ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಓಮಿಚಂದ್

ವಿಕಿಸೋರ್ಸ್ದಿಂದ

ಓಮಿಚಂದ್: 18ನೆಯ ಶತಮಾನದ ಮಧ್ಯಕಾಲದಲ್ಲಿ ಕೋಲ್ಕತ್ತದಲ್ಲಿ ವಾಸವಾಗಿದ್ದ ದ್ರೋಹಚಿಂತಕ ವ್ಯಾಪಾರಿ, ಲೇವಾದೇವಿಗಾರ. ಅಮೀರ್ಚಂದ್ ಎಂದೂ ಈತನ ಹೆಸರು. ಈಸ್ಟ್‌ ಇಂಡಿಯ ಕಂಪನಿಯವರ ಜೊತೆ ಸೇರಿ ಕಳ್ಳ ಹಣವನ್ನೂ ಆಸ್ತಿಯನ್ನೂ ಸಂಪಾದಿಸಿ, ಕೊನೆಗೆ ತಾನೇ ಮೋಸಕ್ಕೆ ಬಲಿಯಾದ. ಸಿರಾಜ್-ಉದ್-ದೌಲನನ್ನು ಬಂಗಾಳದ ನವಾಬಗಿರಿಯಿಂದ ಪದಚ್ಯುತಿಗೊಳಿಸಿ ಮೀರ್ ಜಾಫರ್ನನ್ನು ಆ ಸ್ಥಾನದಲ್ಲಿ ಕುಳ್ಳಿರಿಸುವ ಸಲುವಾಗಿ ಇಂಗ್ಲಿಷರೊಂದಿಗೆ ಸಂಧಾನ ನಡೆಸಿದ. ಇಂಗ್ಲಿಷರು ಇದಕ್ಕೊಪ್ಪಿ, ಈ ಸಂಚಿನಲ್ಲಿ ಪಾಲುದಾರರಾದರು. ಅವರನ್ನು ಸಿಕ್ಕಿಸಿಕೊಂಡ ಮೇಲೆ ಓಮಿಚಂದ್ ಹೊಸ ಪಟ್ಟು ತೆಗೆದ. ಮುರ್ಷಿದಾಬಾದಿನಲ್ಲಿ ನವಾಬನ ಭಂಡಾರದಲ್ಲಿ ಅಗಾಧ ಧನರಾಶಿಯೇ ಇಂಗ್ಲಿಷರ ವಶವಾಗುವುದೆಂದೂ ಅದರಲ್ಲಿ ಶೇಕಡ ಇಂತಿಷ್ಟೆಂದು ತನಗೆ ದಳ್ಳಾಳಿ ಕೊಡಬೇಕೆಂದೂ ಇದಕ್ಕೊಪ್ಪದಿದ್ದರೆ ಇಡೀ ಸಂಚನ್ನೇ ಸಿರಾಜ್-ಉದ್-ದೌಲನಿಗೆ ತಿಳಿಸುವುದಾಗಿಯೂ ಬೆದರಿಸಿದ. ರಾಬರ್ಟ್ ಕ್ಲೈವ್ ಈ ಠಕ್ಕಿಗೆ ಪ್ರತಿಠಕ್ಕು ಹೂಡಿದ. ಮೀರ್ ಜಾಫರ್ನೊಂದಿಗೆ ಇಂಗ್ಲಿಷರು ಮಾಡಿಕೊಂಡರೆನ್ನಲಾದ ಒಪ್ಪಂದದ ಎರಡು ಭಿನ್ನ ಪ್ರತಿಗಳನ್ನು ತಯಾರಿಸಲಾಯಿತು. ಇದರಲ್ಲಿ ಒಂದು ನಿಜ; ಇನ್ನೊಂದು ಖೋಟಾ. ಓಮಿಚಂದ್ ಕೇಳಿದ ರುಸುಮನ್ನು ಅವನಿಗೆ ಕೊಡಲು ಅಧಿಕಾರ ನೀಡಿರುವಂತೆ ಕಾಣಿಸಿದ್ದ ಖೋಟಾ ಒಪ್ಪಂದವನ್ನು ಓಮಿಚಂದನಿಗೆ ತೋರಿಸಲಾಯಿತು. ನಿಜ ಒಪ್ಪಂದದಲ್ಲಿ ಆ ಅಂಶ ಇರಲಿಲ್ಲ. ಖೋಟಾ ಒಪ್ಪಂದದ ಪ್ರತಿಗೆ ಅಡ್ಮಿರಲ್ ವಾಟ್ಸನ್ ಸಹಿ ಹಾಕಲಿಲ್ಲ. ರಾಬರ್ಟ್ ಕ್ಲೈವ್ನೂ ವಾಟ್ಸನನ್ನುಳಿದು ಕಂಪನಿಯ ಕೋಲ್ಕತ್ತ ಮಂಡಲಿಯ ಇತರ ಸದಸ್ಯರೂ ಸಹಿ ಹಾಕಿದರು. ವಾಟ್ಸನನ ಕಳ್ಳರುಜುವನ್ನು ಕ್ಲೈವ್ ಮಾಡಿದ. ಪ್ಲಾಸಿ ಕದನ ಮುಗಿಯಿತು. ಇಂಗ್ಲಿಷರು ಮಾಡಿದ ಮೋಸ ಓಮಿಚಂದನಿಗೆ ಗೊತ್ತಾದದ್ದು ಆಗಲೇ. ಇದರಿಂದ ಮತಿಗೆಟ್ಟು ಓಮಿಚಂದ್ ಸತ್ತನೆಂದು (1767) ಪ್ರತೀತಿ. (ಸಿ.ಎಸ್.)