಪವಡಿಸಿದೆ. ಅನೇಕ ದೃಷ್ಟಿಗಳಲ್ಲಿ ಇದು ಅಧಿಕೃತ ಗ್ರೀಕ್ ಧರ್ಮದ ಕೇಂದ್ರವಾಗಿತ್ತು. ಅಖಿಲ ಗ್ರೀಕರ ಮಾನ್ಯಧರ್ಮವೆನಿಸಬೇಕೆಂದು ಸೆಣಸಾಡುತ್ತಿದ್ದ ಕೆಲವು ಪಂಗಡಗಳ ಪೈಕಿ ಇಲ್ಲಿಯದೂ ಒಂದು. ಅಷ್ಟೇ ಅಲ್ಲ, ಇದೇ ಪ್ರಧಾನವಾಗಿತ್ತು; ನಾಲ್ಕು ವರ್ಷಗಳಿಗೊಮ್ಮೆ ಇಲ್ಲಿ ನಡೆಯುತ್ತಿದ್ದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲೂ ಅವನ್ನು ವೀಕ್ಷಿಸಲೂ ಇಡೀ ಗ್ರೀಕ್ ಪ್ರಪಂಚದಿಂದಲೇ ಅಲ್ಲದೆ ಹೊರಗಿನಿಂದಲೂ ಜನ ಬರುತ್ತಿದ್ದರು. ಪರಸ್ಪರವಾಗಿ ಕಾದಾಡುತ್ತಿದ್ದ ಗ್ರೀಕ್ ರಾಜ್ಯಗಳ ನಡುವೆ ಆಗ್ಗೆ ತಾತ್ಕಾಲಿಕವಾಗಿ ಶಾಂತಿ ಏರ್ಪಾಡಾಗುತ್ತಿತ್ತು.

ಒಲಿಂಪಿಯದ ದೇವಾಲಯದ ಐತಿಹ್ಯ ಅಷ್ಟೇನೂ ಸ್ಫುಟವಾಗಿಲ್ಲ. ಇದು ಆಶ್ಚರ್ಯಕರ, ಪ್ರ.ಶ.ಪು.ಸು. 11ನೆಯ ಶತಮಾನದಲ್ಲಿ, ಡೋರಿಯನ್ ಆಕ್ರಮಣ ಕಾಲದಲ್ಲಿ ಇಲ್ಲಿಯ ಪಂಥ ಆರಂಭವಾಗಿರಬೇಕು. ಚತುರ್ವಾರ್ಷಿಕ ಕ್ರೀಡಾ ವ್ಯವಸ್ಥೆ ಪ್ರ.ಶ.ಪು. 776ರಲ್ಲಿ ಸ್ಥಾಪಿತವಾದಾಗ ಗ್ರೀಕ್ ಪ್ರಪಂಚ ಈ ಚರ್ತುವಾರ್ಷಿಕ ಎಣಿಕೆ ಕ್ರಮವನ್ನು ಒಪ್ಪಿಕೊಂಡಿತು; ಸ್ಥಳೀಯ ಪಂಚಾಂಗ ಯಾವುದೇ ಇರಲಿ, ಪ್ರತಿಯೊಬ್ಬರೂ ಒಲಿಂಪಿಕ್ ಹಬ್ಬಗಳಿಗೆ ಅನುಗುಣವಾದ ಕಾಲಗಣನೆಯನ್ನು ಸ್ವೀಕರಿಸಿದರು. ಅಲ್ಲಿಂದ ಮುಂದೆ ಧಾರ್ಮಿಕವಾಗಿಯೂ ಶಿಲ್ಪದೃಷ್ಟಿಯಿಂದಲೂ ಇಲ್ಲಿಯ ದೇವಾಲಯ ಪರಿಪರಿಯಾಗಿ ಶೋಭಿಸಿತು. ಮ್ಲೇಂಛರ ಪವಿತ್ರ ಮಂದಿರಗಳನ್ನೆಲ್ಲ ನೆಲಸಮ ಮಾಡಬೇಕೆಂಬ ಥಿಯೋಡೋಷಿಯಸನ ಆಜ್ಞೆಗೆ ಅನುಸಾರವಾಗಿ ಇಲ್ಲಿಯ ದೇವಾಲಯಗಳು ಪ್ರ.ಶ. 426ರಲ್ಲಿ ನಾಶವಾದವು. ಪ್ರ.ಶ. 393ರಲ್ಲಿ ನಡೆದದ್ದೇ ಪುರಾತನ ಒಲಿಂಪಿಯದ ಕೊಟ್ಟಕೊನೆಯ ಕ್ರೀಡೋತ್ಸವ (ನೋಡಿ- ಒಲಿಂಪಿಕ್-ಕ್ರೀಡೆಗಳು).

ಒಲಿಂಪಿಯವಿದ್ದ ನಿವೇಶನವನ್ನು ಪತ್ತೆಹಚ್ಚಿದವನು (1723) ಫ್ರೆಂಚ್ ಪರಿಶೋಧಕ ಮಾಂಟ್ಫಾಕನ್, ಅನಂತರ ಅನೇಕ ಐರೋಪ್ಯ ಕುತೂಹಲಿಗಳು ಇಲ್ಲಿಗೆ ಬಂದು ಸ್ಥಳದಲ್ಲೆಲ್ಲಾ ಅಡ್ಡಾಡಿ ಪರಿಶೀಲನೆ ನಡೆಸಿದರು. ಇಲ್ಲಿ ಭಾರೀ ಪ್ರಮಾಣದಲ್ಲಿ ಉತ್ಖನನ ನಡೆದದ್ದು 1875-1881ರಲ್ಲಿ-ಜರ್ಮನ್ ಪುರಾತತ್ವ ಸಂಸ್ಥೆಯ ಅರ್ನೆಸ್ಟ್‌ ಕುಟಿರ್ಸ್‌ಯಸ್ ನೇತೃತ್ವದಲ್ಲಿ, ಮತ್ತೆ ಜರ್ಮನರು 1936-38ರಲ್ಲಿ ಸುದೀರ್ಘ ಉತ್ಖನನ ನಡೆಸಿ ಅನೇಕ ರಹಸ್ಯಗಳನ್ನು ಹೊರಗೆಡವಿದರು.


ಬೆಟ್ಟದ ಬುಡದಲ್ಲಿ, 750' ´ 570' ವಿಸ್ತೀರ್ಣದ ವಿಷಮ ಚತುರಸ್ರಾಕಾರದ ಆವೃತ ಪ್ರದೇಶದಲ್ಲೇ ದೇವಮಂದಿರವಿದ್ದದ್ದು. ಈ ಇಡೀ ಭಾಗದ ಹೆಸರು ಆಲ್ಟಿಸ್, ಜ಼Æ್ಯಸ್ ದೇವಾಲಯವೂ ಇತರ ಅನೇಕ ಪವಿತ್ರ ಮಂದಿರಗಳೂ ಧಾರ್ಮಿಕ ಶಾಸನಗಳೂ ಇಲ್ಲಿದ್ದವು. ಆಲ್ಟಿಸಿನ ಹೊರಗೂ ಅನೇಕ ಕಟ್ಟಡಗಳಿದ್ದವು. ದೇವಮಂದಿರಗಳ ಮತ್ತು ಚತುರ್ವಾರ್ಷಿಕ ಕ್ರೀಡೆಗಳ ಆಡಳಿತ ಕಚೇರಿಗಳು ಇಲ್ಲಿದ್ದವು. ಯಾತ್ರಿಕರ ವಸತಿಗಾಗಿಯೂ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿತ್ತು. (ಪಿ.ಎಚ್.)