ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಓಕ್ಲಿ, ಕೆನೆತ್ ಪೇಜ್

ವಿಕಿಸೋರ್ಸ್ದಿಂದ

ಓಕ್ಲಿ, ಕೆನೆತ್ ಪೇಜ್: ಬ್ರಿಟಿಷ್ ಪ್ರಾಕ್ತನಶಾಸ್ತ್ರಜ್ಞ, ಜನನ ಇಂಗ್ಲೆಂಡಿನ ಆಮರ್ಷಾಮ್ ಎಂಬಲ್ಲಿ (1911). ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಮಾನವ ಮತ್ತು ಭೂವಿಜ್ಞಾನಗಳನ್ನು ಅಭ್ಯಸಿಸಿದ ಅನಂತರ ಬ್ರಿಟಿಷ್ ಮ್ಯೂಸಿಯಂನ ಪ್ರಕೃತಿಶಾಸ್ತ್ರ ಶಾಖೆಯಲ್ಲಿ ಕೆಲಸಕ್ಕೆ ಸೇರಿದ. ಭೂಮಿಯ ನೀರಿನಲ್ಲಿ ಕರಗಿರುವ ಫ್ಲೂರಿನನ್ನು ಭೂಮಿಯಲ್ಲಿ ಹೂತ ಎಲುಬು ಹೀರಿಕೊಳ್ಳುತ್ತದೆ. ಹೀರಿಕೆಯ ಪ್ರಮಾಣ ಮೂಳೆ ನೆಲದಲ್ಲಿ ಉಳಿದಿರುವ ಕಾಲಕ್ಕೆ ಅನುಗುಣವಾಗಿರುತ್ತದೆ. ಹಾಗಾಗಿ ಒಂದೇ ಸ್ಥಳದಲ್ಲಿ ಬೇರೆ ಬೇರೆ ಕಾಲದಲ್ಲಿ ಮೂಳೆಗಳು ಹೂಳಲ್ಪಟ್ಟಿದ್ದರೆ ಅವುಗಳಲ್ಲಿಯ ಫ್ಲೂರಿನ್ ಪ್ರಮಾಣ ಬೇರೆ ಬೇರೆ ಆಗಿರುತ್ತದೆ. ಈ ಪ್ರಮಾಣವನ್ನನುಸರಿಸಿ ಆ ಮೂಳೆಗಳಲ್ಲಿ ಯಾವುದು ಅತ್ಯಂತ ಪುರಾತನವಾದುದು ಎಂಬುದನ್ನು ನಿರ್ಣಯಿಸಬಹುದು, ಇದೇ ಫ್ಲೂರಿನ್ ಒರೆ (ಫ್ಲೂರಿನ್ ಟೆಸ್ಟ್‌). ಪ್ರಾಕ್ತನಶಾಸ್ತ್ರಕ್ಕೆ ಇದೇ ಈತನ ಮುಖ್ಯ ಕೊಡುಗೆ. 1888ರಲ್ಲಿ ಗುರುತಿಸಲಾದ ಗ್ಯಾಲಿ ಹಿಲ್ ತಲೆಬರುಡೆ ಅದೆಷ್ಟು ಪುರಾತನವಾದುದೆಂಬುದನ್ನು ಓಕ್ಲಿ ಪರಿಶೀಲಿಸಿದ. ಅದರಲ್ಲಿ ಫ್ಲೂರಿನ್ 0.5% ಮಾತ್ರ ಇದ್ದುದರಿಂದ ಅದು ಅಷ್ಟೊಂದು ಪುರಾತನವಾದುದಲ್ಲವೆಂದು ತೀರ್ಮಾನಿಸಿದ (1948). ಇದೇ ರೀತಿ 1935-36ರಲ್ಲಿ ದೊರೆತ ಸ್ವಾನ್ಸ್‌ಕೂಂಬ್ ತಲೆಬರುಡೆ 100,000 ವರ್ಷಗಳಿಗಿಂತಲೂ ಪುರಾತನವಾದುದೆಂದು ತೀರ್ಮಾನಿಸಿದ (1948). ಈ ಮೂಳೆಯಲ್ಲಿ 1.7% ಫ್ಲೂರಿನ್ ಇದ್ದುದನ್ನು ತೋರಿಸಿದ. ಇದೆ ಸಮಯದಲ್ಲಿ ಪಿಲ್ಟ್‌ ಡೌನ್ ತಲೆಬುರುಡೆಯ ಪ್ರಾಚೀನತೆಯ ವಿಚಾರವಾಗಿ ಚರ್ಚೆ ಸಾಗುತ್ತಿತ್ತು. ಮಾನವನಂತೆ ಇರುವ ತಲೆಬರುಡೆಯಲ್ಲಿ ಮಂಗನಂತೆ ಇರುವ ದವಡೆ ಇದ್ದುದು ವಿಜ್ಞಾನಿಗಳಿಗೆ ಉತ್ತರಿಸಲಾಗದ ಪ್ರಶ್ನೆಯಾಗಿತ್ತು. ಇದನ್ನು ಪರಿಶೀಲಿಸಲು ಓಕ್ಲಿಯನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಸಮಿತಿ ದವಡೆ ನಕಲಿಯದೆಂದು ತೀರ್ಮಾನಿಸಿತು. ಇದನ್ನು ನಿರ್ಣಯಿಸಿದ್ದೂ ಫ್ಲೂರಿನ್ ಒರೆಯಿಂದಲೇ, ಈಗ ಯಾವ ತಲೆಬರುಡೆ ದೊರಕಿದರೂ ಅದಕ್ಕೆ ಫ್ಲೂರಿನ್ ಒರೆ ಹಾಕಿ ಅನಂತರವೇ ಅದರ ಪುರಾತನತೆಯನ್ನು ಒಪ್ಪಿಕೊಳ್ಳುತ್ತಾರೆ.

ಓಕ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಈತನ ಸಂಶೋಧನಾತ್ಮಕ ಗ್ರಂಥಗಳಾದ ಮ್ಯಾನ್, ದಿ ಟೂಲ್ ಮೇಕರ್ ಮತ್ತು ಡೇಟಿಂಗ್ ಫಾಸಿಲ್ ಮ್ಯಾನ್ ಬಹಳ ಜನಪ್ರಿಯವಾಗಿವೆ. (ಎಸ್.ಎಂ.)